ನಮಸ್ಕಾರ ಸ್ವಾಮಿ
ಕೆಲವು ಅನಿಸಿಕೆಗಳು, ಬರಹಗಳು, ವಿಚಾರಗಳು.
ರಾಷ್ಟ್ರೀಯತೆ ಎಂಬುದು ಪ್ರಧಾನವಾಗಿ ಸಂಸ್ಕೃತಿ ಆಧಾರಿತವಾದುದು
Text in Baraha IME 1.0 UNICODE :
ರಾಷ್ಟ್ರೀಯತೆ ಎಂಬುದು ಪ್ರಧಾನವಾಗಿ ಸಂಸ್ಕೃತಿ ಆಧಾರಿತವಾದುದು -
ಪ್ರಭುತ್ವ (STATE) ಎಂಬುದು ಪ್ರಧಾನವಾಗಿ ರಾಜಕಾರಣ ಆಧಾರಿತವಾದುದು :
---------------------------------------------------------------------
ಅಮೆರಿಕಾ (USA) ದಲ್ಲಿ ಚೀನಾ ದೇಶದ ರಾಯಭಾರಿಯಾಗಿದ್ದ ’ಹುಶೀ’ ಅವರು ಹೇಳಿದ ಮಾತು
ಇಲ್ಲಿ ನೆನಪಾಗುತ್ತಿದೆ ; "ಚೀನಾದ ಮೇಲೆ ಇಪ್ಪತ್ತು ಶತಮಾನಗಳ ಕಾಲ, ಸಾಂಸ್ಕೃತಿಕ
ಪ್ರಭುತ್ವವನ್ನು ಭಾರತದೇಶವು ಸ್ಥಾಪಿಸಿತ್ತು. ಚೀನಾ ದೇಶಕ್ಕೆ ಒಬ್ಬನೇ ಒಬ್ಬ
ಸೈನಿಕನನ್ನೂ ಕಳುಹಿಸದೆಯೇ ಅಂತಹ ಪ್ರಭಾವ ಬೀರಲು ಭಾರತಕ್ಕೆ ಸಾಧ್ಯವಾಯಿತು. ನೆರೆಯ
ದೇಶಗಳ ಮೇಲೆ ತನ್ನ ಸಂಸ್ಕೃತಿಯನ್ನು ಭಾರತ ಎಂದೂ ಬಲವಂತದಿಂದ ಹೇರಲಿಲ್ಲ."
’ವಿಜಯಕರ್ನಾಟಕ’ ಪತ್ರಿಕೆಯ ’ವಾರದಾಗೆ ಒಂದು ಸರತಿ...’ ಅಂಕಣದಲ್ಲಿ (25.7.2007),
ಪತ್ರಕರ್ತ ಅನಂತ್ ಚಿನಿವಾರ ಅವರು ಬರೆದಿರುವ ಅಂಶಗಳಿಗೆ ಪೂರಕವಾಗಿ ಒಂದಿಷ್ಟು
ಮಾತುಗಳನ್ನು ಹೇಳಬಹುದು :
ಒಂದು ದೇಶದ ಗಡಿಯನ್ನು ನಿರ್ಧರಿಸುವುದು ಆ ದೇಶದ ರಾಜಕಾರಣ. ಶಾತವಾಹನರು, ಗುಪ್ತರು,
ಮೌರ್ಯರು ಭಾರತದ ಬಹು ಭಾಗ ಆಳಿರಬಹುದಾದರೂ, ರಾಜರಿಗಿಂತ ಪ್ರಧಾನವಾಗಿ ಸಂಸ್ಕೃತಿ -
ಧರ್ಮಗಳೇ ಭಾರತವನ್ನು - ಭಾರತದ ಸ್ವರೂಪವನ್ನು ನಿರ್ಧರಿಸಿವೆ. ಇಲ್ಲಿನ ಜನ ನೂರೆಂಟು
ಭಾಷೆಗಳ - ಪ್ರಾಂತಗಳ ವೈವಿಧ್ಯತೆಯ ನಡುವೆಯೇ ಕಾಶಿ, ಬದರಿ, ರಾಮೇಶ್ವರಗಳಿಗೆ, ದೇಶದ
ಎಲ್ಲ ಭಾಗಗಳಿಂದ, ಅಕ್ಷರಶಃ ಅನೇಕ ಸಾವಿರ ವರ್ಷಗಳಿಂದ ಹೋಗಿ ಬರುತ್ತಿದ್ದಾರೆ. ಈ
ರಾಷ್ಟ್ರದ ಸಾಂಸ್ಕೃತಿಕ ಗಡಿಗಳನ್ನು, ಇಲ್ಲಿನ ಜನ - ಇಲ್ಲಿನ ಪರಂಪರೆ - ಇಲ್ಲಿನ
ಧರ್ಮಗಳೇ ನಿರ್ಧರಿಸಿವೆ.
ಭಾಷಾ "ಸಮಸ್ಯೆ" ಇತ್ತೀಚಿನ "ಸೃಷ್ಟಿ". ಸಾವಿರಾರು ವರ್ಷಗಳಲ್ಲಿ ಭಾರತೀಯರಿಗೆ,
ವಿದೇಶಿ ಪ್ರವಾಸಿಗಳಿಗೆ ಅದೊಂದು ಸಮಸ್ಯೆಯಾಗಿ ಕಾಡಿಲ್ಲ. ಇಲ್ಲಿನ ತಕ್ಷಶಿಲೆ - ನಳಂದ
ವಿಶ್ವವಿದ್ಯಾಲಯಗಳಲ್ಲಿ ಓದಲು ಬರುತ್ತಿದ್ದ ಸಾವಿರಾರು ವಿದೇಶೀ ವಿದ್ಯಾರ್ಥಿಗಳಿಗೂ
ಭಾಷೆ ಸಮಸ್ಯೆಯಾಗಿ ಕಾಡಲಿಲ್ಲ. ಇಂದು ನಮ್ಮದೇ ದೇಶದ ಹಿಂದಿ - ಕನ್ನಡ - ತಮಿಳು
ಭಾಷೆಗಳನ್ನು ನಾವೇ ಸಮಸ್ಯೆಯಾಗಿ ಮಾಡಿಕೊಳ್ಳುತ್ತಿದ್ದೇವೆ. ಇದೀಗ ರಾಷ್ಟ್ರಪತಿಯಾಗಿ
ಇಂಗ್ಲಿಷ್ ಭಾಷೆಯಲ್ಲಿ ಪ್ರಮಾಣವಚನ ಸ್ವೀಕರಿಸಿದ ಪ್ರತಿಭಾ ಪಾಟೀಲ್, ಮರಾಠಿಯಲ್ಲೋ
- ಹಿಂದಿಯಲ್ಲೋ ಪ್ರಮಾಣವಚನ ಸ್ವೀಕರಿಸಬಹುದಿತ್ತು. 1996 ರಲ್ಲಿ ಪ್ರಧಾನಮಂತ್ರಿಯಾಗಿ
ಪ್ರಮಾಣವಚನ ಸ್ವೀಕರಿಸಿದ, ನಮ್ಮಂತಹ ಕನ್ನಡಿಗರ ಕಣ್ಮಣಿ, ಸನ್ಮಾನ್ಯ ದೇವೇಗೌಡರೂ,
ಇಂಗ್ಲಿಷ್‍ನ ಬದಲು ಕನ್ನಡದಲ್ಲೇ ಪ್ರಮಾಣವಚನ ಸ್ವೀಕರಿಸಬಹುದಿತ್ತು. "ಸ್ವಾತಂತ್ರ್ಯ"
ಬಂದು (?) ಅರವತ್ತು ವರ್ಷಗಳಾದರೂ ನಮಗೆ ನಮ್ಮದೇ ಭಾಷೆಗಳು ಬೇಡವಾಗಿವೆ, ವಿದೇಶೀ ಭಾಷೆ
ಆಪ್ಯಾಯಮಾನವಾಗಿದೆ.
ಚಿನಿವಾರ ಅವರು "ನಮಗೆ ನಮ್ಮದೇ ಅಂತ ಹೇಳಬಹುದಾದ ಒಂದು ಕಾಮನ್ ಲಾಂಗ್ವೇಜ್ ಇಲ್ಲ.",
ಎಂದು ಬರೆದಿದ್ದಾರೆ. ಕೆಲವು ಬುದ್ಧಿಜೀವಿಗಳೂ ಆ ಮಾತನ್ನು ಆಡುವುದುಂಟು. ಕಾಮನ್
ಲಾಂಗ್ವೇಜ್ ಏಕೆ ಬೇಕು, ಎಂಬುದನ್ನು ನಾವೊಮ್ಮೆ ಯೋಚಿಸಬೇಕು. ಭಾರತದಷ್ಟು
ವಿಸ್ತೀರ್ಣ - ಗಾತ್ರಗಳ (ಮತ್ತು ವಸಾಹತು ಅಲ್ಲದ) ಯಾವ ದೇಶಕ್ಕೆ ಈ ಬಗೆಯ ಕಾಮನ್
ಲಾಂಗ್ವೇಜ್ ಇದೆ ಎಂಬುದನ್ನು ನಾವು ಪರಿಶೀಲಿಸಿ, ಈ ಮಾತನ್ನು ಆಡಬೇಕಾಗಿದೆ. ಕಾಮನ್
ಲಾಂಗ್ವೇಜ್ ಬೇಕು ಎನ್ನುವುದರ ಹಿಂದಿನ ಶಕ್ತಿಗಳು, ಎಲ್ಲ ಭಾರತೀಯ ಭಾಷೆಗಳನ್ನು ಸಾರಾ
ಸಗಟಾಗಿ ಹೂತುಹಾಕಿಬಿಡುತ್ತವೆ.
ನಾನಿಲ್ಲಿ ಬ್ರಿಟಿಷರನ್ನು - ಅವರ ಇಂಗ್ಲಿಷ್ ಭಾಷೆಯನ್ನು ಆಕ್ಷೇಪಿಸುತ್ತಿಲ್ಲ.
ತಪ್ಪು ನಮ್ಮದೇ. ನಮ್ಮಲ್ಲಿ ಒಗ್ಗಟ್ಟಿಲ್ಲ, ಸ್ವಾಭಿಮಾನವಿಲ್ಲ. ನಮ್ಮ ಅಂತಃಕಲಹ -
ನಮ್ಮ ಒಳಜಗಳಗಳು ನಮ್ಮನ್ನು ಈ ಸ್ಥಿತಿಗೆ ತಂದಿಟ್ಟಿವೆ. ನಮ್ಮಲ್ಲಿ ಎಷ್ಟು ಪ್ರತಿಭೆ
ಇದ್ದರೇನು, ಎಂತಹ ಶೌರ್ಯ ಇದ್ದರೇನು ? ಹಿಡಿಯಷ್ಟು ಜನ ಬ್ರಿಟಿಷರು ನಮ್ಮನ್ನು ನೂರಾರು
ವರ್ಷ ಆಳಿದರು, ಅವರ ಭಾಷೆ ಈಗಲೂ (ಮುಂದೆ ಸಹ) ಆಳುತ್ತಿದೆ.
ಮುರಾರಜಿ ದೇಸಾಯಿ ಅಂತಹವರೇ "We were never a nation, before British" ಎಂದರು.
ನೆಹರೂ ಅಂತಹವರ ವಿಷಯ ಮಾತನಾಡದಿರುವುದು ಒಳ್ಳೆಯದು. ಎಲ್ಲ "ವಿದ್ವಾಂಸ"ರ ಒಕ್ಕೊರಲ
ಅಭಿಪ್ರಾಯ ಒಂದೇ : "ಬ್ರಿಟಿಷರಿಗಿಂತ ಮುಂಚೆ, ಇಡೀ ಭಾರತವನ್ನು ಯಾರು ಆಳಿದ್ದಾರೆ ?"
ಎಂಬುದೇ. ಒಟ್ಟಿನಲ್ಲಿ ಒಬ್ಬ ರಾಜ - ಒಬ್ಬ ಬಾದಷಹ ಆಳಿದರೆ ಮಾತ್ರ ಅದೊಂದು ದೇಶ,
ಅದೊಂದು ರಾಷ್ಟ್ರ. ಒಂದು ದೇಶದ ಸಾಂಸ್ಕೃತಿಕ ಆಯಾಮ ನಮಗೆ ಗೌಣ. ಹಾಗೆಂದೇ,
ಭಾರತವನ್ನು "ಬುದ್ಧಿಜೀವಿ"ಗಳು, ಹಲವು ರಾಷ್ಟ್ರಗಳ ಒಂದು ಗುಂಪು ಎನ್ನುತ್ತಾರೆ, ಭಾರತ
ಒಂದು ರಾಷ್ಟ್ರವೇ ಅಲ್ಲ ಎನ್ನುವುದೂ ಉಂಟು. ಸಂವಿಧಾನ ಹೇಳುವ UNION - ಒಕ್ಕೂಟ
ಎನ್ನುವುದು ಆ ಅರ್ಥದಲ್ಲೇ ಎಂಬುದು ಕೆಲವರ ವಾದ. ಸಂವಿಧಾನಶಿಲ್ಪಿ ಡಾ|| ಅಂಬೇಡ್ಕರ್
ಅವರ ದೃಷ್ಟಿಯಲ್ಲಿ , ಅದು ರಾಜ್ಯಗಳ - ಸಂಸ್ಥಾನಗಳ ಒಕ್ಕೂಟವೇ ಹೊರತು, ರಾಷ್ಟ್ರಗಳ
ಒಕ್ಕೂಟ ಅಲ್ಲ. ಬ್ರಿಟಿಷರು "Indian Sub-Continent" ಎಂದು
ಉಲ್ಲೇಖಿಸುತ್ತಿದ್ದುದನ್ನು ನಾವೇ ಅತಿಯಾಗಿ ಮಾಡಿ, ಇದೊಂದು ರಾಷ್ಟ್ರಗಳ ಒಕ್ಕೂಟ
ಎಂದು ಅರ್ಥೈಸುವುದು, ನಮಗೆ ನಾವೇ ಮಾಡಿಕೊಳ್ಳುವ ದ್ರೋಹವಾದೀತು.
ಮೆಕಾಲೆ ಬದಲಾಯಿಸಿದ ನಮ್ಮ ಶಿಕ್ಷಣ ಕ್ರಮ, ಭಾರತೀಯರಲ್ಲಿ ಅಂತಹ ಬದಲಾವಣೆ ತಂದಿದೆ. ಈ
ಮಾತುಗಳು ಇಂಗ್ಲಿಷ್ ಭಾಷಾ ವಿರೋಧ ಧ್ವನಿಸಬಾರದು. ನಮ್ಮ ಭಾಷೆಗಳ ಗತಿ ಏನು ಎಂಬುದೇ
ಆತಂಕ ಉಂಟು ಮಾಡುತ್ತಿದೆ.
ನಮ್ಮ ಅಂತಃಕಲಹ - ನಮ್ಮ ಮೂರ್ಖತನಗಳಿಂದ ನಮ್ಮ ಗಡಿಗಳು ಒಳಗೊಳಗೇ ಸರಿಯುತ್ತಿವೆ.
ಬ್ರಿಟಿಷರು ನೇಪಾಳ, ಭೂತಾನ, ಬ್ರಹ್ಮದೇಶ (ಬರ್ಮಾ), ಶ್ರೀಲಂಕಾಗಳನ್ನು ಮುಂಚೆಯೇ ಬೇರೆ
ಮಾಡಿದರು. ಪಾಕಿಸ್ತಾನ - ಬಂಗ್ಲಾದೇಶ - ಕೈಬಿಟ್ಟುಹೋಗುತ್ತಿರುವ ಕಾಶ್ಮೀರ -
ಅರುಣಾಚಲ ಪ್ರದೇಶಗಳು, ನಮ್ಮ "ನಾಯಕ"ರ "ಸೃಷ್ಟಿ"ಗಳು.
ಭಾರತೀಯ ಪರಂಪರೆ - ಸಂಸ್ಕೃತಿಗಳ ವೈಶಿಷ್ಟ್ಯಗಳನ್ನು ರೂಢಿಸಿಕೊಂಡಿರುವ, ಮೆಚ್ಚುವ,
ಇಂಡೋನೇಷ್ಯಾ - ಕಾಂಬೋಡಿಯಾ - ಫಿಲಿಪ್ಪೈನ್ಸ್ ಅಂತಹ ದೇಶಗಳನ್ನು ನೋಡಿಯಾದರೂ ನಮ್ಮ
ಸಂಸ್ಕೃತಿಯನ್ನು ನಾವು ಗೌರವಿಸಬೇಕಾಗಿದೆ, ಉಳಿಸಿಕೊಳ್ಳಬೇಕಾಗಿದೆ. ಇಪ್ಪತ್ತನೇ
ಶತಮಾನದಲ್ಲಿ ಯೂರೋಪಿನಲ್ಲಿ "ಪ್ರಷ್ಯಾ" ಎಂಬ ದೇಶವಿತ್ತು. ಈಗ ಇಲ್ಲ. ಭಾರತ
ಹಾಗಾಗಬಾರದು. ("ಇಸ್ರೇಲ್" ಇರಲಿಲ್ಲ. ಅದನ್ನ್ನ ಸಹ ನಾವು ಮರೆಯಬಾರದು.)
ಈ ಹಿನ್ನೆಲೆಯಲ್ಲಿ, ರಾಷ್ಟ್ರೀಯತೆ ಎಂಬುದು ಪ್ರಧಾನವಾಗಿ ಸಂಸ್ಕೃತಿ ಆಧಾರಿತವಾದುದು -
ಪ್ರಭುತ್ವ (STATE) ಎಂಬುದು ಪ್ರಧಾನವಾಗಿ ರಾಜಕಾರಣ ಆಧಾರಿತವಾದುದು, ಎಂಬುದನ್ನು
ನಾವು ಮರೆಯದಿರೋಣ.
ಮಂಜುನಾಥ ಅಜ್ಜಂಪುರ, ಬೆಂಗಳೂರು.
anmanjunath@gmail.com

- anmanjunath ರವರ ಬ್ಲಾಗ್
- Login or register to post comments
- 542 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ



- ನಿರ್ವಾಹಕರ ಗಮನಕ್ಕೆ ತನ್ನಿ


RSS:
ಪ್ರತಿಕ್ರಿಯೆಗಳು
ಉ: ರಾಷ್ಟ್ರೀಯತೆ ಎಂಬುದು ಪ್ರಧಾನವಾಗಿ ಸಂಸ್ಕೃತಿ ಆಧಾರಿತವಾದುದು
ಇಲ್ಲಿ ಕೊಂಚ ತಪ್ಪಿದೆ. ನಮ್ಮ ಈಗಿನ ಇಂಡಿಯದಲ್ಲಿ ಹೆಚ್ಚು ನೆಲವನ್ನು ಆಳಿದವರು ಗುಪ್ತರೂ ಅಲ್ಲ, ಮೌರ್ಯರೂ ಅಲ್ಲ. ಪುಲಿಕೇಶಿ ಮತ್ತು ಎರಡನೇ ವಿಕ್ರಾಮಾದಿತ್ಯ ಚಾಲುಕ್ಯ ದೊರೆಗಳು ಅಲ್ವಾ, ಇವರದೇ ಬಲು ದೊಡ್ಡದ್ದು ಹರವಿನಲ್ಲಿ!
100% ದಿಟ. ಆದರೆ "ಭಾರತೀಯ ಸಂಸ್ಕೃತಿ" ಅನ್ನೋದಿಲ್ಲ, ಏನಿದ್ದರೂ "ಭಾರತದ ಸಂಸ್ಕೃತಿಗಳು", ಒಂದೊಂದು ಸಂಸ್ಕೃತಿಗೂ ಒಂದೊಂದು ರಾಷ್ಟ್ರೀಯತೆ, ಹಾಗೇ ಕನ್ನಡ ಸಂಸ್ಕೃತಿಗೂ "ಕನ್ನಡ ರಾಷ್ಟ್ರೀಯತೆ" ಇದೆ. ತಮಿಳು ಸಂಸ್ಕೃತಿಗೂ "ತಮಿಳು ರಾಷ್ಟ್ರೀಯತೆ" ಇದೆ. ಇವನ್ನು ಮೇಕಲೇ ಹೇಳಿಕೊಟ್ಟಿಲ್ಲ.
ಮೇಕಲೇ ಮುನ್ನವೇ
"ಕಾವೇರಿಂದಮಾ ಗೋದಾವರಿವಂ ಇರ್ಪ ನಾಡಾದ ಆ ಕನ್ನಡದೊಳ್ .. ಭಾವಿಸಿದ ಜನಪದಂ... ವಸುಧಾ ವಳಯ ವಿಷಯ ವಿಶೇಷ..."
ಇಲ್ಲೇ ಕನ್ನಡತನ ಅನ್ನೋದು ಒಂದು ಭಾವನೆ ಎಂದು, ಕನ್ನಡ ಅನ್ನೋದೇ ಬೇರೆ ಸಂಸ್ಕೃತಿ ಎಂದು ಸಾರಿ ಹೇಳಿದೆ.
ಇವು ಎಂದು ನಮ್ಮ ಇಂಡಿಯದ ಜೊತೆ ಇರಲೇ ಇಲ್ಲ.!! ಇನ್ನು ಬೇರೆಯಾಗುವ ಮಾತೆಲ್ಲಿ.
ಇದನ್ನು ನಮ್ಮಲ್ಲಿ ಒಂದು ಪಂಗಡ ಹೇಳುವುದೇ ಹೊರತು, ಹಲವರಲ್ಲ. ಅಸ್ಸಾಮಲ್ಲಿ, ಬೇರೆ ದೇಶಕ್ಕಾಗಿ ಹೋರಾಟ ನಡೇತಾ ಇದೆ, ಯಾಕೆ ಗೊತ್ತಾ?(ಇದನ್ನೂ ಇನ್ನೂ ಬಿಟ್ರೀಶರ ಕುಮ್ಮಕ್ಕಲ್ಲೇ ನಡೆಯುತ್ತಿದೆ ಅಂತ ಸುಳ್ಳು ಹಬ್ಬಿಸಿ, ಮರಳು ಮಾಡುಬಹುದು, ಆದರೆ ಅದನ್ನು ನಂಬಲಾದೀತೇ?) ತುಸು ನೋಡಿ, ಅಸ್ಸಾಮನ್ನು ಬ್ರಿಟೀಶರು ಎರಡನೇ world warಅಲ್ಲಿ ಜಪಾನಿಯರಿಂದ ಗೆದ್ದು ಇಂಡಿಯಕ್ಕೆ ಸೇರಿಸಿದ್ದು. ಅಲ್ಲಿಯ ವರೆಗೂ ಅಸ್ಸಾಮ್ಮು ಒಂದು ಸ್ವತಂತ್ರದೇಶ, ಹೀಗೆ ಬರ್ಮ ಮುಂತಾದವು.!
ಸಂಸ್ಕೃತಿಯು ಯಾವಾಗಲೂ ಒಂದು ನುಡಿ/ಭಾಷೆಯ ಮೇಲೇ ನಿಂತಿರುತ್ತದೆ. ಬೇರೆ ಬೇರೆ ನುಡಿಯನ್ನಾಡುವವರು ಸಹಜವಾಗೇ ಬೇರೆ ಬೇರೆ ಸಂಸ್ಕೃತಿಯನ್ನು ಹೊಂದಿರುವವರು. ( ಇದು ಹೀಗಿಲ್ಲ ಅನ್ನೋದಕ್ಕೆ ಕೆಲವು ಕೊಸರುಗಳನ್ನು ತೋರಿಸೋದಲ್ಲ ).
ಜರ್ಮನಿಗೆ ಜರ್ಮನ-ನುಡಿ, ಜರ್ಮನ್-ಸಂಸ್ಕೃತಿ, ಇಂಗ್‌ಲೇಂಡು, ಮುಂತಾದ ಯುರೋಪ್ ದೇಶಗಳು. ಜಪಾನ್, ಚೀಣಾ, ಕೊರಿಯಾ, ಸಿರಿಲಂಕೆ, ಮುಂತಾದ ಏಸಿಯಾ ದೇಸಗಳು, ಎಲ್ಲವೂ ಬೇರೆ ಬೇರೆ ಸಂಸ್ಕೃತಿಗಳು, ಆ ಸಂಸ್ಕೃತಿಯ ಹೆಗ್ಗುರುತೇ ಅವರವರ ನುಡಿಗಳು.
ಕನ್ನಡ ಒಂದು ಸಂಸ್ಕೃತಿ ಎಂದು ಹೇಳಲು ನಮಗೆ ಬೇಕಾದ ಅನಿತ್ತು ಸರಕಿದೆ. ಇಂದಿನ ಈ ಇಂಡಿಯ ದೇಶ ಬರೀ ಬ್ರಿಟೀಸರು ಕಟ್ಟಿದ್ದು. ಅವರು ದಾಳಿಯಿಟ್ಟು ಆವರಿಸಿಕೊಂಡ ನೆಲ.! ಇದನ್ನು ಮೇಕಲೇ ಹೇಳಬೇಕಿಲ್ಲ, ಇತಿಹಾಸ ಓದಿದರೆ ತಿಳಿಯುವುದು.
ಮನ್ನಿಸಿರಿ, ನಿಮ್ಮ ಬರಹವೂ ಪೂರ ಒಂದು ಪಂಗಡದ ಮಾತಿನ ತಿರುಳಾಗಿದೆ. ಇದು ಕೆಲವರು ತಮ್ಮ 'ಷಷಷಷ' ಅಫಗಾನಿನಿಂದ, ಬರ್ಮ, ತಾಯ್ಲ್ಯಾಂಡು ತನಕ ಹರಡಿತ್ತು ಎಂದು ಮಾಡಿರುವ ಪ್ರಚಾರದಿಂದ ನಿಕ್ಕುವ ಪ್ರಭಾವವಾಗಿದೆ.
1947ರ ವರಗೂ ಕನ್ನಡದೇಶ ಇತ್ತು. ಅದು ಇಂದು ಇಂಡಿಯ ದೇಶಕ್ಕೆ ನೆಲದಿಂದ ಸೇರಿಕೊಂಡಿದೆ ಹೊರತು, ನಡೆ-ನುಡಿ ಮುಂತಾದವು ಮಿಕ್ಕ ಇಂಡಿಯದ ನಾಡುಗಳಿಗಿಂತ ಬೇರೆಯೇ!
ಈ ಬಗ್ಗೆ ಇಲ್ಲೇ ಹಿಂದೆ ನಡೆದ ಮಾತುಕತೆಗಳನ್ನು ನೋಡಿರಿ.!!
====================================
ತಿಳಿದಷ್ಟು ತಿಳಿಯಾಗುವುದು ತಿಳಿವು !
ಉ: ರಾಷ್ಟ್ರೀಯತೆ ಎಂಬುದು ಪ್ರಧಾನವಾಗಿ ಸಂಸ್ಕೃತಿ ಆಧಾರಿತವಾದುದು
http://enguru.blogspot.com/2007/07/blog-post_25.html
====================================
ತಿಳಿದಷ್ಟು ತಿಳಿಯಾಗುವುದು ತಿಳಿವು !
ಉ: ರಾಷ್ಟ್ರೀಯತೆ ಎಂಬುದು ಪ್ರಧಾನವಾಗಿ ಸಂಸ್ಕೃತಿ ಆಧಾರಿತವಾದುದು
ಶ್ರೀ ಮಹೇಶ ಅವರ ಪ್ರತಿಕ್ರಿಯೆ ಕುರಿತು ಒಂದಿಷ್ಟು ಬರೆಯಬಹುದು. "ಭಾರತೀಯ ಸಂಸ್ಕೃತಿ ಅನ್ನೋದಿಲ್ಲ," ಎಂದು ಬರೆದಿದ್ದೀರಿ. ಭಾರತೀಯ ಸಂಸ್ಕೃತಿ, ಕನ್ನಡ ಸಂಸ್ಕೃತಿಗಳ ಬಗ್ಗೆ, ವಿದ್ವಾಂಸರ ಕೆಲವು ಮಹತ್ವದ ಕೃತಿಗಳನ್ನು ಇಲ್ಲಿ ನೆನಪು ಮಾಡಿಕೊಳ್ಳುವುದು ಸೂಕ್ತ.
೧. ಡಾ|| ಎಮ್. ಚಿದಾನಂದಮೂರ್ತಿ ಅವರ "ಕನ್ನಡ ಸಂಸ್ಕೃತಿ - ನಮ್ಮ ಹೆಮ್ಮೆ", ಅಣುವಿನಲ್ಲಿ ಬ್ರಹ್ಮಾಂಡ ತೋರಿಸುವಷ್ಟು ಉಪಯುಕ್ತ ಪುಸ್ತಕ.
೨. ಡಾ|| ಎಚ್. ತಿಪ್ಪೇರುದ್ರಸ್ವಾಮಿ ಅವರ "ಕರ್ಣಾಟಕ ಸಂಸ್ಕೃತಿ ಸಮೀಕ್ಷೆ", ವಿಸ್ತೃತವಾದ ಬೃಹದ್‍ಗ್ರಂಥ. ಅದರಲ್ಲಿ ಭಾರತೀಯ ಸಂಸ್ಕೃತಿ - ಕನ್ನಡ ಸಂಸ್ಕೃತಿಗಳ ತೌಲನಿಕ ವಿವೇಚನೆಯೂ ಇದೆ.
ಈ ಗ್ರಂಥಗಳನ್ನು ಓದುವುದು ಒಳ್ಳೆಯದು. ಈ ವಿದ್ವಾಂಸರ ವಿದ್ವತ್ತಿನ ಅಣುಮಾತ್ರಕ್ಕೂ ನಾನು - ನೀವು ತೂಗಲಾರೆವು.
ಅಸ್ಸಾಮ್ - ಬರ್ಮಾಗಳು ಸ್ವತಂತ್ರ ದೇಶಗಳು ಎಂದರೆ, ಅಯ್ಯೋ ಎನ್ನಬೇಕಷ್ಟೇ. ಆ ಪ್ರಾಂತಗಳ - ರಾಜ್ಯಗಳ (ಅವರೇ ಹೇಳುವ) ಇತಿಹಾಸವನ್ನು ಓದದೆಯೇ, ನಾವು ಪೂರ್ವಗ್ರಹದಿಂದ ವಾದ ಮಾಡುವುದು. ಸರಿಯಲ್ಲ.
"ಸಂಸ್ಕೃತಿಯು ಯಾವಾಗಲೂ ಒಂದು ನುಡಿ/ಭಾಷೆಯ ಮೇಲೇ ನಿಂತಿರುತ್ತದೆ". ಇದು ಪ್ರಾಯಶಃ ನಿಮ್ಮದೇ ಸಿದ್ಧಾಂತ. ಇಲ್ಲಿಯವರೆಗೆ ಯಾವ ಇತಿಹಾಸಕಾರರೂ, ವಿದ್ವಾಂಸರೂ ಈ ವಾದವನ್ನು ಸಮರ್ಥಿಸಿರಲಾರರು. ಕನ್ನಡದಲ್ಲೇ ಹತ್ತಾರು ಬಗೆಯ ಉಪಭಾಷೆಗಳಿವೆ - dialectಗಳಿವೆ. ನಾಳೆ ಅವುಗಳನ್ನೂ ಬೇರೆ-ಬೇರೆ ಸಂಸ್ಕೃತಿಗಳೆಂದು ನೀವು ಹೇಳಬಹುದು. ಸಂಸ್ಕೃತಿಯನ್ನು ಅಷ್ಟೊಂದು ಮಿತಿಗೊಳಿಸಿದರೆ ಅದು ಸಂಸ್ಕೃತಿ ಆಗುಳಿಯಲಾರದು.
ನಿಮ್ಮ ಮಾಹಿತಿಗೆ - ನಿಜಘಟನೆಯೊಂದನ್ನು ಇಲ್ಲಿ ಹೇಳಬಹುದು :
೧೯೬೯ರಲ್ಲಿ, ನಾನು ದಾವಣಗೆರೆಯಲ್ಲಿ ಕಾಲೇಜು ವಿದ್ಯಾರ್ಥಿಯಾಗಿದ್ದಾಗ, ರಾಜ್‍ಕುಮಾರ್ ಅಭಿನಯದ "ಶ್ರೀಕೃಷ್ಣದೇವರಾಯ" ಚಿತ್ರ ಬಂದಿತ್ತು. ನಮಗೆಲ್ಲಾ ಅವು ಸಂಭ್ರಮದ ದಿನಗಳು. ಶ್ರೀಕೃಷ್ಣದೇವರಾಯ ಕನ್ನಡರಮಾರಮಣ ಎಂದು ನಮಗೆ ಹೆಮ್ಮೆ. ವಿಜಯನಗರ ಸಾಮ್ರಾಜ್ಯ, ಕನ್ನಡಿಗರ ಹೆಮ್ಮೆಯ ಸಾಮ್ರಾಜ್ಯ ಎಂದು ನಾವು ಎದೆಯುಬ್ಬಿಸುತ್ತೇವೆ. ನಾನು ನನ್ನ ಆಂಧ್ರದ ಎಂಜಿನಿಯರಿಂಗ್ ವಿದ್ಯಾರ್ಥಿ ಮಿತ್ರರೊಬ್ಬರನ್ನು ಆ ಸಿನಿಮಾಕ್ಕೆ ಕರೆದುಕೊಂಡು ಹೋಗಿದ್ದೆ. ಈ ಚಿತ್ರ ಪ್ರಾಯಶಃ ನೀವೂ ನೋಡಿರಬಹುದು. ಅವರು "ಇದೇನ್ರಯ್ಯಾ, ಕೃಷ್ಣದೇವರಾಯನನ್ನು ನೀವು ಹೈಜಾಕ್ ಮಾಡಿಬಿಟ್ಟಿದ್ದೀರಿ, ಅವನು ತೆಲುಗಿನವನ್ರಯ್ಯಾ. ಅವನ ತಾಯಿ ತೆಲುಗಿನವಳು, ಅವನ ಮಾತೃಭಾಷೆ ತೆಲುಗು, ಅವನು ಸ್ವತಃ ರಚಿಸಿದ ಏಕಮಾತ್ರ ಸಾಹಿತ್ಯಕೃತಿ "ಆಮುಕ್ತಮಾಲ್ಯದ" ತೆಲುಗು ಭಾಷೆಯದು. ಅವನ ರಾಜ್ಯ "ರಾಯಲಸೀಮಾ"ದವನು ನಾನು. ಅವನ ಹೆಸರೇ ನಮ್ಮ ಪ್ರಾಂತದ್ದು." ಇತ್ಯಾದಿ ಹೇಳಿದಾಗ, ನಾವೆಲ್ಲಾ ಬೆಚ್ಚಿಬಿದ್ದೆವು. ಹಿಂದಿನ ಶತಮಾನಗಳಲ್ಲಿ ಭಾಷೆಗಳ ಕುರಿತು ಪ್ರೀತಿ ಇತ್ತೇ ಹೊರತು, ಅನವಶ್ಯಕವಾದ "ಪರಭಾಷಾ ದ್ವೇಷ" ಇರಲಿಲ್ಲ. ಕರ್ನಾಟಕದ ಉತ್ತರ ಭಾಗದ ಜಿಲ್ಲೆಗಳಲ್ಲಿ ಮರಾಠೀ ಬಾಷೆಯ ಪ್ರಭಾವವಿದೆ. ಎರಡೂ ಕಡೆ ಭಾಷೆಗಳು ಒಟ್ಟಿಗೇ ಬೆಳೆದಿವೆ. ಕನ್ನಡ ಮತ್ತು ತೆಲುಗು ಎರಡರಲ್ಲಿಯೂ ಒಂದೇ ಸ್ವರೂಪದ ಅಂಕೆ(digits)ಗಳನ್ನು ಬಳಸುತ್ತೇವೆ. ಕಾಲಾನಂತರದಲ್ಲಿ ಎರಡೂ ಬೇರೆಬೇರೆ ಸ್ವತಂತ್ರ ಭಾಷೆಗಳಾಗಿವೆ. ನಾವು ಒಂದಿಷ್ಟು ಭಾಷಾ ಇತಿಹಾಸ ಓದುವುದು ಒಳ್ಳೆಯದು.
"1947ರ ವರಗೂ ಕನ್ನಡದೇಶ ಇತ್ತು" ಎಂದು ಬರೆದಿದ್ದೀರಿ. ಈ ನಿಟ್ಟಿನಲ್ಲಿ ಶಂಬಾಜೋಶಿ ಅವರಿಗಿಂತ ಹೆಚ್ಚು ಅಧ್ಯಯನ ಮಾಡಿದವರು ಕಡಿಮೆ. ಅವರ ಕೃತಿ ಸಂಪುಟಗಳನ್ನು "ಕನ್ನಡ ಪುಸ್ತಕ ಪ್ರಾಧಿಕಾರ" ಪ್ರಕಟಿಸಿದೆ. ಕರ್ನಾಟಕದ ಗಡಿಗಳನ್ನು ಗುರುತಿಸಿದವರೇ ಅವರು. ಇಂದಿನ ಮಧ್ಯಪ್ರದೇಶದ "ಇಂದೂರು"ಗೆ, ಕನ್ನಡಿಗರು ಆಳಿದ್ದರಿಂದ ಆ ಹೆಸರು ಬಂದಿತು, "ಊರು" ಕನ್ನಡದ ಪದ ಎಂದು ಅವರು ಬರೆದಿದ್ದಾರೆ.
ಈ ಹಿನ್ನೆಲೆಯಲ್ಲಿ ಆವೇಶದ ಬದಲು ಅಧ್ಯಯನ ನಮಗೆ ತುಂಬಾ ಅವಶ್ಯಕವಾಗಿದೆ.
ಮಂಜುನಾಥ ಅಜ್ಜಂಪುರ, ಬೆಂಗಳೂರು.
anmanjunath@gmail.com
ಉ: ರಾಷ್ಟ್ರೀಯತೆ ಎಂಬುದು ಪ್ರಧಾನವಾಗಿ ಸಂಸ್ಕೃತಿ ಆಧಾರಿತವಾದುದು
ಸರಿ. ಈ "ಭಾರತೀಯ ಸಂಸ್ಕೃತಿ" ಅಂದ್ರಲ್ಲ ಅದರ ಲಕ್ಷಣಗಳನ್ನ ಪಟ್ಟಿ ಮಾಡಿರಿ. ( ಮತ್ತೊಂದು ಪುಸ್ತಕ ಪಟ್ಟಿ ಬೇಡ )
ನೀವು ಬರೀ ಒಂದು ಗುಂಪಿನ ಬಾಯಿಯಾಗುತ್ತಿದ್ದೀರಿ. ನೀವು ಬರೀ ಅವರ ಇತಿಹಾಸ, ಅವರ ವಿಮರ್ಶೆ, ಅವರ ಅವರದನ್ನೇ ಓದಿ, ಅದನ್ನೇ ಹೇಳುತ್ತಿದ್ದೀರಿ ಇದಕ್ಕೆ ನಮ್ಮ ಇಂಡಿಯ ಸರಕಾರದಲ್ಲೇ ಯಾವ ಬೆಲೆ ಇಲ್ಲ.
ಅವೆಲ್ಲ "ಭಾರತೀಯ ಸಂಸ್ಕೃತಿ" ಅನ್ನೋ ನಿಮ್ಮ ಮಾತು ಬಲು ಪೂರ್ವಗ್ರಹ'ಪೀಡಿತ'ವೇ. ಮುನ್ನವೇ ಹೇಳಿದಂತೆ ನೀವು ಒಂದು ಪಂಥದ ಬಾಯಿಯಾಗುತ್ತಿದ್ದೀರಿ. ನಮ್ಮ ಇಂಡಿಯ ಸರಕಾರ ಅಧಿಕೃತವಾಗಿ "ಬರ್ಮದಲ್ಲಿ ಇರೋದು ಭಾರತೀಯ ಸಂಸ್ಕೃತಿ" ಎಂದು ನಮ್ಮ ಇತಿಹಾಸ ಹೊತ್ತಗೆಯಲ್ಲಿ ಪ್ರಕಟಿಸಲಿ, ಆಗ ಒಪ್ಪೋಣ. ಅದು ಹಾಗೆ ಮಾಡಕ್ಕೆ ಆಗೋದೇ ಇಲ್ಲ. !!
ಇನ್ನು ಸಿರಿಲಂಕೆಯವರ ಸೈಟುಗಳನ್ನ ನೋಡಿ, "ಚೋಳರೆಂಬ ದರೋಡೆಕೋರರು ಬಂದು ನಮ್ಮ ನೆಲವನ್ನು, ನಮ್ಮ ವಿಹಾರಗಳನ್ನು ಲೂಟಿಗೈದರು" ಎಂದು ಬರೆದುಕೊಂಡಿದ್ದಾರೆ!!
ಇವನ ಬಗ್ಗೆ ತಮ್ಮ ಅರಿವಲ್ಲೀ ಬಲು ತಪ್ಪುಗಳಿವೆ.
).
ಕೃಷ್ಣದೇವರಾಯ ತೆಲುಗನೂ ಅಲ್ಲ, ಕನ್ನಡನೂ ಅಲ್ಲ. ಅವನು ತುಳುವ-ಕನ್ನಡ( ಸೂರ್ಯ-ಕಾಮತ್ ರ ಕೃಷ್ಣದೇವರಾಯ ಓದಿ, ಹೊತ್ತಗೆಯ ಹೆಸರು ಹೇಳುವುದು ನಿಮಗೆ ಇಷ್ಟ ಅಲ್ಚಾ
ಕೃಷ್ಣದೇವರಾಯ ಹೇಗೆ "ಕರ್ಣಾಟ ರಾಜ್ಯರಮಾರಮಣ"ನೋ, ಹಾಗೆ "ಆಂಧ್ರಭೋಜ"ನೂ ಹೌದು. ಆದರೆ ಇವನು ವೈಷ್ಣವ ಪಂಥಕ್ಕೆ ಹೆಚ್ಚು ಒತ್ತುಕೊಟ್ಟ. ಇವನ ಆಸ್ಥಾನದಲ್ಲಿ ತಮಿಳು ಕವಿಗಳೂ ಇದ್ದರು.
ಮತ್ತೆ ಎಡುವಿದ್ದೀರಿ. ಸಂಸ್ಕೃತ ಕಾವ್ಯವನ್ನೂ ಬರೆದಿದ್ದಾನಂತೆ "ಜಾಂಬುವತಿ ಕಲ್ಯಾಣ" ಅಂತ ಇರಬೇಕು.
Krishnadevaraya himself an accomplished scholar wrote Madalasa Charita, Satyavadu Parinaya and Rasamanjari and Jambavati Kalyana
ಇವನು ತೆಲುಗಿಗೆ ಇಂಬಿಯ್ಯಲು ಹಲವು ಕಾರಣಗಳಿವೆ. ಅದರಲ್ಲಿ ರಾಜಕೀಯ ಕಾರಣಗಳೂ ಇವೆ ಅಂತೆ. ಇವನ ಹಿಂದೆ ವಿಜನ ನಗರವನ್ನು ಆಳಿದ ಪ್ರೌಢದೇವರಾಯ ಲಿಂಗಾಯತನಂತೆ, ಆದರೆ ಇವನು ಪಕ್ಕಾ ವೈಷ್ಣವ.. ಇವನ್ನು ನೀವೇ ಓದಿಕೊಳ್ಳಿರಿ. ಇವನ ಹಂಪೆಯಲ್ಲೂ ಹೆಚ್ಚಿನವರು ಶೈವರೇ ಇದ್ದರಂತೆ. ಆದರೆ ಇವನು ಬೇರೆಡೆ+ಹಂಪೆಯಲ್ಲಿ ಕಟ್ಟಿಸಿದ 99% ಗುಡಿಗಳು ವೈಷ್ಣವ-ಗುಡಿಗಳು
ಹೌದು. ಮೈಸೂರು ದೇಶ ಇತ್ತಲ್ಲ. ಇದು ಬ್ರಿಟೀಶರ ಕೆಳಗೆ ಇರಲಿಲ್ಲವಲ್ಲ. ನಮ್ಮ ಮಹಾರಾಜ, ಹೈದರಾಬಾದಿನ ನಿಜಾಮನಂತೆ "ನಾನು ನಿಮ್ಮ ಇಂಡಿಯಕ್ಕೆ ಸೇರೊಲ್ಲೆ" ಎಂದು ರುಜು ಹಾಕದಿದ್ದರೇ, ಇಂಡಿಯದ ಸೇನೆ ಹೈದಿರಾಬಾದನ್ನು ವಶಮಾಡಿದಂತೆ, ನಮ್ಮ ಮೇಲು ನುಗ್ಗುತ್ತಿತ್ತೇನೋ. ಆದರೆ ನಮ್ಮ ಮಹಾರಾಜರು ಇದೆಲ್ಲ ಗೊಡವೆ ಬೇಡವೆಂದು ರುಜು ಹಾಕಿಬಿಟ್ಟರು. ಆಗ ಅವರಿಗೆ ನಾವೆಲ್ಲ ಒಂದೇ ಸಂಸ್ಕೃತಿ ಅನ್ನೋ ಭಾವನೆ ಇತ್ತು ಎಂದು ಹೇಗೆ ಹೇಳ್ತೀರಿ, ಅವರಿಗೆ ಹೆದರಿಕೆಯೂ ಇದ್ದಿರಬಹುದಲ್ಲ!! ( ಇದನ್ನು ನಿಕ್ಕುವವಾಗಿ ಹೇಗೆ ಹೇಳಲಾದೀತು?)
ಹೌದು ಹೌದು. ಅದರ ಕೊರೆತೆ ನನಗೂ ಇದೆ, ತಮಗೂ ಇದೆ. ಅಧ್ಯಯನ ಇಬ್ಬರೂ ಮಾಡೋಣ. ಆದರೆ ಬರೀ ಒಂದು ಪಂಥದ ಬಾಯಿ ಆಗ್ತೀನಿ ಅಂದ್ರೆ ಅದು ಅಧ್ಯಯನ ಅಲ್ಲ.!! ಅಧ್ಯಯನ ಅಂದ್ರೆ ಎಲ್ಲೆಡೆಯಿಂದ ಒಂದು ಸಂಗತಿಯನ್ನು ಕಾಣಬೇಕಲ್ವಾ!!
ಎಲ್ಲರೂ ಅಧ್ಯಯನ ಮಾಡಿ ಬರೆಯೋಣ, ಸಂತಸವೇ, ಆದರೆ ಅದು ಏಕಪಂಥೀಯವೂ, ಎಲ್ಲಿಯೋ ಆದ brainwashನ ವಾಂತಿಯೂ ಆದ್ರೆ ಅದು ಅಧ್ಯಯನವಲ್ಲ ಗಿಳಿಪಾಠ.
====================================
ತಿಳಿದಷ್ಟು ತಿಳಿಯಾಗುವುದು ತಿಳಿವು !
ಉ: ರಾಷ್ಟ್ರೀಯತೆ ಎಂಬುದು ಪ್ರಧಾನವಾಗಿ ಸಂಸ್ಕೃತಿ ಆಧಾರಿತವಾದುದು
೧) ಯುರೋಪಲ್ಲಿ ಆಗಿರುವ ದೇಶಗಳಲ್ಲಾ ಹೆಚ್ಚಿನವು ನುಡಿಯ ಮೇಲೇ ಆಗಿರುವುವು!! ಅವರಿಗೆ ನಾನು ಹೋಗಿ ಹೇಳಲಿಲ್ಲ, ನಿಮ್ಮ ನಿಮ್ಮ ನುಡಿಗಳು ಬೇರೆ, ಬೇರೆ ಬೇರೆ ದೇಶ ಮಾಡಿಕೊಳ್ಳಿರಿ ಅಂತ. ಅದಕ್ಕೆ ಇದು ನನ್ನ ಸಿದ್ದಾಂತವಲ್ಲ.
ಒಹೋ, ನಿಮ್ಮ ಜಗತ್ತಿನ ಎಲ್ಲಿ ಇತಿಹಾಸಕಾರರನ್ನು, ವಿದ್ವಾಂಸರನ್ನೂ ಬಲ್ಲವರೋ?
ಹಿಂದಿನ ಮಾತು ನೋಡಿ ತಿಳಿಯುವುದು.
ಒಬ್ಬ ಮನುಷ್ಯ ಹೇಗೆ ಯೋಚನೇ ಮಾಡುತ್ತಾನೆ ಅನ್ನೋದನ್ನು ಅವನ native ನುಡಿಯಿಂದ ಪ್ರಭಾವವಾಗುವುದು. ( language and brain ನೋಡಿರಿ ).
http://www.duke.edu/~pk10/language/ca.htm
http://eltj.oxfordjournals.org/cgi/content/abstract/54/4/328
"Language is the formative organ of thought.
Intellectual activity, entirely mental, entirely
internal, and to some extent passing without
trace, becomes through sound, externalized
in speech and perceptible to the senses.
Thought and language are therefore one
and inseparable from each other."
�Wilhelm von Hamboldt,
German educator, linguist, and philosopher
ಅಧ್ಯಯನ ಅಧ್ಯಯನ ಅಧ್ಯಯನ!!
ಜಗತ್ತಲ್ಲಿ ಯೋಚನೆ ಅನ್ನೋದು ಸಾವಿರ ಸಾವಿರ ಮುಖಗಳಲ್ಲಿ ಬಗೆಗಳಲ್ಲಿ. ಅದನ್ನೆಲ್ಲ ಅರ್ಥ ಮಾಡಿಕೊಳ್ಳೋದು ತುಸು ಕಷ್ಟವೇ!!
====================================
ತಿಳಿದಷ್ಟು ತಿಳಿಯಾಗುವುದು ತಿಳಿವು !
ಉ: ರಾಷ್ಟ್ರೀಯತೆ ಎಂಬುದು ಪ್ರಧಾನವಾಗಿ ಸಂಸ್ಕೃತಿ ಆಧಾರಿತವಾದುದು
ಮಂಜುನಾಥ ಅವರೇ, ನೀವು ಇಲ್ಲಿ ತುಂಬಾ ಒಳ್ಳೇ ಎಳೆ ತೆಗೆದಿದ್ದೀರಿ. ಇದರಿಂದ ತುಂಬಾ ಕೇಳಿಕೆಗಳು ನನ್ನೊಳಗೆ ಹುಟ್ಟಿಕೊಂಡಿವೆ. ನಡಾವಳಿಗೂ, ನುಡಿಗೂ ನಂಟೇ ಇಲ್ಲವೇ? ನಡಾವಳಿಯ ಮೇಲೆ ನುಡಿ ನಿಂತಿದೆಯೇ? ಇಲ್ಲಾ ನುಡಿಯ ಮೇಲೆ ನಡಾವಳಿ ನಿಂತಿದೆಯೇ? ಹೀಗೇ.
ನೀವು ಹೇಳುವದು, ನುಡಿಯೇ ಬೇರೆ, ಸಂಸ್ಕ್ರುತಿ/ನಡಾವಳಿ ಯೇ ಬೇರೆ ಅಂತ. ಇದು ಒಪ್ಪೋ ಮಾತಲ್ಲ. ನಮ್ಮ ಸಂಸ್ಕ್ರುತಿ/ನಡಾವಳಿಗೂ ನಾವು ಆಡುವ ನುಡಿಗೂ ತುಂಬಾ ತಳುಕಿರುತ್ತದೆ. ನೋಡಿ ಕನ್ನಡ,ತಮಿಳು,ತೆಲುಗು (ಮತ್ತು ಮರಾಟಿ ಕೂಡ) ಮಾತಾಡುವ ಮಂದಿಯ ನಡಾವಳಿಗಳಲ್ಲೂ ತುಂಬಾ ಹೋಲಿಕೆಯಿದೆ. ಅದು ನಾವು ತೊಡುವ ಉಡುಗೆ ಆಗಬಹುದು, ಊಟ ಆಗಿರಬಹುದು. ನೋಡುವದಕ್ಕೂ ಕನ್ನಡ,ತೆಲುಗು,ತಮಿಳರಲ್ಲಿ ಹೋಲಿಕೆಯಿದೆ. ಅದೇ ಉತ್ತರ ಭಾರತದವರನ್ನು ನೋಡಿ ಅವರ ನಡಾವಳಿ ನಮ್ಮದಕ್ಕಿಂತಾ ತುಂಬಾ ಬೇರೆ.
ಉಡುಪಿಯವರ ನಡಾವಳಿ, ಉತ್ತರ ಕರ್ನಾಟಕದವರ ನಡಾವಳಿಗಳಲ್ಲಿ ಬೇರೆತನ ಇದೆ, ಅದರಿಂದಾಗಿ ಕನ್ನಡವನ್ನೇ ಆಯಾ ಕಡೇ ಬೇರೇ ಬೇರೇ ಬಗೆಯಲ್ಲೆ ಮಾತಾಡುತ್ತಾರೆ. ಆದರೇ ಈ ಎರಡೂ ನಡಾವಳಿಗಳಲ್ಲಿ ಏನು common factor ಗಳಿವೆಯೋ ಅವು ಕನ್ನಡ ನಡಾವಳಿ/ಕನ್ನಡ ಸಂಸ್ಕ್ರುತಿ ಇಲ್ಲಾ kannada culture ಅನ್ನು ಉಂಟು ಮಾಡುತ್ತವೆ.
ಹೀಗೆ ಕನ್ನಡ ನಡಾವಳಿ, ಮರಾಟಿ ನಡಾವಳಿ, ಹಿಂದಿ ನಡಾವಳಿ, ಹೀಗೆ ಇಂಡಿಯಾದ ಎಲ್ಲಾ ನುಡಿಗಳ ನಡಾವಳಿಗಳಲ್ಲಿ ಬರುವ common factors ಸೇರಿ ಭಾರತೀಯ ನಡಾವಳಿ/indian culture ಅಂತ ಆಗಿದೆ. ಇದನ್ನೇ ನೋಡಿ ನೀವು, ಭಾಷೆ/ನುಡಿಗೂ, ಸಂಸ್ಕ್ರುತಿಗೂ ನಂಟೇ ಇಲ್ಲಾ ಅಂತ confuse ಮಾಡ್ಕೊಂಡಿದೀರಾ, ಅನಿಸುತ್ತೆ.
-------------------------------------------------------------
ನಡೆವವ ಬಿದ್ದಾನಲ್ಲದೇ, ನಿಂತವ ಬೀಳಲಾರ
ಉ: ರಾಷ್ಟ್ರೀಯತೆ ಎಂಬುದು ಪ್ರಧಾನವಾಗಿ ಸಂಸ್ಕೃತಿ ಆಧಾರಿತವಾದುದು
ಸಂಗನ ಹಿಂಗಾ, common factorಗಳು ಎಲ್ಲ ಮಂದಿಯಲ್ಲೂ ಅದಾವಾ!
ಜಗದ ಎಲ್ಲಾ ಮಂದಿ ಬಟ್ಟೆ ತೊಡ್ತಾರಾ, ಉಂಬು ಉಣ್ತಾರಾ, ಉಂಡಿದನ್ನು ಬಿಡಕ್ಕೆ ಕುಕ್ಕರಗಾಲೋ, ಕುರ್ಚಿಗಾಲಲೋ ಒಂದ್ರಾಗಾ ಕುಂಡ್ರ್‌ತಾರಾ
, ಅದಕ್ಕಾ ಎಲ್ರೂ ಒಂದೇ ಸಂಸ್ಕೃತಿ/ನಡಾವಳಿಯವರು ಅಂದು ಬಿಡೋಣೇನು?
====================================
ತಿಳಿದಷ್ಟು ತಿಳಿಯಾಗುವುದು ತಿಳಿವು !
ಉ: ರಾಷ್ಟ್ರೀಯತೆ ಎಂಬುದು ಪ್ರಧಾನವಾಗಿ ಸಂಸ್ಕೃತಿ ಆಧಾರಿತವಾದುದು
ಮೊರಾರ್ಜಿ ದೇಸಾಯಿಯವರ "we were never a nation,before british" ಎಂಬ ಮಾತಿನಲ್ಲಿ ನನಗೆ ತಪ್ಪೇನೂ ಕಾಣುತ್ತಿಲ್ಲ. ಇದು ಸರಿಯಾಗಿಯೇ ಇದೆ. "ನಮಗೊಂದು ಕಾಮನ್ language ಬೇಕು" ಅಂತ ಹೇಳಿ ನಮ್ಮ ನೆಲದ್ದಲ್ಲದ ನುಡಿಯೊಂದನ್ನು ಯಾಕೆ ನಾವು ಮೈಮೇಲೆ ಎಳೆದುಕೊಳ್ಳಬೇಕು, ಅಲ್ಲವೇ?
ಭಾರತವನ್ನು ರಾಷ್ಟ್ರಗಳ ಒಕ್ಕೂಟ ಅಂದುಕೊಳ್ಳುವದರಿಂದ ನಾವು ಕಳೆದುಕೊಳ್ಳುವದೇನೂ ಇಲ್ವಲ್ಲಾ. ಅಶೋಕ ಚಕ್ರವರ್ತಿಯಂತವರು ಇಡೀ ಭಾರತವನ್ನು ಆಳಿದರಾದರೂ ಆಯಾ ನಾಡಿಗೆ ದೊರೆಗಳು ಇದ್ದೇ ಇರ್ತಾ ಇದ್ರು. ಅವರು ಚಕ್ರವರ್ತಿಗೆ ಏಡಿಗೆ/ವರ್ಷಕ್ಕೆ ಇಷ್ಟು ಅಂತ tax ಕಟ್ಟೋದು ಬಿಟ್ಟರೇ common ಮಂದಿಯೊಂದಿಗೆ ದೊರೆಯಂದೇ ಕೊಂಡಿ ಇರುತ್ತಿತ್ತು ಅಲ್ಲವೇ?
ಸಂವಿಧಾನಶಿಲ್ಪಿ ಡಾ|| ಅಂಬೇಡ್ಕರ್
ಅವರ ದೃಷ್ಟಿಯಲ್ಲಿ , ಅದು ರಾಜ್ಯಗಳ - ಸಂಸ್ಥಾನಗಳ ಒಕ್ಕೂಟವೇ ಹೊರತು, ರಾಷ್ಟ್ರಗಳ
ಒಕ್ಕೂಟ ಅಲ್ಲ. ಬ್ರಿಟಿಷರು "Indian Sub-Continent" ಎಂದು
ಉಲ್ಲೇಖಿಸುತ್ತಿದ್ದುದನ್ನು ನಾವೇ ಅತಿಯಾಗಿ ಮಾಡಿ, ಇದೊಂದು ರಾಷ್ಟ್ರಗಳ ಒಕ್ಕೂಟ
ಎಂದು ಅರ್ಥೈಸುವುದು, ನಮಗೆ ನಾವೇ ಮಾಡಿಕೊಳ್ಳುವ ದ್ರೋಹವಾದೀತು.
ಯುರೋಪಿನ ರಾಷ್ಟ್ರಗಳ ಒಕ್ಕೂಟಗಳು ಒಂದೊಂದು ಬೇರೆ ಬೇರೆ ರಾಷ್ಟ್ರಗಳೇ ಆಗಿದ್ದರೂ ಅವು ನಮ್ಮ ಇಂಡಿಯಾ-ಪಾಕ್‍ಗಳ ಹಾಗೆ ಕಚ್ಚಾಡದೇ ಹಾಯಾಗಿವೆ. ಬಹುಶ ಕಚ್ಚಾಡೋದು ನಮ್ಮ ಇಂಡಿಯನ್‍ರಲ್ಲಿ ನೆತ್ತರಿನಲ್ಲೇ ಬೆರೆತು ಹೋಗಿದೆ, ನಮ್ಮ ಕಚ್ಚಾಡೋ ಬುದ್ದಿ ತೊಲಗಬೇಕೇ ಹೊರತು, ರಾಷ್ಟ್ರೀಯತೆಯ ಹೆಸರಿನಲ್ಲಿ ನಮ್ಮದಲ್ಲದ ಭಾಷೆ/ನುಡಿಯೊಂದನ್ನು ನಮ್ಮ ನಾಡೊಳಗೆ ಎಳೆದು ತರಬಾರದು. ಕರ್ನಾಟಕದಲ್ಲಿ ಕನ್ನಡದಲ್ಲಿ ಆಟೇ(only in kannada) ಸರಕಾರ ಆಡಳಿತ ನಡೆಸಬೇಕು. ಹಿಂದಿನೂ ನಡೆಯುತ್ತೇ, ಇಂಗ್ಲೀಸು ನಡೆಯುತ್ತೇ ಅಲ್ಲಾ.
-------------------------------------------------------------
ಸಂಗನಗೌಡ
ಉ: ರಾಷ್ಟ್ರೀಯತೆ ಎಂಬುದು ಪ್ರಧಾನವಾಗಿ ಸಂಸ್ಕೃತಿ ಆಧಾರಿತವಾದುದು
ನನಗನ್ನಿಸ್ತದಾ, ಇಲ್ಲಿ ಈತ ಹೇಳೋ, "ನಮ್ಮ ನೆಲದ್ದಲ್ಲದ ನುಡಿ" ಅಂದ್ರಾ ಕನ್ನಡ ಬಿಟ್ಟು, ಮಿಕ್ಕ ಎಲ್ಲ ನುಡಿಗಳು, ಅದು ಹಿಂದಿಯೋ, ಇಂಗ್ಲೀಸೋ, ತಮಿಳೋ ಮತ್ತೊಂದು.
ಇದನ್ನ
ಅದನ್ನ ಇಲ್ಲಿ ತಿಳಿ ಮಾಡ್ಯಾರಾ! ಅಲ್ವಾ ಸಂಗನ ಗೌಡ್ರಾ?
ಇದು ಸರಿ, ನಮ್ಮದ್ದು ನಮಗೆ, ನಿಮ್ಮದು ನಿಮಗೆ. ನಮ್ಮದು ನಿಮ್ಮದು ಆಗಾಂಗಿಲ್ಲ, ನಿಮ್ಮದು ನಮ್ಮದು ಆಗಾಂಗಿಲ್ಲ.!! ಉತ್ತರದೋರ ಸಂಸ್ಕೃತಿ ಅವರಿಗೆ, ನಮ್ಮದು ನಮಗೆ. ನಾವು ಜುಬ್ಬ, ಪೈಜಾಮದಾಗಾ ಪೂಜೆ ಮಾಡಾಂಗಿಲ್ಲ. ಅವರು ನಮ್ ಹಂಗಾ ಪಂಚೆ ಉಟ್ಟು, ಹಣೆಗೆ ಪಟ್ಟೆ ಹಾಕಾಂಗಿಲ್ಲ!!
===============================================
ತಿಳಿದಷ್ಟು ತಿಳಿಯಾಗುವುದು ತಿಳಿವು !
ಉ: ರಾಷ್ಟ್ರೀಯತೆ ಎಂಬುದು ಪ್ರಧಾನವಾಗಿ ಸಂಸ್ಕೃತಿ ಆಧಾರಿತವಾದುದು
ಉತ್ತರದೋರ ಸಂಸ್ಕೃತಿ ಅವರಿಗೆ, ನಮ್ಮದು ನಮಗೆ. ನಾವು ಜುಬ್ಬ, ಪೈಜಾಮದಾಗಾ ಪೂಜೆ ಮಾಡಾಂಗಿಲ್ಲ. ಅವರು ನಮ್ ಹಂಗಾ ಪಂಚೆ ಉಟ್ಟು, ಹಣೆಗೆ ಪಟ್ಟೆ ಹಾಕಾಂಗಿಲ್ಲ!!
ಹೌದ್ ಅಂದೆನಲ್ಲಾ, ಅಗದಿ ಕರೆಕ್ತ್
-------------------------------------------------------------
ಉ: ರಾಷ್ಟ್ರೀಯತೆ ಎಂಬುದು ಪ್ರಧಾನವಾಗಿ ಸಂಸ್ಕೃತಿ ಆಧಾರಿತವಾದುದು
ನುಡಿಯಿಂದ ನಡಾವಳಿ/ಸಂಸ್ಕ್ರುತಿ ಇಲ್ಲದಿದ್ದರೆ ನುಡಿಯ ಮೇಲೆ ಕರ್ನಾಟಕ, ತಮಿಳು ನಾಡು, ಆಂದ್ರ ಅಂತ ಏಕೆ ೧೯೪೭ ಆದ ಮೇಲೆ ರಾಜ್ಯಗಳನ್ನ ಮಾಡಬೇಕಿತ್ತು.??
ಎಚ್.ಎಮ್ ಕೃಶ್ಣ ರವರು ( ಮೈಸೂರು ಸರಕಾರದ ಆರ್ಕಿಯಾಲಜಿಯ ಡೈರಕ್ಟರ್ ಆಗಿದ್ದವರು) 'ಕರ್ನಾಟಕದ ಪೂರ್ವ ಚರಿತ್ರೆ' ಯಲ್ಲಿ ಬರೆಯುತ್ತಾ ಹೀಗೆ ಹೇಳಿದ್ದಾರೆ
" ಕನ್ನಡ ನಾಡು ಅಂದರೆ ಕರುನಾಡು ಅಂದರೆ ಎತ್ತರದ ನಾಡು" . ಕನ್ನಡ ನಾಡು/ದೇಸ ಬೌಗೋಳಿಕವಾಗಿ , ಬುಡಕಟ್ಟಿನ ಆದಾರದ ಮೇಲೂ ( ಸೋಲಿಗ, ಕಾಡು ಕುರುಬರು) ತನ್ನದೇ ಆದ 'ತನ್ನತನ' ವನ್ನು ಹೊಂದಿತ್ತು.
ರಟ್ಟಕೂಟ ( ರಾಶ್ಟ್ರಕೂಟ) ದೊರೆಯಾದ ದಂತಿದುರ್ಗನ (ಕ್ರಿ.ಶ. 754) ಸಾಮನ್ಗಡದ ಶಾಸನದ ಶ್ಲೋಕವನ್ನು ನೋಡಿ (ಮುಳಿಯ ತಿಮ್ಮಪ್ಪಯ್ಯನವರ 'ಕವಿರಾಜಮಾರ್ಗ ವಿವೇಕ' ಹೊತ್ತಿಗೆಯಿಂದ)
" ಕಾಂಚೀಶ ಕೇರಳನರಾಧಿಪ ಚೋಳ ಪಾಂಡ್ಯ ಶ್ರೀ ಹರ್ಷವಜ್ರಟವಿಭೇದ ವಿಧಾನದಕ್ಷಂ | ಕರ್ಣಾಟಕಂಬಲಮಚಿಂತ್ಯ ಮಜೇಮನ್ಯಃ....."
ಅಂದರೆ ದಂತಿದುರ್ಗನಿಂದ ಸ್ತಾಪಿತವಾದ 'ಕರ್ನಾಟಕಂಬಲ' ವು ಹಗೆಗಳ ಅನಿಸಿಕೆಗೆ ಮೀರಿದುದು, ಗಣಕರ ಲೆಕ್ಕಕ್ಕೆ ಸಿಕ್ಕದುದು ಆಗಿತ್ತಂತೆ, ಈ ಬಲದಿಂದ ಆತನು ಕಾಂಚೀ ಕೇರಳ ಚೋಳ ಪಾಂಡ್ಯರೆಂಬ ತೆಂಕಣ ಅರಸರನ್ನು, ಸಿರಿ ಹರುಶವಜ್ರಟರೆಂಬ ಬಡಗಣದ ಅರಸರನ್ನು ಗೆದ್ದಿದ್ದನು ಅಂತ ತಿಳಿಯಬಹ್ದು.
ಈ ಪುರಾವೆಗಳಿಂದ ಕನ್ನಡ ನಾಡು/ದೇಸ ಅನ್ನುವುದು ಇತ್ತು. ಮತ್ತು ಜೋರಾಗೇ
ಇತ್ತು ಅಂತ ತಿಳಿದುಕೊಳ್ಳಬಹುದು.
ಉ: ರಾಷ್ಟ್ರೀಯತೆ ಎಂಬುದು ಪ್ರಧಾನವಾಗಿ ಸಂಸ್ಕೃತಿ ಆಧಾರಿತವಾದುದು
ಮಂಜುನಾಥರೆ, "ರಾಷ್ಟ್ರೀಯತೆ ಎಂಬುದು ಪ್ರಧಾನವಾಗಿ ಸಂಸ್ಕೃತಿ ಆಧಾರಿತವಾದುದು" ಎಂದು ಹೇಳುವ ನೀವು ಈಶಾನ್ಯ ರಾಜ್ಯಗಳ ಬಗ್ಗೆ ಅಭಿಪ್ರಾಯವೇನು? ಸಾಂಸ್ಕೃತಿಕವಾಗಿ ಉತ್ತರ ಮತ್ತು ದಕ್ಷಿಣ ರಾಜ್ಯಗಳಿಗಿಂತ ತೀರಾ ಭಿನ್ನವಾಗಿವೆ ಈ ರಾಜ್ಯಗಳ ಸಂಸ್ಕೃತಿಗಳು. ಈಶಾನ್ಯ ರಾಜ್ಯಗಳು ಇಂದಿನ ಭಾರತದಲ್ಲಿರುವುದಕ್ಕೆ ಬ್ರಿಟಿಶರೇ ಕಾರಣ. ಈ ರಾಜ್ಯಗಳು ಇಂದಿಗೂ mainstreamಗೆ ಬಂದಿಲ್ಲ.
ನೀವು ಕರೆಯುವ ಬರ್ಮಾ ಈಗ ಮ್ಯಾನಮಾರ್ ಎಂದು ಹೆಸರು ಬದಲಾಯಿಸಿಕೊಂಡಿದೆ. ನಿಮಗೆ ಮೆಚ್ಚುಗೆಯಿರುವ ಇಂಡೋನೇಷ್ಯಾದಿಂದ ಪೂರ್ವ ತಿಮೊರ್ (http://en.wikipedia.org/wiki/East_timor) ಎಂಬ ಪ್ರಾಂತ್ಯ ಪ್ರತ್ಯೆಕಗೊಂಡು ಬೇರೆ ದೇಶವಾಗಿದೆ. "ಬಂಡಾ ಅಚೆ" ಎಂಬ ಪ್ರಾಂತ್ಯ ಪ್ರತ್ಯೇಕಗೊಳ್ಳಲು ಹೋರಾಟ ನಡೆಸುತ್ತಿದೆ. ಸಾವಿರಾರು ದ್ವೀಪಗಳು, ನೂರಾರು ಸಂಸ್ಕೃತಿಗಳು, ಭಾಷೆಗಳು, ಬುಡಕಟ್ಟುಗಳು ಇರುವ ಆ ದೇಶ ಒಂದಾಗಿ ನಡೆಯಲು ಹೆಣಗುತ್ತಿದೆ.
ಸಾಂಸ್ಕೃತಿಕವಾಗಿ ಹತ್ತಿರವಿದ್ದರೂ Scandinaviaದಲ್ಲಿ (http://en.wikipedia.org/wiki/Scandinavia) ಹಲವಾರು ದೇಶಗಳೇಕೇ? ಒಂದಾಗಬಹುದಿತ್ತಲ್ಲ?
ಉ: ರಾಷ್ಟ್ರೀಯತೆ ಎಂಬುದು ಪ್ರಧಾನವಾಗಿ ಸಂಸ್ಕೃತಿ ಆಧಾರಿತವಾದುದು
Scandinavia ಬಗ್ಗೆ ಇಂತೆಲ್ಲ ಇದೆ ಎಂದು ಗೊತ್ತಿರಲಿಲ್ಲ,
ನನ್ನಿ!!
====================================
ತಿಳಿದಷ್ಟು ತಿಳಿಯಾಗುವುದು ತಿಳಿವು !