ಅನಿವಾಸಿ
*~*~*~*
ಕನ್ನಡದವರಿಗಾದ ಅವಮಾನ
ಎಸ್.ಪಿ.ಬಾಲಸುಬ್ರಹ್ಮಣ್ಯಂ ಹಾಡುಗಾರಿಕೆಯ ಕಾರ್ಯಕ್ರಮ ಸಿಡ್ನಿಯಲ್ಲಿ ಇತ್ತೀಚೆಗೆ ನಡೆಯಿತು. ನಾನು ಹೋಗಲಿಲ್ಲ. ಹೋಗಬೇಕು ಅನಿಸಲಿಲ್ಲ.
ತುಂಬಾ ಇಂಪಾಗಿ ಹಾಡಬಲ್ಲ ಎಸ್.ಪಿಯ ಹಲವಾರು ವರ್ಷಗಳ "ಟ್ರೇನ್ಡ್" ದನಿಯಾಗಲಿ, ತೀಡಿತೀಡಿ ನುಣುಪಾದ "ಕಲ್ಚರ್ಡ್" ದನಿಯಾಗಲಿ ನನ್ನಲ್ಲಿ ಉತ್ಸಾಹ ಕೆರಳಿಸುತ್ತಿಲ್ಲ. ಒಂದು ರೀತಿಯಲ್ಲಿ ಹೇಳುವುದಾದರೆ ಇಂಡಿಯಾದ ಹಲವಾರು ಜನಪ್ರಿಯ ಹಾಡುಗಾರರ ತೊಂದರೆ ಇದು ಅನಿಸುತ್ತದೆ. ಇರಲಿ ಅದು ಮತ್ತಾವಾಗಲಾದರೂ ಬೇರೆಯಾಗಿಯೇ ಯೋಚಸಲು ಇಟ್ಟುಕೊಳ್ಳುತ್ತೇನೆ.
ನುಣುಪಾದ ದನಿಯಷ್ಟೇ ಈತನ ಕಾರ್ಯಕ್ರಮಕ್ಕೆ ಹೋಗದಿರಲು ಕಾರಣವಲ್ಲ. ಟೀವಿ ಕಾರ್ಯಕ್ರಮಗಳಲ್ಲಿ ಈತ ಮಾತಾಡುವ ಒಡಕೊಡಕು ಕನ್ನಡವೂ, ತನ್ನನ್ನು ತಾನು ಕಂಡಾಪಟ್ಟೆ ಸೀರಿಯಸ್ಸಾಗಿ ಪರಿಗಣಿಸುವುದು, ಹಾಗಾಗಿ ಕಾರ್ಯಕ್ರಮದಲ್ಲಿ ಹಾಡುವವರ ಬಗ್ಗೆ ಬೆಟ್ಟದ ಮೇಲೆ ಕೂತವನಂತೆ ಆಡುವ ನಮ್ರತೆಯಿಲ್ಲದ ಮಾತು ಇವೆಲ್ಲಾ ಈತನ ಬಗ್ಗೆ ನನಗೆ ಒಳ್ಳೆಯ ಭಾವ ಮೂಡಿಸಿಲ್ಲ. ಈತ ನಡೆಸಿಕೊಡುವ ಕಾರ್ಯಕ್ರಮದ ವಿನ್ಯಾಸದ ಬಗ್ಗೆಯೇ ಕಿರಿಕಿರಿಯಿದೆ. ಅದು ಬೇರೆ ಮಾತು.
ಈಗ, ಈತನ ಕಾರ್ಯಕ್ರಮಕ್ಕೆ ಹೋಗಿ ಬಂದ ಕನ್ನಡದವರು ಹುಯ್ಯಿಲಿಡುತ್ತಿದ್ದಾರೆ. ನಾಕೈದು ಕನ್ನಡ ಹಾಡುಗಳನ್ನಷ್ಟೇ ಹಾಡಿದ. ಕನ್ನಡಕ್ಕೆ ಅವಮಾನ ಮಾಡಿದ. ತಾವು ಕೊಟ್ಟ ದುಡ್ಡಿಗೂ ಅನ್ಯಾಯವಾಯಿತು ಎಂದು ರೇಗುತ್ತಿದ್ದಾರೆ. ಅದರ ಬಗ್ಗೆ ಇಲ್ಲೆಲ್ಲಾ ಕೂಗಾಟ ಎದ್ದಿದೆ. ನನಗೆ ಮೊದಲೇ ಗೊತ್ತಿತ್ತು ಎನ್ನುವಂತ ಸೋಗಿನ ಮಾತು ನಾನು ಆಡುತ್ತಿಲ್ಲ. ಯಾಕೆಂದರೆ ಹೀಗಾಗುತ್ತದೆಂದು ಯಾರಿಗೂ ಗೊತ್ತಿರಲಿಲ್ಲ. ಆದರೆ ಊಹಿಸುವುದು ಕಷ್ಟದ ಸಂಗತಿಯೇನಾಗಿರಲಿಲ್ಲ.
ಕೆಲವು ವರ್ಷಗಳ ಹಿಂದೆ, ಈತನ ಕಾರ್ಯಕ್ರಮದ ಬಗ್ಗೆ ಚರ್ಚಿಸುತ್ತಿದ್ದ ಗೆಳೆಯರ ನಡುವೆ ನನ್ನ ಅಸಮಾಧಾನವನ್ನು ಹೇಳಿದಾಗ ಎಲ್ಲರೂ ಸಾರಾಸಗಟಾಗಿ ನನ್ನನ್ನು ತಿರಸ್ಕರಿಸಿದ್ದರು. ನಾನೊಬ್ಬ ದೇಶದ್ರೋಹಿ ಎನ್ನುವಂತೆ ಕಡಿಕಾರಿದ್ದರು. ಆದರೂ ನನ್ನ ನಿಲುವು ನಾನು ಬಿಟ್ಟುಕೊಟ್ಟಿರಲಿಲ್ಲ. ಕಾರಣ, ಆ ನಿಲುವನ್ನು ನಾನು ನನ್ನ ಮಟ್ಟಿಗಾಗುವಷ್ಟು ಗಂಭೀರವಾಗಿ ಯೋಚಿಸಿ ತಳೆದದ್ದಾಗಿತ್ತು. ನಾವು ಯಾವುದೋ ಮೆಚ್ಚುಗೆಯ ಭ್ರಾಂತಿನಲ್ಲಿ ಕುರುಡಾಗುವುದು ಸಹಜ. ಆದರೆ ತೆರೆದ ಮನಸ್ಸಿನಿಂದ, ಎಚ್ಚರದಿಂದ ನೋಡಿಕೊಂಡರೆ ಇಂತಹ ಆಘಾತವಾಗಬೇಕಾಗಿಲ್ಲ ಎಂಬ ಕಾರಣಕ್ಕೆ ಹೇಳಿದೆ ಅಷ್ಟೆ.
ಸಿಡ್ನಿಯ ಕನ್ನಡ ರೇಡಿಯೋ ಕಾರ್ಯಕ್ರಮದಲ್ಲಿ ಈತ ತಾನು ೩೬೦೦೦ ಹಾಡುಗಳನ್ನು ಹಾಡಿರುವುದಾಗಿ ಹೇಳಿಕೊಂಡ. ಸದ್ಯದಲ್ಲೇ ಗಿನಿಸ್ ಬುಕ್ ಆಫ್ ವರ್ಲ್ಡ್ ರೆಕಾರ್ಡಿನಲ್ಲಿ ದಾಖಲಾಗಲಿದೆ ಎಂದು ಈತನ ವೆಬ್‌ಸೈಟಿನಲ್ಲಿ ಐದಾರು ವರ್ಷದಿಂದ ಇದೆ. ನಲವತ್ತು ವರ್ಷದಲ್ಲಿ ನಲವತ್ತು ಸಾವಿರ ಹಾಡುಗಳೆಂದರೆ, ವರ್ಷಕ್ಕೆ ಸಾವಿರ ಹಾಡುಗಳೆಂದರೆ, ದಿನಕ್ಕೆ ಮೂರು ಹಾಡುಗಳನ್ನು ಹಾಡಬೇಕು. ಒಂದೆರಡು ದಿನ ಹತ್ತಿಪ್ಪತ್ತು ಹಾಡಿದ್ದೇನೆ ಎಂದು ಬೇರೆ ಹೇಳಿಕೊಂಡಿರುವುದು ಜಾಣತನವೇ ಸರಿ. ಆದರೆ ೩೬೦೦೦ ಹಾಡು ಹಾಡಿದ್ದೇನೆ ಅನ್ನುವುದು, ರೆಕಾರ್ಡಿಂಗ್ ಮಾಡಿದ್ದೇನೆ ಎಂದರ್ಥವಲ್ಲ. ಹಾಗಾದರೆ, ಅದಕ್ಕೆ ಆಧಾರವಿದೆಯೆ?
ಹತ್ತು ಹಾಡುಗಳನ್ನು "ಪ್ರಾಮಾಣಿಕ"ವಾಗಿ ಹಾಡಿದರೆ ಸಾರ್ಥಕವಲ್ಲವೆ ಎಂದು ಹಲವಾರು ಸಲ ಅನಿಸಿದೆ.

- anivaasi ರವರ ಬ್ಲಾಗ್
- Login or register to post comments
- 920 hits
- Email this blog





RSS:
ಪ್ರತಿಕ್ರಿಯೆಗಳು
ಉ: ಕನ್ನಡದವರಿಗಾದ ಅವಮಾನ
ನಾನು ಎಸ್ಪಿ ಅವರ ಅಭಿಮಾನಿ
ಕನ್ನಡಹಾಡುಗಳನ್ನು ಎಷ್ಟು ಚೆನ್ನಗಿ ಹಾಡುತ್ತಾರೆ ಎಂದು ಬಹಳ ಗೌರವ ಇಟ್ಟುಕೊಂಡವಳು
ಈಗ ಈ ವರದಿ ಓದಿದ ಮೇಲೆ ಅವರ ಮೇಲೆ ನನಗಿದ್ದ ಗೌರವ ಇರುವುದಿರಲಿ ಅಯ್ಯೊ ಇಂತಹವರ ಫ್ಯಾನ್ ಆಗಿದ್ದೆನಾ ಆಂತ ಅನ್ನಿನ್ಸುತ್ತಿದೆ.
ಪರಭಾಷಾ ಗಾಯಕರಿಗೆ ಮಣೆ ಹಾಕುವ ನಮ್ಮ ನಿರ್ಮಾಪಕ ಹಾಗು ನಿರ್ದೇಶಕ ಮಹಾಶಯರುಗಳಿಗೆ ಇದನ್ನು ತಿಳಿಸುವುದು ಹೇಗೆ.
http://thereda-mana.blogspot.com/
ರೂಪ
ಉ: ಕನ್ನಡದವರಿಗಾದ ಅವಮಾನ
ರೂಪಾರವರೆ,
ನಿಮಗೆ ಅವರು "ಚೆನ್ನಾಗಿ" ಹಾಡುತ್ತಾರೆ ಅನಿಸಿ ಅವರ ಅಭಿಮಾನಿಯಾಗಿರುವುದು ಸರಿಯೆ. ಆದರೆ ಒಂದು ಗಮನಿಸಿ-ನಿರ್ಮಾಪಕ, ನಿರ್ದೇಶಕರು ಅವರಿಗೆ ಮಣೆ ಹಾಕಿದ್ದು ನಿಮ್ಮಂತೇ ಅಭಿಮಾನಿಗಳು ಇದುದ್ದರಿಂದ (ಇರುವುದರಿಂದ).
ಉ: ಕನ್ನಡದವರಿಗಾದ ಅವಮಾನ
ಸಾರ್
ಅವರು ಕನ್ನಡದಲ್ಲಿ ಹಾಡುವುದರಿಂದ ತಾನೆ ನಾವವರ ಅಭಿಮಾನಿಗಳಾಗುವುದು?
ನನ್ನ ತೆರೆದ ಮನಕೊಮ್ಮೆ ಭೇಟಿ ಕೊಡಿ
http://thereda-mana.blogspot.com/
ರೂಪ
ಉ: ಕನ್ನಡದವರಿಗಾದ ಅವಮಾನ
ನಿಮ್ಮ ಅಭಿಮಾನದ ಬಗ್ಗೆ ಯಾರೂ ತಕರಾರು ಮಾಡಲಾರರು. ಆದರೆ ನಿರ್ಮಾಪಕರು/ನಿರ್ದೇಶಕರು ಅಭಿಮಾನಿಗಳನ್ನು ಲೆಕ್ಕಕ್ಕೆ ತೆಕ್ಕೊಳ್ಳುತ್ತಾರೆ ಅಂತ ಹಾಗೆ ಹೇಳಿದೆ!
ಉ: ಕನ್ನಡದವರಿಗಾದ ಅವಮಾನ
ಇದೇ ವಿಷಯದ ಮೇಲೆ ದಟ್ಸ ಕನ್ನಡದಲ್ಲೂ ಒಂದು ಬರಹ ಬಂದಿದೆ, "ಕನ್ನಡಿಗರಿಗೆ ತೆಲುಗು ಟೋಪಿ" ಎಂಬ ತಲೆಬರಹದಡಿ
http://thatskannada.oneindia.in/nri/article/2008/0429-spb-fools-kannada-...
ಉ: ಕನ್ನಡದವರಿಗಾದ ಅವಮಾನ
ಶಿವಕುಮಾರರೆ,
ಆ ಬರಹದ ಬಗ್ಗೆ ನನ್ನ ಬ್ಲಾಗಿನಲ್ಲೇ ಲಿಂಕ್ ಕೊಟ್ಟಿದ್ದೆ. ಆದರೆ ಸರಿಯಾಗಿ ತಿಳಿಯದಂತಿರಬಹುದು. ಲಿಂಕ್ ಎತ್ತಿ ಕೊಟ್ಟಿದ್ದಕ್ಕೆ ಥ್ಯಾಂಕ್ಸ್...
ಉ: ಕನ್ನಡದವರಿಗಾದ ಅವಮಾನ
ಅನಿವಾಸಿ, ಆಶ್ಚರ್ಯವೆಂದರೆ ನಿಮ್ಮ ಮೇಲಿನ ಬರಹವನ್ನು ನಾನೇ ಬರೆದೆನಾ ಅಂತ ಅನ್ನಿಸೋಕ್ಕೆ ಶುರುವಾಗಿದೆ. ನಾನು ಎಸ್.ಪಿ.ಬಿ ಬಗ್ಗೆ ಈಗ್ಗೆ ಸುಮಾರು ಒಂದ್-ಒಂದೂವರೆ ವರ್ಷದ ಹಿಂದೆಯೇ ಇಂತಹುದೇ ಅಭಿಪ್ರಾಯವನ್ನು ಮುಂದಿಟ್ಟಾಗ, ನಮ್ಮ ಮನೆಯಲ್ಲಿಯೇ, "ಸಂಗೀತ ಭಾಷೆ ಮೀರಿದ್ದು" ಹಾಗೆ ಹೀಗೆ ಅಂತೆಲ್ಲ ಬಯ್ಸಿಕೊಂಡದ್ದೆ.
ಇನ್ನೊಂದು ಚರ್ಚೆಯಲ್ಲಿ.
ಎಂದು ಹೇಳಿದ್ದಕ್ಕೆ, ಕೆಲವರು ಗೆಳೆಯರು, "ಅಲ್ವೋ ಸುನಿಲ, ಎಸ್.ಪಿ.ಬಿ, ಕನ್ನಡ, ತೆಲಗು ಹಾಗೆ ಹೀಗೆ ಎಂದೆಲ್ಲ ಹೇಳುವ ನೀನು, ಹಾಗಾದರೆ ತೆಲಗು ಹಾಡುಗಳ ಮೂಲಕ ವಯೋಲೀನ್ ಯಾಕೆ ಕಲೀತೀಯಾ ?" ಎನ್ನುವಂತಹ ಕೊಂಕು ಮಾತುಗಳನ್ನು ಕೂಡ ಕೇಳಿದ್ದಿದೆ.
"'ಸಂಗೀತ ಭಾಷೆಯನ್ನು ಮೀರಿದ್ದು' ಎಂಬ ಆದರ್ಶ ಒಪ್ಪತಕ್ಕದ್ದೇ. ಆದರೆ ಆ ಆದರ್ಶ ಸಾಂಸ್ಕೃತಿಕ ಹಾಗು ಆರ್ಥಿಕ ದಬ್ಬಾಳಿಕೆಯ ಆಯಾಮವಾಗಬಾರದು"
ಉ: ಕನ್ನಡದವರಿಗಾದ ಅವಮಾನ
ಸುನೀಲರೆ,
ಒಪ್ಪಿದೆ. ಆದರೆ ಸಾರಾಸಗಟಾಗಿ "ಸಂಗೀತ ಭಾಷೆಯನ್ನು ಮೀರಿದ್ದು" ಎಂದು ಹೇಳುವದರಿಂದ ಏನೂ ಹೇಳಿದಂತಾಗಲಿಲ್ಲ. ನನಗನಿಸುವ ಮಟ್ಟಿಗೆ ಭಾಷೆಯನ್ನು ಮೀರುವ ಸಂಗೀತವೂ ಇದೆ. ಅದು ಬೇರೆಯ ಬಗೆಯದು (ಒಂದು ಉದಾ-ನೀವು ಕಲಿಯುತ್ತಿರುವ ವಯೋಲೀನ್ ಸಂಗೀತ, ಆದರೆ ಪದಗಳಿಲ್ಲ ಎಂಬ ಕಾರಣವೊಂದಕ್ಕೇ ಅಲ್ಲ.)
ಸಬ್-ಸಹಾರನ್ ಆಫ್ರಿಕಾದವರ ಸಂಗೀತವಾಗಲೀ, ಯೂರೋಪಿನ ಜಿಪ್ಸಿಯರ ಸಂಗೀತವಾಗಲೀ, ಬಲ್ಗೇರಿಯಾದ ಹೆಂಗಸರ ಸಂಗೀತವಾಗಲಿ ಪದಗಳಿದ್ದೂ ಭಾಷೆಯನ್ನು ಮೀರುವ ತಾಕತ್ತು ಪಡೆದಿರುವಂತದು. ಅದನ್ನು ಕೇಳುಗರು ನಿರ್ಧರಿಸಬೇಕು ಮತ್ತು ಹೇಳಬೇಕು. ಆದರೆ, ಈತನ ಮಾತಿನ ಒಳಾರ್ಥ "ನನ್ನ ಸಂಗೀತ ಭಾಷೆಯನ್ನು ಮೀರುತ್ತದೆ" ಎಂಬುದು. ತನ್ನ ಬೆನ್ನನ್ನು ತಾನೇ ತಟ್ಟಿಕೊಳ್ಳುವ ಒಂದು ವಿಧ ಇದು. ಆದ್ದರಿಂದಲೇ ನಮ್ರತೆಯಿಲ್ಲದ ಮಾತು ಅಂದಿದ್ದು.
ಉ: ಕನ್ನಡದವರಿಗಾದ ಅವಮಾನ
ಸಂಗೀತ ಭಾಷೆಯನ್ನು ಮೀರಿದ್ದು - ಅನ್ನೋದು ಯಾವಾಗ ಸತ್ಯ ಅಂದರೆ, ಒಬ್ಬ ಬಾಲಮುರಳಿ ಕೃಷ್ಣ ಹಾಡೋವಾಗ, ಒಬ್ಬ ಭೀಮಸೇನ್ ಜೋಷಿ ಹಾಡೋವಾಗ, ಅಥವಾ ಒಬ್ಬ ಲಾಲ್ಗುಡಿ ಜಯರಾಮನ್, ಅಥವ ಒಬ್ಬ ಹರಿಪ್ರಸಾದ್ ಚೌರಾಸಿಯಾ ಅವರ ವಾದ್ಯವನ್ನು ನುಡಿಸೋ ಅಂತಹ, ಅಥವಾ ಒಂದು ಬೇಥೋವೆನ್ ನ ಸಿಂಫೊನಿಯನ್ನು ಕೇಳುವಾಗ ಆಡಬಲ್ಲ ಮಾತು.
ಆದರೆ, ಅನಿಸುತಿದೆ ಯಾಕೋ ಇಂದು, ಅಥವ ಒಲವೇ ಜೀವನ ಸಾಕ್ಷಾತ್ಕಾರ ಇಂತಹ ಹಾಡುಗಳಿಗೆ, ಯಾವತ್ತೂ, ಯಾವಾಗಲೂ ಭಾಷೆಯ ಹಂಗು ಇದ್ದೇ ಇದೆ!
ಸಿನಿಮಾ ಸಂಗೀತವೇ ಆಗಲಿ, ಸುಬಮ ಸಂಗೀತವೇ ಆಗಲಿ ಭಾಷೆಯ ನೆರಳಲ್ಲೇ ಬದುಕಬೇಕಾದುವು ಅನ್ನೋದು ನನ್ನ ಅಭಿಪ್ರಾಯ. (ಏಕೆಂದರೆ, ಎಷ್ಟೇ ಅಂದರೂ, ಅದರಲ್ಲಿ ಮಾತು ಮೊದಲು, ಸಂಗೀತ ಕ್ಕೆ ಎರಡನೇ ಪಟ್ಟವೇ)
-ಹಂಸಾನಂದಿ
ನನ್ನ (mostly) ಇಂಗ್ಲಿಷ್ ಬ್ಲಾಗ್ - ಅಲ್ಲಿದೆ ನಮ್ಮ ಮನೆ:- http://neelanjana.wordpress.com/
ನನ್ನ ಪಾಡ್ ಕಾಸ್ಟ್ ಗಳು :- http://hamsanandi.mypodcast.com/
ಉ: ಕನ್ನಡದವರಿಗಾದ ಅವಮಾನ
ಹಂಸಾನಂದಿಯವರೇ,
ಈ ಮಾತಿನ ಬಗ್ಗೆ ತುಸು ಸಂದೇಹ. ಇದನ್ನೂ ಕಡಾಕಂಡಿತವಾಗಿ ಹೇಳಲಾಗದು ಅಲ್ಲವೇ?
ಯಾಕೆಂದರೆ ಇಂತಹ ಹಾಡುಗಳಲ್ಲೂ ಭಾಷೆಯನ್ನು ಮೀರುವ ಗುಣ ಇರಲು ಸಾಧ್ಯ ಅನಿಸುತ್ತದೆ. (ಎಸ್ಪಿಯ ಹಾಡುಗಳಲ್ಲೂ ಇರಬಹುದು)
ಉ: ಕನ್ನಡದವರಿಗಾದ ಅವಮಾನ
ಇಂತಹ ಹಾಡುಗಳಿಗೆ ಭಾಷೆಯ ಹಂಗು ಸಾಧಾರಣವಾಗಿ ಇರುತ್ತೆ ಎಂದು ಬಿಡುತ್ತೇನೆ - ಒಮ್ಮೆಮ್ಮೆ ಹೊರತುಗಳನ್ನೂ ಸೇರಿಸುವಂತೆ
-ಹಂಸಾನಂದಿ
ನನ್ನ (mostly) ಇಂಗ್ಲಿಷ್ ಬ್ಲಾಗ್ - ಅಲ್ಲಿದೆ ನಮ್ಮ ಮನೆ:- http://neelanjana.wordpress.com/
ನನ್ನ ಪಾಡ್ ಕಾಸ್ಟ್ ಗಳು :- http://hamsanandi.mypodcast.com/
ಉ: ಕನ್ನಡದವರಿಗಾದ ಅವಮಾನ
ಅನಿವಾಸಿಯವರೆ,
ಕನ್ನಡಿಗರೇ ಬೇರೆಯಾಗಿ ಬರೀ ಕನ್ನಡದ ಹಾಡುಗಳ ಕಾರ್ಯಕ್ರಮ ಮಾಡಿದ್ದರೆ ಈ ತಂಟೆನೆ ಇರ್ತ ಇರಲಿಲ್ಲ. ಇನ್ನೊಂದ ವಸಿ ಹೆಚ್ಚು ಹಣ ಕರ್ಚು ಮಾಡಿದ್ದರೆ ಮಾಡಬಹುದಿತ್ತೇನೊ ಅನ್ಕೊತಿನಿ. ಮೊದಲೆ ಎಸ್ಪಿಬಿಯವರ ತೆಲುಗು ಪ್ರೇಮ 'ಎದೆ ತುಂಬಿ ಹಾಡುವೆನು' ನೋಡುವವರಿಗೆ ಗೊತ್ತೆ ಇದೆ. ಇದರಿಂದ ಈ ಕಾರ್ಯಕ್ರಮ ಮಾಡಿದವರು ಮೊದಲೆ ಅವರಿಗೆ ಕಟ್ಟಳೆಗಳನ್ನು ಹಾಕಬೇಕಿತ್ತು 'ಎಲ್ಲ ತರದಲ್ಲು ಈ ಕಾರ್ಯಕ್ರಮ ಕನ್ನಡ:ತೆಲುಗು ೫೦:೫೦ ಆಗಿರಬೇಕು' ಅಂತ.
--
ಕನ್ನಡಕ್ಕೆ ಬೇಕು ಕನ್ನಡದೇ ಸೊಬಗು,ಸೊಗಡು
ಉ: ಕನ್ನಡದವರಿಗಾದ ಅವಮಾನ
ವೈಭವರೆ,
ಹೌದು, ಈ ಗಾಯಕನ ಹಾಡು ಕೇಳಲು ಇಷ್ಟ ಇರುವವರು ಅದರ ಬಗ್ಗೆ ಯೋಚಿಸುವುದು ಒಳ್ಳೆಯದು.
ಉ: ಕನ್ನಡದವರಿಗಾದ ಅವಮಾನ
ಅನಿವಾಸಿಗಳಿಂದ ಈ ತೆಱದ ಬರಹವೇ!
ತಾಳಿದವನು ಬಾೞಿಯಾನು ಅಲ್ವೇ!
=====================================
ಮಾಯ್ಸ!
ಉ: ಕನ್ನಡದವರಿಗಾದ ಅವಮಾನ
ಮಹೇಶರೆ-
ಮೊದಲ ಸಾಲಿನ ಕಡೆಯಲ್ಲಿ ಕೇಳ್ಕೊಕ್ಕೆ ಇಲ್ಲದೇ ಇರೋದ್ದರಿಂದ ಅದನ್ನ ಉದ್ಗಾರ ಅಂತ ತಗೊಂಡೆ.
ಇನ್ನು ಈ ಗಾಯಕನ ವಿಷಯದಲ್ಲಿ ತಾಳಿಕೊಂಡ ಭ್ರಾಂತ ನಾನಂತೂ ಅಲ್ಲ.
ಉ: ಕನ್ನಡದವರಿಗಾದ ಅವಮಾನ
ರೀ ಹಿಂಗಾದ್ರೆ ಬಲ್ ಎಡರು....
ನಂಗೆ ಹಾಡಿನ ಮ್ಯೂಸಿಕ್‌ಗಿಂತ ಅದರ ಲಿರಿಕ್ಸ್ ಹೆಚ್ಚು ಇಂಪಾರ್ಟೆಂಟು..
ಅದಕ್ಕೆ.. ಸಂಗೀತಕ್ಕೆ ಬಾಶೆ ಇಲ್ಲ ಅನ್ನೋ ಮಳ್ರು. ಯಾ ಬಾಶೆಯ ಹಾಡನ್ನೂ ಹಾಡ್ಲೇ ಬಾರ್ದು, ಬರೀ ಆಲಾಪ, ಹಿಮ್ಮೇಳದಲ್ಲಿ ಮುಗಿಸ್‌ಬೇಕು
ಹಾಡು ಹಾಡಾಗೋದು ಹಾಡಿನ ನುಡಿಯಿಂದ ಅಲ್ವೇ..
=====================================
ಮಾಯ್ಸ!
ಉ: ಕನ್ನಡದವರಿಗಾದ ಅವಮಾನ
ಸರಿ, ಹಾಡಿಗೆ ನುಡಿ ಬೇಕಾಗಬಹುದು ಆದರೆ ಅದನ್ನು ಅನುಭವಿಸಲು **ಎಲ್ಲರಿಗೂ** ಅದು ಅರ್ಥವಾಗಲೇಬೇಕೆಂಬ ಹಟ/ಅಗತ್ಯ ಇಲ್ಲದಿರಬಹುದು. ಲೋಕದಲ್ಲಿ ಹಲವು ಬಗೆಯ ಜನರಿರುತ್ತಾರೆ
ಉ: ಕನ್ನಡದವರಿಗಾದ ಅವಮಾನ
ಇಲ್ಲಿನ ಹಲವು ಪ್ರತಿಕ್ರಿಯೆಯಲ್ಲಿ ಎಸ್.ಪಿ.ಬಿ ರವರು ಬರೆ ಕನ್ನಡ ಹಾಡನ್ನು ಹಾಡಬೇಕು ಎಂದೊ,ಬೇರೆ ಯಾವ ಭಾಶೆಯ ಹಾಡನ್ನು ಹಾಡಬಾರದು ಎನ್ನುವಂತಿದೆ ಎಂಬುದು ನನ್ನ ಒಂದು ಅಭಿಪ್ರಾಯ.
ಆದರೆ ಲೇಖನದ ವಿಷಯ ಅದಲ್ಲ.
ಸಿಡ್ನಿ ನಲ್ಲಿ ನಡೆಸಿದ ಹಾಡುಗಾರಿಕೆ ಕಾರ್ಯಕ್ರಮ "ಕನ್ನಡ ಮತ್ತು ತೆಲುಗು" ಎಂದು ಹೇಳಿ ಹಮ್ಮಿಕೊಳ್ಳಲಾಗಿತ್ತು.
ಹಾಗೆಂದರೆ,ಕನ್ನಡಕ್ಕೆ ಮತ್ತು ತೆಲುಗಿನ ಹಾಡುಗಳಿಗೆ ಸಮಾನತೆ ಇರಬೇಕಿತ್ತು ಅಲ್ಲವೆ ?
ಇದಲ್ಲದೆ , ಪ್ರತಿಸಾರಿಯು ಅಲ್ಲಿ ನೆರೆದಿದ್ದ ಕನ್ನಡಿಗರ ನಿರೀಕ್ಷೆಗಳಿಗೆ ಮಸಿ ಬಳೆದವರಂತೆ ಎಸ್.ಪಿ.ಬಿ ರವರು ಕೇವಲ ತೆಲುಗು ಹಾಡನ್ನು ಹೆಚ್ಚು ಹಾಡಲು ಹೊರಟರು(೪-ತೆಲುಗು.೧-ಕನ್ನಡ).
ಕನ್ನಡದ ಹಾಡುಗಳು ಹಾಡಬೇಕೆಂಬ ಕೊಗು ಬಂದಾಗಲೆಲ್ಲ "ಸಂಗೀತ ಭಾಷೆಗು ಮೀರಿದ್ದು" ಎಂಬ ತಮ್ಮನ್ನು ತಾವು ಸಮರ್ಥಿಸಿಕೊಳ್ಳುವ ಮಾತುಗಳು ಎಸ್.ಪಿ.ಬಿ ರವರಲ್ಲಿ ಬಂದವು.
ಎಸ್.ಪಿ.ಬಿ ರವರ ವರ್ತನೆ ಎಷ್ಟರ ಮಟ್ಟಿಗೆ ಸರಿ ನೀವೇ ಹೇಳಿ ?
ನಾವು ಏನು ತೆಲುಗು ಕಾರ್ಯಕ್ರಮಕ್ಕೆ ನುಗ್ಗಿ ಕನ್ನಡ ಹಾಡನ್ನು ಕೇಳಿದೆವ ?
ಇಲ್ಲ ಬರೆ ಕನ್ನಡ ಹಾಡುಗಳನ್ನು ಹಾಡಬೇಕು ಎಂದು ಹಟ ಹಿಡಿದೆವ ?
ಸುಮ್ಮನೆ ಜನರು ನಮ್ಮನ್ನು ಅನ್ಯತ ಭಾವಿಸಿ ಕನ್ನಡಿಗರ ಮೇಲೆ ಗೊಬೆ ಕೊರಿಸ್ತಾರೆ, ಇದು ಕನ್ನಡಿಗರಿಗೆ ಅಪಮಾವವೆಸಗಿದಂತೆ.
ಮಾನ್ಯ ಎಸ್.ಪಿ.ಬಿ ರವರು ನಮ್ಮ ಕನ್ನಡ ಕಾರ್ಯಕ್ರಮದಲ್ಲಿ ಬಹಳ ಬಾರಿ ಕನ್ನಡವಲ್ಲದನ್ನು ತಂದಿಕ್ಕುತಿದ್ದಾರೆ.
೧) ಕೆಲವು ದಿನಗಳ ಹಿಂದೆ "ಎದೆ ತುಂಬಿ ಹಾಡುವೆನು" ಕಾರ್ಯಕ್ರಮದಲ್ಲಿ ಯಾರೊ ತಮಿಳು ಸ್ನೇಹಿತನನ್ನು ಕರೆತಂದು ಅವರವರೆ ತಮಿಳಿನಲ್ಲಿ ಕಾರ್ಯಕ್ರಮದ ತುಂಬ ಅವರ ಜೀವನದ ಬಗ್ಗೆ ಚರ್ಚಿಸಲು ಹೊರಟರು.
[ನಮಗೆ "ಮೈಸೊರ್ ಪಾಕ್ ಬೇಕೆಂದು ಅಂಗಡಿಯಲ್ಲಿ ಕೇಳಿದರೆ ಅಂಗಡಿಯಾತ ಮೈಸೊರ್ ಪಾಕೆ ಜೊತೆಗೆ ಭಾಧೊಶ ವನ್ನು ಜೊತೆಗೆ ಸೇರಿಸಿ ಕೊಟ್ಟರೆ ಎಷ್ಟು ಚನ್ನ ? ಇದರರ್ಥ ಕೊಳೆಯಲಾರಂಬಿಸಿರುವ ಭಾಧೊಶ ವನ್ನು ಕಾಲಿ ಮಾಡುವ ನಿಂಟಿನಿಂದ ಮಾಡಿದಂತಲ್ಲವೆ ?"]
೨) ಹಲವು ಬಾರಿ,ಎಸ್.ಪಿ.ಬಿ ರವರು ಕನ್ನಡ ಹಾಡುಗಳ ರಾಗಕ್ಕೆ ಮೂಲ ತೆಲುಗು ರಾಗಗಳು ಮಾತ್ರವೆ ಎಂಬಂತೆ ತೆಲುಗಿನಲ್ಲಿ ಪದ್ಯ ಹಾಡುವುದು ಎತೇಚ್ಚವಾಗೆ ಕಾಣಬಹುದಿತ್ತು.
ನಾವು ಎಸ್.ಪಿ.ಬಿ ರವರ ಬಳಿ, ಅವರು ಎಲ್ಲಿ ಹೋದರು ನಮ್ಮ ಕನ್ನಡ ಮಾತ್ರವೆ ಸಾರಬೇಕು ಎಂಬುದನ್ನು ನಾವು ಎಲ್ಲಿಯು ಕೇಳಿಲ್ಲ,ಕೇಳುವುದಿಲ್ಲ.
ಅವರು ನಿಗದಿಯಾಗಿರುವ ನಮ್ಮ ಕನ್ನಡ ಕಾರ್ಯಕ್ರಮದಲ್ಲಿ ಕನ್ನಡ ಹಾಡಿದರೆ ಅಷ್ಟೆ ಸಾಕು.
ವಿ.ಸೊ: ಎಸ್.ಪಿ.ಬಿ ರವರು ನನ್ನ ಗುರುಗಳು ಇದ್ದ ಹಾಗೆ.ಆದರೆ ಕನ್ನಡದ ಅಪಮಾನ ಕನ್ನಡಿಗನ ಮನಕ್ಕೆ ಅವಮಾನವೆಸಗಿದಂತೆ.
-ಯುವಪ್ರೇಮಿ
ಉ: ಕನ್ನಡದವರಿಗಾದ ಅವಮಾನ
"ಎದೆ ತುಂಬಿ ಹಾಡುವೆನು".. ದಿಟವಾಗಿ ಎದೆ ತುಂಬಿ ಹಾಡುವ ಪುಟ್ಟ ಪುಟ್ಟ ಮಕ್ಕಳ ದೆಸೆಯಿಂದ ತುಂಬ ನಲಿವು ಕೊಡುತ್ತೆ.. ಆದರೆ ಎಸ್ಪಿ ಸಾಹೇಬರ ತಿಕ್ಕಲು ತಿಕ್ಕಲು, ಹರುಕು-ಮುರುಕು ಕನ್ನಡ ಡೈಲಾಗುಗಳು ಕಿವಿಗಳಿಗೆ ಮೊಳೆ ಹೊಡೆದಂತೆ ತೋರುತ್ತವೆ. ಅದೇ ಈ ಪ್ರೋಗ್ರಾಮನ್ನು ಸಿ.ಅಶ್ವತ್‍ರಂತ ಅಪ್ಪಟ ಕನ್ನಡ ದನಿ ನಡೆಸಿ ಕೊಡುತ್ತಿದ್ದಲ್ಲಿ ಅದರ ಹೊಳಪೇ ಬೇರೆ ಇರುತ್ತಿತ್ತು.
ತುಸು ಒರಟಾಗೇ ಹೇಳೋದಾದ್ರೆ ಎಸ್ಪಿ ಅಂತವರು ಎರಡು ತಲೆ **ಗಳಂತೆ!! ಡೈಲಾಗ್ ಕಿಂಗ್ ಸಾಯಿಕುಮಾರ್ ಕೂಡ ಆ ಸಾಲಿಗೆ ಸೇರಿದವರು. ಇಲ್ಲಿ ರೊಕ್ಕ ಸಿಗೋವರೆಗೂ ಇಲ್ಲಿ, ವಸಿ ಕಿರಿಕ್ ಕಂಡ್ರೆ ಅಲ್ಲಿ.. ಇಂತ ಹಲವು ಮಂದಿಯನ್ನು ನೋಡಿದಿನಿ..
ಟಿ.ಎನ್ ಸೀತಾರಾಮ್, ರವಿ ಬೆಳಗೆರೆ ಅಂತ ತೆಲುಗು ಮನೆಮಾತು ಇರುವ ಕನ್ನಡಿಗರಲ್ಲಿ ಇಂತ ಇಬ್ಬಗೆತನ ಕಂಡದ್ದಿಲ್ಲ.