ಅನಿವಾಸಿ
*~*~*~*
೭೫ ವರ್ಷ ತುಂಬಿದ ಸೇತುವೆ
ಹೋದ ಭಾನುವಾರ (ಮಾರ್ಚ್ ೧೮) ಸಿಡ್ನಿ ಹಾರ್ಬರ್ ಬ್ರಿಡ್ಜ್‌ಗೆ ೭೫ ವರ್ಷ ತುಂಬಿದೆ. ಅದರ ನಿಮಿತ್ತ ಎಲ್ಲರಿಗೂ ಆ ದಿನ ಸೇತುವೆ ಹಾಯಲು ಅವಕಾಶವಿತ್ತು. ಮೊದಲೇ ನೋಂದಾಯಿಸಿಕೊಂಡು ೧೧ ಗಂಟೆಗೆ ನಾವೂ ಹಾಯ್ದೆವು.
ಆಸ್ಟ್ರೇಲಿಯಾದಲ್ಲಿ ಒಂದು ಪರಂಪರೆಯಿದೆ. ಯಾವುದೇ ಹೊಸ ಸೇತುವೆಯೋ, ಕಟ್ಟಡವೋ ಕಟ್ಟಿದರೆ ಅದರ ಉದ್ಘಾಟನೆಯ ದಿನ 'ಜನ ಸಾಮಾನ್ಯ'ರಿಗೆ ಅದನ್ನು ಹೊಗುವ, ಸುತ್ತುವ, ಹಾಯುವ ಅವಕಾಶ ಕಾರ್ಯಕ್ರಮದ ಅವಿಭಾಜ್ಯ ಅಂಗವಾಗಿರುತ್ತದೆ. ನನಗೆ ಗೊತ್ತಿರುವ ಹಾಗೆ, ಸಿಡ್ನಿಯ ಆನ್‌ಝಾಕ್ ಸೇತುವೆ, ಹಾರ್ಬರಿನಡಿಯ ಸುರಂಗದಾರಿ, ಒಲಂಪಿಕ್ ಸ್ಟೇಡಿಯಂ ಉದ್ಘಾಟಿಸಿದಾಗ ಇದನ್ನು ಮಾಡಿದ್ದರು. ನಾನೂ ಒಲಂಪಿಕ್ ಸ್ಟೇಡಿಯಂ ಜನರಿಗೆ ತೆರೆದಾಗ ಹೋಗಿ ಸುತ್ತಿ ಬಂದಿದ್ದೆ.
೧೯೩೦ರ ಅತೀವ ಡಿಪ್ರೆಷನ್ ಸಮಯದಲ್ಲಿ ಕಟ್ಟಲಾದ ಈ ಸೇತುವೆಗೆ ಆಗ ತೀವ್ರ ವಿರೋಧವಿತ್ತಂತೆ. ಆದರೆ ನ್ಯೂ ಸೌತ್ ವೇಲ್ಸ್ ಸರ್ಕಾರ ಹಟ ಬಿಡದೆ ಸಾಲ ಮಾಡಿ ಕಟ್ಟುವುದನ್ನು ಪೂರೈಸಿತಂತೆ. ಅದರ ಮೇಲಿನ ಸಾಲ ೧೯೮೬ರಲ್ಲಿ ಪೂರ್ಣವಾಗಿ ತೀರಿಸಿತಂತೆ!
ಸೇತುವೆ ಕಟ್ಟುವಾಗ ಪ್ರಾಣತೆತ್ತ ೧೬ಮಂದಿಯ ಸ್ಮರಣಾರ್ಥ ಒಂದು ಫಲಕವನ್ನು ಈ ಸಲ ಅನಾವರಣಗೊಳಿಸಲಾಯಿತು. ಇಷ್ಟು ವರ್ಷ ಅದು ಆಗದೇ ಇದ್ದದ್ದು ನಿಜವಾಗಲೂ ಆಶ್ಚರ್ಯವೇ! ಸೇತುವೆ ಕಟ್ಟುವಾಗ ಪ್ರಾಣ ತೆತ್ತವರ, ಕೆಲಸ ಮಾಡಿದವರ ಮೊಮಕ್ಕಳು ಹೆಮ್ಮೆಯಿಂದ ತಮ್ಮ ಮಕ್ಕಳೊಂದಿಗೆ ಸೇತುವೆ ಹಾಯ್ದರು.
ಸಿಡ್ನಿಯ ಉತ್ತರಭಾಗ ಮತ್ತು ದಕ್ಷಿಣ ಭಾಗವನ್ನು ಕೂಡಿಸುವ ಕನಸು ಹೊತ್ತು ನಿರ್ಮಿತವಾದ ಈ ಸೇತುವೆ, ಶ್ರೀಮಂತ ಉತ್ತರವನ್ನು, ಅಷ್ಟು ಶ್ರೀಮಂತವಲ್ಲದ ದಕ್ಷಿಣವನ್ನು ಒಂದುಗೂಡಿಸಿತೆ ಎನ್ನುವುದು ಇನ್ನೂ ಪ್ರಶ್ನೆಯಾಗಿಯೇ ಉಳಿದಿದೆ. ಸುಮಾರು ೨೦೦ ಸಾವಿರ ಜನ ಸೇತುವೆ ದಾಟಿದ ಈ ದಿನ, ವರ್ಷ ೨೦೦೦ದ ಸಾರಿ ಡೇ (ಕ್ಷಮೆ ಕೋರುವ ದಿನ) ನೆನಪಿಗೆ ತಂದಿತು. ಆಸ್ಟ್ರೇಲಿಯಾ ತನ್ನ ಮೂಲನಿವಾಸಿಗಳನ್ನು ನಡೆಸಿಕೊಂಡ ರೀತಿಗೆ ಕ್ಷಮೆಯಾಚಿಸುವುದಕ್ಕಾಗಿ ಮಕ್ಕಳು ಮರಿಗಳ ಸಮೇತ, ವಯೋವೃದ್ಧರೂ ಸೇರಿ 'ಸಾಮಾನ್ಯ' ಜನರು ಅಸಮಾನ್ಯ ಕಾಳಜಿ ತೋರಿಸಿದ ದಿನವದು. ಅಂದು ಇದೇ ಸೇತುವೆಯನ್ನು ಸುಮಾರು ೨೫೦ ಸಾವಿರ ಜನರು ದಾಟಿದ್ದರೆ, ಆಸ್ಟ್ರೇಲಿಯಾದ ಉದ್ದಗಲಕ್ಕೂ ೫೦೦ ಸಾವಿರ ಜನ ತಮ್ಮ ಊರು ನಗರದ ಸೇತುವೆಗಳನ್ನು ದಾಟುವುದರ ಮೂಲಕ ತಮ್ಮ ಪರವಾಗಿ ಸರ್ಕಾರ ಕ್ಷಮೆಯಾಚಿಸಬೇಕೆಂದು ಕೋರಿತು. ನೋವಿನ ಸಂಗತಿಯೆಂದರೆ, ಇದೇ ಸರ್ಕಾರ ಆ ಕಾರ್ಯಕ್ರಮವನ್ನು "ಸಾಂಕೇತಿಕ ಸೋಗಲಾಡಿತನ" ಎಂಬಂಥ ನಿಲುವು ತಾಳಿ ತಿರಸ್ಕರಿಸಿತು!


- anivaasi ರವರ ಬ್ಲಾಗ್
- Login or register to post comments
- 415 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ



- ನಿರ್ವಾಹಕರ ಗಮನಕ್ಕೆ ತನ್ನಿ


RSS:
ಪ್ರತಿಕ್ರಿಯೆಗಳು
Re: ೭೫ ವರ್ಷ ತುಂಬಿದ ಸೇತುವೆ
ಆಸ್ಟ್ರೇಲಿಯಾ ಸರಕಾರದ ಸಂವೇದನಾ ಶೂನ್ಯತೆ ಇದೇನು ಹೊಸತಲ್ಲ. ತುವಾಲು ದ್ವೀಪ ಭೂತಾಪಮಾನದ ಏರಿಕೆಯಿಂದ ಮುಳುಗುವ ಭೀತಿಯಲ್ಲಿದೆ. ಇಲ್ಲಿರುವ ಕೆಲವು ಸಾವಿರ ಜನರಿಗೆ ಆಸ್ಟ್ರೇಲಿಯಾದಲ್ಲಿ ಆಶ್ರಯ ಕೋರಿದರೆ ಅದು ನಿರಾಕರಿಸಿಬಿಟ್ಟಿತು. ಭೂ ತಾಪಮಾನದ ಏರಿಕೆಗೆ ದೊಡ್ಡ ಕಾಣಿಕೆ ನೀಡುತ್ತಿರುವವರಲ್ಲಿ ಅಮೆರಿಕ ಜತೆಗೆ ಆಸ್ಟ್ರೇಲಿಯವೂ ಇದೆ ಎಂಬುದರ ಹಿನ್ನೆಲೆಯಲ್ಲಿ ಈ ನಿರಾಕರಣೆಯನ್ನು ನೋಡಬೇಕು. UNFCCಯ CoP-8 ಭಾರತದಲ್ಲಿ ನಡೆದಾಗ ತುವಾಲುವಿನ ಪ್ರತಿನಿಧಿ ಇದನ್ನು ವಿಶ್ವರಾಷ್ಟ್ರಗಳ ಮುಂದೆ ಬಹಳ ಚೆನ್ನಾಗಿ ವಿವರಿಸಿದ್ದರು.
ಇಸ್ಮಾಯಿಲ್
ನನ್ನ ಬ್ಲಾಗ್: http://ismail.sampada.net
Re: ೭೫ ವರ್ಷ ತುಂಬಿದ ಸೇತುವೆ
ಹೌದು, ಹಿರಿಯಣ್ಣ ಅಮೇರಿಕದ ಬೆನ್ನಿನ ಮೇಲೆ ಸವಾರಿ ಮಾಡುವ ಚಪಲ ಆಸ್ಟ್ರೇಲಿಯಾಕ್ಕೆ! ಪೆಸಿಫಿಕ್ ಸುತ್ತೆಲ್ಲಾ ಗೌಡಗಾರಿಕೆ ನಡೆಸುವ ಹಂಬಲ
ಇನ್ನೊಂದು ವಿಷಯವೇನೆಂದರೆ, ಅಮೇರಿಕ ಜತೆಗೂಡಿ ಕ್ಯೋಟೋ ಪ್ರೋಟೋಕಾಲ್ ಸಹಿ ಮಾಡುವುದಿಲ್ಲ ಎಂದು ಈ ಸರ್ಕಾರ ತೆಗೆದುಕೊಂಡ ನಿಲುವು ಬಹುಶಃ ಅದನ್ನು ಚುನಾಯಿಸಿದ ಜನಗಳ ಆಸೆಯ ವಿರುದ್ಧವಾದ್ದು ಅಂತ ನನ್ನ ಎಣಿಕೆ. ಯಾಕೆಂದರೆ, ಆಸ್ಟ್ರೇಲಿಯಾದ ಜನ ನಿಜವಾಗಿಯೂ ಭೂ-ತಾಪಮಾನದ ಬಗ್ಗೆ ಕಳಕಳಿ ಹೊಂದಿದ್ದಾರೆ. ಇತ್ತೀಚೆಗಷ್ಟೆ ರಾಜ್ಯ ಸರ್ಕಾರ ಒಂದು ಯೋಜನೆಯಡಿ, ಮನೆಮನೆಯಲ್ಲೂ incandescent ದೀಪಗಳನ್ನು ತೆಗೆದು, ಕಡಮೆ ಎಲೆಕ್ಟ್ರಿಸಿಟಿ ವ್ಯಯಿಸುವ ಹೊಸ ಬಗೆಯ ದೀಪಗಳನ್ನು ಹಾಕಿಸುವ ಯೋಜನೆ ಹಾಕಿಕೊಂಡೊಡನೆ ಹಲವಾರು ಜನ ಅದನ್ನು ಮಾಡಿಸಲು ಮುಂದಾಗಿದ್ದಾರೆ. ನಾನೂ ಅದನ್ನು ಮಾಡಿಸಲು ಬುಕ್ ಮಾಡಿ ಒಂದು ವಾರದ ಮೇಲೆ ಕಾಯಬೇಕಾಗಿ ಬಂತು. ಈಗ ಇನ್ನೂ ಹೆಚ್ಚು ಕಾಯಬೇಕಾಗಿದೆಯಂತೆ.
ಸರ್ಕಾರ ಕನ್ಸರ್ವೆಟಿವ್ ಆದಷ್ಟೂ ಜನ radicalize ಆಗುತ್ತಾರೆಯೆ ಎಂದು ನನ್ನ ಗುಮಾನಿ. ಥ್ಯಾಚರ್‌ನ ಇಂಗ್ಲೇಂಡಿನಲ್ಲೂ ಹೀಗಾಯಿತು ಎಂದು ಕೇಳಿದ್ದೇನೆ. ಆಸ್ಟ್ರೇಲಿಯಾದಲ್ಲಂತು ಸ್ವಲ್ಪ ಮಟ್ಟಿಗೆ ಇದು ನಿಜ. ಅಮೇರಿಕ ಮತ್ತು ಭಾರತದ ಬಗ್ಗೆ ಮಾತ್ರ ನನಗಿನ್ನೂ ಇದು ಹೌದು ಅನಿಸಿಲ್ಲ.