ನನ್ನ ಕವನಗಳು
ನನ್ನ ಕವನಗಳು, ಬರೀ ನನ್ನ ಕನಸುಗಳಲ್ಲ, ಅವು ಬರೀ ಜೀವನ ಪಾಠಗಳು ಅಥವಾ ಅನುಭವಗಳೂ ಅಲ್ಲ, ಅವು ಕೇವಲ ನನ್ನ ಕಣ್ಣ ಬಿಂಬಗಳಲ್ಲ.
ಇವುಗಳಾಚೆಗೆ ನನ್ನ ಕವನಗಳು, ನನಗೆ ಬೇರೆಯ ಅನುಭವವನ್ನೇ ನೀಡುತ್ತವೆ, ಹಾಗೆಂದು ನನ್ನ ಕವನಗಳು ನನಗೆ ತುಂಬಾ ಖುಷಿ ನೀಡಿವೆ ಎಂದಲ್ಲ.. ಕೆಲವೊಮ್ಮೆ, ನನ್ನ ಕೆಲವು ಕವನಗಳೊಂದಿಗೆ ನಾನು ಅಸಂತುಷ್ಟನೆ..... ನಾ ಬರೆದ ಆ ಕವನ ಹೇಳುವುದರಾಚೆಗೂ ಇನ್ನೂ ಉಳಿದಿದೆ ಎಂದೆನಿಸಿ ನನ್ನ ಕವನ ನನಗೆಯೇ ಅಪೂರ್ಣ ಎಂದೆನಿಸಿ ಬಿಡುತ್ತದೆ.
ಆ ಅಪೂರ್ಣತೆ ಏನೆಂಬುದನ್ನ ತೋರಿಸುವ ಹೊಣೆ ನಿಮ್ಮದಾಗಿದೆ...
ನನ್ನ ಕವನಗಳನ್ನ ಓದಿ, ನಿಮ್ಮ ಸಲಹೆ ಅಥವಾ ವಿಮರ್ಷೆಗಳನ್ನ ನೀಡಿ......
ಸ್ನೇಹ ನಿನಾದ
ಸ್ನೇಹ ನಿನಾದ
ಹರಿವ ನೀರ ಕಲರವದಂತೆ ನಿನ್ನ ಸ್ನೇಹ ಗೆಳತಿ
ಕೇಳಲು ಇಂಪು ಅದು ಸೂಸುವ ನಿನಾದ.
ಬಿದಿಗೆ ಚಂದ್ರಮನಂತೆ ನಿನ್ನ ಸ್ನೇಹ ಗೆಳತಿ
ನೋಡಲು ಕಣ್ಣಿಗೆ ತಂಪು, ಮನಸಿಗೆ ಆನಂದ.
ಸಂಜೆಗಂಪಲ್ಲಿ ಭೋರ್ಗರೆವ ಕಡಲಂತೆ ನಿನ್ನ ಸ್ನೇಹ ಗೆಳತಿ
ಹೊಮ್ಮುತಿವೆ ಭಾವನೆಗಳು ಏನನ್ನೋ ಹೇಳುವಂತೆ.
ಹೇಳು ಗೆಳತಿ, ಹೇಗಿರಬೇಕು ನಮ್ಮ ಸ್ನೇಹ?
ಹುಣ್ಣಿಮೆಯಂದು, ಪೂರ್ಣ ಚಂದ್ರ ಚೆಲ್ಲುವ ಬೆಳದಿಂಗಳಿನಂತಿರಲೆ?
ಬಗೆ ಬಗೆಯ ಹೂಗಳ ಮುಡಿದು ನಗೆ ಚೆಲ್ಲುವ ಹೂತೋಟದಂತಿರಲೆ?
ಏನನ್ನೂ ಹೇಳದೆ, ಎಲ್ಲವನ್ನೂ ಸೂಚಿಸುವ ಕನ್ನಡಿಯಂತಿರಲೆ?
ಬಿಸಿಲಿನ ಕೋಪಕ್ಕೆ ಬೇಸತ್ತು ನೊಂದ ಭೂತಾಯಿಗೆ,
ತಂಪು, ಕಂಪು ತರುವ ವರ್ಷಧಾರೆಯಾಗಲಿ.
ಬಿರುಗಾಳಿಯ ರಭಸಕ್ಕೆ ನಲುಗಿದರೂ,
ತನ್ನಂತರಾಳದಲ್ಲಿ ಪ್ರಶಾಂತವಾಗಿರುವ ಸಾಗರದಂತಿರಲಿ.
ಒಂಭತ್ತು ತಿಂಗಳು ಹೊತ್ತು, ಹಡೆವ ತಾಯಿಯು
ಸುರಿಸುವ ಆನಂದಭಾಷ್ಪವಾಗಲಿ.
ಕೇಳು ಗೆಳತಿ ಹೀಗಿರಲಿ ನಮ್ಮ ಸ್ನೇಹ.
-- ಅರುಣ ಸಿರಿಗೆರೆ

- arunasirigere ರವರ ಬ್ಲಾಗ್
- Login or register to post comments
- 127 hits
- Email this blog




RSS: