ಭರತಾಗ್ರಜ
ಭರತಾಗ್ರಜ.
ಗ್ರಾಮ ಗ್ರಾಮದಲಿ ರಾಮನವಮಿಯ
ಮಾಮರತೋರಣ ಸಾರುತಿದೆ//
ಪುಣ್ಯಧಾಮದಲಿ ರಾಮನಾಮದಾ
ಕೋಟಿ ಕೋಟಿ ಜಪ ಸೇರುತಿದೆ//
ಭರತಖಂಡಕೇ ಭಾಗ್ಯವತಂದ
ಭರತಾಗ್ರಜ ನೀ ಬಾ ಎಂದು/
ಅಸುರಭಾರವ ದೂರಗೊಳಿಸುತ
ಭೂರಮೆಯಾ ನೀ ರಮಿಸೆಂದು/೧/
ಸೀಮೆಯ ದಾಟಿದಸೀಮಪರಾಕ್ರಮಿ
ಸೀತಾಪತಿ ನೀ ಬಾ ಎಂದು/
ಸಿಂಧು ನದಿಯನು ಸೀಮೆಗೆ ಸೇರಿಸಿ
ಸೀಮೆಯ ದುಃಖವ ಸರಿಸೆಂದು/೨/
ವಾಲಿಯ ಮಣಿಸಿದ ವಾನರ ಪ್ರಿಯ ನೀ
ವಸುಮತಿಯಾಪತಿ ಬಾ ಎಂದು/
ವನವನು ತಣಿಸಿ ಜನರುಧ್ಧರಿಸುವ
ವೀರಪುಂಗವನು ನೀನೆಂದು/೩/
ಧರೆಗವತರಿಸಿದ ದಶರಥ ತನಯ
ದಾರಿತೋರು ನೀ ಬಾ ಎಂದು/
ದಿವಾಕರಕಿರಣಾಭರಣವ ಧರಿಸಿ
ಧರಣಿಗೆ ಕರುಣೆಯ ತೋರೆಂದು/೪/
ಅಹೋರಾತ್ರ
ರಾತ್ರಿ ೪:೨೫.
೭/೪/೬.
ರಾಮನವಮಿ.

- ahoratra ರವರ ಬ್ಲಾಗ್
- Login or register to post comments
- 492 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ






RSS:
ಪ್ರತಿಕ್ರಿಯೆಗಳು
ರಾಮ ಭರತಾಗ್ರಜ
ಅಹೋರಾತ್ರ ಕವಿಗಳೇ,
ಕವನ ಭೇಷಾಗಿದೆ! ಲಯಕ್ಕೆ ಗಮನ ಹರಿಸಿರುವುದು ನಿಜಕ್ಕೂ ಸಂತಸದ ಸಂಗತಿ.
ಆದರೆ ಒಂದು ತಪ್ಪು ನುಸುಳಿಕೊಂಡು ಬಿಟ್ಟಿದೆ! ನೀವು ರಾಮನವಮಿಯಂದು ಕರೆಯುತ್ತಿರುವುದು ರಾಮನನ್ನು ಅಲ್ಲವೇ?
ಅಂದರೆ ಭರತಾನುಜನನ್ನಲ್ಲ; ಭರತಾಗ್ರಜನನ್ನು ! ಅನುಜ = ತಮ್ಮ ; ಅಗ್ರಜ = ಅಣ್ಣ .
ಸಂಸ್ಕೃತದಲ್ಲಿ :
ಅಗ್ರೇ ಜಾತ ಇತಿ ಅಗ್ರಜಃ = (ತನಗಿಂತ) ಮೊದಲು ಹುಟ್ಟಿದವನು = ಅಣ್ಣ
ಅನು(ಅನುಸೃತ್ಯ) ಜಾತ ಇತಿ ಅನುಜಃ = (ತನ್ನನ್ನು) ಅನುಸರಿಸಿ ಹುಟ್ಟಿದವನು = ತಮ್ಮ
ಎಂದರ್ಥ. ರಾಮನು ಭರತನಿಗೆ ಅಣ್ಣನಾದ್ದರಿಂದ ಅವನು ಭರತಾಗ್ರಜ; ಭರತಾನುಜನಲ್ಲ.
ಭಾವಾವೇಶದಲ್ಲಿ ಕವನ ಹೊರಹೊಮ್ಮುವಾಗ ಇವೆಲ್ಲ ಮೊದಮೊದಲು ಸರ್ವೇಸಾಮಾನ್ಯ;
ಎದೆಗುಂದದೆ ಮುಂದುವರೆಸಿ. ಭರತಾಗ್ರಜನು ನಿಮಗೆ ಅನುಗ್ರಹಿಸಲಿ.
ನಿಮ್ಮವ
ಬೆನಕ
ಭರತಾಗ್ರಜ,
ಆತ್ಮೀಯ ಬೇನಕರೇ,
ಮನ್ನಿಸಿ, ತಮ್ಮಂತಹ ಗುರುಗಳಿದ್ದರೆ ನಾವು ಏನು ಬೇಕಾದರೂ ಸಾದಿಸಬಹುದು,
ತಮ್ಮ ಮಾತಿನಂತೆ ಈ ಕವನವನ್ನು ಬದಲಿಸಿದ್ದೇನೆ, ಮುಂದೆಯೂ ಹೀಗೆಯೇ ತಪ್ಪುಗಳನ್ನು ವದಿಸಿ ನನ್ನನ್ನು ಅಶೀರ್ವದಿಸಿರಿ.
ಅಹೋರಾತ್ರ
ವಿಭಕ್ತಿ ಸರಿಯಿಲ್ಲ
ನನ್ನ ಅನಿಸಿಕೆಗಳನ್ನು ಬರೆದಿದ್ದೇನೆ.
ಬಲ್ಲವರು ಸರಿಪಡಿಸಿರಿ.
ತಪ್ಪು - ಸರಿ
ರಾಮನಾಮದಾ - ರಾಮನಾಮದ
ಭರತಖಂಡಕೇ - ಭರತಖಂಡಕೆ
ಭಾಗ್ಯವತಂದ - ಭಾಗ್ಯವ ತಂದ
ಭೂರಮೆಯಾ - ಭೂರಮೆಯ
ದಾಟಿದಸೀಮಪರಾಕ್ರಮಿ - ದಾಟಿದ ಸೀಮಪರಾಕ್ರಮಿ
ವಸುಮತಿಯಾಪತಿ - ವಸುಮತಿಯ ಪತಿ
ಜನರುಧ್ಧರಿಸುವ - ಜನರುದ್ಧರಿಸುವ
ಕವಿಗೆ ವ್ಯಾಕರಣದ ಮಿತಿಗಳಿಲ್ಲ ?
ಕವಿಗೆ ವ್ಯಾಕರಣದ ಮಿತಿಗಳಿಲ್ಲ , ಅವನು ತನಗೆ ಬೇಕಾದ ಸ್ವಾತಂತ್ರ್ಯವನ್ನು ವಹಿಸಬಹುದು ಎಂದು ಎಲ್ಲಿಯೋ ಓದಿದ್ದೇನೆ
ಕವನ ಮತ್ತು ವ್ಯಾಕರಣ
ಕವನಗಳಿಗೆ ವ್ಯಾಕರಣದ ಸಡಿಲಿಕೆಯುಂಟೇ ಹೊರತು, ಅವು ಎಲ್ಲ ವ್ಯಾಕರಣಾಂಶಗಳನ್ನು, ಅದರಲ್ಲೂ ಭಾಷೆಯ ಮೂಲಭೂತದ ನಿರ್ಮಾಣಾಂಶವಾದ ವಿಭಕ್ತಿ-ಪ್ರತ್ಯಯದಂಥ ಅಂಶಗಳನ್ನು ಕಡೆಗಣಿಸಬಾರದು.
ಹೀಗೆ ಮಾಡಿದರೆ ಓದುಗರಿಂದ ತಥಾರ್ಥವನ್ನು ತಿಳಿಯಲು ಸಾಧ್ಯವಾಗದೇ ಹೋಗಬಹುದು.