ನನ್ನ ಕವನಗಳು
ನನ್ನ ಕವನಗಳು, ಬರೀ ನನ್ನ ಕನಸುಗಳಲ್ಲ, ಅವು ಬರೀ ಜೀವನ ಪಾಠಗಳು ಅಥವಾ ಅನುಭವಗಳೂ ಅಲ್ಲ, ಅವು ಕೇವಲ ನನ್ನ ಕಣ್ಣ ಬಿಂಬಗಳಲ್ಲ.
ಇವುಗಳಾಚೆಗೆ ನನ್ನ ಕವನಗಳು, ನನಗೆ ಬೇರೆಯ ಅನುಭವವನ್ನೇ ನೀಡುತ್ತವೆ, ಹಾಗೆಂದು ನನ್ನ ಕವನಗಳು ನನಗೆ ತುಂಬಾ ಖುಷಿ ನೀಡಿವೆ ಎಂದಲ್ಲ.. ಕೆಲವೊಮ್ಮೆ, ನನ್ನ ಕೆಲವು ಕವನಗಳೊಂದಿಗೆ ನಾನು ಅಸಂತುಷ್ಟನೆ..... ನಾ ಬರೆದ ಆ ಕವನ ಹೇಳುವುದರಾಚೆಗೂ ಇನ್ನೂ ಉಳಿದಿದೆ ಎಂದೆನಿಸಿ ನನ್ನ ಕವನ ನನಗೆಯೇ ಅಪೂರ್ಣ ಎಂದೆನಿಸಿ ಬಿಡುತ್ತದೆ.
ಆ ಅಪೂರ್ಣತೆ ಏನೆಂಬುದನ್ನ ತೋರಿಸುವ ಹೊಣೆ ನಿಮ್ಮದಾಗಿದೆ...
ನನ್ನ ಕವನಗಳನ್ನ ಓದಿ, ನಿಮ್ಮ ಸಲಹೆ ಅಥವಾ ವಿಮರ್ಷೆಗಳನ್ನ ನೀಡಿ......
ಅವ್ವನಿಗಾಗಿ
ಅವ್ವನಿಗಾಗಿ
ನಾ ಮೆಚ್ಚಿ ಬರೆವ ಈ ಕವನ
ನನ್ನವ್ವನಿಗೆ ಮುಡಿಪು
ತನ್ನೆದೆಯನುಣಿಸಿ ಎನಗೆ
ಆಕೆ ತುಂಬಿಕೊಟ್ಟ ಭಾವನೆಗಳಲಿ ಮಿಂದೊಮ್ಮೆ
ನಾ ಕವನವಾಗುವಾಸೆ ಅವಳಿಗಾಗಿ
ಅವಳು ನನಗೆ ಕೊಟ್ಟ ಪ್ರೀತಿಗಾಗಿ
ನನ್ನಳುವು ಕಿವಿಗಪ್ಪಳಿಸಲು
ಓಡಿಬಂದು ನನ್ನನೆತ್ತಿ
ತನ್ನೆದೆಗಪ್ಪಿ ಮುತ್ತನಿಟ್ಟವಳು
ಜೋಗುಳವ ಪೊರೆದು
ನನ್ನ ಪವಡಿಸಿದವಳು
ನಾ ಕವನವಾಗುವಾಸೆ ಅವಳಿಗಾಗಿ
ನನ್ನಮ್ಮ ನನಗಿಟ್ಟ ಮುತ್ತಿಗಾಗಿ
ನನ್ನ ನಗುವಿನಲಿ
ತಾನು ನಕ್ಕು, ನೋವ ಮರೆತವಳು
ನಾನಾಡದೆ ಹೇಳಿದ ಮಾತುಗಳ
ತಪ್ಪದೆ ಅರ್ಥೈಸಿದ ಏಕಳು
ನನಗಾಗಿ ತನ್ನ ಸುಖಗಳನು ತೊರೆದು
ನನ್ನ ಜೀವನವಾದವಳು
ನಾ ಕವನವಾಗುವಾಸೆ, ಅವಳಿಗಾಗಿ
ಅವಳು ಕೊಟ್ಟ ಈ ಜೀವಕ್ಕಾಗಿ
ಇಂದು ನಾನಿಲ್ಲಿ ದೂರ ತೀರದಲಿ
ಬೆಳೆದಿಹೆನು ನಾನೀಗ
ದುಡಿಯವೆನು ನಾ
ಜವಾಬ್ದಾರಿಗಳು ನನ್ನೆಗಲಲ್ಲಿ
ನೆನಪಾಗುವಳು ನನ್ನವ್ವ
ನಾ ಕವನವಾಗುವಾಸೆ ಅವಳಿಗಾಗಿ
ಅವಳು ಕೊಟ್ಟ ಈ ಬಾಳಿಗಾಗಿ
ನೆನಪಾದಾಗಲೆಲ್ಲ ನನ್ನವ್ವ
ಮನದ ತುಂಬ ದುಗುಡ
ತುಂಬಿ ಬರುವ ಕಣ್ಣುಗಳು
ಕಳೆದುಕೊಂಡಿಹೆನು ನಾನು ಏನೆಲ್ಲವ
ಕೈ ತುತ್ತು, ಸಿಹಿಮುತ್ತು ಮತ್ತವಳ ಒಡಲು
ಓಡಿ ಅವಳ ಮಡಿಲ ಸೇರುವ ತವಕ
ಮಡಿಲಲ್ಲಿ ಮುಖವಿಟ್ಟು ಪವಡಿಸುವಾಸೆ
ಮನಬಿಚ್ಚಿ ನನ್ನ ಕನಸುಗಳ ಹೇಳುವಾಸೆ
ಹೀಗೆ ಇನ್ನದೆಷ್ಟೋ ಆಸೆಗಳು
ಹೇಳಲಾಗದ ಆ ಆಸೆಗಳಿಗೆ ಭಾವನೆಗಳಿಟ್ಟವಳು ನೀನು
ನಾ ಕವನವಾಗುವಾಸೆ ನಿನಗಾಗಿ ನನ್ನವ್ವ
ನನ್ನಲ್ಲಿ ನೀ ತುಂಬಿದ ಈ ಭಾವಗಳಿಗಾಗಿ
-- ಅರುಣ ಸಿರಿಗೆರೆ

- arunasirigere ರವರ ಬ್ಲಾಗ್
- Login or register to post comments
- 221 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ




RSS:
ಪ್ರತಿಕ್ರಿಯೆಗಳು
ಉ: ಅವ್ವನಿಗಾಗಿ
ತಾಯಿ ಎಂಬ ಕರುಳ ಬಳ್ಳಿಯ ಸಂಬಂಧ ಗಂಡು ಮಕ್ಕಳಿಗೆ ಬಹಳ ಗಾಢವಾಗಿ ಬಂಧಿಸುತ್ತದೆ. ತಾಯೇ ದೇವರು!
................................................................
ಹಾಸ್ಯಕ್ಕೆ ಮೀಸಲಾದ ನನ್ನ ಬ್ಲಾಗು: http://nagenagaaridotcom.wordpress.com
ಭೇಟಿ ಕೊಡಿ, ಓದಿ, ಸಲಹೆ ನೀಡಿ, ನೀವೂ ಬರೆಯಿರಿ
ಉ: ಅವ್ವನಿಗಾಗಿ
ತುಂಬಾ ಚೆನ್ನಾಗಿದೆ.
ತಾಯಿಯ ಬಗ್ಗೆ ಎಷ್ಟು ಹೇಳಿದರೂ ಸಾಲದು. ಅವಳನ್ನು ವರ್ಣಿಸಲಸಾಧ್ಯ!!
ಚಂದನ
ಕೆಲವಂ ಬಲ್ಲವರಿಂದ ಕಲ್ತು
ಕೆಲವಂ ಮಾಲ್ಪವರಿಂದ ಕಂದು ಮತ್ತೆ
ಹಲವಂ ತಾನೆ ಸ್ವತಹಃಮಾಡಿ ತಿಳಿ ಎಂದ ಸರ್ವಜ್ಞ