ಅನಿವಾಸಿ
*~*~*~*
ಹಳ್ಳವಾಗದ ಹನಿ
ಹನಿ ಹನಿಗೂಡಿದರೆ ಹಳ್ಳವಾಗುತ್ತದೆ ಎಂದು ಯಾರು ಹೇಳಿದ್ದು? ಹೇಗೆ ಹಳ್ಳವಾಗುತ್ತದೆ ಎಂದು ಕೇಳದೆ ಒಪ್ಪಿಬಿಟ್ಟೆನಲ್ಲ! ಹಳ್ಳವಾದರೂ ಅದು ಎಂಥ ಹಳ್ಳ; ನನಗೆ ಬೇಕಾದ ರೂಪ ಇದೆಯ; ಬೇಕಾದಷ್ಟು ದೊಡ್ಡದಿದೆಯ; ಅಂದಕೊಂಡಷ್ಟೇ ಚಿಕ್ಕದಾಗಿ ಉಳಿದಿದೆಯ; ಹಳ್ಳವಾಗಲು ಹತ್ತು ಹಲವು ಬೇರೆ ಬೇರೆ ಅನುಕೂಲಗಳು ಬೇಕು ಅನ್ನೋದು ಹೇಗೆ ನನಗೆ ತಿಳಿಯದೇ ಹೋಯಿತು ಅಂತ ಬೇಸರವಾಗತ್ತೆ.
ಅದೆಲ್ಲಾ ಪಾಂಡಿತ್ಯ ಬದಿಗಿಡಿ. ಪಂಡಿತರನ್ನು ಬಯ್ಯೋ ಪಂಡಿತ ಆಗಬಾರದು. ಆದರೂ ನೋಡಿ- ಆಶ್ಚರ್ಯವಾಗತ್ತೆ. ಹನಿಗಳು ಕೂಡುತ್ತಲೇ ಇದ್ದರೂ ಹಳ್ಳವೇ ಆಗುತ್ತಿಲ್ಲವಲ್ಲ. ಅಂದರೆ ಹನಿಗಳೆಲ್ಲ ಎಲ್ಲೋ ಕಳೆದು ಹೋಗುತ್ತಿದೆ. ಯಾರ ಕೈಗೂ ಸಿಕ್ಕದ ಹನಿಗಳು ಕೂಡದಿದ್ದರೆ, ಹಳ್ಳವಾಗದಿದ್ದರೆ ಮುಂದೇನು ಗತಿಯೋ. ಹಳ್ಳವಾಗೊಡದ ಕೈಗಳು ಹನಿಗಳನ್ನು ಎಲ್ಲಿ ತಡೆಯುತ್ತಿದೆ, ಹೇಗೆ ತಡೆಯುತ್ತಿದೆ? ಕಾಣದ ಕೈ ಅನ್ನೋದೂ ಸೋಗಲಾಡಿತನ ಅನಿಸುತ್ತಾ ತವಕವಾಗುತ್ತದೆ, ದಿಕ್ಕುಗೆಡುತ್ತದೆ.
ಹಳ್ಳವಾಗುವುದಕ್ಕೆ ಹನಿ-ಹನಿಗೂಡಿದರೆ ಸಾಕೆ ಎಂದು ಯೋಚಿಸ್ತಾ ಎದುರಿಗೆ ಅಡ್ಡಾದಿಡ್ಡಿ ಗೀರು ಗೀರಾಗಿರುವ ನೆಲದ ಮೇಲೆ ಬೀಳುತ್ತಿರುವ ಮಳೆ ಹನಿಗಳನ್ನು ನೋಡುತ್ತಾ ಹೆದರುತೀನಿ.

- anivaasi ರವರ ಬ್ಲಾಗ್
- Login or register to post comments
- 341 hits
- Email this blog





RSS:
ಪ್ರತಿಕ್ರಿಯೆಗಳು
ಉ: ಹಳ್ಳವಾಗದ ಹನಿ
ಅನಿವಾಸಿಗಳೆ, ನಾನು ಈಗ್ಗೆ (೮-೯ ತಿಂಗಳ ಹಿಂದೆ ಇರಬಹುದು) ಹೆಲ್ಸ್ ಬೆಲ್ಸ್ ಅಂಡ್ ಫರ್ಟೀವ್ ಫಾಲೀಸ್ ಎಂಬ ಒಂದು ಸ್ವಿಸ್ ರಂಗಪ್ರಯೋಗವನ್ನು ನೋಡಿದ್ದೆ. ಅದರಲ್ಲಿ ಮಾತುಗಳಿರಲಿಲ್ಲ, ಹಾಗಂತ ಅದೊಂದು ನೃತ್ಯರೂಪಕವೂ ಅಲ್ಲ. ಆದರೆ ಅದೊಂದು ವಿಶಿಷ್ಟವಾದ ಪ್ರಯೋಗವಾಗಿತ್ತು. ಇಂತಹ ಕೆಲವು ಪ್ರಯೋಗಳ ವೈಶಿಷ್ಟ್ಯವೆಂದರೆ ಕತೆ ಒಂದೇ ನೆಲೆಯಲ್ಲಿ ಎಲ್ಲರನ್ನೂ ತಲುಪುವುದಿಲ್ಲ. ಕತೆಯ ಹಂದರ ನೋಡುಗರ ಮನಸ್ಥಿತಿಯನ್ನು ಮೇಲೆ ನಿಂತಿರುತ್ತದೆ. ಹಾಗೆಯೇ, ನಿಮ್ಮ ಬರಹಗಳು ಕೂಡ ನಿಗೂಢವೂ ಆದರೆ ತುಂಬಾ ಗಂಭೀರವೂ ಆಗಿರುತ್ತದೆ. "ಹನಿ ಹನಿಗೂಡಿದರೆ ಹಳ್ಳ"ದ ಒಳಾರ್ಥ ಏನಿರಬಹುದು ಎಂದು ಒಂದು ಕ್ಷಣ ಯೋಚಿಸಿದಾಗ ನಿಜಕ್ಕೂ ತಬ್ಬಿಬ್ಬಾದೆ. ಆದರೂ ಎಷ್ಟಾದರೂ ನಾನು ಆಶಾವಾದಿಯೇ. ಹೇಗೆಂದುಕೊಂಡು ಹಾಗೆ (ಯದ್ಭಾವಂ ತದ್ಭವತಿ)
ಕುಚೇಷ್ಟೆಗೆ

ಈ ಬರಹವನ್ನು ಓದಿದಾಗ, "ಕನ್ನಡದ ಕಾಮಿಡಿ ಕಂದ", ಮುಂಗಾರು ಮಳೆಯ ಪ್ರೀತಂ ನೆನಪಿಗೆ ಬಂದ. ಪ್ರೀತಂ ನಂದಿನಿಗೆ ಹೀಗೆ ಹೇಳುತ್ತಾನೆ. "ಬಡ್ಡಿ ಮಗಂದು ಹನಿ ಹನಿ ಗೂಡಿದರೆ ಹಳ್ಳ ಆಗ್ತಾ ಇಲ್ಲ. ಹನಿಗಳು ಎಲ್ಲೋ ಕಳೆದುಹೋಗ್ತಾ ಇದೆ" ಅಲ್ವಾ ನಂದಿನಿ. ನಂದಿನಿ ಮಿಕ್ಮಿಕ ಮಕ್ಮಕ ನೋಡುತ್ತಾಳೆ. ಆಗ ಹೇಳುತ್ತಾನೆ, ಅರ್ಥ ಆಗ್ಲಿಲ್ಲ ಅಲ್ಲಾ.ಆಆಆ...ಆಗೋದು ಬೇಡ ಬಿಡಿ
ಉ: ಹಳ್ಳವಾಗದ ಹನಿ
ಸುನೀಲರೆ,
ನಿಮ್ಮ ಒಳ್ಳೆ ಮಾತುಗಳಿಗೆ ವಂದನೆಗಳು.
ನೀವು ಹೇಳಿದ ರಂಗಪ್ರಯೋಗ ಕುತೂಹಲಕಾರಿಯಾದ್ದು. ಬೆಂಗಳೂರಿನಲ್ಲಿ ತುಂಬಾ ಹಿಂದೊಮ್ಮೆ ನಾನೊಂದು ಅಂಥದೇ ಫ್ರೆಂಚ್ ಪ್ರಯೋಗ ನೋಡಿದ್ದೆ. ಹೆಸರು ನೆನಪಿಲ್ಲ. ಒಂದು ಮರಳುಗಾಡನ್ನು ದಾಟುವ ಪ್ರತಿಮೆಗಳು. ಅದರಲ್ಲಿ ಕತೆಯೆಂಬುದೂ ಇರಲಿಲ್ಲ. ಪ್ರತಿಮೆಗಳ ಸರಪಳಿ ಅನ್ನಬಹುದು. ಅಂಥ ಪ್ರಯೋಗಗಳಿಗೆ ಸೋಲು-ಗೆಲುವು ಎಂಬುದು ಇರುವುದಿಲ್ಲ!
ನಿಮಗೆ ನಿಗೂಢವೆನಿಸುವ ನನ್ನ ಬರಹಗಳು ಒಂದು ನಿರ್ದಿಷ್ಟ ಪ್ರತಿಕ್ರಿಯೆಯಾಗಿ ಶುರುವಾಗಿ ಪ್ರಶ್ನಿಸುತ್ತಾ ಹೋಗಿ ಈ ರೂಪ ತಳೆಯುವುದು ನನಗೂ ಸೋಜಿಗವೆ. ಅದರಲ್ಲೂ ಬೇರೆಯವರನ್ನು ಕೇಳುವ ಪ್ರಶ್ನೆಗಿಂತ ನನಗೆ ನಾನೇ ಕೇಳಿಕೊಂಡ ಪ್ರಶ್ನೆಗಳು ಹೆಚ್ಚು ಪ್ರಾಮಾಣಿಕ ಪ್ರಶ್ನೆಗಳಾಗಿರುತ್ತವೆ. ಓದಿದವರಲ್ಲೂ ಕೆಲವು ಪ್ರಶ್ನೆಗಳನ್ನು ಹುಟ್ಟಿಸಿದರೆ ಖುಷಿಗೊಳ್ಳುತ್ತೇನೆ.
ಅಂದ ಹಾಗೆ, ಮುಂಗಾರು ಮಳೆ ನಾನು ನೋಡಿಲ್ಲ. ಸಿಡ್ನಿಯಲ್ಲಿ ಜೂನ್ ತಿಂಗಳಲ್ಲಿ ತೋರಿಸುತ್ತಾರಂತೆ. ಆಗುತ್ತದಾ ನೋಡಬೇಕು. ಅದರಲ್ಲೂ ಇಂಥದೇ ಮಾತಿರುವುದು ಕೇಳಿ ಅರೆ ಅನಿಸಿತು!