ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Sampada Foundation
  • ಅಂಚೆ ಪೆಟ್ಟಿಗೆ
  • Font Help

ತಿಳಿ ಹಾಸ್ಯ ಮರೆತಿಲ್ಲ: "ಮಜಾವಾಣಿ"

ಸಂಪದ › Sampada Blogs › benaka ರವರ ಬ್ಲಾಗ್

ಕನ್ನಡಪುಟ

ಪುಟವಿಡಲು ನುಡಿಯೇನು ನೆಲವೇನು ಹೊಳೆವುದೀ ನಾಡಿನಲಿ ಚಿನ್ನವಾಗಿ!

೩. ನನ್ನ ಪರಿಚಯ

June 6, 2006 - 10:18pm — benaka
ನನ್ನ ಜಪಾನ್ ಪ್ರವಾಸ: ೩.ನನ್ನ ಪರಿಚಯ

ಆಗಲೇ ಇಲ್ಲ; ನನ್ನ ಪರಿಚಯ ಯಾರಿಗೂ ಆಗಲೇ ಇಲ್ಲ! ಕಛೇರಿಯಲ್ಲಿ ಮೊದಲದಿನ ನನ್ನನ್ನು ಜಪಾನೀ ಬುಚೋ [= ವಿಭಾಗಾಧಿಕಾರಿ] ಒಬ್ಬರಿಗೆ ವೆಂಕಟ, ನರೇಂದ್ರರು ಪರಿಚಯಿಸಿದ್ದೆಷ್ಟೋ ಅಷ್ಟೇ. ಆತ ಅಚ್ಚರಿಯಿಂದ ನನ್ನನ್ನು ನೋಡಿ, "ಓಹ್! ಅನತನೊ ಸೆಕಿ ವಾ...."[ಓಹ್! ನಿನ್ನ ಕುರ್ಚಿ......] ಎಂದು ತಲೆಬಗ್ಗಿಸಿ ಗೊಣಗಿದಂತೆ ಮಾತನಾಡು(ಡಿಕೊಳ್ಳು)ತ್ತಾ ಇಲ್ಲದ ಕುರ್ಚಿಗಾಗಿ ಹುಡುಕಾಡಿ, ಹಳೆಯ ಧೂಳು ಹಿಡಿದ ಕುರ್ಚಿಯೊಂದನ್ನು ಎಳೆದು ನರೇಂದ್ರನ ಮೇಜಿಗೆ ಜೋಡಿಸಿದರು. ಅದು ಮಧ್ಯಾಹ್ನದವರೆಗೆ ಮಾತ್ರ; ಮಧ್ಯಾಹ್ನ ನರೇಂದ್ರ ಬೇರೆ ಊರಿಗೆ (ನಗೋಯಾ) ಹೋದ ನಂತರ, ಅವನ ಕುರ್ಚಿಗೆ ವರ್ಗಾವಣೆ. ಇದೇನಿದು, ನಾನು ಇಂದು ಬರುತ್ತೇನೆಂದು ತಿಳಿದಿದ್ದರೂ ಒಂದು ಹೊಸ ಕುರ್ಚಿ, ಮೇಜು ಸಿದ್ಧವಿಲ್ಲವಲ್ಲಾ ಎಂದುಕೊಂಡೆ. ಆದರೆ ನಾನೂ ಇಷ್ಟರಲ್ಲೇ ಬೇರೆ ಕಡೆಗೆ ಹೋಗುವುದೆಂದು ಮೊದಲೇ ನಿರ್ಧಾರವಾಗಿದ್ದರಿಂದ, ಈ ವ್ಯವಸ್ಥೆಯೇನೋ! ಸರಿ, ಇರಲಿ ಎಂದುಕೊಂಡೆ. ಬುಚೋ ನನಗೆ ಈ ವಿಚಾರ ಹೇಳಲು ನನ್ನ ಹತ್ತಿರ ಬಂದರು; ನಾನು ಗೌರವ ಸೂಚಿಸಲು ಎದ್ದೆ; "ಸುವತ್ತೆ ಸುವತ್ತೆ"[ಕೂತ್ಕೊಳಿ ಕೂತ್ಕೊಳಿ] ಎಂದು ಕೈಯಾಡಿಸಿದರು. ನಾನು ಕುಳಿತೊಡನೆ, ಅವರೇ ನೆಲದ ಮೇಲೆ ಮಂಡಿಯೂರಿ ನನ್ನ ಪಕ್ಕ ಕುಳಿತರು! ನಾನು ಅಚ್ಚರಿಯಿಂದ ಮತ್ತೆ ಎದ್ದೆ! ಮತ್ತೆ ಕೂರಲು ಕೈತೋರಿದರು. ಈ ರಾಮಾಂಜನೇಯ ಭಂಗಿಯಲ್ಲಿ ಮೆಲ್ಲನೆ ಇದು ಮಧ್ಯಾಹ್ನದವರೆಗೆ ಮಾತ್ರ ಎಂದು ವಿನಯವಾಗಿ ನಿವೇದಿಸಿಕೊಂಡರು! ನಾನು ತಲೆಯಲ್ಲಾಡಿಸಿದೆ. ಆತ ಎದ್ದು ಹೋದ ಮೇಲೆ ನರೇಂದ್ರನೆಂದ:
"ಇದು ಇಲ್ಲಿನ ಪದ್ಧತಿ; ನಾವು ನಿಂತು ಯಾರೊಡನೆಯಾದರೂ ಮಾತನಾಡಿದರೆ ಅಕ್ಕಪಕ್ಕದಲ್ಲಿ ಕೆಲಸ ಮಾಡುವ ಬೇರೆಯವರಿಗೆ ಯಾರೋ ತಮ್ಮೆದುರು ನಿಂತತೆ ತೋರಿ, ತೊಂದರೆಯಾಗುತ್ತದೆ. ಆದ್ದರಿಂದ ಮಾತನಾಡುವವರು ಮಂಡಿಯೂರಿ ಕುಳಿತು, ದೇಹ ಕುಗ್ಗಿಸಿ ಮಾತನಾಡುತ್ತಾರೆ."
"ಅದು ಸರಿ, ಆದರೆ ಅವರು ನನಗಿಂತ ಹಿರಿಯರು, ಮೇಲಧಿಕಾರಿಯಲ್ಲವೇ?"
"ಯಾರಾದರೇನು? ಇಲ್ಲಿ ನಿಯಮ ನಿಯಮವೇ; ಅದಕ್ಕೆ ಎಲ್ಲರೂ ಬೆಲೆ ಕೊಡುತ್ತಾರೆ."
ನನಗೆ ಒಂದು ನಿಮಿಷ ರೋಮಾಂಚನವಾಯಿತು! ನನ್ನ ಮೇಲಧಿಕಾರಿ ನನ್ನ ಕಾಲಬಳಿ ಕುಳಿತು ಪಿಸುದನಿಯಲ್ಲಿ ಮಾತನಾಡುವುದೇ? ಭಾರತದಲ್ಲಿ ಇದು ಸಾಧ್ಯವೇ? ಖಂಡಿತಾ ಇಲ್ಲವೆಂದುಕೊಂಡೆ. ಜಪಾನಿನಲ್ಲಿ ಇನ್ನೇನೇನು ನಿಯಮಗಳಿವೆಯೋ ಎಂದು ಹೆದರಿಕೆ ಶುರುವಾಗಿತ್ತು! ಮೊದಲೇ ಇದು ಜಪಾನೀ ಕಛೇರಿ!

ನರೇಂದ್ರ ಹೊರಡುವ ಮುನ್ನ ನನ್ನ ಪ್ರಾಜೆಕ್ಟಿನಲ್ಲಿದ್ದ ಹಿರಿಯರೊಬ್ಬರನ್ನು ಪರಿಚಯಿಸಿದ. ನಾನು ಅವರೊಂದಿಗೇ ಕೆಲಸಮಾಡಬೇಕಿತ್ತು. ನಾನು "ಬೆನಕ ತೊ ಮೋಶಿಮಾಸ್; ಯೊರೊಶಿಕು ಒನೆಗಾಯ್ ಶಿಮಾಸ್"[ನಾನು ಬೆನಕ; ತಮ್ಮ ಒಳ್ಳೆಯತನವನ್ನು ಪ್ರಾರ್ಥಿಸುತ್ತೇನೆ] ಎಂದು ಜಪಾನೀ ಶೈಲಿಯಲ್ಲಿ ಸ್ವ-ಪರಿಚಯ ಮಾಡಿಕೊಂಡೆ. ಆತನೂ ಹಾಗೆಯೇ ಪರಿಚಯಿಸಿಕೊಂಡರು. ಅವರ ಹೆಸರು ಅಸಾಮಿ; ಒಳ್ಳೆ ಆಸಾಮಿಯೆಂದುಕೊಂಡೆ! ಅಷ್ಟೇ, ಅಲ್ಲಿಗೆ ನಾನು ಯಾರೆಂದು ಅಲ್ಲಿದ್ದ ಇಬ್ಬರಿಗೇ ತಿಳಿದದ್ದು. ಆ ವಿಭಾಗದಲ್ಲಿದ್ದ ಮಿಕ್ಕ ಸುಮಾರು ೩೦ ಜನ ಅವರ ಪಾಡಿಗೆ ಅವರ ಕೆಲಸದಲ್ಲಿ ಮಗ್ನರಾಗಿದ್ದರು; ನಾನಾರೆಂದು ತಿರುಗಿಯೂ ನೋಡಲಿಲ್ಲ! ಪಾಠ-೧ ಮತ್ತೆ ನೆನಪಿಗೆ ಬಂತು. ಅದೇ ದಿನ ಅದೇ ಕಛೇರಿಗೆ ಮೂವರು ಹೊಸ ಜಪಾನೀಯರು ಕೆಲಸಕ್ಕೆ ಸೇರುವುದಕ್ಕೆ ಬಂದು ಶಚೋ[= ಮುಖ್ಯ ನಿರ್ವಹಣಾಧಿಕಾರಿ, Managing Director] ಜೊತೆಗೆ ಮಾತನಾಡುತ್ತಿದ್ದರು. ನಂತರ ಅವರನ್ನು ಮಧ್ಯಕಛೇರಿಗೆ ಕರೆದುಕೊಂಡುಬಂದ ಶಚೋ, ಆ ಮೂವರನ್ನು ಎಲ್ಲರಿಗೆ ಪರಿಚಯಿಸಿದರು. ಎಲ್ಲರೂ ಆಗ ಯಥಾ ಪ್ರಕಾರ ಸ್ವ-ಪರಿಚಯ ಮಾಡಿಕೊಂಡರು; ನಾನೂ ಮಾಡಿಕೊಂಡೆ! ಆಗಲೂ ನಾನಾರೆಂದು ಯಾರೂ ಕೇಳಲಿಲ್ಲ; ಶಚೋ ಕೂಡ ಪರಿಚಯಿಸಲಿಲ್ಲ! ಸ್ವಲ್ಪ ಬೇಜಾರಾಯಿತು; ಕಚೇರಿಯ ಪಂಕ್ತಿಭೇದ ನನಗೆ ಮೊದಲದಿನವೇ ಅರ್ಥವಾಗಿಬಿಟ್ಟಿತು! ಅದರಿಂದ ಸಿಡಿಮಿಡಿಗೊಂಡಂತಿದ್ದ ಹಿರಿಯ ಭಾರತೀಯನೊಬ್ಬ ನನ್ನ ಪಕ್ಕದಲ್ಲಿದ್ದವನಿಗೆ "ನೀನು ಸ್ವಲ್ಪ ಜೋರಾಗಿ ಪರಿಚಯಿಸಿಕೊಂಡರೆ ಚೆನ್ನಿತ್ತು" ಎಂದದ್ದು ಕೇಳಿಸಿತು! ನನಗೆ ಅಂಥ ಬಲವಂತದ ಮಾಘಸ್ನಾನ ಬೇಡವಾಗಿತ್ತು. ಇಲ್ಲೇನೋ ಪರಿಸ್ಥಿತಿ ವಿಚಿತ್ರವಾಗಿದೆ ಎಂದುಕೊಂಡೆ.

ಯಾರೂ ಮಾತನಾಡುತ್ತಿರಲಿಲ್ಲ; ಅವರಪಾಡಿಗೆ ಪಸೊಕೊನ್[ಪರ್ಸನಲ್ ಕಂಪ್ಯೂಟರ್ ನ ಅಪಭ್ರಂಶ]ನಲ್ಲಿ ತಲೆತೂರಿಸಿ ಮಗ್ನವಾಗಿದ್ದರು. ನಾನೂ ಗಟ್ಟಿಮನಸ್ಸಿನಿಂದ ನರೇಂದ್ರನ ಪಸೊಕೊನ್ ಒಳಗೆ ತಲೆತೂರಿಸಿ ಓದತೊಡಗಿದೆ. ಮಧ್ಯಾಹ್ನ ೧೨ ಗಂಟೆಗೆ ಎಲ್ಲಿಂದಲೋ ವಿಚಿತ್ರವಾದ ಸಂಗೀತ ಕೇಳಿಬಂತು. ವೆಂಕಟ ಮೆಲ್ಲನೆ "ಊಟ ಮಾಡಬಹುದು, ೪೫ ನಿಮಿಷ ಸಮಯವಿದೆ" ಎಂದು ಪಿಸುಗುಡುತ್ತಾ ಜಾಗ ತೋರಿಸಿದ. ನಾನು ಬೆಳಿಗ್ಗೆಯೇ ತಯಾರಿಸಿ ತಂದ ಬುತ್ತಿಯ ಡಬ್ಬಿ ತೆರೆದು ತಿಂದೆ. ಆಗಲೂ ಓಡಾಡುತ್ತಿದ್ದ ಕೆಲ ಜಪಾನೀಯರು ನನ್ನನ್ನು ನೋಡಿಯೂ, ಮಾತನಾಡಿಸದೆ ಓಡಾಡುತ್ತಿದ್ದರು. ವೆಂಕಟನೂ ಬಂದು ಕುಳಿತ; ಇನ್ನೂ ಕೆಲ ಭಾರತೀಯ ಗೆಳೆಯರು ಬಂದರು. ಎಲ್ಲ ಕರ್ನಾಟಕದವರೇ ಆದ್ದರಿಂದ ನಾನು ಕನ್ನಡದಲ್ಲಿ ಮಾತನಾಡಿಸಿದೆ. ನನಗಿಂತ ಮೊದಲೇ ಅಲ್ಲಿ ತಳವೂರಿ ಮದಿಸಿದ್ದ ಹಿರಿಯನೊಬ್ಬ ಏನೋ ಒಂದು ರೀತಿಯ ಕುಹಕವಾಡುತ್ತಾ "ಇಲ್ಲಿ ಕನ್ನಡ ಮಾತನಾಡಬಾರದು" ಎಂದ. ಎಲ್ಲ ಸುಮ್ಮನಾದರು! ನನಗೆ ಅಚ್ಚರಿಯಾಯಿತು! ಕನ್ನಡವಿರಲಿ, ಎಲ್ಲಾ ಮಾತನಾಡುವುದನ್ನೇ ಬಿಟ್ಟರು! ಮತ್ತೆ ೧೨:೪೫ ಕ್ಕೆ ವಿಚಿತ್ರ ಸಂಗೀತ ಕೇಳಿಬಂತು. ನಾನಾಗಲೇ ಕೆಲಸದ ಜಾಗದಲ್ಲಿದ್ದೆ. ಅಸಾಮಿ ಪ್ರಾಜೆಕ್ಟಿನ ಬಗ್ಗೆ ಚರ್ಚಿಸಲು ಕರೆದರು; ಚರ್ಚೆಯ ಮೇಜಿಗೆ ಹೋದೆ.

ಅಸಾಮಿ ಎಂಬ ಆಸಾಮಿ ಬಾಯ್ತೆರೆದರೆ ಸಾಕು ಜಪಾನೀಪದಗಳ ಮಳೆ ಸುರಿಯುತ್ತದೆ! ನಾನು ತತ್ತರಿಸಿದೆ! ಆ ಭಾಷೆ ನಾನು ಇದುವರೆಗೆ ಕಂಡು ಕೇಳರಿಯದ ಜಪಾನೀಭಾಷೆ - ಸಂಪೂರ್ಣ 'ಓಸಾಕಾಬೆನ್'[ಓಸಾಕಾದ ಜಪಾನೀಭಾಷೆ]! ನಾನು ಕಲಿತದ್ದು ಸರ್ವೇಸಾಮಾನ್ಯ ತೋಕಿಯೋದ ಶುದ್ಧ ಜಪಾನೀ ಭಾಷೆ, ಆತ ಮಾತನಾಡಿದ್ದು ಏನೆಂದೇ ತಿಳಿಯದಂತಾಗಿ ಮಿಕಿಮಿಕಿ ನೋಡಿದೆ! ನಮ್ಮ ಕರ್ನಾಟಕದ ಮೈಸೂರಿನ ಕನ್ನಡ, ಹುಬ್ಬಳ್ಳಿಯ ಮರಾಠ ಕನ್ನಡದಷ್ಟೇ ವ್ಯತ್ಯಾಸ! ವಿದೇಶಿಯನೊಬ್ಬ ಪ್ರಾಥಮಿಕ ಕನ್ನಡ ಪುಸ್ತಕದಿಂದ ಕನ್ನಡ ಕಲಿತು ಕರಾವಳಿಗೋ, ಗುಲಬರ್ಗಾಕ್ಕೋ ಹೋದ ತಕ್ಷಣ ಹೇಗಾಗಬಹುದು? ನನಗಾಗಿದ್ದೂ ಅದೇ! ನನ್ನ ಪ್ರಾರಬ್ಧಕರ್ಮಕ್ಕೆ, ಅಸಾಮಿಯೆಂಬ ಆ ಶುದ್ಧ ಓಸಾಕಾದವನಿಗೆ ಉಗ್ಗು! ಸಾಲದ್ದಕ್ಕೆ ಕ್ಲಿಷ್ಟ ಪದಗಳ ಪ್ರಯೋಗ! ನನಗೆ ಚರ್ಚೆಯಲ್ಲಿ ಏನಾಗುತ್ತಿದೆಯೆಂದೇ ತಿಳಿಯಲಿಲ್ಲ. ಚರ್ಚೆಯ ಕೊನೆಯಲ್ಲಿ ಪಕ್ಕದಲ್ಲಿದ್ದ ತಮಿಳಿಗನೊಬ್ಬನನ್ನು ಇಂಗ್ಲಿಷಿನಲ್ಲಿ ಕೇಳಿ ತಿಳಿದುಕೊಂಡೆ!

ಅಸಾಮಿಗೆ ಏನೆನ್ನಿಸಿತೋ ಗೊತ್ತಿಲ್ಲ; ನನಗೆ ಅರ್ಥವಾಗದಿದ್ದರೂ ತಲೆಯಾಡಿಸಿದೆ ಎಂದು ಬುಚೋಗೆ ಚಾಡಿ ಹೇಳುತ್ತಿದ್ದುದು ನನಗೆ ಅರ್ಧಮರ್ಧ ಅರ್ಥವಾಯಿತು! ನನಗಾಗ ಬಂದದ್ದು ಅಳುವಲ್ಲ; ಕೋಪ! ಆದರೆ ಬುಚೋಗೆ ನನ್ನ ಕಷ್ಟ ಅರ್ಥವಾಯಿತೋ ಏನೋ, ಅಸಾಮಿಯನ್ನೇ ಗದರಿದ! ನಾನಿನ್ನೂ ಭಾಷೆಗೆ ಹೊಂದಿಕೊಂಡಿಲ್ಲ ಎಂದೆಲ್ಲ ಏನೋ ಹೇಳಿದ್ದೂ ಕೇಳಿಸಿತು. ಅಸಾಮಿ ಗೊಣಗಿ ತಣ್ಣಗಾದ! ಅಷ್ಟರಲ್ಲಿ ನನ್ನ ಸಹಾಯಕ್ಕೆ ಬಂದವನು ಹಿರಿಯವ ಕುಮಾರ್! ಸ್ವಲ್ಪ ಕೋಪದ ದನಿಯಲ್ಲೇ ಇಂಗ್ಲಿಷಿನಲ್ಲಿ ನನ್ನನ್ನು ಕರೆದ. "If you don't understand, say that frankly without any hesitation; Let them struggle to make you understand. Don't leave them until you understand; let them write it down on paper if they can not explain by speech" ಎಂದ! ಪಾಠ-೨: "ಗೊತ್ತಿಲ್ಲದಿದ್ದರೆ ಗೊತ್ತಿಲ್ಲವೆಂದು ಹೇಳಿಬಿಡು; ಅರ್ಥವಾದಂತೆ ನಟಿಸಬೇಡ; ಅರ್ಥವಾಗುವವರೆಗೆ ಬಿಡಬೇಡ!" ನನಗೆ ಆ ಮಾತುಗಳು ಮಂತ್ರದಂತೆ ಕಂಡವು. ಆ ಮಾತುಗಳಿಗೆ ಅವನಿಗೆ ಧನ್ಯವಾದ ಹೇಳಿದೆ; ಅವನ ಕೋಪ ನನ್ನ ಮೇಲಿರಲಿಲ್ಲ! ಮೊದಲ ದಿನವೇ ನನಗೆ ಎಲ್ಲ ಅರ್ಥವಾದಂತೆ ಭಾಸವಾಗಿ, ಭಂಡಧೈರ್ಯ ಬಂದುಬಿಟ್ಟಿತ್ತು!

ಪ್ರಾಜೆಕ್ಟಿನ ಬಗ್ಗೆ ಚರ್ಚಿಸುವಾಗೆಲ್ಲ ಚರ್ಚೆಯುದ್ದಕ್ಕೂ ಅಸಾಮಿಗೆ ನಾನು ಹೇಳಲು ಶುರುಮಾಡಿದ್ದು ಒಂದೇ ಮಾತು - "ವಕಾರಿಮಾಸೆನ್"[= ಅರ್ಥವಾಗುತ್ತಿಲ್ಲ]. ಈಗ ಸುಸ್ತಾದವ ಅಸಾಮಿ! ತಣ್ಣಗಾಗಿ ತೋಕ್ಯೋ ಭಾಷೆಗೆ ಬಂದು ಸರಳಪದಗಳನ್ನು ಬಳಸತೊಡಗಿದ; ನಾನೂ ತಲೆಯಾಡಿಸತೊಡಗಿದೆ. ಅದಾದ ನಂತರ ಯಾವನೂ ಯಾವ ಚಾಡಿ ಹೇಳಲೂ ಬಾಯ್ತೆರೆಯಲಿಲ್ಲ. ರಾತ್ರಿ ಮನೆಗೆ ಹೋಗುವಷ್ಟರಲ್ಲಿ ಅಸಾಮಿ ನನಗೆ ಆಪ್ತಮಿತ್ರನಾಗಿದ್ದ; ಅಥವಾ ನಾನು ಹಾಗೆಂದುಕೊಂಡಿದ್ದೆ. ದಿನ-೧ ಹೀಗೆ ಮುಗಿಯಿತು. ನನಗಲ್ಲಿ ಬದುಕುವ ಮಾರ್ಗವೊಂದು ಕಂಡಿತ್ತು! ನಾನು ಅಸಾಮಿಯೊಡನೆ ಹೊಂದಿಕೊಳ್ಳದೇ ವಿಧಿಯಿರಲಿಲ್ಲ; ಏಕೆಂದರೆ ಇನ್ನೆರಡು ದಿನಗಳಲ್ಲಿ ನಾವಿಬ್ಬರೇ ಕ್ಯೂಶೂದ್ವೀಪದ ಪ್ರಾಜೆಕ್ಟಿನ ಸ್ಥಳಕ್ಕೆ ಹೋಗಬೇಕಿತ್ತು. ಕೊನೆಗೂ ಕಚೇರಿಯಲ್ಲಿ ನನ್ನ ಪರಿಚಯ ಬೇರೆಯವರಿಗೆ ಆಗಲೇ ಇಲ್ಲ! ವೆಂಕಟನಿಂದ ಕೀಲಿಕೈ ಪಡೆದು ನಾನು ರಾತ್ರಿ ೭:೩೦ಕ್ಕೆ ಮನೆಗೆ ಹೊರಟೆ. ವೆಂಕಟನೆಂದ
"ಇಲ್ಲಿ ಕೆಲಸ ೯ ರಿಂದ ೬ ಗಂಟೆವರೆಗಾದರೂ ಯಾರೂ ಮನೆಗೆ ಹೋಗುವುದಿಲ್ಲ; ರಾತ್ರಿ ೯-೧೦ಕ್ಕೆ ಹೋಗುತ್ತಾರೆ. ನಾನು ಇನ್ನೂ ಇರುತ್ತೇನೆ; ನೀನು ಹೊರಡು."
ನನಗೆ ಮನೆಯ ದಾರಿ ಇನ್ನೂ ಹೊಸದಾದ್ದರಿಂದ ವೆಂಕಟನಿಗೆ ಕಾಯೋಣವೇ ಎಂದುಕೊಂಡೆ; ಅಷ್ಟರಲ್ಲಿ ಗೋವರ್ಧನ ಜೊತೆಯಾದ. ಜಪಾನೀ ಪದ್ಧತಿಯಂತಿ "ಒಸಾಕಿನಿ ಶಿತ್ಸುರೈ ಶಿಮಾಸು"[ತಮಗಿಂತ ಮೊದಲೇ ನಿರ್ಗಮಿಸುತ್ತೇನೆ] ಎಂದು ಎಲ್ಲರಿಗೆದುರಾಗಿ ಹೇಳಿ ಹೊರಬಿದ್ದೆ. ಕಾರಾಗೃಹದಿಂದ ಈಚೆ ಬಂದಂತಾಗಿತ್ತು. ಗೋವರ್ಧನ "ಗುರುವೇ, ಏನ್ಸಮಾಚಾರ....." ಎಂದು ಕನ್ನಡದಲ್ಲಿ ಶುರುಮಾಡಿದ. ನಾನೂ ಹರಟುತ್ತಾ ಹೊರಟೆ.

(ಸಶೇಷ)

~.~
  • benaka ರವರ ಬ್ಲಾಗ್
  • Login or register to post comments
  • 934 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Google
  • Yahoo
  • ನಿರ್ವಾಹಕರ ಗಮನಕ್ಕೆ ತನ್ನಿ

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
June 6, 2006 - 10:25pm — benaka

ನನ್ನ ಜಪಾನ್ ಪ್ರವಾಸ: ೩. ನನ್ನ ಪರಿಚಯ

benaka's picture

ನನ್ನ ಜಪಾನ್ ಪ್ರವಾಸ: ೩. ನನ್ನ ಪರಿಚಯ

ಅಧ್ಯಾಯ -೩ ನಿಮ್ಮ ಮುಂದಿದೆ.
ಇಷ್ಟರಲ್ಲೇ ಅಧ್ಯಾಯ - ೪ : ಶರವೇಗದ ಬಂಡಿಯನ್ನೇರಿ ಬಲೆಯೇರಲಿದೆ.
ನಿಮ್ಮವ

 

ಬೆನಕ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ೨.೩. ಜಪಾನಿನಲ್ಲಿ ಮೊದಲದಿನ - ಸ್ನಾನ
  • ೯. 'ಕ್ಯೂಶೂ'ನಲ್ಲಿ ಕನ್ನಡ!
  • ೫. ಕ್ಯೂಶೂದ್ವೀಪ
  • ೪.ಶರವೇಗದ ಹಳಿಬಂಡಿಯನ್ನೇರಿ......
  • ೬. ಹೀಗೊಬ್ಬ ಬಾಬಾ ಭಕ್ತ!
Syndicate content

ಲೇಖಕರು

benaka's picture

ಪರಿಚಯ

ಹೊಯ್ಸಳರ ವೈಭವದಿ ಮೆರೆದು
ಪರಕೀಯರ ದಾಳಿಗೆ ಕೈಮುರಿದು
ದಂತವ ಎಡದ ಕೈಯಲಿ ಹಿಡಿದು
ನವಭಾರತವ ಕನ್ನಡದಿ ಬರೆಯೆ ಕಾದಿಹ ಬೆನಕ ಮೈಮುರಿದು

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ವಾಟರ್ ಪೋರ್ಟಲ್: ದಿನದ ಚಿತ್ರ

ನರಸಿಂಹ ತೀರ್ಥ, ಮುಳಬಾಗಿಲು

(ಫೋಟೋ: ಹರಿ ಪ್ರಸಾದ್ ನಾಡಿಗ್)

ವಾರದ ಲೇಖನ
ಬೃಹತ್ ನೀರಾವರಿ ಯೋಜನೆಗಳು: ಮಹಾ ಅಸಂಗತಕ್ಕೊಂದು ಮುನ್ನುಡಿ - ಎನ್ ಎ ಎಂ ಇಸ್ಮಾಯಿಲ್

ವಾರದ ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ಮತ್ತಷ್ಟು...

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಬ್ಲಾಗ್ ಬರಹಗಳು

  • ಹಿಂದೂ ಸಂಸ್ಕ್ೃತಿಯಲ್ಲಿ ಮಣ್ಣಿಗಿರುವ ಮಹತ್ವ
  • ಏನಿದೇನಿದು
  • ಎಲ್ಲೇ ಹೋಗು ಹಿಂಬಾಲಿಸುವೆ...................,
  • ಲಿನಕ್ಸಾಯಣ - ೧೯ - EvDO ಲಿನಕ್ಸ್ ನಲ್ಲಿ?
  • ನಾನು ನಿಜವಾಗಿಯು ಹುಚ್ಚಾನ?
  • ಲಿನಕ್ಸಾಯಣ - ೧೮ - ನೆಟ್ವರ್ಕಿಂಗ್ ಭಾಗ -೨ - BSNL BroadBand ಹ್ಯಾಗೆ ಉಪಯೋಗಿಸೋದು?
  • ಹಿಂದಿ ದಿವಸ : ಒಕ್ಕೂಟ ವ್ಯವಸ್ಥೆಗೊಂದು ಕಳಂಕ
  • ಓದಿದ್ದು ಕೇಳಿದ್ದು ನೋಡಿದ್ದು-12
  • ನೀನು ನಾನು ಜೋಡಿ
  • ಬಹಿರಂಗ ವಸೂಲಿಗೆ ಸಚಿವೆ ಶೋಭಾ ಮಾದರಿ
ಇನ್ನಷ್ಟು

ಇತ್ತೀಚಿನ ಪ್ರತಿಕ್ರಿಯೆಗಳು

  • anamadheya
    ಉ: ವಾರಾಂತ್ಯ ಹೇಗಿತ್ತು?
    September 8, 2008 - 10:41pm
  • sudhimail
    ಉ: ಏನಿದೇನಿದು?
    September 8, 2008 - 10:12pm
  • hamsanandi
    ಉ: ದಯವಿಟ್ಟೂ ಸ್ವಲ್ಪ ಅರ್ಥ ಹೇಳ್ತೀರಾ ????
    September 8, 2008 - 9:41pm
  • kalpana
    ಉ: ಹಿರಿಯರಿಗೂ ಈಗ ಇಂಗ್ಲಿಷ್ ಚಾಳಿ!
    September 8, 2008 - 9:37pm
  • hpn
    ಉ: ...ನಮ್ಮ ತಿಪ್ಪಾರಳ್ಳಿ ಬಲು ದೂರ, ನಡಿಯಕೆ ಬಲು ದೂರ!
    September 8, 2008 - 9:35pm
  • smurthygr
    ಉ: ದಯವಿಟ್ಟೂ ಸ್ವಲ್ಪ ಅರ್ಥ ಹೇಳ್ತೀರಾ ????
    September 8, 2008 - 9:32pm
  • hamsanandi
    ಉ: ...ನಮ್ಮ ತಿಪ್ಪಾರಳ್ಳಿ ಬಲು ದೂರ, ನಡಿಯಕೆ ಬಲು ದೂರ!
    September 8, 2008 - 9:23pm
  • ಶ್ರೀನಿಧಿ
    ಉ: ಬಾಳ್, ಬಾೞ್
    September 8, 2008 - 8:47pm
  • ASHOKKUMAR
    ಉ: ಏನಿದೇನಿದು
    September 8, 2008 - 8:18pm
  • ASHOKKUMAR
    ಉ: ದಯವಿಟ್ಟೂ ಸ್ವಲ್ಪ ಅರ್ಥ ಹೇಳ್ತೀರಾ ????
    September 8, 2008 - 8:12pm
ಇನ್ನಷ್ಟು
ಈಗಿನಂತೆ 8 ಸದಸ್ಯರು ಮತ್ತು 129 ಅತಿಥಿಗಳು ಆನ್ಲೈನ್ ಇರುವರು.


ಮೇಘವೃಷ್ಟಿಯಂತೆ (ಮಳೆಯಂತೆ) ಉಪದೇಶ ಕೊಡು. ಗುರು ಯಾರನ್ನೂ ಶಿಷ್ಯನನ್ನಾಗಿ ಮಾಡಿಕೊಳ್ಳುವುದು ಬೇಡ. ಶಿಷ್ಯನಾದರೆ ಅವನ ಕರ್ಮದ ಅರ್ಧಾಂಶವನ್ನು ಗುರು ಅನುಭವಿಸಬೇಕು.

— ತುಕಾರಾಮ

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator