ನನ್ನ ಕವನಗಳು
ನನ್ನ ಕವನಗಳು, ಬರೀ ನನ್ನ ಕನಸುಗಳಲ್ಲ, ಅವು ಬರೀ ಜೀವನ ಪಾಠಗಳು ಅಥವಾ ಅನುಭವಗಳೂ ಅಲ್ಲ, ಅವು ಕೇವಲ ನನ್ನ ಕಣ್ಣ ಬಿಂಬಗಳಲ್ಲ.
ಇವುಗಳಾಚೆಗೆ ನನ್ನ ಕವನಗಳು, ನನಗೆ ಬೇರೆಯ ಅನುಭವವನ್ನೇ ನೀಡುತ್ತವೆ, ಹಾಗೆಂದು ನನ್ನ ಕವನಗಳು ನನಗೆ ತುಂಬಾ ಖುಷಿ ನೀಡಿವೆ ಎಂದಲ್ಲ.. ಕೆಲವೊಮ್ಮೆ, ನನ್ನ ಕೆಲವು ಕವನಗಳೊಂದಿಗೆ ನಾನು ಅಸಂತುಷ್ಟನೆ..... ನಾ ಬರೆದ ಆ ಕವನ ಹೇಳುವುದರಾಚೆಗೂ ಇನ್ನೂ ಉಳಿದಿದೆ ಎಂದೆನಿಸಿ ನನ್ನ ಕವನ ನನಗೆಯೇ ಅಪೂರ್ಣ ಎಂದೆನಿಸಿ ಬಿಡುತ್ತದೆ.
ಆ ಅಪೂರ್ಣತೆ ಏನೆಂಬುದನ್ನ ತೋರಿಸುವ ಹೊಣೆ ನಿಮ್ಮದಾಗಿದೆ...
ನನ್ನ ಕವನಗಳನ್ನ ಓದಿ, ನಿಮ್ಮ ಸಲಹೆ ಅಥವಾ ವಿಮರ್ಷೆಗಳನ್ನ ನೀಡಿ......
ಕಲ್ಪನೆಯ ಹುಡುಗಿ
ಕಲ್ಪನೆಯ ಹುಡುಗಿ
ನನ್ನ ಕಲ್ಪನೆಯ ಹುಡುಗಿ,
ಆಭರಣಗಳ ಹಂಗಿಲ್ಲದವಳು
ನಿರಾಭರಣೆಯೇನಲ್ಲ!
ತುಂಟನಗೆ, ಮಿಂಚನೋಟ ತೊಟ್ಟವಳು
ನನ್ನ ಕಲ್ಪನೆಯ ಹುಡುಗಿ,
ಹಮ್ಮುಬಿಮ್ಮುಗಳ ಸೋಂಕಿಲ್ಲದವಳು
ಮುಗ್ಧ ಬೆಡಗಿಯೇನಲ್ಲ!
ಒನಪು ವೈಯ್ಯಾರಗಳ ಉಟ್ಟವಳು
ನನ್ನ ಕಲ್ಪನೆಯ ಹುಡುಗಿ
ಜೀನ್ಸ್ ಸ್ಕರ್ಟ್, ನೈಟಿಗಳೆಂದರೆ
ಮೂಗ ಮುರಿವವಳು
ನನ್ನ ಕಣ್ಣ ನೋಟಗಳು ನೇಯ್ದ
ಸೀರೆಗೆ ತಾನೆ ನೂಲಾದವಳು
ನನ್ನ ಕಲ್ಪನೆಯ ಹುಡುಗಿ
ಮಾತಿನಿಂದ ಅಣತಿ ದೂರ
ಮೌನ ದೇವತೆಯೇನಲ್ಲ
ಮಾತು ಬೆಳ್ಳಿ ಮೌನ ಬಂಗಾರ
ಎಂದರಿತವಳು.
ನನ್ನ ಕಲ್ಪನೆಯ ಹುಡುಗಿ
ಶೃಂಗಾರವೆನಲು ಕೆಂಪಗಾಗುವಳು
ಸಿಟ್ಟಿನಿಂದೇನಲ್ಲ
ಅವಳ ತಿಳಿನೀರ ಲಜ್ಜೆಯದು
ನನ್ನ ಕಲ್ಪನೆಯ ಹುಡುಗಿ
ಬರಿ ಕಲ್ಪನೆಯಲ್ಲೆ ಕನಸಾದವಳಲ್ಲ
ಕನಸುಗಳ ನನಸಾಗಿಸದಿದ್ದರೂ
ನನ್ನ ಭಾವನೆಗಳ ಬುತ್ತಿಯಾದವಳು
-- ಅರುಣ ಸಿರಿಗೆರೆ

- arunasirigere ರವರ ಬ್ಲಾಗ್
- Login or register to post comments
- 580 hits
- Email this blog




RSS:
ಪ್ರತಿಕ್ರಿಯೆಗಳು
ಉ: ಕಲ್ಪನೆಯ ಹುಡುಗಿ
ಚೆನ್ನಾಗಿದೆ ನಿಮ್ಮ ಕಲ್ಪನೆ..