ಇದುವೇ ಜೀವನ!
"ಇಂದವನ ಜನ್ಮ ದಿನ
ಅವನ ನೆನಪಿನಲೆಯಲ್ಲಿ ಸಾಗಿದೆ ಈ ಮನ
ಮರೆತೆನೆಂದರೂ ಮರೆಯಲಾಗದು ಆತನೊಂದಿಗೆ ಕಳೆದ ದಿನ"
*****
"ಸಖೀ, ಇದುವೇ ಜೀವನ
ಆಗುವುದಿಲ್ಲ ಏನೂ ಎಣಿಸಿದಂತೆ ಈ ಮನ
ಎಲ್ಲೆಂದರಲ್ಲಿ ಯಾರ್ಯಾರೊಂದಿಗೋ ಹೆಣೆದುಕೊಳ್ಳುವುದು ಮನ
ಅಂದಿಗೆ ಅದುವೇ ಸತ್ಯ
ಇಂದು ನಿಜದಿ ಆಗಿಲ್ಲವಾದರೂ ಅದು ಮಿಥ್ಯ
ಅದಕ್ಕೇ ಅಂಟಿಕೊಂಡಿರಲಾಗದು ಜೀವನ ಸಾಗುತಿರಬೇಕು ನಿತ್ಯ
ಜೀವನದ ಪುಟಗಳಲಿ
ಅಧ್ಯಾಯಗಳ ನಂತರ ಅಧ್ಯಾಯಗಳು ಇರಲಿ
ಒಂದಕ್ಕೊಂದು ಸಂಬಂಧಿಸದಿದ್ದರೂ ಜೀವನದಲಿ ದಾಖಲೆಗಳಿರಲಿ
ಒಂದು ಅಧ್ಯಾಯದ
ಪ್ರಭಾವ ಇನ್ನೊಂದರ ಮೇಲಿರದೇ ಆ ಭಾಗದ
ಪರಿಧಿಯಲೇ ಅರ್ಥ ನೀಡಿ, ಅಳಿಸಲಾಗದ ಭಾಗವಾಗಿರಲಿ ಸದಾ
ನೆನಪುಗಳು ನೀರಂತೆ
ಬೆಳೆಯುತಿರುವ ಈ ಜೀವನಕೆ ಸಹಕಾರಿಯಂತೆ
ನೆನಪುಗಳಿಂದಲೇ ಶಕ್ತಿ ತುಂಬಿಸಿಕೊಂಡು ಸದಾ ಸಾಗುತಿರಬೇಕಂತೆ
ಆತನಿಂದೆಲ್ಲಾದರೂ ಇರಲಿ
ಆತನ ಜೀವನದಲೂ ಸದಾಕಾಲ ನೆಮ್ಮದಿ ಇರಲಿ
ಆತನ ಜೀವನಕ್ಕೆ ಶಕ್ತಿ ತುಂಬುತ್ತಾ ನಿನ್ನ ನೆನಪುಗಳಾತನ ಜೊತೆಗಿರಲಿ"
***********************









ಪ್ರತಿಕ್ರಿಯೆಗಳು
ಉ: ಇದುವೇ ಜೀವನ!
ಸುರೇಶ್,
ಯಾರದು ಜನ್ಮ ದಿನ?
ಕಮಲ
ಉ: ಇದುವೇ ಜೀವನ!
ಕವಿಯ ಸಖಿಯ ನೆನಪಿನಲ್ಲಿ ಇನ್ನೂ ಉಳಿದಿರುವಾತನದು!
:)
ಉ: ಇದುವೇ ಜೀವನ!
ಅರೆ! ನಾನು ಕೂಡ ನನ್ನ ಗೆಳಯನೊಬ್ಬನ ಜನುಮದಿನದ ಶುಭಾಶಯವಾಗಿ ಕಾಗದವೊಂದನ್ನು ಬರೆದಿದ್ದೇನೆ :-)
ಉ: ಇದುವೇ ಜೀವನ!
ಇಂಚರ,
ಹಾಗಿದ್ದಲ್ಲಿ ಇಲ್ಲಿನ ಕೊನೆಯ ೬ ಚರಣಗಳು ತಮಗೂ ಅನ್ವಯವಾಗುತ್ತವೆ!
ಅದೆಲ್ಲಾ ಇರಲಿ, ತಾವು ಬರೆದ ಕಾಗದ ಹೇಗಿದೆ ಎಂದು ನಾನರಿಯೆ,
ನಾನಿಲ್ಲಿ ಬರೆದ ಮಾತುಗಳು ಹೇಗಿವೆ ಎಂದು ತಿಳಿಯಲು ಕಾದಿರುವೆ!
- ಆಸು ಹೆಗ್ಡೆ
ಉ: ಇದುವೇ ಜೀವನ!
:-) ಚೆನ್ನಾಗಿದೆ ನೀವು ಬರೆದಿರುವುದು.
ಉ: ಇದುವೇ ಜೀವನ!
ಸುರೇಶ್,
ಕವನ ಇಷ್ಟವಾಯಿತು. ಇನಿತು ವಿಷಾದವಿದ್ದರೂ, ಪ್ರೇಮಭಾವ ಮೀರಿ ನಿಂತಿದೆ.
ನಮಸ್ಕಾರಗಳೊಂದಿಗೆ........
ಉ: ಇದುವೇ ಜೀವನ!
ಒಳಭಾವವನರಿತು ಪ್ರತಿಕ್ರಿಯಿಸಿದ ತಮಗೆ ಧನ್ಯವಾದಗಳು.
ಉ: ಇದುವೇ ಜೀವನ!
ಸುರೇಶ್, ದ್ವಿಪದಿಗಳಿ೦ದ ತ್ರಿಪದಿಗಳಿಗೆ ಬದಲಾದರೂ ಕವನ ಅರ್ಥಪೂರ್ಣವಾಗಿ ಮೂಡಿ ಬ೦ದಿದೆ. ಅಭಿನ೦ದನೆಗಳು. :-)
ಉ: ಇದುವೇ ಜೀವನ!
ಮಂಜುನಾಥ್,
ಶೈಲಿಯಲ್ಲಿ ಏಕತಾನತೆ ಇರದಿರಲಿ ಎಂಬ ಆಶಯ, ಅಷ್ಟೇ.
ಓದಿ, ಮೆಚ್ಚಿ, ಪ್ರತಿಕ್ರಿಯಿಸಿದ ತಮಗೆ ಧನ್ಯವಾದಗಳು.
-ಆಸು
ಉ: ಇದುವೇ ಜೀವನ!
ಸರ್,
ನೆನಪುಗಳೇ ಹೀಗೆ ಸದಾ ಸ್ಫೂರ್ತಿ ಅವರಿಂದ ನಾವು ಬೇರಾದರೂ
ಹೆಸರಿಡಲಾಗದ ಮೈತ್ರಿಗೆಂದೂ ಕೊನೆಯಿಲ್ಲ ಅದೆಷ್ಟೇ ದೂರಾದರೂ!
ಉ: ಇದುವೇ ಜೀವನ!
ವಾಣಿ,
ಸಖಿಯ ಮನದಲ್ಲಿ ಇನ್ನೂ ಜೀವಂತವಾಗಿರುವ, ಇನ್ನಾರದೋ ನೆನಪುಗಳನ್ನೂ ಮತ್ತಾ ಸ್ನೇಹ ಬಂಧವನ್ನೂ ಗೌರವಿಸುವ ಭಾವವೇ ಈ ಮಾತುಗಳ ಜೀವಾಳ.
ನೆನಪುಗಳಿಗೆ, ಸ್ನೇಹ ಸಂಬಂಧಗಳಿಗೆ ಗೌರವವನ್ನು ನೀಡುವ ಭಾವ ಸದಾ ಎಲ್ಲರಲ್ಲೂ ಇರಬೇಕು ಎಂಬುದೇ ಆಶಯ.
ತಮ್ಮ ಪ್ರತಿಕ್ರಿಯೆಗಳಿಗಾಗಿ ಧನ್ಯವಾದಗಳು.
- ಆಸು ಹೆಗ್ಡೆ