ಕನ್ನಡಪುಟ
ಪುಟವಿಡಲು ನುಡಿಯೇನು ನೆಲವೇನು ಹೊಳೆವುದೀ ನಾಡಿನಲಿ ಚಿನ್ನವಾಗಿ!
೬. ಹೀಗೊಬ್ಬ ಬಾಬಾ ಭಕ್ತ!
ಕ್ಯೂಶೂನಲ್ಲಿ ಇದ್ದಷ್ಟು ದಿನವೂ ನಾನು ಅಡುಗೆ ಮಾಡಿಕೊಳ್ಳಲು ಸಾಧ್ಯವೇ ಇರಲಿಲ್ಲ. ಕೆಲಸದ ಸ್ಥಳದ ಕಾರ್ಖಾನೆಯಲ್ಲಿ ಸಿಗುತ್ತಿದ್ದುದು ಮಾಂಸಾಹಾರವಾದ್ದರಿಂದ ನಾನು ತಿನ್ನಲಾಗುತ್ತಿರಲಿಲ್ಲ. ಬೆಳಿಗ್ಗೆ ಕಾರ್ಖಾನೆಯೊಳಗೆ ಹೋಗುವ ಮೊದಲೇ ಮಧ್ಯಾಹ್ನದ ಊಟ ಕೊಳ್ಳಬೇಕಿತ್ತು; ಏಕೆಂದರೆ ಒಮ್ಮೆ ಒಳಹೊಕ್ಕರೆ ಹತ್ತಿರದ ಕೊಂಬಿನಿಗೆ ಹಿಂದಿರುಗಲು ೩೦ ನಿಮಿಷ - ಅದೂ ಕಾರಿನಲ್ಲಿ! ಹತ್ತಿರದಲ್ಲೆಲ್ಲೂ ಯಾವ ಅಂಗಡಿಯೂ ಇರಲಿಲ್ಲ! ಇನ್ನು ರಾತ್ರಿಯೂಟಕ್ಕೆ ಹಿಂದಿರುಗುವಾಗ ಕೊಳ್ಳುತ್ತಿದ್ದ ಅನ್ನ, ಮೊಸರು ಗೊತ್ತಿದ್ದದ್ದೇ. ಮಧ್ಯೇ ಮಧ್ಯೇ ಪಾನೀಯಂ ಸಮರ್ಪಯಾಮಿ ಎಂದು ಕಿತ್ತಲೆ ರಸ! ಆದರೆ ಒಂದು ವಿಚಾರ ಮಾತ್ರ ಗಮನ ಸೆಳೆದಿತ್ತು: ನನ್ನ ಜೊತೆ ಅಸಾಮಿಯೂ ಬೆಳಿಗ್ಗೆ ಹಾಗೂ ರಾತ್ರಿಯ ಊಟ ಕೊಳ್ಳುತ್ತಿದ್ದ! ಮಧ್ಯಾಹ್ನ ಅವನು ಕಾರ್ಖಾನೆಯ ಊಟ ತಿನ್ನುವುದಿಲ್ಲವೇನೋ ಎಂದುಕೊಂಡೆ; ಆದರೆ ರಾತ್ರಿಯೂ ನನ್ನಂತೆ ಅನ್ನ ಕೊಳ್ಳುತ್ತಿದ್ದ! ಒಂದು ದಿನವೂ ಮಾಂಸಾಹಾರ ಕೊಂಡಿರಲಿಲ್ಲ! ಒಮ್ಮೆ ಹಿರು-ಗೊಹಾನ್[ಮಧ್ಯಾಹ್ನದ ಊಟ]ದ ಸಮಯದಲ್ಲಿ ಕೇಳಿದೆ:
"ತಾವು ಇಲ್ಲಿನ ಮಾಂಸಾಹಾರ ತಿನ್ನುವುದಿಲ್ಲವೇ? ನನ್ನಂತೆ ಬನ್ನು ಕೊಂಡಿದ್ದೀರಲ್ಲಾ?"
ಅಸಾಮಿಯೆಂದ "ಇಲ್ಲ ಕಣಯ್ಯಾ! ನಾನು ಸಸ್ಯಾಹಾರಿ; ಆದರೆ ನಿನ್ನಷ್ಟು ನಿಯಮ-ನಿಷ್ಠೆಯಿಲ್ಲ. ಒಮ್ಮೊಮ್ಮೆ ಮೀನು, ಮೊಟ್ಟೆ ತಿನ್ನುತ್ತೇನೆ; ದನದ ಮಾಂಸ ಮಾತ್ರ ತಿನ್ನುವುದಿಲ್ಲ ಅಷ್ಟೇ!"
ನಾನು ಅಚ್ಚರಿಯಿಂದ "ಜಪಾನೀಯರು ಮೊದಲಿಂದಲೂ ಬೌದ್ಧಧರ್ಮಿಗಳೆಂದೇ ನಾವೆಲ್ಲರೂ ಓದಿ ತಿಳಿದುಕೊಂಡಿದ್ದು; ಬೌದ್ಧರು ಸಸ್ಯಾಹಾರಿಗಳಲ್ಲವೇ? ಈಗ ಮೀನು, ಮಾಂಸಗಳನ್ನು ಎಲ್ಲರೂ ತಿನ್ನುತ್ತಿರುವುದು ಆಶ್ಚರ್ಯ" ಎಂದೆ.
"ಬೌದ್ಧಧರ್ಮವೇನೋ ಇದೆ; ಯುದ್ಧದ ನಂತರ ಬಹಳ ವ್ಯತ್ಯಾಸಗಳಾದವು. ಈಗೆಲ್ಲ ಎಲ್ಲವನ್ನೂ ತಿನ್ನುತ್ತಾರೆ."
"ಮತ್ತೆ, ತಾವು ಸಸ್ಯಾಹಾರಿ ಎಂದಿರಿ...."
"ಇಲ್ಲಯ್ಯಾ! ಜಪಾನೀಯರಿಗೆ ಸಸ್ಯಾಹಾರವೆಂದರೆ 'ದನದ ಮಾಂಸ ಇಲ್ಲದ' ಎಂದರ್ಥ. ನಾನು ಭಾರತಕ್ಕೆ ಬಂದು ಸಾಯಿಬಾಬಾ ಭಕ್ತನಾದ ಮೇಲೆ ಮಾಂಸಾಹಾರ ಬಿಟ್ಟೆ " ಎಂದ!
"ನೀವು ಭಾರತಕ್ಕೆ ಬಂದಿದ್ದಿರೇ? ಯಾವಾಗ? ಎಲ್ಲಿ?" ಎಂದೆ ಅಚ್ಚರಿಯಿಂದ!
"ನಿನ್ನ ಬೆಂಗಳೂರಿನ ವೈಟ್‍ಫೀಲ್ಡ್, ಆಂಧ್ರದ ಪುಟ್ಟಪರ್ತಿ... ಹೀಗೆಯೇ.." ಎಂದ.
ಓಹೋ! ಸರಿ ಸರಿ! ಇವನು ಸತ್ಯಸಾಯಿಬಾಬಾ ಭಕ್ತನೋ! ಎಂದುಕೊಳ್ಳುತ್ತಿದ್ದಂತೆ, ಅವನು ಬಾಬಾರಿಂದ ಪಡೆದ ಉಂಗುರವೊಂದನ್ನು ತೋರಿಸಿ, ಸದಾ ಧರಿಕೊಂಡಿರುತ್ತೇನೆಂದ! ನಾನು ನನ್ನ ಕಿಸೆಯಲ್ಲಿದ್ದ ಶಿರಡಿ ಸಾಯಿಬಾಬಾರ ಭಾವಚಿತ್ರ ತೋರಿಸಿದೆ. ಅವನಿಗೆ ಅಚ್ಚರಿ!
"ಇವರು ನಿಜವಾದ ಹಳೆಯ ಸಾಯಿಬಾಬಾ ಅಲ್ಲವೇ? ನೀನು ಅವರ ಭಕ್ತನೋ?" ಎಂದ.
"ಹೌದು ಸ್ವಾಮಿ; ನನ್ನ ಮನೆಯವರೆಲ್ಲ ಶಿರಡಿ ಬಾಬಾ ಭಕ್ತರು; ನನ್ನ ಅಜ್ಜ ದೂರದ ಊರೊಂದರಲ್ಲಿ ಸಾಯಿಬಾಬಾ ಮಂದಿರದಲ್ಲಿ ಅರ್ಚಕರಾಗಿದ್ದರು; ಬಾಬಾ ಶಾಸ್ತ್ರಿಗಳು ಎಂದೇ ಹೆಸರಾಗಿದ್ದವರು" ಎಂದೆ.
ಅಂದಿನಿಂದ ಪ್ರತಿ ಮಧ್ಯಾಹ್ನ ಭಾರತ-ಜಪಾನಿನ ಆಧ್ಯಾತ್ಮಿಕ ವಿಚಾರ ವಿನಿಮಯ ಶುರುವಾಯಿತು. ಅವನು ನಾನೆಣಿಸಿದ್ದಕ್ಕಿಂತ ಚೆನ್ನಾಗಿಯೇ ತಿಳಿದವನಾಗಿದ್ದ. ಈ ಮೊದಲು ಪುಟ್ಟಪರ್ತಿ ಬಾಬಾರ ಸಂದೇಶಗಳನ್ನು ಭಾಷಾಂತರಮಾಡುತ್ತಿದ್ದನಂತೆ; SSOJ[ಸತ್ಯ ಸಾಯಿ ಆರ್ಗನೈಜೇಷನ್ ಜಪಾನ್] ಸಮೂಹದ ಪತ್ರಿಕೆಯ ಸಂಪಾದಕನೂ ಆಗಿದ್ದನಂತೆ. ನಾನಿಲ್ಲಿ ಒಬ್ಬೊಂಟಿಯಲ್ಲ ಎಂಬ ಧೈರ್ಯ ಬಂದುಬಿಟ್ಟಿತು. ಒಮ್ಮೆ ಹೀಗೆಯೇ ಬೌದ್ಧಧರ್ಮದ ಬಗ್ಗೆ ಚರ್ಚೆ ನಡೆದಿದ್ದಾಗ ಮಂತ್ರ-ತಂತ್ರಗಳ ಬಗ್ಗೆ ಮಾತು ಹರಿಯಿತು. ಅವನಾಗ ಸಂಸ್ಕೃತದಿಂದ ಚೀನೀ - ನಂತರ ಜಪಾನೀ ಭಾಷೆಗೆ ಬಂದ ಬೌದ್ಧ ಮಂತ್ರವನ್ನು ತೋರಿಸಿದ! ನನಗೆ ಸಂಸ್ಕೃತಭಾಷೆ ಅರ್ಥವಾಗುತ್ತಿದ್ದರೂ, ಅವನು ತೋರಿದ ಮಂತ್ರ ಕೇವಲ ಶಬ್ದಮಾತ್ರದಿಂದ ಅರ್ಥವಾಗುತ್ತಿರಲಿಲ್ಲ!
"ಹನ್ಯಹರಮಿತ ಶಿಂಗ್ಯೋ????? ಇದು ಸಂಸ್ಕೃತವಲ್ಲ!" ಎಂದೆ.
"ಗೊತ್ತಯ್ಯಾ! 'ಹನ್ಯ' ಎಂಬುದು 'ಜ್ಞಾನ' ಎಂಬುದರ ಅಪಭ್ರಂಶ.... ಹೀಗೆಯೇ ಮಿಕ್ಕವು; ನನಗೆ ಸಂಸ್ಕೃತ ಬಾರದು; ನೀನು ಪ್ರಯತ್ನಿಸು" ಎಂದ!
ನನಗೆ ಅಚ್ಚರಿಯಾಗಿ ಕಣ್ಣರಳಿಸಿ ನೋಡಿದೆ! "ಭಲಾ! ಇವನು ನನಗೆ ಒಳ್ಳೆಯ ಮಿತ್ರ!" ಎಂದುಕೊಂಡೆ. ಆದರೆ ಎಷ್ಟೇ ಪ್ರಯತ್ನಿಸಿದರೂ ಆ ಮಂತ್ರದ ಒಳಾರ್ಥ ಇರಲಿ, ತಲೆಬರಹವಾದ 'ಹನ್ಯಹರಮಿತಶಿಂಗ್ಯೋ' ಕೂಡ ಏನೆಂದು ತಿಳಿಯದೆ, ಕೈಚೆಲ್ಲಿದೆ. (ಆದರೆ ಅದರ ಬಗ್ಗೆ ನನಗೆ ಕುತೂಹಲ ಬೆಳೆಯುತ್ತಲೇ ಹೋಗಿ, ಮುಂದೊಮ್ಮೆ ಜಪಾನೀ ಹಾಗೂ ಸಂಸ್ಕೃತವನ್ನು ಬೆಸೆಯುವ ಮಹತ್ತರ ಕೆಲಸಕ್ಕೆ ನನ್ನ ಸಹಾಯವೂ ಬೇಕಾಗುವಂತಾಗುತ್ತದೆಂದು ನನಗೇನು ಗೊತ್ತಿತ್ತು!? 'ಹನ್ಯಹರಮಿತಶಿಂಗ್ಯೋ' ವೇ ಬೌದ್ಧಧರ್ಮದ ಮಹಾನ್ ಸೂತ್ರವಾದ 'ಪ್ರಜ್ಞಾಪಾರಮಿತಾಹೃದಯಸೂತ್ರ'ವೆಂದು ತಿಳಿಯಲು ಬಹಳ ಸಮಯವೇ ಬೇಕಾಯಿತು; ಇರಲಿ ಅದರ ಬಗ್ಗೆ ಇನ್ನೊಮ್ಮೆ ಬರೆಯುತ್ತೇನೆ.)
ಜಪಾನೀ ಭಾಷೆಯ ಒಂದು ವೈಶಿಷ್ಟ್ಯವೆಂದರೆ ಕಾಂಜಿ[ಚೀನೀ ಅಕ್ಷರ]ಗಳ ಬಳಕೆ. ಆದರೆ ಗೊತ್ತಿಲ್ಲದವರಿಗೆ ಅದು ಹೇಗೇಗೋ ಗೀಚಿದ ಚಿತ್ರಗಳಂತೆ ಕಾಣುವುದರಲ್ಲಿ ಸಂದೇಹವಿಲ್ಲ; ನಾನು ಕಲಿತಿದ್ದದ್ದು ಸ್ವಲ್ಪ ಮಾತ್ರ. ರಾತ್ರಿಯೂ, ಹಗಲೂ ಅಂಗಡಿಯಲ್ಲಿ ತಿನ್ನಲೇನಾದರೂ ಕೊಳ್ಳುವಾಗ ಅಸಾಮಿಯೇ ಅವುಗಳ ಹಣೆಪಟ್ಟಿಯಲ್ಲಿನ ಕಾಂಜಿಗಳನ್ನು ತೋರಿಸುತ್ತಾ,
"ನೋಡು, ನೆನಪಿಟ್ಟುಕೋ, ಇದು ಮೊಟ್ಟೆ, ಇದು ಮೀನು, ಇದು ಹಂದಿ, ಇದು ಮೂಲಂಗಿ, ಇದು ಗಜ್ಜರಿಯ ಅಕ್ಷರ.." ಎಂದೆಲ್ಲಾ ಹೇಳಿಕೊಡುತ್ತಿದ್ದ.
ನಿಜವಾಗಿ ನಾನು ಆ ಮಾರ್ಗದರ್ಶನಕ್ಕೆ ಹೃದಯಪೂರ್ವಕ ಧನ್ಯವಾದ ಹೇಳಿದೆ. ಆದರೆ ಒಂದು ತೊಂದರೆಯಿತ್ತು; ನಾನು ವಿದೇಶೀಯನೆಂಬುದನ್ನು ಮರೆತು, ಚಕ್ಕನೆ ಓಸಾಕಾದ ಭಾಷೆಯಲ್ಲಿ ಬಡಬಡನೆ ಹೇಳಿಬಿಡುತ್ತಿದ್ದ! ನನಗೆ ಸಾಕು-ಸಾಕಾಯಿತು! ರಾತ್ರಿ ಕೊಂಬಿನಿಗೆ ಹೋದಾಗಲೆಲ್ಲ ಆ ಅಂಗಡಿಯವಳು "ಎರಡು ಅನ್ನದ ಡಬ್ಬಿ ತಾನೇ" ಎನ್ನುತ್ತಾ ಸಿದ್ಧವಾಗುತ್ತಿದ್ದಳು; ನಾವು ನಗುತ್ತಿದ್ದೆವು. ರಾತ್ರಿಯೂಟದ ನಂತರ ಪಕ್ಕದ ಕೋಣೆಯಲ್ಲೇ ಇದ್ದ ನನಗೆ ಅವನೇ ಅವನ ನೋತೊಪಸೊಕೊನ್[ನೋಟ್‍ಬುಕ್ ಪರ್ಸೊನಲ್ ಕಂಪ್ಯೂಟರ್ ನ ಸಂಕ್ಷೇಪ] ಅನ್ನು ಕೊಟ್ಟು ಬೇಕಾದರೆ, ಮನೆಯವರ ಜೊತೆಗೆ ಹರಟೆನ್ನುತ್ತಿದ್ದ; ನನಗಾದ ಸಂತಸ ಅಷ್ಟಿಷ್ಟಲ್ಲ!
ಕೆಲಸದಲ್ಲಿ ಏನಾದರೂ ಆಂಗ್ಲಪದಗಳು ಕಂಡರೆ ಓಡಿ ಬಂದು ಅರ್ಥವನ್ನು ಕೇಳುತ್ತಿದ್ದ! ನಾನವನಿಗೆ ನಿಧಾನವಾಗಿ, ಬರುತ್ತಿದ್ದ ಜಪಾನೀ ಭಾಷೆಯಲ್ಲಿ ವಿವರಿಸುತ್ತಿದ್ದೆ; ಅವನು ಅಷ್ಟಕ್ಕೆ ಬಿಡದೆ ಇನ್ನೂ ಏನೇನೋ ಕೇಳುತ್ತಿದ್ದ! ಏನಾದರೂ ಹಾರಿಕೆಯ ಉತ್ತರ ನೀಡಿದರೆ ಗದರಿಸುತ್ತಿದ್ದ! ಆ ಕಾರ್ಖಾನೆಯಲ್ಲಿನ ನಮ್ಮ ಕೆಲಸ ಬಹಳ ಶ್ರಮದಾಯಕವಾಗಿದ್ದು, ಸ್ವಲ್ಪ ಕಷ್ಟವೇ ಆಗಿತ್ತು. ನಮ್ಮ ಜೊತೆಗೆ ಬಂದವರು ಏಕೋ ತಡವಾಗಿಯೇ ಕೆಲಸ ಮುಗಿಸುತ್ತಿದ್ದರು. ಸಂಜೆ ೬ ಗಂಟೆಯ ನಂತರ ಜಾಂಗ್ಯೋ[ಓವರ್ ಟೈಮ್] ದುಡ್ಡು ಸಿಗುತ್ತದೆ ಎಂದೇನೋ ಎಂದು ನಾನೇ ಗೊಣಗಿಕೊಂಡೆ. ಒಮ್ಮೊಮ್ಮೆ ಅಸಾಮಿ ನಿದ್ದೆ ಹೊಡೆಯುತ್ತಿದ್ದ; ನಾನು ಆಗಾಗ್ಗೆ ತಂತ್ರಾಂಶದ ಸರಿಪಡಿಕೆ ಮಾಡುವುದನ್ನು ಬಿಟ್ಟರೆ, ಮಿಕ್ಕಂತೆ ಕೆಲಸ ಬೇಜಾರಾಗತೊಡಗಿತ್ತು.
ಶನಿವಾರ ಬಂತು! ಖುಷಿಯಾದೆ ಎರಡು ದಿನ ರಜೆಯೆಂದು! ಮನೆಗೆ ದೂರವಾಣಿ ಕರೆ ಮಾಡಿದೆ. ಅಸಾಮಿ ಬಾಡಿಗೆಗೆ ಬಟ್ಟೆ ಒಗೆಯುವ, ಒಣಗಿಸುವ ಯಂತ್ರವನ್ನು ತೋರಿಸಿದ; ಒಂದು ವಾರದ ಬಟ್ಟೆಗಳನ್ನೆಲ್ಲಾ ಒಗೆಯಹಾಕಿದೆ. ಏಕೋ ಇನ್ನೂ ಬೇಸರ ಕಳೆಯಲಿಲ್ಲ; ವೆಂಕಟನಿಗೊಂದು ಕರೆ ಮಾಡಿದೆ. ಅಲ್ಲಿ ಏಕೋ ವೆಂಕಟನ ದನಿಯಲ್ಲಿ ಕಸುವಿರಲಿಲ್ಲ!
"ಏನಾಯ್ತೋ!?" ಎಂದೆ.
"ಯಾಕೋ, ಸ್ವಲ್ಪ ಮೇಲಧಿಕಾರಿಯೊಂದಿಗೆ ಸರಿಬರುತ್ತಿಲ್ಲ; ಕೆಲಸದಲ್ಲೆಲ್ಲಾ ತರಲೆಯಾಗುತ್ತಿದೆ; ನಾನು ವಾಪಸ್ ಹೋಗಬಹುದು" ಎಂದ!
"ಹ್ಞಾಂ?????" ನಾನು ಅವಾಕ್ಕಾದೆ!
* * * *
(ಮುಂದಿನ ಬಾರಿ: ವೆಂಕಟನ ನಿರ್ಗಮನ...?)

- benaka ರವರ ಬ್ಲಾಗ್
- Login or register to post comments
- 1490 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ





RSS:
ಪ್ರತಿಕ್ರಿಯೆಗಳು
ನನ್ನ ಜಪಾನ್ ಪ್ರವಾಸ : ೬. ಹೀಗೊಬ್ಬ ಬಾಬಾ ಭಕ್ತ!
ಗೆಳೆಯರೇ,
ನನ್ನ ಜಪಾನ್ ಪ್ರವಾಸ : ೬. ಹೀಗೊಬ್ಬ ಬಾಬಾ ಭಕ್ತ! ನಿಮ್ಮ ಮುಂದಿದೆ.
ಮುಂದಿನ ಭಾಗ - ೭. ವೆಂಕಟನ ನಿರ್ಗಮನ......? ಇಷ್ಟರಲ್ಲೇ ಬಲೆಯೇರಲಿದೆ.
ಆಸಕ್ತರು ಈ ಕೆಳಗಿನ ನನ್ನ ಸಚಿತ್ರ ಬ್ಲಾಗಿನಲ್ಲೂ ಓದಬಹುದು.
ನಿಮ್ಮವ
ಬೆನಕ
ಕನ್ನಡಪುಟ.ಬ್ಲಾಗ್‍ಸ್ಪಾಟ್.ಕಾಂ.
ಪುಟವಿಡಲು ನುಡಿಯೇನು, ನೆಲವೇನು, ಹೊಳೆವುದೀ ನಾಡಿನಲಿ ಚಿನ್ನವಾಗಿ!