ಸಕಾಲದಲ್ಲಿ ಮುಂಗಾರು ಮಳೆ
ಅಷ್ಟು ಚೆನ್ನಾಗಿದೆ ಇಷ್ಟು ಚೆನ್ನಾಗಿದೆ ಎಂದೆಲ್ಲಾ ಕೇಳಿ ಕೇಳಿ ಸಾಕಾಗಿ ಇನ್ನು ನೋಡದೇ ಕಳೀದು ಎಂದಂದುಕೊಂಡು ಇಂದು ನಾನು ಮುಂಗಾರು ಮಳೆ ನೋಡೇ ಬಿಟ್ಟೆ. ಮಂಗಳೂರಿನ ಜನ ಕನ್ನಡ ಸಿನೆಮಾ ನೋಡುವುದೇ ಇಲ್ಲ ಎಂದಂದುಕೊಂಡು ನಾನು ಥ್ಯೇಟರಿಗೆ ಹೋದೆ. ನೋಡಿದರೆ ಬಾಲ್ಕನಿ ಫುಲ್! ಈ ಸಿನೆಮಾ ಇದೇ ಥ್ಯೇಟರಿನಲ್ಲಿ ಆಗಲೇ ಕನಿಷ್ಟ ೫ ವಾರದಿಂದ ಓಡುತ್ತಿದೆ. ಕೆಳಗೆ ಕೂತರೆ ಅದೂ ಆಲ್‍ಮೋಸ್ಟ್ ಫುಲ್. ನಾನು ಕೂತ ಕೆಲವು ಸಮಯದಲ್ಲೇ ದೀಪ ಆರಿತು ಸಿನೆಮಾ ಆರಂಭವಾಯಿತು.
ಟೈಟಲ್ ಆದ ಮೇಲೆ ತೀರಾ ಸಾದಾರಣ ಎನ್ನುವ ಓಪನಿಂಗ್ ಆಗುತ್ತೆ ಸಿನೆಮಾಕ್ಕೆ. ಗಣೇಶ್ ಪಾತ್ರ ಯಾಕೆ ಹೀಗಿದ್ದಾನೆ? ಮಡಿಕೇರಿಯ ಹುಡುಗಿ ಬೆಂಗಳೂರಿನಲ್ಲಿ ಏನು ಮಾಡುತ್ತಿದ್ದಾಳೆ? ರೇಡಿಯೋ ಮಿರ್ಚಿಗೆ ದೂರವಾಣಿಸಿದ ಕೂಡಲೇ ಲೈನ್ ಸಿಗುವುದು! ಶುದ್ಧ ನಾಲಾಯಕ್ಕಾದ ಮಗನಿದ್ದೂ ಅಮ್ಮ ಅವನಿಗೆ ಸಹಕಾರ ಕೊಡುವುದು, ಅಪ್ಪ ಮಗನಿಗೆ ಹೆದರುವುದು! ಈ ರೀತಿ ವಿಚಿತ್ರವಾಗಿ ಸಿನೆಮಾ ಆರಂಭವಾಗುತ್ತದೆ. ಮುಂದೆ ಸಿನೆಮಾದುದ್ದಕ್ಕೂ ಈ ವಿಚಿತ್ರಗಳ ಸರಮಾಲೆ ಮುಂದುವರೆಯುತ್ತದೆ. ಎಷ್ಟೋ ಕಡೆ ಸ್ಕ್ರಿಪ್ಟ್ ವೀಕ್ ಅನ್ನಿಸುತ್ತದೆ. ನಟನೆ ಇನ್ನೂ ಚೆನ್ನಾಗಿರಬಹುದಿತ್ತು ಅನ್ನಿಸುತ್ತದೆ. ಚಿತ್ರದ ನಡುವೆ ಪಂಜಾಬಿ ನೃತ್ಯ ಅನಗತ್ಯ ಅನ್ನಿಸುತ್ತದೆ. ಸಿನೆಮಾದ ಕಥೆ ಮೊದಲೇ ಅನೇಕ ಛಾಯೆಗಳಲ್ಲಿ ಹಿಂದಿಯಲ್ಲಿ ಬಂದಿದೆ ಅನ್ನಿಸುತ್ತೆ. ಪ್ರಸಿದ್ಧ ದಿಲ್ ವಾಲೆ ದುಲ್ಹನಿಯಾ ಲೇಜಾಯೆಂಗೆ ಇದೇ ಕಥೆಯ ಎಳೆಯಲ್ಲವೇ? (ಇದು ಅದರ ನಕಲು ಎಂದಲ್ಲ ನಾನು ಹೇಳುತ್ತಿರುವುದು) ಹೀಗೆ ಅನೇಕ ವಿಷಯಗಳು ಮಾಮೂಲು ಎಂದನ್ನಿಸುತ್ತದೆ. ಆದರೆ ನಾನು ಇದನ್ನೇ ಪಟ್ಟಿಮಾಡಿದರೆ ತಪ್ಪು ಮಾಡಿದಂತಾಗುತ್ತದೆ.
ಮೇಲೆ ಬರೆದ ಎಲ್ಲಾ ವಿಷಯಗಳ ಹೊರತಾಗಿಯೂ ಈ ಸಿನೆಮಾ ನನಗೆ ಸಂತೋಷ ಕೊಟ್ಟಿತು. ಸಿನೆಮಾ ಮುಗಿಸಿ ಹೊರಗೆ ಬರುವಾಗ ಒಂದು ಭಾವದ ಬುತ್ತಿಯನ್ನು ಈ ಚಿತ್ರ ಕಟ್ಟಿ ಕೊಟ್ಟಿತು. ಸಿನೆಮಾ ಮಾಡಿದ ಪ್ರತಿಯೊಬ್ಬರಲ್ಲಿ ಅದ್ಭುತವಾದ ಒಂದು ಪ್ರಾಮಾಣಿಕತೆ ಕಾಣುತ್ತದೆ. ಕಥೆಯೊಂದನ್ನು ಹೇಳುವ ತುಡಿತ ಕಾಣುತ್ತದೆ. ಕಣ ಕಣದಲ್ಲೂ ಚಿತ್ರ ತಂಡದ ಪ್ರಯತ್ನ ಕಾಣುತ್ತದೆ. ಪ್ರಾಮಾಣಿಕತನವೊಂದಿದ್ದರೆ ಉಳಿದದ್ದೆಲ್ಲವೂ ಸರಿಯಾಗುತ್ತೆ ಅಂತಾರಲ್ಲಾ, ಹಾಗೇ ಮುಂಗಾರು ಮಳೆ ಹಿಟ್ಟ್ ಆಗಿದೆ. ಮುದನೀಡುವ ಚಿತ್ರವಾಗಿಯೂ ರೂಪಗೊಂಡಿದೆ. ಬರೇ ಲಾಂಗು ಮಚ್ಚು ಎಂದು ಸಿನೆಮಾ ಬರುತ್ತಿರುವ ಸಮಯದಲ್ಲಿ ಹೀಗೊಂದು ಚಿತ್ರ ಮಾಡುವ ಧೈರ್ಯವೇ ಇಡೀ ಚಿತ್ರ ತಂಡ ಚಿತ್ರದ ಬಗ್ಗೆ ಎಷ್ಟು ನಂಬಿಕೆ ಇಟ್ಟಿತ್ತು ಎನ್ನುವುದಕ್ಕೆ ಸಾಕ್ಷಿ.
ಚಿತ್ರದ ಒಂದು ಮುಖ್ಯ ವಿಷಯವೆಂದರೆ ಸಂಗೀತ ಹಾಗೂ ಹಾಡಿನ ಸಾಹಿತ್ಯ. ಇಷ್ಟು ಹಿತವಾದ ಹಾಗೂ ಅರ್ಥಭರಿತ ಸಾಹಿತ್ಯ ಕನ್ನಡದಲ್ಲಿ ಬಹಳ ಕಾಲದ ನಂತರ ನಾನು ಕೇಳಿದ್ದು. ಜಯಂತ ಕಾಯ್ಕಿಣಿ, ಕವಿರಾಜ್, ಶಿವ ಹಾಗೂ ಸ್ವತಃ ಯೋಗರಾಜ್ ಭಟ್ಟ್ ಬಹಳ ಚೆನ್ನಾಗಿ ಕೆಲಸ ಮಾಡಿದ್ದಾರೆ. ಸಂಗೀತವೂ ಹಿತವಾಗಿದೆ. ಜೋಗವನ್ನು ಭಿನ್ನವಾಗಿ ಚಿತ್ರೀಕರಿಸಿದ್ದಾರೆ ಎಂದು ಬಹಳವಾಗಿ ಹೇಳಲ್ಪಟ್ಟಿತ್ತು. ಆದರೆ ಜೋಗದವರೆಗೆ ಮೊದಲಬಾರಿಗೆ 'ಜಿಮಿಜಿಪ್ ಕ್ರೇನ್' ತಲುಪಿಸಿದ್ದು ಬಿಟ್ಟರೆ ಬೇರೇನೂ ನನಗೆ ವಿಶೇಷ ಏನೂ ಅನ್ನಿಸಲಿಲ್ಲ. ಆದರೆ ಸಿನೆಮಟೋಗ್ರಾಫರ್‍ನ ಕಂಪೊಸಿಷನ್ ಸೆನ್ಸ್ ನನಗೆ ಹಿಡಿಸಿತು. ಶಾಟ್ ಟೇಕಿಂಗ್ ಕೆಲವೆಡೆ ವೀಕ್ ಅನ್ನಿಸಿದರೂ ಹೆಚ್ಚಿನ ಕಡೆ ಚೆನ್ನಾಗಿಯೇ ಇದೆ. ಚಿತ್ರದ ಸಂಕಲನ ಅನೇಕ ಕಡೆ ದೃಶ್ಯದ ಭಾವದ ಮೇರೆ ಮೀರಿ ಹೋಗುತ್ತಿದ್ದು ಕಿರಿ-ಕಿರಿ ಅನ್ನಿಸುತ್ತಿತ್ತು. ನೃತ್ಯ ಸಂಯೋಜನೆಯಲ್ಲಿ ಮತ್ತೆ ಹಿಂದೀ ಸಿನೆಮಾಗಳ ಅನೇಕ ಛಾಯೆ ಕಂಡುಬರುತ್ತಿತ್ತು (ನಕಲು ಅಲ್ಲ) ಎರಡು ಫೈಟ್ ಇದ್ದು ಭಿನ್ನವಾಗಿ ಕಂಡಿತು.
ಈ ಬರಹ ಮುಗಿಸುವ ಮುನ್ನ ನನ್ನದೊಂದು ಸಣ್ಣ ಅನುಭವ. ಹಲವು ವರ್ಷಗಳ ಹಿಂದೆ ನಾನು ಡಿಗ್ರಿ ಓದುತ್ತಿರುವಾಗ ನಾಗತಿಹಳ್ಳಿಯವರ ವಠಾರ ದಾರವಾಹಿ ತಂಡ ಚಿತ್ರೀಕರಣಕ್ಕೆ ಮಂಗಳೂರಿಗೆ ಬಂದಿತ್ತು. ಇಲ್ಲಿಂದ ಅವರಿಗೆ ಜೂನಿಯರ್ ಕಲಾವಿದರ ಅಗತ್ಯ ಇತ್ತು. ಹೇಗಾದರೂ ಚಿತ್ರರಂಗಕ್ಕೆ ಬರಬೇಕೆಂದಿದ್ದ ನಾನು ಹಾಗೆ ಆ ತಂಡ ಸೇರಿದೆ. ಮಂಗಳೂರಿನ ಪುಡಿ ರೌಡಿಗಳಲ್ಲಿ ನಾನು ಒಬ್ಬ. ನಾಯಕ ನಟ ಗಣೇಶ್ ಹಾಗೂ ನಾಯಕಿಗೆ ತೊಂದರೆ ಕೊಡಲು ಪ್ರಯತ್ನಿಸಿ ಗಣೇಶ್ ಕೈಯಲ್ಲಿ ಹಿಗ್ಗಾ ಮುಗ್ಗಾ ಒದೆಸಿಕೊಳ್ಳುವುದು ನಮ್ಮ ಸೀನು! ಶೂಟಿಂಗ್ ನನಗಿನ್ನೂ ಹೊಸತು. ಶೂಟಿಂಗ್ ನಂತರದ ಸಮಯದಲ್ಲಿ ಗಣೇಶ್‍ರೊಂದಿಗೆ ಮಾತುಕತೆ ನಡೆಯುತ್ತಿತ್ತು. ಮನುಷ್ಯ ಸೀದಾ, ಸರಳ-ಸಜ್ಜನ, ಒಳ್ಳೆಯವ ಎಂದನ್ನಿಸಿತು. ನಂತರ ಕಾಲ ಸರಿಯಿತು, ನಾನು ಇಂದು ಚಿತ್ರರಂಗಕ್ಕೇ ಮತ್ತೆ ಬಂದಿಳಿದ ಸಮಯದಲ್ಲಿ ಕನ್ನಡ ಚಿತ್ರರಂಗದ ಮೊದಲ ಕಾರ್ಯಕ್ರಮದಲ್ಲಿ ನಾನು ಭಾಗವಹಿಸಿದ್ದು ಮುಂಗಾರು ಮಳೆಯ ಆಡಿಯೋ ಬಿಡುಗಡೆ. ಅಲ್ಲಿ ಮತ್ತೆ ಗಣೇಶ್ ಸಿಕ್ಕಿದರು. ಅವರಿಗೆ ನಾನು ಖಂಡಿತಾ ನೆನಪಿರಲಿಲ್ಲ. ನೆನಪಿರುವುದು ಸಾಧ್ಯವೂ ಇಲ್ಲ. ಆದರೆ ಗಣೇಶ್ ಇನ್ನೂ ಹಾಗೇ ಇದ್ದರು, ಸರಳ, ಸಜ್ಜನ. ಮುಂಗಾರು ಮಳೆ ದೊಡ್ಡ ಹಿಟ್ ಆದ ಮೇಲೂ ಆತ ಹಾಗೇ ಇದ್ದಾರೆಂದು ಕೇಳಿದೆ. ಸಂತೋಷವಾಯಿತು. ಮುಟ್ಟಿದ್ದಕ್ಕೆ ಬಿಟ್ಟದ್ದಕ್ಕೆ ಕೋಲ ಕುಣಿಸುವ ನಾಯಕ ನಟರುಗಳಿರುವ ಈ ಸಮಯದಲ್ಲಿ ಗಣೇಶ್ ನಿಜಕ್ಕೂ ಆದರ್ಶಪ್ರಾಯ.
ಒಟ್ಟಿನಲ್ಲಿ ಮುಂಗಾರು ಮಳೆ ಇನ್ನೂ ಜೋರಾಗಿ ಸುರಿದು ಕನ್ನಡ ಚಿತ್ರರಂಗಕ್ಕೆ ತಂಪುನೀಡಲಿ ಎಂದು ಹಾರೈಸುತ್ತೇನೆ.
- Abhaya Simha's blog
Printer-friendly version- Login or register to post comments
- 1828 ಹಿಟ್ಸ್
ಈ ಪುಟವನ್ನು ಇ-ಮೇಯ್ಲ್ ಮಾಡಿ


RSS:
ಪ್ರತಿಕ್ರಿಯೆಗಳು
ಹದವಾದ ಮಳೆ
ತುಂಬಾ ಹದವಾಗಿ ವಿಮರ್ಶೆ ಮಾಡಿದ್ದೀರ. ನಾನು ಮುಂಗಾರು ಮಳೆಯಲ್ಲಿನ್ನೂ ನೆನೆದಿಲ್ಲ. ಆದರೆ ನಿಮ್ಮ ತಾಂತ್ರಿಕತೆಯ ಬಗ್ಗೆಗಿನ ಮಾತುಗಳು ಸ್ವಾಗತಾರ್ಹ. ವಿಮರ್ಶೆಯಲ್ಲಿ ತಾಂತ್ರಿಕವಾಗಿ ಛಾಯಾಗ್ರಹಣ ಸುಂದರ, ಸಂಗೀತ ಮಧುರ ಮತ್ತು ಸಂಕಲನ ಸೂಕ್ತ ಎಂದಷ್ಟೆ ಹೇಳುವ ವಾಡಿಕೆ ಬೆಳೆದುಬಿಟ್ಟಿದೆ.
ಅಭಿನಂದನೆಗಳು.
ಮುಂಗಾರು ಮಳೆಗೆ ಸಿಂಗಾರದ ವಿಮರ್ಶೆ
ಅಬ್ಬಾ ಎಂತ ವಿಮರ್ಶೆ ಇದು!! ಸಕ್ಕತ್ತಾಗಿದೆ.
ಅಭಯ ಸಿಂಹರ ಬರಹದ ಹರಿವೇ ಯಾವುದೋ ಮೇಲ್ಮಟ್ಟದ ಹದದಲ್ಲಿದೆ. ಹೀಗೆ ಬರೆಯೋದೇ ಬಹಳ ಅಪರೂಪ.
ನಿಮ್ಮ ಬರಹಕ್ಕೆ, ಅದರ ಮಟ್ಟಕ್ಕೆ, ಚೆಲುವಿಗೆ ನಾನು ಇನ್ನೂ ಏನೂ ಹೇಳಲಾರೆನು.
ಇನ್ನು ’ಮುಂಗಾರು ಮಳೆ’ ಚಿತ್ರದ ಬಗ್ಗೆ. ಈ ಚಿತ್ರ ನನಗೂ ಹಿಡಿಸಿತು ಅದಕ್ಕೆ ಎರಡು ಸರತಿ ನೋಡಿಯೂ ಆಯಿತು. ದಿನಾ ಬೆಳಗು ಇರುಳು ಅದರ ಹಾಡುಗಳನ್ನು U2 ಅಲ್ಲಿ ಕೇಳಿ, ಕೇಳಿ, ಕೇಳುತ್ತಾ, ಕೇಳುತ್ತಾ ಇದ್ದೇವೆ. ನನ್ನ ಗೆಳೆಯರಲ್ಲಿ ಹಲವರು ಅದನ್ನು ಐದಕ್ಕೆ ಹೆಚ್ಚು ಸರತಿ ನೋಡಿ ಬಂದಿದ್ದಾರೆ.
ಇನ್ನು ಚಿತ್ರದ ಕೊರೆತೆಯ ಬಗ್ಗೆ, ನಮ್ಮ ಕನ್ನಡ ಚಿತ್ರವನ್ನು ಹಿಂದಿ, ಇಂಗಲೀಸು, ತೆಲುಗು ಮತ್ತು ತಮಿಳು ಸಿನಿಮಾ ಗಳಿಗೆ ಹೋಲಿಸಬೇಡಿ. ಅವರ ಮಾರ್ಕೆಟ್ ದೊಡ್ಡದು. ಹಾಕಿದ ದುಡ್ಡಿಗೆ ಹೆಚ್ಚು ಲಾಭ ಬರುವುದು.
ನಮ್ಮ ಕನ್ನಡದ ಚಿತ್ರ ನಡೆಯೋದೇ ಬರಿ ಕರ್ನಾಟಕದಲ್ಲಿ, ಅದರಲ್ಲೂ ಮಂಗಳೂರು, ಉಡುಪಿ ಅಂತಹ ಓದಿದೋರ ಊರಲ್ಲಿ, ಉತ್ತರ ಕರ್ನಾಟಕದ ಕೆಲವು ಊರಲ್ಲಿ ನಡೆಯೋದೇ ಇಲ್ಲ.
ನನಗೆ ಒಂದು ಇಷ್ಟ ಆಗಲ್ಲ. ಕನ್ನಡ ಸಿನಿಮಾ ಚೆನ್ನಾಗಿರಲ್ಲ, ಚೆನ್ನಾಗಿರಲ್ಲ ಅಂತ ಮೊದಲೇ ಮನದಲ್ಲಿ ಅಂದುಕೊಂಡು ಹೋಗೋದು. ಇಂದು ಹಿಂದಿ ಸಿನಿಮಾಗಳು ಚೆನ್ನಾಗಿರುವುವು ಬರುತ್ತಿವೆಯೇ? ಚೆನ್ನಾಗಿ ಇರೋದು ಎಷ್ಟು ಬರ್ತಾ ಇದೆ? ತಮಿಳು, ತೆಲುಗಲ್ಲೂ ಒಳ್ಳೆ ಕತೆಯ ಕೊರತೆ ಇದ್ದೇ ಇದೆ. ತೆಲುಗಲ್ಲಂತೋ ಈಗೀಗ ಆಗೊಮ್ಮೆ ಈಗೊಮ್ಮೆ "ಬೊಮ್ಮರಿಲ್ಲು" ಅಂತ ಸಿನಿಮಾ ಬರೋದು.
ಕನ್ನಡ ಸಿನಿಮಾಗಳು ನಮ್ಮ ಸಿನಿಮಾ ಅಲ್ಲವೇ. ನಮ್ಮ ಕನ್ನಡವನ್ನು ಹೆಚ್ಚು ಮಂದಿ ಸವಿಯುವ ಮೀಡಿಯಂ ಇಂದು ಸಿನಿಮಾ ಮತ್ತು ಟೀವಿ. ಇದರ ಮಟ್ಟ ಮತ್ತು ಮಾರ್ಕೆಟ್ ಎರಡನ್ನು ನಾವು ಕಾಪಾಡಿಕೊಳ್ಳಬೇಕು. ಅದಕ್ಕೆ ಅದನ್ನು ಚೆನ್ನು ಗೊಳಿಸುವ ಮಂದಿ ಅದಕ್ಕೆ ಸೇರಬೇಕು.
ಆದರೆ ಕನ್ನಡನೆಲದ ಒಳ್ಳೆ ಸಿನಿಮಾಕಾರರೆಲ್ಲ ಇಂದು ಬಾಲಿವುಡಲ್ಲಿ ಬಹಳ ಇದ್ದಾರೆ. ತೆಲುಗಲ್ಲೂ, ತಮಿಳಲ್ಲೂ ಇದ್ದಾರೆ.
ಕನ್ನಡನೆಲ ಒಳ್ಳೆ ಒಳ್ಳೆ ತಿಳಿದವರನ್ನು ಎಲ್ಲ ಪೀಲ್ಡಲ್ಲೂ ತಯಾರು ಮಾಡುತ್ತಲೇ ಇದೆ. ಆದರೆ ಅಂತಹ ಬುದ್ಧಿವಂತರು ಕನ್ನಡಕ್ಕೆ ಏನು ಮಾಡಲ್ಲ. ಬದಲಿಗೆ ಬಾಲಿವುಡಿಗೆ ಹೋಗ್ತಾರೆ, ಇಲ್ಲ ಅಮೇರಿಕ್ಕೆ. ಅಲ್ಲಿ ಹೋಗಿ ಕೂಡ ಕನ್ನಡಕ್ಕೆ ಒಳಿತು ಮಾಡಿದ ಹಲವಿದ್ದಾರೆ, ಆದರೆ ಅಂತಹವರ ನಂಬರ್ ಕಡಮೆ. ಕನ್ನಡಕ್ಕೆ ಬೇಕಾದ requirementಗೆ, ಅದಕ್ಕೆ ದುಡಿಯುವವರು(ಕನ್ನಡ ಎಲ್ಲ ಪೀಲ್ಡಲ್ಲೂ) ಏನೂ ಸಾಲದು.
ನೋಡುವ ಉತ್ಸಾಹ ತಗ್ಗಿಸಿದ ವಿಮರ್ಶೆ
ನಿಮ್ಮ ವಿಮರ್ಶೆ ಓದಿದ ಮೇಲೆ ಚಿತ್ರ ನೋಡಬೇಕು ಅನ್ನುವ ತುಡಿತ ಕಡಿಮೆಯಾಗಿದೆ!
ನೋಡುವ ಉತ್ಸಾಹ ತಗ್ಗಿಸಿದ ವಿಮರ್ಶೆ
:D
ಅಶೋಕರೆ, ಶೋಕ ಬೇಡ, "ಸ್ವಲ್ಪ adjust ಮಾಡಿಕೊಳ್ಳಿ".
ಕನ್ನಡ ಸಿನಿಮಾ ನೋಡದೇ ಹೋದರೆ, ಕನ್ನಡ ಸಿನಿಮಾ ಈಗ ಮಾಡೋರು, ಮುಂದೆ ಮಾಡಲ್ಲ.
ಅಂಬೇಗಾಲಿಡದೇ, ಮಗು ಎದ್ದು ಓಡಲ್ಲ. ಅದು ಅಂಬೇಗಾಲಿಟ್ಟಾಗ, ತಪ್ಪುಹೆಚ್ಚೆ ಇಟ್ಟಾಗ ಅದಕ್ಕೆ ಬೆಂಬಲವಾಗಿ ನಿಲ್ಲಬೇಕು.
ಹಾಗೆ ಕನ್ನಡ ಸಿನಿಮಾ, ಕನ್ನಡ ಹಾಡುಗಾರರು, ಕನ್ನಡ ನಟರು, ಕನ್ನಡ ಹೊತ್ತಗೆಗಳು ಹೀಗೆ ಕನ್ನಡದ್ದು ಎನ್ನುವ ಎಲ್ಲವೂ ಉತ್ತಮವಾಗ ಬೇಕಾದರೆ ಅದರ ಬೆಂಬಲದಲ್ಲಿ ಕನ್ನಡಿಗರು ನಿಲ್ಲಬೇಕು.
ನಾನು ಅತಿಯುತ್ತಮ ಟೇಸ್ಟ್ ಉಳ್ಳವನು, ಕನ್ನಡದೋರು ನನ್ನ ಅತಿಯುತ್ತಮ ಟೇಸ್ಟಿಗೆ ಏನೂ ಮಾಡಲ್ಲ. ಅದಕ್ಕೆ ನಾನು ಅಂತಹ ಕೀಳುಸರುಕನ್ನು ಮುಟ್ಟಲ್ಲ, ನೋಡಲ್ಲ, ಬರಿ ಬೈತೇನೆ, ಅನ್ನುವ ಕನ್ನಡದ ಪಂಡಿತರು ಸಾವಿರ ಸಾವಿರ. ಕನ್ನಡದಲ್ಲಿ ಚೆನ್ನಾಗಿರುವುದು ಇಲ್ಲ ಅದಕ್ಕೆ ನಾನೇ ಭಾಷಾಂತರನಾಗಿ( ಮತಾಂತರದಂತೆ ) ಬೇರೆ ಭಾಷೆಯ ಸಿನಿಮಾ ಹೊಗಳ್ತೇನೆ, ನೋಡ್ತೇನೆ, ಅನ್ನುವ ಮಹಾಶಯರೂ ಇದ್ದಾರೆ. ಅದು ಅವರ 'ಟಾಕ್' ಸ್ವಾತಂತ್ರ್‍ಯ ವಂತೆ. ಇಂತು ಇಂದು ಹಲವು ಮಂದಿ, ತಾವೇ ಬುದ್ಧಿವಂತರು, ಆ ಬೊಮ್ಮ ಬುದ್ಧಿಕೊಡುವಾಗ ತಮಗೆ ಕೊಂಚ ಹೆಚ್ಚು ಕೊಟ್ಟಿದ್ದಾನೆ ಎಂದು ಕೊಂಡವರು ಇದ್ದಾರೆ.
ಆದರೆ ಅವರು ತಮ್ಮ ಅಧಿಕ ಪ್ರಸಂಗತನದಿಂದ, ತೋರಿಸಿಕೊಳ್ಳವ ಭರಾಟೆಯಲ್ಲಿ ಒಂದು ಮುಖ್ಯಮಾನ ಸಂಗತಿ ಮರೆಯುತ್ತಿದ್ದಾರೆ.
ಈಗ "ಕನ್ನಡಿಗರು" ಎನ್ನುವ ಒಂದು ಕಂಪೆನಿ ಇದೆ ಎಂದು ಅಂದುಕೊಳ್ಳಿರಿ. ಅದು ಮೈಸೂರ ಪಾಕ್ ಮಾಡಿ ಮಾರುತ್ದೆ. ಆದರೆ ನಮ್ಮ ಮೈಸೂರ ಪಾಕ್ ಅಷ್ಟು ಚೆನ್ನಾಗಿಲ್ಲ. ಇಲ್ವೇ ನಮ್ಮ ಪಂಡಿತವರ್ಗಕ್ಕೆ ಹಿಡಿಸಲಿಲ್ಲ. ಹಾಗಾದರೆ ದುಡ್ಡು ಖರ್ಚು ಮಾಡಿ ತಯಾರಿಸಿದ ಮೈಸೂರು ಪಾಕನ್ನು ಮೋರಿಗೆ ಎಸೆದು ಬಿಡೋಣವೇ, ಇಲ್ಲ ನಮ್ಮ ಅಂಗಡಿ ಮುಂದೆ, ನಮ್ಮವರೇ ನಿಂತು "ಇದು ಚೆನ್ನಾಗಿಲ್ಲ, ಇದು ಚೆನ್ನಾಗಿಲ್ಲ "ಎಂದು ಹೇಳಿಸೋಣವೇ, ನಮ್ಮ ಕಂಪೆನಿಗೆ ಒಳ್ಳೆ ಮೈಸೂರ ಪಾಕ್ ಮಾಡುವ ಯೋಗ್ಯತೆಯೇ ಇಲ್ಲ ಅಂತ ಕಂಪೆನಿಯನ್ನು ಮುಚ್ಚಿಬಿಡೋಣವೇ. ಹಾಗೆ ಮುಚ್ಚಿ ಬಿಟ್ಟು, ನಮ್ಮ ನೆಲದಲ್ಲಿ ಬೇರೆ ನಾಡಿನವರು, ಸದ್ಯಕ್ಕೆ ಡೆಲ್ಲಿಯವರು ಅಂತ ಇಟ್ಟುಕೊಳ್ಳೋಣ. ಅವರು ಬಂದು 'ಮೈಸೂರ ಪಾಕ್' ಎಂದು ಏನೇನೋ ಮಾರಲು ಬಿಟ್ಟು ಬಿಡೋಣವೇ?
ಇಲ್ವೇ..
ಈಗ ಮಾಡಿರೋ ಮೈಸೂರ್ ಪಾಕನ್ನು ಕೊಂಚ ಹೊಗಳಿ(adverise) ಸೇಲ್ ಮಾಡೋಣ, ಮುಂದೆ ನಾವೇ ಖುದ್ದು ನಿಂತು ಚೆನ್ನಾಗಿರೋ ಮೈಸೂರ ಪಾಕ್ ಮಾಡೋಣ, ಅದರ ಮಟ್ಟ ಏರಿಸೋಣ, ಎಂದು ಉಪಾಯ ಮಾಡೋಣವೇ. ಖುದ್ದು ನಿಲ್ಲಲಾಗವರು ಮೈಸೂರ ಪಾಕ್ ತಿನ್ನೋದು ಬೇಡ, ಆದರೆ ನಮ್ಮ ಅಂಗಡಿ ಮುಂದೆ ನಿಂತು ಬೈತಾ ಇದ್ರೆ ಹೇಗೆ ಸೇಲಾಗುತ್ದೆ?
ಈ ಬಗೆಯಲ್ಲಿ ನಮ್ಮ ಸರಕುಗಳನ್ನು, ಕನ್ನಡದ ಸರಕುಗಳನ್ನು/goods ಬೈಯೋ ಮಂದಿ, ಒಂದು ರೀತಿ ಅದರ ಮಾರ್ಕೆಟ್ ಅನ್ನೂ ಹಾಳು ಮಾಡ್ತಾ ಇದ್ದಾರೆ.
ಆದರೆ 'ಕನ್ನಡ' ನನ್ನದು ಎನ್ನುವ ಮಂದಿ, ಅವರ ಮಾತನ್ನು ಕೇಳಿಸಿಕೊಳ್ಳದೇ, ನಮ್ಮ ಕನ್ನಡದ ಸರಕಿನ ಮಾರಾಟ ಹೆಚ್ಚಿಸಬೇಕು. ಅದಕ್ಕೆ ಬೆಂಬಲವಾಗಬೇಕು.
ಇದೇ ಕನ್ನಡದೋರಿಗೆ , ತಮಿಳರಿಗೂ ಇದು diiference. ತಮಿಳರು ಎಂದು ತಮ್ಮ ಯಾವುದೇ ಸರಕನ್ನು ಅದು ಎಷ್ಟ ಕೆಟ್ಟದಾಗಿದ್ದರೂ ಹೊಗಳುವವರೇ ಹೊರತು, ಅದನ್ನು ಎಂದು ತೆಗಳುವವರಲ್ಲ.
ಆದರೆ ನಾವು ಕನ್ನಡವರು ಅಂತಹ ತಮಿಳರನ್ನು ಬೈತಾನೆ ಇದ್ದು ನಮ್ಮ ದೊಡ್ಡ ಕನ್ನಡತನ ತೋರಿಸ್ತೇವೆ.
ಮುಂದೆ ಹರಿದ ಮುಂಗಾರು ಮಳೆ ನೀರು...
ಪ್ರಿಯ ಮಹೇಶರೇ,
ನೀವು ಹೇಳುವುದು ಸರಿ. ನಮ್ಮ ಮಾರ್ಕೆಟ್ ಸಣ್ಣದು ಹಾಕಿದ ದುಡ್ಡು ಹುಟ್ಟೋದಿಲ್ಲ ಅಂತ. ಆದರೆ ಒಂದು ಒಳ್ಳೆಯ ಸಿನೆಮಾ ಬರೇ ದುಡ್ಡಿಂದ ಆಗೋಲ್ಲ ಅಂತ ಮುಂಗಾರು ಮಳೇನೇ ತೋರಿಸಿದೆ. ಹಾಗೆ ನೋಡಿದರೆ, ನಮ್ಮ ಮಾರುಕಟ್ಟೆ ಸೀಮಿತವಾಗಲೂ ನಾವೇ ಕಾರಣ. ಓವರ್ ಸೀ ಮಾರುಕಟ್ಟೆ ತೆಲುಗಿನವರು ಬಳಸಿಕೊಂಡಷ್ಟು ನಾವು ಯಾಕೆ ಬಳಸಿಕೊಂಡಿಲ್ಲಾ? ನಮ್ಮಲ್ಲೇನು ಪ್ರತಿಭೆಗೆ ಕೊರತೆಯೇ? ಇನ್ನು ಸಾಫ್ಟ್‍ವೇರಿನಿಂದಾಗಿ ಹೊರನಾಡಿನಲ್ಲಿರುವ ಕನ್ನಡಿಗರು ಉಳಿದ ರಾಜ್ಯದವರಿಗಿಂತ ಹೆಚ್ಚೇ ಇದ್ದಾರೆ. ಹಾಗಿದ್ದೂ ಆ ಮಾರುಕಟ್ಟೆಯನ್ನು ನಾವು ಬಳಸಿಕೊಂಡಿಲ್ಲ. ನಾನು ಸ್ವತಃ ಜರ್ಮನಿಯಲ್ಲಿ ಹಿಂದೀ ಚಿತ್ರಗಳ ಹಂಚಿಕಾ ಕಂಪನಿಯ ಅಧ್ಯಕ್ಷನನ್ನು ಭೇಟಿ ಮಾಡಿದ್ದೆ. ಆತನಿಗೆ ತಮಿಳು ಸಿನೆಮಾ ಗೊತ್ತಿದೆ, ತೆಲುಗು ಗೊತ್ತಿದೆ, ಮಲಯಾಣ ಚಿತ್ರರಂಗ ಗೊತ್ತಿದೆ. ಆದರೆ ಕನ್ನಡ ಚಿತ್ರರಂಗ ಗೊತ್ತಿಲ್ಲ. ಯಾಕೆ ಹೀಗೆ?
ಪ್ರತಿಯೊಂದು ಚಿತ್ರರಂಗವೂ ಒಂದೊಂದು ಆವೃತ್ತಿಯಲ್ಲಿ ನಡೆಯುತ್ತಿರುತ್ತದೆ. ಮಲಯಾಳಂ ಚಿತ್ರರಂಗ ಸೋತು ಅನೇಕ ಥ್ಯೇಟರ್ ಮುಚ್ಚಿಯೇ ಹೋಗುತ್ತೆ ಎಂದಿದ್ದ ಸಮಯದಲ್ಲಿ 'ಶಕೀಲ' ಸಿನೆಮಾಗಳು ಭರ್ಜರಿ ಓಡಿ ಕಷ್ಟಕಾಲ ಹೋಗುವವರೆಗೆ ಚಿತ್ರರಂಗವನ್ನು ಕಾಪಾಡಿತು. ಹಾಗಾಗಿ ಮಲಯಾಳಂ ಚಿತ್ರರಂಗ ಅಂದರೆ ಬರೇ 'ಶಕೀಲ' ಅಲ್ಲವಷ್ಟೇ? ಹೀಗೇ ನಮ್ಮ ಕನ್ನಡ ಸಿನೆಮಾಗಳು ಹಿಂದೆ ಅತಿ ಉತ್ತಮವಾಗಿದ್ದವು. ಇಂದು ಕುಂಟುತ್ತಿವೆ. ಮುಂದೆ ಖಂಡಿತಾ ಸುವರ್ಣ ಯುಗ ಬರಲಿದೆ. ಅಲ್ಲಿಯವರೆಗೆ ಕಾಯೋಣ, ನಮ್ಮಿಂದಾದ ಪ್ರಯತ್ನ ಮಾಡೋಣ. ಬಹುಷಃ ಮುಂಗಾರು ಮಳೆ ಆ ಯುಗದ ಮೊದಲ ಸಿನೆಮಾನೇ ಆಗಿರಬಹುದು ಎಂದು ಆಶಿಸೋಣ. ನೀವು ಸರಿಯಾಗಿ ಹೇಳಿದಂತೆ ಕನ್ನಡ ಎಂದರೆ ಹೀಗಳೆಯದೆ ಸಿನೆಮಾ ೩೦%-೪೦% ಒಳ್ಳೆಯದಿದ್ದರೂ ನೋಡಿ ಪ್ರೋತ್ಸಾಹಿಸೋಣ. ಮುಂಗಾರು ಮಳೆ ಖಂಡಿತಾ ಒಂದು ಕ್ಲಾಸಿಕ್ ಸಿನೆಮಾ ಅಲ್ಲ. ಆದರೆ ಪ್ರತಿ ಸಿನೆಮಾ ಕ್ಲಾಸಿಕ್ ಆಗಬೇಕಾಗಿಯೂ ಇಲ್ಲ. ಆ ಕಲಾಕೃತಿಗೆ ಒಂದು ನಿರ್ದಿಷ್ಟ ಸಮಯದಲ್ಲಿ ಅದರದೇ ಆದ ಮಹತ್ವ ಇದ್ದೇ ಇದೆ. ಹಾಗಾಗಿ ನನ್ನ ವಿಮರ್ಷೆಯೂ ಇಂಥಾ ಒಂದು ಕಾಲಘಟ್ಟದ ಹಿನ್ನೆಲೆಯಲ್ಲಿ ಬರೆದಿದ್ದಷ್ಟೆ. ನಾನು ಪಂಡಿತನೆಂದೂ ಅಂದುಕೊಂಡಿಲ್ಲ, ಪಾಮರನಾಗಬೇಕಾಗಿಯೂ ಇಲ್ಲ. ಪ್ರಸ್ಥುತ ಪರಿಸ್ಥಿತಿಯಲ್ಲಿನ ಒಬ್ಬ ಸಹೃದಯಿ ಅಷ್ಟೆ.
ಮಳೆ
ನಾನು ನಿಮ್ಮನ್ನು ಅನ್ನಬೇಕೆಂದು ಬರೆಯಲಿಲ್ಲ.
"ನೀವು ಸರಿಯಾಗಿ ಹೇಳಿದಂತೆ ಕನ್ನಡ ಎಂದರೆ ಹೀಗಳೆಯದೆ ಸಿನೆಮಾ ೩೦%-೪೦% ಒಳ್ಳೆಯದಿದ್ದರೂ ನೋಡಿ ಪ್ರೋತ್ಸಾಹಿಸೋಣ."
ಈ ಮೇಲಿನದೇ ನನ್ನ ಗುರಿಯಾಗಿತ್ತು. ಯಾರು ಏನೇ ಹೇಳಿದರು "ಮುಂಗಾರು ಮಳೆ", ಆ ೪೦% ಒಳ್ಳೆಯ ಸಿನಿಮಾಗಳಲ್ಲಿ ಒಂದು.
ನೀವು "ಮಚ್ಚು ಮಂಜ", "ಕೊಚ್ಚು ಕೆಂಚ", "ರಕ್ತದ ಹೊಳೆ", "ಬೀದಿಯಲ್ಲಿ ರೇಪ್" ಈ ತರಹದ ಚಿತ್ರಗಳನ್ನು ಬೈದರೆ, ತಪ್ಪಲ್ಲ. ಅದನ್ನು ಹಲವರು ನೋಡಲ್ಲ. ಹೆಸರೇ ಹೇಳುತ್ದೆ, "ನಾನು ಎಲ್ಲರಿಗೆ ಅಲ್ಲ" ಅಂತ.
ಕನ್ನಡದ ಕೊರೆತೆಗಳನ್ನು ನೀಗಿಸಲು ಕನ್ನಡಿಗರೇ ದುಡಿಯಬೇಕೇ ಹೊರತು, ಬೇರೆಯವರು ಬಂದು ನಮ್ಮನ್ನು ಉದ್ದಾರ ಮಾಡುವರು ಎಂದು ಕಾಯೋದು ತಪ್ಪು. ಒಂದು ವೇಳೆ ಉದ್ದಾರ ಮಾಡೋರು ಬರದೇ ಇರ್ದರೆ?
ಕನ್ನಡ ಹಲವು ರಂಗದಲ್ಲಿ ಸೋತಿದೆ, ಒಪ್ಪಬೇಕು, ಆದರೆ ಅದನ್ನು ಎತ್ತುವುದು ನಮ್ಮ ಹೊಣೆ.
ನೀವು ಕನ್ನಡದ( ಸಿನಿಮಾ ಅದರಲ್ಲಿ ಒಂದು) ಕೊಂಕನ್ನು ಎತ್ತಿ ತೋರಿಸುವುದು ತುಸು ಸಮಯ ಬಿಟ್ಟುಬಿಡಿ, ಕನ್ನಡ( ಸಿನಿಮಾ ಕೂಡ) ಮತ್ತೆ ಎದ್ದೇಳುವ ವರಗೆ- ಇದು ಕೋರಿಕೆ.
ನಿಮ್ಮ ಬರಹ ಓದಿ ಕೆಲವರಾದರು, ಕನ್ನಡದ "ಮುಂಗಾರು ಮಳೆ"ಯಲ್ಲಿ ಏನೂ ಇಲ್ಲ ಅಂತ ಬೆನ್ನು ತೋರಿಸಬಹುದು, ಅಶೋಕರಂತೆ.
ಮೊದಲೇ ಬಿದ್ದಿರುವುದನ್ನು, ತುಳಿದು ಹೋಳಬೇಡಿ
ನಿಮ್ಮ ಬರೆವಣಿಗೆಯ ಹರಿವು ಚೆನ್ನು, ಅದನ್ನೇ ಕನ್ನಡದ ಒಳ್ಳೆಯ ಸಂಗತಿಯನ್ನು ಎತ್ತಿ ಹೊಗಳಲು ಬಳಸಿ. ಅಂತಹವು ಸಾವಿರ ಸಾವಿರ ಇವೆ.
ಕೆಟ್ಟ ಕನ್ನಡ ಸಿನಿಮಾ ಯಾಕೆ ಉಳಿಯಬೇಕು?
ಸಿನಿಮಾ ಒಂದು ಕಲಾಪ್ರಕಾರವಾಗಿರುವಂತೆಯೇ ಒಂದು ವ್ಯಾಪಾರವೂ ಹೌದು. ಸಿನಿಮಾವನ್ನು ನೋಡುವವನು ಅಥವಾ ರಸಗ್ರಾಹಿಗೆ ಸಿನಿಮಾ ಒಂದು ವ್ಯಾಪಾರವಾಗಿ ಏನು ಎಂಬುದಕ್ಕಿಂತ ಅದೊಂದು ಕಲಾಭಿವ್ಯಕ್ತಿಯಾಗಿ ಹೇಗಿದೆ ಎಂಬುದು ಮುಖ್ಯವಾಗುತ್ತದೆ. ಕನ್ನಡ ಸಿನಿಮಾ ಅದು ಮೂರನೇ ಒಂದರಷ್ಟು ಒಳ್ಳೆಯದಾಗಿದ್ದರೂ ಒಳ್ಳೆಯ ಸಿನಿಮಾ ಎಂದುಕೊಳ್ಳಬೇಕು, ಅದನ್ನು ಹೊಗಳಬೇಕು ಎಂದು ಒತ್ತಾಯಿಸುವುದರ ಹಿಂದೆ ಕನ್ನಡದ ಕುರಿತ ಕಳಕಳಿ ಅಲ್ಲ. ಅದೊಂದು ರೀತಿಯ ಮೂಲಭೂತವಾದ.
ಕೆಟ್ಟ ಸಿನಿಮಾಗಳನ್ನು ಒಳ್ಳೆಯವು ಎಂದು ಹೇಳಿ ಕನ್ನಡ ಚಿತ್ರರಂಗವನ್ನು ಉಳಿಸಬೇಕಾದ ಅಗತ್ಯವೇನೂ ಇಲ್ಲ. ಹಾಗೊಂದು ವೇಳೆ ಅದು ಸಾಯುವುದಿದ್ದರೆ ಸಾಯಲಿ. ಇದೇ ಅರ್ಥದ ಮಾತುಗಳನ್ನು ರಂಗಭೂಮಿಯ ಕುರಿತು ಅಪಾರ ಕಾಳಜಿಯಿಟ್ಟುಕೊಂಡಿದ್ದ ಕೆ.ವಿ. ಸುಬ್ಬಣ್ಣ ಕೂಡಾ ಹೇಳಿದ್ದರು. ಈ ಮಾತುಗಳನ್ನು ಅವರು ಕನ್ನಡ ಭಾಷೆ ಮತ್ತು ರಂಗಭೂಮಿಗಳೆರಡಕ್ಕೂ ಅನ್ವಯಿಸುವಂತೆ ಹೇಳಿದ್ದರು. ಯಕ್ಷಗಾನ ವರ್ತಮಾನಕ್ಕೆ ತನ್ನನ್ನು ಪ್ರಸ್ತುತಗೊಳಿಸಿಕೊಳ್ಳುತ್ತಾ ಉಳಿಯಿತು. ಇದರ ಸೋದರ ಕಲೆಗಳಾದ ದೊಡ್ಡಾಟ, ಸಣ್ಣಾಟಗಳು ಜೀವ ಉಳಿಸಿಕೊಂಡಿವೆಯಾದರೂ ಯಕ್ಷಗಾನದಷ್ಟು ಪ್ರಬಲವಾಗಿಲ್ಲ. ಕಂಪೆನಿ ನಾಟಕಗಳೂ ಅಷ್ಟೇ.
ಇಷ್ಟಕ್ಕೂ 30%-40% ಚೆನ್ನಾಗಿದ್ದರೂ ಅದಕ್ಕೆ ಪ್ರೋತ್ಸಾಹಿಸಬೇಕು ಎನ್ನುವ ಕನ್ನಡ ಸಿನಿಮಾಗಳು ಎಷ್ಟರ ಮಟ್ಟಿಗೆ ಕನ್ನಡದ್ದವೇ ಆಗಿವೆ ಎಂಬುದರ ಕುರಿತೂ ಚಿಂತಿಸಬೇಕಲ್ಲವೇ? ಕನ್ನಡ ಹೊಸ ಅಲೆಯ ಚಿತ್ರಗಳು ಮತ್ತು ಬೆರೆಳೆಣಿಕೆಯ ಸಂವೇದನಾ ಶೀಲ ವ್ಯಾಪಾರೀ ಚಿತ್ರಗಳ ನಿರ್ದೇಶಕರನ್ನು ಹೊರತು ಪಡಿಸಿದರೆ ಕನ್ನಡ ಚಿತ್ರಗಳಿಗೆ ಕನ್ನಡ ಐಡೆಂಟಿಟಿಯನ್ನು ಉಳಿಸಿಕೊಳ್ಳುವ ಯಾವ ಕೆಲಸವೂ ಮಾಡಲಿಲ್ಲ. ಇತ್ತೀಚೆಗಂತೂ ಬರೇ ತಮಿಳು, ತೆಲುಗು, ಮಲೆಯಾಳಂ, ಹಿಂದಿಗಳಿಂದ ಕಾಪಿ ಮಾಡುವ ಹುಚ್ಚು. ಈ ಕತೆಗಳನ್ನು ಸಾಂಸ್ಕೃತಿಕವಾಗಿ ಕನ್ನಡಕ್ಕೆ ಒಗ್ಗಿಸುವ, ಕನ್ನಡದ ಸಂದರ್ಭದಲ್ಲಿ ಗ್ರಹಿಸುವ ಕೆಲಸವೂ ಆಗುವುದಿಲ್ಲ. ಇಂಥ ಚಿತ್ರಗಳು ಹೆಚ್ಚು ಕಾಲ ಉಳಿಯುವುದಿಲ್ಲ ಎಂಬುದು ಈಗಾಗಲೇ ಸಾಬೀತಾಗಿದೆ. ಇದನ್ನು ಮಾಡಿದ್ದು 30%-40% ಚೆನ್ನಾಗಿದ್ದರೂ ಸಾಕು ಎನ್ನುವ ವೀಕ್ಷಕರಲ್ಲ. ಚೆನ್ನಾಗಿಲ್ಲ ಎಂದು ಥಿಯೇಟರ್ ಗಳಿಂದ ದೂರ ಉಳಿದ ಪ್ರೇಕ್ಷಕರು.
ವ್ಯಾಪಾರಿ ಸಿನಿಮಾ ಮಾರುಕಟ್ಟೆಯ ಸರಕು. ಮಾರುಕಟ್ಟೆಯೇ ಅದರ ಗುಣಮಟ್ಟವನ್ನು ಸರಿಪಡಿಸುತ್ತದೆ. ಇನ್ನು ಕನ್ನಡ ಚಿತ್ರರಂಗಕ್ಕೆ ಇರುವ ಪ್ರೋತ್ಸಾಹ ಬೇರಾವ ಚಿತ್ರರಂಗಕ್ಕೂ ಇಲ್ಲ. ಇಲ್ಲಿರುವ ತೆರಿಗೆ ವಿನಾಯಿತಿ, ಸಬ್ಸಿಡಿಗಳು ಬೇರೆಲ್ಲೂ ಇಲ್ಲ. ರೈತರಿಗೆ ಸಬ್ಸಿಡಿ ಕೊಟ್ಟರೆ ಅದನ್ನು ಕೆಟ್ಟ ಆರ್ಥಿಕ ನೀತಿಯೆನ್ನುವವರೇ ಮನರಂಜನಾ ಉದ್ಯಮಕ್ಕೆ ಮಿತಿ ಮೀರಿ (ಚಿತ್ರವೊಂದರ ಸರಾಸರಿ ಬಜೆಟ್ ನ ಶೇಕಡಾ 10ರಷ್ಟು) ಸಬ್ಸಿಡಿ ಕೊಡುವುದನ್ನು ಯಾಕಾದರೂ ಒಪ್ಪುತ್ತಾರೋ?
ಅಸಮಂಜಸ ಕಾಮೆಂಟು
ಅಭಯ್ ರವರು ಕೊಂಕು ಎತ್ತಿ ತೋರಿಸುತ್ತಿಲ್ಲ, ಬದಲಿಗೆ ಒಂದು constructive criticism ಮುಂದಿಟ್ಟಿದ್ದಾರೆ. ಸರಿಯಾದ ವಿಮರ್ಶೆಯಿಲ್ಲದಿದ್ದರೆ ಚಿತ್ರರಂಗ ಎದ್ದೇಳೋದಿಲ್ಲ.
ಅನಿವಾಸಿಯವರು ಹೇಳಿದಂತೆ "ವಿಮರ್ಶೆಯಲ್ಲಿ ತಾಂತ್ರಿಕವಾಗಿ ಛಾಯಾಗ್ರಹಣ ಸುಂದರ, ಸಂಗೀತ ಮಧುರ ಮತ್ತು ಸಂಕಲನ ಸೂಕ್ತ ಎಂದಷ್ಟೆ ಹೇಳುವ ವಾಡಿಕೆ ಬೆಳೆದುಬಿಟ್ಟಿದೆ". ಹೀಗಿರುವಾಗ ಚಿತ್ರಗಳು ಎಷ್ಟರಮಟ್ಟಿಗೆ ಬೆಳೆದಿವೆ ಎಂಬುದನ್ನು ನಾವುಗಳು ನೋಡಿದ್ದೇವೆ. "ಚಿತ್ರ ಸೂಪರ್ ಆಗಿದೆ" ಎಂದಷ್ಟೇ ಎಲ್ಲರೂ ಹೇಳೋದು. "ಚಿತ್ರ ಸೂಪರ್" ಆಗಿದ್ದುಕೊಂಡೇ ಲಾಗ ಹೊಡೆದಿರುತ್ತದೆ.
ಅದೇನೆ ಇರಲಿ, "ತುಸು ಸಮಯ ಹೀಗೆ ಬರೆಯುವುದನ್ನು ಬಿಟ್ಟುಬಿಡಿ" ಎಂಬ ನಿಮ್ಮ ಹೇಳಿಕೆ ಸಮಂಜಸವಲ್ಲ. ಎಲ್ಲರಿಗೂ ತಮ್ಮ ಅಭಿಪ್ರಾಯ ವ್ಯಕ್ತಪಡಿಸುವ ಹಕ್ಕು ಇರುತ್ತದೆ.
--
Check my Blog
Kannada wikipedia
"ಹೊಸ ಚಿಗುರು, ಹಳೆ ಬೇರು"
ಎಲ್ಲರಿಗೂ ತಮ್ಮ ಅಭಿಪ್ರಾಯ ವ್ಯಕ್ತಪಡಿಸುವ ಹಕ್ಕು ಇರುತ್ತದೆ.
"ನೀವು ಕನ್ನಡದ( ಸಿನಿಮಾ ಅದರಲ್ಲಿ ಒಂದು) ಕೊಂಕನ್ನು ಎತ್ತಿ ತೋರಿಸುವುದು ತುಸು ಸಮಯ ಬಿಟ್ಟುಬಿಡಿ, ಕನ್ನಡ( ಸಿನಿಮಾ ಕೂಡ) ಮತ್ತೆ ಎದ್ದೇಳುವ ವರಗೆ- ಇದು ಕೋರಿಕೆ."
ಅಂತ ಬರೆದಿರೋದು. ಕೋರಿಕೆಯೂ ಅಸಮಂಜಸವೇ.?!!!
"ಎಲ್ಲರಿಗೂ ತಮ್ಮ ಅಭಿಪ್ರಾಯ ವ್ಯಕ್ತಪಡಿಸುವ ಹಕ್ಕು ಇರುತ್ತದೆ. "
ಅದಕ್ಕೆ ಅದು ಕೋರಿಕೆ.
ಮತ್ತು ನಾನು ಹೇಳಿದುದು "ಮುಂಗಾರು ಮಳೆ" ಎಂಬ ಚೆನ್ನಾಗಿ ಓಡುತ್ತಿರುವ ಕನ್ನಡದ ಸಿನಿಮಾ ಸುತ್ತಾ ಇತ್ತು, ಯಾವುದೋ ’ಕೆಟ್ಟ ಸಿನಿಮಾ’ ಬಗ್ಗೆ ಇರಲಿಲ್ಲ.
ಸರಿ.. ಇರಲಿ ಬಿಡು,ನಾವು ಎಷ್ಟೇ ಆದರೂ ಒಂದು ಚೆನ್ನಾಗಿ ನಡೆಯುತ್ತಿರುವ ಕನ್ನಡ ಸಿನಿಮಾ ಅನ್ನು ಸಮರ್ಥಿಸಿಕ್ಕೆ, ದೊಡ್ಡವರಿಂದ "ಮೂಲಭೂತವಾದಿಗಳು" ಎಂಬ ಬಿರುದು ಹೊತ್ತುವರು. ಅದೂ ಅವರ "ಎಲ್ಲರಿಗೂ ತಮ್ಮ ಅಭಿಪ್ರಾಯ ವ್ಯಕ್ತಪಡಿಸುವ ಹಕ್ಕು ".
Re: ಸ್ವತಃ ಬಿರುದು ಕೊಟ್ಟುಕೊಳ್ಳುವವರು!
ಮಹೇಶ್,
ನಿಮಗೇ ನೀವೇ ಮ್(ಊ)ಲಭೂತವಾದಿಗಳು ಅಂತ ಹಣೆ ಪಟ್ಟಿ ಹಚ್ಚಿಕೊಳ್ಳುತ್ತಿದ್ದೀರಿ!
ಬಿರುದು
ಆಶೋಕ ಕುಮಾರ!
ಆಯ್ತಪ್ಪ!!!
"ಎಲ್ಲರಿಗೂ ತಮ್ಮ ಅಭಿಪ್ರಾಯ ವ್ಯಕ್ತಪಡಿಸುವ ಹಕ್ಕು " ಹಾಗೆ ನಿಮಗೂ ಇದೆ, ನನಗೂ ಇದೆ :)
ನೀವು ನನ್ನ ಬಗ್ಗೆ ಚಿಂತೆ ಮಾಡಬೇಕಾಗಿಲ್ಲ!!
Re: ಎಲ್ಲರಿಗೂ ತಮ್ಮ ಅಭಿಪ್ರಾಯ ವ್ಯಕ್ತಪಡಿಸುವ ಹಕ್ಕು ಇರುತ್ತದೆ.
"ನೀವು ಕನ್ನಡದ( ಸಿನಿಮಾ ಅದರಲ್ಲಿ ಒಂದು) ಕೊಂಕನ್ನು ಎತ್ತಿ ತೋರಿಸುವುದು ತುಸು ಸಮಯ ಬಿಟ್ಟುಬಿಡಿ, ಕನ್ನಡ( ಸಿನಿಮಾ ಕೂಡ) ಮತ್ತೆ ಎದ್ದೇಳುವ ವರಗೆ- ಇದು ಕೋರಿಕೆ."
ಅಂತ ಬರೆದಿರೋದು. ಕೋರಿಕೆಯೂ ಅಸಮಂಜಸವೇ.?!!!
ಬಿಡ್ರೀ... ಈಗಿನ ಸಿನೆಮಾಗಳ genreಏ ಬೇರೆ... ಅವ್ರಿಗೆ ತೀಳಿಯುವುದಿಲ್ಲ, ಪಾಪ ಒಳ್ಳೇ ಚಿತ್ರಗಳು ನೋಡಿ ಅಭ್ಯಾಸ ಅನುಸತ್ತೆ ಬಿಟ್ಬಿಡಿ.
ಉ: ಸಕಾಲದಲ್ಲಿ ಮುಂಗಾರು ಮಳೆ
nanna kavana blog visit madi http://veeravenki.bl...
-Vರ ( Venkatesha ರಂಗಯ್ಯ )
ಉ: ಸಕಾಲದಲ್ಲಿ ಮುಂಗಾರು ಮಳೆ
ಅಭಯಸಿಂಹ ರವರೆ ಮುಲಾ ಪಾತ್ರಗಳಿಗಿಂತ ಚಿತ್ರದ ಸಂಗೀತ ಹಾಗೂ ಚಿತ್ರದ ಕತೆ ಮನವ ಕಲಕುತ್ತದೆ ಅಲ್ಲವೇ