ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Sampada Foundation
  • ಅಂಚೆ ಪೆಟ್ಟಿಗೆ
  • Font Help

ತಿಳಿ ಹಾಸ್ಯ ಮರೆತಿಲ್ಲ: "ಮಜಾವಾಣಿ"

ಸಂಪದ › Sampada Blogs › avikamath77 ರವರ ಬ್ಲಾಗ್

ಮುಂಬಯಿ ಮುಖಗಳು...

ಮುಂಬಯಿ ಎಂಬ ಮಹಾಸಮುದ್ರದಲ್ಲಿ ಮುಳುಗಿರುವ ಮುಖಗಳೇ ಇಲ್ಲದ ಮುಖಗಳ ಹುಡುಕಾಟದಲ್ಲಿ...

ಮುಂಬಯಿ ಮುಖಗಳು ಭಾಗ ೧.....

August 7, 2008 - 9:33pm — avikamath77

ಸದಾ ತಡವಾಗಿ ಓಡುವ ಲೋಕಲ್ ಟ್ರೇನುಗಳ ರಭಸ, ಸತ್ತ ಮೀನುಗಳೇ ತುಂಬಿರುವ ಬುಟ್ಟಿಗಳ ನಾರು ವಾಸನೆ, ರೈಲು ಹಳಿಯುದ್ದಕ್ಕೂ ಮೈ-ಮರೆತು ಪ್ಲಾಸ್ಟಿಕ್ ತಂಬಿಗೆ ಹಿಡಿದು ಕೂತಿರುವ ಭಯ್ಯಾಗಳ ಕೄತಘ್ನತೆ, ಯಾವ ಬಾಂಬು ಎಲ್ಲಿ ಸಿಡಿಯುವುದೋ ಎಂಬ ಕರಿ ಭಯದ ನೆರಳಲ್ಲೇ ಎದ್ದು ಮೈ ಮುರಿಯುತ್ತದೆ ಮುಂಬಯಿ. ದೂರದ ಬ್ಯಾಂಡ್ ಸ್ಟಾಂಡ್ ನಲ್ಲಿ ಚರಸ್ ಸೇವಿಸಿ, ಹೈರಾಣಾಗಿ, ಗೆಳೆಯನ ಅಪ್ಪನ ಕ್ವಾಲಿಸ್ ಗಾಡಿಯಲ್ಲಿ ಕುಳಿತು ಮನೆಗಡೆ ಹಿಂದಿರುಗುವ ಯೋಚನೆಯಲ್ಲಿ ಕಾಲ್ ಸೆಂಟರ್ ನ ಹೈ-ಟೆಕ್ ಹೈಕಳು ಚರ್ಚಿಸುತ್ತಿದ್ದರೆ, ಈಚೆ ಗಡದ್ದಾಗಿ ಹೊದ್ದು ಮಲಗಿದ ಲಕ್ಷ್ಮಣ ಭಾವೂ ಸುರ್ವೆ ಚಾಳಿನ ಹದಿನೇಳನೇ ನಂಬರ್ ಮನೆಯಲ್ಲಿ ದೀಪ ಝಗ್ಗನೇ ಬೆಳಗುತ್ತದೆ. ವಸಂತರಾವ್ ವಿಠೋಬಾ ಪಾರಂಗೆಯ ಅರೆ-ತೆರೆದ ಕಣ್ಣುಗಳು, ಆತನಿಗೆ ಎಂದೂ ಮೋಸ ಮಾಡಿಲ್ಲ. ಅಡ್ಡಾದಿಡ್ಡಿ ಮಲಗಿದ ಮಕ್ಕಳಿಗೆ ಕಾಲು ತಾಕದಂತೆ ಎಚ್ಚರವಹಿಸಿ, ಚೊಂಬು ಹಿಡಿದು ಆತ ಮೆಲ್ಲನೆ ಹೊರಬರುತ್ತಾನೆ. ಹದಿನಾರು ವರ್ಷಗಳೇ ಕಳೆದು ಹೋಗಿವೆ ನೋಡಿ, ಆತ ಚಾಳಿನ ಪಾಯಖಾನೆಯ ಬಳಕೆಗಾಗಿ ಲೈನಿನಲ್ಲಿ ನಿಂತಿರುವವರ ಜೊತೆ ಜಗಳವಾಡಿ. ಜಗಳಾಡಲು, ಮೂರೂ ಮುಕ್ಕಾಲರ ’ಮಟಮಟ’ ಮುಂಜಾನೆ ಅಲ್ಲಿ ಯಾರಿರುತ್ತಾರೆ? ಪಾಯಖಾನೆಯ ಬಳಿ ಮಲಗಿರುತ್ತಿದ್ದ ಮೋತಿ ಕೂಡ ಹೋದ ಸಾಯಿಬಾಬಾ ದಿಂಡಿಯ ದಿನ ಸತ್ತು ಹೋಯ್ತು. ಆವತ್ತಿನಿಂದ ಪಾರಂಗೆ ಕಾಕಾನ, ಮುಂಜಾವಿನ ಗುಣು ಗುಣು ಭಜನೆಯನ್ನು ಕೇಳುವವರೆ ಇಲ್ಲ. ಪಾರಂಗೆ ಕಾಕಾನ ಬಳಿ ಮರಾಠಿ ಭಜನೆಗಳ ಭಾಂಡಾರವೇ ಇದೆ. "ಆಜ ಆನಂದೀ ಆನಂದ ಝಾಲಾ..", "ವಿಠೂ ಮಾವುಲೀ ತೂ ಮಾವುಲೀ ಜಗಾಚೀ..", " ಬಾಬಾಂಚಾ ಝಾಲಾ ಪ್ರಸಾದ...", ಹೀಗೆ ಒಂದೇ, ಎರಡೇ?. ಪಾರಂಗೆ ಕಾಕಾ ಹಾಡಲು ಕುಳಿತರೆಂದರೆ, ಚಾಲಿಗೆ ಚಾಳೇ ಕಿವಿಯಾಗುತ್ತದೆ. ನಿನ್ನೆ ಸಂಜೆ ತಂದ ಕ್ಯಾಸೆಟ್ ನ ಹೊಸ ಹಾಡೊಂದನ್ನು ಗುಣಗುಣಿಸುತ್ತ, ಕಾಕಾ ಪಾಯಖಾನೆಯ ಬಳಿ ಹೆಜ್ಜೆ ಹಾಕುತ್ತಿದ್ದರೆ, ಅದಕ್ಕೆ ತಾಳ ಹಾಕುವಂತೆ, ಫನ್ಸೆಕರ್ ಮಾವಶಿಯ ಭಯಾನಕ ಕೆಮ್ಮು. "ಈ ಮುದುಕಿ ರಾತ್ರಿ ಇಡೀ ಕೆಮ್ಮುತ್ತೆ. ಹ್ಯಾಗಾದ್ರೂ ಸಹಿಸ್ತಾರೊ ಆ ಜನ? ರಾತ್ರಿ ಅವಕ್ಕೆ ನಿದ್ದೆಯಾದ್ರೂ ಬರುತ್ತೋ? ಒಂದೇ ಒಂದ್ಸಲ ಸತ್ತಾದ್ರೂ ಹೋಗ್ಬಾರದೆ ಈ ಗೊಡ್ಡು" ಎಂದು ಒಂದು ಕ್ಷಣ ಅಂದುಕೊಳ್ಳುತ್ತಾರೆ ಪಾರಂಗೆ ಕಾಕಾ. ಆದರೆ ವಿನಾಯಕನಿಗೆ ಆಕ್ಸಿಡೆಂಟ್ ಆದಾಗ, ದಿನ ರಾತ್ರಿ ಅನ್ನದೇ ಅವನನ್ನು ನೋಡಿಕೊಂಡದ್ದು ಅದೇ ಮುದುಕಿಯಲ್ಲವೇ ಎಂಬುದು ನೆನಪಾಗಿ ತಮ್ಮ ಯೋಚನೆಗೆ ತಾವೇ ಪಶ್ಚಾತ್ತಾಪ ಪಡುತ್ತ, ತಮ್ಮ ಭಜನೆಯನ್ನು ಮುಂದುವರಿಸುತ್ತ, ನಿರ್ಭೀತರಾಗಿ ಪಾಯಖಾನೆಯೊಳಗೆ ನುಗ್ಗುತ್ತಾರೆ.

"ಇವರ ಭಜನೆಗಳೆಂದರೆ, ಇವರ ಆಫೀಸಿನಲ್ಲೇ ವರ್ಲ್ಡ್ ಫೇಮಸ್, ಗೊತ್ತಾ?" ಎಂದು ಯಾವತ್ತೂ ನೆರೆಕೆರೆಯವರಲ್ಲಿ ಒಣಗಿದ ಎದೆಯನ್ನುಬ್ಬಿಸಿ ಹೇಳುತ್ತಾರೆ ಸಾವಿತ್ರಿತಾಯಿ. ಅಮ್ಮನ ಈ ಮಾತು ಕೇಳಿ, ಪಾಲಿಟಿಕಲ್ ಸಾಯನ್ಸ್ ಪಠ್ಯಪುಸ್ತಕದಲ್ಲಿ ಅಡಗಿರುವ, ಕಾಮಕೇಳಿಯಲ್ಲಿ ಮುಳುಗಿರುವ ಬಿಳಿ-ಬಿಳಿ ವಿದೇಶೀಯರ ಫೋಟೊವನ್ನು ನಿಬ್ಬೆರಗಾಗಿ ನೋಡುತ್ತಿರುವ ವಿನಾಯಕ ಕೂಡ ಒಮ್ಮೆ ನಕ್ಕುಬಿಡುತ್ತಾನೆ. ಅವರ ಆ ಮಾತಿನಲ್ಲಿ ಅದೆಷ್ಟು ನಿಜಾಂಶವಿದೆಯೋ ಗೊತ್ತಿಲ್ಲ. ಆದರೆ, ಮುಂಜಾನೆ ೫.೧೨ ಕ್ಕೆ ವಿರಾರ್ ಪ್ಲಾಟಫಾರ್ಮಿನಿಂದ, ಚರ್ಚಗೇಟ್ ಕಡೆಗೆ ಹೊರಡುವ ಆ ಲೋಕಲ್ ಟ್ರೇನಿನ ಕೊನೆಯ ಬೋಗಿಯಲ್ಲಿ ಪಾರಂಗೆ ಕಾಕಾ ಕಂಡುಬರದಿದ್ದರೆ, ಇಡೀ ಬೋಗಿಯೇ ’ಭಣ-ಭಣ’ ಅನ್ನೋದಂತೂ ನಿಜ. ಅವರಿಗಾಗಿಯೇ ಆ ಬೋಗಿಯಲ್ಲೊಂದು ಸೀಟು ರಿಸರ್ವ್ ಆಗಿರುತ್ತೆ. ಅವರು ತಡವಾಗಿ ಬಂದರೂ ಚಿಂತೆಯಿಲ್ಲ. ಮೊದಲೇ ಬಂದು ಜಾಗ ಹಿಡಿದ ಸ್ವಪ್ನಿಲ್ ಪಾಂಚಾಳ್, ಪಾರಂಗೆ ಕಾಕಾ ಟ್ರೇನ್ ಹತ್ತಿದ ಕೂಡಲೇ ಅವರಿಗಾಗಿ ಜಾಗ ತೆರವು ಮಾಡಿಕೊಡುತ್ತಾನೆ. ನೋಡ-ನೋಡುತ್ತಿದ್ದಂತೆ, ೮ ಜನರು ಕೂಡಬಹುದಾದ ಆ ಜಾಗದಲ್ಲಿ ಹದಿನಾಲ್ಕು ಜನರ ತಂಡ ತಾಳ, ಗೆಜ್ಜೆ ಹಿಡಿದು ಸಿದ್ಧಾರಾಗಿರುತ್ತಾರೆ. ಟ್ರೇನಿನ ಕಿಟಕಿಯ ಮೇಲಿನ ತಗಡು ಭಾಗವೇ ಅವರಿಗೆ ತಬಲಾ. ಆ ಪೋರ ತುಷಾರ್ ಕೆಣಿ ಅದೆಷ್ಟು ಚೆನ್ನಾಗಿ ತಗಡು ಉರ್ಫ್ ತಬಲಾ ಬಾರಿಸುತ್ತಾನೆ. ತಾವು ಹಾಡುವಾಗ, ಎಲ್ಲಿ ಎತ್ತಬೇಕು, ಯಾವಾಗ ಮುರ್ಕೀ ಹೊಡೆಯಬೇಕು, ಯಾವಾಗ ತಾಳವನ್ನು ಡಬಲ್ ಮಾಡಬೇಕು, ಎಲ್ಲ ಅವನಿಗೆ ಸರಿಯಾಗಿ ಗೊತ್ತಿದೆ. ಈ ಜನ್ಮದಲ್ಲಿ ಯಾವತ್ತಾದ್ರೂ ತನಗೆ ಸುರೇಶ್ ವಾಡ್ಕರ್ ನ ಪರಿಚಯವಾದ್ರೆ, ಈ ಹುಡುಗನ ಪರಿಚಯವನ್ನೂ ಅವರಿಗೆ ಮಾಡಿಕೊಡಬೇಕು, ಎಂದು ಪ್ರಾರಂಭವಾದ ಯೋಚನಾಸರಣಿ, ಮಗಳು ಸ್ನೇಹಾಳ ಮದುವೆ ಇವನ ಜೊತೆ ಆದ್ರೆ ಚೆನ್ನಾಗಿರಬಹುದೇ, ಎಂಬಲ್ಲಿಯವರೆಗೆ ಓಡುತ್ತೆ. ಥತ್, ಬೇಡ ಬೇಡ. ಬಾಯ್ತುಂಬ ಗುಟ್ಕಾ ತಿನ್ನುತ್ತಾನೆ ಈ ಬಡ್ಡಿ ಮಗ. ನನ್ನ ಹುಡುಗಿಗೆ ಇವನ ಜೊತೆ ಮದುವೆಯೇ? ಹೇಗಿದ್ರೂ ವರ್ಲಿಯ ಸಾವಂತ್ ಕಾಕಿ ಸ್ನೇಹಾಳಿಗೋಸ್ಕರ ಹುಡುಗನನ್ನು ಹುಡುಕುವ ಜವಾಬ್ದಾರಿ ತೊಗೊಂಡಾಗಿದೆ. ಮತ್ಯಾಕೆ ನನಗೆ ಈ ಯೋಚನೆ ಅಂದುಕೊಳ್ಳುತ್ತಾ, ತಮ್ಮ ಬಾಯಿಯಲ್ಲಿರುವ ತಂಬಾಕೂವನ್ನು, ಕಿಟಕಿಯಿಂದ ಹೊರಕ್ಕೆ ಹಾಕಿ, ಗಂಟಲನ್ನು ರೆಡಿ ಮಾಡುತ್ತಾರೆ. ವಿನಾಯಕನಿಗೆ ಅದೆಷ್ಟು ಸಲ ಹೇಳಿಲ್ಲ ’ತಬಲಾ ಕಲಿಯೋ’ ಅಂತ. ಆ ಮಹಾಶಯ ಯಾವತ್ತು ನನ್ನ ಮಾತನ್ನು ಕೇಳಿದ್ದಾನೆ?

ಇನ್ನೇನು ಗಾಡಿ ಹೊರಡಲು ಸಿದ್ಧವಾಗಿದೆ ಅಂದಾಗ, ಕಿಟಕಿಗೆ ನೇತು ಹಾಕಿದ ಗಣಪತಿಯ ಚಿಕ್ಕ ಫೋಟೊಗೆ, ಎಲ್ಲರೂ ಭಯಭಕ್ತಿಗಳಿಂದ ನಮಿಸಿ "ವಕ್ರತುಂಡ ಮಹಾಕಾಯ..." ದ ಹರಕೆ ಸಲ್ಲಿಸಿ, ತಮ್ಮ ತಮ್ಮ ಆಯುಧಗಳನ್ನು ಹಿಡಿದುಕೊಳ್ಳುತ್ತಾರೆ. ಪಾರಂಗೆ ಕಾಕಾ, ಮತ್ತೊಮ್ಮೆ ತಮ್ಮ ಗಂಟಲನ್ನು ಶುದ್ಧೀಕರಿಸಿ "ಓಂ" ಎಂದು ಏರು ಸ್ವರದಲ್ಲಿ ಪ್ರಾರಂಭಿಸಿದರೋ, ಇಡೀ ೫.೧೨ರ ಕೊನೆಯ ಬೋಗಿ ಪುಳಕಿತಗೊಳ್ಳುತ್ತದೆ.

ಪಾರಂಗೆ ಕಾಕಾ, ಪರೇಲಿನ ಶಿಥಿಲವಾದ, ಪಾಳು-ಬೀಳಲಿರುವ ಫ್ಯಾಕ್ಟರಿಯೊಂದರಲ್ಲಿ ಕೆಲಸ ಮಾಡುತ್ತಾರೆ. ಮೂವತ್ತು ವರ್ಷಗಳ ಹಿಂದೆ, ಅಟೆಂಡರ್ ಆಗಿ ನೌಕರಿಗೆ ಸೇರಿದ್ದರು ಕಾಕಾ. ತಮ್ಮ ಪರಿಶ್ರಮ ಹಾಗೂ ಕಲಿಯುವ ಅದಮ್ಯ ಬಯಕೆಗಳ ಬಲದಿಂದ, ಇಂದು ಟರ್ನರ್-ಫಿಟ್ಟರ್ ಆಗಿ ಭಡ್ತಿ ಹೊಂದಿದ್ದಾರೆ. ಕಂಪನಿಯ ವಾರ್ಷಿಕೋತ್ಸವದಲ್ಲಿ, ಗಣೇಶೋತ್ಸವದಲ್ಲಿ, ಆರತಿ, ಭಜನೆ, ಹಾಡಿನ ಕಾರ್ಯಕ್ರಮಗಳ ಸಂಪೂರ್ಣ ಜವಾಬ್ದಾರಿ ಪಾರಂಗೆ ಕಾಕಾನದ್ದು. ಅವರ ಭಜನೆಗಳನ್ನು ಕೇಳಿ, ಕಂಪನಿಯ ಸೂಟು ಬೂಟಿನ ಎಂ ಡಿ ಕೂಡ ತಲೆದೂಗುತ್ತಾರಂತೆ. ಪ್ರತಿ ವರ್ಷ ಪಾರಂಗೆ ಕಾಕಾ ಹಾಡುವ "ದೇವಾಚಿಯೇ ದ್ವಾರೀ.." ಹಾಡಿಗೆ ಒನ್ಸ್ ಮೋರ್ ಬಂದೆ ಬರುತ್ತದೆ. ಎಂ ಡಿ ಸಾಹೇಬರು ಖುಷಿಯಾಗಿ ನೂರರ ನೋಟೊಂದನ್ನು ಬಹುಮಾನವಾಗಿ ನೀಡುತ್ತಾರೆ. ಛೆ!! ವಿನಾಯಕ, ತಬಲಾ ಕಲಿತಿದ್ದರೆ!!! ನನ್ನ ಹಾಡು, ವಿನಾಯಕನ ತಬಲಾ!!

ಮೊದಲು ಮಧ್ಯಾಹ್ನದ ಶಿಫ್ಟ್ ನಲ್ಲಿದ್ದರು. ಈಗ ಕಳೆದ ಹದಿನಾರು ವರ್ಷಗಳಿಂದ ಮುಂಜಾನೆಯ ಶಿಫ್ಟು. ಈ ಮೂವತ್ತು ವರ್ಷಗಳಲ್ಲಿ ಎಷ್ಟೆಲ್ಲ ಬದಲಾಗಿ ಹೋಗಿದೆ. ಫ್ಯಾಕ್ಟರಿಯ ಹೊರಗಿದ್ದ, ನರ್ಸೀ ಭಾಯಿಯ ಚಹಾದಂಗಡಿ ಈಗ ಇಲ್ಲ. ಅಲ್ಲಿ ರಾಘು ಶೆಟ್ಟಿಯ ಬಿಯರ್ ಬಾರ್ ಬಂದಿದೆ. ಹಿಂಭಾಗದಲ್ಲಿದ್ದ ವಿಶಾಲ ಮೈದಾನದಲ್ಲಿ ಹೊಸದೊಂದು ’ಮಾಲ್’, ರಾಕ್ಷಸನಂತೆ ಬೆಳೆದು ನಿಂತದ್ದಷ್ಟೇ ಅಲ್ಲ, ಈ ಶಿಥಿಲ ಫ್ಯಾಕ್ಟರಿಯನ್ನು ಅನುಕಂಪ ಹಾಗೂ ಅಸಹ್ಯ ಬೆರೆತ ದೃಷ್ಟಿಯಿಂದ ನೋಡುತ್ತಿದೆ. ಯಾರೋ ಕರೋಡಪತಿಯೊಬ್ಬ, ಪಾರಂಗೆ ಕಾಕಾ ಕೆಲಸ ಮಾಡುತ್ತಿರುವ ಕಂಪನಿಯನ್ನು ಕೊಂಡುಕೊಳ್ಳಲಿದ್ದಾನೆ ಎಂಬ ಸುದ್ದಿಯೊಂದು, ಕಳೆದ ಆರು ತಿಂಗಳಿಂದ ಫ್ಯಾಕ್ಟರಿಯ ಗೋಡೆಗಳಾಚೆಯಿಂದ ಕೇಳಿಬರುತ್ತಿದೆ. ’ಹಾಗೇನಾದ್ರೂ ಆಗಿಯೇ ಬಿಟ್ಟರೆ, ನಮ್ಮ ನೌಕರಿಯ ಗತಿಯೇನು’ ಎಂಬ ಚಿಂತೆ ಹೊತ್ತ ಸಹೋದ್ಯೋಗಿಗಳಿಗೆ ಸಮಾಧಾನ ಹೇಳುವ ಜವಾಬ್ದಾರಿಯೂ ಕಾಕಾನದ್ದೆ. ಇದೇ ಕಾರಣಕ್ಕಾಗಿ ಇಡೀ ಫ್ಯಾಕ್ಟರಿಯಲ್ಲಿ ಕಾಕಾನಿಗೆ ತುಂಬ ಮರ್ಯಾದೆಯಿದೆ. ಕಾಕಾ ಜೊತೆ ಕಠೋರವಾಗಿ ಮಾತಾಡಿದ ಯುವಕನೊಬ್ಬನನ್ನು, ಫ್ಯಾಕ್ಟರಿಯ ನೌಕರರು ಸೇರಿ ಹಿಗ್ಗಾ ಮುಗ್ಗಾ ಥಳಿಸಿದ್ದು, ಸ್ವತ: ಕಾಕಾ, ಆ ಯುವಕನನ್ನು ಸಂತೈಸಿ, ಮನೆಗೆ ಕಳುಹಿಸಿದ ಕತೆ, ಅಲ್ಲಿ ಜನಪ್ರಿಯ. ಕಾಕಾನಿಗೆ ಆ ಹುಡುಗ, ತಮ್ಮ ಮಗ ವಿನಾಯಕನಂತೆ ಕಂಡಿದ್ದನಂತೆ.

ಎಲ್ಲರ ಚಿಂತೆಯನ್ನು ದೂರ ಮಾಡುವ ಪಣ ತೊಟ್ಟಿರುವ ಕಾಕಾನಿಗೆ, ತನ್ನದೇ ಆದ ಎರಡು ಚಿಂತೆಗಳಿವೆ. ಮಗಳು ಸ್ನೇಹಾಳ ಮದುವೆಯ ಚಿಂತೆಯೊಂದಾದರೆ, ಮಗ ವಿನಾಯಕನ ನೌಕರಿಯ ಚಿಂತೆಯೊಂದು. ಸ್ನೇಹಾ, ಹೇಳಿಕೊಳ್ಳುವಷ್ಟು ಸುಂದರಿಯಲ್ಲ. ವಿನಾಯಕ ಹೇಳಿಕೊಳ್ಳುವಷ್ಟು ಜಾಣನಲ್ಲ. ಆತ ಬಿ.ಎ ಕೊನೆಯ ವರ್ಷದಲ್ಲಿದ್ದಾನೆ. ಈಗಿನ ದಿನಗಳಲ್ಲಿ, ಬಿ.ಎ ಓದಿಕೊಂಡವರಿಗೆ ಯಾವ ಕೆಲಸವೂ ಸಿಗೋದಿಲ್ಲ. ಅಲ್ಲದೇ, ಆತನಿಗೆ ಇಂಗ್ಲಿಷ್ ಭಾಷೆಯ ಮೇಲೆ ಹಿಡಿತವೇ ಇಲ್ಲ. ಅದೊಂದು ಬಂದಿದ್ದರೆ, ಯಾವುದೋ ಒಂದು ಕಾಲ್ ಸೆಂಟರಿನಲ್ಲಿ ನೌಕರಿಗೆ ತಾಗಿಸಿ, ಕೈ ತೊಳೆದುಕೊಳ್ಳಬಹುದಿತ್ತು. ಆದರೆ ದರಿದ್ರದವನಿಗೆ, ಕ್ರಿಕೆಟ್ಟು, ಸಿನೇಮ ಬಿಟ್ಟರೆ ಬೇರೆ ಯಾವುದರಲ್ಲೂ ಆಸಕ್ತಿಯೇ ಇದ್ದಂತಿಲ್ಲ. ಆ ಬಗ್ಗೆ ಕೇಳಿದಾಗಲೆಲ್ಲ "ತುಮ್ಹೀ ಗಪ್ಪ ಬಸಾನಾ.. ಮಲಾ ಮಾಹಿತಿ ಆಹೆ ಕಾಯ್ ಕರಾಯಚಾ ಆಹೆ..." ಎಂದು ಹೇಳಿ ಬಾಯಿ ಮುಚ್ಚಿಸುತ್ತಾನೆ. ಅವನಿಗೆ ಬೆಂಬಲ ನೀಡುವುದರಲ್ಲಿ ಸಾವಿತ್ರಿ ಕೂಡ ಹಿಂದೆ ಮುಂದೆ ನೋಡೋದಿಲ್ಲ. ಹಾಳಾಗಲಿ, ಇವನ ನಶೀಬು ಕೂಡ ನನ್ನ ಹಾಗೆಯೇ ಇದೆ. ಎಂ ಡಿ ಸಾಹೇಬರ ಕಾಲಿಗೆ ಬಿದ್ದು, ನಮ್ಮದೇ ಕಂಪನಿಯಲ್ಲಿ ಇವನಿಗೆ ಒಂದು ನೌಕರಿ ಕೊಡಿಸಿದರಾಯ್ತು ಎಂದು ತಮಗೆ ತಾವೇ ಹೇಳಿಕೊಂಡು, ಸಮಾಧಾನ ಪಡುತ್ತಾರೆ ಕಾಕಾ.

ದಿನವಿಡೀ, ಫ್ಯಾಕ್ಟರಿಯಲ್ಲಿ ಕೆಲಸ ಮಾಡಿ, ಪರೇಲಿನಿಂದ ಸಂಜೆ ೪.೨೧ರ ಲೋಕಲ್ ಹಿಡಿದು, ದಾದರಿನಲ್ಲಿಳಿದು, ಪ್ಲಾಟಫಾರ್ಮ್ ಬದಲಾಯಿಸಿ, ವಿರಾರ್ ಗೆ ಹೋಗುವ ಫಾಸ್ಟ್ ಟ್ರೇನ್ ಹಿಡಿಯುತ್ತಾರೆ ಕಾಕಾ. ದಾದರಿನಿಂದ ಹೊರಡುವ ಆ ಟ್ರೇನಿನಲ್ಲಿ ಅಷ್ಟು ಜನಸಂದಣಿ ಇರುವುದಿಲ್ಲ. ಆರಾಮವಾಗಿ ಕೂತುಕೊಂಡೇ ಹೋಗಬಹುದು. ಇವತ್ತ್ಯಾಕೋ ತಡ ಆಯ್ತು, ದಾದರಿನ ಆ ಟ್ರೇನು ಸಿಗುತ್ತೋ ಇಲ್ವೋ ಎಂಬ ಆತಂಕದಲ್ಲಿದ್ದ ಕಾಕಾಗೆ, ಪ್ಲಾಟಫಾರ್ಮ್ ನಂಬರ್ ಆರರಲ್ಲಿ ನಿಂತಿದ್ದ ಆ ಗಾಡಿಯನ್ನು ನೋಡಿ ಜೀವ ಮರಳಿದಂತಾಯ್ತು. ಒಂದು ಪ್ಲಾಟಫಾರ್ಮಿನಿಂದ ಇನ್ನೊಂದಕ್ಕೆ ಹೋಗಲು ಬ್ರಿಜ್ಜನ್ನು ಬಳಸಬೇಕು. ಬ್ರಿಜ್ಜು ಹತ್ತಲು ಇವತ್ತ್ಯಾಕೋ ತುಂಬ ಆಯಾಸ ಅನ್ನಿಸ್ತಾ ಇದೆ. ’ಮುದುಕನಾಗಿಬಿಟ್ಟೆನಾ ನಾನು?’ ಎಂಬ ಯೋಚನೆ ಬಂದು, ಕೈಕಾಲುಗಳು ನಡುಗಹತ್ತಿದವು. ’ನನ್ನ ಆಯುಷ್ಯ ಮುಗೀತಾ ಬಂತೆ? ಅಯ್ಯೋ, ಮಾಡೋಕೆ ಅದೆಷ್ಟು ಕೆಲಸಗಳಿವೆ, ನಾನು ಸತ್ತು ಹೋದರೆ, ಸಾವಿತ್ರಿಯನ್ನ ಯಾರು ನೋಡಿಕೊಳ್ತಾರೆ?, ಸ್ನೇಹಾಳ ಮದುವೆ ಆಗುತ್ತದೆಯೇ?, ವಿನಾಯಕನಿಗೆ ನೌಕರಿ ಸಿಕ್ಕು, ಆತ ಮನೆಯ ಜವಾಬ್ದಾರಿ ಹೊರುತ್ತಾನೆಯೆ?’ ಎಂಬ ಪ್ರಶ್ನೆಗಳ ಬಾಣಗಳು ಕಾಕಾನನ್ನು ಚುಚ್ಚತೊಡಗಿದವು. ಸಾವರಿಸಿಕೊಂಡ ಕಾಕಾ, ಟ್ರೇನನ್ನೇರಿದರು. ಇದೆಂಥ ಚಡಪಡಿಕೆಯಪ್ಪಾ ಅಂದುಕೊಳ್ಳುತ್ತಾ, ಹಗುರಾಗಲು, ತಮ್ಮ ಚೀಲದಲ್ಲಿದ್ದ ಮಹಾರಾಷ್ಟ್ರ ಟೈಮ್ಸ್ ಪತ್ರಿಕೆಯನ್ನು ತೆರೆದರು. ಸ್ವಲ್ಪ ಹೊತ್ತು ’ಸು-ಡೋಕು’ ಆಡಿದರೆ, ವಿರಾರ್ ಬಂದದ್ದೇ ಗೊತ್ತಾಗೋದಿಲ್ಲ. ವಿನಾಯಕನಾದ್ರೆ, ಪಟಪಟಾಂತ ಸುಡೋಕು ಬಿಡಿಸಿ, ಎದೆಯುಬ್ಬಿಸುತ್ತಾನೆ. ಈ ವಿಷಯದಲ್ಲಿ ಜಾಣ ಅವನು. ಕ್ರಿಕೆಟ್ ಬಗ್ಗೆ ಏನಾದ್ರೂ ಮಾಹಿತಿ ಬೇಕಿದ್ದಲ್ಲಿ, ಅವನ ಹತ್ತಿರ ಕೇಳ್ಬೇಕು. ತೆಂಡೂಲ್ಕರ್ ನಿಂದ ಹಿಡಿದು ಲಾರಾವರೆಗೆ, ಕ್ರಿಕೆಟ್ಟಿನ ವಿಷಯದಲ್ಲಿ, ಆತನಿಗೆ ತಿಳಿಯದೇ ಇರೋದು ಯಾವುದೂ ಇಲ್ಲ. ಆದರೆ ಸ್ವಲ್ಪ ಅಭ್ಯಾಸ ಮಾಡಿ, ಇಂಗ್ಲಿಷ್ ಭಾಷೆ ಕಲಿತುಕೊಂಡಿದ್ದರೆ, ಆತ ದೊಡ್ಡ ಮನುಷ್ಯನಾಗ್ತಿದ್ದ ಅನ್ನೋದ್ರಲ್ಲಿ ಸಂಶಯವೇ ಇಲ್ಲ. "ಅಪ್ಪನಾಗಿ ನಾನೆಲ್ಲೂ ಸೋತಿಲ್ಲ. ಚಾಳಿನಲ್ಲಿರುವ ಇತರರಿಗಿಂತ ಹೆಚ್ಚೇ ಮಾಡಿದ್ದೇನೆ, ನನ್ನ ಮಕ್ಕಳಿಗೋಸ್ಕರ. ಇಡೀ ಚಾಳಿನಲ್ಲಿ, ಮೊದಲು ಟಿ.ವಿ ಬಂದದ್ದೇ ನಮ್ಮ ಮನೆಗೆ. ಮೊಟ್ಟ ಮೊದಲು ಕೇಬಲ್ ಕನೆಕ್ಷನ್ ಬಂದದ್ದು ನಮ್ಮ ಮನೆಗೆ. ಮೊನ್ನೆ ಮೊನ್ನೆ ೨೦೦೦ ಕೊಟ್ಟು, ವಿ ಸಿ ಡಿ ಪ್ಲೇಯರ್ ಕೂಡ ತಂದಿದ್ದೇನೆ. ಮಕ್ಕಳನ್ನು ಮುನ್ಸಿಪಾಲಿಟಿ ಶಾಲೆಗೆ ಕಳಿಸಿದ್ದೆ, ನಿಜ, ಆದರೆ ಅದು ಅವರ ಒಳಿತಿಗಾಗಿಯೇ" ಎಂದೆಲ್ಲ ಯೋಚಿಸುತ್ತ ಸುಡೋಕು ಬಿಡಿಸುತ್ತ ಕುಳಿತ ಕಾಕಾನ ದೃಷ್ಟಿ ಪಕ್ಕದ ಸೀಟಿನಲ್ಲಿ ಕೂತಿದ್ದ ಯುವಕನ ಮೇಲೆ ನೆಟ್ಟಿತು. ನುಣ್ಣಗೆ ಶೇವ್ ಮಾಡಿಕೊಂಡು, ಟಿಪ್-ಟಾಪ್ ಆಗಿ ಬಿಳಿ ಅಂಗಿ, ಟೈ ಹಾಕಿಕೊಂಡ ಆ ಹುಡುಗ ತನ್ನ ತೊಡೆಯ ಮೇಲೆ ಲ್ಯಾಪ್-ಟಾಪ್ ಕಂಪ್ಯೂಟರ್ ಹರಡಿ, ಅದೇನೊ ಲೆಕ್ಕಾಚಾರ ಮಾಡುತ್ತಿದ್ದ. ಹೊಟ್ಟೆ ತೊಳೆಸಿ ಬಂದಂತಾಯ್ತು ಕಾಕಾನಿಗೆ.

೫.೪೫ಕ್ಕೆ ವಿರಾರ್ ತಲುಪಬೇಕಿದ್ದ ಟ್ರೇನು, ಇವತ್ತು ಆರೂ ಕಾಲಿಗೆ ಬಂದು, ಬಸವಳಿದು ನಿಂತಿತು. ಕೂತಲ್ಲಿಯೇ ಮಲಗಿದ್ದ ಕಾಕಾನನ್ನು, ಯಾರೋ ಎಬ್ಬಿಸಿ, ವಿರಾರ್ ಬಂದಿರುವ ಸೂಚನೆ ನೀಡಿದರು. ಇವತ್ತ್ಯಾಕೋ ದಿನವೇ ಸರಿ ಇಲ್ಲ ಅಂದುಕೊಂಡ ಕಾಕಾ, ಲಗುಬಗನೇ ಧುರಿ ಬಿಯರ್ ಬಾರ್ ಕಡೆಗೆ ಹೆಜ್ಜೆಯನ್ನಿಟ್ತರು. ವಿನಾಯಕ ಎಂದಾದ್ರೂ ಸ್ವಂತ ಕಮಾಯಿಯಿಂದ ಲ್ಯಾಪ್ ಟಾಪ್ ಕೊಳ್ಳುವಷ್ಟು ಬೆಳೆದು ನಿಲ್ಲಬಲ್ಲನೇ? ಎಂಬ ಪ್ರಶ್ನೆಗೆ ಮನದಲ್ಲೇ ಬೆಂಕಿ ಹಚ್ಚಿ, ಡಿ ಎಸ್ ಪಿ ಕ್ವಾರ್ಟರ್ ಗೇ ಆರ್ಡರ್ ನೀಡಿದರು ಪಾರಂಗೆ ಕಾಕಾ. ಇಡಿ ಕ್ವಾರ್ಟರ್ ಹೊಟ್ಟೆಯಲ್ಲಿ ಕರಗಿ ಹೋದರೂ, ನಶೆಯೇ ಏರುತ್ತಿಲ್ಲವೇಕೆ ಎಂಬ ಪ್ರಶ್ನೆಗೂ ಇವತ್ತು ಉತ್ತರವಿಲ್ಲ. ಇವತ್ತ್ಯಾಕೋ ಸಮಾಧಾನವೇ ಇಲ್ಲವಲ್ಲ, ಎಂದುಕೊಂಡು, ಶೇರ್ ರಿಕ್ಷಾ ಹಿಡಿದು, ಪುನ: ಲಕ್ಷ್ಮಣ ಭಾವೂ ಸುರ್ವೆ ಚಾಳಿಗೆ ಪ್ರವೇಶಿಸಿದರು ಕಾಕಾ. "ಮನೆಗೆ ಹೋಗುವಷ್ಟರಲ್ಲಿ ಸಾವಿತ್ರಿ ಅಡುಗೆ ಮಾಡ್ತಾ ಇರ್ತಾಳೆ, ಸ್ನೇಹಾ, ಪಕ್ಕದ ಮನೆಯ ಸಂಗೀತಾಳ ಜೊತೆ ಕೂತು ಹರಟೆ ಹೊಡೆಯುತ್ತ ಮುಸಿ ಮುಸಿ ನಗುತ್ತಿರುತ್ತಾಳೆ, ಇನ್ನು ರಾತ್ರಿ ಹನ್ನೆರಡರ ಮೊದಲು ವಿನಾಯಕನ ಪತ್ತೆಯೇ ಇರುವುದಿಲ್ಲ"... ಇದೆಲ್ಲ ಪ್ರತಿ ದಿನದ ಕತೆಯೇ ಎಂದುಕೊಂಡು, ಇನ್ನೇನು ಮನೆಗೆ ಪ್ರವೇಶ ಮಾಡಬೇಕು ಅನ್ನುವಷ್ಟರಲ್ಲಿ, ಕಿಟಕಿಯೊಳಗಿಂದ ಒಳಗಿನ ದೃಷ್ಯ ಕಂಡು ಬರುತ್ತದೆ. ಸಾವಿತ್ರಿ ಅಡುಗೆ ಮಾಡುತ್ತಿದ್ದಾಳೆ. ಸ್ನೇಹಾ ಪಕ್ಕದ ಮನೆಯ ಸಂಗೀತಾಳ ಜೊತೆ ಕೂತು ಹರಟೆಹೊಡೆಯುತ್ತಿದ್ದಾಳೆ. ಅರೆ!! ವಿನಾಯಕ ಅಭ್ಯಾಸ ಮಾಡುತ್ತಿದ್ದಾನೆ. ಹೌದೇ? ನಿಜಕ್ಕೂ? ಹೌದು. ವಿನಾಯಕ ನಿಜಕ್ಕೂ ಅಭ್ಯಾಸ ಮಾಡುತ್ತಿದ್ದಾನೆ.

ಚಪ್ಪಲಿಯನ್ನು ಕಳಚಲು ಕಾಲಕಡೆ ಹೋಗಿದ್ದ ಕೈಗಳು, ತಂತಾನೇ ಮೇಲೆ ಬರುತ್ತವೆ. ಕಣ್ತುಂಬಿ ಬರುತ್ತವೆ. ಕಾಕಾ ಮೆಲ್ಲನೆ, ಧುರಿ ಬಿಯರ್ ಬಾರ್ ಕಡೆ ಮುಖ ಮಾಡುತ್ತಾರೆ.

  • ಮುಂಬಯಿ
~.~
  • avikamath77 ರವರ ಬ್ಲಾಗ್
  • Login or register to post comments
  • 470 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Google
  • Yahoo
  • ನಿರ್ವಾಹಕರ ಗಮನಕ್ಕೆ ತನ್ನಿ

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
August 7, 2008 - 10:33pm — Jayalaxmi.Patil

ಉ: ಮುಂಬಯಿ ಮುಖಗಳು ಭಾಗ ೧.....

Jayalaxmi.Patil's picture

ಮುಂಬೈ ಅಂದರೆ ಲೋಕಲ್ ಟ್ರೇನ್, ಲೋಕಲ್ ಟ್ರೇನ್ ಅಂದ್ರೆ ಮುಂಬೈ ಅನ್ನುವಷ್ಟು ಸಹಜ ಅವೆರಡರ ನಂಟು, ಜೊತೆಗೆ ಚಾಳ್ ಬದುಕು. ಚಾಳ್‍ನ ಪ್ರತೀ ಮನೆಯಲ್ಲೂ ಒಬ್ಬ ವಸಂತರಾವ್ ವಿಠೋಬ ಪಾರಂಗೆ ಕಾಕಾ! ಮುಂಬೈ ಬದುಕಿನ ಒಂದು ಮುಖವನ್ನು ಚೆನ್ನಾಗಿ ಅನಾವರಣಗೊಳಿಸಿದ್ದೀರಿ ಅವಿನಾಶ್. ಮುಂಬೈ ತುಂಬಾ ನೆನಪಾಗುತ್ತಿದೆ... ’ಸಂಪದ’ ಬಳಗಕ್ಕೆ ಸ್ವಾಗತ ನಿಮಗೆ.
ಜಯಲಕ್ಷ್ಮೀ.ಪಾಟೀಲ್.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
August 8, 2008 - 9:28am — anil.ramesh

ಉ: ಮುಂಬಯಿ ಮುಖಗಳು ಭಾಗ ೧.....

anil.ramesh's picture

ಅವಿನಾಶ್ ಅವರೇ, ಮೊಟ್ಟಮೊದಲು ’ಸಂಪದ’ ಬಳಗಕ್ಕೆ ನಿಮಗೆ ಹ್ರುತ್ಪೂರ್ವಕ ಸ್ವಾಗತ.
ಮುಂಬೈ ಬದುಕಿನ ಬಗ್ಗೆ ಚೆನ್ನಾಗಿ ಹೇಳಿದ್ದೀರಿ... ಇತ್ತೀಚೆಗೆ ನಾನು ಕಾರ್ಯನಿಮಿತ್ತ ಮುಂಬೈಗೆ ಹೋಗಿದ್ದೆ... ಆದರೆ ನಾನು ಹೋದ ಸಮಯದಲ್ಲಿ ತುಂಬಾ ಮಳೆ... Sad
ಓಡಾಡಿದ್ದು ಲೋಕಲ್ ಟ್ರೈನ್ ನಲ್ಲೇ... ಮುಂಬೈ ನಲ್ಲಿ ಇದ್ರೆ ಲೋಕಲ್ ಟ್ರೈನ್ ನಲ್ಲೇ ಓಡಾಡ್ಬೇಕು. ಅದರ ಮಜಾನೇ ಸಕ್ಕತ್...!

ಜಯಲಕ್ಸ್ಮಿ ಅವರು ಹೇಳಿದ ಹಾಗೆ, ಮುಂಬೈ ಅಂದ್ರೆ ಲೋಕಲ್ ಟ್ರೈನ್, ಲೋಕಲ್ ಟ್ರೈನ್ ಅಂದ್ರೆ ಮುಂಬೈ...
ಮುಂಬೈ ಬದುಕಿನ ಒಂದು ಮುಖವನ್ನು ಚೆನ್ನಾಗಿ ಅನಾವರಣಗೊಳಿಸಿದ್ದೀರಿ. ಹೀಗೆ ಮುಂದುವರೆಸಿ... Smiling

ಇಂತಿ ನಿಮ್ಮ ಪ್ರೀತಿಯ,
ಅನಿಲ್ ರಮೇಶ್.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
August 8, 2008 - 11:13pm — ಸಂಗನಗೌಡ

ಉ: ಮುಂಬಯಿ ಮುಖಗಳು ಭಾಗ ೧.....

ಸಂಗನಗೌಡ's picture

ಪಾರಂಗೆ ಕಾಕಾ ಯಾರು? Shocked

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
August 8, 2008 - 11:52pm — Deeparavishankar

ಉ: ಮುಂಬಯಿ ಮುಖಗಳು ಭಾಗ ೧.....

Deeparavishankar's picture

ಚೆನ್ನಾಗಿದೆ..ಮು೦ಬೈಗೇ ಹೋಗಿ ಬ೦ದ೦ತಾಯ್ತು..ಭಾಗ ೨ಕ್ಕೆ ಕಾಯುತ್ತಿದ್ದೇನೆ..ವಿನಾಯಕನ ಧಿಡೀರ್ ಬದಲಾವಣೆಯಿ೦ದ ಚಕಿತಗೊ೦ಡಿದ್ದೇನೆ..ಬೇಗ ಮು೦ದಿನ ಭಾಗ ಬರಲಿ..

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
August 9, 2008 - 1:02am — avikamath77

ಉ: ಮುಂಬಯಿ ಮುಖಗಳು ಭಾಗ ೧.....

avikamath77's picture

ಧನ್ಯವಾದಗಳು ಜಯಲಕ್ಷ್ಮೀಯವರೆ.
ನೀವು ಮುಂಬಯಿಯನ್ನು ಬಿಟ್ಟು ಹೋಗಿರಬಹುದು... ಆದರೆ ಮುಂಬಯಿ ನಿಮ್ಮನ್ನು ಬಿಟ್ಟು ಎಲ್ಲೂ ಹೋಗಲಾರದು. ನಿಮ್ಮ ಪ್ರೋತ್ಸಾಹಕ್ಕೆ ಚಿರಋಣಿ.

ನಮಸ್ಕಾರ ಅನಿಲ್ ರಮೇಶ್,
ಧನ್ಯವಾದಗಳು. ಮುಂಬಯಿಯನ್ನು ಸವಿಯಬೇಕೆಂದಿದ್ದರೆ, ಮಳೆಗಾಲವೇ ಪ್ರಶಸ್ತ ಕಾಲ. ಮುಂಬಯಿಯ ದೇಹಕ್ಕೆ, ಲೋಕಲ್ ಗಳೇ ಧಮನಿಗಳು.
ಮುಂದಿನ ಬಾರಿ ಮುಂಬಯಿಗೆ ಬಂದಾಗ, ಮಾಟುಂಗಾದಲ್ಲಿರುವ ಕರ್ನಾಟಕ ಸಂಘಕ್ಕೆ ತಪ್ಪದೇ ಭೇಟಿ ನೀಡಿ. ತಾಯಿನಾಡಿನಿಂದ ಬಂದ ಬಂಧುವನ್ನು ನೋಡಿ, ಸಂಘಕ್ಕೆ
ಆನಂದವಾದೀತು.

ಸಂಗನಗೌಡ ಸರ್,
ಪಾರಂಗೆ ಕಾಕಾ, ಮೊನ್ನೆ ನೀವು ರಸ್ತೆ ದಾಟುತ್ತಿರುವಾಗ, ನಿಮ್ಮ ಪಕ್ಕದಲ್ಲೇ ಹಾದು ಹೋದ ಮುಖ ಇರಬಹುದು. ರಜೆಗೆಂದು ನಿಮ್ಮೂರಿಗೆ ಬಂದಿರಬಹುದು.

ದೀಪಾ ರವಿಶಂಕರ್ ಜಿ,
ಧನ್ಯವಾದಗಳು. ಧಿಡೀರ್ ಬದಲಾವಣೆ ಎಂಬುದು ಮುಂಬಯಿಯ ಹುಟ್ಟುಗುಣ. ಕಣ್ಮುಚ್ಚಿ ಕಣ್ತೆರೆಯುವಷ್ಟರಲ್ಲಿ, ಎಲ್ಲಾ ಬದಲಾಗಿರುತ್ತದೆ.
ಹೊಸ ಮುಖಕ್ಕಾಗಿ ನನ್ನ ಅನ್ವೇಷಣೆ ನಡೆದಿದೆ. ಬೇಗನೇ ಹುಡುಕಿ ತರುವೆನೆಂಬ ವಿಶ್ವಾಸವಿದೆ.

ಮುಂಬಯಿಯಿಂದ...ಪ್ರೀತಿಯಿಂದ..
ಅವಿನಾಶ್ ಕಾಮತ್

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
August 9, 2008 - 8:27am — anil.ramesh

ಉ: ಮುಂಬಯಿ ಮುಖಗಳು ಭಾಗ ೧.....

anil.ramesh's picture

ಅವಿನಾಶ್,
ಮಳೆಗಾಲವೇ ಪ್ರಶಸ್ತ ಕಾಲ... ಎಂದಿದ್ದಕ್ಕೆ ಬರೆಯುತ್ತಿದ್ದೇನೆ...
ಮುಂಬೈನಲ್ಲಿ ಭಾರಿ ಮಳೆ ಬಂದ್ರೆ ನಗರದಲ್ಲಿ ನೀರು ತುಂಬಿಕೊಳ್ಳುತ್ತೆ... ಆಗ ಜನರ ಪರದಾಟ ನೋಡೋಕೆ ಆಗೊಲ್ಲ... ಲೋಕಲ್ ಟ್ರೈನ್ ಸರ್ವೀಸ್ ಅಂತೂ ಸಂಪೂರ್ಣ ಸ್ಥಗಿತ... Sad
ಅರ್ಧ ಮುಂಬೈ ನಿಂತಹಾಗೆ... ಏನೂ ಕಾರ್ಯಾಚರಣೆಗಳೂ ಇರೋದಿಲ್ಲ... Sad
ಆದ್ರೂ ನಂಗೆ ಮುಂಬೈ ಇಷ್ಟ... ಸಕ್ಕತ್ Fast Moving ಸಿಟಿ... Smiling

ಅಂದ ಹಾಗೆ, ಮುಂದಿನ ಬಾರಿ ಮುಂಬಯಿಗೆ ಬಂದಾಗ, ಮಾಟುಂಗಾದಲ್ಲಿರುವ ಕರ್ನಾಟಕ ಸಂಘಕ್ಕೆ ತಪ್ಪದೇ ಭೇಟಿ ಕೊಡುತ್ತೇನೆ... Smiling

ಇಂತಿ ನಿಮ್ಮ ಪ್ರೀತಿಯ,
ಅನಿಲ್ ರಮೇಶ್.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
August 10, 2008 - 1:42pm — Narayana

ಉ: ಮುಂಬಯಿ ಮುಖಗಳು ಭಾಗ ೧.....

Narayana's picture

ಯಶವಂತ ಚಿತ್ತಾಲ, ವ್ಯಾಸರಾಯ ಬಲ್ಲಾಳ, ಜಯಂತ ಕಾಯ್ಕಿಣಿಯವರ ದಾರಿಯಲ್ಲೇ ಸಾಗಿ ಮುಂಬಯಿ ಜೀವನದ ಒಂದು ಕಿರು ದರ್ಶನ ಮಾಡಿಸಿದ್ದೀರಿ.

ಚೆನ್ನಾಗಿದೆ. ಮುಂದುವರಿಸಿ.

ಆದರೆ, ಬಹು಼ಷಃ ಇನ್ನೊಂದೆರಡು ದಶಕಗಳಲ್ಲಿ ಮುಂಬಯಿಯ ಚಾಳುಗಳ ಜಾಗದಲ್ಲಿ ಆಕಾಶ ಮುತ್ತಿಕ್ಕುವ ಕಟ್ಟಡಗಳು ಎದ್ದಿರುತ್ತವೆ. ಚಾಳುಗಳು ಇತಿಹಾಸ ಸೇರುವ ಕಾಲ ಬಂದಿದೆ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
August 10, 2008 - 2:09pm — avikamath77

ಉ: ಮುಂಬಯಿ ಮುಖಗಳು ಭಾಗ ೧.....

avikamath77's picture

ನೀವು ಹೇಳೋದು ಸರಿಯಾಗಿದೆ ಅನಿಲ್ ರಮೇಶ್ ಅವರೇ,

ನೀರು ತುಂಬಿಕೊಂಡ ಮುಂಬಯಿಯ ರಸ್ತೆ ಕಮ್ ಚರಂಡಿಯಲ್ಲಿ, ಜನರ ಪರದಾಟ ನೋಡೋದೇ ಕಷ್ಟ.
ಮಜವೆಂದರೆ, ಇಂಥ ಪರಿಸ್ಥಿತಿಯಲ್ಲೂ ಜನರ ಧಾವಂತಕ್ಕೆ ಕಡಿವಾಣ ಹಾಕೋಕಾಗಲ್ಲ. ಎದ್ದು, ಬಿದ್ದು
ಜನ ಓಡುತ್ತಲೇ ಇರುತ್ತಾರೆ. ’ಮುಂಬಯಿ ಇಸ್ ಆಲ್ವೇಸ್ ಆನ್ ದ ಮೂವ್’. ಮುಂಬಯಿಯಲ್ಲಿ ಇನ್ನೂ
ಜೀವಂತವಾಗಿರುವ ಮಾನವೀಯತೆಯ ದರ್ಶನವಾಗುವುದು ಕೂಡ ಇಂಥದ್ದೇ ಸಮಯಗಳಲ್ಲಿ.

ಮುಂಬಯಿಗೆ ಬರುವ ಪ್ಲಾನ್ ಇದ್ದಾಗ avinassh.kamath@gmail.com ಗೆ ಮೇಲ್
ಮಾಡಿ. ಕರ್ನಾಟಕ ಸಂಘದಲ್ಲಿ ಒಂದು ಕಪ್ ಟೀ ಕುಡಿಯೋಣ.

ಧನ್ಯವಾದ ನಾರಾಯಣ್ ಅವರೇ,

ಜಯಂತ್ ಕಾಯ್ಕಿಣಿಯವರ ಕತೆಗಳನ್ನೇ ಓದಿ, ಏನಾದ್ರೂ ಬರೆಯಬೇಕೆಂಬ ಆಸೆ ಹುಟ್ಟಿದ್ದು ನನಗೆ. ಸ್ವತಃ ಜಯಂತ್
ಸರ್ ನನಗೆ ’ಬರೆಯೋ, ಬರೆಯೋ’ ಅಂತ ಹೇಳಿದ್ದೂ ಕಾರಣ. ಹಾಗಾಗಿ ಬರೆಯುತ್ತಿರುವೆ. ಅನುವಾದಕರಾಗಿ
ಹೊಟ್ಟೆ ಹೊರೆಯುವ ನನ್ನಂಥವರಿಗೆ, ಇಡೀ ದಿನ ಬರೆಯೋದೇ ಕೆಲಸ. ರಿಲ್ಯಾಕ್ಸ್ ಆಗೋಕೆ ಮತ್ತೆ ಬ್ಲಾಗ್ ಬರೆಯೋದು
ಅಂದ್ರೆ ಕಷ್ಟವೇ ಕಷ್ಟ. ಆದ್ರೂ ಪ್ರಯತ್ನಿಸುತ್ತೇನೆ. ನಿಮ್ಮೆಲ್ಲರ ಪ್ರೋತ್ಸಾಹಕ್ಕೆ ಚಿರಋಣಿ.

ಮುಂಬಯಿಯ ಚಾಳುಗಳು ಗುಳೇ ಎದ್ದು ಹೋಗುತ್ತಿರುವುದು ನಿಜ. ಹಾಗಾಗದಿರಲಿ ಎಂಬ ಪ್ರಾರ್ಥನೆ ನನ್ನದು.
ಅಸಲೀ ಜೀವನ ಇರೋದೇ ಅಲ್ಲಿ ಎಂಬ ನಂಬಿಕೆಯಿರೋದ್ರಿಂದ ಹೀಗೆ ಹೇಳುತ್ತಿದ್ದೇನೆ ಅಷ್ಟೆ.

ಮುಂಬಯಿಯಿಂದ...ಪ್ರೀತಿಯಿಂದ..
ಅವಿನಾಶ್ ಕಾಮತ್

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
August 10, 2008 - 2:45pm — avikamath77

ಉ: ಮುಂಬಯಿ ಮುಖಗಳು ಭಾಗ ೧.....

avikamath77's picture

ಮುಂಬಯಿಯಿಂದ...ಪ್ರೀತಿಯಿಂದ..
ಗುರು.... ಚೆನ್ನಾಗಿದೆ.
ನಿನ್ನೆ ಪಾರನ್ಗೆ ಕಾಕ ಧುರಿ ಬಿಯರ್ ಬಾರಲ್ಲಿ ಸಿಕ್ಕಿದ್ದರು.ಆದರೆ....... ನಾನು ವಿನಯಕನಾಗಲಿಲ್ಲ.
ನಾನು ಬಿಡಿ...... bombay.....mumbai.. ಆಇತು,ಆದರೆ.........ವಿನಯಕನಾಗಲಿಲ್ಲ.
ಬಿಟ್ಟು ಬಿಡಿ......mumbai..ವಿನಾಯಕನಾಗುತ್ತಿದ್ದರೆ...ನಮಗೆ ಪಾರನ್ಗೆ ಕಾಕ ಸಿಗುತ್ತಿರಲೆ..ಇಲ್ಲ.

ಗುರು.....
ನಿಮಗಾಗಿ...
PUSHPARAJ RAI MALARABEEDU.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
August 10, 2008 - 3:26pm — avikamath77

ಉ: ಮುಂಬಯಿ ಮುಖಗಳು ಭಾಗ ೧.....

avikamath77's picture

ಧನ್ಯವಾದ ಪು...

ಆದರೆ ನಿಮ್ಮ ಕಂಪ್ಯೂಟರ್ ನಲ್ಲಿ ಮೊದಲು ಲಾಗ್ ಔಟ್ ಮಾಡಿ. ನೀವು ಬರೆದದ್ದು, ನನ್ನದೇ ಅಕೌಂಟ್ ನಿಂದ.
ಮೊದಲು ನಿಮ್ಮದೇ ಹೊಸ ಪ್ರೊಫೈಲನ್ನು ತೆರೆಯಿರಿ.

ಹೊಸ ಮುಖದ ಅನ್ವೇಷಣೆಯಲ್ಲಿ ನನಗೆ ನೆರವಾಗುತ್ತೀರಲ್ಲವೇ??

ಮುಂಬಯಿಯಿಂದ...ಪ್ರೀತಿಯಿಂದ..
ಅವಿನಾಶ್ ಕಾಮತ್

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
August 12, 2008 - 5:59am — pallavi.dharwad

ಉ: ಮುಂಬಯಿ ಮುಖಗಳು ಭಾಗ ೧.....

pallavi.dharwad's picture

ಅದ್ಭುತ ಬರವಣಿಗೆ ಅವಿನಾಶ್‌, ಮುಂಬೈಯನ್ನು ಮತ್ತೆ ಕಣ್ಣಿನೆದುರು ನಿಲ್ಲಿಸಿದಿರಿ.

ದಯವಿಟ್ಟು ಇಂತಹ ಬರವಣಿಗೆಗಳನ್ನು ಇನ್ನಷ್ಟು ಬರೀರಿ. ಬರವಣಿಗೆಯ ಇತರ ಸಾಧ್ಯತೆಗಳ ಬಗ್ಗೆಯೂ ಸಂಪದದ ಬಹಳಷ್ಟು ಸದಸ್ಯರಿಗೆ ಗೊತ್ತಾಗಲಿ.

ನಿಮ್ಮ ಬರಹ ಓದುತ್ತಿದ್ದಂತೆ ಲೋಕಲ್‌ ಟ್ರೇನ್‌ಗಳ ಜಂಗುಳಿ, ಪ್ಲಾಟ್‌ಫಾರಮ್‌ಗಳಲ್ಲಿರುವ ವಿಶಿಷ್ಟ ವಾಸನೆ, ಟ್ರೇನ್‌ನ ಗದ್ದಲದಲ್ಲಿ ಕೇಳುವ ಭಜನೆಯ ಏರಿಳಿತದ ಸಂಗೀತ, ಲೋಕಲ್‌ಗಳ ವಿಚಿತ್ರ ಕೂಗು ತುಂಬಿಕೊಂಡಂತಾಯಿತು.

ಅಂಥ ಬದುಕು ನಮ್ಮ ನಮ್ಮ ಸುತ್ತಮುತ್ತಲಿನ ವಾತಾವರಣದಲ್ಲೂ ಇದೆ. ತೀವ್ರತೆಯಲ್ಲಿ, ವಿವರಗಳಲ್ಲಿ ಕೊಂಚ ವ್ಯತ್ಯಾಸ ಕಂಡರೂ, ಇಂತಹ ಬರವಣಿಗೆಗೆ ತುಂಬ ಯೋಗ್ಯವಾದ ಬದುಕದು. ಅದನ್ನು ಬರೆದು ಮುಂಬೈನಲ್ಲಿರುವ ನಿಮಗೆ ತಲುಪಿಸುವುದೂ ನಮ್ಮೆಲ್ಲರ ಜವಾಬ್ದಾರಿ.

ಓದಿ ತುಂಬ ಖುಷಿಯಾಯಿತು.

- ಪಲ್ಲವಿ. ಎಸ್‌.
ಎಲ್ಲರನ್ನು ಜೋಡಿಸಿರುವ ಎಳೆ ಹುಡುಕುತ್ತಾ...

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
August 12, 2008 - 8:47pm — avikamath77

ಉ: ಮುಂಬಯಿ ಮುಖಗಳು ಭಾಗ ೧.....

avikamath77's picture

ತುಂಬಾ ಥ್ಯಾಂಕ್ಸ್ ಪಲ್ಲವಿಯವರೆ...

I am flattered. ಏನೋ ಒಂದಿಷ್ಟು ತೋಚಿದ್ದನ್ನ ಬರೆಯುವ ತವಕ ಅಷ್ಟೇ. ಸಂಪದದಲ್ಲಿ ಬರೆಯುವ ಹಲವಾರು (including you) ಅದ್ಭುತ ಬರಹಗಾರರ ಎದುರು ನಾನೆಲ್ಲಿ?
ನೀವು ಧಾರವಾಡದಲ್ಲಿರುತ್ತೀರಾದರೆ, ನನ್ನನ್ನು ಬೆಳೆಸಿದ ಮಾಳಮಡ್ಡಿ, ಕಲಿಸಿದ ಕೆ ಈ ಬಿ ಹೈ-ಸ್ಕೂಲ್, ಅಲೆದಾಡಲು ಅವಕಾಶ ನೀಡಿದ ಅಂಕುಡೊಂಕು ಸುಭಾಸ್ ಮಾರ್ಗ, ವಿಶಾಲ ಯೂನಿವರ್ಸಿಟಿ ಕ್ಯಾಂಪಸ್, ಮನ ರಂಜಿಸಿದ ’ಪದ್ಮಾ-ಶ್ರೀನಿವಾಸ್-ಸಂಗಮ-ಲಕ್ಶ್ಮೀ’ ಥಿಯೇಟರ್ ಗಳು, ಊಟ ನೀಡಿದ ಖಾನಾವಳಿಗಳಿಗೆ ನನ್ನ ಪ್ರೀತಿಯ ಹಿತಾಶಯಗಳನ್ನು ತಿಳಿಸಿ... ದಯವಿಟ್ಟು.

ನಮಸ್ಕಾರ ಅಕ್ಷತಾ ಮೇಡಂ...

"ಇಡ್ಲಿ, ಆರ್ಕಿಡ್ ಮತ್ತು ಆತ್ಮಬಲ" ದಂಥ ಶ್ರೇಷ್ಠ ಹೊತ್ತಿಗೆಯೊಂದನ್ನು ಕನ್ನಡಿಗರಿಗೆ ನೀಡಿರುವ ನಿಮ್ಮಿಂದ, ನಮ್ಮಂಥ budding ಲೇಖಕರಿಗೆ ಕಲಿಯಲು ಸಾಕಷ್ಟಿದೆ. ಇನ್ನಷ್ಟು ಲೇಖನಗಳು ನಿಮ್ಮ ಲೇಖನಿಯಿಂದ ಹೊರಹೊಮ್ಮುತ್ತಿರಲಿ. ಅಂಕು ಹೇಗಿದ್ದಾಳೆ?

ಮುಂಬಯಿಯಿಂದ...ಪ್ರೀತಿಯಿಂದ..
ಅವಿನಾಶ್ ಕಾಮತ್

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
August 13, 2008 - 9:48am — pallavi.dharwad

ಉ: ಮುಂಬಯಿ ಮುಖಗಳು ಭಾಗ ೧.....

pallavi.dharwad's picture

ಧಾರವಾಡ ಚೆನ್ನಾಗಿಯೇ ಇದೆ ಅವಿನಾಶ್‌. ಆಯುಕ್ತರಾಗಿ ಮಣಿ ಬಂದು ಹೋದ ನಂತರ ಸುಧಾರಿಸಿದ್ದು ಇನ್ನೂ ಕೆಟ್ಟಿಲ್ಲ. ಒಂದಿಷ್ಟು ಉತ್ತಮ ರಸ್ತೆಗಳಾಗಿವೆ. ಸುಭಾಷ್‌ ರಸ್ತೆ ಇನ್ನಷ್ಟು ಬಿಜಿಯಾಗಿದೆ. ತರಕಾರಿ ಮಾರುವವರು, ರಸ್ತೆ ಬದಿ ವ್ಯಾಪಾರಿಗಳು ಶಿಸ್ತು ಕಲಿಯುವುದಿಲ್ಲ ಎಂಬುದು ಖಾತರಿಯಾಗಿದೆ. ವಿಶ್ವವಿದ್ಯಾಲಯ ಸುಧಾರಿಸುವುದು ಅಷ್ಟು ಸುಲಭವೆ? ಶಾಲ್ಮಲಾ ಕಣಿವೆಯಲ್ಲಿ ನವಿಲುಗಳ ಸಂಖ್ಯೆ, ಅವಕ್ಕೆ ಕುತ್ತು- ಎರಡೂ ಹೆಚ್ಚಾಗಿವೆ. ಲಕ್ಷ್ಮೀ ಥೇಟರ್‌ನಲ್ಲೀಗ ’ಎ’ ಮಾರ್ಕಿನ ಸಿನಿಮಾಗಳ ಹೊರತಾಗಿಯೂ ಇತರ ಸಿನಿಮಾಗಳು ಬರುತ್ತಿವೆ. ಉಳಿದ ಎರಡು ಥೇಟರ್‌ಗಳು ತಮ್ಮ ಅಭಿರುಚಿ ಉಳಿಸಿಕೊಂಡಿವೆ. ಥೇಟ್‌ ಧಾರವಾಡದ ಫೇಡೆಯಂತೆ.

ಸಂಪದದಲ್ಲಿ ಅದ್ಭುತ ಬರಹಗಾರರಿರುವುದು ನಿಜ. ಆದರೆ, ಸಣ್ಣಪುಟ್ಟ ವಿಷಯಗಳೇ ದೀರ್ಘಕ್ಕೆ ಹೋಗುತ್ತಿವೆ. ಒಂದಿಷ್ಟು ವಿಚಾರ ಪ್ರಚೋದಕ, ಮನ ತಟ್ಟುವ ಬರಹಗಳು ಹೆಚ್ಚಬೇಕಿದೆ. ನಿಮ್ಮಂಥವರು, ಅಕ್ಷತಾರಂಥವರು ಬಂದಿರಲ್ಲ, ಒಂದಿಷ್ಟು ಉತ್ತಮ ಬರಹಗಳು ಹೆಚ್ಚುತ್ತವೆ ಬಿಡಿ.

- ಪಲ್ಲವಿ. ಎಸ್‌.
ಎಲ್ಲರನ್ನು ಜೋಡಿಸಿರುವ ಎಳೆ ಹುಡುಕುತ್ತಾ...

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
August 12, 2008 - 8:58pm — anil.ramesh

ಉ: ಮುಂಬಯಿ ಮುಖಗಳು ಭಾಗ ೧.....

anil.ramesh's picture

ಖಂಡಿತ ಬರ್ತೀನಿ ಅವಿನಾಶ್...
ನಿಮ್ಮ ವಿಶ್ವಾಸಕ್ಕೆ ನನ್ನಿ...

ಇಂತಿ ನಿಮ್ಮ ಪ್ರೀತಿಯ,
ಅನಿಲ್ ರಮೇಶ್.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
August 10, 2008 - 4:47pm — akshata

ಉ: ಮುಂಬಯಿ ಮುಖಗಳು ಭಾಗ ೧.....

akshata's picture

akshata
ಹೈ ಕಾಂಗ್ರಾಚುಲೇಶನ್ಸ್ ಅವಿನಾಶ್, ಸಂಪದಾ ಗೆ ಸ್ವಾಗತ, ನಾನು ಸಂಪದಾ ಗೆ ಮೆಂಬರ್ ಆಗಿ ನಾಲ್ಕು ವಾರ ನಾಲ್ಕು ದಿನಗಳಾದವು ಇವತ್ತು ಕನ್ನಡ ದಲ್ಲಿ ಟೈಪ್ ಮಾಡಲು ಕಲಿತೆ, ನಿಮಗೆ ಮೊದಲ ಪ್ರತಿಕ್ರಿಯೆ, ನಾಳೆಯಿಂದ ಬ್ಲಾಗ್ ಬರೆಯುವೆ, ನಿಮ್ಮ ಮುಂಬಯಿಯ ವರ್ಣನೆ ಓದಿ ಖುಷಿಯಾಯ್ತು. ಹೀಗೆ ಬರೆಯುತ್ತಿರಿ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
August 24, 2008 - 12:39am — naveensunag

ಉ: ಮುಂಬಯಿ ಮುಖಗಳು ಭಾಗ ೧.....

naveensunag's picture

ಅವಿನಾಶ್ ಅವರೆ ನಿಮ್ಮ ಮು೦ಬೈ ಮುಖಗಳು ಓದಿ ತು೦ಬಾ ಖುಶಿಯಗಿದೆ. ಜಯ೦ತ ಕಾಯ್ಕಿಣಿ ಅವರ ಶೈಲಿಯಲ್ಲಿ ನಿಮ್ಮ ಲೇಖನ ರಚನೆಗೊ೦ಡಿದ್ದರು, ಅದು ಸ್ಸ೦ಪೂರ್ಣವಾಗಿ ಭಿನ್ನ ಹಾಗು ಸ್ವಾತ೦ತ್ರವಾದ ರಚನೆಯಾಗಿದೆ. ಒ೦ದು ನಾನ್ ಲೀನಿಯರ್ ಕಥೆಯನ್ನು ಗಮನಾರ್ಹವಾಗಿ ಹೇಳುವುದು ತು೦ಬಾ ಕಷ್ಟದ ಕೆಲಸ, ಅದನ್ನು ನೀವು ತು೦ಬಾ ಚೆನ್ನಾಗಿ ಮಾಡಿದ್ದಿರಿ. ಹಲವು ವರ್ಷಗಳಿ೦ದ ಹೊಟ್ಟೆಪಾಡಿಗಾಗಿ ಕೇವಲ ಅನುವಾದಗಳನ್ನೆ ಮಾಡುತ್ತಿರುವ ನಿಮ್ಮಿ೦ದ ಇ೦ಥ ಓ೦ದು ಬರವಣಿಗೆಯನ್ನು ನೋಡಿ ನನಗೆ ತು೦ಬಾ ಸಮಾಧಾನವಾಗಿದೆ.ನಿಮ್ಮ ಬರವಣಿಗೆಗೆ ಸಮಯದ ಅಭಾವ ಇರುವುದು ಗೊತ್ತಿದ್ದರು ಹೇಗಾದರು ಮಾಡಿ ಬರೆಯುತ್ತಾ ಇರಿ ಎನ್ನುವುದು ನನ್ನ ವಿನ೦ತಿ. ನಿಮ್ಮ ಮು೦ದಿನ ಲೇಖನಕ್ಕಾಗಿ ಕಾಯುತ್ತಿರುತ್ತೆನೆ. ಆಲ್ ದಿ ಬೆಸ್ಟ್ ಗುರು.

Naveen Sunag

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
August 24, 2008 - 1:58am — avikamath77

ಉ: ಮುಂಬಯಿ ಮುಖಗಳು ಭಾಗ ೧.....

avikamath77's picture

ನಮಸ್ಕಾರ ನವೀನ್...

ನಿಮ್ಮ ಪ್ರತಿಕ್ರಿಯೆಗೆ ಋಣಿ... ಬರಿಯಬೇಕು, ಬರಿಯಬೇಕು ಎಂಬ ತುಡಿತ ಇದ್ದರೂ, ಅಪರಾತ್ರಿ ಮನೆಗೆ ಬಂದು ಊಟ ಮಾಡಿದವನಿಗೆ, ಹೊಸತೇನಾದರೂ ಹೊಳೆಯುವುದೇ ಕಷ್ಟ.
ಹೊಳೆದರೂ ಕೂಡ, ಬರೆಯಲು ಕುಳಿತರೆ ಬೋರು ಬೋರು. ಉರಿಗಣ್ಣು. ಆದರೂ ಪ್ರಯತ್ನ ನಿಲ್ಲಿಸಲಾರೆ.
’ಮೃಗತೃಷ್ಣ’ ಇಷ್ತವಾಯಿತು ತಾನೆ?

ನಾಟಕದ ಬಗ್ಗೆ ನೀವೇ ಒಂದು ಬ್ಲಾಗ್ ಯಾಕೆ ಬರೆಯಬಾರದು???

ಮುಂಬಯಿಯಿಂದ...ಪ್ರೀತಿಯಿಂದ..
ಅವಿನಾಶ್ ಕಾಮತ್

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ನನ್ನ ಪ್ರೀತಿ ಮತ್ತು ನಿನ್ನ ಚಿಕನ್!
  • ಹೃದಯವಂತಿಕೆ
  • ಇಂಟರ್ನೆಟ್ ಗಾಗಿ ಏನೆಲ್ಲ (೧)
  • ರಾಜ ಮುದ್ದು ರಾಜ
  • ವಿಚಿತ್ರವಾದರೂ ನಿಜ
Syndicate content

ಲೇಖಕರು

avikamath77's picture

ಪೂರ್ಣ ಹೆಸರು
Avinash Kamath

ಪರಿಚಯ

ಮುಂಬಯಿ ಶಹರದಲ್ಲಿ ಹೊಟ್ಟೆಪಾಡಿಗಾಗಿ, ಕಂಠದಾನ ಕಲಾವಿದ ಹಾಗೂ ಅನುವಾದಕನಾಗಿ ಕೆಲಸ ಮಾಡುತ್ತಿರುವೆ. ನಾಟಕಗಳಲ್ಲಿ ಅಭಿನಯ ಮಾಡದೇ ಬದುಕಲಾರೆ.
ಜಯಂತ್ ಕಾಯ್ಕಿಣಿ ಕತೆಗಳು, ಕಾರಂತರ ಕೃತಿಗಳು, ಬೆಳಗೆರೆಯವರ ಲೇಖನಗಳು ತುಂಬ ಇಷ್ಟ.

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

Dr. Ullas Karanth (ಡಾ. ಉಲ್ಲಾಸ್ ಕಾರಂತ)
ನಿರೀಕ್ಷಿಸಿ!

ವಾಟರ್ ಪೋರ್ಟಲ್: ದಿನದ ಚಿತ್ರ

ಬಾವಿ

ಮೂಡಬಿದ್ರಿಯ ಸಾವಿರ ಬಸದಿಯ ಬಳಿ ಒಂದು ಬಾವಿ.
(ಫೋಟೋ: ಸುದರ್ಶನ್ (ಅನಿವಾಸಿ))

ವಾರದ ಲೇಖನ
ಬೃಹತ್ ನೀರಾವರಿ ಯೋಜನೆಗಳು: ಮಹಾ ಅಸಂಗತಕ್ಕೊಂದು ಮುನ್ನುಡಿ - ಎನ್ ಎ ಎಂ ಇಸ್ಮಾಯಿಲ್

ವಾರದ ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ಮತ್ತಷ್ಟು...

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಬ್ಲಾಗ್ ಬರಹಗಳು

  • ಓದಿದ್ದು ಕೇಳಿದ್ದು ನೋಡಿದ್ದು-12
  • ನೀನು ನಾನು ಜೋಡಿ
  • ಬಹಿರಂಗ ವಸೂಲಿಗೆ ಸಚಿವೆ ಶೋಭಾ ಮಾದರಿ
  • ಜೋಯೀಸರ ಮಗಳು
  • 1700 11th AVE NE ಅಪಾರ್ಟ್ ಮೆಂಟ್ - 6
  • ಕೆಟ್ಟ ಕಾರ್ಯಕ್ರಮಗಳಿಗೆ ಅಂಕುಶ ಹಾಕುತ್ತೀರಾ?
  • ಓದಿದ್ದು ಕೇಳಿದ್ದು ನೋಡಿದ್ದು-11
  • ಶಿವರಾಜ್ ಕುಮಾರ ಅಭಿಮಾನಿಗಳಿಗೆ ಮತ್ತೇರಿಸುವ ಚಿತ್ರ " ಮಾದೇಶ "
  • ಹಬ್ಬ ತಂದ ನೆನಪು...
  • ದಯವಿಟ್ಟೂ ಸ್ವಲ್ಪ ಅರ್ಥ ಹೇಳ್ತೀರಾ ????
ಇನ್ನಷ್ಟು

ಇತ್ತೀಚಿನ ಪ್ರತಿಕ್ರಿಯೆಗಳು

  • madhava_hs
    ಉ: ದಯವಿಟ್ಟೂ ಸ್ವಲ್ಪ ಅರ್ಥ ಹೇಳ್ತೀರಾ ????
    September 8, 2008 - 10:09am
  • roshan_netla
    ಉ: ಹಿರಿಯರಿಗೂ ಈಗ ಇಂಗ್ಲಿಷ್ ಚಾಳಿ!
    September 8, 2008 - 10:09am
  • madhava_hs
    ಉ: ಕೆಟ್ಟ ಕಾರ್ಯಕ್ರಮಗಳಿಗೆ ಅಂಕುಶ ಹಾಕುತ್ತೀರಾ?
    September 8, 2008 - 10:00am
  • kannadakanda
    ಉ: ದಯವಿಟ್ಟೂ ಸ್ವಲ್ಪ ಅರ್ಥ ಹೇಳ್ತೀರಾ ????
    September 8, 2008 - 9:54am
  • madhava_hs
    ಉ: ಬಹಿರಂಗ ವಸೂಲಿಗೆ ಸಚಿವೆ ಶೋಭಾ ಮಾದರಿ
    September 8, 2008 - 9:54am
  • kannadakanda
    ಉ: ಹಿರಿಯರಿಗೂ ಈಗ ಇಂಗ್ಲಿಷ್ ಚಾಳಿ!
    September 8, 2008 - 9:51am
  • anil.ramesh
    ಉ: ಮೊದಲ ಚಿತ್ರ
    September 8, 2008 - 9:43am
  • Sunil Jayaprakash
    ಉ: ಹಿರಿಯರಿಗೂ ಈಗ ಇಂಗ್ಲಿಷ್ ಚಾಳಿ!
    September 8, 2008 - 9:28am
  • Sunil Jayaprakash
    ಉ: ಹಿರಿಯರಿಗೂ ಈಗ ಇಂಗ್ಲಿಷ್ ಚಾಳಿ!
    September 8, 2008 - 9:15am
  • Sunil Jayaprakash
    ಉ: ಹಿರಿಯರಿಗೂ ಈಗ ಇಂಗ್ಲಿಷ್ ಚಾಳಿ!
    September 8, 2008 - 9:05am
ಇನ್ನಷ್ಟು
ಈಗಿನಂತೆ 7 ಸದಸ್ಯರು ಮತ್ತು 277 ಅತಿಥಿಗಳು ಆನ್ಲೈನ್ ಇರುವರು.


ನಮ್ಮಲ್ಲಿಲ್ಲದ ಗುಣ ಬೇರೆಯವರಲ್ಲಿದ್ದರೆ ಅದನ್ನು ನಮ್ಮಲ್ಲಿ ತರುವ ಪ್ರಯತ್ನ ಮಾಡಬಾರದು. ಹಾಗೆ ಮಾಡಲು ಹೊರಟರೆ ನಾವು ಪರಮಾತ್ಮನ ಬಳಿ ಹೋಗುವ ಬದಲು ಆ ಮನುಷ್ಯನ ಬಳಿ ಸೇರುತ್ತೇವೆ.

— ವಿನೋಬಾ ಭಾವೆ

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator