23
May
2013

What's new on Sampada?  ಉತ್ತಮ ಬರಹಗಾರರಿಗೆ ಸಂಪದ ಪ್ರಶಸ್ತಿ. ಹೆಚ್ಚಿನ ಮಾಹಿತಿಗೆ ಇಲ್ಲಿ ಕ್ಲಿಕ್ ಮಾಡಿ.

ಪಾಕಿಸ್ತಾನದ ದೇವಾಲಯಗಳು - ಇನ್ನಷ್ಟು ಮಾಹಿತಿಗಳು

February 26, 2010 - 2:49pm
arshad

ಕೆಲವು ದಿನಗಳ ಮುನ್ನ ಪಾಕಿಸ್ತಾನದ ದೇವಾಲಯಗಳು ಎಂಬ ವಿಷಯದ ಮೇಲೆ ಚುಟುಕಾದ ಒಂದು ಲೇಖನ ಬರೆದಿದ್ದೆ. ಮಾನ್ಯ ಶ್ರೀ ಪೆಜತ್ತಾಯರು ಈ ಲೇಖನಕ್ಕೆ ಪ್ರತಿಕ್ರಿಯಿಸಿದವರಲ್ಲಿ ಮೊದಲಿಗರು. ಅಂದಿನಿಂದ ಹಲವಾರು ಸ್ನೇಹಿತರು ಹಾಗೂ ಅಭಿಮಾನಿಗಳು ಈ ವಿಷಯದ ಬಗ್ಗೆ ಹೆಚ್ಚಿನ ಮಾಹಿತಿ ತಿಳಿಸುವಂತೆ ಕೇಳಿಕೊಂಡಿದ್ದರು. ಆದರೆ ಹೆಚ್ಚಿನ ಮಾಹಿತಿ ಹೊಂದಿಸಲು ಸ್ವಲ್ವ ವಿಳಂಬವಾಯಿತು (ಹೆಚ್ಚಿನ ಪಕ್ಷ ನಾನು ಸೋಮಾರಿಯಾಗಿರುವುದು ಕಾರಣ)

 

ಪೆಜತ್ತಾಯರ ಮನವಿಯ ಬಳಿಕ ನನ್ನ ಭಾವನವರನ್ನು (ನನ್ನ ಅಕ್ಕ 1988 ರಲ್ಲಿ ಮದುವೆಯಾಗಿ ಪಾಕಿಸ್ತಾನದಲ್ಲಿಯೇ ನೆಲೆಸಿದ್ದಾರೆ) ಫೋನ್ ಮೂಲಕ ಸಂಪರ್ಕಿಸಿ ಕೆಲ ಮಾಹಿತಿಗಳನ್ನು ಪಡೆದುಕೊಂಡೆ. ಅವರ ಪ್ರಕಾರ ದೇಶ ವಿಭಜನೆಗೂ ಮುನ್ನ ಅಖಂಡ ರಾಷ್ಟ್ರವಾಗಿದ್ದ ಭಾರತದಲ್ಲಿ ಎಲ್ಲೆಡೆ ಸಮಾನವಾಗಿ ದೇವಾಲಯಗಳೂ, ಮಸೀದಿಗಳೂ ಗುರುದ್ವಾಗಳೂ ಇದ್ದವು. ಒಮ್ಮೆ ಪಾಕಿಸ್ತಾನವೆಂಬ ರಾಷ್ಟ್ರ ಉದಿಸಿತೋ ಆಗ ಇಸ್ಲಾಮಿ ವಿರೋಧಿಯಾಗಿರುವ ಎಲ್ಲಾ ಪ್ರಕ್ರಿಯೆಗಳಿವೂ ವಿರೋಧ ತೋರಿಬಂದಿತ್ತು. ಹಿಂದೂ ಧರ್ಮದ ವಿಗ್ರಹಾರಾಧನೆಗೆ ಇಸ್ಲಾಮಿನಲ್ಲಿ ಸ್ಥಾನವಿಲ್ಲ. ಬಹುದೇವಾರಾಧನೆಗೂ ಸ್ಥಾನವಿಲ್ಲ. ಆದರೆ ಕೇವಲ ಇಸ್ಲಾಂ ಮಾತ್ರ ಉಳಿಯಬೇಕು ಬೇರೆ ಧರ್ಮಗಳಿಗೆ ಈ ಜಾಗದಲ್ಲಿ ಅವಕಾಶ ಕೊಡಬಾರದು ಎಂಬ ಮನೋಭಾವನೆಯುಳ್ಳ ಧರ್ಮಾಂದರೂ ಆ ಸಮಯದಲ್ಲಿದ್ದರು. ದೇಶ ವಿಭಜನೆಯಾಗಿ ಭಾರತಕ್ಕೆ ಗುಳೆ ಹೊರಟ ಹಲವು ಹಿಂದೂ ಕುಟುಂಬಗಳು ತಮ್ಮ ಕುಟುಂಬದ ಆಧೀನದಲ್ಲಿದ್ದ ದೇವಾಲಯಗಳ ಮೂರ್ತಿಗಳನ್ನು ತಮ್ಮೊಂದಿಗೆ ಕೊಂಡೊಯ್ದರು. ಆಗ ಖಾಲಿ ಉಳಿದ ದೇವಾಲಯದ ಕಟ್ಟಡವನ್ನು ಆಯಾ ಜಮೀನಿನ ಒಡೆಯರು, ಜಮೀನುದಾದರು ಆಕ್ರಮಿಸಿಕೊಂಡರು. ಖಾಲಿಯಾಗಿದ್ದ ಕಟ್ಟಡಗಳನ್ನು ಸರ್ಕಾರಿ ಕಚೇರಿಗಳನ್ನಾಗಿಯೋ ಅಥವಾ ಕೆಡವಿ ಬೇರೆ ಕಟ್ಟಡವನ್ನೋ ಕಟ್ಟಲಾಯ್ತು. ಇವೆಲ್ಲಾ ಚಿಕ್ಕ ಚಿಕ್ಕ ದೇವಾಲಯಗಳಿಗೆ ಅನ್ವಯವಾದರೆ ದೊಡ್ಡ ಹಾಗೂ ಪ್ರಮುಖ ದೇವಾಲಯಗಳು ಹಾಗೇ ಉಳಿದವು. ದೇಶ ತೊರೆಯಲು ಸಿದ್ಧರಿರದಿದ್ದ ಹಿಂದೂ ಹಾಗೂ ಸಿಖ್ ಕುಟುಂಬಗಳು ಯಥಾಪ್ರಕಾರ ತಮ್ಮ ಪೂಜೆ ಪುನಸ್ಕಾರಗಳನ್ನು ಮುಂದುವರೆಸಿಕೊಂಡು ಬಂದರು. ಆದರೆ ಅವರಿಗೆ ಸ್ಥಳೀಯರಿಂದ ವಿರೋಧ ಕಂಡುಬಂದಿತ್ತು. ಸುಮಾರು ಒಂದು ದಶಕದವರೆಗೂ ಈ ಬಗೆ ಯಾವುದೇ ಸ್ಪಷ್ಟ ಕಾನುನು ಅಥವಾ ಕಟ್ಟಳೆ ಇರಲಿಲ್ಲ. ಬಳಿಕ ಸುಮಾರು ಐವತ್ತರ ದಶಕದ ಕೊನೆಯಲ್ಲಿ ಪಾಕಿಸ್ತಾನ ಸರ್ಕಾರ ಅಲ್ಪಸಂಖ್ಯಾತರಾದ ಹಿಂದೂ ಹಾಗೂ ಸಿಖ್ ಕುಟುಂಬಗಳ ರಕ್ಷಣೆಗಾಗಿ ಸೂಕ್ತ ಕಾನೂನನ್ನು ಅಳವಡಿಸಿತ್ತು. ಆ ಪ್ರಕಾರ ಪ್ರಮುಖ ದೇವಾಲಯಗಳ ಒಳಭಾಗದಲ್ಲಿ ಮಾತ್ರ ಪೂಜೆ ಪುನಸ್ಕಾರಗಳಿಗೆ ಅವಕಾಶವಿದ್ದು ಸಾರ್ವಜನಿಕ ಮೆರವಣಿಗೆ, ಸಾರ್ವಜನಿಕ ವಿಗ್ರಹ ಪ್ರದರ್ಶನ ಮೊದಲಾದವುಗಳಿಗೆ ನಿಷೇಧ ಹೇರಲಾಯಿತು. ಆ ದಿನಗಳಲ್ಲಿ ಪಾಕಿಸ್ತಾನದ ಉತ್ತರ ಭಾಗದಲ್ಲಿ ಹಲವಾರು ಬುದ್ಧನ ವಿಗ್ರಹಗಳಿದ್ದವು. ಆ ವಿಗ್ರಹಗಳಲ್ಲಿ ಹಲವಾರನ್ನು ಧರ್ಮಾಂಧರು ಧ್ವಂಸಗೊಳಿಸಿದ್ದರು. ಬಳಿಕ ಪಾಕಿಸ್ತಾನ ಸರ್ಕಾರ ಸಾಧವಾದಷ್ಟು ವಿಗ್ರಹಗಳನ್ನು ಒಂದಾದ ಮೇಲೊಂದರಂತೆ ಬುದ್ಧ ಧರ್ಮಿಯ ರಾಷ್ಟ್ರಗಳಿಗೆ ರವಾನಿಸಿತು. ಬಹುಪಾಲು ವಿಗ್ರಹಗಳನ್ನು ಸಾಗಿಸಲಾಯಿತಾದರೂ ಈಗಲೂ ಕೆಲವು ವಿಗ್ರಹಗಳು ಉಳಿದುಕೊಂಡಿವೆಯಂತೆ.

 

ಪಾಕಿಸ್ತಾನದ ಒಟ್ಟಾರೆ ಜನಸಂಖ್ಯೆಯಲ್ಲಿ ಹಿಂದೂಗಳ ಪಾಲು ಕೇವಲ ೧.೬%. ಪಾಕಿಸ್ತಾನದ ಉತ್ತರ ಭಾಗಗಳಲ್ಲಿ ಹಿಂದೂ ಹಾಗೂ ಸಿಖ್ ಕುಟುಂಬಗಳು ಉಳಿದುಕೊಂಡಿದ್ದರೂ ಸ್ಥಳೀಯರು ನೀಡುವ ಕಿರುಕುಳ ಹಾಗೂ ಭಾರತಕ್ಕೆ ವಲಸೆಬಂದ ಅವರ ಸಂಬಂಧಿಕರ ಉತ್ತಮ ಜೀವನಗಳನ್ನು ಕಂಡ ಹಲವು ಕುಟುಂಬಗಳು ನಿಧಾನವಾಗಿ ಭಾರತಕ್ಕೆ ವಲಸೆ ಬಂದ ಪರಿಣಾಮವಾಗಿ ಉತ್ತರ ಭಾಗದಲ್ಲಿ ಅತ್ಯಲ್ಪ ಪ್ರಮಾಣದ ಹಿಂದೂ ಹಾಗೂ ಸಿಖ್ ಕುಟುಂಬಗಳು ಈಗ ಉಳಿದುಕೊಂಡಿವೆ. ಆದರೆ ಪಾಕಿಸ್ತಾನದ ದಕ್ಷಿಣ ಭಾಗದಲ್ಲಿ (ಅಂದರೆ ಸಿಂಧ್ ರಾಜ್ಯ, ಕರಾಚಿ ನಗರ) ಹಿಂದೂಗಳು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಇವರಲ್ಲಿ ಹಲವರು ತಮ್ಮ ಧರ್ಮದ ಉಳಿವಿಗಾಗಿ ಶ್ರಮವಹಿಸಿದ್ದ ಪರಿಣಾಮವಾಗಿ ಇನ್ನೂ ಹಲವು ದೇವಾಲಯಗಳು ಸುರಕ್ಷಿತವಾಗಿ ಉಳಿದುಕೊಂಡಿವೆ. ಸುಮಾರು ಐದು ವರ್ಷಗಳ ಹಿಂದೆ ಪಾಕಿಸ್ತಾನ್ ಹಿಂದೂ ಕೌಂಸಿಲ್ ಎಂಬ ಸಂಘಟನೆ ಸ್ಥಾಪಿತವಾಗಿದೆ (http://www.pakistanhinducouncil.org/). ಪಾಕಿಸ್ತಾನದ ಹಿಂದೂಗಳ ಐಕ್ಯತೆ, ದೇವಾಲಯಗಳ ರಕ್ಷಣೆ, ಹಿಂದೂ ಸಂಸ್ಕೃತಿ ಯನ್ನು ಮುಂದಿನ ಜನಾಂಗದ ಮಕ್ಕಳಲ್ಲಿ ಮೂಡಿಸುವುದು ಮೊದಲಾದವು ಈ ಸಂಘಟನೆಯ ಉದ್ದೇಶಗಳು. ಪಾಕಿಸ್ತಾನದ ಸರ್ಕಾರದಲ್ಲಿಯೂ ಒಂದು ಸಚಿವಾಲಯವಿದ್ದು ಅಲ್ಪಸಂಖ್ಯಾತರಾದ ಹಿಂದೂ ಹಾಗೂ ಸಿಖ್ ಸಮುದಾಯದ ಕುಂದುಕೊರತೆಗಳನ್ನು ನೋಡಿಕೊಳ್ಳುತ್ತದೆ. ಈಗ ಸುಸ್ಥಿತಿಯಲ್ಲಿರುವ ಬಹುತೇಕ ದೇವಾಲಯಗಳಲ್ಲಿ ಆಯಾ ಪ್ರದೇಶದ ಹಿಂದೂ ಜನಸಂಖ್ಯೆಯ ಬಾಹುಳ್ಯವನ್ನು ಅನುಸರಿಸಿ ಪೂಜೆ ಪುನಸ್ಕಾರಗಳು ನಡೆಯುತ್ತಿವೆ. ಆದರೆ ಹೆಚ್ಚಿನ ಜನಸಂಖ್ಯೆ ಇಲ್ಲದ ಕಡೆಯ ದೇವಾಲಯಗಳನ್ನು ಸಾಧ್ಯವಾದಷ್ಟು ಮಟ್ಟಿಗೆ ಸುಸ್ಥಿತಿಯಲ್ಲಿರುವಂತೆ ನೋಡಿಕೊಂಡಿದೆಯಾದರೂ ವಿಶೇಷ ದಿನ ಹಾಗೂ ಹಬ್ಬ ಹರಿದಿನಗಳ ಸಂದರ್ಭದಲ್ಲಿ ಮಾತ್ರ ಪೂಜೆ ನಡೆಸಲಾಗುತ್ತಿದೆ. ಪಾಕಿಸ್ತಾನದ ಕ್ರಿಕೆಟ್ ಆಟಗಾರ ದಾನಿಶ್ ಕನೇರಿಯಾ ಕರಾಚಿಯ ಹಿಂದೂ ಕುಟುಂಬದಿಂದ ಬಂದವರು.

 

ಪಾಕಿಸ್ತಾನದ ದಕ್ಷಿಣ ಭಾಗದಲ್ಲಿ ಅತಿ ಕಡಿಮೆ ಸಂಖ್ಯೆಯಲ್ಲಿ ಕ್ರೈಸ್ತರೂ ಇದ್ದಾರೆ. ಆದರೆ ಉತ್ತರ ಭಾಗದಲ್ಲಿ ಮಾತ್ರ ಇಲ್ಲವೇ ಇಲ್ಲ ಎನ್ನುವಷ್ಟು ಕಡಿಮೆ. ದಕ್ಷಿಣ ಭಾಗದಲ್ಲಿಯೂ ಬಹುತೇಕರು ಕರಾಚಿ ನಗರದಲ್ಲಿಯೇ ನೆಲೆಸಿದ್ದಾರೆ. ನಗರದ ಹಲವೆಡೆ ಇಗರ್ಜಿಗಳಿವೆ. ಆದರೆ ದೇವಾಲಯಗಳಿಗೆ ಅನ್ವಯವಾಗುವ ಕಾನೂನುಗಳು ಇಗರ್ಜಿಗೂ ಅನ್ವಯಿಸುತ್ತವೆ. ಪಾಕಿಸ್ತಾನದ ಉತ್ತರ ಭಾಗದಲ್ಲಿ ಹಲವು ಸಿಖ್ ಗುರುದ್ವಾರಗಳಲ್ಲಿ ಇಂದಿಗೂ ಪೂಜೆ ಪುನಸ್ಕಾರಗಳು ನಡೆಯುತ್ತಾ ಬಂದಿವೆ. (ವಾಜಪೇಯಿಯವರು ಪ್ರಧಾನಿಗಳಾಗಿದ್ದಾಗ ದೆಹಲಿ ಲಾಹೋರ್ ನಡುವೆ ಬಸ್ ಸಂಚಾರಕ್ಕೆ ಹೆಚ್ಚಿನ ಮಹತ್ವ ನೀಡಿದ್ದೂ ಇದೇ ಕಾರಣಕ್ಕಾಗಿ). ರಾವಲ್ಪಿಂಡಿ ಬಳಿಯ (ನಗರದಿಂದ ನಲವತ್ತೆಂಟು ಕಿ.ಮೀ ದೂರ) ಪಂಜಾ ಸಾಹಿಬ್ ಗುರುದ್ವಾರದಲ್ಲಿರುವ ಒಂದು ಕಲ್ಲಿನ ಮೇಲೆ ಗುರು ನಾನಕ್ ರವರ ಹಸ್ತದ ಪಡಿಯಚ್ಚಿರುವುದೆಂದು ನಂಬಲಾಗಿದ್ದು ಈ ಗುರುದ್ವಾರಕ್ಕೆ ಪ್ರತಿವರ್ಷ ಎರೆಡು ಬಾರಿ ಸಿಖ್ ಅನುಯಾಯಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುತ್ತಾರೆ.

 

 

ಕರಾಚಿ ನಗರದಲ್ಲಿ ಸುಮಾರು ಹದಿನೈದು ದೇವಾಲಯಗಳು ಹಾಗೂ ಹಿಂದೂ ರುದ್ರಭೂಮಿ ಗಳಿವೆ. ಈ ದೇವಾಲಯಗಳಲ್ಲಿ ಪ್ರತಿದಿನ ಪೂಜೆ ನಡೆಯುತ್ತಿವೆ. ದೇಶದಲ್ಲಿ ಇನ್ನೂ ಹೆಚ್ಚು ಕಡಿಮೆ ಸುಸ್ಥಿತಿಯಲ್ಲಿರುವ ಅಥವಾ ಕೊಂಚ ಪಾಳುಬಿದ್ದು ಸುಸ್ಥಿತಿಗೆ ತರಬಹುದಾದ ದೇವಾಲಯಗಳ ಬಗ್ಗೆ ಮಾಹಿತಿ ಪಡೆದು ಪುನಃ ಮೊದಲಿನಂತಾಗಿಸುವ ಪ್ರಕ್ರಿಯೆಗೆ ಈಗ ಚಾಲನೆ ದೊರಕಿದೆ. ಹಲವು ಕಟ್ಟಡಗಳನ್ನು ಜಮೀನುದಾರರು ಆಕ್ರಮಿಸಿಕೊಂಡಿದ್ದನ್ನು ಪಾಕಿಸ್ತಾನ ಸರ್ಕಾರ ಹಿಂಪಡೆದುಕೊಂಡಿದೆ. ಈ ನಿಟ್ಟಿನಲ್ಲಿ ಪಾಕಿಸ್ತಾನ ಪ್ರಾಚ್ಯವಸ್ತು ಇಲಾಖೆ ಪ್ರಶಂಸನೀಯ ಕೆಲಸ ಮಾಡಿದೆ. ಉತ್ತರ ಪಾಕಿಸ್ತಾನದಾದ್ಯಂತ ಹಲವು ಹಿಂದಿನ ನಾಗರಿಕತೆಯ ಕುರುಹುಗಳು ಉಳಿದಿದ್ದು ಈ ಇಲಾಖೆ ಆ ಪ್ರದೇಶಗಳಲ್ಲಿ ಉತ್ಖತನ ನಡೆಸುತ್ತಿದೆ. ಮೊಹಿಂಜೋದಾರೋ, ಹರಪ್ಪಾ ಗಳು ಈ ನಿಟ್ಟಿನಲ್ಲಿ ಪ್ರಮುಖವಾದವು. ನೌಶಾರೋ, ಕೋಟ್ ಅಲ್ಲಾ ದಾದ್, ಪಿರಾಕ್, ಗುಜೋ, ಥಾರೋ ಬೆಟ್ಟಗಳು, ಕಹೂ ಜೋ ದಾರೋ (ಬುದ್ಧನ ಪ್ರತಿಮೆಗಳು ಹೆಚ್ಚಿನ ಸಂಖ್ಯೆಯಲ್ಲಿ ಸಿಕ್ಕ ಸ್ಥಳ) ಸಿರಾಜ್ -ಎ- ತಕ್ರೀ ಮೊದಲಾದ ಸ್ಥಳಗಳು ಪ್ರಾಕ್ತನಶಾಸ್ತ್ರ ವಿಷಯದ ಪ್ರಮುಖ ತಾಣಗಳು.

 

ಸಧ್ಯಕ್ಕೆ ಇಷ್ಟು ವಿಷಯಗಳು ಸಾಕು. ಮುಂದಿನ ದಿನಗಳಲ್ಲಿ ಪಾಕಿಸ್ತಾನದ ಇನ್ನಷ್ಟು ವಿಷಯಗಳನ್ನು ನೀಡಲು ಪ್ರಯತ್ನಿಸುವೆ.

 

ಅರ್ಶದ್ ಹುಸೇನ್ ಎಂ.ಹೆಚ್,

ದುಬೈ.

 

 

 

 

 

 

 

ಬ್ಲಾಗ್ ವರ್ಗಗಳು: 
‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 4.3 (6 votes)
To prevent automated spam submissions leave this field empty.

ಪ್ರತಿಕ್ರಿಯೆಗಳು

Submitted by ananthesha nempu on

ಒಳ್ಳೆಯ ಮಾಹಿತಿ ಅರ್ಶದ್, ಧನ್ಯವಾದಗಳು.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by virakannadia on

ಉತ್ತಮವಾದ ಮಾಹಿತಿ ಗಾಗಿ ವಂದನೆಗಳು,
ಇತ್ತೀಚೆಗಷ್ಟೆ ಮದುವೆಯಾಯಿತೆಂದು ತಿಳಿದುಬಂತು, ದಂಪತಿಗಳಿಗೆ ಶುಭಾಶಯ, ನೂರ್ಕಾಲ ಸುಖವಾಗಿ ಬಾಳಿ :)

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by vinayudupa on

ಒಳ್ಳೆಯ ಮಾಹಿತಿಗಾಗಿ ಧನ್ಯವಾದಗಳು. ಆದ್ರೆ ಫೋಟೋ ಕಾಣುತ್ತಿಲ್ಲ.. ದಯವಿಟ್ಟು ಸಂಪದದಲ್ಲೇ ಅಪ್ಲೋಡ್ ಮಾಡಿ..

-------
ವಿನಯ ಉಡುಪ

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by somanatha on

ಪಾಕಿಸ್ತಾನದಲ್ಲಿ ದೇವಾಲಯಗಳು,ಇಗರ್ಜಿಗಳು ಇನ್ನೂ ಸುಸ್ಥಿತಿಯಲ್ಲಿವೆಯೇ.? ಆಶ್ಚರ್ಯ.! ಪರಮಾಶ್ಚರ್ಯ..!! ಪಾಕಿಸ್ತಾನವು ಕೇವಲ ಭಯೋತ್ಪಾದಕತೆ, ಅನ್ಯಧರ್ಮ ಅಸಹಿಷ್ಣುತೆ, ಬಡತನ,ಅನ್ಯಾಯ,ಅನಾಚಾರ ಇತ್ಯಾದಿಗಳಿಂದ ತುಂಬಿಕೊಂಡಿರುವ ದೇಶವೆಂದೇ ನಂಬಿಕೊಂಡಿದ್ದ ನನ್ನ ಮೇಲೆ ಈ ಲೇಖನ ನಿಜಕ್ಕೂ ಪ್ರಭಾವ ಬೀರಿತು,ಮನ ತುಂಬಿ ಬಂತು. ಮಾಧ್ಯಮಗಳ ಮೂಲಕ ತಿಳಿದುಕೊಂಡದ್ದಕ್ಕಿಂತ ಪರಿಸ್ಥಿತಿ ಭಿನ್ನವಾಗಿದೆ. ಪ್ರಾಚ್ಯವಸ್ತು ಇಲಾಖೆ ಇಂಥ ಪುರಾತನ ದೇವಾಲಯಗಳನ್ನು ಉಳಿಸಿ ಸಂರಕ್ಷಿಸುವ ನಿಟ್ಟಿನಲ್ಲಿ ಉತ್ತಮ ಹೆಜ್ಜೆ ಇಟ್ಟಿದೆ..ಮಾಹಿತಿ ನೀಡಿದ ಆರ್ಷದ್ ನಿಜಕ್ಕೂ ಪ್ರಶಂಸನೀಯರು.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by jayu_pu on

ತಮ್ಮೆಲ್ಲಾ ಮಾಹಿತಿಗೆ ತುಂಬಾ ಧನ್ಯವಾದಗಳು. ನಾನು ಬಲುಚಿಸ್ತಾನ ಭಾಗದ ಹಿಂಗುಲತಾ ಮಂದಿರದ ಬಗ್ಗೆ ಕೇಳಿದ್ದೆ. ಇಷ್ಟೆಲ್ಲಾ ಮಾಹಿತಿ ತಿಳಿಸಿದ್ದಕ್ಕೆ ಧನ್ಯವಾದಗಳು.
ಹಿಂಗುಲತಾ ಮಂದಿರದ ಇತಿಹಾಸದ ಬಗ್ಗೆ ಸ್ವಲ್ಪ ತಿಳಿಸಿ.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by mpneerkaje on

ಎಲ್ಲ ಕಡೆಗಳಂತೆ ಪಾಕಿಸ್ಥಾನದಲ್ಲೂ ನಡೆಯುತ್ತಿರುವುದು ಧರ್ಮಾಂಧರು ಮತ್ತು ಜನ ಸಾಮಾನ್ಯರ ಮಧ್ಯೆ ಉಳಿವಿಗಾಗಿ ಹೋರಾಟ. ಸಾಧುಗಳಾದ ಸೂಫಿಗಳನ್ನು, ಅಹ್ಮದಿಗಳನ್ನು, ಸ್ವಲ್ಪ ಮಟ್ಟಿಗೆ ಶಿಯಾಗಳನ್ನು ಮತಾಂಧರು ಸಿಕ್ಕ ಸಿಕ್ಕಲ್ಲಿ ಕೊಲ್ಲುತ್ತಿದ್ದಾರೆ! ಸಮಸ್ಯೆ ಎದುರಾಗುವುದು ಧರ್ಮಾಂಧರ ಕೈ ಮೇಲಾದಾಗ.. ಇಸ್ಲಾಮ್ ಅತಿ ವೈರುಧ್ಯಗಳ ಮತ ಎಂದು ನನ್ನ ವೈಯಕ್ತಿಕ ನಂಬಿಕೆ (ಅಲ್ಲಿ ತೀರಾ ಒಳ್ಳೆಯವರೂ ಕಂಡುಬರುತ್ತಾರೆ, ತೀರಾ ಕೆಟ್ಟವರೂ, ಧರ್ಮಾಂಧರೂ). ಅದಕ್ಕೆ ಹೋಲಿಸಿದಲ್ಲಿ ಹಿಂದುಗಳು ಮಧ್ಯಮಿಗಳು. ಇಲ್ಲಿ ಒಳ್ಳೆಯವರೆಲ್ಲ ತೀರ ಒಳ್ಳೆಯವರಲ್ಲ, ಕೆಟ್ಟವರೆಲ್ಲ ತೀರ ಕೆಟ್ಟವರಲ್ಲ. ಒಂದೊಂದು ಮತಕ್ಕೆ ಒಂದೊಂದು ಗುಣ.

ಇದು ನನ್ನ ವೈಯಕ್ತಿಕ ಅಭಿಪ್ರಾಯ ಅಷ್ಟೆ. ಅಂದಹಾಗೆ ಒಳ್ಳೆಯ ಲೇಖನ ಅರ್ಷದ್...

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by ರಘುನಂದನ on

ನಿಮ್ಮ ಅಕ್ಕ ಹಾಗು ಭಾವ ಪಾಕಿಸ್ತಾನದಲ್ಲಿ ನೆಲೆಸಿರುವುದು ನನಗೆ ತುಂಬಾ ಸಂತಸವನ್ನು ನೀಡಿದೆ. ಕೈಯಲ್ಲಿ ಒಂದಿಷ್ಟು ದುಡ್ಡು, (ಎದೆಯಲ್ಲಿ ಒಂದಿಷ್ಟು ಧೈರ್ಯ ಹೇಗೂ ಇದ್ದೇ ಇದೆ ;) ) ಆದರೆ ಪಾಕಿಸ್ತಾನವನ್ನೆಲ್ಲ ಸುತ್ತಾಡಿ ಬರಲು ನಂಗೆ ಆಸೆ. ಅನುಕೂಲ ಆದರೆ (?) ಅಲ್ಲಿಯೇ ಸೆಟ್ಲ್ ಆಗಲೂ ಆಸೆ ಇದೆ. ಯಾಕೋ ಗೊತ್ತಿಲ್ಲ. ಒಂದು ವೇಳೆ ಅಲ್ಲಿಗೆ ಹೋಗಿ ಬರುವ(?) ಅನುಕೂಲವಾದರೆ ನಿಮ್ಮ ಅಕ್ಕನವರನ್ನು ಸಂಪರ್ಕಿಸಲಾದೀತೋ? ಅವರು ಕನ್ನಡವನ್ನು ಮಾತನಾಡುತ್ತಾರೆಯೋ? ಅವರ ವಿಳಾಸವೇನಾದರೂ ದೊರಕೀತೋ?

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.