ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Support Sampada
  • ಅಂಚೆ ಪೆಟ್ಟಿಗೆ
  • Font Help

ಹೊಸತು: ಹರಿದಾಸ ಸಂಪದ ಸಂಪುಟ

ಸಂಪದ › Sampada Blogs › benaka ರವರ ಬ್ಲಾಗ್

ಕನ್ನಡಪುಟ

ಪುಟವಿಡಲು ನುಡಿಯೇನು ನೆಲವೇನು ಹೊಳೆವುದೀ ನಾಡಿನಲಿ ಚಿನ್ನವಾಗಿ!

೮. ಹಳೆಯ ರಾಜ್ಯ ಇನ್ನಿಲ್ಲ!

October 10, 2006 - 12:04pm — benaka
ನನ್ನ ಜಪಾನ್ ಪ್ರವಾಸ: ೮. ಹಳೆಯ ರಾಜ್ಯ ಇನ್ನಿಲ್ಲ!

ಸರಿ, ಯಥಾಪ್ರಕಾರ ಕ್ಯೂಶೂದ್ವೀಪದ ಕೆಲಸ ಮುಂದುವರೆಯಿತು. ಕೆಲಸಕ್ಕೆ ಸ್ವಲ್ಪ ಹೊಂದಿಕೊಂಡದ್ದರಿಂದ ಈಗ ಕೆಲಸದ ಜೊತೆಗೆ ಜಪಾನಿನ ಸಮಾಜ - ಜೀವನವನ್ನು ನೋಡಲು ಶುರುಮಾಡಿದೆ. "....ಜಪಾನ್ ದೇಶ ಕಷ್ಟಜೀವಿಗಳ ಶ್ರಮಜೀವಿಗಳ ತಾಣ; ಆದ್ದರಿಂದಲೇ ಅದು ಇಂದು ಮುಂದುವರೆದ ದೇಶವಾಗಿದೆ...." ಐದನೇ ತರಗತಿಯ ಸಮಾಜಪರಿಚಯದ ಭೂಗೋಳದ ಪಾಠದ ವಾಕ್ಯ ನೆನಪಾಯಿತು. ನೂರಕ್ಕೆ ನೂರು ಸತ್ಯ; ಆದರೆ ಈಗಲ್ಲ! ಮೂವತ್ತು ನಲವತ್ತು ವರ್ಷಗಳ ಹಿಂದೆ ನಿಜವಾಗಿದ್ದ ಸಂಗತಿಯಿದು! ಈಗ ಆ ವಾಕ್ಯವನ್ನು "ಜಪಾನ್ ದೇಶ, ಸೋಮಾರಿ ಯುವಜನರ ತಂಗುದಾಣ" ಎಂದು ಬದಲಿಸುತ್ತಿದ್ದೆ. ಈಗ ಬೆಳಿಗ್ಗೆ ಎಬ್ಬಿಸುವುದರಿಂದ ಹಿಡಿದು, ಮಲಗಿಸುವವರೆಗೆ ಎಲ್ಲಾ ಕೆಲಸ ಮಾಡಲು ಯಂತ್ರಗಳೇ ಬಂದಿವೆಯಾದ್ದರಿಂದ ಮನುಷ್ಯನಿಗೆ ಕೇವಲ ಉಸಿರಾಡುವುದಷ್ಟೇ ಕೆಲಸ. ದೇವರಾಣೆ ಸತ್ಯ ಸ್ವಾಮೀ; ಇವರಷ್ಟು ಸುಖದಿಂದ ಬೆಳೆದಿರುವ ಇಂದಿನ ಯುವಕರನ್ನು ನಾ ಕಾಣೆ! ಶ್ರಮಜೀವಿಗಳಾಗಿದ್ದವರು ಈಗ ವಯಸ್ಸಾಗಿ ನಿವೃತ್ತಿಯ ಅಕ್ಕ-ಪಕ್ಕದಲ್ಲಿರುವವರು; ಸುಖಾರ್ಥಿ ಧೋರಣೆಯ ಈಗಿನ ಯುವಜನರಲ್ಲ. ಈಗಿನ ಶ್ರಮ(?)ಜೀವಿಗಳು ಕೆಲಸವನ್ನು ಹಿಂದಿನವರಂತೆ ದೇಶಕ್ಕಾಗಿ, ಅಭಿವೃದ್ಧಿಗಾಗಿ ಮಾಡುವವರಲ್ಲ; ಕೇವಲ ದುಡ್ಡಿಗಾಗಿ ಮಾಡುವವರು. ಇಲ್ಲಿನ ಸರರೀಮನ್[=ಸ್ಯಾಲರೀಮನ್ ಅಂದರೆ ಸಂಬಳದ ಶ್ರೀಸಾಮಾನ್ಯ] ಪ್ರತಿದಿನ ಮನೆಗೆ ಮರಳುವುದು ಕೆಲಸದ ವೇಳೆ ಮುಗಿದು ಮೂರುಗಂಟೆಗಳಾದಮೇಲೆಯೇ. ಈ ಝಾಂಗ್ಯೋ[=ಅಧಿಕಾವಧಿ ಕಾರ್ಯ = ಓವರ್‌ಟೈಮ್] ಕೆಲವರಿಗೆ ಅನಿವಾರ್ಯ ಹಾಗೂ ಅವಿಭಾಜ್ಯ ಅಂಗ! ನಿಜವಾಗಿಯೂ ಅಷ್ಟು ಕೆಲಸವಿರುವವರು ಕಡಿಮೆಯೇ ಆದರೂ, ಮೇಲಧಿಕಾರಿಯನ್ನು ಮೆಚ್ಚಿಸಲು, ಕೆಲಸ ಅಂಥದ್ದೇನೂ ಇಲ್ಲದಿದ್ದರೂ ತಾವೂ ಸುಮ್ಮನೆ ಕುಳಿತಿರುವವರೇ ಹೆಚ್ಚು! ಇನ್ನು ಕೆಲವರಿಗೆ ಕೆಲಸ ಶುರುವಾಗುವುದೇ ಕಛೇರಿಯ ನಿತ್ಯಾವಧಿ ಮುಗಿದ ಬಳಿಕ; ಝಾಂಗ್ಯೋ ದುಡ್ಡು ಬಂದರೆ ಬಿಡುವ ಮೂರ್ಖರುಂಟೇ? ಅಂಥದ್ದೇನೂ ಗಿಟ್ಟದೆಂದು ತಿಳಿದರೆ, ಅಥವಾ ಕೆಲಸದಲ್ಲಿ ಅಷ್ಟೇನೂ ಮನಸ್ಸಿಲ್ಲದವರಾದರೆ, ಸಂಜೆ ೫ : ೪೫ ಕ್ಕೆ ಗಂಟೆ ಢಣ್ಣೆನ್ನುತ್ತಿದ್ದಂತೆ ಎದ್ದೆನೋ ಬಿದ್ದೆನೋ ಎಂದು ಎಲ್ಲಾ ಪರಾರಿ! ಅವರ ಗಣಕ ಕೆಲವೊಮ್ಮೆ ಆರುವುದು ಎರಡು ನಿಮಿಷ ತಡವಾದರೆ ಅವರು ಪಡುವ ಸಂಕಟ ನೋಡಬೇಕು ನೀವು!

ಇಂಥವರ ಕೈಲಿ ಹೇಗಾದರೂ ಕೆಲಸ ಮಾಡಿಸಲೇಬೇಕೆಂದು ಹಠಹಿಡಿದು ತಲೆಯಲ್ಲಿನ ಕೂದಲುಗಳನ್ನೆಲ್ಲಾ ಕಳೆದುಕೊಳ್ಳುತ್ತಿರುವ ಹಿರಿಯ ಅಧಿಕಾರಿಗಳು, ಬೇಕೆಂದೇ ಸಂಜೆ ೫: ೪೦ ಕ್ಕೆ ಅವರಿಗೆ ಹೊಸಕೆಲಸ ವಹಿಸಿ ಬೆಳಿಗ್ಗೆಯೊಳಗೆ ಮುಗಿಸೆನ್ನುವುದೂ ಇದೆ! ಇಂಥ ಸಂದಿಗ್ಧಗಳಲ್ಲೇ ಸಿಲುಕಿ ಜೀವನವನ್ನೆಲ್ಲಾ ಅವರು ಕಳೆದಿದ್ದಾರೆ; ಆದರೆ ಯುವಜನ ಅದಕ್ಕೆಲ್ಲ ಸೊಪ್ಪುಹಾಕುವ ಮಂದಿಯಲ್ಲ; "ನನ್ನಿಂದಾಗದು!" ಎಂದು ಸೀದಾ ಕಳಚಿಕೊಂಡವರೂ ಇದ್ದಾರೆ! ಆಜೀವ ಉದ್ಯೋಗ ವ್ಯವಸ್ಥೆಯೇ ಹೆಚ್ಚಿರುವ ಜಪಾನಿನಲ್ಲಿ ಕೆಲಸ ಕಳೆದುಕೊಳ್ಳುವ ಭಯ ಅವರಿಗೂ ಇಲ್ಲ; ತೆಗೆಯುವ ದುಸ್ಸಾಹಸದ ಧೈರ್ಯ ಅಧಿಕಾರಿಗಳಿಗೂ ಇಲ್ಲ. ಅಪ್ಪಿ ತಪ್ಪಿ ಹೊರಬಿದ್ದರೆ, ಇದ್ದೇ ಇದೆ ಎಂಥದೋ ಒಂದು ಅಲ್ಪಕಾಲದ ಕೆಲಸ; ದುಡ್ಡಿಗಂತೂ ಯಾವ ತೊಂದರೆಯೂ ಇಲ್ಲ! ನಷ್ಟ ಯುವಜನರನ್ನು ಕಳೆದುಕೊಳ್ಳುವ ಕಛೇರಿಯದೇ! ಯುವಕರಿಗಲ್ಲ! ಝಾಂಗ್ಯೋ ಮಾಡುವ ಸರರೀಮನ್ ಗಳು ರಾತ್ರಿ ಮನೆಗೆ ಹೋಗುವಷ್ಟರಲ್ಲಿ ೧೨ ಆಗಿರುವುದೂ ಉಂಟು. ಮಾರ್ಗಮಧ್ಯೇ, ದಿನದ ಎಲ್ಲ ಒತ್ತಡಗಳನ್ನು ಕಳೆದುಕೊಳ್ಳಲು ಜೂಜಿಗೋ, ಪಾನೀಯಕ್ಕೋ, ಅಂಗಮರ್ದನಕ್ಕೋ ಮುಗಿಬಿದ್ದು ತೂರಾಡುತ್ತಾ ಮನೆ ಸೇರಿದಾಗ ಮಕ್ಕಳೆಲ್ಲ ಮಲಗಿರುವುದೂ ಉಂಟು! ಬೆಳಿಗ್ಗೆ ಅವು ಏಳುವ ಮೊದಲೇ ಮನೆ ಬಿಡುವ ಅಪ್ಪನ ಮುಖ ಕಾಣುವುದು ವಾರಕ್ಕೊಮ್ಮೆಯೇನೋ! ಅಂಥವರನ್ನು "ಅಪ್ಪನ ಬೆನ್ನು ನೋಡಿ ಬೆಳೆದವರು" ಎನ್ನುವ ಜಪಾನೀ ನಾಣ್ಣುಡಿಯಿಂದ ಗುರುತಿಸುವುದು ಇಲ್ಲಿ ಜನಜನಿತ!

ಎಲ್ಲರೂ ಮಾಡುವುದು ಓ. ಟಿ. ಗಾಗಿ; ನೋಟಿಗಾಗಿ! ಖಂಡಿತ ಹೊಟ್ಟೆ-ಬಟ್ಟೆಗಾಗಿ ಅಲ್ಲ! ಏಕೆಂದರೆ ಇವರು ಹೆಚ್ಚಿಗೆ ಇವೆರಡಕ್ಕೂ ವೆಚ್ಚಮಾಡುವುದೇ ಇಲ್ಲ! ಮಧ್ಯಾಹ್ನದ ಊಟಕ್ಕಾಗಿ ಕಡಿಮೆಬೆಲೆಯ ಅಂಗಡಿಯ ಮುಂದೆ ಸಾಲುಗಟ್ಟಿ ನಿಲ್ಲುವವರನ್ನೋ, ಅಥವಾ ಒಬೆಂತೋ[ಬುತ್ತಿ]ಯನ್ನು ಮಾರುವವನ ಕಡೆಗೆ ನುಗ್ಗಿ ಹೋಗುವವರನ್ನೋ ನೋಡುವುದು ಇಲ್ಲಿ ಸಾಮಾನ್ಯ ದೃಶ್ಯ. ಬಟ್ಟೆಯ ಬಗ್ಗೆ ನೀವು ಕೇಳದಿರುವುದೇ ಕ್ಷೇಮ! ಪ್ರತಿದಿನ ಅದೇ ಅಂಗಿ; ಅದೇ ಷರಾಯಿ! ಬದಲಿಸಿದರೆ ನೆಕುತೈ[ನೆಕ್ ಟೈ] ಮಾತ್ರ! ಎಂಥ ದೊಡ್ಡ ಕಛೇರಿಯಲ್ಲಿದ್ದರೂ 'ಈ ಬುದ್ಧಿ'ಯನ್ನು ಬಹಳಷ್ಟು ಜನ ಬಿಡುವುದೇ ಇಲ್ಲ! ಒಂದೇ ಅಂಗಿ - ಅದೂ ವರ್ಷಗಟ್ಟಲೆ?! ಒಗೆಯುತ್ತಾರೆಂದುಕೊಂಡಿದ್ದೇನೆ; ಯಾವಾಗ ಎಂದು ಕೇಳಬೇಡಿ! ಒಂದೇ ಅಂಗಿಯೇ? ಇರಲಾರದು ಎಂದು ನಾನೂ ನಿಮ್ಮಂತೆ ಅನುಮಾನಪಟ್ಟಿದ್ದಿದೆ. ಅಬ್ಬಬ್ಬ ಎಂದರೆ ೨-೩ ಅಂಗಿ... ಮುಗಿಯಿತು ಅಷ್ಟೇ! ಒಂದೇ ಬಣ್ಣದ ಬಟ್ಟೆಯಾದರೆ, ನನಗೇನು ಎಲ್ಲರಿಗೂ ತಿಳಿಯುತ್ತದೆ ಬಿಡಿ! ಅದಕ್ಕೆ ಇವರೊಂದು ಉಪಾಯ ಕಂಡುಹಿಡಿದುಕೊಂಡಿದ್ದಾರೆ - ಎಲ್ಲರೂ ಬಿಳಿಯ ಅಂಗಿಯನ್ನೇ ಧರಿಸಿಬಿಡುವುದು! ಪ್ರತಿದಿನ! ವರ್ಷದ ಪ್ರತಿದಿನವೂ! ಹೇಗಿದೆ ತಂತ್ರ? ಬೇರೆಯವರಿಗೆ ಕಣ್ಣು ಕೈಕೊಡಬಹುದು; ನಾನು ಇವರ ಪಕ್ಕದಲ್ಲೇ ಪ್ರತಿದಿನ ಕೂಡುವವನು ಸ್ವಾಮೀ!

ಇವನಿಗೇನು ತಲೆಕೆಟ್ಟಿದೆಯೇ ಎಂದುಕೊಳ್ಳಬೇಡಿ! ನಾನು ಹೇಳುತ್ತಿರುವುದೆಲ್ಲ ಸತ್ಯ! ಆದರೆ ಕಾರಣವಿದೆ; ಜಪಾನೀ ಶ್ರೀಸಾಮಾನ್ಯ ಸರರೀಮನ್ ಹೀಗೆ ಮಾಡಲು ಕಾರಣವಿದೆ! ಜಪಾನಿನಲ್ಲಿ ಆಹಾರ-ಬಟ್ಟೆ-ವಸತಿ ಸಿಕ್ಕಾಪಟ್ಟೆ ದುಬಾರಿ - ಇಲ್ಲಿದ್ದು ನೋಡದವರ ಊಹೆಗೂ ನಿಲುಕದಷ್ಟು! ಹೀಗಿರುವಾಗ ಕಡಿಮೆ ಬೆಲೆಯ ಊಟ-ಬಟ್ಟೆ ಕೊಂಡರೆ ತಪ್ಪೇನು? ಆದರೆ, 'ಉಳ್ಳವರೂ' ಇದೇ ಬುದ್ಧಿ ತೋರುವುದು ಸ್ವಲ್ಪ ಅರ್ಥವಾಗದು; ಅರ್ಥವಾಗದ್ದೇನಲ್ಲ - ಹೀಗೆ ಉಳಿಸಿದ ಹಣವನ್ನು ಜೂಜು - ಮೋಜು - ವಿನೋದ - ಮೇಜುವಾನಿಗಳಿಗೆ ಸುರಿಯುತ್ತಾರೆ! ಏನೇ ಹೇಳಿ, ಎರಡು ಅಂಗಿ ಕೊಳ್ಳಬಹುದು; ಅದರಲ್ಲಿ ಜುಗ್ಗತನ ನೋಡಿದ್ದು ಇದೇ ಮೊದಲು. ಬಿಳಿಯ ಬಟ್ಟೆಯಾದರೆ ಎರಡೋ ಮೂರೋ ಇರಬಹುದು ಎಂದುಕೊಂಡೀರಿ; ಪ್ರತಿದಿನ ಹಳದಿಯೋ ನೀಲಿಯೋ ಆದಲ್ಲಿ ಅಂಗಿ ಒಂದೇ ಎಂದು ಅಲ್ಲಿ ಕುಳಿತಿರುವ ನಿಮಗೂ ತಿಳಿಯುತ್ತದೆ. ಆದರೆ ಎಲ್ಲರೂ ಹಾಗೇ ಏನಲ್ಲ; ಎಲ್ಲ ನಿಯಮಕ್ಕೂ ಅಪವಾದವಿದೆಯಲ್ಲವೇ! ೫-೬ ಅಂಗಿ, ಷರಾಯಿಯವರೂ, ಸಾಲ ಮಾಡಿ ಪ್ರತಿವಾರ ಹೊಸ ನೆಕುತೈ ಕೊಳ್ಳುವವರೂ ಇದ್ದಾರೆ. ಒಳ್ಳೆಯ ಅಂದರೆ ದುಬಾರಿ ಊಟ ಕೊಳ್ಳುವವರೂ ಇದ್ದಾರೆ; ತಾವು ಠೀವಿಯಿಂದ ನಡೆದಾಡಿ ಕಂಡವರೆಲ್ಲಾ ತಮ್ಮನ್ನು ನಖಶಿಖಾಂತ ನೋಡಿ ಬಾಯ್ಬಿಡಲೆಂದು ಬಯಸುವವರೂ ಇದ್ದಾರೆ; ಪ್ರತಿದಿನ ಹೊಸ ಅಥವಾ ಬೇರೆ ಬಟ್ಟೆ ಹಾಕಿಕೊಂಡು ಮೇಲೆ ಸೂಟು ಎಂಬ ಸರರೀಮನ್ನರ ಪತಾಕೆಯನ್ನು ಹೊದ್ದು ಪ್ರತಿನಿತ್ಯದ ರೈಲಿನಲ್ಲಿ ಉಜ್ಜಾಡಿಕೊಂಡು ಕಛೇರಿಗೆ ಬಂದವರೇ ಎಂದಿನಂತೆ 'ಸಮವಸ್ತ್ರ' - ಅದೇ ಹಳೆಯ ಅಂಗಿ-ಷರಾಯಿಗೆ ಬದಲಿಸಿಕೊಂಡು ಪ್ರತ್ಯಕ್ಷವಾಗುತ್ತಾರೆ! ಕಛೇರಿಯಲ್ಲಿ ಮನುಷ್ಯನ ಮುಖಕ್ಕಿಂತ, ಅವನ ಬಟ್ಟೆಯನ್ನು ನೋಡಿಯೇ ಹೇಳಬಹುದು ಅವನಾರೆಂದು! ಎಂದಿಗೂ ಈ ತರ್ಕ ತಪ್ಪದು!

ಇನ್ನು ಪಾದರಕ್ಷೆ! ಬೂಟು, ಷೂ ರೈಲಿನಲ್ಲಿ ಬರುವಾಗ ಮಾತ್ರ! ಕಛೇರಿಯೊಳಗೆ ನಡೆದಾಡಲು ಹವಾಯಿ ಚಪ್ಪಲಿಯಂಥಾ ಪಾದುಕೆ! ಆದ್ರೆ ಪ್ರತಿದಿನ ಕಾಲುಚೀಲ ಮಾತ್ರ ಬದಲಿಸುವ ಒಳ್ಳೆಯ ಬುದ್ಧಿ ಇಲ್ಲಿ ಎಲ್ಲರಿಗೂ ಇದೆ. ಕಛೇರಿಯಲ್ಲಿ ಈ ಎಲ್ಲ ಬಟ್ಟೆ-ಬರೆಗಳನ್ನಿಡಲು, ಸೂಟಿನ ಕೋಟು ನೇತುಹಾಕಲು ಒಂದು ರೊಕ್ಕಾ[=ಲಾಕರ್] ಇರುತ್ತದೆ. ಅದು ಇದ್ದುದಕ್ಕೆ ಬದುಕಿದೆವು; ಇಲ್ಲವಾದರೆ, ವರ್ಷಕ್ಕೊಮ್ಮೆ(?) ಅಗಸನ ಕೈಸೇರುವ ಸೂಟಿನ ಕೋಟಿನ ನಾತ ಕುಡಿಯುವುದು ನಮಗ್ಯಾವ ಕರ್ಮ! ತಮಾಷೆ ಸಾಕೆನ್ನುವಿರಾ? ನಿಜವಾದ ತಮಾಷೆ ಇನ್ನು ಮುಂದೆ! ಜಪಾನೀಯರಿಗೆ ಬೆಳಿಗ್ಗೆ ಹಲ್ಲುಜ್ಜುವ ಅಭ್ಯಾಸವಿಲ್ಲ; ಎದ್ದ ಮೇಲೆ ಸ್ನಾನ ಮಾಡುವುದಿಲ್ಲ! ಶೌಚದಲ್ಲಿ ತೊಳೆಯುವುದು ಇವರಿಗೆ ಗೊತ್ತಿಲ್ಲ; ಸದ್ಯ ಈ ಚಳಿಯಲ್ಲಿ ನೀರು ಸೋಕಿದರೆ ನಖಶಿಖಾಂತ ಸೆಟೆದುಕೊಳ್ಳುವ ಭಯಕ್ಕೇ ಅರ್ಧ ಮೈ ತಣ್ಣಗಾಗುತ್ತದೆ. ಈಗ ಹೇಳಿ ಸ್ವಾಮಿ ನಾತದ ವಿಚಾರ!

ತಲೆಗೂದಲು ಬಾಚಲು ಗೊತ್ತಿರುವುದು ಐವತ್ತರ ಮೇಲಿನ 'ಯುವ'ಜನರಿಗೆ ಮಾತ್ರ; ಅರ್ಥಾತ್ ಎರಡನೇ ವಿಶ್ವಯುದ್ಧದ ಆಚೀಚಿನ ವರ್ಷಗಳಲ್ಲಿ ಹುಟ್ಟಿದವರಿಗೆ ಮಾತ್ರ. ಮಿಕ್ಕ 'ಕೇಶ'ವರಾಯರುಗಳನ್ನು ನೋಡಿ ಬೈ-ತಲೆಯಿರಲಿ ತಲೆಯೇ ಕೆಟ್ಟಿದೆ ಎಂದುಕೊಂಡದ್ದಿದೆ! ಹುಡುಗಿಯರಂತೂ, ನವಿಲನ್ನು ನೋಡಿ ಕೆಂಬೂತ ಪುಕ್ಕ ತೆರೆದುಕೊಂಡಂತೆ, ಸಿಕ್ಕಾಪಟ್ಟೆ ಬಣ್ಣ ಬಳಿದು ಕೆಂಪಾಗಿಸಿಕೊಂಡ ತಮ್ಮ ಕೂದಲಿನಿಂದ ತಾವೂ ಅಮೆರಿಕನ್ನರು ಎಂದು ಬೀಗುತ್ತಾರೆ! ತಮಾಷೆಯೆಂದರೆ ಸ್ವಲ್ಪ ದಿನಗಳ ನಂತರ ಕೂದಲಿನ ಬುಡದಿಂದ ಕಪ್ಪು ನೈಸರ್ಗಿಕ ಕೂದಲು ಬೆಳೆಯತೊಡಗಿ, ಮೊದಲು ಬಳಿದುಕೊಂಡ ಬಂಗಾರದ ಬಣ್ಣದೊಡನೆ ಸೇರಿ 'ಕಲರ್-ಕಲರ್' ಎಂದು ಎದ್ದು ಕುಣಿಯುತ್ತಿರುತ್ತವೆ! ಅಮೆರಿಕನ್ನರಾಗಲು ತಲೆಗೆ ಬಣ್ಣ ಬಳಿದುಕೊಂಡವರಲ್ಲಿ ಹುಡುಗರೇನೂ ಕಡಿಮೆಯಿಲ್ಲ; ಅವರೂ 'ಕಲರ್-ಕಲರ್' ಶೈಲಿಯ ಕೋಳಿಪುಕ್ಕದಂತೆ ಬಾಚಿ - ಅಲ್ಲಲ್ಲ - ಚಾಚಿಕೊಂಡ ಕೂದಲಿನವರೇ! ಇನ್ನೂ ಹೆಚ್ಚೆಂದರೆ, ಹುಂಜದ ಹುಟ್ಟಿನ ಜುಟ್ಟಿನವರೂ, ಘಮಲದೆಣ್ಣೆಯ ಸುರುವಿ ಚೂಪಾಗಿ ತಿರುವಿ ನಿಂತ ಮುಳ್ಹಂದಿ ತಲೆಯವರೂ, ಅಯ್ಯಯ್ಯಪ್ಪ.... ಊದಾ ಬಣ್ಣದ, ನೀಲಿ ಬಣ್ಣದ ಕೂದಲಿನ ಅಜ್ಜಿಗಳೂ, ಮುಖದ ತುಂಬಾ ಬರಿಯ ಹಲ್ಲೇ ಕಾಣುವಂತಿರುವ ಇಪ್ಪತ್ತು ಮಿಲಿಮೀಟರ್ ಮೀರಿದ ದಪ್ಪ ತುಟಿಬಣ್ಣದವರೂ ಇದ್ದಾರೆ! ನಗೆಯು ಬರುತಿದೆ ಎನಗೆ ನಗೆಯು ಬರುತಿದೆ! ಎಂಥ ಜನ! ಬರಿಯ ಅಮೆರಿಕದ ಮೂಢ ಹಿಂಬಾಲಕರು! ಕುವೆಂಪುರವರ ಕ್ಷಮೆ ಕೋರಿ ಹೀಗೆನ್ನಬೇಕೆನಿಸುತ್ತಿದೆ:

ಅವ್ವಿಲಿ, ಅಪ್ಪಿಲಿ, ಅಣ್ಣಿಲಿ, ತಂಗಿಲಿ, ಮಾವಿಲಿ, ಬಾವಿಲಿ
ಹರುಕಲು ಬಟ್ಟೆಲಿ, ಕೆದರಿದ ಜುಟ್ಟಲಿ, ಎತ್ತರ ಮೆಟ್ಟಲಿ
ಬಣ್ಣದ ಪಟ್ಟೆಲಿ, ತೆರೆದಾ ಹೊಟ್ಟೆಲಿ - ಎಲ್ಲಾ ಬಂದವು ಓಡೋಡಿ!
'ಜೋಗಿಯು' ಬಾರಿಸೆ ಕಿಂದರಿಯ!

ರೋಗದ ತಂದೆಯ ಬಿಟ್ಟೋಡಿದವು! ಕೈಲಾಗದ ತಾಯಿಯ ಮರೆತೋಡಿದವು!
ವಿಗ್ರಹಬುದ್ಧನ ಒದ್ದೋಡಿದವು! ನಿಗ್ರಹವಿಲ್ಲದೆ ಕುಣಿದಾಡಿದವು!
ಹೆದರಿಕೆಯಿಲ್ಲದೆ ಬೆದರಿಕೆಯಿಲ್ಲದೆ ಕುಡಿದಾಡಿದವು! ಬಡಿದಾಡಿದವು!
ನುಗ್ಗುತ ಹಿಗ್ಗುತ ಕನಸಲಿ ಹಾರುತ ಎಲ್ಲಾ ಬಂದವು ಓಡೋಡಿ!
'ಜೋಗಿ'ಯು ಬಾರಿಸೆ ಕಿಂದರಿಯ!

ನಿಜ! ಪಾಶ್ಚಾತ್ಯ ಜೋಗಿಯ ಕಿಂದರಿಗೆ ಬಲಿಬಿದ್ದವರಿವರು! ಇಡೀ 'ಕಿಂದರಿಜೋಗಿ' ಪದ್ಯರೂಪಕವನ್ನೇ ಇಂದಿನ ಜಪಾನಿನ ಜನಜೀವನಕ್ಕೆ ಹೋಲಿಸಿದರೆ, ಭವಿಷ್ಯ ಇತ್ಯರ್ಥವಾದಂತೆಯೇ! ಅಬ್ಬಾ.. ಜೋಗೀ! ಎಂತಹ ಕಿಂದರಿ ನಿನ್ನದು! ಇಡೀ ಜಪಾನೀ ಸಮಾಜ ನಿನ್ನ ಕಿಂದರಿಗೆ ಕುಣಿಯುವುದೆಂದರೆ...! ನಾನು-ನೀವು ಕೇಳಿ ತಿಳಿದ ಹಳೆಯ ಜಪಾನ್ ಇನ್ನಿಲ್ಲ; ಇನ್ನಿಲ್ಲ! ಥೂ! ಬರಿಯ ನಿರಾಶಾವಾದ, ಪೆಸಿಮಿಸ್ಮ್ ಎನ್ನಬೇಡಿ; ಏಕೆಂದರೆ ಇದು ಕಹಿ ಸತ್ಯ! ಜಪಾನನ್ನು ನಾನು ಕಾಮಾಲೆ ಕಣ್ಣುಗಳಿಂದ ನೋಡುತ್ತಿಲ್ಲ; ಇಲ್ಲಿ ಯಾವ ಪೂರ್ವಾಗ್ರಹವೂ ಇಲ್ಲ. ಎಲ್ಲವನ್ನು ಕಣ್ಣಾರೆ ಕಂಡು, ವಿಚಾರಿಸಿ, ಕೆಲವನ್ನು ಅವರೇ 'ಹೌದು' ಎಂದ ಮೇಲೆ ಬರೆದ ಸತ್ಯ ವಾಕ್ಯ! ನಾನು ಮೊದಲೇ ಹೇಳಿದಂತೆ ಇವರ ಈ ಎಲ್ಲ 'ರೀತಿ-ನೀತಿ'ಗಳಿಗೂ ಕಾರಣವಿದೆ - ಎರಡನೇ ವಿಶ್ವಯುದ್ಧದ ಹೀನಾಯ ಸೋಲು! ಎರಡೇ ಅಣುಬಾಂಬ್ ಸ್ಫೋಟ - ಜಪಾನ್ ನಿರ್ನಾಮವಾಗದಿದ್ದರೂ, ಜಪಾನೀಯತೆ ನಿರ್ಮೂಲವಾಗಿಹೋಗಿದೆ! ಕಿಂದರಿಜೋಗಿಯ ಪದ್ಯ ಮತ್ತೆ ನೆನಪಾಗಿ ಯಾಕೋ ಕಿವಿಯಲ್ಲಿ ಮೊರೆಯತೊಡಗಿತು:
"ಅಯ್ಯೋ ಹೋಯಿತೇ ಆ ನಾಕ! ಅಯ್ಯೋ ಬಂದಿತೇ ಈ ಲೋಕ!...."

(ಮುಂದಿನ ಬಾರಿ: ಕ್ಯೂಶೂನಲ್ಲಿ ಕನ್ನಡ!)

* * * *

~.~
  • benaka ರವರ ಬ್ಲಾಗ್
  • Login or register to post comments
  • 1435 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Google
  • Yahoo

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
October 10, 2006 - 12:07pm — benaka

ನನ್ನ ಜಪಾನ್ ಪ್ರವಾಸ : ೮. ಹಳೆಯ ರಾಜ್ಯ ಇನ್ನಿಲ್ಲ!

benaka's picture

ಗೆಳೆಯರೇ,

ನನ್ನ ಜಪಾನ್ ಪ್ರವಾಸ : ೮. ಹಳೆಯ ರಾಜ್ಯ ಇನ್ನಿಲ್ಲ! - ನಿಮ್ಮ ಮುಂದಿದೆ.
ಮುಂದಿನ ಭಾಗ - ಕ್ಯೂಶೂನಲ್ಲಿ ಕನ್ನಡ! - ಇಷ್ಟರಲ್ಲೇ ಬಲೆಯೇರಲಿದೆ.

ಆಸಕ್ತರು ಈ ಕೆಳಗಿನ ನನ್ನ ಸಚಿತ್ರ ಬ್ಲಾಗಿನಲ್ಲೂ ಓದಬಹುದು.

ನಿಮ್ಮವ

ಬೆನಕ

ಕನ್ನಡಪುಟ.ಬ್ಲಾಗ್‍ಸ್ಪಾಟ್.ಕಾಂ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
October 11, 2006 - 7:01pm — Sunil Jayaprakash

ಹೌದೇ, ನಿಜವೇ, ಇಷ್ಟು ತೀವ್ರವಾಗಿದೇಯೇ ನಿರಾಶಾವಾದ

Sunil Jayaprakash's picture

ಸಿಲ್ಲಿ ಲಲ್ಲಿಯಲ್ಲಿ ಸೂಜಿಯು ಪಲ್ಲಿಗೆ "ಹೌದೇನೋ ನಿಜಾನೇನೋ" ಎಂದು ಕೇಳಿದಾಗ, ಪಲ್ಲಿಯು ಸೂಜಿಗೆ "ಹೌದು ಕಣೆ, ಸೂಜಿ" ಎಂದು ಹೇಳುತ್ತಾನೆ.

ಹಾಗೆ, ಯಪ್ಪಾ, ನಿಮ್ಮ ಲೇಖನ ಓದಿದ ಮೇಲೆ, ನೀವೇ ಅಷ್ಟು ಬಾರಿ ಈಗಾಗಲೇ ಹೇಳಿದ್ದರೂ ಮತ್ತೊಮ್ಮೆ ಕೇಳಬೇಕೆನಿಸುತ್ತಿದೆ. ನಿಜವೇ, ಜಪಾನೀಯರು ಅಷ್ಟೊಂದು ನಿರಾಶಾವಾದಿಗಳಾಗಿದ್ದಾರೆಯೇ?.

ಈ ಐವತ್ತರ ಮೇಲಿನ 'ಯುವಕರೂ' ಕೂಡ ನಿರಾಶಾವಾದಿಗಳೇ. ಅವರಲ್ಲಿ ಉತ್ಸಾಹ ಪುಟಿಯುವುದಿಲ್ಲವೇ? ಅಥವಾ ಎಲ್ಲರೂ, "ಸ್ವಸ್ತಿಕ್" ಚಿತ್ರದಲ್ಲಿನ 'ಕಲರ್-ಕಲರ್' ಹಾಡಿಗೆ ಜೋತು ಬಿದ್ದಿದ್ದಾರೆಯೇ ?.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
October 11, 2006 - 9:29pm — benaka

ಜಪಾನೀಯರ 'ತಮ್ಮತನ'

benaka's picture

ಸುನಿಲರೇ,

ಯುದ್ಧಾನಂತರದ ಜಪಾನೀಯರು - 'ತಮ್ಮತನ', 'ತಮ್ಮದೇಶ', 'ತಮ್ಮ ಸಂಸ್ಕೃತಿ', 'ತಮ್ಮ ನಾಡು-ನುಡಿ' ಗಳ ವಿಷಯದಲ್ಲಿ ನಿಸ್ಸಂದೇಹವಾಗಿ ನಿರಾಶಾವಾದಿಗಳು! ನಿರಭಿಮಾನಿಗಳು! ಅವರಿಗೆ ಅಭಿಮಾನ, ಅಕ್ಕರೆ, ಭಯ, ಭಕ್ತಿ, ಆದರ ಎಲ್ಲವೂ - ಅವರ ಆರಾಧ್ಯ ದೈವವಾದ ಅಮೆರಿಕ ಒಂದೇ! ಅಲ್ಲಿ ಮಳೆ ಸುರಿದರೆ ಇಲ್ಲಿ ಶೀತ! ಅಲ್ಲಿ ಬಿಸಿಲುರಿದರೆ ಇಲ್ಲಿ ಇವರಿಗೆ ಜ್ವರ! ಒಂದು ದೂ.ದ. ಕಾರ್ಯಕ್ರಮದಲ್ಲಿ ಜಪಾನೀಯರ 'ತಮ್ಮತನ'ದ ಬಗ್ಗೆ ಚರ್ಚೆ ನಡೆದಿದ್ದಾಗ ಕೇಳಿದ ಸಂವಾದವಿದು:

"ಯಾರು ನಿಮ್ಮಲ್ಲಿ ನಿಮ್ಮ ದೇಶಕ್ಕಾಗಿ ನಿಮ್ಮ ಜೀವನವನ್ನು ಮುಡಿಪಾಗಿಡುತ್ತೀರಿ?"

ನೂರು ಮಂದಿ ತುಂಬಿದ ಸಭೆಯಲ್ಲಿ ಯಾರೂ ಕೈಯೆತ್ತಲಿಲ್ಲ!

"ಯಾರೂ ಇಲ್ಲವೇ? ಹೋಗಲಿ, ದೇಶ ಬೇಡ, ನಿಮ್ಮ ನಿಮ್ಮ ಕುಟುಂಬಗಳಿಗೆ...?"

ಎಂಭತ್ತರಷ್ಟು ಕೈಗಳು ಮೇಲಕ್ಕೆದ್ದವು.

ಹುಮ್ಮಸ್ಸಿನಿಂದ ತರುಣನೊಬ್ಬನೆಂದ "ಇದಪ್ಪಾ ಸರಿಯಾದ ಪ್ರಶ್ನೆ; ಕಂಡವರಿಗೆಲ್ಲ ಜೀವ ಬಿಡಲು ನಮಗೇನು ಗ್ರಹಚಾರ! ಅಲ್ಲವೇ?"

ಎಲ್ಲಾ ಒಟ್ಟಿಗೆ "ಅಲ್ಲವೇ!" ಎನ್ನುತ್ತಾ ಗೋಣಾಡಿಸಿದರು!

"ಎಲ್ಲಾ ಒಂದೇ ಬಿಡಿ, ಎಲ್ಲರೂ ತಂತಮ್ಮ ಮನೆಗಳಿಗೆ ಜೀವ ತೇಯ್ದರೆ, ಅದೇ ದೇಶಸೇವೆಯಲ್ಲವೇ?" ಎಂದು ನಿರೂಪಕ ತಿಪ್ಪೆ ಸಾರಿಸಿದ! ಅವರವರೇ ಚಪ್ಪಾಳೆ ತಟ್ಟಿಕೊಂಡರು!

ಇಂತಹವು ಒಂದೇ, ಎರಡೇ, ಬೇಕಾದಷ್ಟಿವೆ. ಬಹುಶಃ, ತಮ್ಮದೇ ದೇಶದ ರಾಷ್ಟ್ರಗೀತೆಯನ್ನು ಎಂದಿಗೂ ಹಾಡದವರು ಜಗತ್ತಿನಲ್ಲಿ ಜಪಾನೀಯರೊಬ್ಬರೇ ಇರಬೇಕು! ಸುಮ್ಮನೆ ನೆಪಕ್ಕೆ ಓದಿತಿಳಿದಿರುತ್ತಾರೆ ಅಷ್ಟೇ! ಆದರೆ, ಇವರು ಹಣ, ಹೆಣ್ಣು, ಮಣ್ಣು, ಮದ್ಯ, ಮಾಂಸ, ವಿದೇಶಪ್ರವಾಸ ಇತ್ಯಾದಿ ಐಹಿಕ ಸುಖಗಳ ಬಗ್ಗೆ ಮಾತ್ರ ಬಹಳವಾಗಿ ಆಶಾವಾದಿಗಳು. ಇದರಬಗ್ಗೆ ವಿವರವಾಗಿ ಮುಂದೆ ಬರೆಯುತ್ತೇನೆ.

ನಿಮ್ಮವ

ಬೆನಕ

ಕನ್ನಡಪುಟ.ಬ್ಲಾಗ್‍ಸ್ಪಾಟ್.ಕಾಂ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ರಂಗಿನ ಚಿಟ್ಟೆ
  • ರಂಗಿನ ಚಿಟ್ಟೆ
  • ದ ರಾ ಬೇಂದ್ರೆಯವರ ಕವನ
  • ೫. ಕ್ಯೂಶೂದ್ವೀಪ
  • ಹೃದಯದ ಭಾವ
Syndicate content

ಲೇಖಕರು

benaka's picture

ಪರಿಚಯ

ಹೊಯ್ಸಳರ ವೈಭವದಿ ಮೆರೆದು
ಪರಕೀಯರ ದಾಳಿಗೆ ಕೈಮುರಿದು
ದಂತವ ಎಡದ ಕೈಯಲಿ ಹಿಡಿದು
ನವಭಾರತವ ಕನ್ನಡದಿ ಬರೆಯೆ ಕಾದಿಹ ಬೆನಕ ಮೈಮುರಿದು

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ವಾಟರ್ ಪೋರ್ಟಲ್: ದಿನದ ಚಿತ್ರ

ರಾಜಸ್ಥಾನದಲ್ಲಿ ಕೆರೆಯೊಂದರ ನವನಿರ್ಮಾಣ

(ಫೋಟೋ : Farhad Contractor)

ವಾರದ ಲೇಖನ
ನಿಟ್ಟೆಯಲ್ಲಿ ನೀರಿಂಗಿಸಿ ನೀರಿನ ಬರಕ್ಕೆ ವಿದಾಯ

ವಾರದ ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ವಿಹರಿಸಿ

  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • Mailing Lists
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಬ್ಲಾಗ್ ಬರಹಗಳು

  • ಕಥೆ ಬರೆದದ್ದು ಹೀಗಿತ್ತು
  • ಶಾಸಕರ ರಾಜೀನಾಮೆ ಮತ್ತು ರಾಜಕೀಯ
  • ಪ್ರೀತಿಸಿರೋ...
  • ತನುಮನ
  • ವೈದ್ಯನಾರಾಯಣಕಥೆ
  • ಹೃದಯದ ಭಾವ
  • ಕನಸ್ಸು
  • ರಂಗಿನ ಚಿಟ್ಟೆ
  • ಚಿರನಿದ್ರೆ
  • ಸೋಲಿನ ಪತ್ತೆಗಾಗಿ ಸಂಶೋಧನೆ
ಇನ್ನಷ್ಟು

ಇತ್ತೀಚಿನ ಪ್ರತಿಕ್ರಿಯೆಗಳು

  • aniljoshi
    ಉ: ಗಂಡ-ಹೆಂಡಿರು ಮತ್ತು ಪುರಂದರ ದಾಸರು
    July 7, 2008 - 2:33am
  • aniljoshi
    ಉ: ಜಗನ್ನಾಥನ ತಬ್ಬಲಿ ಮಕ್ಕಳು
    July 7, 2008 - 2:22am
  • aniljoshi
    ಉ: ವೈದ್ಯನಾರಾಯಣಕಥೆ
    July 7, 2008 - 12:50am
  • ರೇಖಾ
    ಉ: ರಾಗಿ ಮುದ್ದೆ ಮಿಶಿನ್! (Finger Millet machine)
    July 6, 2008 - 11:43pm
  • ರೇಖಾ
    ಉ: ಅಡುಗೆ, ಕುಟುಂಬ ಲೇಖ"ಕಿ"ಯರಿಗೆ ತೆಳು ವಿಷಯಗಳಾದರೆ, ರಾಜಕೀಯ, ತಂತ್ರಜ್ಞಾನ ಲೇಖ"ಕ"ರಿಗೆ ತೆಳು ವಿಷಯಗಳೇ?
    July 6, 2008 - 11:26pm
  • ರೇಖಾ
    ಉ: ಲವ್ ಅಟ್ ಫಸ್ಟ್ ಸೈಟ್ ?
    July 6, 2008 - 11:21pm
  • Sunil Jayaprakash
    ಉ: ವೈದ್ಯನಾರಾಯಣಕಥೆ
    July 6, 2008 - 11:16pm
  • Sunil Jayaprakash
    ಉ: ವೈದ್ಯನಾರಾಯಣಕಥೆ
    July 6, 2008 - 11:13pm
  • ರೇಖಾ
    ಉ: ಬ್ರಹ್ಮ ಕಮಲ.
    July 6, 2008 - 11:12pm
  • ರೇಖಾ
    ಉ: ಕಣ್ಣು ನೋಡೇ ಗೌರಿ
    July 6, 2008 - 11:07pm
ಇನ್ನಷ್ಟು
ಈಗಿನಂತೆ ೧ ಸದಸ್ಯ/ಸದಸ್ಯೆ ಮತ್ತು 31 ಅತಿಥಿಗಳು ಆನ್ಲೈನ್ ಇರುವರು.


ನನ್ನ ಜನಕ ಆಮ್ಲಜನಕ

— ಟಿ.ಪಿ.ಕೈಲಾಸಂ

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator