ಹಿಂದೆಂದೂ ಕಂಡರಿಯದ
ಸುದೀರ್ಘ ಅನಾವೃಷ್ಟಿ,
ಆಸುಮನದಲ್ಲಿ ಆಗುತ್ತಿಲ್ಲ
ಈಗೇನೂ ಹೊಸಸೃಷ್ಟಿ;
ಏನನ್ನು ಕಂಡರೂ ಈಗ
ಈ ಮನ ಸ್ಪಂದಿಸುತಿಲ್ಲ,
ಏನನ್ನು ಕೇಳಿದರೂ ಈಗ
ಈ ಮನ ಸ್ಪಂದಿಸುತ್ತಿಲ್ಲ;
ಭಾವನೆಗಳ ಬಾವಿಯೇ
ಬತ್ತಿ ಹೋಗಿರುವಂತಿದೆ
ಹೊಸ ಮಾತೇನೂ ಈ
ಮನದಿಂದ ಬಾರದಂತಿದೆ;
ತೋರುತಿದೆ ನಿರಾಸಕ್ತಿ
ಮನಸ್ಸು ಈಗ ಎಲ್ಲದಕೆ,
ಯಾರೋ ಕೈಯೆತ್ತಿ ಶಾಪ
ನೀಡಿದಂತಿದೆ ಈ ಮನಕೆ;
ಕ್ರಿಯೆಯೂ ಇಲ್ಲ, ಇಲ್ಲಿ
ಯಾವ ಪ್ರತಿಕ್ರಿಯೆಯೂ ಇಲ್ಲ,
ಯಾರು ಏನೆಂದರೂ ಇದು
ಹೊರಡಿಸುವುದೇ ಇಲ್ಲ ಸೊಲ್ಲ;
ಅದು ಯಾವುದೋ ಅವ್ಯಕ್ತ
ನಿರೀಕ್ಷೆ ಈ ಮನದೊಳಗೆ,
ಏನನ್ನೋ ಕೇಳಬಯಸುವ
ಆಸೆ ಇದೆ ನನ್ನೀ ಕಿವಿಗಳಿಗೆ;
ಅದು ಯಾವುದರ ನಿರೀಕ್ಷೆ
ಎಂಬುದರ ಅರಿವೇ ಇಲ್ಲ,
ಆದರೆನಗೆ ನಿರೀಕ್ಷೆ ಸದಾ
ಇದೆ ಈ ಮಾತು ಸುಳ್ಳಲ್ಲ;
ಹಾರಿ ಬಂದೀತು ಸಂದೇಶವನು
ಹೊತ್ತ ಪಾರಿವಾಳ ಸದ್ಯದಲೇ,
ಮನವ ತೆರೆದು ಸ್ಪಂದಿಸುವಂತೆ
ಮಾಡೀತು ನಾನು ಅರಿಯದಲೇ;
ಕಾಯುತ್ತೇನೆ ಆ ಶುಭಗಳಿಗೆಗೆ
ಚಾತಕ ಪಕ್ಷಿಯಂತೆ ಹಗಲಿರುಳು,
ಮತ್ತೆ ಕೇಳಿ ನೀವೀ ಆಸುಮನದಲ್ಲಿ
ದಿನವೂ ಹೊಸ ಹೊಸ ಮಾತುಗಳು!
*************
ಆತ್ರಾಡಿ ಸುರೇಶ ಹೆಗ್ಡೆ









ಪ್ರತಿಕ್ರಿಯೆಗಳು
ಉ: ಆಸುಮನದಲ್ಲೀಗ ಸುದೀರ್ಘ ಅನಾವೃಷ್ಟಿ!
ಸಂದೇಶ ಹೊತ್ತ ಪಾರಿವಾಳ ಬೇಗ ಬರಲಿ , ಅಸುಮನ ಮತ್ತೆ ಹಸಿರಾಗಲಿ, ಉಸಿರಾಗಲಿ ಮತ್ತು ಪುಷ್ಪವೃಷ್ಟಿಯಾಗಲಿ
ಉ: ಆಸುಮನದಲ್ಲೀಗ ಸುದೀರ್ಘ ಅನಾವೃಷ್ಟಿ!
ಎಲ್ಲವೂ ನಿಮ್ಮ ಆಶಯದಂತೆಯೇ ಆಗಲಿ
ನನಗೂ ಈ ಬೇಸರದಿಂದ ಮುಕ್ತಿ ಸಿಗಲಿ!
ಧನ್ಯವಾದಗಳು, ರಘು.
ಉ: ಆಸುಮನದಲ್ಲೀಗ ಸುದೀರ್ಘ ಅನಾವೃಷ್ಟಿ!
ಹೆಗ್ಡೆ ಯವರು ಮತ್ತೆ ಯೌವನಕ್ಕೆ ಬಂದಿರುವ ಹಾಗಿದೆ ಭಾವಚಿತ್ರದಲ್ಲಿ
ಉ: ಆಸುಮನದಲ್ಲೀಗ ಸುದೀರ್ಘ ಅನಾವೃಷ್ಟಿ!
ಮತ್ತೆ..?
:)
ಉ: ಆಸುಮನದಲ್ಲೀಗ ಸುದೀರ್ಘ ಅನಾವೃಷ್ಟಿ!
ಭಾವನೆಗಳ ಬಾವಿ ಬತ್ತುವುದಿಲ್ಲ. ಬತ್ತಿದಂತೆ ತೋರಿದರೂ ಇದ್ದಕ್ಕಿದ್ದಂತೆ ಸೆಲೆಯೊಡೆದು ಚಿಮ್ಮುತ್ತದೆ. ನಿಮ್ಮ ಈ ಬರಹವೇ ಇದಕ್ಕೆ ಸಾಕ್ಷಿ.
ಉ: ಆಸುಮನದಲ್ಲೀಗ ಸುದೀರ್ಘ ಅನಾವೃಷ್ಟಿ!
ಹೂಂ... ನಾಗರಾಜ್,
ಹಾಗೇ ಆಗಿರಲಿ ಎಂಬುದೇ ಈ ಮನದ ಆಶಯವೂ...
ಧನ್ಯವಾದಗಳು.
ಉ: ಆಸುಮನದಲ್ಲೀಗ ಸುದೀರ್ಘ ಅನಾವೃಷ್ಟಿ!
ಯಾಕೆ ಹೀಗೆ. ಕಾರಣವೇನು ಅಂತಾ ತಿಳಿಯಬಹುದಾ.
ಉ: ಆಸುಮನದಲ್ಲೀಗ ಸುದೀರ್ಘ ಅನಾವೃಷ್ಟಿ!
<<ಯಾಕೆ ಹೀಗೆ. ಕಾರಣವೇನು ಅಂತಾ ತಿಳಿಯಬಹುದಾ.>>
ಗೊತ್ತಿಲ್ಲ ಕಣ್ರೀ ಕೋಮಲ್,
ಅದು ಯಾವುದರ ನಿರೀಕ್ಷೆ
ಎಂಬುದರ ಅರಿವೇ ಇಲ್ಲ,
ಆದರೆನಗೆ ನಿರೀಕ್ಷೆ ಸದಾ
ಇದೆ ಈ ಮಾತು ಸುಳ್ಳಲ್ಲ;
:)
ಉ: ಆಸುಮನದಲ್ಲೀಗ ಸುದೀರ್ಘ ಅನಾವೃಷ್ಟಿ!
ಬತ್ತಿದೆಯೇ ಭಾವ
ಅದಕ್ಕೇ ಅಭಾವ
ಮಾಡದಿರಿ ಚಿಂತೆ
ಇರಲಿ ನಿಶ್ಚಿಂತೆ
ಹಿರಿಯರು ಹೇಳಿದಂತೆ
ಚಿಮ್ಮಲಿದೆ ಕಂತೆಕಂತೆ
ಉ: ಆಸುಮನದಲ್ಲೀಗ ಸುದೀರ್ಘ ಅನಾವೃಷ್ಟಿ!
ಆದರೊಮ್ಮೆ, ನೀವು ಈಗ ಹೇಳುತ್ತಿರುವಂತೆ
ಇಲ್ಲಿ ಮತ್ತೆ ಆಸುಮನದ ಮಾತುಗಳ ಸಂತೆ
:)
ಧನ್ಯವಾದಗಳು ಶಾನಿ.
ಉ: ಆಸುಮನದಲ್ಲೀಗ ಸುದೀರ್ಘ ಅನಾವೃಷ್ಟಿ!
ಬರಲಿ ಮತ್ತೊಮ್ಮೆ ಆಸುಮನದ ಮಾತುಗಳು
ಅನಾವೃಷ್ಟಿಯ ತೊಡೆದು ಸುರಿಯಲಿ ಹನಿಗಳು
ಉ: ಆಸುಮನದಲ್ಲೀಗ ಸುದೀರ್ಘ ಅನಾವೃಷ್ಟಿ!
ಧನ್ಯವಾದಗಳು ಸಂತೋಷ್, ನಿಮ್ಮ ಸದಾಶಯದ ಪ್ರತಿಕ್ರಿಯೆಗಳಿಗಾಗಿ.
ಉ: ಆಸುಮನದಲ್ಲೀಗ ಸುದೀರ್ಘ ಅನಾವೃಷ್ಟಿ!
ಹಲ ಕೆಲವೊಮ್ಮೆ ಹೀಗಾಗುತ್ತೆ
ಕೆಲ ಕ್ಷಣ ಅಷ್ಟೇ
ಉ: ಆಸುಮನದಲ್ಲೀಗ ಸುದೀರ್ಘ ಅನಾವೃಷ್ಟಿ!
ಕೆಲವೊಮ್ಮೆ ಹೀಗಾದರೆ ದೊಡ್ಡ ಮಾತಲ್ಲ
ಹಲವೊಮ್ಮೆ ಹೀಗೆ ಆಗುತ್ತಾ ಇರಬಾರದಲ್ಲ
ನಿಮ್ಮ ಆಶಯಗಳು ನಿಜವಾಗಲಿ...
ಧನ್ಯವಾದಗಳು ಗೋಪೀನಾಥ್.
ಉ: ಆಸುಮನದಲ್ಲೀಗ ಸುದೀರ್ಘ ಅನಾವೃಷ್ಟಿ!
ಕಾಡುವುದು ಎಂತೆಂಥಾ ಘಟಾನುಘಟಿ ಬ್ಯಾಟುಗಾರರನ್ನೂ
ಈ "ಫಾರ್ಮ್" ಎಂಬ ಮಾಯೆ
ಅದಕ್ಕೇ, ಹೇಳಿರುವರು ತಿಳಿದವರು
"ಫಾರ್ಮು" ಕ್ಷಣಿಕ "ಕ್ಲಾಸು" ಸಾರ್ವಕಾಲಿಕ..
ಚಿಂತಿಸದಿರಿ ಆಸುರವರೇ
ಕಂಡುಕೊಳ್ಳುವಿರಿ ನಿಮ್ಮ ಫಾರ್ಮನ್ನು ಸಕಾಲಿಕವಾಗಿ
ನೆನಪಿರಲಿ, ಒಂದೇ ಒಂದು ಒಳ್ಳೆಯ ಹೊಡೆತ ಸಾಕು
ಬ್ಯಾಟುಗಾರ ಫಾರ್ಮಿಗೆ ಮರಳಲು..
** ಟಿಪ್ಪಣಿ: ಪ್ರಾಸಬದ್ಧ ಕವನ ಸಾಧ್ಯವಾಗಲಿಲ್ಲ.. ಹೀಗಾಗಿ ತೋಚಿದಂತೆ ಗೀಚಿದ್ದೇನೆ..**
ಉ: ಆಸುಮನದಲ್ಲೀಗ ಸುದೀರ್ಘ ಅನಾವೃಷ್ಟಿ!
ಪ್ರಾಸಬದ್ಧವಾಗಿರದಿದ್ದರೂ ಪರವಾಗಿಲ್ಲ ಅರ್ಥಬದ್ಧವಾಗಿದ್ದರೆ ಸಾಕು ಮಾತುಗಳು
ಪ್ರಸನ್ನ, ನಿಮ್ಮ ತುಂಬುಹೃದಯದ ಮುಕ್ತಮನಸ್ಸಿನ ಪ್ರತಿಕ್ರಿಯೆಗಳಿಗೆ ಧನ್ಯವಾದಗಳು
ಉ: ಆಸುಮನದಲ್ಲೀಗ ಸುದೀರ್ಘ ಅನಾವೃಷ್ಟಿ!
ಹೆಗ್ಡೆಯವರೆ,
ಬಹುಷಃ ಸ್ವಲ್ಪ ಎಲ್ಲಾದರೂ ಸುತ್ತಾಡಿ ಬಂದರೆ, ಸರಿಯಾಗಬಹುದು.
ಅಂದರೆ, ಏಕತಾನತೆ ಕಾಡುತ್ತಿರಬಹುದು..
ಯೋಚಿಸಿ ನೋಡಿ.. ಅಲ್ಲೇ ಉತ್ತರ ಸಿಗಬಹುದು..
ನಿಮ್ಮನ್ನ ಹತ್ತಿರದಿಂದ ಬಲ್ಲವರ ಕೇಳಿ, ಮಾತನಾಡಿಸಿ ನೋಡಿ..
ಉತ್ತರ ಸಿಗಬಹುದು.. !!
ನಿಮ್ಮೊಲವಿನ,
ಸತ್ಯ.. :)
ಉ: ಆಸುಮನದಲ್ಲೀಗ ಸುದೀರ್ಘ ಅನಾವೃಷ್ಟಿ!
ಸತ್ಯ,
ಈಗಷ್ಟೇ, ಆರು ದಿನ ನನ್ನ ಹುಟ್ಟೂರಿನಲ್ಲಿ ಅಮ್ಮ, ತಮ್ಮ ಮತ್ತು ಸಂಸಾರದ ಇತರ ಸದಸ್ಯರ ಜೊತೆಗಿದ್ದು ಬಂದಿದ್ದೇನೆ.
ಅದ್ಯಾಕೋ ಗೊತ್ತಿಲ್ಲ. ಮನಸ್ಸನ್ನು ಏನೋ ಬೇಸರ ಕಾಡುತ್ತಿದೆ.
ಸರಿಯಾಗಬಹುದು ಎನ್ನುವ ನಿರೀಕ್ಷೆ ನನಗೂ ಇದೆ.
ನಿಮ್ಮ ಕಾಳಜಿಪೂರ್ಣ ಪ್ರತಿಕ್ರಿಯೆಗಾಗಿ ಧನ್ಯವಾದಗಳು.
ಉ: ಆಸುಮನದಲ್ಲೀಗ ಸುದೀರ್ಘ ಅನಾವೃಷ್ಟಿ!
ಹೆಗ್ಡೆ ಅವರೇ,
ಚಳಿಗಾಲದ ಬಳಿಕ ಬೇಸಿಗೆಯು ಬರುವುದು ...
ಇರುಳಿನ ನಂತರ ಬೆಳಗಾಗುವುದು ...
ಬಿರುಗಾಳಿ ಬೀಸಿದ ಬಳಿಕ ಶುಭ್ರಾಕಾಶ ಕಾಣಸಿಗುವುದು.
- ಸಾಮುಯೆಲ್ ರುದರ್ ಫೋರ್ಡ್
ನಿರುತ್ಸಾಹದ ನಿಮ್ಮೀ ದಿನಗಳ ನಂತರ ಹರ್ಷೋಲ್ಲಾಸದ, ಅದಮ್ಯ ಉತ್ಸಾಹದ, ಅವಿರತ ಸೃಜನಶೀಲ ಬರಹಗಳ ದಿನಗಳು ಬಂದೇ ಬರುವವು :-)
- ಶಿವರಾಮ
ಉ: ಆಸುಮನದಲ್ಲೀಗ ಸುದೀರ್ಘ ಅನಾವೃಷ್ಟಿ!
ಶಿವರಾಮ್,
ನಿಮ್ಮಾಶಯದಂತೆಯೇ ಆಗಲಿ ಇಲ್ಲಿ ಬಹುಬೇಗ
ಆಸುಮನದ ಮಾತುಗಳು ಬರುತ್ತಿರಲಿ ಆಗಾಗ!
ಧನ್ಯವಾದಗಳು.
ಉ: ಆಸುಮನದಲ್ಲೀಗ ಸುದೀರ್ಘ ಅನಾವೃಷ್ಟಿ!
ಆಸುಮನದಲ್ಲಿ
ಕವನಸುಮವರಳುವ
ಸುಸಮಯ
ರಸಮಯ ಕಾಲ
ನಿರಂತರವಾಗಲಿ
ಕವಿಸಮಯ!
ಉ: ಆಸುಮನದಲ್ಲೀಗ ಸುದೀರ್ಘ ಅನಾವೃಷ್ಟಿ!
ಪ್ರತಿಕ್ರಿಯೆ ನಕಲಾಗಿತ್ತು. ಹಾಗಾಗಿ ತೆಗೆದಿದ್ದೇನೆ.
ಉ: ಆಸುಮನದಲ್ಲೀಗ ಸುದೀರ್ಘ ಅನಾವೃಷ್ಟಿ!
ಆಹಾ...
ನಿಮ್ಮ ಕಾವ್ಯಮಯ ಪ್ರತಿಕ್ರಿಯೆ ನೀಡಿತು ಈ ಮನಕೆ ಅನಂತಾನಂದ
ಸಹೃದಯರ ಸದಾಶಯಗಳಿಂದ ತುಂಬುವುದು ಈ ಮನದಲ್ಲಿ ಆನಂದ
ಧನ್ಯವಾದಗಳು.
ಉ: ಆಸುಮನದಲ್ಲೀಗ ಸುದೀರ್ಘ ಅನಾವೃಷ್ಟಿ!
ಸುರೇಶ್, ನನ್ನ ಮಾತುಗಳಿಂದ ನಿಮಗೆ ನೋವಾಗಿದ್ದರೆ ಕ್ಷಮೆ ಇರಲಿ
ಸುರೇಶ್ ನಾಡಿಗ್
ಉ: ಆಸುಮನದಲ್ಲೀಗ ಸುದೀರ್ಘ ಅನಾವೃಷ್ಟಿ!
ತಪ್ಪು ಮಾಡಿದ್ದೇನೆ ಎಂಬ ಭಾವ ಇದ್ದರೆ ಮಾತ್ರ ಕ್ಷಮಾಯಾಚನೆಗೂ ಇರಬಹುಹುದರ್ಥ
ನಾನು ಅಪಾರ್ಥಮಾಡಿಕೊಂಡು ನೊಂದಿದ್ದರೆ, ಕ್ಷಮೆಯೆಂಬುದೇ ನಿಜದಿ ಆಗಬಹುದನರ್ಥ
ಅನ್ಯರು ನೋಯಿಸಿಕೊಂಡಿಹರೆಂದು ಕ್ಷಮೆ ಕೇಳುವುದು, ಸೌಜನ್ಯದ ಮಾತೆನ್ನುವುದು ಸರಿ
ತಪ್ಪು ಮಾಡಿದವನ ಮನವೂ ಪಶ್ಚಾತ್ತಾಪ ಪಡುತ್ತಿದ್ದರೆ ಮಾತ್ರ, ಈ ಕ್ಷಮಾಯಾಚನೆ ಸರಿ
ಇಲ್ಲಿನ ನಮ್ಮೆಲ್ಲರ ಎಲ್ಲಾ ಆಟವೂ ಆ ದೇವರಿಗೆ ಪ್ರಿಯವಾಗುವಂತೆಯೇ ಇದ್ದರೊಳ್ಳೆಯದು
ಕ್ಷಮಾಯಾಚನೆ ಬೇಡಿಕೆಗಳೇನಿದ್ದರೂ ದೇವರಿಗೇ ಸಲ್ಲಿಕೆಯಾದರೆ ಸರ್ವರಿಗೂ ಒಳ್ಳೆಯದು
ನೀವು ಅರಿತರಿತು ನನ್ನ ಮನವ ನೋಯಿಸಿದ ಮಾತು ಇಲ್ಲಿ ಎಲ್ಲರಿಗೂ ಅರಿವಾಗಿದ್ದ ಸತ್ಯ
ಎಲ್ಲರೆದುರು ಕ್ಷಮೆ ಕೇಳಿದ್ದೀರಿ, ಒಪ್ಪಿಗೆ ಇದು ನನ್ನಂತೆ ಎಲ್ಲರಿಗೂ, ಇರಲಿ ಈ ಸ್ನೇಹ ನಿತ್ಯ
ಕಹಿಘಟನೆಗಳ ಮರೆತು ಕೈಹಿಡಿದು ಮುಂದೆ ಸಾಗುವವರೇ ನಿಜವಾಗಿಯೂ ಇಲ್ಲಿ ಶ್ರೇಷ್ಟರು
ಮತ್ತೆ ಮತ್ತೆ ಎರಚಾಟ ಆಡುತ್ತಲೇ ಇದ್ದರೆ, ಎಲ್ಲರೂ ತಮ್ಮೊಳಗೊಳಗೇ ನಾಶವಾಗುವರು
- ಆಸು ಹೆಗ್ಡೆ
ಉ: ಆಸುಮನದಲ್ಲೀಗ ಸುದೀರ್ಘ ಅನಾವೃಷ್ಟಿ!
ಛೆ! ಹೀಗಾಗಬಾರದಿತ್ತು, ಆಸುಮನದಲ್ಲಿ ಅನಾವೃಷ್ಟಿಯೇ? ಭಾವನೆಗಳ ಬಾವಿ ಬತ್ತುವುದೇ? ಇದು ಅಶುಭ ಸೂಚಕ! ಆ ಪಾರಿವಾಳ ಆದಷ್ಟು ಬೇಗ ಹಾರಿ ಬರಲಿ(ಅದೆಲ್ಲಿ೦ದಲೋ ಗೊತ್ತಿಲ್ಲ!).
ಉ: ಆಸುಮನದಲ್ಲೀಗ ಸುದೀರ್ಘ ಅನಾವೃಷ್ಟಿ!
ಹೂಂ...
ಪಾರಿವಾಳವೂ ಹಾರಿ ಬರಲಿ,
ಸಂದೇಶವನೂ ಹೊತ್ತು ತರಲಿ!
ಧನ್ಯವಾದಗಳು ಮಂಜುನಾಥ್!
ಉ: ಆಸುಮನದಲ್ಲೀಗ ಸುದೀರ್ಘ ಅನಾವೃಷ್ಟಿ!
ಆಸು ಮನದಿನ್ದ ಮಾಯವಾದೀತೇ ಆಶುಕವಿತೆ;
ಚಣಚಣಕ್ಕೂ ಜಿನಿಗುತ್ತಿಹುದು ಎನ್ದಿನನ್ತೆ.
ಉ: ಆಸುಮನದಲ್ಲೀಗ ಸುದೀರ್ಘ ಅನಾವೃಷ್ಟಿ!
ಮಾಯವಾಗದಿರಲಿ ಎನ್ನುವುದೇ ಆಶಯ ಈ ಮನದಲ್ಲೂ
ನಿಮ್ಮೆಲ್ಲರ ಹಾರೈಕೆಗಳು ಹುರುಪು ತುಂಬುತ್ತವೆ ನನ್ನಲ್ಲೂ
ಧನ್ಯವಾದಗಳು ಕೃಷ್ಣಪ್ರಸಾದ್.