ಸತ್ಯದಿಂದ ಭೂಮಿಯು ನಿಂತಿದೆ, ಸತ್ಯದಿಂದಲೇ ಸೂರ್ಯನು ಹುಟ್ಟುತ್ತಾನೆ, ಸತ್ಯದಿಂದಲೇ ಗಾಳಿಯು ಬೀಸುತ್ತದೆ, ಸತ್ಯದಿಂದಲೇ ನೀರು ಹರಿಯುತ್ತದೆ.

— ನಾರದಸ್ಮೃತಿ

ಕೃಷಿ ಸಂಪದ: ಫೆಬ್ರವರಿ ಸಂಚಿಕೆ

Krushi Sampada 5th Edition

ಹೀಗೆ ಕವಿಕೆಲಸ ಚರ್ಚಿಸಬಹುದಲ್ಲ


ನಾನು ಕವಿಯಲ್ಲ. ಆಗಾಗ ಪದ್ಯ ಬರೆಯುವ ಪ್ರಯತ್ನ ಮಾಡುತ್ತೇನಾದರೂ ಕೂಡ. ಏಕೆಂದರೆ ಕವಿಯಾಗಲು ಬೇಕಾದ ಕಾವ್ಯದ ವಿಸ್ತೃತ ಓದು, ಶ್ರದ್ಧೆಯ ಕೊರತೆ ನನ್ನಲ್ಲಿ ನನಗೇ ಕಂಡಿದೆ. ಆದರೆ ಅಡಿಗರು ಹೇಳುವಂತೆ ನನ್ನ ಪದ್ಯವನ್ನು ನಾನೇ ವಿಮರ್ಶೆಗೆ ಒಡ್ಡಿಕೊಳ್ಳುವುದು ಅಗತ್ಯ ಎಂದು ಬಗೆಯುತ್ತೇನೆ. ಕೆಲವೊಮ್ಮೆ ಪದ್ಯ ಸೊರಗುವಷ್ಟು ಅದನ್ನು ತಿದ್ದುತ್ತೇನೆ ಕೂಡ.

ಕೆಂಡಸಂಪಿಗೆಯಲ್ಲಿ ಯು.ಆರ್‍.ಅನಂತಮೂರ್ತಿ ಅನುವಾದಿಸಿದ ಈ ಒಂದು ಪದ್ಯ ಓದಿದೆ. ಪದ್ಯ ವಿಲಕ್ಷಣವಾಗಿ ಸೆಳೆಯಿತು. ಆದರೆ ಅನುವಾದ ಯಾಕೋ ಸರಿ ಅನಿಸಲಿಲ್ಲ. ಮೂಲವನ್ನು ಹುಡುಕಿ ಓದಿದೆ.

ಆಗಾಗ ಪದ್ಯ ಸುಲಭದಲ್ಲಿ ದಕ್ಕದೇ ಹೋದಾಗ ಕನ್ನಡಕ್ಕೆ ಅನುವಾದಿಸಿಕೊಂಡು ಓದುವ ಪ್ರಯತ್ನ ಮಾಡುತ್ತೇನೆ. ಟೈಮಿದ್ದರೆ ವಿಸ್ತೃತವಾಗಿ. ಇಲ್ಲದಿದ್ದರೆ ಕೆಲವು ಸಾಲುಗಳನ್ನು ಮನಸ್ಸಲ್ಲೆ ಅನುವಾದಿಸಿಕೊಳ್ಳುತ್ತೇನೆ. ಆಗ ಪದ್ಯದ ಸಾರ ನಿಚ್ಚಳವಾಗುತ್ತಾ, ಜತೆಜತೆಗೆ ಮೂಲ ಕವಿಯ ಕುಸುರಿ ಕೆಲಸ ತೆರೆದುಕೊಳ್ಳುತ್ತಾ ಹೋಗುತ್ತದೆ.

ನಾನಿಲ್ಲಿ ಚರ್ಚಿಸಬೇಕೆಂದುಕೊಳ್ಳುತ್ತಿರುವುದು ಕಾವ್ಯವನ್ನಲ್ಲ. ಕವಿತೆಯನ್ನೂ ಅಲ್ಲ. ಆದರೆ, ಅವೆರಡನ್ನೂ ಒಳಗೊಂಡೂ, ಅವೆರಡಕ್ಕೂ ಬೆಂಬಲವಾಗಬೇಕಾದ ಬೇಸಿಕ್ ಕವಿಯ ಕುಶಲ ಕೆಲಸವನ್ನು. ಪದಗಳ ಆಯ್ಕೆ, ಸಾಲಿನ ಕಟ್ಟು/ಒಡೆತ ಇತ್ಯಾದಿ. ಇದಕ್ಕೆ ಸ್ವಂತ ಪದ್ಯಗಳಿಗಿಂತ ಅನುವಾದದಲ್ಲಿ ಹೆಚ್ಚು ಚರ್ಚಿಸಲು ಅವಕಾಶವಿದೆ ಎಂದುಕೊಳ್ಳುತ್ತೇನೆ. ಏಕೆಂದರೆ, ನಿರ್ಣಾಯಕವಾದ ಒಂದು ಪಠ್ಯವನ್ನು ಇಟ್ಟುಕೊಂಡು ಅದಕ್ಕೆ ಹತ್ತಿರವಾಗುವಂತೆ ಕೆಲಸ ಮಾಡುವುದು. ಅದರಿಂದ ಬೇರಾಗುವುದಾದರೆ ಅದಕ್ಕೊಂಡು ಕಾರಣ ಕೊಟ್ಟುಕೊಳ್ಳುವುದು. ಸಾಧ್ಯವಾದರೆ ಮೂಲಕ್ಕಿಂತ ಮುಂದೆ ಹೋಗುವುದು.

ಹೀಗೆ ಚರ್ಚಿಸಲು ಅನಂತಮೂರ್ತಿಯವರ "ಭಾವಾನುವಾದ" (ಪದ್ಯಗಳ ಭಾವಾನುವಾದಗಳ ಬಗ್ಗೆ ನನ್ನ ಅನುಮಾನವಿದೆ) ಒಂದು ಕಡೆಯಾದರೆ. ನನ್ನದೇ ಅನುವಾದವನ್ನು ಈ ಚರ್ಚೆಗೆ ಒಡ್ಡಿಕೊಳ್ಳುತ್ತಿದ್ದೇನೆ. ಅನಂತಮೂರ್ತಿಯವರ ಅನುವಾದದಲ್ಲಿ ಕೆಲವು ಚೆಂದದ ಸಾಲುಗಳಿವೆ. ಆದರೆ, ನನಗವು ಬೇರೆ ರೀತಿ ಅನುವಾದಬೇಕಿತ್ತು ಅನಿಸಿತು. ಮೂಲಕವಿ/ಪದ್ಯಕ್ಕೆ ಹತ್ತಿರವಾಗಿದ್ದೂ, ಕನ್ನಡದಲ್ಲಿ ಓದಿಸಿಕೊಳ್ಳುವಂತೆ ಬರೆಯಬಹುದೇ ಎಂದು ನನ್ನ ಪ್ರಯತ್ನ

ಪೂರಕ ಓದಿಗೆ ಇಲ್ಲಿ ನೋಡಿ: ಇಷ್ಟಾರ್ ದೇವತೆಯ ಬಗ್ಗೆ

ಮೂಲ ಇಂಗ್ಲೀಷ್ ಪದ್ಯ:
Song for Ishtar
by Denise Levertov

The moon is a sow
and grunts in my throat
Her great shining shines through me
so the mud of my hollow gleams
and breaks in silver bubbles

She is a sow
and I a pig and a poet

When she opens her white
lips to devour me I bite back
and laughter rocks the moon

In the black of desire
we rock and grunt, grunt and
shine

ನನ್ನ ಅನುವಾದ:

ಶಶಿಯೊಬ್ಬಳು ಹಂದಿ
ನನ್ನ ಗಂಟಲಲ್ಲಿ ಗುರುಗುಟ್ಟುತ್ತಾಳೆ
ನನ್ನ ಟೊಳ್ಳಿನ ರಾಡಿಯನ್ನು ಬೆಳಗಿಸಲು
ಅವಳ ಮಹತ್ಕಾಂತಿ ನನ್ನೊಳಗೆ ಹೊಳೆದು
ಬೆಳ್ಳಿಗುಳ್ಳೆಗಳಲ್ಲಿ ಚೆದುರುತ್ತದೆ

ಅವಳು ಹಂದಿ
ಹಾಗು ನಾನು ಗಂಡು-
ಹಂದಿ ಹಾಗು ಕವಿ

ನನ್ನ ಕಬಳಿಸಲು
ತನ್ನ ಬೆಳ್ದುಟಿಗಳನ್ನು ಅವಳು ಬಿರಿದಾಗ
ನಾನು ಕಚ್ಚುತ್ತೇನೆ
ಆಗ ಉಲ್ಲಾಸ ಶಶಿಯನ್ನು ಓಲಾಡಿಸುತ್ತದೆ.

ಕಾಳ ಕಾಮನೆಯಲ್ಲಿ
ನಾವು ಓಲಾಡಿ ಗುರುಗುಡುತ್ತೇವೆ
ಗುರುಗುಟ್ಟಿ ಹೊಳೆಯುತ್ತೇವೆ

*****

ಅನಿಲ್ ಜೋಷಿಯವರ ಅನುವಾದ:

ಚಂದ್ರಳೊಂದು ಹಂದಿ
ಗುರುಗುಡುತ್ತಾಳೆ ನನ್ನ ಗಂಟಲೊಳು
ಅವಳ ಅತಿ ಕಾಂತಿ ನನ್ನ ತೂರಿದಂತೆ
ನನ್ನೊಳಗಣ ರಾಡಿ ಹೊಳೆಯುತ್ತದೆ
ಬೆಳ್ಳಿಗುಳ್ಳೆಗಳೊಡೆಯುತ್ತದೆ

ಅವಳು ಹಂದಿ
ನಾನು ಗಂಡು ಹಂದಿ ಹಾಗೂ ಕವಿ

ನನ್ನ ನುಂಗಿಬಿಡಲು
ಅವಳು ಬಿಳಿ ತುಟಿಗಳ ಬಿರಿದಾಗ
ನಾನೂ ಕಚ್ಚುಬಿಡುತ್ತೇನೆ
ಚಂದ್ರಳಿಗಾಗ ಕುಲು ಕುಲು ನಗು

ಬಯಕೆ ಕತ್ತಲಿನಲ್ಲಿ
ನಾವು ತೊನೆಯುವೆವು ಕೆಲೆಯುವೆವು
ಕೆಲೆಯುವೆವು ಹೊಳೆಯುವೆವು

(ಜಿವಿ ಅವರ ನಿಘಂಟಿನಿಂದ: ೧. ಕೆಲೆ (ದೇ) (ಕ್ರಿ) ೧ ಗುಟುರು ಹಾಕು, ಡುರುಕಿ ಹಾಕು ೨ ಉತ್ಸಾಹದಿಂದ ಕೂಗು ೩ ಹರಟು, ಗಳಹು)

*****

ಗುರು ಬಾಳಿಗರ ಅನುವಾದ

ಎಲ್ಲಮ್ಮನಿಗೊಂದು ಹಾಡು

ನಿನ್ನ ಸವತಿ ಚಂದ್ರಿ
ಹೆಣ್ಣು ಹಂದಿ
ನನ್ನೊಳಗೆ ಇಳಿದು ಕೆಸರಾಡಿ
ರಾಡಿ ಎಬ್ಬಿಸುವಾಗ
ನನ್ನ ಹುಸಿ ಪೌರುಷದ
ಸ್ಖಲನ ತಡೆಯಲಾರದೆ
ಒದರುತ್ತೇನೆ

ಚಂದ್ರಿ ಹಂದಿ
ನನ್ನನ್ನೂ ಹಂದಿಯಾಗಿಸಿ
ಕವಿತೆ ಸ್ಫುರಿಸುತ್ತಾಳೆ

ಅವಳು ಆವರಿಸುವಾಗ
ನಾನು ಅಪ್ಪುತ್ತೇನೆ
ಚೆಲ್ಲು ನಗು ಬ್ರಹ್ಮಾಂಡವೆಲ್ಲ
ಅನುರಣಿಸುತ್ತದೆ

ಪೋಲಿ ಹುರುಪಿನುಯ್ಯಾಲೆಯಲ್ಲಿ
ಸ್ಖಲಿಸುತ್ತಾ, ಓಲಾಡುತ್ತಾ
ಅರಚುತ್ತೇವೆ..
ಎಲ್ಲಮ್ಮಾ ಉಧೋ ಉಧೋ

*****

ಆಸು ಹೆಗ್ಡೆಯವರ ಭಾವಾನುವಾದ

ಚಂದಿರೆ ಹಂದಿಯಂತಾಗಿ
ನನ್ನ ಗಂಟಲೊಳಗಿಂದ
ಗುರುಗುಟ್ಟುತ್ತಾಳೆ
ಆಕೆಯ ಆ ಅದ್ಭುತ ಕಾಂತಿ
ನನ್ನ ಖಾಲಿ ಅಂತರಂಗದ
ಕಲ್ಮಷಗಳನ್ನೆಲ್ಲಾ ಬೆಳಗಿಸಿ
ಬೆಳ್ಳಿ ಚುಕ್ಕೆಗಳಂತೆ ಹೊರ
ಹೊಮ್ಮುವಂತೆ ಮಾಡುತ್ತದೆ.

ಆಕೆ ಹೆಣ್ಣು ಹಂದಿಯಾದರೆ
ನಾನು ಗಂಡು ಹಂದಿಯಷ್ಟೇ
ಅಲ್ಲ, ಗಂಡು ಕವಿಯೂ ಕೂಡ

ನನ್ನ ಮುಗಿಸಿಬಿಡುವಿಚ್ಛೆಯಲಿ
ಆಕೆ ತನ್ನ ಬೆಳ್ದುಟಿಗಳ ಪೂರ್ತಿ
ತೆರೆಯುವ ಮೊದಲೇ ನಾ
ಆ ತುಟಿಗಳ ಕಚ್ಚಿಬಿಡುತ್ತೇನೆ
ಆಗ ಆಕೆಯೊಳಗೆ ಎಲ್ಲೆಲ್ಲೂ
ಸಂತಸದ ಲಘು ಕಂಪನ
ಕಾಮನೆಯ ಅಂಧಕಾರದಲಿ
ನಾವು ಜೊತೆ ಜೊತೆಗೆ
ಕಂಪಿಸುತ್ತೇವೆ, ಗುರುಗುಟ್ಟುತ್ತೇವೆ,
ಗುರುಗುಟ್ಟುತ್ತಾ ಗುರುಗುಟ್ಟುತ್ತಾ
ನಾವು ನಾವೇ ಮಿಂಚತೊಡಗುತ್ತೇವೆ.

ಎಲ್ಲಿಯ ಚಂದಿರೆ?
ಎಲ್ಲಿಯ ಹಂದಿ?
ಎಲ್ಲಿ ತನ್ನ ಕಲ್ಪನೆಯಲಿ
ಮೈ ಮರೆವ ಈ ಕವಿ?

 

 

 

 

 

 

No votes yet

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.

ಉ: ಹೀಗೆ ಕವಿಕೆಲಸ ಚರ್ಚಿಸಬಹುದಲ್ಲ

aniljoshi's picture

ಅನಿವಾಸಿಗಳೆ,

ನೀವು ಹೇಳಿದಂತೆ ಅನಂತ ಮೂರ್ತಿಗಳದ್ದು ಭಾವಾನುವಾದ. ಕವನ ಮೂಲದ ಭಾವಕ್ಕೆ ಹತ್ತಿರವಿರಬೇಕು ಅನಿಸಿದರೆ ಭಾವಾನುವಾದಕ್ಕೆ ಹೆಚ್ಚು ಒತ್ತು ಅನಿಸುತ್ತದೆ. ಭಾವಕ್ಕೂ ಶಬ್ದ ಶಿಲ್ಪಕ್ಕೂ ಹತ್ತಿರವಿದ್ದರೆ ಒಳ್ಳೆಯದು ಎಂದು ನನಗನಿಸುತ್ತದೆ. ನಿಮ್ಮ ಅನುವಾದ ಚನ್ನಾಗಿದೆ, ಶಬ್ದಗಳಿಗೆ ಹತ್ತಿರದ ಅನುವಾದಕ್ಕೆ ಸ್ವಲ್ಪ ಒತ್ತು ಹೆಚ್ಚಾಯಿತು ಅನಿಸುತ್ತದೆ.

ನಿಮ್ಮ ಅನುವಾದ ನೋಡಿ ನನಗೂ ಪ್ರಯತ್ನಿಸಬೇಕೆನಿಸಿತು. ಇಲ್ಲಿದೆ ಪರಿಣಾಮ, read at your own risk :) . (ನಾನು ಆಗಾಗ ಕವಿತೆ ಎನ್ನುವಂತಹವುಗಳನ್ನು ಬರೆದುಕೊಳ್ಳುವದಿದೆ, ಆದರೆ ಹೆಚ್ಚಾಗಿ ಅವು ತುಂಡರಿಸಿದ ಸಾಲುಗಳಷ್ಟೇ!!)

ಚಂದ್ರಳೊಂದು ಹಂದಿ
ಗುರುಗುಡುತ್ತಾಳೆ ನನ್ನ ಗಂಟಲೊಳು
ಅವಳ ಅತಿ ಕಾಂತಿ ನನ್ನ ತೂರಿದಂತೆ
ನನ್ನೊಳಗಣ ರಾಡಿ ಹೊಳೆಯುತ್ತದೆ
ಬೆಳ್ಳಿಗುಳ್ಳೆಗಳೊಡೆಯುತ್ತದೆ

ಅವಳು ಹಂದಿ
ನಾನು ಗಂಡು ಹಂದಿ ಹಾಗೂ ಕವಿ

ನನ್ನ ನುಂಗಿಬಿಡಲು
ಅವಳು ಬಿಳಿ ತುಟಿಗಳ ಬಿರಿದಾಗ
ನಾನೂ ಕಚ್ಚುಬಿಡುತ್ತೇನೆ
ಚಂದ್ರಳಿಗಾಗ ಕುಲು ಕುಲು ನಗು

ಬಯಕೆ ಕತ್ತಲಿನಲ್ಲಿ
ನಾವು ತೊನೆಯುವೆವು ಕೆಲೆಯುವೆವು
ಕೆಲೆಯುವೆವು ಹೊಳೆಯುವೆವು

(ಜಿವಿ ಅವರ ನಿಘಂಟಿನಿಂದ: ೧. ಕೆಲೆ (ದೇ) (ಕ್ರಿ) ೧ ಗುಟುರು ಹಾಕು, ಡುರುಕಿ ಹಾಕು ೨ ಉತ್ಸಾಹದಿಂದ ಕೂಗು ೩ ಹರಟು, ಗಳಹು)

-
ಅನಿಲ

ಉ: ಹೀಗೆ ಕವಿಕೆಲಸ ಚರ್ಚಿಸಬಹುದಲ್ಲ

ranjith's picture

ಇಂಥ ಕವಿತೆ ಓದಲು ಬೇರೆಯೇ ಆದ ಮನಸ್ಥಿತಿ ಬೇಕು. ಒಂದು ಧ್ಯಾನಸ್ಥ ಘಳಿಗೆಯಲಿ ಮಾತ್ರ ಮನಸ್ಸಿಗೆ ತಟ್ಟುವಂಥದ್ದು.

ಅಂಥ ವ್ಯವಧಾನ ಇಲ್ಲದೇ ಹೋದರೆ ಕವಿತೆ ಸೋತಂತೆ ಅನ್ನಿಸುತ್ತಿರುತ್ತದೆ, ನಿಜವಾಗಿಯೂ ಸೋತಿರುವುದು ನಾವೇ ಆಗಿರುತ್ತೇವೆ..:)

ಉ: ಹೀಗೆ ಕವಿಕೆಲಸ ಚರ್ಚಿಸಬಹುದಲ್ಲ

ಹೇಮ ಪವಾರ್'s picture

ಇದೇನ್ರೀ ರಂಜಿತ್ ಪ್ರತಿಭಾ ನಂದಕುಮಾರ್ ಪಾರ್ಟ್ ಟು? ;)

ಉ: ಹೀಗೆ ಕವಿಕೆಲಸ ಚರ್ಚಿಸಬಹುದಲ್ಲ

anivaasi's picture

ಅನಿಲ ಜೋಶಿಯವರೆ,
ಆಸಕ್ತಿ ತೋರಿದಕ್ಕೆ ಥ್ಯಾಂಕ್ಸ್. ಭಾವಾನುವಾದದ ನಿಮ್ಮ ಮಾತನ್ನು ಒಪ್ಪುತ್ತೇನೆ. ಆದರೆ, ನಾನು ಸ್ವಲ್ಪ ಹೆಚ್ಚೇ ತೀವ್ರವಾಗಿ 'ಶಬ್ದ ಶಿಲ್ಪ'ಕ್ಕೆ ಬೆಲೆ ಕೊಡಬೇಕು ಅಂದುಕೊಂಡವನು. ಕವನದಲ್ಲಿ ಪದಗಳೇ ಅಷ್ಟೆ ಅಲ್ಲದೆ, ಪದ ಪದಗಳ ನಡುವೆಯೂ ಭಾವಕ್ಕೆ ಆಸ್ಪದವಿರುವಾಗ ಇದು ಅಗತ್ಯ ಎಂದುಕೊಳ್ಳುತ್ತೇನೆ.
ನಿಮ್ಮ ಅನುವಾದ ಚೆನ್ನಾಗಿದೆ. ನನ್ನ ಒಂದೆರಡು ಗಮನಗಳು-
ಗಂಟಲೊಳು - ಇಡೀ ಪದ್ಯದ ನಡೆಯಲ್ಲಿ ಹೊರತು ಅನಿಸಿತು. great shining - ಅತಿ ಕಾಂತಿಯಾಗಿದೆ - ಅದು intenseಗೆ ಹತ್ತಿರ ಅನಿಸಿತು.
ನನಗೆ ಇಷ್ಟವಾದ "mud of my hallow" ಅನುವಾದಿಸುವುದೂ ಕಷ್ಟವೇ ಅಲ್ಲವೆ? ನನ್ನ ಟೊಳ್ಳು ತುಸು negative ಆಯಿತನಿಸಿತು. ಆದರೆ, ಮುಂದಿನ ಸಂಭ್ರಮಕ್ಕೆ counter point ಆಗುತ್ತದೆ ಎಂದು ಇಟ್ಟುಕೊಂಡೆ.
"ನಾನು ಗಂಡು ಹಂದಿ ಹಾಗೂ ಕವಿ" ಈ ಸಾಲನ್ನು ಒಡೆದು ಮೂಲಕ್ಕಿಂತ ಒಂದು ಚೂರು ಮುಂದೆ ಹೋಗಬಹುದು ಎಂದು ಆಶಿಸಿದೆ. "ನಾನು ಗಂಡು" ಎಂದಷ್ಟೇ ಸಾಲಿಗೆ - ತನ್ನದೇ ಆದ ಅಸ್ಥಿತ್ವ ಮತ್ತು ದನಿ ಬರುತ್ತದೆ ಅನಿಸಿತು.
I bite back - ನಿಮ್ಮ ಅನುವಾದ - "ನಾನೂ ಕಚ್ಚುತ್ತೇನೆ" ತುಂಬಾ ಇಷ್ಟವಾಯಿತು. ನನಗೆ ಏಕೆ ಹೊಳೆಯಲಿಲ್ಲ ಎಂದು ಸಿಟ್ಟುಬಂದಿತು.
laughter rocks the moon - ನಿಮ್ಮ ಅನುವಾದ "ಚಂದ್ರಳಿಗಾಗ ಕುಲು ಕುಲು ನಗು"ದ ಕುಲು ಕುಲು ಚೆಂದ ಅನಿಸಿತು ಆದರೆ ಒಟ್ಟಾಗಿ ಸರಿ ಅನಿಸಲಿಲ್ಲ... ಯಾಕೆಂದು ಯೋಚಿಸುತ್ತಿದ್ದೇನೆ.
ನಿಮ್ಮ "ಬಯಕೆ ಕತ್ತಲಿನಲ್ಲಿ" ಮತ್ತು ಅನಂತಮೂರ್ತಿಯವರ "ಬಯಕೆ ನಿಶೆಯಲ್ಲಿ" - ಎರಡನ್ನೂ ನೋಡಿದಾಗ black ಯಾಕೆ ಕತ್ತಲಾಗಿದೆ ಎಂದು ಯೋಚಿಸುವಂತೆ ಮಾಡಿತು. "ಬಯಕೆ" ಪದ ಇಡೀ ಪದ್ಯದ ಚೌಕಟ್ಟಿನಲ್ಲಿ "ಕಾಮನೆ"ಯಾಗಬೇಕು ಅಂತ ನನಗಂತೂ ತೀವ್ರವಾಗಿ ಅನಿಸಿತು! :)
"ಕೆಲೆಯುವೆವು" ತುಂಬಾ ಚೆನ್ನಾಗಿದೆ. ಅದನ್ನೇ ಎರಡನೇ ಸಾಲಿನಲ್ಲೂ ಬಳಸಿದ್ದರೆ, ಓದುವಾಗ ಮತ್ತೆ ಹಿಂದಿನ ಸಾಲಿನ ನೆನಪು, ಚಿತ್ರ ಮರುಕಳಿಸುತ್ತದೆ.
ಕಡೆಯಲ್ಲಿ ಬರುವ "shine" ಅಷ್ಟು ಹೊತ್ತಿಗೆ ಅರ್ಥವಿಸ್ತಾರ ಪಡೆದಿರುತ್ತದೆ - ಹಾಗಾಗಿ ನನಗೆ "ಹೊಳೆಯು" ಸರಿಯಲ್ಲ ಅಂತ ಅನಿಸುತ್ತಿದೆ. ನೋಡಿ shine ಗೆ ಅತೀಂದ್ರಿಯ ಅರ್ಥವೊಂದಿದೆಯಲ್ಲವೆ? ಜಿವಿ ಕೋಶದಲ್ಲಿ ಗಲಭೆ, ಗೊಂದಲ, ಕೋಲಾಹಲವೆಂತಲೂ ಇದೆ!

ಅನುವಾದಿಸಿದ್ದಕ್ಕೆ ಮತ್ತೆ ಥ್ಯಾಂಕ್ಸ್.

ಉ: ಹೀಗೆ ಕವಿಕೆಲಸ ಚರ್ಚಿಸಬಹುದಲ್ಲ

srinivasps's picture

ಅನಿವಾಸಿಯವರೇ,

> "ಬಯಕೆ" ಪದ ಇಡೀ ಪದ್ಯದ ಚೌಕಟ್ಟಿನಲ್ಲಿ "ಕಾಮನೆ"ಯಾಗಬೇಕು ಅಂತ ನನಗಂತೂ ತೀವ್ರವಾಗಿ ಅನಿಸಿತು!

ಬಹುಶಃ 'ಕಾಮನೆ'ಯಲ್ಲಿ 'ಕಾಮ' ಪದ ಹುದುಗಿರುವುದರಿಂದ ಹಾಗೆನಿಸಿತೇನೋ ನಿಮಗೆ...
ಜಿ.ವಿ. ನಿಘಂಟಿನಲ್ಲಿ, ಕಾಮನೆಗೂ, ಬಯಕೆಗೂ ಹೆಚ್ಚು ವ್ಯತ್ಯಾಸವನ್ನು ಕೊಟ್ಟಿಲ್ಲ...

ಬಯಕೆ:
೪. desire (ನಾ) 1) ಇಷ್ಟ, ಅಪೇಕ್ಷೆ, ಆಸೆ, ಬಯಕೆ, ಅಭಿಲಾಷೆ 2) ಹಂಬಲ, ಹಾತೊರೆಯುವಿಕೆ, ಕಾಮನೆ, ಆಕಾಂಕ್ಷೆ, ಉತ್ಕಟ ಬಯಕೆ 3) ಕೋರಿಕೆ, ಬೇಡಿಕೆ 4) ವಿಷಯಲಾಲಸೆ, ಕಾಮ, ಭೋಗಾಸಕ್ತಿ

ಕಾಮನೆ
೧. desire (ನಾ) 1) ಇಷ್ಟ, ಅಪೇಕ್ಷೆ, ಆಸೆ, ಬಯಕೆ, ಅಭಿಲಾಷೆ 2) ಹಂಬಲ, ಹಾತೊರೆಯುವಿಕೆ, ಕಾಮನೆ, ಆಕಾಂಕ್ಷೆ, ಉತ್ಕಟ ಬಯಕೆ 3) ಕೋರಿಕೆ, ಬೇಡಿಕೆ 4) ವಿಷಯಲಾಲಸೆ, ಕಾಮ, ಭೋಗಾಸಕ್ತಿ

ಇದು ಸಂಸ್ಕೃತ vs ಅಚ್ಚ ಕನ್ನಡದ ಮತ್ತೊಂದು ಉದಾಹರಣೆಯಿರಬಹುದು...

--ಶ್ರೀ

ಉ: ಹೀಗೆ ಕವಿಕೆಲಸ ಚರ್ಚಿಸಬಹುದಲ್ಲ

anivaasi's picture

ಶ್ರೀ-
ಹೌದು ನೀವು ಹೇಳುವುದು ಸರಿ. "ಕಾಮನೆ" ಪದವನ್ನು ಓದಿದಾಗ "ಕಾಮ"ದ ಹೊಳಹಿಲ್ಲದೆ ಓದುವುದು ಸಾಧ್ಯವಿಲ್ಲವೇನೋ ಎಂಬಷ್ಟು ದಿಟ ಅನಿಸುತ್ತದೆ.
ಹಾಗಾಗಿಯೇ ಈ ಪದ್ಯದಲ್ಲಿ ಅದು ಬೇಕು ಅನಿಸಿದ್ದು.

ಉ: ಹೀಗೆ ಕವಿಕೆಲಸ ಚರ್ಚಿಸಬಹುದಲ್ಲ

aniljoshi's picture

ಅನಿವಾಸಿ ಅವರೆ,
ಕಳೆದ ವಾರದಲ್ಲೇ ನಿಮ್ಮ ಪ್ರತಿಕ್ರಿಯೆ ನೋಡಿದ್ದರೂ ಮರಳಿ ಬರೆಯಲಾಗಿರಲಿಲ್ಲ. ಕ್ಷಮಿಸಿ.

ರಾಮಸ್ವಾಮಿಯವರು ಹೇಳಿದಂತೆ ನಾನು ಬರೆದದ್ದು ಒಂದು ತರ್ಜುಮೆ. ಮೂಲದಲ್ಲಿನ ಭಾವ ಹೆಚ್ಚು ಸ್ಫುರಿಸುವದು ಅವೇ 'great shining', 'mud of hollow' ಹಾಗೂ 'black' ಗಳ ಅರ್ಥ ವಿಸ್ತಾರದಲ್ಲಿ ಅಂತ ಅನಿಸುತ್ತದೆ. ಅವುಗಳ ಅನುವಾದವನ್ನು ತೋರಿದ ಶಬ್ದಗಳಲ್ಲಿ ಹಿಡಿಯಲಾಗಿಲ್ಲ :) ನಿಮ್ಮ ಈ ಪೋಸ್ಟಿನಿಂದ ಕವಿತೆಯ ಅನುವಾದಗಳ ಕುರಿತು ಒಂದಿಷ್ಟು ಹೊಸ ವಿಚಾರಗಳು ತಿಳಿದವು. ಧನ್ಯವಾದಗಳು ಅದಕ್ಕಾಗಿ.

-
ಅನಿಲ

ಉ: ಹೀಗೆ ಕವಿಕೆಲಸ ಚರ್ಚಿಸಬಹುದಲ್ಲ

ramaswamy's picture

ಕೆಂಡಸಂಪಿಗೆಯಲ್ಲಿ ಪ್ರಕಟವಾದ ಡಾ.ಅನಂತಮೂರ್ತಿಯವರ ಭಾವಾನುವಾದದ ಪದ್ಯಕ್ಕೂ ನಿಮ್ಮ ಅನುವಾದಕ್ಕೂ ಹೆಚ್ಚೇನೂ ವ್ಯತ್ಯಾಸ ಬಂದಿಲ್ಲ. ಆದರೆ ಸಾಹಿತ್ಯದ ಸಂಗತಿಗಳು ಆಯಾ ದೇಶಕಾಲಗಳ ಒಟ್ಟು ಮೊತ್ತವಾಗಿರುವುದರಿಂದ ಇವೆಲ್ಲ ಭಾವಾನುವಾದವಾಗುವುದಕ್ಕಿಂತಲೂ ತರ್ಜುಮೆಗಳಾಗಿಬಿಡುತ್ತವೆ. ಇಲ್ಲಿನ ಉದಾಹರಣೆಯಲ್ಲಿ : ನಾವು ಚಂದ್ರನನ್ನು ಗಂಡೆಂದು ಭಾವಿಸಿದ್ದೇವೆ. ಈ ಪದ್ಯದಲ್ಲಿ ಶಶಿ ಅಂತ ನೀವು ಚಂದ್ರನನ್ನು ಸ್ತ್ರೀಲಿಂಗ ಮಾಡಿದ ಕಾರಣ ಸಂವಹನ ಏಕೋ ಏಗುತ್ತಿರುವಂತೆ ಕಾಣುತ್ತೆ. ಮೂಲ ಪಠ್ಯ ಒದಗಿಸಿದ್ದಕ್ಕೆ ಥ್ಯಾಂಕ್ಸ್. ಇಷ್ಟಕ್ಕೂ ಪದ್ಯ ಆನ್ನುವುದು ಬರಿಯ ಕಿಟಕಿ. ಅದರ ಮೂಲಕ ಆಕಾಶ ನೋಡುವ ಅವಕಾಶ ಓದುಗನಿಗೆ ದಕ್ಕುತ್ತದೆ, ಅದೂ ಅವನು ಕಿಟಕಿ ತೆರೆಯುವ ಯತ್ನ ಮಾಡಿದರೆ ಮಾತ್ರ!.

ಉ: ಹೀಗೆ ಕವಿಕೆಲಸ ಚರ್ಚಿಸಬಹುದಲ್ಲ

ಹೇಮ ಪವಾರ್'s picture

ಸರ್,
>>>ಇಷ್ಟಕ್ಕೂ ಪದ್ಯ ಆನ್ನುವುದು ಬರಿಯ ಕಿಟಕಿ. ಅದರ ಮೂಲಕ ಆಕಾಶ ನೋಡುವ ಅವಕಾಶ ಓದುಗನಿಗೆ ದಕ್ಕುತ್ತದೆ>>> ನಿಮ್ಮ ಮಾತು ಸಮಂಜಸವೆನಿಸಿತು. ಕವಿತೆಗಳಿಗೂ ಗದ್ಯಕ್ಕೂ ಇರುವ ವ್ಯತ್ಯಾಸ ಅದೇ ಅಲ್ಲವೇ? ಕವಿತೆಗಳು ಅರ್ಥವಾದಷ್ಟು ಆಳವಾಗುತ್ತಾ ಹೋಗುತ್ತವೆ, ಎಷ್ಟು ಆಳಕ್ಕಿಳಿಯುತ್ತೇವೆಯೋ ಅಷ್ಟಕ್ಕೇ ತೃಪ್ತರಾಗಬೇಕು!!

ಉ: ಹೀಗೆ ಕವಿಕೆಲಸ ಚರ್ಚಿಸಬಹುದಲ್ಲ

anivaasi's picture

ರಾಮಸ್ವಾಮಿಯವರೆ,
"ಡಾ.ಅನಂತಮೂರ್ತಿಯವರ ಭಾವಾನುವಾದದ ಪದ್ಯಕ್ಕೂ ನಿಮ್ಮ ಅನುವಾದಕ್ಕೂ ಹೆಚ್ಚೇನೂ ವ್ಯತ್ಯಾಸ ಬಂದಿಲ್ಲ" ದಯವಿಟ್ಟು ಈ ಮಾತನ್ನು ವಿವರಿಸುತ್ತೀರ? ಕುತೂಹಲ!
"ಸಂವಹನ ಏಕೋ ಏಗುತ್ತಿರುವಂತೆ ಕಾಣುತ್ತೆ" ಇದೂ ಅರ್ಥವಾಗಲಿಲ್ಲ. ಬಿಡಿಸಿ ಹೇಳುವಿರ?

ಇಲ್ಲಿ ಕಾವ್ಯ/ಕವಿತೆಗಿಂತ ಕವನ ಬರೆಯುವ nuts and bolts ಚರ್ಚಿಸುವ ಅಂತ ನನ್ನ ಇರಾದೆಯಾಗಿತ್ತು. ನೀವು ಒಂದು ಅನುವಾದ ಮಾಡಿ ಹಾಕುತ್ತೀರ? ಅಥವಾ ನಮ್ಮಿಬ್ಬರ ಪದ್ಯದ ಸಾಲು/ಪದಗಳ ಬಗ್ಗೆ ನಿಮ್ಮ ಅನಿಸಿಕೆ ಹೇಳುತ್ತೀರ?

ನಿಮ್ಮ ಆಸಕ್ತಿಗೆ ಥ್ಯಾಂಕ್ಸ್.

ಉ: ಹೀಗೆ ಕವಿಕೆಲಸ ಚರ್ಚಿಸಬಹುದಲ್ಲ

aniljoshi's picture

ರಾಮಸ್ವಾಮಿ ಅವರೆ,

ಒಂದು ಕವಿತೆಯ ಬಗ್ಗೆ ಹಲವರು ಚರ್ಚಿಸುವದನ್ನು ನೋಡಿದಾಗಲೆಲ್ಲ ನನಗೆ ಚಿತ್ರಶಾಲೆಯಲ್ಲಿ ಮಧ್ಯದಲ್ಲಿ ಒಂದು ಮಾಡೆಲ್/ವಸ್ತು ಇಟ್ಟುಕೊಂಡು ಅದರ ಸುತ್ತಲೂ ಕುಳಿತು ಚಿತ್ರಕಾರರು ಅದನ್ನು ತಮ್ಮ ಕ್ಯಾನ್ವಾಸಿನಲ್ಲಿ ಮೂಡಿಸುವದನ್ನು ಕಂಡ ಅನುಭವವಾಗುತ್ತದೆ. ಈ ಚರ್ಚೆಯನ್ನು ನೋಡಿದಾಗಲೂ ಹಾಗೇ ಅನಿಸಿದೆ. ಅದೇ ಸಮಯದಲ್ಲಿ ನಿಮ್ಮ 'ಪದ್ಯ ಅನ್ನುವದು ಬರಿಯ ಕಿಟಕಿ' ಅನ್ನುವ ಮಾತೂ ಇಷ್ಟವಾಯಿತು :)

-
ಅನಿಲ

ಉ: ಹೀಗೆ ಕವಿಕೆಲಸ ಚರ್ಚಿಸಬಹುದಲ್ಲ

gurubaliga's picture

ಅನಿವಾಸಿ, ಅನಿಲ ಜೋಷಿ, ಅನಂತ ಮೂರ್ತಿಯವರನ್ನು ನೆನಪಿಸಿ.

ನಿಮ್ಮ ಕವನಗಳೆಲ್ಲ ಚೆನ್ನಾಗಿವೆ.
ನಾನು ಬರೆದದ್ದು ಎಲ್ಲಮ್ಮನಿಗೆಂದು. ಎಲ್ಲಮ್ಮ ನಮ್ಮ ನಾಡಿನ ಇಷ್ಟಾರ್ ಅಲ್ಲವೇ? ನನ್ನದು ಭಾವವೂ ಬೇರೆ ಶಬ್ದ ಶಿಲ್ಪವೂ ಬೇರೆ. ಮೂಲ ಕವನಕ್ಕೂ ನನ್ನ ಕವನಕ್ಕೂ ಯಾವುದೇ ಸಂಬಂಧವಿದ್ದರೆ ಅದು ಎಲ್ಲಮ್ಮಳನ್ನೂ ಇಷ್ಟಾರ್ ಳನ್ನೂ ಸೇವಿಸುವ ಜೋಗತಿಯರ ಸಾಮಾಜಿಕ ಜೀತ ಅಷ್ಟೆ. (ಡೆನಿಸ್ ಬರೆದ ಶಬ್ದಗಳಲ್ಲಿ ನಾನು ಹೆಕ್ಕಿದ್ದು ಇದು)

ಎಲ್ಲಮ್ಮನಿಗೊಂದು ಹಾಡು

ನಿನ್ನ ಸವತಿ ಚಂದ್ರಿ
ಹೆಣ್ಣು ಹಂದಿ
ನನ್ನೊಳಗೆ ಇಳಿದು ಕೆಸರಾಡಿ
ರಾಡಿ ಎಬ್ಬಿಸುವಾಗ
ನನ್ನ ಹುಸಿ ಪೌರುಷದ
ಸ್ಖಲನ ತಡೆಯಲಾರದೆ
ಒದರುತ್ತೇನೆ

ಚಂದ್ರಿ ಹಂದಿ
ನನ್ನನ್ನೂ ಹಂದಿಯಾಗಿಸಿ
ಕವಿತೆ ಸ್ಫುರಿಸುತ್ತಾಳೆ

ಅವಳು ಆವರಿಸುವಾಗ
ನಾನು ಅಪ್ಪುತ್ತೇನೆ
ಚೆಲ್ಲು ನಗು ಬ್ರಹ್ಮಾಂಡವೆಲ್ಲ
ಅನುರಣಿಸುತ್ತದೆ

ಪೋಲಿ ಹುರುಪಿನುಯ್ಯಾಲೆಯಲ್ಲಿ
ಸ್ಖಲಿಸುತ್ತಾ, ಓಲಾಡುತ್ತಾ
ಅರಚುತ್ತೇವೆ..
ಎಲ್ಲಮ್ಮಾ ಉಧೋ ಉಧೋ

ಉ: ಹೀಗೆ ಕವಿಕೆಲಸ ಚರ್ಚಿಸಬಹುದಲ್ಲ

ramaswamy's picture

ವಾರೆವ್ಹಾ! ಅದ್ಭುತ ಗುರು ಬಾಳಿಗ. ವಿದೇಶೀ ಮೂಲವನ್ನು ಸ್ವದೇಶೀ ತಂತುಗಳೊಂದಿಗೆ ಪೋಣಿಸಿದರೆ ಇಂಥ ಅದ್ಭುತ ಸಾಧ್ಯ. ಅನಿವಾಸಿಯವರೇ ಬಾಳಿಗರ ಕವಿತೆ ನಾನೇನು ಅರೆಯಾಗಿದೆ ಅಂತ ಭಾವಿಸಿದ್ದೆನೋ ಅದನ್ನು ಸರಿದೂಗಿಸಿದೆ. ಏಗುವುದು ಅಂತ ಹೇಳಿದ್ದು ಅದೆಲ್ಲೋ ಕೊಂಚ ಕಷ್ಟ ಪಡುತ್ತಿದೆ ಎಂಬರ್ಥದಲ್ಲಿ. nuts n bolts ಕವಿತೆ ಒಳಗಿಂದ ಸ್ಪುರಿಸಿದಾಗ ತನ್ನಂತಾನೆ ಬಿಗಿ ಇರುತ್ತದೆ. ಇಲ್ಲವಾದಲ್ಲಿ ಬೋಲ್ಟಿಗೆ ದಾರ ಬಿಗಿದು ನಟ್ಟು ತಿರುಗಿಸಬೇಕಾಗುತ್ತೆ. ನಿಮ್ಮ ಅನುವಾದ ಮತ್ತು ಡಾ.ಅನಂತಮೂರ್ತಿಯವರ ಅನುವಾದ ಎರಡೂ ಮೂಲ ಪದ್ಯವನ್ನು ಕನ್ನಡಕ್ಕೆ ಭಾವಿಸಿದ ಹಾಗೆ ಇದೆ ಅಂತ ನಾನು ಹೇಳಿದ್ದು. ನಿಮ್ಮ ಪ್ರಯತ್ನ ಮುಂದುವರೆಯಲಿ.

ಉ: ಹೀಗೆ ಕವಿಕೆಲಸ ಚರ್ಚಿಸಬಹುದಲ್ಲ

gurubaliga's picture

ನಂನಿ ಡಿಎಸ್ಸಾರ್ :-)

ಅನಿವಾಸಿ ಸಂಪದ ಬಳಗದಲ್ಲಿ ನಾನು ಗೌರವಿಸುವ ಬರಹಗಾರರಲ್ಲಿ ಒಬ್ಬರು. ಅವರ ಈ ಪ್ರಯೋಗದ ದೆಸೆಯಿಂದ ಕಾವ್ಯ ಪಾಠದ ಒಂದು ಒಳ್ಳೆಯ ಅನುಭವ ದೊರೆತಿದೆ.
ಅನಿವಾಸಿಯವರಿಗೆ ನಂನಿ :-)

ಉ: ಹೀಗೆ ಕವಿಕೆಲಸ ಚರ್ಚಿಸಬಹುದಲ್ಲ

anivaasi's picture

ಗುರುಬಾಳಿಗರೆ,
ನಿಮ್ಮ ಅನುವಾದಕ್ಕೆ ಥ್ಯಾಂಕ್ಸ್.
ಹೌದು ನಿಮ್ಮ ಪದ್ಯದ ಭಾವ ಮತ್ತು ಅದು ಮೂಡಿರುವ ರೀತಿ ತುಂಬಾ ಬೇರೆಯೇ. ನನಗೆ ಕುತೂಹಲ ಮೂಡಿದ್ದು ಮೂಲದ ಪ್ಯಾರಾಗಳನ್ನು ನೀವು ಉಳಿಸಿಕೊಂಡಿದ್ದು. ಯಾಕೆ ಹಾಗೆ ಮಾಡಿದಿರಿ ಎಂಬುದು.
"ಕೆಸರಾಡಿ/ರಾಡಿಯೆಬ್ಬಿಸಿ" ಇಷ್ಟವಾಯಿತು.
"ಹುಸಿ ಪೌರುಷ" ತುಸು ಕ್ಲೀಷೆಯಾಗಿ ನಮ್ಮನ್ನಲ್ಲಿ ನಿಲ್ಲಿಸುವುದಿಲ್ಲ... [mud of my hallowದ ಹಾಗೆ! :) ]
"ನನ್ನನ್ನೂ ಹಂದಿಯಾಗಿಸಿ" ... passive ಅನಿಸಿತು. "ನಾನೂ ಹಂದಿ" ಹೆಚ್ಚು ಪರಿಣಾಮ ಬೀರುತ್ತಿತ್ತೇನೋ!
ಪೋಲಿ ಮತ್ತು ಸ್ಖಲನವೂ ಹೆಚ್ಚು ಕೆಲಸ ಮಾಡುವುದಿಲ್ಲ ಅನಿಸಿತು. ಮೂಲ ಪದ್ಯದ ಚಂದದಲ್ಲಿ ಅಂತಹದು ಇಲ್ಲವೇ ಇಲ್ಲವೆನ್ನುವ ಹಾಗಿದೆ.
ಎಲ್ಲಮ್ಮನ ಬಗ್ಗೆಯಾದ್ದರಿಂದ, ಹಂದಿ ಚಂದ್ರನ ಪ್ರತಿಮೆಯನ್ನೂ ಬಿಡಬಹುದಿತ್ತ? ಬೇರೇನು ಬರಬಹುದಿತ್ತು? ಮರಳು, ನೀರು? ಗೊತ್ತಿಲ್ಲ :)

ನನಗೆ ಅನುವಾದಿಸುವಾಗ ಸಾಂಸ್ಕೃತಿಕ ದೂರವನ್ನು ಉಳಿಸಿಕೊಳ್ಳಬೇಕು ಅನಿಸುತ್ತದೆ. ನಿಮಗೆ ಇದನ್ನು ಎಲ್ಲಮ್ಮನಿಗೆ ತರುವುದು ಯಾಕೆ ಮುಖ್ಯವೆನಿಸಿತು?

ಉ: ಹೀಗೆ ಕವಿಕೆಲಸ ಚರ್ಚಿಸಬಹುದಲ್ಲ

gurubaliga's picture

ಎಲ್ಲಮ್ಮ ಇಸ್ಟಾರ್ ನಂತೆ ಜೋಗತಿಯರ ದೇವತೆ ಆಗಿರುವುದು ಎಲ್ಲಮ್ಮನನ್ನು ಆರೋಪಿಸಲು ಕಾರಣ. ಹಂದಿಗಳ ಪ್ರತಿಮೆ ಎಲ್ಲಮ್ಮನಿಗೆ "ಎಮ್ಮೆ - ಕೋಣ"ವಾಗಿ ಬದಲಾಗಿದ್ದಿದ್ದರೆ ಹೆಚ್ಚು ಸಲ್ಲುತ್ತಿತ್ತೇನೋ.

ಇದೊಂದು ಪ್ರಯೋಗ ಮಾತ್ರ. ಪೂರ್ಣ ಕಾವ್ಯ ಕ್ರಿಯೆ ಅಲ್ಲ. ಚರಣಗಳು ಪ್ರಚೋದನೆಗೆ ಮೂಲವಾಗಿರುವುದರಿಂದ ಅದನ್ನು ಉಳಿಸಿಕೊಂಡೆ.

ಮೊದಲ ಪಾರಾದಲ್ಲಿ ನೀವುಗಳು ಬರೆದದ್ದಕ್ಕಿಂತ ಹೆಚ್ಚ್ಚಿನದೇನೋ ಧ್ವನಿಸುತ್ತಿರುವಂತೆ ನನಗನಿಸಿತು. ಒಟ್ಟು ಶಬ್ದಗಳನ್ನು ಒಡೆದು ಮತ್ತೆ ಕಟ್ಟಿ ಹೊಂದಿಸಿ ಬರೆದಾಗ ನನ್ನಲ್ಲಿ ಮೂಡಿದ ಭಾವ ತೀವ್ರವಾಗಿತ್ತು.

ಸೌ ಎನ್ನುವುದಕ್ಕೆ ಸಂವಾದಿ ಶಬ್ದ ನಮ್ಮಲ್ಲಿಲ್ಲ. "ಚೆನ್ನಾಗಿ ಸೊಕ್ಕಿದ ಹೆಣ್ಣು ಹಂದಿ" ಎನ್ನುವುದು ಬಹಳ ಹಿಂದೆ ಓದಿದ ನೆನಪು (ಇದು ನೆನಪಿರಲು ಕಾರಣ ಮದುಮಗಳಿಗೆ ಚಿ. ಸೌ. ಅಂತ ಬರೀತಾರಲ್ಲ :-) ) . ಇದನ್ನು ಒರೆ ಹಚ್ಚಲು ನಾನು ಹೋಗಿಲ್ಲ.

and grunts in my throat
Her great shining shines through me
so the mud of my hollow gleams
and breaks in silver bubbles

ಇಲ್ಲಿ ಕ್ರಿಯೆ-ಪ್ರತಿಕ್ರಿಯೆ ನಡೆಯುತ್ತದೆ ಅಂತ ಕಂಡಿತು. ಹಂದಿ ಕ್ರಿಯೆ - ನನ್ನದು ಪ್ರತಿಕ್ರಿಯೆ. ಅವಳದು great shining ಆದರೆ ನನ್ನದು hollow gleams. ನನ್ನೊಳಗೆ ಅವಳ ಗ್ರೇಟ್ ಶೈನಿಂಗ್ shines through ಆಗುವಾಗ ನನ್ನ ಕೆಸರು ಒಡೆದು ಬೆಳ್ಳಿ ಗುಳ್ಳೆಗಳು ಏಳುತ್ತವೆ. ಇದರ ಭಾವವನ್ನಷ್ಟೇ ಗ್ರಹಿಸಿ ಮತ್ತೆ ಕವನ ಕಟ್ಟಿದರೆ... ಅವಳು,

ನನ್ನೊಳಗೆ ಇಳಿದು ಕೆಸರಾಡಿ
ರಾಡಿ ಎಬ್ಬಿಸುವಾಗ
ನನ್ನ ಹುಸಿ ಪೌರುಷದ
ಸ್ಖಲನ ತಡೆಯಲಾರದೆ
ಒದರುತ್ತೇನೆ

ಒಡೆಯುವುದು ಕೆಸರಲ್ಲ ನನ್ನ ಅಹಂಕಾರ. ಗಂಡು ದಯನೀಯವಾಗಿ ಸೋಲುವುದು ವಿಜ್ರಂಭಿಸುವ ಹೆಣ್ಣಿನೆದುರು. ಇದು ಹಾಸಿಗೆಗೆ ಸೀಮಿತವಲ್ಲ. ಆ ಸ್ಖಲನ, ಸೋಲು ತ್ವರಿತವೆ ಆಗಿರುತ್ತದೆ. ಅದನ್ನು ತಡೆಯುವುದು ಕಷ್ಟವೇ. ಅದಕ್ಕಾಗಿ ಒದರು, ಅರಚು, ಗುಟುರು ಎಲ್ಲವೂ.

ಇಲ್ಲಿ ಬಹಳ ತರ್ಕ ನಡೆಯಲಿಲ್ಲ. ಒಟ್ಟು ಭಾವ ಸ್ಫುರಣವಾಗಿ ಕೂಡಲೇ ಹೊರಹೊಮ್ಮಿದ ಕವನ.

ಇನ್ನು "ಪೋಲಿ" ಎನ್ನುವುದು ಬ್ಲಾಕ್ ಗೆ ಸಂವಾದಿಯಾಗಿ ನಾನು ಬಳಸಿದ್ದು. ಬ್ಲಾಕ್ ಆಫ್ ಡಿಸಾಯರ್, ಬ್ಲಾಕ್ ಮ್ಯಾಜಿಕ್ ನ ಬ್ಲಾಕ್ ಗಿಂತ ಹೆಚ್ಚು ಸೆನ್ಸುಅಸ್. ಅದು ಕಪ್ಪಲ್ಲ, ಕೆಟ್ಟದ್ದಲ್ಲ, ಎವಿಲ್ ಅಲ್ಲ, ಸಾಮಾಜಿಕವಾಗಿ ಟ್ಯಾಬೂ ಆಗಿದ್ದುಕೊಂಡು ಗುಟ್ಟಾಗಿ ಖುಷಿ ಕೊಡುವ ವಿಚಾರ. "ಛೀ ಪೋಲಿ" ಎಂದರೆ ಬೈಗುಳಲ್ಲ ಮೆಚ್ಚುಗೆ. ಕಾಳ, ಕತ್ತಲ ಎಲ್ಲ ಬರೆದಾಗ ಹೆಚ್ಚು ಕರಾಳ ಭಾವ ನೀಡುತ್ತದೆ.
ಕೊಲೆಗಡುಕನ ಡಿಸಾಯರ್ ಗೆ ಕಾಳ ಇಲ್ಲವೇ ಕರಾಳ ಬರೆದರೆ ಸಲ್ಲುತ್ತದೇನೋ. ಹೆಣ್ಣು ಕಾಳಿಯಾದಾಗ ಅವಳಲ್ಲಿ ಮಾಧುರ್ಯವಿಲ್ಲ. ಆ ಸಂಯೋಗದ ಉತ್ಕಟತೆ ಸಾಧ್ಯವಿಲ್ಲ.

ಆದಾಗ್ಯೂ...
ಡೆನಿಸ್ ಬರೆದ ಕವನ ನಮ್ಮೆಲ್ಲರ ಅನುವಾದಕ್ಕಿಂತ ಮೀರಿದ್ದನ್ನು ಹೇಳಲು ಹೊರಟಿದೆ ಎನ್ನುವುದು ದಟ್ಟವಾಗಿ ಕಾಡುತ್ತದೆ.

ನನಗೆ ಸಾಂಸ್ಕೃತಿಕವಾಗಿ ಮಿಳಿತಗೊನ್ಡರಷ್ಟೆ ಒಂದು ಅನುವಾದ ಸ್ಥಳೀಯವಾಗಿ ಸಲ್ಲಲು ಸಾಧ್ಯ ಎಂದು ಅನಿಸುತ್ತದೆ.

ಮತ್ತೊಮ್ಮೆ ಇಷ್ಟು ಚರ್ಚೆಗೆ ವೇದಿಕೆ ಒದಗಿಸಿದ್ದಕ್ಕೆ ತುಂಬ ಥ್ಯಾಂಕ್ಸ್. :-)

ಉ: ಹೀಗೆ ಕವಿಕೆಲಸ ಚರ್ಚಿಸಬಹುದಲ್ಲ

anivaasi's picture

ಗುರುಬಾಳಿಗರೆ,
ನಿಮ್ಮ ವಿವರಣೆ ಇಷ್ಟವಾಯಿತು.
"ಹುಸಿ ಪೌರುಷ" ಕಟ್ಟ ಹೊರಟ ರೂಪಕದಲ್ಲಿ ಕೊಂಚ ನೇರವಾಯಿತು ಅಂತ ನನ್ನ ಅನಿಸಿಕೆ.
ಇನ್ನು ಬ್ಲಾಕ್ ಸೆನ್ಸುಅಸ್ ಆಗಿ ಬಳಿಸಲಾಗಿದೆ ಅನಿಸಲಿಲ್ಲ. ಇಷ್ಟಾರ್‍‌ನಲ್ಲಿ ಕಾಳಿಯಂತಹ ಗುಣವೂ ಇದೆ ಅನಿಸಿತು (ಅವಳನ್ನು ಕೂಡಿದ ದೇವರು ನಾಶವಾಗುವ ಕರಾಳತೆ) - ಹಾಗಾಗಿಯೇ "ಬಯಕೆ" ತೆಳುವಾಯಿತು ಅಂತ ನನ್ನ ಅನಿಸಿಕೆ.
ಮತ್ತು "ಸ್ಥಳೀಯವಾಗಿ ಸಲ್ಲು"ವದರತ್ತ ಕಾವ್ಯದ ಗುರಿಯಿರಬೇಕೆ ಎಂದು ಯೋಚಿಸುತ್ತಿದ್ದೇನೆ. ಇದು ಕಾವ್ಯದ ಚರ್ಚೆಯಲ್ಲವಾದ್ದರಿಂದ ಇಲ್ಲಿ ಅಪ್ರಸ್ತುತ ಎಂದು ನೆನಪಾಯಿತು! :)

ನನಗೆ ನೀವು ಥ್ಯಾಂಕ್ಸ್ ಹೇಳುವ ಅಗತ್ಯವಿಲ್ಲ. ನಿಮ್ಮ, ಅನಿಲರ ಹಾಗು ರಾಮಸ್ವಾಮಿಯವರ ಕೊಡುಗೆಯಿಲ್ಲದೆ ಈ ಪ್ರಯೋಗ ಮೈಗೂಡುತ್ತಲೇ ಇರಲಿಲ್ಲ.
ಅದಕ್ಕೆ ಎಲ್ಲರಿಗೂ ಥ್ಯಾಂಕ್ಸ್ ನಾನು ಹೇಳಬೇಕು.

ಉ: ಹೀಗೆ ಕವಿಕೆಲಸ ಚರ್ಚಿಸಬಹುದಲ್ಲ

gurubaliga's picture

>> ಇದು ಕಾವ್ಯದ ಚರ್ಚೆಯಲ್ಲವಾದ್ದರಿಂದ ಇಲ್ಲಿ ಅಪ್ರಸ್ತುತ ಎಂದು ನೆನಪಾಯಿತು!

ಇದು ನಮ್ಮ ಹೊಸ ಕಲಿಕೆಗೆ ನಾಂದಿ ಹಾಡಲಿ. :-) ಇಂತಹ ಪ್ರಯೋಗಗಳು ನಡೆಯುತ್ತಿರಲಿ ಎಂದು ಆಶಿಸುತ್ತೇನೆ.

ಉ: ಹೀಗೆ ಕವಿಕೆಲಸ ಚರ್ಚಿಸಬಹುದಲ್ಲ

aniljoshi's picture

ಗುರು ಬಾಳಿಗರೇ,

ಬಹಳ ಇಷ್ಟವಾಯಿತು ನಿಮ್ಮ ಅನುವಾದ ಹಾಗೂ ಅದನ್ನು ವಿವರಿಸಿದ ರೀತಿ. ಭಾವಗಳಿಗೆ ಶಬ್ದದ ಮೂರ್ತತೆಯನ್ನು ಕೊಡುವದು ನಿಮಗೆ ಒಲಿದಂತೆ ಕಾಣುತ್ತದೆ :)

-
ಅನಿಲ

ಉ: ಹೀಗೆ ಕವಿಕೆಲಸ ಚರ್ಚಿಸಬಹುದಲ್ಲ

gurubaliga's picture

ಥ್ಯಾಂಕ್ಸ್ ಅನಿಲ್.
ನಿಮ್ಮ ಕವನಗಳು ಧ್ವನಿಸುವ ರಿದಂ ನನಗೆ ಇಷ್ಟ. :-)

ಉ: ಹೀಗೆ ಕವಿಕೆಲಸ ಚರ್ಚಿಸಬಹುದಲ್ಲ

ಮಾಯ್ಸ೨'s picture

"ಪೋಲಿ ಹುರುಪಿನುಯ್ಯಾಲೆಯಲ್ಲಿ
ಸ್ಖಲಿಸುತ್ತಾ, ಓಲಾಡುತ್ತಾ ಅರಚುತ್ತೇವೆ"

ಉಧೋ ಉಧೋ!! ಸಕ್ಕತ್!

ಉ: ಹೀಗೆ ಕವಿಕೆಲಸ ಚರ್ಚಿಸಬಹುದಲ್ಲ

asuhegde's picture

ನಿಮ್ಮೆಲ್ಲರ ಭಾವಾನುವಾದಗಳನ್ನು ಓದಿ ಮೆಚ್ಚಿಕೊಂಡ ನನ್ನ ಮನದಲ್ಲಿ ಕೊನೆಗೆ ಉಳಿದ ಭಾವ ಮತ್ತು ಅದರ ಅನುವಾದ ಹೀಗಿದೆ:
"ಛೆ.. ನನಗೂ ಈ ಆಂಗ್ಲ ಭಾಷೆಯನ್ನು ಅರ್ಥೈಸಿಕೊಂಬುದು ಸಾಧ್ಯವಾಗಿದ್ದಿದ್ದರೆ...?"

ಉ: ಹೀಗೆ ಕವಿಕೆಲಸ ಚರ್ಚಿಸಬಹುದಲ್ಲ

asuhegde's picture

ಇದು ತರ್ಜುಮೆಯಲ್ಲ, ಭಾವಾನುವಾದದತ್ತ ಒಂದು ಪ್ರಯತ್ನ ಅಷ್ಟೆ:

ಚಂದಿರೆ ಹಂದಿಯಂತಾಗಿ
ನನ್ನ ಗಂಟಲೊಳಗಿಂದ
ಗುರುಗುಟ್ಟುತ್ತಾಳೆ
ಆಕೆಯ ಆ ಅದ್ಭುತ ಕಾಂತಿ
ನನ್ನ ಖಾಲಿ ಅಂತರಂಗದ
ಕಲ್ಮಷಗಳನ್ನೆಲ್ಲಾ ಬೆಳಗಿಸಿ
ಬೆಳ್ಳಿ ಚುಕ್ಕೆಗಳಂತೆ ಹೊರ
ಹೊಮ್ಮುವಂತೆ ಮಾಡುತ್ತದೆ.

ಆಕೆ ಹೆಣ್ಣು ಹಂದಿಯಾದರೆ
ನಾನು ಗಂಡು ಹಂದಿಯಷ್ಟೇ
ಅಲ್ಲ, ಗಂಡು ಕವಿಯೂ ಕೂಡ

ನನ್ನ ಮುಗಿಸಿಬಿಡುವಿಚ್ಛೆಯಲಿ
ಆಕೆ ತನ್ನ ಬೆಳ್ದುಟಿಗಳ ಪೂರ್ತಿ
ತೆರೆಯುವ ಮೊದಲೇ ನಾ
ಆ ತುಟಿಗಳ ಕಚ್ಚಿಬಿಡುತ್ತೇನೆ
ಆಗ ಆಕೆಯೊಳಗೆ ಎಲ್ಲೆಲ್ಲೂ
ಸಂತಸದ ಲಘು ಕಂಪನ
ಕಾಮನೆಯ ಅಂಧಕಾರದಲಿ
ನಾವು ಜೊತೆ ಜೊತೆಗೆ
ಕಂಪಿಸುತ್ತೇವೆ, ಗುರುಗುಟ್ಟುತ್ತೇವೆ,
ಗುರುಗುಟ್ಟುತ್ತಾ ಗುರುಗುಟ್ಟುತ್ತಾ
ನಾವು ನಾವೇ ಮಿಂಚತೊಡಗುತ್ತೇವೆ.

ಎಲ್ಲಿಯ ಚಂದಿರೆ?
ಎಲ್ಲಿಯ ಹಂದಿ?
ಎಲ್ಲಿ ತನ್ನ ಕಲ್ಪನೆಯಲಿ
ಮೈ ಮರೆವ ಈ ಕವಿ?
***********

ಉ: ಹೀಗೆ ಕವಿಕೆಲಸ ಚರ್ಚಿಸಬಹುದಲ್ಲ

anivaasi's picture

ಅಸು ಹೆಗ್ಡೆಯವರೆ,
ಥ್ಯಾಂಕ್ಸ್.
ಎಲ್ಲವನ್ನೂ ಕಲ್ಪನೆಯಾಗಿಸಿದ್ದೇಕೆ ಎಂದು ಯೋಚಿಸುವಂತೆ ಮಾಡಿತು. ಪಲಾಯನವೇಕೆ ಅನಿಸಿತು.
"ಹಂದಿಯಂತಾಗಿ" "ಹಂದಿಯಾದರೆ" ಇವು ತುಸು ದುರ್ಬಲವಾಯಿತೇನೋ ಅನಿಸಿತು. ಆದರೆ "ನಾನು ಗಂಡು ಹಂದಿಯಷ್ಟೇ/ಅಲ್ಲ, ಗಂಡು ಕವಿಯೂ ಕೂಡ" ಸಾಲು ಒಡೆದದ್ದು ಚೆನ್ನಾಗಿದೆ.
ಇಡೀ ಪದ್ಯ ಮತ್ತಷ್ಟು ಚುರುಕಾಗಬಹುದಿತ್ತ ಎಂದು ನೋಡುತ್ತಿದ್ದೇನೆ.

ಉ: ಹೀಗೆ ಕವಿಕೆಲಸ ಚರ್ಚಿಸಬಹುದಲ್ಲ

asuhegde's picture

ವಾಸ್ತವವಾಗಿ ಇದು ಕವಿಯ ಒಂದು ಕಲ್ಪನೆ ಎನ್ನುವುದು ನಿಜ ತಾನೆ?
ಚಂದ್ರ ಚಂದಿರೆಯಾಗುವುದು, ಚಂದಿರೆ ಹಂದಿಯಾಗುವುದು.
ಹಂದಿಯಾಗಿ ಗುರುಗುಟ್ಟುವುದು, ಗುರುಗುಟ್ಟಿದಾಗ ಬೆಳಗಾಗುವುದು.
ನಾನು ಹಂದಿಯೆನ್ನುವುದು ನನ್ನ ಕಲ್ಪನೆ.
ಯಾಕೆಂದರೆ ನಾನು ಕವಿ. ಕವಿಯಾದ್ದರಿಂದ ನನಗೆ ಆ ಸ್ವಾತಂತ್ರ್ಯ ಇದೆ.

ಎಲ್ಲಕ್ಕಿಂತಲೂ ಮಿಗಿಲಾಗಿ, ಅನಿವಾಸಿಯವರೇ,
ನಿಮ್ಮ ನಿಮ್ಮ ಅನಿಸಿಕೆಗಳು, ನಮ್ಮ ನಮ್ಮ ಅನಿಸಿಕೆಗಳು, ಎಲ್ಲವೂ ಸಂಪದಿಗರ ವೈಯಕ್ತಿಕ ಅನಿಸಿಕೆಗಳು.
ನೀನು ಸರಿ, ನಾನು ತಪ್ಪು, ನಾನು ಸರಿ ನೀನು ತಪ್ಪು ಎಂಬ ವಾದಕ್ಕೆ ನಾನು ನನ್ನನ್ನು ಒಳಪಡಿಸಿಕೊಳ್ಳುವುದೇ ಇಲ್ಲ.
ಪಲಾಯನವಾದ ಎನ್ನಲು ಇಲ್ಲಿ ನನ್ನ ಕಡೆಯಿಂದ ವಾದವೇ ಇಲ್ಲ ಸ್ವಾಮೀ.
ಅನಿಸಿಕೆಗಳ ಅಭಿವ್ಯಕ್ತಿ ಅಷ್ಟೆ.

ಉ: ಹೀಗೆ ಕವಿಕೆಲಸ ಚರ್ಚಿಸಬಹುದಲ್ಲ

anivaasi's picture

ಆಸು ಹೆಗ್ಡೆಯವರೆ,
ನಿಮ್ಮ/ಕವಿಯ ಸ್ವಾತಂತ್ಯ್ರವನ್ನು ನಾನು ಪ್ರಶ್ನಿಸಿಲ್ಲ! :)
ವಾದವೂ ಇಲ್ಲ; ಒಂದು ಸಂವಾದವಷ್ಟೇ; ಅದರಲ್ಲಿ ನನ್ನ ಪ್ರತಿಕ್ರಿಯೆ ಕೊಟ್ಟೆ ಅಷ್ಟೆ. ಬೇಸರಿಸಬೇಡಿ.
ನಾನು ಹೇಳಿದ್ದು ಸರಿಯಿಲ್ಲ ಎಂದು ನಿಮಗೆ ಅನಿಸಿದರೆ, ಅದೂ ಓಕೆ, ತೊಂದರೆಯಿಲ್ಲ.

ಉ: ಹೀಗೆ ಕವಿಕೆಲಸ ಚರ್ಚಿಸಬಹುದಲ್ಲ

asuhegde's picture

ನೀವಂದಂತೆ ನನ್ನದೂ ಮುಕ್ತ ಪ್ರತಿಕ್ರಿಯೆ ಅಷ್ಟೆ.
:-)

ಉ: ಹೀಗೆ ಕವಿಕೆಲಸ ಚರ್ಚಿಸಬಹುದಲ್ಲ

Khavi's picture

ಅನಿವಾಸಿಗಳೆ,
ನಿಮ್ಮ ಈ ಬ್ಲಾಗ್ ಒಂದು ಕಾವ್ಯಕ್ಕೆ ಹೊಸ ಹೊಸ ಆಯಾಮಗಳು ಹೇಗೆ ಚಿಗುರಡೆಯುತ್ತವೆ ಅನ್ನುವುದನ್ನು ತೋರಿಸುತ್ತದೆ ನೋಡಿ.
ಅನಿಲ್ ಜೋಶಿ, ಗುರುಬಾಳಿಗ, ಆಸು ಹೆಗಡೆ ಇವರ ಪ್ರಯತ್ನಗಳಲ್ಲಿ ಮೂಡಿದ ಹೊಸ ಪ್ರಯೋಗಗಳು ಒಂದು ಕಾವ್ಯದ ಆಚೀಚೆ ಬೇರೆ ಬೇರೆ ದಾರಿಗಳು ಹೇಗೆ
ಕವಲೊಡೆದು ನೂತನ ಪರಿಕಲ್ಪನೆಗಳಿಗೆ, ಹೊಸ ಸಾಧ್ಯತೆಗಳಿಗೆ ನಾಂದಿಯಾಗುತ್ತವೆ ಅನ್ನುವುದನ್ನು ಕಾಣಬಹುದು.
ಇಲ್ಲಿಯ ವಿಶ್ಲೇಷಣಗಳು ಕೂಡ ವಿಭಿನ್ನ ಯೋಚನಾ ಲಹರಿಗೆ ನಮ್ಮನ್ನು ಕೊಂಡೊಯ್ಯುತ್ತವೆ..
ಇಂತಹ ಸಾಹಿತ್ಯ ಸಂವಾದಗಳು ಮತ್ತಷ್ಟು ಮೂಡಿಬರಲಿ ಎಂದು ಆಶಿಸುವೆ.