ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಸಂದರ್ಶನ
  • ಚರ್ಚೆ
  • ಚಿತ್ರಪುಟಗಳು
  • ಪುಸ್ತಕಗಳು
  • ಆರ್ಕೈವ್

ಸುಧಾ ಮ್ಯಾಗಜೀನ್ ಓದಲು ಒಂದು ಫೈರ್ಫಾಕ್ಸ್ ಪ್ಲಗಿನ್

  • ಸಂಪರ್ಕಿಸಿ
  • ಸಂಪದ ಫೌಂಡೇಶನ್
  • Font Help
ಸಂಪದ › Sampada Blogs › anmanjunath ರವರ ಬ್ಲಾಗ್

ನಮಸ್ಕಾರ ಸ್ವಾಮಿ

ಕೆಲವು ಅನಿಸಿಕೆಗಳು, ಬರಹಗಳು, ವಿಚಾರಗಳು.

"ಈ ದೇಶದಲ್ಲಿ ಗಾಂಧೀ ಚಿತ್ರ ಅಂಟಿಸುವುದು ಅಪರಾಧವಾಯಿತೇ ?"

August 16, 2008 - 4:56pm — anmanjunath

"ಈ ದೇಶದಲ್ಲಿ ಗಾಂಧೀ ಚಿತ್ರ ಅಂಟಿಸುವುದು ಅಪರಾಧವಾಯಿತೇ ?"
***********************************

ಆಗಸ್ಟ್ ತಿಂಗಳು ಬಂದಿತೆಂದರೆ, ಮನಸ್ಸು ಭಾರವಾಗಿಬಿಡುತ್ತದೆ. ಶ್ರಾವಣ - ಭಾದ್ರಪದಗಳ ಹಬ್ಬಸಾಲಿನ ಸಂಭ್ರಮ ಹಿಂದೆ ಸರಿದು, ಅಂತರಂಗದಲ್ಲಿ, ಸುಭಾಷ್ ಚಂದ್ರ ಬೋಸ್, ಗಾಂಧೀಜಿ, ಆಜಾದ್ ಚಂದ್ರಶೇಖರ್, ಭಗತ್ ಸಿಂಗ್ ಅವರ ನುಡಿಗಳ ಧೀಂ - ಧೀಂ ರಿಂಗಣ ಆರಂಭವಾಗಿಬಿಡುತ್ತದೆ. ನಿಜ, ನಮ್ಮಂತಹ ಸ್ವಾತಂತ್ರ್ಯೋತ್ತರ ಭಾರತಮಾತೆಯ ತನುಜಾತರಿಗೆ, ಸ್ವಾತಂತ್ರ್ಯ ಹೋರಾಟವು ಲೈಬ್ರರಿಗಳ ಧೂಳು ಹಿಡಿದ ಪುಸ್ತಕಗಳ ನಡುವಿನ ಆಕ್ರಂದನ ಮಾತ್ರ. ನಾವು ಹೇಗಿದ್ದೆವು, ಈಗ ಹೇಗಿದ್ದೇವೆ, ನಮ್ಮ ಪರಂಪರೆ ಎಂತಹುದು, ಬ್ರಿಟಿಷರ ಬೂಟುಗಾಲುಗಳ ಅಡಿ ಹುಳುಗಳಿಗಿಂತ ಕಡೆಯಾಗಿ ಬಿದ್ದಿದ್ದೆವೇಕೆ, ಎಂದೆಲ್ಲಾ ಕೇಳಿಕೊಂಡು ಆಸಕ್ತಿ ವಹಿಸಿ ಹಿರಿಯರನ್ನು ಕೇಳಿ, ಅವರ ಸ್ಮೃತಿಚಿತ್ರಗಳನ್ನು ದಾಖಲಿಸಿಕೊಂಡರೆ, ಈ ಸ್ವಾತಂತ್ರ್ಯ ಎನ್ನುವುದು ಒಂದಿಷ್ಟು ಅರ್ಥವಾದೀತು. ನಮ್ಮ ಜನರ ಹೋರಾಟದ ಆಯಾಮಗಳನ್ನು ಅರಿಯುವಲ್ಲಿ, ನಮಗೆ ಮುತುವರ್ಜಿ ಇಲ್ಲವೆಂದಾದರೆ, ಸ್ವಾತಂತ್ರ್ಯ ದಿನಾಚರಣೆಯು ಬರಿಯ ಒಂದು ನಿರರ್ಥಕ ರಜೆಯೆನಿಸಿಬಿಡುತ್ತದೆ.

ಗಾಂಧೀಜಿ - ನೆಹರೂ ಇಬ್ಬರೇ ಈ ಸ್ವಾತಂತ್ರ್ಯ ತಂದುಕೊಟ್ಟರು ; ರಕ್ತಪಾತವಿಲ್ಲದೆ ಹೀಗೆ ಸ್ವಾತಂತ್ರ್ಯ ಗಳಿಸಿದ್ದು ನಮ್ಮ ದೇಶ ಮಾತ್ರ ; ಅಹಿಂಸೆಯೊಂದೇ ಗೆಲುವಿಗೆ ಕಾರಣ, ಇತ್ಯಾದಿ, ಇತ್ಯಾದಿ ವಿಚಾರಗಳ ಪರಿಸರದಲ್ಲಿ ಬೆಳೆದ ನನಗೆ ಭಾರತ ಸ್ವಾತಂತ್ರ್ಯ ಹೋರಾಟದ ವಿಭಿನ್ನ ಧಾರೆಗಳ ಕೊಡುಗೆಯ ಅರಿವಾದುದು, ಅನೇಕ ವಿಚಾರವಂತರ ಪರಿಚಯವಾದ ಮೇಲೆ, ಅನೇಕ ಮಹತ್ತ್ವದ ಗ್ರಂಥಗಳನ್ನು ಓದಿದ ಮೇಲೆ. ಈ ನಡುವೆ, 1972ರಲ್ಲಿ ಭಾರತ ಸ್ವಾತಂತ್ರ್ಯದ ಬೆಳ್ಳಿ ವರ್ಷಾಚರಣೆಯ ಸಿದ್ಧತೆ ನಡೆಯಿತು. ನಮ್ಮ ದೊಡ್ಡಪ್ಪ ಓರ್ವ ಸ್ವಾತಂತ್ರ್ಯ ಹೋರಾಟಗಾರರು. ಬ್ರಿಟಿಷರ ಆಡಳಿತದಲ್ಲಿ ಸೆರೆವಾಸವನ್ನೂ ಅನುಭವಿಸಿದವರು. ಮಗ ಮೃತ್ಯುಶಯ್ಯೆಯಲ್ಲಿದ್ದಾಗ, ಕ್ಷಮಾಯಾಚನೆ ಪತ್ರ ಬರೆದುಕೊಟ್ಟು ಬಿಡುಗಡೆ ಆಗಬಹುದಿತ್ತು. ಹಾಗೆ ಮಾಡದ ನಿಜವಾದ ಸತ್ಯಾಗ್ರಹಿ ಅವರು. ಅವರಿಗೆ ಡಾ|| ಸೂರ್ಯನಾಥ ಕಾಮತರು ಪತ್ರ ಬರೆದು ಸ್ವಾತಂತ್ರ್ಯ ಸಂಗ್ರಾಮದ ಸ್ಮೃತಿಗಳನ್ನು ಬರೆದುಕೊಡುವಂತೆ ಕೇಳಿದ್ದರು. ದೊಡ್ಡ ಇತಿಹಾಸಕಾರರೂ, ಲೇಖಕರೂ ಆದ ಕಾಮತರು ಪತ್ರ ಬರೆದುದು ನಮಗೆಲ್ಲಾ ವಿಶೇಷವೆನಿಸಿತ್ತು.

ಮೂವತ್ತರ ದಶಕದಲ್ಲಿಯೇ "ವಿಶ್ವಕರ್ಣಾಟಕ" ಪತ್ರಿಕೆಯ ಪ್ರತಿನಿಧಿಯಾಗಿದ್ದ ಹಾಗೂ ಸ್ವತಃ ಲೇಖಕರೂ ಆಗಿದ್ದ ನಮ್ಮ ತಂದೆ, ನಮ್ಮ ದೊಡ್ಡಪ್ಪನವರ ಸ್ವಾತಂತ್ರ್ಯ ಹೋರಾಟಕ್ಕೆ ಬೆಂಬಲ - ಆಧಾರ ನೀಡಿದಂತಹವರು. ಅವರು ನನ್ನನ್ನು ಕರೆದು, ಇನ್ನುಳಿದ ಸ್ವಾತಂತ್ರ್ಯ ಹೋರಾಟಗಾರರನ್ನು ಸಂದರ್ಶಿಸಿ, ಅವರ ಸ್ಮೃತಿಗಳನ್ನು ದಾಖಲಿಸುವಂತೆ ಹೇಳಿದರು. ಅದು ನನಗೆ - ನನ್ನ ಬರವಣಿಗೆಗೆ ದೊರೆತ ಮೊದಲ 'ಅಸೈನ್ ಮೆಂಟ್'. ನಮ್ಮ ದೊಡ್ಡಪ್ಪನವರ ಜೊತೆಗೇ ಸೆರೆವಾಸ ಅನುಭವಿಸಿದ್ದ ಇಬ್ಬರು ಹಿರಿಯರನ್ನು ಕಂಡು ಎರಡು ಲೇಖನಗಳನ್ನು ಸಿದ್ಧಪಡಿಸಿದೆ. ಅವರಲ್ಲಿ ಒಬ್ಬರಿಗೆ ಬರೀ ರುಜು ಹಾಕಲು ಬರುತ್ತಿತ್ತು. ಇನ್ನೊಬ್ಬರಂತೂ ನಿರಕ್ಷರಿ. ನಮ್ಮ ದೊಡ್ಡಪ್ಪನವರ ಸ್ಮೃತಿಗಳೊಂದಿಗೆ, ಈ ಎರಡು ಬರಹಗಳನ್ನೂ ಡಾ|| ಕಾಮತರಿಗೆ ಕಳುಹಿಸಲಾಯಿತು. ಕಾಮತರು ಪತ್ರ ಬರೆದು, "ಬರಹಗಳು ಚೆನ್ನಾಗಿವೆ. ಆದರೆ ಅವುಗಳನ್ನು ಸ್ವತಃ ಆ ಸ್ವಾತಂತ್ರ್ಯ ಹೋರಾಟಗಾರರೇ ಬರೆದಂತೆ, ನಿರೂಪಣೆಯನ್ನು ಕೊಂಚ ಬದಲಿಸಿ ಮುದ್ರಿಸುತ್ತೇವೆ.", ಎಂದರು.

ಮೂರೂವರೆ ದಶಕಗಳ ನಂತರ, ಆ ಸ್ವಾತಂತ್ರ್ಯ ಹೋರಾಟಗಾರರನ್ನು ನೆನೆದಾಗ ಅಚ್ಚರಿ ಮೂಡುವುದು, ಇಂತಹ ಹಳ್ಳಿಯ ಜನರಲ್ಲಿ, ಓದು - ಬರಹ ಬಾರದ ಮುಗ್ಧರಲ್ಲಿ, ಸ್ವಾತಂತ್ರ್ಯದ ಬೀಜಗಳನ್ನು ಆ ಗಾಂಧೀಜಿ ಬಿತ್ತಿದ್ದಾದರೂ ಹೇಗೆ, ಎಂದೇ ?. ಇಪ್ಪತ್ತನೆಯ ಶತಮಾನದ ಪೂರ್ವಾರ್ಧದ ಐತಿಹಾಸಿಕ ದಾಖಲೆಗಳು, ಇಂತಹ ಸಾವಿರಾರು - ಲಕ್ಷಾವಧಿ ಹೋರಾಟಗಾರರನ್ನು ಪರಿಚಯಿಸುತ್ತದೆ. ನೋಡಲು ಆಕರ್ಷಕವಾಗಿರದಿದ್ದ, ತೀರ ಸಾಧಾರಣ ಕಂಠಶ್ರೀಯ ಆ ಗಾಂಧಿ, ಗುಜರಾತಿನ ಮೂಲೆಯ ಸಬರ್ಮತಿ ಆಶ್ರಮದಲ್ಲಿ ಕುಳಿತು ಕೋಟಿ ಕೋಟಿ ಭಾರತೀಯರಿಗೆ, ಪ್ರೇರಣೆ ನೀಡಿದ್ದಾದರೂ ಹೇಗೆ ?. ಇಂದಿನ ಆಧುನಿಕ ಸಂವಹನ ಮಾಧ್ಯಮಗಳಿರದ, ಆ ಕಾಲಘಟ್ಟದಲ್ಲಿ ಖಾದಿ, ಗ್ರಾಮೋದ್ಧಾರ, ಪಂಚಾಯತ್ ರಾಜ್, ಗೋರಕ್ಷಣೆ, ಸ್ತ್ರೀ ವಿಮೋಚನೆಗಳ ವಿಶಿಷ್ಟ ಯೋಜನೆಗಳನ್ನು ಪ್ರಚುರಪಡಿಸಿದ್ದಾದರೂ ಹೇಗೆ ?. ನಿಜಕ್ಕೂ ವಿಸ್ಮಯವೇ !

ದುರಂತವೆಂದರೆ ಗಾಂಧೀಜಿಯವರ ಘೋಷಿತ ಉತ್ತರಾಧಿಕಾರಿ ನೆಹರೂ ಆಗಲೀ, ನೆಹರೂ ಅವರ ಅಘೋಷಿತ ಉತ್ತರಾಧಿಕಾರಿ ಇಂದಿರಾ ಆಗಲೀ , ಅವರ ಬಾಲಬಡುಕರಾಗಲೀ, ಗಾಂಧೀ ಪ್ರಣೀತ ಯೋಜನೆಗಳನ್ನು ಅನುಷ್ಠಾನಕ್ಕೆ ತರುವಲ್ಲಿ ಆಸಕ್ತಿ ವಹಿಸಲೇ ಇಲ್ಲ. ಕಾಂಗ್ರೆಸ್ಸಿಗರು ಲೈಸೆನ್ಸ್ - ಪರ್ಮಿಟ್ಟುಗಳನ್ನು ನೀಡಿ ದುಡ್ಡು ಮಾಡುವುದು ಹೇಗೆ, ಯೋಜನೆಗಳನ್ನು ಸ್ವಲಾಭಕ್ಕೆ ಬಳಸಿಕೊಳ್ಳುವುದು ಹೇಗೆ , ಇಂತಹ ಮನುಮುರುಕ ವಿದ್ಯೆಗಳಲ್ಲಿ ಮುಳುಗಿದರು. ಭ್ರಷ್ಟಾಚಾರ, ಹಣದುಬ್ಬರ, ಬೆಲೆಯೇರಿಕೆಗಳು ಜನರನ್ನು ಕಂಗೆಡಿಸಿ ಹತಾಶೆಯತ್ತ ತಳ್ಳಿದವು. 1974ರ ಹೊತ್ತಿಗೆ ಅರಾಜಕತೆಯ ಸ್ಥಿತಿ ತಾಂಡವವಾಡುತ್ತಿತ್ತು. ರಾಜಕೀಯದಿಂದ ದೂರವುಳಿದಿದ್ದ ಜಯಪ್ರಕಾಶ ನಾರಾಯಣರಂತಹವರು, ದೇಶವನ್ನು ಉಳಿಸಲು ಪ್ರತಿಭಟನೆಯ -ಸತ್ಯಾಗ್ರಹದ ನೇತೃತ್ವ ವಹಿಸಬೇಕಾಯಿತು.

ತಮ್ಮ ಅಧಿಕಾರ ಉಳಿಸಿಕೊಳ್ಳಲು ಯಾವ ಮಟ್ಟಕ್ಕೆ ಬೇಕಾದರೂ ಇಳಿಯಲು ಸಿದ್ಧರಾದ ಇಂದಿರಾ ಗಾಂಧಿಯವರು 1975ರಲ್ಲಿ ತುರ್ತುಪರಿಸ್ಥಿತಿ ಹೇರಿದರು. ವಾಕ್ ಸ್ವಾತಂತ್ರ್ಯ, ಪತ್ರಿಕಾ ಸ್ವಾತಂತ್ರ್ಯಗಳ ಹರಣವಾಯಿತು. ಆ ವರ್ಷದ ಗಾಂಧೀಜಯಂತಿ ಒಂದು ವಿಶೇಷ ಸಂದೇಶ ಹೊತ್ತು ತಂದಿತು. ಆದರೆ ಆ ಸಂದೇಶವು, ಸರಕಾರದ ಕಾರ್ಯಕ್ರಮಗಳ ಭಾಗವಾಗಿ ಮೂಡಿಬಂದಿರಲಿಲ್ಲ. ಆ ದಿನಗಳಲ್ಲಿ ಗಾಂಧೀ ಜಯಂತಿ ಆಚರಿಸಿದವರು ಭೂಗತ ಕಾರ್ಯಕರ್ತರು. ಎದೆಯ ಮೇಲೆ ಧರಿಸಲು ಗಾಂಧೀ ಬಿಲ್ಲೆಗಳು, ಗೋಡೆಗಳನ್ನು ಅಲಂಕರಿಸಲು ಗಾಂಧೀ ಭಿತ್ತಿಚಿತ್ರಗಳು. ಎರಡರಲ್ಲೂ ಗಾಂಧೀ ಚಿತ್ರದ ಕೆಳಗೆ, "ಅಸತ್ಯ, ಅನ್ಯಾಯ, ದಬ್ಬಾಳಿಕೆಗಳಿಗೆ ತಲೆ ಬಾಗುವುದು ಹೇಡಿತನ", ಎನ್ನುವ ಗಾಂಧೀ ಉಕ್ತಿ. ಆದರೆ ಅಂದಿನ ಇಂದಿರಾ - ದೇವರಾಜ ಅರಸು ಅವರ ಕಾಂಗ್ರೆಸ್ ಸರಕಾರಗಳಿಗೆ ಗಾಂಧಿಯ ಚಿತ್ರ, ಗಾಂಧಿಯ ಉಕ್ತಿ, ಗಾಂಧಿಯ ನೆನಪು ಎಲ್ಲಾ ನಿಷಿದ್ಧವಾಗಿತ್ತು.

ಗಾಂಧೀ ಭಿತ್ತಿಪತ್ರ ಅಂಟಿಸುತ್ತಿದ್ದ ಹಲವಾರು ಜನರನ್ನು ಪೋಲೀಸರು ಬಂಧಿಸಿದರು. ಅಹಿಂಸೆ, ಅಹಿಂಸೆ ಎಂದ ಆ ಮಹಾಮಹಿಮನ ಚಿತ್ರ ಹಿಡಿದಿದ್ದಕ್ಕೆ ಪೋಲೀಸರು ಬಡಿದರು, ಹೊಡೆದರು, ತುಳಿದರು. ಹಲವೆಡೆ ಸತ್ಯಾಗ್ರಹಿಗಳನ್ನು ಬಂಧಿಸಿ, ಅವರ ಮೇಲೆ ಮೊಕದ್ದಮೆ ಹೂಡಲಾಯಿತು. ಆಪಾದಿತರನ್ನು, ಪೋಲೀಸರು, ನ್ಯಾಯಾಧೀಶರ ಮುಂದೆ ತಂದು ನಿಲ್ಲಿಸಿದಾಗ, ನ್ಯಾಯಾಧೀಶರು ತಮ್ಮ ಕಣ್ಣು - ಕಿವಿಗಳನ್ನು ನಂಬದಾದರು. "ಏನು, ಈ ದೇಶದಲ್ಲಿ ಗಾಂಧೀ ಚಿತ್ರ ಅಂಟಿಸುವುದು ಕ್ರಿಮಿನಲ್ ಅಪರಾಧವಾಯಿತೇ?", ಎಂದು ಪ್ರಶ್ನಿಸಿದರು. ಇದಕ್ಕೆ ಪೊಲೀಸರು ಏನು ಹೇಳಿಯಾರು ! "ಇವರೆಲ್ಲಾ ಆರೆಸ್ಸೆಸ್ ಕಾರ್ಯಕರ್ತರು", ಎಂಬ ನೆಪ ಹೇಳಿದರು. "ಇರಬಹುದು, ಆದರೆ ಇವರು ಮಾಡಿದ ಅಪರಾಧವಾದರೂ ಏನು?" ಎಂದ ನ್ಯಾಯಾಧೀಶರ ಪ್ರಶ್ನೆಗಳಿಗೆ ಪೊಲೀಸರು ನಿರುತ್ತರರಾದರು. ನ್ಯಾಯಾಧೀಶರು ಪೊಲೀಸರಿಗೆ ಛೀಮಾರಿ ಹಾಕಿ, ಬಂಧಿತರನ್ನು ಬಿಡುಗಡೆ ಮಾಡಿದರು.

ಹಿಂದೆ ಉಪ್ಪಿನ ಸತ್ಯಾಗ್ರಹದಲ್ಲಿ, ಭಾರತ್ ಛೋಡೋ ಚಳವಳಿಯಲ್ಲಿ ಭಾಗವಹಿಸಿ, "ವಂದೇಮಾತರಂ", "ಮಹಾತ್ಮಾ ಗಾಂಧೀ ಕೀ ಜೈ', "ಬೋಲೋ ಭಾರತಮಾತಾ ಕೀ ಜೈ', ಎಂದು ಘೋಷಿಸುತ್ತಿದ್ದವರ ಮೇಲೆ ಬ್ರಿಟಿಷ್ ಪೊಲೀಸರ ಲಾಠಿ ಏಟು, ಬೂಟಿನೇಟು ಬೀಳುತ್ತಿತ್ತು. "ಸ್ವಾತಂತ್ರ್ಯ" ಬಂದ ಮೇಲೂ ಹಾಗೆ ಘೋಷಣೆ ಕೂಗಿದವರ ಮೇಲೆ, ಕಾಂಗ್ರೆಸ್ ಸರಕಾರದ ಪೊಲೀಸರ ಲಾಠಿ ಏಟು ಬಿದ್ದುದು ಬರಿಯ ವಿಸ್ಮಯದ - ವಿಷಾದ ಭಾವದ ಮಾತಲ್ಲ. ಸ್ವಾತಂತ್ರ್ಯದ ಪರಿಕಲ್ಪನೆಯನ್ನು ನಾವು ಸರಿಯಾಗಿ ಅರ್ಥ ಮಾಡಿಕೊಳ್ಳದೆಯೇ ರಾಜಕೀಯ ಮಾಡುವ ಪಕ್ಷಗಳನ್ನು ಬೆಂಬಲಿಸಿ ಮತ ಹಾಕುವುದರ ದುಷ್ಪರಿಣಾಮಗಳ ಅಂತಿಮ ಹಂತವಿದು.

ದೊಡ್ಡ ಗಾಂಧೀವಾದಿ ಪ್ಯಾರೇಲಾಲರು "Mahatma Gandhi : The Last Phase", ಎನ್ನುವ ಬೃಹತ್ ಗ್ರಂಥ ರಚಿಸಿದ್ದಾರೆ. ಅದನ್ನು ಗಾಂಧೀವಾದಿ ದಿ|| ಕೆ.ವಿ.ಶಂಕರೇಗೌಡರು "ಮಹಾತ್ಮಾ ಗಾಂಧಿ : ಅಂತಿಮ ಹಂತ" , ಎಂದು ಅನುವಾದಿಸಿದ್ದಾರೆ. ಮೈಸೂರು ವಿಶ್ವವಿದ್ಯಾಲಯವು ಹೊರತಂದಿರುವ ಈ ಸಂಪುಟಗಳು ಓದಲೇಬೇಕಾದ ಅಪೂರ್ವ ಮಾಹಿತಿಗಳನ್ನು, ದಾಖಲೆಗಳನ್ನು, ಸಂಗತಿಗಳನ್ನು ಒಳಗೊಂಡಿದೆ.

"ವಿಧಾನ ಪರಿಷತ್ತು ಮತ್ತು ವಿಧಾನಸಭೆಯ ಸದಸ್ಯರನೇಕರು, "ಗಾಳಿ ಬಂದಾಗ ತೂರಿಕೋ", ಎನ್ನುವ ರೀತಿಯಲ್ಲಿ ಹಣ ಮಾಡಲು ಹೊರಟಿದ್ದಾರೆ. ಕಾಂಗ್ರೆಸ್ಸಿನಲ್ಲಿ ತಲೆದೋರಿರುವ ಗುಂಪುಗಾರಿಕೆ ಮತ್ತು ಮಂತ್ರಿಗಳ ದೌರ್ಬಲ್ಯ ಕಂಡ ಜನರಲ್ಲಿ ಒಂದು ಬಗೆಯ ದಂಗೆಯ ಮನೋಭಾವ ಮೂಡುತ್ತಿದೆ. ಜನರು ಬ್ರಿಟಿಷ್ ಸರಕಾರವೇ ವಾಸಿಯಾಗಿತ್ತು ಎನ್ನುತ್ತಿದ್ದಾರಲ್ಲದೆ, ಕಾಂಗ್ರೆಸ್ಸನ್ನು ಹಳಿಯುತ್ತಿದ್ದಾರೆ. ಡಿಸೆಂಬರ್ 1947ರಲ್ಲಿ, ಮತ್ತೆ ಗಾಂಧೀಜಿ ಹೇಳಿದರು, " ಕಾಂಗ್ರೆಸ್ಸಿನಂತಹ ಬೃಹತ್ ಸಂಸ್ಥೆಗಳಿಂದ ಭ್ರಷ್ಟಾಚಾರ, ಅಸತ್ಯ, ಮುಂತಾದ ಪೀಡೆಗಳನ್ನು ಉಚ್ಚಾಟಿಸದೇ ಹೋದರೆ, ನಾಲ್ಕೂ ಕಡೆಯಿಂದ ಸ್ವಾರ್ಥಿಗಳು ಕಾಂಗ್ರೆಸ್ಸನ್ನು ಮುತ್ತಿ, ಈ ಸಂಸ್ಥೆ ಧೂಳೀಪಟವಾಗುತ್ತದೆ ಮತ್ತು ಹಾಗಾದಾಗ ಒಂದು ತೊಟ್ಟು ಕಣ್ಣೀರನ್ನೂ ನಾನು ಸುರಿಸುವುದಿಲ್ಲ. ದೊಡ್ಡ ರೋಗದಿಂದ ಬಳಲುತ್ತಿರುವ ರೋಗಿಯನ್ನು ಗುಣಮಾಡಲು ಸಾಧ್ಯವಿಲ್ಲದೇ ಹೋದರೆ, ರೋಗಿ ಸಾಯುವುದು ಮೇಲು". (ಪುಟ 721)

ಈ ಪರಿಪ್ರೇಕ್ಷ್ಯದಲ್ಲಿ, ಈ ಹಿನ್ನೆಲೆಯಲ್ಲಿ, ಸ್ವಾತಂತ್ರ್ಯದ ಪರಿಕಲ್ಪನೆಯ ಮೂಲದ್ರವ್ಯವು ನಮ್ಮಲ್ಲಿ ಅರ್ಥಪೂರ್ಣ ವಿಚಾರಗಳನ್ನು ಹೊಮ್ಮಿಸಲಿ, ಇತಿಹಾಸ, ಗಾಂಧೀಜಿ, ಸ್ವಾತಂತ್ರ್ಯ ಹೋರಾಟಗಾರರು ಮತ್ತೊಮ್ಮೆ ನಮ್ಮ ಮೇಲೆ ಬೆಳಕು ಚೆಲ್ಲಲಿ, ನಮ್ಮನ್ನು ಕವಿದಿರುವ ಕತ್ತಲನ್ನು ನೀಗಲಿ.

- ಮಂಜುನಾಥ ಅಜ್ಜಂಪುರ
anmanjunath@yahoo.com
9901055998

  • ಸ್ವಾತಂತ್ರ್ಯ ಪರಿಕಲ್ಪನೆ ಇತಿಹಾಸ
~.~
  • anmanjunath ರವರ ಬ್ಲಾಗ್
  • Login or register to post comments
  • 207 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Google
  • Yahoo
  • ನಿರ್ವಾಹಕರ ಗಮನಕ್ಕೆ ತನ್ನಿ

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
August 16, 2008 - 8:32pm — Chamaraj

ಉ: "ಈ ದೇಶದಲ್ಲಿ ಗಾಂಧೀ ಚಿತ್ರ ಅಂಟಿಸುವುದು ಅಪರಾಧವಾಯಿತೇ ?"

Chamaraj's picture

ಸಕಾಲಿಕ ಬರವಣಿಗೆ ಮಂಜುನಾಥ್‌ ಅವರೇ.

ಮಹಾತ್ಮಾ ಗಾಂಧಿ ಚಿತ್ರ ಅಂಟಿಸುವುದು ಇಂದಿರಾ ಗಾಂಧಿ ಪರಂಪರೆಗೆ ಖಂಡಿತ ಅಪಾಯಕಾರಿ. ಏಕೆಂದರೆ, ಮೂಲ ಗಾಂಧಿಯ ಸಂತಾನ ಎಂಬ ಭಾವನೆಯಲ್ಲೇ ೭೦ರ ದಶಕದ ಮತದಾರರು ಇಂದಿರಾಳನ್ನು ಬೆಂಬಲಿಸಿದ್ದರು. ನಂತರ, ಹೌದಪ್ಪಗಳ ತಲೆಮಾರೇ ಬಂದುಬಿಟ್ಟಿತು ಬಿಡಿ. ಅವರಿಗೆ ಗಾಂಧಿ ಎಂದರೆ ಇಂದಿರಾ, ರಾಜೀವ್‌, ಸೋನಿಯಾ ಹಾಗೂ ರಾಹುಲ್‌ ಮಾತ್ರ. ತುರ್ತು ಪರಿಸ್ಥಿತಿಯ ದಿನಗಳಲ್ಲಿ ಸಂಜಯ್‌ ಎಂಬ ಮಿನಿ ಹಿಟ್ಲರ್‌ ಇದ್ದ ಎಂಬುದನ್ನು ಬಿಟ್ಟರೆ, ಇದುವರೆಗೆ ಸ್ವತಂತ್ರ ಭಾರತವನ್ನಾಳಿದ್ದು ಈ ಗಾಂಧಿಗಳು ತಾನೆ?

ಈಗ ಆ ಗಾಂಧಿಗಳ ಹೊರತಾಗಿ ಕೆಲ ಗಾಂಧಿಗಳು, ಬೇಂದ್ರೆಗಳು ಬಂದಿದ್ದಾರೆ. ಅವರೇ ಪೂಜಾ ಗಾಂಧಿ ಮತ್ತು ಸೊನಾಲಿ ಬೇಂದ್ರೆ. ನನ್ನ ಪತ್ರಿಕೋದ್ಯಮ ಅನುಭವಗಳ ಪೈಕಿ ಈ ಗಾಂಧಿ-ಬೇಂದ್ರೆ ಅನುಭವವೂ ಒಂದು. ಧಾರವಾಡದಲ್ಲಿ ನಾನು ಪ್ರಜಾವಾಣಿ ವರದಿಗಾರನಾಗಿದ್ದಾಗ, ನಿವೃತ್ತ ಶಾಸಕರೊಬ್ಬರು ಯಾರದೋ ಮದುವೆಗೆಂದು ಧಾರವಾಡಕ್ಕೆ ಬಂದಿದ್ದರು. ಅವರೊಂದಿಗೆ ಸುಮ್ಮನೇ ಹರಟುತ್ತಿದ್ದಾಗ, ಕವಿ ಬೇಂದ್ರೆಯವರ ಪ್ರಸ್ತಾಪ ಬಂದಿತ್ತು. ತಮಾಷೆಗೆಂದು ನಾನು, ’ಬೇಂದ್ರೆ ಅದ್ಭುತ ಕವಿ. ಅವರ ಮೊಮ್ಮಗಳಂತೂ ಅದ್ಭುತ ನಟಿ ಸಾರ್‌’ ಎಂದೆ. ಯಾರು ಅವರ ಮೊಮ್ಮಗಳು? ಎಂದರು ಮಾಜಿ ಶಾಸಕರು. ನಾನು, ’ಸೊನಾಲಿ ಬೇಂದ್ರೆ’ ಎಂದಾಗ, ’ಅದಕ್ಕೇ ಅಂತೀನಿ. ಎಲ್ಲಾ ಅಜ್ಜನ ಪ್ರತಿಭೆಯೇ. ಆಕೆ ಪ್ರಸಿದ್ಧಳಾಗಿದ್ದನ್ನು ನೋಡಲು ಬೇಂದ್ರೆಯವರು ಬದುಕಿರಬೇಕಿತ್ತು’ ಎಂದು ಲೊಚಗುಟ್ಟಿದ್ದರು. ಮಾ. ಶಾಸಕರು.

ಇಂಥ ಪರಂಪರೆಯಲ್ಲಿ, ಮೋಹನದಾಸ ಕರಮಚಂದ ಗಾಂಧಿ ಮರೆಯಾಗಿದ್ದು ಅತಿ ಸಹಜ. ಅಷ್ಟೇ ವಿಷಾದನೀಯ.

- ಚಾಮರಾಜ ಸವಡಿ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
August 21, 2008 - 11:53am — Dattatri H M

ಉ: "ಈ ದೇಶದಲ್ಲಿ ಗಾಂಧೀ ಚಿತ್ರ ಅಂಟಿಸುವುದು ಅಪರಾಧವಾಯಿತೇ ?"

Dattatri H M's picture

ಮಂಜುನಾಥರ ಲೇಖನ ಹಾಗೂ ಚಾಮರಾಜರ ಪ್ರತಿಕ್ರಿಯೆ ಎರಡೂ ಸಹ ನಿಜಕ್ಕೂ ಪರಿಣಾಮಕಾರಿಯಾಗಿದೆ, ಯೋಚನೆಗೆ ಹಚ್ಚುವಂತಿದೆ. ಬಹುಷಃ ಸಂಪದಿಗರೆಲ್ಲಾ ಯೋಚನೆಯಲ್ಲಿ ಮುಳುಗಿ ಪ್ರತಿಕ್ರಿಯೆ ನೀಡಲು ಮರೆತರೋ ಹೇಗೆ?

ಸ್ವಾತಂತ್ರ್ಯಾನಂತರ ಕಾಂಗ್ರೆಸ್ಸ್ ದೇಶಕ್ಕೆ ಬಗೆದ ದ್ರೋಹ ಬ್ರಿಟಿಷರ ದ್ರೋಹಕ್ಕಿಂತ ಖಂಡಿತಾ ಕಡಿಮೆಯಲ್ಲ. ಇತಿಹಾಸ ತಿರಿಚುವುದರಿಂದ ಹಿಡಿದು ಎಲ್ಲೆಡೆ ಭ್ರಷ್ತತೆ ಪೋಷಿಸುವಲ್ಲಿವರೆಗೆ ದೇಶಕ್ಕೆ ಹಚ್ಚಿದ ಕಳಂಕಗಳಿಗೆ ಲೆಖ್ಕವಿಲ್ಲ.

ಮನಸ್ಸು ಭಾರವಾಗುತ್ತೆ.

ದತ್ತಾತ್ರಿ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • "ಈ ದೇಶದಲ್ಲಿ ಗಾಂಧೀ ಚಿತ್ರ ಅಂಟಿಸುವುದು ಅಪರಾಧವಾಯಿತೇ ?"
  • ಗಾಂಧಿ ಮತ್ತೆ ಹುಟ್ಟಿ ಬಾ...
  • ಗಾಂಧೀಸ್ಮರಣೆ
  • ಗಾಂಧಿ ಜಯಂತಿ
  • ನಿಜವಾದ ಸ್ವಾತಂತ್ರ್ಯ
Syndicate content

ಲೇಖಕರು

anmanjunath's picture

ಪೂರ್ಣ ಹೆಸರು
Manjunatha Ajjampura

ಪರಿಚಯ

I am a Kannada writer, columnist. I am a retired Bank Manager. I am interested in music (Hindustani Classical)

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ವಾಟರ್ ಪೋರ್ಟಲ್: ದಿನದ ಚಿತ್ರ

ಮಳೆನೀರು ಹಿಡಿದ ಎಲೆಗಳು

(ಫೋಟೋ: Girish M G)

ಮತ್ತಷ್ಟು...

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಬ್ಲಾಗ್ ಬರಹಗಳು

  • ಗೂಗಲ್ ಮೇಲ್ - ಕನ್ನಡ
  • ಸಂಗೀತ ಸಂಜೆ
  • ಕಲ್ಪನೆಯು ಕನ್ಯೆ…
  • ಕನ್ನಡೀಕರಿಸಿದ ಶ್ಲೋಕಗಳು - ೩
  • ಓದಿದ್ದು ಕೇಳಿದ್ದು ನೋಡಿದ್ದು-85 ಧರ್ಮಸ್ಥಳದ ಮಾದರಿ; ಭೈರಪ್ಪ-II
  • ಅಕ್ಕನ ಮಗಳು ಇಂಜಿನೀರ್ ಆದಾಗ :)
  • ನಗಲಿಕ್ಕೊಂದು ಚಿತ್ರ 10
  • ಕನ್ನಡೀಕರಿಸಿದ ಶ್ಲೋಕಗಳು - ೨
  • ಹಾಸ್ಯ - ೭
  • ಕನ್ನಡೀಕರಿಸಿದ ಶ್ಲೋಕಗಳು - ೧
ಇನ್ನಷ್ಟು

ಇತ್ತೀಚಿನ ಪ್ರತಿಕ್ರಿಯೆಗಳು

  • Rakesh Shetty
    ಉ: ಕಾಶ್ಮೀರ ಮುಂದೇನು?
    November 20, 2008 - 1:49pm
  • mahesha
    ಉ: ನಿದಾನ, ನಿಧಾನ
    November 20, 2008 - 1:45pm
  • prapancha
    ಉ: ಶರಾವತಿಯ ಹಿನ್ನೀರಿನೊಲ್ಲೊ೦ದು ವಾರದಕೊನೆ.....ಬಾಗ ೨
    November 20, 2008 - 1:35pm
  • gurubaliga
    ಉ: ನಿದಾನ, ನಿಧಾನ
    November 20, 2008 - 1:14pm
  • vinayudupa
    ಉ: ಶರಾವತಿಯ ಹಿನ್ನೀರಿನೊಲ್ಲೊ೦ದು ವಾರದಕೊನೆ.....ಬಾಗ ೨
    November 20, 2008 - 1:12pm
  • mahesha
    ಉ: ಕಾಶ್ಮೀರ ಮುಂದೇನು?
    November 20, 2008 - 1:05pm
  • mahesha
    ಉ: ನಿದಾನ, ನಿಧಾನ
    November 20, 2008 - 12:59pm
  • nkumar
    ಉ: ಹಸಿರು ಹಾವಿನ ಚಿತ್ರ!!.. (Vine snake)
    November 20, 2008 - 12:57pm
  • gurubaliga
    ಉ: ನಿದಾನ, ನಿಧಾನ
    November 20, 2008 - 12:57pm
  • mahesha
    ಉ: ಕನ್ನಡ ವ್ಯಾಕರಣ ಪರಮಾರ್ಶಕ ಮತ್ತು ಪದ ಪರಮಾರ್ಶಕ ತಂತ್ರಾಂಶಗಳ ತುರ್ತು ಅವಶ್ಯಕತೆ
    November 20, 2008 - 12:51pm
ಇನ್ನಷ್ಟು
ಈಗಿನಂತೆ 13 ಸದಸ್ಯರು ಮತ್ತು 62 ಅತಿಥಿಗಳು ಆನ್ಲೈನ್ ಇರುವರು.


ನನ್ನ ಮನಸ್ಸಿನ ಅನುಭವಗಳಿಂದ ನಾನು ಬರೆಯುತ್ತೇನೆ, ಅದರೆ ಅನುಭವಗಳ ಬಗ್ಗೆ ಬರೆಯುವುದಿಲ್ಲ, ಅನುಭವಗಳಿಂದಾಗಿ ಬರೆಯುತ್ತೇನೆ.

— ಜಾನ್ ಅಶ್‌ಬೆರಿ

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator