ಅನಿವಾಸಿ
*~*~*~*
ಒಂದು ಕೆಟ್ಟ ದಾಸರ ಪದ
ಕೇಳೋ ಸಚ್ಚರಿತ, ಮನುಜಾ
ಧೃಡ ಭಕ್ತಿಯಿಂದಲಿ ಹರಿಯ ನೆನೆದರೆ ಪಡೆವ ಮೋಕ್ಷ ಸಾಕ್ಷಿ || ಮನುಜಾ
ಧೃಡ ಭಕ್ತಿಯಿಲ್ಲದೆ ಹರಿಯ ನೆನೆದರೆ ಪಡುವ ನರಕವೇ ಸಾಕ್ಷಿ || ಮನುಜಾ ಕೇಳೋ ಸಚ್ಚರಿತ
ಕನ್ಯಾದಾನವ ಮಾಡಿದವರಿಗೆ ಹೆಣ್ಣಿನ ಭೋಗವೇ ಸಾಕ್ಷಿ
ಕನ್ಯಾದಾನವ ಮಾಡದವರಿಗೆ ಹೆಣ್ಣಿನ ಕಾಟವೇ ಸಾಕ್ಷಿ || ಕೇಳೋ
ಪಂಕ್ತಿ ವಂಚನೆ ಮಾಡಿದವರಿಗೆ ಜನ್ಮರೋಗವೇ ಸಾಕ್ಷಿ
ಪಂಕ್ತಿ ವಂಚನೆ ಮಾಡದವರಿಗೆ ಪುತ್ರ ಭಾಗ್ಯವೇ ಸಾಕ್ಷಿ || ಕೇಳೋ
ಅನ್ನದಾನವ ಮಾಡಿದವರಿಗೆ ಉಣ್ಣುವ ಊಟವೇ ಸಾಕ್ಷಿ
ಅನ್ನದಾನವ ಮಾಡದವರಿಗೆ ಅನ್ನಕಳವುದೇ ಸಾಕ್ಷಿ || ಕೇಳೋ
ಆಡಿದ ಮಾತಿಗೆ ಹರಿಯೆ ಸಾಕ್ಷಿ ತೋಡಿದ ಬಾವಿಗೆ ಜಲವೇ ಸಾಕ್ಷಿ
ಮಾಡಿದ ಪಾಪಕೆ ಮನವೇ ಸಾಕ್ಷಿ ಸಾಟಿಗೆ ಪುರಂದರ ವಿಠಲನೇ ಸಾಕ್ಷಿ
ತಮಗೆ ಸರಿಕಾಣದ ಹಲವು ಲೋಕ ರೂಢಿಗಳನ್ನು ಟೀಕಿಸುವ ಪದಗಳನ್ನು ಪುರಂದರದಾಸರು ಬರೆದಿದ್ದಾರೆ. ಅಂತಹವುಗಳನ್ನು ಉದ್ಧರಿಸಿ ನಾವು ಅವರ ಮಹಿಮೆಯನ್ನು ಕೊಂಡಾಡುತ್ತೇವೆ. ಹಾಗೆಯೇ ಕೆಲವು ಕೆಟ್ಟ ಪದಗಳೂ ಇವೆ. ಅವನ್ನು ಗುರುತಿಸಿ ಹಾಗೆ ಯೋಚಿಸುವುದು ಸರಿಯಲ್ಲ ಎಂದು ಎಚ್ಚರಿಸಿಕೊಳ್ಳುವುದೂ ಮುಖ್ಯವೇ. ಅಂತಹ ಒಂದು ಪದ ಮೊನ್ನೆ ಕೇಳಿದೆ.
ಮೋಕ್ಷ/ಸ್ವರ್ಗ-ನರಕದ ಪ್ರತಿಮೆಗಳನ್ನು ಪುರಂದರ ದಾಸರು ಸಿಕ್ಕಾಪಟ್ಟೆ ಬಳಸುತ್ತಾರೆ. ದೇವರನ್ನು ವಿವರಿಸುವ/ಹೊಗಳುವ ಹಲವು ಸಾಲುಗಳನ್ನು ಬರೆದಿದ್ದಾರೆ. ಆದರೆ ಈ ಮೇಲಿನ ಪದ್ಯದಲ್ಲಿ ಹೆಣ್ಣಿನ ಬಗ್ಗೆ, ಜಾತಿಯ ಬಗ್ಗೆ ಅವರು ತಳೆವ ನಿಲುವು ಇಂದಿಗಲ್ಲ, ಅಂದಿಗಾದರೂ ಒಪ್ಪುತ್ತದೆಯೇ ಎಂಬ ಪ್ರಶ್ನೆ ಏಳುತ್ತದೆ.
ಇಲ್ಲಿ ಕನ್ಯಾದಾನದ ಬಗ್ಗೆ ಹೇಳುವ ಮೊದಲ ಸಾಲು ಒಳ್ಳೆಯ ಬಗೆಯಲ್ಲಿ ಹೇಗೆ ಅರ್ಥೈಸಿಕೊಳ್ಳುವುದು ಎಂದು ಯೋಚಿಸಿದೆ. ಎರಡನೆಯ ಸಾಲಂತೂ ಹೆಣ್ಣನ್ನು ನೋಡುವ ದೃಷ್ಟಿ ಆರೋಗ್ಯಕರವೇ ಅಲ್ಲ ಅನಿಸಿತು. ಇನ್ನು ಪಂಕ್ತಿ ವಂಚನೆಯ ಬಗ್ಗೆ ಯೋಚಿಸಿ ನೋಡಿ. ಪಂಕ್ತಿ ವಂಚನೆ ಅಂದರೇನು? ಯಾರು ಯಾರಿಗೆ ವಂಚನೆ ಮಾಡುತ್ತಿರುವುದು? ಅಂತಹವರಿಗೆ ಕಾದಿರುವುದು ಜನ್ಮರೋಗ(?) ಬೇರೆ! ಇನ್ನು ಪಂಕ್ತಿ ವಂಚನೆ ಮಾಡದವರಿಗೆ ಗಂಡು ಮಗು ಹುಟ್ಟುತದಂತೆ! ಅನ್ನದಾನದ ವಿಜೃಂಭಣೆ ಇರುವುದರಲ್ಲೇ ಕೊಂಚ ಸರಿಯಪ್ಪ ಅನ್ನಿಸುವಂತಹ ಸಾಲು.
ಇಂತಹ ಹಾಡುಗಳನ್ನು ಇಂದಿಗೂ ಹಾಡುವುದು ಕೇಳಿದಾಗ ಇವು ನಮಗೆ ಏನು ಹೇಳುತ್ತದೆ? ಮಕ್ಕಳು ಇದನ್ನು ಕೇಳಿದರೆ ಹೇಗೆ ಅರ್ಥೈಸಿಕೊಳ್ಳುತ್ತಾರೆ? ಇಂತಹ ಪದಗಳು ರೂಪಿಸುವ ಮನಸ್ಸು ಎಂತಹದಿರುತ್ತದೆ? ಸಣ್ಣವರಿಗೆ ಇದನ್ನು ಪುರಂದರದಾಸರ ಕಾಲಕ್ಕೆ ಹೊಂದಿಸಿಕೊಂಡು ನೋಡು ಎಂದು ಹೇಳುವುದು ಹೇಗೆ? ಅದು ಎಷ್ಟು ಸರಿ? ಅದೂ ಕೂಡ, ಅವರ ಜೀವನದ ಹಲವು ವಿವರಗಳನ್ನು ನೆನ್ನೆ ತಾನೆ ನಡೆದಿದ್ದು ಎನ್ನುವಂತೆ ಹೇಳುವಾಗ? ಪವಾಡ ಮತ್ತು ನಂಬಿಕೆಗಳನ್ನು ಚರಿತ್ರೆ ಎನ್ನುವಂತೆ ಹೇಳುವಾಗ?
ಇವುಗಳಿಂದಾಗುವ ಅಪಾಯಗಳೇನು ಎಂದು ತುಸುವಾದರೂ ಯೋಚಿಸುವುದು ಒಳ್ಳೆಯದು.

- anivaasi ರವರ ಬ್ಲಾಗ್
- Login or register to post comments
- 1274 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ



- ನಿರ್ವಾಹಕರ ಗಮನಕ್ಕೆ ತನ್ನಿ

ಪ್ರತಿಕ್ರಿಯೆಗಳು
ಉ: ಒಂದು ಕೆಟ್ಟ ದಾಸರ ಪದ
ಅನಿವಾಸಿಗಳೇ,
ಆಗಿನ ಕಾಲದ ಗಂಡಸರೆಲ್ಲರೂ ಹೀಗೇ ಯೋಚಿಸುತ್ತಿದ್ದರೇನೋ, ಆದ್ದರಿಂದ ನನಗೆ ಅವರ ಮೇಲೆ ಕೋಪವಿಲ್ಲ. ಎಂತೆಂತಹ ಹಿರಿಯ ಜೀವಿಗಳೂ ನನಗೆ ಇದುವರೆವಿಗೂ ತೋರಿಸಿಕೊಟ್ಟಿರುವುದೇನೆಂದರೆ, ಅವರೂ ಸಹ ನಮ್ಮಂತೆ ತಪ್ಪು ಮಾಡುವ ಮಾನವರೆ. ಬಹುಶಃ ನಾವು ಅವರಿಗಿಂತ ನೂರು ಪಟ್ಟು ಜಾಸ್ತಿ ತಪ್ಪು ಮಾಡುತ್ತೇವೇನೋ, ಅಷ್ಟೇ ವ್ಯತ್ಯಾಸ. ನಾವು ಅವರನ್ನು ದೇವತಾ ಮನುಷ್ಯರೆಂದು ಪೂಜಿಸುವುದು, ಅವರ ತಪ್ಪಲ್ಲ, ನಮ್ಮದು. ಮತ್ತೆ, ಪುರಂದರದಾಸರ ವಿಷಯದಲ್ಲಿ ಹೇಳುವುದಾದರೆ, ಅವರ ಮುತ್ತಂತಹ ಸಾವಿರಾರು ಕೃತಿಗಳಲ್ಲಿ ಒಂದೆರಡು ಗಾಜಿನದಾದರೆ ನನಗೇನೂ ಬೇಸರವಿಲ್ಲ. ನನಗೆ ಬೇಕಾದ್ದು ನಾನು ಆಯ್ದುಕೊಳ್ಳುತ್ತೇನೆ.
ನನಗೆ ಪುರಂದರದಾಸರು male chauvinist ಅಂತ ಅವರ "ಹೆಂಡತಿ ಪ್ರಾಣ ಹಿಂಡುತಿ" - http://vinu.bounceme.net/kannada/dasarapada/dasapada15.html - ಕೇಳಿದಾಗಲೆ ಅನ್ನಿಸಿತ್ತು
ಉ: ಒಂದು ಕೆಟ್ಟ ದಾಸರ ಪದ
ನನಗೆ ಪುರಂದರದಾಸರು male chauvinist ಅಂತ ಅವರ "ಹೆಂಡತಿ ಪ್ರಾಣ ಹಿಂಡುತಿ" - http://vinu.bounceme.net/kannada/dasarapada/dasapada15.html - ಕೇಳಿದಾಗಲೆ ಅನ್ನಿಸಿತ್ತು Smiling ಆಗಿನ ಕಾಲದ ಗಂಡಸರೆಲ್ಲರೂ ಹೀಗೇ ಯೋಚಿಸುತ್ತಿದ್ದರೇನೋ, ಆದ್ದರಿಂದ ನನಗೆ ಅವರ ಮೇಲೆ ಕೋಪವಿಲ್ಲ. ಎಂತೆಂತಹ ಹಿರಿಯ ಜೀವಿಗಳೂ ನನಗೆ ಇದುವರೆವಿಗೂ ತೋರಿಸಿಕೊಟ್ಟಿರುವುದೇನೆಂದರೆ, ಅವರೂ ಸಹ ನಮ್ಮಂತೆ ತಪ್ಪು ಮಾಡುವ ಮಾನವರೆ. ಬಹುಶಃ ನಾವು ಅವರಿಗಿಂತ ನೂರು ಪಟ್ಟು ಜಾಸ್ತಿ ತಪ್ಪು ಮಾಡುತ್ತೇವೇನೋ, ಅಷ್ಟೇ ವ್ಯತ್ಯಾಸ. ನಾವು ಅವರನ್ನು ದೇವತಾ ಮನುಷ್ಯರೆಂದು ಪೂಜಿಸುವುದು, ಅವರ ತಪ್ಪಲ್ಲ, ನಮ್ಮದು. ಮತ್ತೆ, ಪುರಂದರದಾಸರ ವಿಷಯದಲ್ಲಿ ಹೇಳುವುದಾದರೆ, ಅವರ ಮುತ್ತಂತಹ ಸಾವಿರಾರು ಕೃತಿಗಳಲ್ಲಿ ಒಂದೆರಡು ಗಾಜಿನದಾದರೆ ನನಗೇನೂ ಬೇಸರವಿಲ್ಲ. ನನಗೆ ಬೇಕಾದ್ದು ನಾನು ಆಯ್ದುಕೊಳ್ಳುತ್ತೇನೆ.
ಅನಿವಾಸಿಗಳೇ,
ನನ್ನ ಅಭಿಪ್ರಾಯವೂ ಕಲ್ಪನಾ ಅವರ ರೀತಿಯೇ.
ನೀವು ನಿಮ್ಮ ಬರಹವನ್ನ "ಒಂದು ಕೆಟ್ಟ ದಾಸರ ಪದ" ಅನ್ನುವ ಬದಲು "ದಾಸರ ಒಂದು ಕೆಟ್ಟ ಪದ" ಅಂದಿದ್ದರೆ ಹೆಚ್ಚು ಸರಿ ಇರುತ್ತಿತ್ತ್ತೇನೋ!
ಕಲ್ಪನಾ ಅವರೆ,
ದಾಸರ ಬತ್ತಳಿಕೆಯಲ್ಲಿರುವ ಬಾಣಗಳ ಸಂಖ್ಯೆ ಅಪರಿಮಿತ! "ಹೆಂಡತಿ, ಪ್ರಾಣ ಹಿಂಡುತಿ" ಯ ತಲೆಯಮೇಲೆ ಹೊಡೆಯುವಂತಹ ರಚನೆಯೊಂದಿಗೆ ಹಾಜರಾಗುವೆ ಸದ್ಯದಲ್ಲೇ
-ಹಂಸಾನಂದಿ
ಪುರಂದರ ದಾಸರ ರಚನೆಗಳಿಗಾಗಿ ಇಲ್ಲಿ ಚಿಟಕಿಸಿ :- http://purandara.wordpress.com/
ಉ: ಒಂದು ಕೆಟ್ಟ ದಾಸರ ಪದ
ಅರರೆ, "ಕೆಟ್ಟ ದಾಸ ಪದ" ನೀವೂ ಗಮಿನಿಸಿದ್ರಿ ಅಂತ ಕಾಣತ್ತೆ. ನನ್ನಿ. ಕಲ್ಪನಾ ಅವರೇ, ಹಂಸಾನಂದಿಯವರ "ಪುರಂದರದಾಸರು ಮತ್ತು ಅವರ ಹೆಂಡತಿ" ಬರಹಕ್ಕೆ ಕಾಯೋಣ.
"ಹೆಂಡತಿ ಸಂತತಿ ಸಾವಿರವಾಗಲಿ, ದಂಡಿಗೆ ಬೆತ್ತ ಹಿಡಿಸಿದಳಯ್ಯಾ" ಅಂತ ಹೆಂಡತಿಯನ್ನು ಅಟ್ಟಕ್ಕೇರಿಸಿರುವುದು ಕೂಡ ಇದೆ. ಹಂಸಾನಂದಿಯವರು ಇದರ ಬಗ್ಗೆಯೂ ಬರೆಯಲಿ ಅಂತ ಆಶಿಸುತ್ತೇನೆ.
ಉ: ಒಂದು ಕೆಟ್ಟ ದಾಸರ ಪದ
ಕಲ್ಪನಾ ಅವರೆ,
"ಹೆಂಡತಿ, ಪ್ರಾಣ ಹಿಂಡುತಿ" ಅಂತ ಹೇಳಿದ ಪುರಂದರ ದಾಸರೇ, "ದಂಡಿಗೆ ಬೆತ್ತ ಹಿಡಿಸಿದಳಯ್ಯ" ಅಂತ ಹೆಂಡತಿಯನ್ನು ಹೊಗಳಿದ್ದನ್ನು ನೀವು ಮರೆತಿರಲ್ಲಾ ?
-ಹಂಸಾನಂದಿ
ಪುರಂದರ ದಾಸರ ರಚನೆಗಳಿಗಾಗಿ ಇಲ್ಲಿ ಚಿಟಕಿಸಿ :- http://purandara.wordpress.com/
ಉ: ಒಂದು ಕೆಟ್ಟ ದಾಸರ ಪದ
ಯಪ್ಪಾ!!!!!! ಹಂಸಾನಂದಿ. ನಾವಿಬ್ರೂ, ಒಂದೇ ವಿಶ್ಯ ಬರೀತಾ ಇದ್ದೀವಿ ಹ್ಹ ಹ್ಹ ಹ್ಹ. ನಮ್ಮಿಬ್ಬರ ಕಾಮೆಂಟುಗಳ ಟೈಂಸ್ಟಾಂಪ್ ನೋಡಿ ಆಶ್ಚರ್ಯವಾಯಿತು.
ಉ: ಒಂದು ಕೆಟ್ಟ ದಾಸರ ಪದ
ಸುನೀಲ ಮತ್ತು ಹಂಸಾನಂದಿಗಳೇ,
ಆಶ್ಚರ್ಯವಾಗುತ್ತೆ.
ಅಬ್ಭಾ! ಏನು ಟೆಲಿಪತಿ ರೀ ನಿಮ್ಮಿಬ್ಬರದೂ
"ದಂಡಿಗೆ ಬೆತ್ತ ಹಿಡಿಸಿದಳಯ್ಯ" ಅನ್ನುವುದು ಹೊಗಳಿಕೆಗಿಂತ, ತಾವು ದಾಸರಾಗಿ ಪರಿವರ್ತನೆಗೊಂಡಿದ್ದಕ್ಕಾಗಿ ತಮ್ಮ ಹೆಂಡತಿಗೆ (long due?) credit ಕೊಟ್ಟ ಹಾಗಿದೆ
ನನಗನ್ನಿಸುತ್ತೆ, ಅವರು ಹೆಂಡತಿಯನ್ನು ಕೋತಿಗೆ ಹೋಲಿಸಿದ ಮೇಲೆ ಮನೆಯಲ್ಲಿ ಉಂಟಾದ ವಿಷಮ ಪರಿಸ್ಥಿತಿಯನ್ನು ನಿವಾರಿಸಲು, ಇದನ್ನು under duress ಬರೆದಿರಬಹುದು 
ಉ: ಒಂದು ಕೆಟ್ಟ ದಾಸರ ಪದ
ಟೆಲಿಪತಿ ಅಲ್ಲದೆ ಹಲವಾರು ವಿವರಣೆಗಳು ಕೊಡಬಹುದು.
ಆದರೆ ಅದಿಲ್ಲಿ ಅಪ್ರಸ್ತುತ.
ಆದರೆ "ಆದದ್ದೆಲ್ಲಾ ಒಳಿತೇ ಆಯಿತು" ಪದದ ಬಗ್ಗೆ ನನ್ನ ಅನುಮಾನಗಳು ಇವೆ. ಅಲ್ಲಿ ಗಂಡನ ಸೇವೆಯನ್ನು "ಅಪ್ರತಿಮ"ವಾಗಿ ಮಾಡಿದ ಮಡದಿಯನ್ನು ಹೊಗಳಿ ಅಟ್ಟಕೇರಿಸಿದ್ದಾರೆ ಎನ್ನಿಸುವದು ಹೌದು. ಆದರೆ- "ಆದದ್ದೆಲ್ಲಾ ಒಳಿತೇ ಆಯಿತು" ಎಂಬುದರ ಅರ್ಥವೇನು? ಕೆಟ್ಟದು/ಆಗಬಾರದ್ದು ಕೂಡ ಆದದ್ದು ಒಳಿತಿಗೇ ಎಂದಲ್ಲವೆ? ಇಡೀ ಹಾಡಿನಲ್ಲಿ ಅದೇನು ಎಂಬ ಬಗ್ಗೆ ಒಂದೂ ಮಾತಿಲ್ಲ ಎಂಬುದನ್ನು ಗಮನಿಸಿದ್ದೀರ? ತಾನು "ದಂಡಿಗೆ ಬೆತ್ತ ಹಿಡಿದ, ಗೋಪಾಳಬುಟ್ಟಿ ಹಿಡಿದ, ತುಳಸಿ ಮಾಲೆ ಧರಿಸಿದ" ವಿರಾಗಿಯಾಗಲು ಹೆಂಡತಿ ಸಹಾಯ ಮಾಡಿದಳೆಂದರೇನು ಅರ್ಥ? ಇಲ್ಲಿ ಆಗಬಾರದ್ದು ಏನು? ಯೋಚಿಸಿದರೆ ಹೆಣ್ಣಿನ ವಿಷಯದಲ್ಲಿ ಒಳ್ಳೆಯ ಸಂಗತಿಯೇನಾದರೂ ಹೊಳೆದರೆ ದಯವಿಟ್ಟು ತಿಳಿಸಿ. ಆದರೂ ಈ ಹಾಡನ್ನು ನಾನು ತುಂಬಾ ಎಂಜಾಯ್ ಮಾಡುತ್ತೇನೆ. ಅದು ಸ್ವಲ್ಪ ಕಾಂಪ್ಲೆಕ್ಸ್ ಹಾಡು ಅಂತ ನನ್ನ ಅಭಿಪ್ರಾಯ.
ಉ: ಒಂದು ಕೆಟ್ಟ ದಾಸರ ಪದ
ಅನಿವಾಸಿಗಳೆ,
ನಿಮಗೆ ಪುರಂದರದಾಸರ ಜೀವನ ಚರಿತ್ರೆ ಗೊತ್ತಿಲ್ಲವೆ? (http://en.wikipedia.org/wiki/Purandaradasa). ಅವರು ಶ್ರೀನಿವಾಸ ನಾಯಕರಿಂದ ಪುರಂದರದಾಸರಾಗಿದ್ದು ಹೆಂಡತಿಯಿಂದಲೆ. ವಿರಾಗಿಯಾಗಲು ಸಹಾಯ ಮಾಡಿದ್ದು ಹೆಂಡತಿಯಾದ್ದರಿಂದ, "ಆದದ್ದೆಲ್ಲ" ಹಾಡಿನಲ್ಲಿ ಅವಳನ್ನು ಹೊಗಳಿದ್ದಾರೆಂದು ನಾನು ಅರ್ಥೈಸಿದ್ದು. ಮತ್ತೆ "ಆದದ್ದೆಲ್ಲ ಒಳೆತೇ ಆಯಿತು" ಅಂದರೆ "all is well that ends well" ಅನ್ನುವ ಹಾಗೆ ಅಂತ ನನ್ನ ಅಭಿಪ್ರಾಯ. ಬಹುಶಃ ಕೆಟ್ಟದ್ದು/ಆಗಬಾರದ್ದು ಅಂದರೆ ಅವರು ಹಿಂದೆ ಜಿಪುಣರಾಗಿದ್ದುದು, ಲೌಕಿಕಾಸಕ್ತರಾಗಿದ್ದುದು, ಇರಬಹುದು.
ಉ: ಒಂದು ಕೆಟ್ಟ ದಾಸರ ಪದ
ಕಲ್ಪನಾರವರೆ,
ಪುರಂದರ ದಾಸರ ಜೀವನ "ಚರಿತ್ರೆ"ಯ ಮೇಲೆ ಆಧರಿಸಿ ಈ ಪದವನ್ನು ಅರ್ಥಮಾಡಿಕೊಳ್ಳಬಹುದೆ? ಮೂಗುತಿಯ ಕತೆ ಒಂದು ಪವಾಡದ ಕಟ್ಟುಕತೆಯಲ್ಲವೆ? ಕಾಟ ಕೊಡುವ/ಪ್ರಾಣ ಹಿಂಡುವ ಹೆಂಡತಿಯ ಹಿನ್ನೆಲೆಯಲ್ಲಿ ಈ ಪದವನ್ನೂ ಅರ್ಥೈಸಿಬಹುದಾ ಎಂದು ಯೋಚಿಸಬೇಕು - ಅಲ್ಲವೆ?
ಉ: ಒಂದು ಕೆಟ್ಟ ದಾಸರ ಪದ
ಅಂದರೆ ಶ್ರೀನಿವಾಸ ನಾಯಕನಾಗಿದ್ದಾಗ ಈ ಪದ ಬರೆದು ಆ ಮೇಲೆ ಅಂಕಿತ ಹಾಕಿದರು ಅಂತಲೋ ? ಅಥವಾ,
'ಆದದ್ದೆಲ್ಲ ಒಳಿತೇ ಆಯಿತು' ಎನ್ನುವ ಮುಂಚೆ ಇದನ್ನು ಬರೆದರೋ ? ಅಥವಾ ಅದಾದ ಮೇಲೆ ಹಿಂದಿನದೆಲ್ಲ ನೆನಪು ಮಾಡಿಕೊಂಡು ಆಗ ಹೀಗನ್ನಬೇಕಿತ್ತು ಎಂದು ಬರೆದರೋ ಅಥವಾ ...
ಎನೋ ಎಲ್ಲ ಗೋಜಲು ಗೋಜಲು ನನಗೆ!!!
'ಹೆಂಡತಿ ಪ್ರಾಣ ಹಿಂಡುತೀ' ಪದದ ಮೊದಲ ಸಾಲು ನೋಡಿ ದಾಸರು ಎಲ್ಲ ಹೆಂಡಿರನ್ನೂ [ಅಥವ ತಮ್ಮ ಹೆಂಡತಿಯನ್ನು] ಜಾಲಾಡಿದ್ದಾರೆ ಅಂದುಕೊಂಡಂತಿದೆ. ಕೋತಿ ಅಂದಿದ್ದು ಹೆಂಡತಿಗೆ ಅಲ್ಲವಲ್ಲವೇ? ಗಂಡನನ್ನು ಕೋತಿಯಂತೆ ಕುಣಿಸುವವಳೇ ಎಂದದ್ದು ತಾನೇ? ಎಂತಹ ಹೆಂಡತಿ ಬಗ್ಗೆ ಹೀಗೆ ಅಂದಿದ್ದು ಅಂತ ಮುಂದೆ ಹೇಳಿದ್ದಾರಲ್ಲ, ಆದರೂ ಅದು ಎಲ್ಲರಿಗು ಅಪ್ಲೈ ಆಗುತ್ತ?
ಅನಿವಾಸಿಗಳು ಮತ್ತೆ ಪಾರಮಾರ್ಥಿಕ ಅನ್ನಬಹುದು ಮುಂದಿನದಕ್ಕೆ,
ಹೆಂಡತಿ ಪದ ಓದುತ್ತಿದ್ದಾಗ ಭಾಗವತದ ಒಂದು ಕತೆ ನೆನಪಿಗೆ ಬಂತು. ಅದರಲ್ಲಿ ಜೀವನನ್ನು ಪುರುಷನಾಗಿಯೂ ಬುದ್ಧಿ (ಅಥವ ಮನಸ್ಸು, ಸರಿಯಾಗಿ ನೆನಪಿಲ್ಲ)ಯನ್ನ ಅವನ ಹೆಂಡತಿಯನ್ನಾಗಿಯೂ ದೇಹವನ್ನು ಅರಮನೆ/ಕೋಟೆ ಆಗಿಯೂ ಚಿತ್ರಿಸಿದ್ದಾರೆ. ಈ ಪದದ ಹೆಂಡತಿಯನ್ನು ಬುದ್ಧಿ/ಮನಸ್ಸು ಎಂದು cut-paste ಮಾಡಿಕೊಂಡು ಓದಿನೋಡಿ ಏನನಿಸುತ್ತದೆ ಎಂದು.
ಅನಿಲ
ಉ: ಒಂದು ಕೆಟ್ಟ ದಾಸರ ಪದ
ಕಲ್ಪನಾರವರೆ,
ನಿಮ್ಮ ಪ್ರತಿಕ್ರಿಯೆಗೆ ಥ್ಯಾಂಕ್ಸ್.
ಹೆಣ್ಣಿನ ಬಗ್ಗೆ ದಾಸರ ಮಾತುಗಳಿಗೆ ಉಳಿದ ಗಂಡಸಿರಿಗಿಂತ ನಿಮ್ಮ ಪ್ರತಿಕ್ರಿಯೆಗೆ ಒಂದಂಶ ಹೆಚ್ಚೇ ಬೆಲೆಯನ್ನು ಕೊಡುತ್ತೇನೆ. ಹಾಗಾಗಿಯೂ, ದಾಸರ ಒಳ್ಳೆಯ ಪದಗಳನ್ನು ನಾನೂ ಎಂಜಾಯ್ ಮಾಡಿದ್ದೇನೆ. ದಾಸರ ಪದಗಳಲ್ಲಿ ಪದ ಜೋಡನೆ, ಅರ್ಥ/ಅರಿವನ್ನು ಒಂದು ಮಟ್ಟದಿಂದ ಇನ್ನೊಂದು ಮಟ್ಟಕ್ಕೆ ಒಯ್ಯುವದನ್ನು ನೋಡಿ ಕಲಿತಿದ್ದೇನೆ. ಅಂದ ಹಾಗೆ "ಇಕ್ಕಲಾರೆ ಕೈ ಎಂಜಲು" ಎಂಬ ನನಗೆ ಇಷ್ಟವಾದ ಒಂದು ಪದದಲ್ಲಿ ಚೆನ್ನಾಗಿ ಒಬ್ಬ ಮನೆ ಹೆಂಗಸಿನ ಕೋನದಿಂದ ಹಾಡಿದ್ದಾರೆ. ಇನ್ನೊಂದು "ಮುಪ್ಪಿನ ಗಂಡನು ಬೇಡಕ್ಕ" ಎಂಬುದೂ ಅಷ್ಟೆ. ಅದೇನೇ ಆದರೂ, ಒಬ್ಬ ಕವಿಯ ಎಲ್ಲ ಮಗ್ಗುಲನ್ನೂ ನೋಡುವುದು ಮುಖ್ಯ ಎಂದು ಬಗೆಯುತ್ತೇನೆ. ದಾಸರ ಮಹೋನ್ನತ ಮಗುಲಿನ ಪರಿಚಯದ ಅಗತ್ಯವಿಲ್ಲ ಎಂದೂ ಬಗೆಯುತ್ತೇನೆ
ಉ: ಒಂದು ಕೆಟ್ಟ ದಾಸರ ಪದ
ಅನಿವಾಸಿಗಳೆ,
ನನ್ನ ಪ್ರತಿಕಿಯೆಯನ್ನು ಹೆಚ್ಚಾಗಿ ತೂಗಿದ್ದಕ್ಕೆ ಧನ್ಯವಾದಗಳು
"ಮುಪ್ಪಿನ ಗಂಡನು ಬೇಡಕ್ಕ" ನಾನು ಕೇಳೇ ಇಲ್ಲ. ಲಿಂಕು ಇದ್ದರೆ ಕೊಡಿ.
ಮತ್ತೆ, "ಅದೇನೇ ಆದರೂ, ಒಬ್ಬ ಕವಿಯ ಎಲ್ಲ ಮಗ್ಗುಲನ್ನೂ ನೋಡುವುದು ಮುಖ್ಯ ಎಂದು ಬಗೆಯುತ್ತೇನೆ." ಎಂದು ಬರೆದಿದ್ದೀರಿ. ಒಪ್ಪುತ್ತೇನೆ. ಇಲ್ಲಿ ಕೆಲವರು ಪುರಂದರದಾಸರನ್ನು ಬರಿಯ ಕವಿಯಾಗಿ ನೋಡದೆ ದೇವರಾಗಿ ನೋಡುವುದರಿಂದ ಅವರಿಗೆ ನಿಮ್ಮ ಪ್ರಶ್ನೆಗಳು ಇಷ್ಟವಾಗಿಲ್ಲವೆಂದು ತೋರುತ್ತೆ.
ಉ: ಒಂದು ಕೆಟ್ಟ ದಾಸರ ಪದ
ಕಲ್ಪನಾ ಅವರೆ,
'ಇಲ್ಲಿ ಕೆಲವರು' ಎನ್ನುವದರಲ್ಲಿ ನನ್ನನ್ನೂ ಸೇರಿಸಿಕೊಂಡಿದ್ದರೆ ಈ ಮಾತು. ನಾನು ಪುರಂದರದಾಸರನ್ನು ದೇವರೆಂದುಕೊಂಡಿಲ್ಲ. ದೇವರ ದಾಸರು ಎಂದು ಅವರೇ ಹೇಳಿಕೊಂಡಿದ್ದಾರಲ್ಲವೆ? ನಿಮಗೊಂದು ವಿಷಯ ಗೊತ್ತೆ? ಪುರಂದರ ದಾಸರು ಅನುಸರಿಸುತ್ತಿದ್ದ ಮಧ್ವ ಸಿದ್ಧಾಂತದಲ್ಲಿ ದೇವರು ಎಂದರೆ ಒಬ್ಬನೇ. ಸರ್ವತಂತ್ರ ಸ್ವತಂತ್ರನಾದ, ಅನಂತಗುಣಪೂರ್ಣನಾದ, ಸಚ್ಚಿದಾನಂದ ಸ್ವರೂಪಿಯಾದ ಹರಿ. ಉಳಿದವರೆಲ್ಲ ಅವನ ಪರಿವಾರ. ಎಲ್ಲ ದೇವತೆಗಳಲ್ಲಿ ಕಾಣುವದು ಅವನ ಅಧಿಷ್ಠಾನ, ಅವರು ಅವನನ್ನು ಎಷ್ಟರ ಮಟ್ಟಿಗೆ ಕಾಣಬಲ್ಲರು ಎನ್ನುವದೇ ಅವರವರ ಯೋಗ್ಯತೆ. ತಾರತಮ್ಯ ಎಂದರೆ ಈ ಅಧಿಷ್ಟ್ಠಾನ/ಯೋಗ್ಯತೆಯ ಅಳತೆಗೋಲಷ್ಟೇ ಹೊರತು ಒಂದು ಕಣ್ಣಿಗೆ ಬೆಣ್ಣೆ ಒಂದು ಕಣ್ಣಿಗೆ ಸುಣ್ಣ ಮಾಡುವ ಪಂಕ್ತಿ ಭೇದವಲ್ಲ.
ಒಬ್ಬ ಕವಿಯ ಎಲ್ಲ ಮಗ್ಗಲುಗಳನ್ನು ನೋಡುವ ಮಾತನ್ನು ಒಪ್ಪುತ್ತೇನೆ. ಆದರೆ ನಮಗೆ ಕಂಡದ್ದು ಕವಿಯ ಮುಖವೇ ಅಥವ ನಮಗೆ ಅರ್ಥವಾದ ಮಿತಿಯಲ್ಲಿ ಮೂಡುವ ಕರಾಳ ಬಿಂಬವೇ ಎನ್ನುವದನ್ನು ಎಚ್ಚರಿಕೆಯಿಂದ ವಿಚಾರಿಸಬೇಕಲ್ಲವೆ?
ಅನಿಲ
ಉ: ಒಂದು ಕೆಟ್ಟ ದಾಸರ ಪದ
ಅನಿಲ ಅವರೆ,
ಹೌದು, ಕೆಲವರಲ್ಲಿ ನಿಮ್ಮನ್ನೂ ಸೇರಿಸಿದ್ದೆ.
ಮತ್ತೆ, ಪು.ದಾಸರು ಬರೆದ ಪಂಕ್ತಿ ಭೇಧದ ಬಗ್ಗೆ ನಾನು ಹೆಚ್ಚಾಗಿ ಯೋಚಿಸಿಲ್ಲ. ನಾನು "male chauvinist" ಎಂದು ಬರೆದದ್ದು ಇದನ್ನು ನೋಡಿ,
ಹೆಣ್ಣು = ಭೋಗ
ಹೆಣ್ಣು = ಕಾಟ
ಪುತ್ರ = ಭಾಗ್ಯ
"ಕನ್ಯಾದಾನವ ಮಾಡಿದವರಿಗೆ ಹೆಣ್ಣಿನ ಭೋಗವೇ ಸಾಕ್ಷಿ" ಎಂಬ ಲೈನನ್ನು agilenag ಅವರು ಹೇಳಿದ ಹಾಗೆ ಖಂಡಿತ ನನಗೆ ಅರ್ಥೈಸಲಾಗುತ್ತಿಲ್ಲ. ಹೇಗೆ ಯೋಚಿಸಿದರೂ ಕೊನೆಗೆ ಹೆಣ್ಣು ಭೋಗದ ವಸ್ತು ಆದಳಲ್ಲವೆ? ಬೇರೆಯ ಉದಾಹರಣೆ ಅವರು ಏಕೆ ಬಳಸಲಿಲ್ಲ? ಹೌದು, ನನ್ನ ಯೋಚನೆಯಲ್ಲೇ ಕುಂದಿರಬಹುದು, ಆದರೆ, ಇದನ್ನು ಮೀರಿ ನನಗೆ ಯೋಚಿಸಲಾಗುತ್ತಿಲ್ಲ. ಈ ಹೆಣ್ಣು-ಭೋಗ ವಿಷಯದಲ್ಲಿ ಇತರ ವಿವರಣೆಗಳು, ಸಮಜಾಯಿಸಿಗಳಂತೆ ಅನ್ನಿಸುತ್ತಿದೆ.
"ಆದರೆ ನಮಗೆ ಕಂಡದ್ದು ಕವಿಯ ಮುಖವೇ ಅಥವ ನಮಗೆ ಅರ್ಥವಾದ ಮಿತಿಯಲ್ಲಿ ಮೂಡುವ ಕರಾಳ ಬಿಂಬವೇ ಎನ್ನುವದನ್ನು ಎಚ್ಚರಿಕೆಯಿಂದ ವಿಚಾರಿಸಬೇಕಲ್ಲವೆ?" - ಈ ತರಹದ ವಿಚಾರಣೆಗಾಗಿಯೇ ಸಂಪದದ ವೇದಿಕೆಯಿದೆ ಎಂದು ನನ್ನ ಅಭಿಪ್ರಾಯ. ಅನಿವಾಸಿಗಳಿಗೆ ಅರ್ಥವಾದ ರೀತಿಯಲ್ಲಿ ಅವರು ಬರೆದರು. ಅದನ್ನು ಇನ್ನೊಂದು ರೀತಿ ಅರ್ಥೈಸಬಹುದೆಂದು ತಿಳಿದವರು ಹೇಳಿದಿರಿ. ಇದು ಒಳ್ಳೆಯ ಸಂವಾದ. ಬದಲಿಗೆ, ಒಬ್ಬ ವ್ಯಕ್ತಿಯ ಬಗ್ಗೆ ಕೆಟ್ಟದ್ದು ಬರೆದಿದ್ದೇ ತಪ್ಪು ಎಂದರೆ, ಇದು ಒಂದು ರೀತಿ ವ್ಯಕ್ತಿ ಪೂಜೆ ಆಗುತ್ತೆ, ಅಲ್ವೆ?
ಉ: ಒಂದು ಕೆಟ್ಟ ದಾಸರ ಪದ
ನನಗೇನೋ ದಾಸರಿಗೆ male chuvanist ಅನ್ನೋ ಲೇಬಲ್ ಕೊಡುವುದು ಸರಿಯಾಗುವುದಿಲ್ಲ ಅನ್ನಿಸುತ್ತದೆ. ತಲೆಗೊಂದು ಪಟ್ಟಿ ಅಂಟಿಸದೆ ನಾವು ಯೋಚನೆ ಮಾಡಬಹುದಲ್ಲ್ವೇ?
ಸಿರಿಗನ್ನಡಂ ಗೆಲ್ಗೆ, ಸಿರಿಗನ್ನಡಂ ಬಾಳ್ಗೆ
ಉ: ಒಂದು ಕೆಟ್ಟ ದಾಸರ ಪದ
ಬಾಳ ಮಾಡಿ ದಾಸರಿಗೆ ಸಿಕ್ಕ ಹೆಂತಿ ಅಂತವಳಿದ್ದಿರಬೇಕು, ನನಗೊಂದು ಜೋಕ್ ನೆನಪಾತು ನೋಡೀ,,
ಗ್ರೀಕ್ ತತ್ವದ್ನ್ಯ ಸಾಕ್ರಟೀಸ್‍ನ ಹೆಂತಿ ಬಲು ಕಾಟ ಕೊಡುತ್ತಿದ್ದಳಂತೆ ಆತನಿಗೆ, ಆ ವಿಚಾರ ತಿಳಿದಿದ್ದ ಹರೆಯದ ಹುಡುಗನೊಬ್ಬ ಸಾಕ್ರಟೀಸ್‍ನನ್ನು ನಾನು ಮದುವೆ ಮಾಡಿಕೊಳ್ಳಲೋ ಬೇಡವೋ ಅನ್ನುವ ಗೊಂದಲದಲ್ಲಿದ್ದೇನೆ, ನಿಮ್ಮ ಸಲಹೆ ಕೊಡಿ ಅಂದನಂತೆ.. ಅದಕ್ಕೆ ಸಾಕ್ರಟೀಸ್ ’ತಮ್ಮಾ.. ನೀ ಮದುವೆ ಆಗು,.. ಒಳ್ಳೆ ಹೆಂತಿ ಸಿಕ್ಕರಂತೂ ಒಳ್ಳೆ ಪ್ರಜೆ ಆಗಿ ಬಾಳುತೀ, ಕೆಟ್ಟ ಹೆಂತಿ ಸಿಕ್ಕರೆ ನನ್ನಂತೆ ತತ್ವಜ್ಞಾನಿ ಆಗುತೀ’.. ಅಂದನಂತೆ..
-------------------------------------------------------------
ದೇವರು ನಗುವದನ್ನು ನೋಡಲು ಅವನಿಗೆ ನಿಮ್ಮ ಯೋಜನೆಗಳ ಬಗ್ಗೆ ಹೇಳಿ.
ಉ: ಒಂದು ಕೆಟ್ಟ ದಾಸರ ಪದ
agilenag ಅವರ ಕಾಮೆಂಟನ್ನು, ಸರಿಯಾಗಿ ಅರ್ಥ ಮಾಡಿಕೊಳ್ಳಲು ಮತ್ತೆ ಓದಿದೆ. ಅಲ್ಲಿ ಬರೆಯುವುದನ್ನು ಇಲ್ಲೇ ಬರೆಯುತ್ತಿದ್ದೇನೆ.
"ಕನ್ಯಾದಾನವ ಮಾಡಿದವರಿಗೆ ಹೆಣ್ಣಿನ ಭೋಗವೇ ಸಾಕ್ಷಿ" ಇದರ ಅರ್ಥ ಮಗಳ ಮದುವೆ ಮಾಡಿದವರು ಆ ಹೆಣ್ಣು ಮಗಳು ಗಂಡನ ಮನೆಯಲ್ಲಿ ಸುಖದಿಂದಿರುವುದೇ (ಹೆಣ್ಣಿನ ಭೋಗ) ಸಾಕ್ಷಿ ಎಂದುತಿಳಿಯಬೇಕಾಗುತ್ತದೆ.
ಹೆಣ್ಣು ಮಗಳು ಸುಖದಿಂದಿರುವುದೇ ಸಾಕ್ಷಿ ಎಂದು ಹೇಳಲು - ಕನ್ಯಾದಾನವ ಮಾಡಿದವರಿಗೆ ಹೆಣ್ಣಿನ(ಮಗಳ) ಸೌಖ್ಯವೇ ಸಾಕ್ಷಿ - ಎಂದು ಹೇಳಬಹುದಿತ್ತಲ್ಲ? ನನ್ನ ಪ್ರಕಾರ ಇದು, ಕನ್ಯಾದಾನವೆಂಬ ಪುಣ್ಯ ಕಾರ್ಯ ಮಾಡಿದರೆ, ಹೆಣ್ಣನ್ನು(ಹೆಂಡತಿಯೂ ಇರಬಹುದು) ಭೋಗಿಸುವ ಸುಖ ಸಿಗುತ್ತೆ ಎಂದು. ಹೀಗೆ ಅರ್ಥೈಸುವುದರಿಂದ ನನ್ನ ಬುದ್ಧಿ ಕೆಟ್ಟದ್ದೇ? ನನಗಂತೂ ಗೊತ್ತಿಲ್ಲ
ಉ: ಒಂದು ಕೆಟ್ಟ ದಾಸರ ಪದ
ಕಲ್ಪನಾ ಅವರೆ,
ಹೆಣ್ಣಿನ ಭೋಗವೆಂದರೆ ಹೆಂಡತಿಯೊಡನೆ ಸುಖ ಸಂಸಾರ ಎಂದುಕೊಂಡೆ. ಕನ್ಯಾದಾನ ಒಳ್ಳೆಯ ರೀತಿಯ/ಸಾಂಪ್ರದಾಯಿಕವಾದ ಮದುವೆಯನ್ನು ಸೂಚಿಸುತ್ತದಾದ್ದರಿಂದ ಜೊತೆಗೆ ಬರುವ ಭೋಗಕ್ಕೆ ಸುಖ ಸಂಸಾರ/ಬಾಳುವೆ ಎನ್ನುವದೇ ಹೊಂದುತ್ತದೆ ಎನ್ನುವದು ನನ್ನ ಅನಿಸಿಕೆ. ಹೆಣ್ಣು = ಕಾಟ ಎನ್ನುವದು ಇಲ್ಲಿ generalize ಮಾಡಲು ಬರುವದಿಲ್ಲ ಅನಿಸುತ್ತದೆ. ಪುತ್ರ = ಭಾಗ್ಯ ಕ್ಕೆ ನೀವು ಹೇಳಿದ್ದನ್ನು ಒಪ್ಪುತ್ತೇನೆ. ಇದು ಬಹಳಷ್ಟು ಕಡೆ ಬರುವದನ್ನೂ, ಈಗಲೂ ಇರುವ ಗಂಡು ಮಗುವಿನ ಹಂಬಲವನ್ನೂ ನೋಡಿದ್ದೇನೆ. ಇದೆಲ್ಲ ನನ್ನ ಅಭಿಪ್ರಾಯವಷ್ಟೆ, ಎಷ್ಟೆಂದರೂ ಈ ವಿಷಯದಲ್ಲಿ ನಿಮ್ಮ [ಹಾಗೂ ಇತರ ಹೆಂಗಸರ] ಅಭಿಪ್ರಾಯ ಹೆಚ್ಚು ತೂಕದ್ದು.
ಒಬ್ಬ ವ್ಯಕ್ತಿಯ ಬಗ್ಗೆ ಕೆಟ್ಟದ್ದು ಬರೆಯುವದು ತಪ್ಪು ಎಂದು general ಆಗಿ ಹೇಳಲು ಬರುವದಿಲ್ಲ. ಇಲ್ಲಿ ನನ್ನ ಅಭಿಪ್ರಾಯವೂ ಅದಲ್ಲ. ಒಬ್ಬ ವ್ಯಕ್ತಿಯ ಯೋಚನಗೆ, ಕೃತಿಗೆ ಅಪಚಾರವಾಗುತ್ತಿದೇಯೇನೋ ಎನ್ನುವದರ ಬಗೆಗಿನ ಕಾಳಜಿ ಅಷ್ಟೆ. ಇದು ನಿಮಗೆ ವ್ಯಕ್ತಿ ಪೂಜೆಯಾಗಿ ಕಂಡರೆ ನಾನೇನೂ ಹೇಳಲಾರೆ.
ಅನಿಲ
ಉ: ಒಂದು ಕೆಟ್ಟ ದಾಸರ ಪದ
ಅನಿವಾಸಿಗಳೇ,
ಬಹುಶಃ ’ಭೋಗ’ ನಿಮ್ಮ ಹಾದಿ ತಪ್ಪಿಸಿದೆ! ಎಷ್ಟರ ಮಟ್ಟಿಗೆ ಅಂದರೆ ಕನ್ಯಾದಾನ ಮಾಡಲು ಹೆಣ್ಣು ಮಗುವನ್ನು ಹೊತ್ತು ಹೆತ್ತು ಸಲಹಿರಬೇಕು ಎನ್ನುವದಾಗಲೀ, ಜಗತ್ತಿನಲ್ಲಿ ಕೆಲವರಿಗಾದರೂ ಕೆಟ್ಟ ಹೆಂಡಿರು ಸಿಗುತ್ತಾರೆಂಬುದಾಗಲೀ, ಪಂಕ್ತಿಯಲ್ಲಿ ಒಬ್ಬರಿಗೊಂದು ಮತ್ತೊಬ್ಬರಿಗೊಂದು ಹಾಕುವವರು ಇರುತ್ತಾರೆಂಬುದಾಗಲೀ ಕೊನೆಗೆ ತಮ್ಮ ಮಾತಿಗೆ ತಮ್ಮ ಆರಾಧ್ಯ ದೈವ ಪುರಂದರ ವಿಠ್ಠಲನನ್ನೇ ಸಾಕ್ಷಿ ಎನ್ನುತ್ತಾರೆಂಬುದಾಗಲೀ ನಿಮ್ಮ ಗಮನಕ್ಕೆ ಬಂದಿಲ್ಲ. ನನಗೆ ಇದರಲ್ಲಿ ಕಟುವಾದ ಮಾತು ಅನಿಸಿದ್ದು ’ಅನ್ನದಾನ ಮಾಡದವರು ಅನ್ನಕ್ಕಳುವುದೇ ಸಾಕ್ಷಿ’. ಅದರಲ್ಲೂ ಅನ್ನದಾನ ಮಾಡಿರಯ್ಯ ಅಂತ ಹೇಳುವ ಕಳಕಳಿಯೇ ಕಾಣುತ್ತದೆ.
ಈ ಜನ್ಮದಲ್ಲಿ ಹೆಂಡತಿಯೊಂದಿಗೆ ಸಂಸಾರದಲ್ಲಿ ಸುಖಿಸುವವರು ಹಿಂದೆ [ಜನ್ಮಾಂತರದಲ್ಲಿ] ಕನ್ಯಾದಾನ ಮಾಡಿದ ಪುಣ್ಯ ಗಳಿಸಿಕೊಂಡಿದ್ದಾರೆ, ಈಗ ಪುತ್ರ ಭಾಗ್ಯ ಪಡೆದವರು ಪಂಕ್ತಿಯಲ್ಲಿ ಎಲ್ಲರನ್ನೂ ಸಮನಾಗಿ ಕಂಡಿದ್ದಾರೆ, ಈಗ ಅನ್ನಕ್ಕೆ ಕೊರತೆಯಿಲ್ಲದಿರುವವರು ಹಿಂದೆ ಎಷ್ಟು ಅನ್ನದಾನ ಮಾಡಿದ್ದಾರೊ ಅನ್ನುವದಷ್ಟೇ ಅಲ್ಲವೇ ಇದರ ಅರ್ಥ?
ತೆರೆದ ಪುಸ್ತಕದಂತೆ ಬದುಕಿದವರ, ’ಮನವ ಶೋಧಿಸಬೇಕು ನಿಚ್ಚ ದಿನ ದಿನದ ಪುಣ್ಯಪಾಪಗಳ ವೆಚ್ಚ’ ಎಂದವರ ಕೊನೆಗೆ ಇದೇ ಪದದಲ್ಲಿ ತಮ್ಮ ಪುರಂದರ ವಿಠ್ಠಲನೇ ಸಾಕ್ಷಿ ಎನ್ನುವರ ಮನಸ್ಸು ಹೇಗಿರುತ್ತದೆ ಎನ್ನುವದಕ್ಕೆ ಮುಂಚೆ ನಮ್ಮ ನಮ್ಮ ಮನಗಳನ್ನು ಶೋಧಿಸಬೇಕು ಎಂದಷ್ಟೇ ಹೇಳಬಲ್ಲೆ!
ಅನಿಲ
ಉ: ಒಂದು ಕೆಟ್ಟ ದಾಸರ ಪದ
ಅನಿಲರೆ,
ಸೀಮಿತ ಮಟ್ಟದಲ್ಲಿಯೇ ಆದರೂ ನಾನು ಗಮನಿಸಿರುವುದಕ್ಕೆ ನಿಮ್ಮ ಅನಿಸಿಕೆಯನ್ನು ಹೇಳುವಿರ?
ನಿಮ್ಮ ಸಾವಧಾನದ ಪ್ರತಿಕ್ರಿಯೆಗೆ ಥ್ಯಾಂಕ್ಸ್.
ನನ್ನ ಬಗ್ಗೆಗಿನ ನಿಮ್ಮ ಮೊದಲ ಕಾಮೆಂಟನ್ನು ತಮಾಷೆಯಾಗಿ ತೆಕ್ಕೊಂಡೆ
ನೀವು ಹೇಳುವಂತೆ ಭೋಗದ ವಿಷಯ ಒತ್ತಟ್ಟಿಗಿಟ್ಟರೂ, ಏತಕ್ಕಾದರೂ ಆಗಲಿ, ಕನ್ಯಾದಾನ ಮಾಡದವರಿಗೂ - "ಹೆಣ್ಣಿನ ಕಾಟ" ಪ್ರಾಪ್ತವಾಗುವುದಕ್ಕೂ ಕೊಂಡಿಯನ್ನು ಹೇಗೆ ಬೆಸೆಯಬಹುದು ಎಂಬುದರ ಬಗ್ಗೆ ನಿಮ್ಮ ಅನಿಸಿಕೆಯನ್ನು ಹೇಳಿದ್ದರೆ ಒಳ್ಳೆಯದಿತ್ತು. ಹೆಣ್ಣು ಬೆಳೆಸದವನಿಗೆ ಹೆಣ್ಣಿನ ಜತೆಗಿರಲು ಬರುವುದಿಲ್ಲ. ಹಾಗಾಗಿ, ಹೆಣ್ಣು ಕಾಟವಾಗುತ್ತಾಳೆಂದು ಹೇಳುತ್ತೀರೇನೋ?
ನೀವು ಹೇಳುವ ಪಂಕ್ತಿ ಬೇಧ ಮತ್ತು ಇಲ್ಲಿ ಬರುವು ಪಂಕ್ತಿ ವಂಚನೆ ಒಂದೆಯ? ಅದೇನೇ ಆದರೂ, ಅದಕ್ಕೂ ಜನ್ಮರೋಗಕ್ಕೂ(?) ಹೇಗೆ ಕೊಂಡಿ ಬೆಸೆಯುತ್ತೀರೆಂದು ಹೇಳಿದ್ದರೆ ಚೆನ್ನಿತ್ತು. ಹಾಗೇ ಅದನ್ನು ವಿವರಿಸುವಾಗ "ಪಂಕ್ತಿ ವಂಚನೆ" ಮಾಡದಿದ್ದರೆ ಪುತ್ರ ಭಾಗ್ಯ ಹೇಗೆ ದಕ್ಕುತ್ತದೆ ಎಂಬುದನ್ನೂ ವಿವರಿಸಿದ್ದರೆ ಚರ್ಚೆಗೆ ಅನುಕೂಲವಾಗುತ್ತಿತ್ತು.
ನಿಮ್ಮ ಅರ್ಥೈಸುವಿಕೆಯಲ್ಲಿರುವ ಜನ್ಮಾಂತರದ ವಿಷಯ ಈ ಪದದಲ್ಲೆಲ್ಲೂ ಕಾಣದೇ ಇರುವುದು ನನ್ನ ಕುರುಡುತನ ಎಂದು ಹೇಳುತ್ತೀರೇನೋ?
ಕಡೆಗೆ ನೀವು ಹೇಳಿದಂತೆ ಈ ಮಾತುಗಳೆಲ್ಲಾ ನಮ್ಮ ನಮ್ಮ ಮನಗಳ ಶೋಧನೆಯೇ ಅಲ್ಲವೆ?
ಉ: ಒಂದು ಕೆಟ್ಟ ದಾಸರ ಪದ
ಅನಿವಾಸಿಗಳೇ,
ಮೊದಲ ಕಮೆಂಟು ಪದದಲ್ಲಿನ ಭೋಗವನ್ನು ನೀವು interpret ಮಾಡಿದ ಬಗೆಗಷ್ಟೇ, ಅದರಲ್ಲಿ ನಿಮ್ಮನ್ನು ವೈಯಕ್ತಿಕವಾಗಿ target ಮಾಡಿದೆ ಅನಿಸಿದರೆ ಕ್ಷಮಿಸಿ, ನನ್ನ ಉದ್ದೇಶ ಅದಾಗಿರಲಿಲ್ಲ. ತಮಾಷೆಯಾಗಿ ತೆಕ್ಕೊಂಡಿದ್ದಕ್ಕೆ ಥ್ಯಾಂಕ್ಸ್.
ಒಟ್ಟಾರೆ ಈ ಪದದಲ್ಲಿ ಬರುವ ಇದು ಮಾಡಿದರೆ ಇದಾಗುತ್ತದೆ, ಮಾಡದಿದ್ದರೆ ಮತ್ತೊಂದಾಗುತ್ತದೆ ಎನ್ನುವದು ಔಷಧಿ/ಅಥವಾ ಇನ್ನೇನೋ(ಸ್ಪಿನ್ಯಾಚ್
) ಒಲ್ಲೆ ಅನ್ನುವ ಮಗುವಿಗೆ ತೊಗೊ ಮಗು ಅಂದರೆ ಶಕ್ತಿ ಬರುತ್ತೆ ಇಲ್ಲ ಗುಮ್ಮ ಬರ್ತಾನೆ ಅನ್ನುವ ತಾಯಿಯ ಮಾತಿನಂತೆ ತೋರಿತು ನನಗೆ. ಅದನ್ನ ನೀವು ಹಿಗ್ಗಾ ಮುಗ್ಗಾ ಎಳೆದು ಏನೇನೋ ಅರ್ಥ ಕಲ್ಪಿಸಿದ್ದು ಬೇಸರ ತರಿಸಿತು.
ನಮ್ಮ ಮನೆಯಲ್ಲಿ ಪಂಕ್ತಿಯಲ್ಲಿ ಪರಪಂಕ್ತಿ ಮಾಡುವದು ಅನ್ನುವ ಮಾತು ಬಳಸುತ್ತಾರೆ. ಈ ಪದದ ಪಂಕ್ತಿ ವಂಚನೆಯನ್ನು ನಾನು ಅದೇ ಮಾತನ್ನು ಇನ್ನೊಂದು ರೀತಿ ಹೇಳುವದಾಗಿ ತೆಗೆದುಕೊಂಡೆ. ಪಂಕ್ತಿ ವಂಚನೆ ಎಂದರೆ ಜಾತಿ ಭೇದ ಎನ್ನುವ ಅರ್ಥ ಬರುತ್ತದೆ ಎನ್ನುವದು ನನ್ನ ಮಂದ ಬುದ್ಧಿಗೆ ಉಳಿದ ಕಮೆಂಟುಗಳನ್ನು ಓದುವವರೆಗೂ ಹೊಳೆಯಲಿಲ್ಲ! ನೀವು ವಿವರಿಸುತ್ತೀರಾ ಹೇಗೆ ಇದು ಜಾತಿ ಭೇದ ಎಂದು?
ಜನ್ಮರೋಗ ಎಂದರೇನು ಎನ್ನುವದು ನನಗೂ ತಿಳಿದಿರಲಿಲ್ಲ. ನಿನ್ನೆ ನನ್ನ ತಂದೆಯ ಜೊತೆ ಇದರ ಬಗ್ಗೆ ಮಾತನಾಡುವಾಗ ಅವರು ಹೇಳಿದ್ದು ಜನ್ಮರೋಗ ಅಂದರೆ ಬಹುಶಃ ಪುನರ್ಜನ್ಮ, ಮತ್ತೆ ಮತ್ತೆ ಹುಟ್ಟಿ ಬರುವದು. ಪಂಕ್ತಿ ವಂಚನೆ ಮಾಡಿದರೆ ಮರು ಹುಟ್ಟು ಎಂತಲೂ, ಮಾಡದಿದ್ದರೆ ಸದ್ಗತಿ ಎನ್ನುವದನ್ನು ಪುತ್ರಭಾಗ್ಯ ಎನ್ನುವದರಿಂದ ಹೇಳಿದ್ದಾರೆನಿಸುತ್ತದೆ. ಧರ್ಮಶಾಸ್ತ್ರಗಳ ಬಗ್ಗೆ ನಂಬಿಕೆ ಹೆಚ್ಚು ಇದ್ದ ಕಾಲದಲ್ಲಿ (ಅಥವ ನಂಬುವ ಜನರಿಗೆ, ಯಾವ ಕಾಲದಲ್ಲೂ) ಅವುಗಳ ಮೂಲಕ ಒಳ್ಳೆಯ ಹಾದಿ ತೋರಿಸುವದರಲ್ಲಿ ತಪ್ಪೇನು? ಅದೊಂದರಿಂದ ಮಾತ್ರ ಸದ್ಗತಿ ಅನ್ನುವಂತೆ ಕಂಡರು ಇಲ್ಲಿ ಹೇಳುವದು ಹಲವು ಕಾರಣಗಳಲ್ಲಿ ಒಂದಾಗುತ್ತದಷ್ಟೆ.
ಜನ್ಮಾಂತರದ ವಿಷಯ ನಾನು ಅರ್ಥೈಸಿಕೊಂಡಿದ್ದು, ಕೆಳಗೆ ನಾಗರಾಜರು ಒಂದೇ ಜನ್ಮಕ್ಕೂ ಅರ್ಥೈಸಿದ್ದಾರೆ ಇನ್ನೂ ಚನ್ನಾಗಿ!
ನಿಮ್ಮ ಬರಹ ಓದಿದಾಗ ಈ ಪದದ ಮೇಲ್ಮೈಯನ್ನಷ್ಟೇ ಕೆದರಿ ಅರ್ಥಕ್ಕಿಂತ ಹೆಚ್ಚು ಅನರ್ಥವನ್ನೇ ಕಂಡಿದ್ದೀರಿ ಅನಿಸಿತು. ಶಬ್ದಗಳ ಅರ್ಥದ ಜೊತೆಗೆ ಭಾವವನ್ನೂ ನೋಡಬೇಕಲ್ಲವೇ? ಭಾವ ನೋಡುವಾಗ ಬರೆದವರ ಉಳಿದ ಕೃತಿಗಳಿಂದ ಇಂತಹ ಭಾವ ಇವರಲ್ಲಿ ಬರಬಹುದೇ ಎನ್ನುವ ಕನಿಷ್ಠ ವಿಚಾರ ಮಾಡಬೇಕಲ್ಲವೇ? ಬರಬಹುದು ಅನಿಸಿದರೆ ಅದನ್ನು ಚರ್ಚೆ ಮಾಡಬಹುದಲ್ಲವೇ ? ಇದೇ ಬರಹವನ್ನು ನಿಮ್ಮ ಶೋಧನೆಯ ಹಾದಿಯಲ್ಲೂ ಬರೆಯಬಹುದಿತ್ತಲ್ಲವೇ ? ಆದರೆ ಇಲ್ಲಿ ಬರಹ ರೂಪಕ್ಕೆ ಬರುವಾಗಾಗಲೇ ಇದರ ಬಗ್ಗೆ ಒಂದು ನಿರ್ಧಾರಕ್ಕೆ ಬಂದು ಬಿಟ್ಟಿದ್ದೀರಿ. ಅದನ್ನು ತಿಳಿಸಬೇಕೆನಿಸಿತು ಅದಕ್ಕೇ ನಮ್ಮ ಮನಗಳ ಶೋಧನೆ ಆಗಬೇಕು ಎಂದು ಬರೆದೆ.
'ಆದದ್ದೆಲ್ಲ ಒಳಿತೇ ಆಯಿತು' ಅಂದಂತೆ ನನ್ನ ಮನಸ್ಸಿನ ಶೋಧನೆಗೂ ಕಾರಣರಾದಿರಿ, ಥ್ಯಾಂಕ್ಸ್
ಅನಿಲ
ಉ: ಒಂದು ಕೆಟ್ಟ ದಾಸರ ಪದ
ಅನಿಲರೆ,
ಬೇಸರಿಸಬೇಡಿ, ಸುಮಾರು ಐನೂರು ವರ್ಷದ ಹಿಂದೆ ಹೇಳಿದ ಪದವನ್ನು ಅರ್ಥಮಾಡಿಕೊಳ್ಳುವಾಗ ಹಲವಾರು ಬಗೆಗಳು ಆಗುತ್ತವೆ. ಕೆಲವು ನಿಮಗೆ ಹೊಂದುತ್ತವೆ, ಇನ್ನು ಕೆಲವು ಹೊಂದದೆ ಇರಬಹುದು. ನೀವು ಮತ್ತು ನಾಗರಾಜರು ಪಾರಮಾರ್ಥಿಕ ಅರ್ಥಗಳನ್ನು ಮೇಲಿನ ನೇರವಾದ ಸಾಲುಗಳಿಗೆ ತರುವುದನ್ನು ನಾನು ಹಿಗ್ಗಾಮುಗ್ಗ ಎಂದು ಆರೋಪಿಸಬಹುದು. ಆದರೆ, ಹಾಗೆ ಮಾಡುವುದಿಲ್ಲ. ಏಕೆಂದರೆ ಎಲ್ಲರೂ ಈ ಸಂವಾದಕ್ಕೆ ಅರ್ಥ ತರಬಲ್ಲಿರಿ.
ಇನ್ನು ಜಾತಿ ವಿಚಾರದಲ್ಲಿ ಸುನೀಲರ "ಪದಬಳಕೆಗಳು ಜಾತಿವಾದವನ್ನು ಎತ್ತಿಹಿಡಿಯುವ ಅಪಾಯವೂ ಕಾಣುತ್ತದೆ" ಎಂಬ ಅನುಮಾನ ನನ್ನನ್ನೂ ಕಾಡಿದೆ. ಅದರ ಬಗ್ಗೆ ನಿಮ್ಮ ಹಾಗೆ ಶ್ರೀನಿಧಿಯವರೂ ಬೇಸರ/ಅಸಹನೆ ತೋರಿದ್ದಾರೆ. ನನ್ನ ಮೂಲ ಬರಹದಲ್ಲಿ ನನ್ನ ಅನುಮಾನ ಹೇಳಿದ್ದರೂ, ಜಾತೀಯವಾದ್ದು ಎಂದು ಹೇಳಿಲ್ಲ. ಹಾಗೆ ನೋಡಿದರೆ ಯಾರೂ ಹಾಗೆ ಹೇಳಿಲ್ಲ. ನಾಗರಾಜರು ಹೇಳಿದಂತೆ "ಇನ್ನೊಬ್ಬರಿಗೆ ದಕ್ಕಬೇಕಾದುದನ್ನು ಅವರಿಗಿಂತ ಮುಂಚೆ ನಾವು ಪಡೆದುಕೊಂಡರೆ" - ಎಂಬುದು ನನ್ನ ಪ್ರಶ್ನೆಗಳನ್ನು ತೀವ್ರವಾಗಿಸುತ್ತದೆ. ಇಲ್ಲಿಯೂ ಯಾರಿಗೆ ಮೊದಲು ದಕ್ಕಬೇಕು, ಅದನ್ನು ಯಾರು ನಿರ್ಧರಿಸುವುದು? ಮೊದಲೇ ಹೇಳಿದಂತೆ ಇಲ್ಲಿ "ಜಾತಿವಾದದ ಅಪಾಯ" ಕಾಣುತ್ತದೆ. ಹಾಗಿಲ್ಲ ಎಂದು ನೀವು ಹೇಳಿದ್ದೀರಿ.
ಅಷ್ಟು ಹೇಳಿ ನನಗೆ ಕಂಡಂತೆ ದಾಸರು ಜಾತಿಯನ್ನು ವಿರೋಧಿಸಿದ ನೆಲೆ ತುಂಬಾ ವಿಶಿಷ್ಟವಾದ್ದು. ಮೋಕ್ಷದ ಹಾದಿಯಲ್ಲಿರುವವರಿಗೆ ಅದು ಕ್ಷುಲ್ಲಕ, ಅನವಶ್ಯಕ ಎಂದರು. ಆದರೆ ಅದು ತಪ್ಪು ಎಂದು ಹೇಳಿದಂತೆ ಕಂಡಿಲ್ಲ. ಹಾಗೆ ಹೇಳಬೇಕಿತ್ತು ಎಂಬ ಅರ್ಥವಲ್ಲ. ಅದನ್ನು ಮೋಕ್ಷ ಸಂಪಾದನೆಗೆ ಮಾರಕ ಎಂದು ನೋಡಿದರು. ಇದನ್ನು "ಸಮಾಜ ಸುಧಾರಣೆ" ಎಂದು ಹೇಳುವುದನ್ನು ಕೇಳಿದ್ದೇನೆ. ಅವರು ಹೇಳಿದ್ದಕ್ಕೂ, ಅದನ್ನು ಸಾಮಾಜಿಕ ಅನ್ಯಾಯ ಎಂದು ಹೇಳುವುದುಕ್ಕೂ ಸಣ್ಣದೆಂದರೆ ಸಣ್ಣದು/ದೊಡ್ಡದೆಂದರೆ ದೊಡ್ದ ವ್ಯತ್ಯಾಸವಿದೆ. ದಾಸರು ಏನಾಗಿದ್ದರು ಎಂದು ನೋಡಲು ಇವೆಲ್ಲಾ ಮುಖ್ಯವಾಗುತ್ತವೆ.
ಇನ್ನೊಂದು ವಿಷಯ - ದಾಸರು ಬದುಕಿನ ವಿವರಗಳನ್ನು ಆಧರಿಸಿದ ಒಳ್ಳೆಯ ಪದಗಳನ್ನು ರಚಿಸಿದ್ದಾರೆ. ಆದರೆ ಇಲ್ಲಿ ನೀವು ತೋರಿದಂತೆ - ನಮ್ಮನ್ನು ಮಕ್ಕಳಂತೆ ನಡೆಸಿಕೊಂಡಿದ್ದಾರೆ. (ಇದನ್ನು ಎಲ್ಲ ಧರ್ಮಗಳೂ ಮಾಡುತ್ತವೆ) ಹಾಗಾಗಿಯೂ ಇದೊಂದು ಕೆಟ್ಟ ಪದವೇ ಅನಿಸುತ್ತದೆ.
ಇನ್ನು ನಾನು ಈ ಪದ್ಯವನ್ನು ಅರ್ಥಮಾಡಿಕೊಂಡಿರುವುದು ತುಂಬಾ ನಿರ್ಬಲವಾಗಿದೆ ಎಂಬ ಅಭಿಪ್ರಾಯ ಸೂಚಿಸಿದ್ದೀರ. ಅದಕ್ಕೆ ಥ್ಯಾಂಕ್ಸ್. ನನ್ನ ಯೋಚನೆಯ ಆಳದ ಬಗ್ಗೆ ನನಗೆ ಯಾವುದೇ ಭ್ರಮೆಗಳಿಲ್ಲ
ಉ: ಒಂದು ಕೆಟ್ಟ ದಾಸರ ಪದ
ಅನಿವಾಸಿಗಳೇ,
ನಾವು ಈಗ ಇದನ್ನು ಓದುತ್ತಿರುವವರು. ದಾಸರು ಇದನ್ನು ಯಾರೋ [ಕನಿಷ್ಟ] ಒಬ್ಬರಿಗಾಗಿ ತಾಯಿಯ ಸಮನಾದ ಕಳಕಳಿಯಿಂದ ಹೇಳಿರಬಹುದಲ್ಲವೆ?
ಈ ಪದವನ್ನು ಕೆಟ್ಟ ಪದ ಎನ್ನುವದು ನಿಮ್ಮ ನಿರ್ಧಾರವಾದರೂ ಇದರ core message (ನನಗನಿಸಿದಂತೆ) ಮಕ್ಕಳಿಗೂ ಹೇಳಬಹುದು ನೋಡಿ
೧. ಮಗಳನ್ನು ಸರಿಯಾಗಿ ನೋಡಿಕೊಂಡು ಒಳ್ಳೆ ರೀತಿಯಲ್ಲಿ ಮದುವೆ ಮಾಡಿಕೊಡಿ
೨. ಪಂಕ್ತಿಯಲ್ಲಿ ಭೇದಭಾವ ಮಾಡಬೇಡಿ
೩. ಹಸಿದವರಿಗೆ ಅನ್ನದಾನ ಮಾಡಿ
ಅನಿಲ
ಉ: ಒಂದು ಕೆಟ್ಟ ದಾಸರ ಪದ
ಅನಿವಾಸಿ, ಈ "ಕನ್ಯಾದಾನದ" ವಿಷಯವನ್ನೋದುವಾಗ, ಸೋಮೇಶ್ವರ ಶತಕದಿಂದ ಒಂದು ಪದ್ಯವು ನೆನಪಾಯಿತು.
ಹಿತವಂ ತೋರುವನಾತ್ಮಬಂಧು ಪೊರೆವಾತಂ ತಂದೆ ಸದ್ಧರ್ಮದಾ |
ಸತಿಯೇ ಸರ್ವಕೆ ಸಾಧನಂ ಕಲಿಸಿದಾತಂ ವರ್ಣಮಾತ್ರಂ ಗುರು ||
ಶ್ರುತಿಮಾರ್ಗಂ ಬಿಡದಾತ ಸುವ್ರತಿ ಮಹಾ ಸದ್ವಿದ್ಯೆಯೇ ಪುಣ್ಯದ |
ಸುತನೇ ಸದ್ಗತಿದಾತನೈ ಹರ ಹರಾ ಶ್ರೀ ಚೆನ್ನ ಸೋಮೇಶ್ವರಾ || ೮ ||
ನಾವು ಯಾರನ್ನು "ಆದರ್ಶಗಳ ಸೆಲೆಯಾಗಿದ್ದವರು" ಅಂತ ಅಂದ್ಕೊಂಡಿರ್ತೇವೆಯೋ ಅಂತಹವರು ಕೆಲವೊಂದು ವಿಷಯಗಳಲ್ಲಿ ಲಘುವಾದ ಅಭಿಪ್ರಾಯವನ್ನು ಮುಂದಿಟ್ಟಿದ್ದರೆ, ಅದನ್ನು ಒಪ್ಪಲು ನಮ್ಮ ಪರಿಸರ, ಹಿನ್ನೆಲೆಗಳು ಅಡ್ಡಬರುತ್ತವೆ. ಇಲ್ಲಿ ದಾಸರನ್ನು ನೀವು ಉದಾಹರಿಸಿದಿರಿ, ಇದೇ ಮಾತು ಬೇರೆ ರಾಜಕಾರಣಿಗೋ, ಅಥವಾ ಮತ್ಯಾರೋ ಆಚಾರ್ಯರಿಗೋ ಕೂಡ ಅನ್ವಯಿಸುತ್ತದೆ.
ನಿಮ್ಮ ಪ್ರಶ್ನೆಗಳಿಗೆ ಉತ್ತರ ಕಂಡುಕೊಳ್ಳುವ ನಿಟ್ಟಿನಲ್ಲಿ ಯೋಚಿಸುತ್ತಿದ್ದಾಗ, ಥಿಂಕ್ ಅಲೌಡ್, ಅಂತಾರಲ್ಲ, ಅದನ್ನು ಮಾಡುವಾಗ ಇಷ್ಟು ಹೇಳಬೇಕೆನಿಸಿತು.
ಇಂತಹ ಹಾಡುಗಳನ್ನು ಇಂದಿಗೂ ಹಾಡುವುದು ಕೇಳಿದಾಗ ಇವು ನಮಗೆ ಏನು ಹೇಳುತ್ತದೆ?
೧. ಕೆಲವು ವಿಷಯಗಳಲ್ಲಿ, ಹಿಂದಿನವರ ದೃಷ್ಟಿಕೋನ ತುಂಬಾ ಸೀಮಿತವಾಗಿತ್ತು.
೨. ಗುರುಗಳು ಕೆಮ್ಮಿದ್ದನ್ನೆಲ್ಲ (ತೀರ ಸಲಿಗೆಯ ಈ ಪದಪ್ರಯೋಗಕ್ಕೆ ಕ್ಷಮಿಸಿ) ಭಕ್ತರು ತೀರಾ ಪೂರ್ವಾಪರ ತಿಳಿಯದೆ ತುಂಬಾ ಹಚ್ಚಿಕೊಂಡಿಬಿಟ್ಟಿದ್ದಾರೆ.
ಮಕ್ಕಳು ಇದನ್ನು ಕೇಳಿದರೆ ಹೇಗೆ ಅರ್ಥೈಸಿಕೊಳ್ಳುತ್ತಾರೆ?
೧. ಮಕ್ಕಳಿಗೆ ಅರ್ಥವಾಗುವುದಿಲ್ಲ.
೨. ಇಂತಹ ಪದ್ಯಗಳಿಂದ ಚಿಂತನೆಗಳಿಗಿಂತ ಹೆಚ್ಚಾಗಿ, "ರಂಗೋಲಿ ಕೆಳಗಿನ ಮೀನಿಂಗುಗಳೇ" ಜಾಸ್ತಿಯಾಗುತ್ತವೆ. ಅದರಲ್ಲೂ, "ಪಂಕ್ತಿ ವಂಚನೆ" ಇಂತಹ ಪದಬಳಕೆಗಳು ಜಾತಿವಾದವನ್ನು ಎತ್ತಿಹಿಡಿಯುವ ಅಪಾಯವೂ ಕಾಣುತ್ತದೆ.
ಇಂತಹ ಪದಗಳು ರೂಪಿಸುವ ಮನಸ್ಸು ಎಂತಹದಿರುತ್ತದೆ?
ಇದಕ್ಕೆ ಉತ್ತರ ಕೊಡೋದು ಕಷ್ಟ ಮತ್ತು ತಪ್ಪು ಕೂಡ ಆಗುತ್ತದೆ. ಈ ನನ್ನ ಅಭಿಪ್ರಾಯಕ್ಕೆ ಕೆಲವೊಂದು ಕಾರಣಗಳಿವೆ.
೧. ಇದನ್ನು ದಾಸರು "ಜಿದ್ದಿಗೆ ಜಿದ್ದು ಬಿದ್ದು ನಂಬಿದ್ದಂತಹ ಆದರ್ಶ" ಎನ್ನಲು ಆಗದು. ಯಾವುದೋ ಸಂದರ್ಭದಲ್ಲಿ ಏನೋ ಪದ ಕಟ್ಟಿದ್ದರೆ ಅದನ್ನೇ ಜನ ಹಿಡಿದಿಟ್ಟುಕೊಂಡಿರಬಹುದು.
೨. ಒಂದು ವೇಳೆ, ದಾಸರು ಈ ತತ್ವಗಳನ್ನು ತುಂಬಾ ನಂಬಿದ್ದರೂ, ಇದೊಂದರಿಂದಲೇ (ಅತವಾ ಈ ರೀತಿಯ ಪದ್ಯಗಳಿಂದಲೇ), ಒಬ್ಬ ವ್ಯಕ್ತಿಯ, ಮನಸ್ಸನ್ನು ವಿಶ್ಲೇಷಿಸುವುದು ತಪ್ಪಾಗುತ್ತದೆ.
೩. "ಮುಟ್ಟಿದ್ದೆಲ್ಲವೂ ಚಿನ್ನ", "ಹೇಳಿದ್ದೆಲ್ಲವೂ ವೇದಾಂತ" ಎನ್ನುವಂತೆ, ಪುರಂದರರು (ಅಥವಾ ಆದರ್ಶಗಳನ್ನು ಮೈಗೂಡಿಸಿಕೊಂಡವರು ಅಂತಿಟ್ಟುಕೊಳ್ಳಿ) ಯಾವಾಗ್ಲೋ, ಏನೋ ಲಘುವಾಗಿ ಹೇಳಿದ್ದನ್ನೇ, ಪರಮಸತ್ಯ ಎಂದು ನಂಬಿಕೊಂಡ ಭಕ್ತರಿಂದಲೇ ಈ ರೀತಿಯ ಪದಗಳು ತಪ್ಪಾದ ರೀತಿಯಲ್ಲಿ ಜನಪ್ರಿಯವಾಗಿರಬಹುದಾದ ಸಾಧ್ಯತೆ ಹೆಚ್ಚು.
ಸಣ್ಣವರಿಗೆ ಇದನ್ನು ಪುರಂದರದಾಸರ ಕಾಲಕ್ಕೆ ಹೊಂದಿಸಿಕೊಂಡು ನೋಡು ಎಂದು ಹೇಳುವುದು ಹೇಗೆ?
ನನಗನಿಸುತ್ತೆ, ಹಾಗೆ ಹೇಳಬಾರದು. ಈಗ, "ಚಲ್ತಿ ಕಾ ನಾಮ್ ಗಾಡಿ" ಸಿನಿಮಾವನ್ನು ಒಬ್ಬ ನೋಡಿ, "ಇದೇನು ಈ ರೀತಿ ಇದೆ, ಗೊಡ್ಡು ಸಿನಿಮಾ" ಅಂದ ಅಂತಿಟ್ಟುಕೊಳ್ಳಿ. ಆಗ ನಾವು, ಈ ಸಿನಿಮಾವನ್ನು, ಆಆಆಆಆಆಆಗಿನ ಕಾಲಕ್ಕೆ ಹೊಂದಿಸಿಕೊಂಡು ನೋಡಪ್ಪಾ ಎಂದರೆ ಅದೆಷ್ಟು ಕೃತಕವಾಗಿರುತ್ತದೆ.
ಅದು ಎಷ್ಟು ಸರಿ?
ಈ "ಆಗಿನ ಕಾಲಕ್ಕೆ ಹೊಂದಿಸಿಕೊಂಡು ನೋಡು" ಎನ್ನುವ ಅಭಿಪ್ರಾಯ ಎಷ್ಟೋ ಬಾರಿ ನನ್ನಲ್ಲಿ ತುಂಬಾ ಪ್ರಶ್ನೆಗಳನ್ನು ಎಬ್ಬಿಸಿದೆ.
೧. ಯಾರು ಏಕೆ, ಯಾವ್ದೋ ಕಾಲಕ್ಕೆ ಹೊಂದಿಸಿಕೊಂಡು ನೋಡಿ, ಅನುಭವ ಪಡೆಯಬೇಕು ?
೨. ತಾಯಿಯಲ್ಲಿಯೇ ಅನ್ನಪೂರ್ಣೇಶ್ವರಿಯನ್ನು ಕಾಣದವನು, ಹೋಗಿ ಹೊರನಾಡಿನಲ್ಲಿ ಕಂಡಿಯಾನೇ ? ಹೀಗೆ. ನನಗೂ ಈ ಪ್ರಶ್ನೆ ಕಾಡಿದೆ. ಒಳ್ಳೆಯ ಉತ್ತರಕ್ಕಾಗಿ ಕಾದಿದ್ದೇನೆ.
ಅದೂ ಕೂಡ, ಅವರ ಜೀವನದ ಹಲವು ವಿವರಗಳನ್ನು ನೆನ್ನೆ ತಾನೆ ನಡೆದಿದ್ದು ಎನ್ನುವಂತೆ ಹೇಳುವಾಗ?
ಇದು ನನಗೆ ಅರ್ಥವಾಗಲಿಲ್ಲ.
ಪವಾಡ ಮತ್ತು ನಂಬಿಕೆಗಳನ್ನು ಚರಿತ್ರೆ ಎನ್ನುವಂತೆ ಹೇಳುವಾಗ?
"ಹೆಣ್ಣನ್ನು ಯಾವ ರೀತಿ ಸಮಾಜ ಕಾಣುತ್ತಿತ್ತು", ಎಂಬ ವಿಷಯದಲ್ಲಂತೂ ತುಂಬಾ ಹುಶಾರಾದ ಹೆಜ್ಜೆ ಇಡಬೇಕು. "ಹೆಣ್ಣುಗಳು ಎಲ್ಲಿ ಪೂಜಿಸಲ್ಪಡುತ್ತಾರೋ, ಅಲ್ಲಿ ದೇವತೆಗಳು ರಮಿಸುತ್ತಾರೆ" ಎಂಬುದು, "ಒಂದು ಸಂಸ್ಕೃತ ಪದ್ಯ" ಮುಂದೆ ತಂದ ನಂಬಿಕೆ. ಆದರೆ ನಿಜಕ್ಕೂ ಆ ರೀತಿ ಇತ್ತೇ ?? ಹೆಂಗಸರು ದೇವತೆಗಳು ಅಂತ ಹೇಳಿದ್ದು ಎಷ್ಟು ನಿಜವೋ, ಅವರನ್ನು ಮೂಲೆಗೆ ತಳ್ಳಲಾಗಿತ್ತು ಎಂಬುದೂ ಕೂಡ ಅಷ್ಟೇ ಸತ್ಯ. ಬೇಕಿದ್ದವರು "ಸಂಸ್ಕೃತದಲ್ಲಿಯೇ ಇರುವ ಮನುಧರ್ಮಶಾಸ್ತ್ರವನ್ನು" ತಿರುವಿಹಾಕಬಹುದು.
ಚಿಕ್ಕಚೊಕ್ಕ - ಒಬ್ಬ ಸ್ನೇಹಿತ ತಪ್ಪು ಮಾಡಿದಾಗ, ಅದನ್ನು ಖಂಡಿಸುವ ಎದೆಗಾರಿಕೆ ನನ್ನಲ್ಲಿ ಇಲ್ಲದಿದ್ದರೆ ಆ ಸ್ನೇಹಿತನಕೂಡೆ ಸಲಿಗೆ ಎಲ್ಲಿಂದ ಬರಬೇಕು. ಇದ್ದಿದ್ದನ್ನು ಇದ್ದ ಹಾಗೆ ಒಪ್ಪಿಕೊಳ್ಳುವುದೇ ಸಲಿಗೆ. ಆದರ್ಶ ಮೇಣ್ ಸಲಿಗೆ ಇವೆರಡರಲ್ಲಿ ಒಂದನ್ನು ಆಯ್ಕೆ ಮಾಡುವುದರಲ್ಲಿಯೇ ನಾವು ದಿನದೂಡುತ್ತಿರುತ್ತೇವೆ.
ಉ: ಒಂದು ಕೆಟ್ಟ ದಾಸರ ಪದ
ಸುನೀಲರೆ,
ನಿಮ್ಮ ಧೀರ್ಘ ಕಾಮೆಂಟಿಗೆ ಥ್ಯಾಂಕ್ಸ್.
ಹಲವು ಮಾತುಗಳನ್ನು ಒಪ್ಪುವಂತೇ ಹೇಳಿದ್ದೀರ. ನನ್ನ ಬರಹಕ್ಕಿಂತ ಚೆನ್ನಾಗಿ ವಿವರಿಸಿದ್ದೀರ.
ಅಂದ ಹಾಗೆ "ಅದೂ ಕೂಡ, ಅವರ ಜೀವನದ ಹಲವು ವಿವರಗಳನ್ನು ನೆನ್ನೆ ತಾನೆ ನಡೆದಿದ್ದು ಎನ್ನುವಂತೆ ಹೇಳುವಾಗ? ಇದು ನನಗೆ ಅರ್ಥವಾಗಲಿಲ್ಲ." ಅಂದಿರಿ.
ದಾಸರ ಜೀವನದ ಹಲವು ವಿವರಗಳನ್ನು/ಪವಾಡಗಳನ್ನು ಕಣ್ಣಿಗೆ ಕಟ್ಟುವಂತೆ ಹೇಳಿ, ಅವರನ್ನು ದಿನನಿತ್ಯ ನವೀಕರಿಸುತ್ತೇವೆ. ಆಗ ಅವರ ಮಾತುಗಳನ್ನು ಕಾಲಮಾನದ ಚೌಕಟ್ಟಿನಲ್ಲಿ ಇಡುವುದು ಕಷ್ಟವಾಗುತ್ತದೆ ಎಂದು ಹೇಳಿದೆ ಅಷ್ಟೆ.
ಉ: ಒಂದು ಕೆಟ್ಟ ದಾಸರ ಪದ
ಕೊಸರು - ಒಂದು ಕೆಟ್ಟ ದಾಸರ ಪದ - ಇಲ್ಲಿ ಯಾರು ಕೆಟ್ಟವರು ? "ದಾಸರ ಒಂದು ಕೆಟ್ಟ ಪದ" ಅಂತ ಇದ್ದಿದ್ದರೆ ಚೆನ್ನಾಗಿರ್ತಿತ್ತು. ಇದು, "ದಾಸರ ಬಗ್ಗೆ ನೀವು ಪೂರ್ವಾಗ್ರಹಪೀಡಿತರಾಗಿರಬಹುದು" ಎಂಬ ನಿಲುವನ್ನು ಮುಂದಿಡುತ್ತಿದೆ. ಪದಪ್ರಯೋಗಗಳ ಮೇಲೆ ಒಂಚೂರು ಕಣ್ಣಿಟ್ಟರೆ ಒಳ್ಳೆಯದಲ್ಲವೇ. ನಾನು ಕೂಡ ಇಂತಹ ಅನೇಕ ತಪ್ಪು ಮಾಡ್ತಾ ಇರ್ತೀನಿ. ಬೇಜಾರ್ ಮಾಡ್ಕೋಬೇಡಿ.
ಉ: ಒಂದು ಕೆಟ್ಟ ದಾಸರ ಪದ
ಹ್ಹ ಹ್ಹ ಸುನಿಲ್
ನಾನು ಹೇಳಿದ ಮಾತನ್ನೇ ನೀವೂ ಹೇಳಿದ್ರಿ!
-ಹಂಸಾನಂದಿ
ಪುರಂದರ ದಾಸರ ರಚನೆಗಳಿಗಾಗಿ ಇಲ್ಲಿ ಚಿಟಕಿಸಿ :- http://purandara.wordpress.com/
ಉ: ಒಂದು ಕೆಟ್ಟ ದಾಸರ ಪದ
ಪಂಕ್ತಿ ವಂಚನೆ = ಪಂಕ್ತಿ ಭೇಧ ಅಂತ ಅರ್ಥ ಮಾಡದೇ,
ಜಾತಿ ಭೇದ ಮಾಡು ಅಂತ ದಾಸರು ಹೇಳುತ್ತಿದ್ದಾರೆ ಅಂತ ಅರ್ಥ ಮಾಡಿದ್ದಕ್ಕೆ ಶಹಭಾಶ್
ಸಿರಿಗನ್ನಡಂ ಗೆಲ್ಗೆ, ಸಿರಿಗನ್ನಡಂ ಬಾಳ್ಗೆ
ಉ: ಒಂದು ಕೆಟ್ಟ ದಾಸರ ಪದ
ಶ್ರೀನಿಧಿ-
ನಿಮ್ಮ ವ್ಯಂಗ್ಯದ ಮಾತಿನಿಂದ ಏನು ಹೇಳಹೊರಟಿದ್ದೀರ ಎಂದು ಗೊತ್ತಾಗುತ್ತಿಲ್ಲ. ಹಿಂದೊಮ್ಮೆ ಹೀಗೆ ನೀವು ಎರಡರ್ಥ ಬರುವಂತೆ ಹೇಳಿ ನಾನು ತಪ್ಪು ತಿಳಿದಿದ್ದೆ.
ಪಂಕ್ತಿ ವಂಚನೆ ಮತ್ತು ಪಂಕ್ತಿ ಬೇಧ ಯಾವುದಕ್ಕೇ ಆದರೂ ಜನ್ಮರೋಗ/ಪುತ್ರ ಭಾಗ್ಯ ಬರುತ್ತದೆ ಎಂಬುದು ನಿಮಗೆ ಏನೂ ಅನಿಸಲಿಲ್ಲವೆ?
ಉ: ಒಂದು ಕೆಟ್ಟ ದಾಸರ ಪದ
ಇಲ್ಲ ಅನಿವಾಸಿಗಳೇ.
ನನಗೆ ಬೇಸರ ಆಗಿದ್ದು ಈ ಕೃತಿಯಲ್ಲಿ ಇಲ್ಲದ ಜಾತಿಯ ಮಾತು ನೀವೆತ್ತಿದ್ದಕ್ಕೆ. ನೀವೆಂದಿದ್ದು ಹೆಣ್ಣು-ಗಂಡು ಜಾತಿ (??)ಗಳ ಬಗ್ಗೆ ಆದರೆ ನೀವು ಹೇಳಿದ್ದು ಸರಿ ಎಂದು ಒಪ್ಪುತ್ತೇನೆ.
ಮಹಿಳೆಯರ ವಿಚಾರದಲ್ಲಿ ಈ ಕೃತಿಯೂ ಸೇರಿದಂತೆ ಅನೇಕ ಪದಗಳಲ್ಲಿ ಅನ್ಯಾಯ ಆಗಿದೆ.
ದಾಸ ಪಂಥದಲ್ಲಿ ಮಹಿಳೆಯರಿಗೆ ಅವಶ್ಯಕವಾದ ಸ್ಥಾನ ಕೊಟ್ಟಿಲ್ಲ ಅಂತ ನನ್ನ ಅನಿಸಿಕೆ. ಇಂದಿಗೂ ನಾನು ಯಾವುದೇ ಹರಿದಾಸ ಪಂಥದ ಮಹಿಳೆ (ಕರ್ನಾಟಕದ) ಬಗ್ಗೆ ಕೇಳಿಲ್ಲ.
ಸಿರಿಗನ್ನಡಂ ಗೆಲ್ಗೆ, ಸಿರಿಗನ್ನಡಂ ಬಾಳ್ಗೆ
ಉ: ಒಂದು ಕೆಟ್ಟ ದಾಸರ ಪದ
ಶ್ರೀಯುತ ಅನಿವಾಸಿಯವರೆ,
ಹಂಸಾನಂದಿಯವರು ಹೇಳಿದ ಹಾಗೆ ಕೆಟ್ಟ ಅನ್ನುವ adjective ದಾಸರಿಗೆ ಸೇರಿಸಬಾರದಾಗಿತ್ತು. ಅವರು ಕೊಟ್ಟಿರುವ ಅನೇಕ ವಜ್ರ ವೈಡೂರ್ಯ ಆಭರಣಗಳ ನಡುವೆ ಒಂದೆರಡು ಗಾಜು ಸೇರಿದರೆ ಕಡೆಗಣಿಸಬಹುದಲ್ಲವೆ?
ಶೈಲಾಸ್ವಾಮಿ
ಉ: ಒಂದು ಕೆಟ್ಟ ದಾಸರ ಪದ
ಅನಿವಾಸಿಗಳೇ....
ಉಶ್... !!
ಹರಿದಾಸರು ಕೂಡ ತಾರತಮ್ಯವಾದಿಗಳೇ.. ಅವರು ಶಿವನಂನು ಹರಿಯ ಚರಣದಾಸನಂನಾಗಿ ಮಾಡಿಲ್ಲವೇ!!
ದಾಸ ಸಾಹಿತ್ಯ ನಿಮಗೆ ಹೊಂದದು.. ವಚನ ಕಡೆಯೇ ನಿಮ್ಮ ನಡೆ ಚಂದ!
ದಯವಿಟ್ಟು ಮನುಸ್ಮೃತಿಯನ್ನು ನೀವು ಓದಲೇ ಬೇಡಿ... ಅದರಲ್ಲಿ ಇದರ ತಾತನಂತ ಸಾಲುಗಳಿವೆ.
ನಾನು ಇನ್ನೂ ವಿವರಿಸಿ ಹೇಳುವ ಸ್ತಿತಿಯಲ್ಲಿಲ್ಲ.. ( ನಿಮಗೆ ತಿಳಿದಿದೆ
)
=====================================
ಮಾಯ್ಸ!