ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Support Sampada
  • ಅಂಚೆ ಪೆಟ್ಟಿಗೆ
  • Font Help

ಹೊಸತು: ಹರಿದಾಸ ಸಂಪದ ಸಂಪುಟ

ಸಂಪದ › Sampada Blogs › benaka ರವರ ಬ್ಲಾಗ್

ಕನ್ನಡಪುಟ

ಪುಟವಿಡಲು ನುಡಿಯೇನು ನೆಲವೇನು ಹೊಳೆವುದೀ ನಾಡಿನಲಿ ಚಿನ್ನವಾಗಿ!

೧೦.ರೈಲಿನ ರಾಜ್ಯ

December 16, 2006 - 1:03am — benaka
ನನ್ನ ಜಪಾನ್ ಪ್ರವಾಸ - ೧೦.ರೈಲಿನ ರಾಜ್ಯ
------------------------------------------

ದೊಂತೊನ್ ಗೊತ್ತೊನ್, ಗಾಂತೊನ್ ಗೊತ್ತೊನ್, ಗತಾಂಗೊತೊನ್ ... ಇದೇನಿದು ಜಪಾನೀಭಾಷೆಯಲ್ಲೇನೋ ಬಡಬಡಿಸುತ್ತಿದ್ದೇನೆ ಎಂದುಕೊಳ್ಳಬೇಡಿ; ಇವೆಲ್ಲ ಇಲ್ಲಿಯ ಜನರು ರೈಲಿನ ಸದ್ದನ್ನು ಅನುಕರಿಸುವ ಬಗೆ ಅಷ್ಟೇ! ನಮ್ಮಲ್ಲಾದರೋ ಈಗಲೂ ಕೂಡ ಮಕ್ಕಳಾಗಲಿ, ದೊಡ್ಡವರಾಗಲಿ, ಹಳಿಬಂಡಿಯ ಸದ್ದನ್ನು ಚುಕುಪುಕು-ಚುಕುಬುಕು-ಚುಕ್‍ಬುಕ್ (ಡುಂಡಿರಾಜರಂತೆ ವಾಣಿಜ್ಯದವರಿಗಾದರೆ ಚೆಕ್‍ಬುಕ್ ಚೆಕ್‍ಬುಕ್)-ಇತ್ಯಾದಿಗಳಿಂದ ಅನುಕರಿಸುವುದನ್ನು ಕೇಳಿದ್ದೇನೆ. ಅದು ಉಗಿಬಂಡಿಯ ಕಾಲ, ಈಗೆಲ್ಲ ಡೀಸೆಲ್ ಗಾಡಿ - ಧಡಕ್ ಧಡಕ್ ಅಲ್ಲವೇನ್ರೀ? ಎನ್ನುವಿರೇನೋ! ನಾನು ಹೇಳಹೊರಟಿದ್ದು ಇನ್ನೂ ಮುಂದುವರೆದ ವಿದ್ಯುತ್ ಹಳಿಬಂಡಿಯ ಬಗ್ಗೆ; ಏನೇ ಆಗಲಿ, ಸದ್ದು "ಗಾಂತೊನ್ ಗೊತ್ತೊನ್" ಎಂದೇನೂ ನನಗೆ ಕೇಳಿಸಲಿಲ್ಲ. ಶಬ್ದ-ಭಾಷೆ ಆಯಾ ಪ್ರದೇಶದ ವೈಶಿಷ್ಟ್ಯ; ರೈಲು ಚುಕುಪುಕು ಎನ್ನುತ್ತದೆ ಎಂದರೆ ಇವರು ಫಕಫಕನೆ ನಕ್ಕಾರು! ಸರಿ, ಶಬ್ದವೇ ಇಲ್ಲದೆ ರೈಲು ಚಲಿಸಿದರೆ? ಬಿದ್ದು ಬಿದ್ದು ನಕ್ಕೀರಿ? ಅದು ರೈಲೇ ಅಲ್ಲ; ನೀನು ಬಿಡ್ತಾ ಇರೋದೇ ರೈಲು ಅಂತ!? ಖಂಡಿತ ಇಲ್ರೀ! ಇಲ್ಲಿ ನಾವು ತಿಳಿಯಬೇಕಿರುವ ಸತ್ಯ ಬಹಳಷ್ಟಿದೆ; ಇದನ್ನೇ ನಾನೀಗ ಹೇಳಹೊರಟಿದ್ದು - ಜಪಾನೆಂದರೆ ರೈಲಿನ ರಾಜ್ಯ!

ಜಪಾನಿನಲ್ಲಿ ಬಸ್ಸಿಗಿಂತ ಹಳಿಬಂಡಿಯ ಸಾರಿಗೆ ವ್ಯವಸ್ಥೆ ಅತ್ಯುತ್ತಮವಾಗಿದೆ; ಬಸ್ಸೇನೂ ಕಡಿಮೆಯಿಲ್ಲ ಆದರೂ ಶ್ರೀಸಾಮಾನ್ಯ ಮಾತೆತ್ತಿದರೆ ದೆನ್‍ಶ[=ವಿದ್ಯುದ್ರಥ, ಹಳಿಬಂಡಿ], ಎಕಿ[=ನಿಲ್ದಾಣ] ಎನ್ನುವಷ್ಟು ತೀರಾ ನಿಕಟವಾಗಿರುವುದು ರೈಲು ಮಾತ್ರ. ಒಂದೊಂದೂರನ್ನೂ ರೈಲಿನ ಸಂಸ್ಥೆಗಳು ಜಹಗೀರಿ ತೆಗೆದುಕೊಂಡಿರುವಂತೆ ಕಾಣುತ್ತದೆ! ಊರಿನ ಹೆಸರು ಹೇಳಿದರೆ, "ಆ ರೈಲು ಸಂಸ್ಥೆಯ ಊರೇ? ಈ ರೈಲಿನ ಊರೇ?" ಎನ್ನುವಷ್ಟು ಪ್ರಸಿದ್ಧ ಈ ರೈಲುಗಳು! ಎಕಿಗಳು ನಗರದಲ್ಲಿ ೧-೨ ಕಿ.ಮೀ. ಅಂತರದಲ್ಲಿದ್ದು, ಹೊರವಲಯದಲ್ಲಿ ೫ ಕಿ.ಮೀ. ಸುಮಾರಿಗೆ ಕಾಣಸಿಗುತ್ತವೆ; ಎಕಿ ಇದ್ದಲ್ಲೆಲ್ಲ ವ್ಯಾಪಾರೀ ಕೇಂದ್ರಗಳೂ, ಊಟೋಪಚಾರ ಕೇಂದ್ರಗಳೂ, ವಸತಿಗಳ ತಾಣಗಳೂ ಬೆಳೆದೂ ಬೆಳೆದೂ, ಇಲ್ಲಿ ' ಹಳ್ಳಿ'ಗಳೇ ಇಲ್ಲವಾಗಿ, ಇಲ್ಲಿನ 'ಹಳ್ಳಿಗಳು' ಭಾರತದ ನಗರಗಳನ್ನು ಹೋಲುತ್ತವೆ! ಅಂದರೆ ಜಪಾನಿನ ಹಳ್ಳಿ ಎಂಬುದು ಮಹಾನಗರದಿಂದ ಅತಿದೂರದಲ್ಲಿದ್ದು, ಬೆಟ್ಟಗುಡ್ಡಗಳ ನಡುವೆ, ತೋಟ-ಗದ್ದೆಗಳಿಂದ ತುಂಬಿದ ಜನನಿಬಿಡವಾಗಿರದ ನಗರವೇ! ಅದೇನೇ ಇರಲಿ, ವಸತಿ ಸೌಕರ್ಯಕ್ಕೆ ಮಾತ್ರ ಎಕಿಯಿಂದ ಮನೆ ಎಷ್ಟು ದೂರದಲ್ಲಿರುವುದೋ ಅಷ್ಟು ಬಾಡಿಗೆ ಕಡಿಮೆಯಾಗಿರುತ್ತದೆ; ಸ್ವಾಭಾವಿಕವಲ್ಲವೇ?

ಆದರೆ 'ಎಕಿಯಿಂದ ೧೦ ನಿಮಿಷ ನಡಿಗೆ - ೮೫೦೦೦ಯೆನ್ -೨ಎಲ್.ಡಿ.ಕೆ' ಎಂದು ದಪ್ಪಕ್ಷರದಲ್ಲಿ ಬರೆಯಲ್ಪಟ್ಟ ಫಲಕಗಳು ಭಾರತದಲ್ಲಿನ್ನೂ ಇಲ್ಲವೇನೋ! ಬೆಲೆ ಕ್ರಯಕ್ಕಲ್ಲ ಸ್ವಾಮೀ, ತಿಂಗಳ ಬಾಡಿಗೆಗೆ! ಎಚ್ಚರವಿರಲಿ! ೨ ಎಲ್.ಡಿ.ಕೆ ಎಂದರೆ ೨ ಕೋಣೆಗಳೂ, ಎಲ್-ಲಿವಿಂಗ್-ನಡುವಂಗಳವೂ, ಡಿ-ಡೈನಿಂಗ್-ಊಟದಕೋಣೆಯೂ, ಕೆ-ಕಿಚನ್-ಅಡುಗೆಮನೆಯೂ ಇದೆ ಎಂದರ್ಥ. ಅದರ ಇನ್ನೊಂದರ್ಥ ಇವುಗಳಾವುವೂ ಇಲ್ಲದ 'ಮನೆ'ಯೂ ಇದೆ ಎಂದಲ್ಲವೇ? ಖಂಡಿತ ಇದೆ; ನಾನು ವಾಸವಿರುವುದು ಅದರಲ್ಲೇ! ಹೌದು ಸ್ವಾಮೀ, ಕ್ಯೂಶೂವಿನಿಂದ ಮರಳಿದ ನಂತರ ಓಸಾಕಾದ ನನ್ನ ಅದೇ ಕೋಣೆ/ಮನೆಯಲ್ಲಿಯೇ ನನ್ನ ಬಿಡಾರ; ವ್ಯತ್ಯಾಸವೆಂದರೆ - ವೆಂಕಟ ಇರಲಿಲ್ಲ.

ಕ್ಯೂಶೂವಿನಿಂದ ಹಿಂದಿರುಗಿದ್ದೂ ಶಿನ್‍ಕಾನ್‍ಸೆನ್ ರೈಲಿನಲ್ಲಿಯೇ - ಶರವೇಗದ ಹಳಿಬಂಡಿ! ನಾ ಮೊದಲೇ ಹೇಳಿದಂತೆ, ಬೆಂಗಳೂರಿನಿಂದ ಅತಿವೇಗದ ಬಸ್ಸು ಮೈಸೂರು ತಲುಪುವುದರೊಳಗೆ, ಶಿನ್‍ಕಾನ್‍ಸೆನ್ ಓಸಾಕಾದಿಂದ ತೋಕ್ಯೋ ತಲುಪಿರುತ್ತದೆ. ನೊಝೊಮಿ, ಹಿಕಾರಿ, ಕೊದಾಮ ಗಳು ಕ್ರಮವಾಗಿ ಗಂಟೆಗೆ ೨೫೦, ೨೦೦, ೧೫೦ ಕಿ.ಮೀ. ವೇಗದಲ್ಲಿ ಓಡುತ್ತವೆ; ಅಲ್ಲಲ್ಲ ಹಾರುತ್ತವೆ! ಶರವೇಗದ ಈ ರೈಲುಗಳು ಇಲ್ಲಿನ ಮುಖ್ಯನಗರಗಳನ್ನು, ಕೆನ್[=ರಾಜ್ಯ]ಗಳ ರಾಜಧಾನಿಗಳನ್ನು ಕ್ಷಣಾರ್ಧದಲ್ಲಿ ಬೆಸೆಯುತ್ತವೆ. ಒಂದು ಕೆನ್ ನ ಒಳಗೇ ಚಲಿಸುವ ರೈಲುಗಳ ಸಂಸ್ಥೆಗಳು ಹಲವಾರಿವೆ. ಏನೇ ಆದರೂ ರೈಲುಗಳನ್ನು ನುಗ್ಗಿಬಿಡುವ ಸಂಸ್ಥೆಗಳಲ್ಲಿ ಎದ್ದು ಕಾಣುವುದು - ಜೆ.ಆರ್ - ಜಪಾನ್ ರೈಲ್ವೆ - ಸರ್ಕಾರೀ ಭಾಗೀದಾರ ಸಂಸ್ಥೆ; ಶಿನ್‍ಕಾನ್‍ಸೆನ್ ಗಳ ಜನಕ; ಇಡೀ ಜಪಾನಿನ ನರನಾಡಿಗಳಿಗೆ ಆಮ್ಲಜನಕ! ಸಣ್ಣ-ಪುಟ್ಟ ನಗರ, ಪಟ್ಟಣಗಳನ್ನು ಸೇರಿಸುವ ಇತರ ಸಂಸ್ಥೆಗಳಲ್ಲಿ ಕಿನ್‍ತೆತ್ಸು, ಹಾನ್‍ಕ್ಯೂ, ಹಾನ್‍ಶಿನ್, ಕಿತಕ್ಯೂ, ನಾನ್‍ಕಯ್, ಮೆಯ್‍ತೆತ್ಸು, ಕೇಯೋ, ತೋಬು...ಇತ್ಯಾದಿ ಇತ್ಯಾದಿ. ಒಂದೇ ಎರಡೇ? ನೂರಾರು! ನನಗೇನು, ಇಲ್ಲಿಯವರಿಗೇ ಗೊತ್ತಿಲ್ಲದಿದ್ದರೂ ಅಚ್ಚರಿಯಿಲ್ಲ; ಅಷ್ಟು ಹೇರಳವಾಗಿವೆ. ನಗರದಲ್ಲಿ ಪಾತಾಳಗಾಮಿ ಸುರಂಗರೈಲುಗಳಿದ್ದು, ಭೂತಲಗಾಮೀ ರೈಲುನಿಲ್ದಾಣಗಳನ್ನು ಪಾತಾಳದಲ್ಲಿ ಸಂಧಿಸುತ್ತವೆ! ಹಾಗಾಗಿ, ಒಂದು ಪ್ರಮುಖ ರೈಲು ನಿಲ್ದಾಣ ಒಂದು ಚದರ ಕಿ.ಮೀ. ವಿಸ್ತೀರ್ಣ ಮೀರಿದ್ದರೂ ಹೆಚ್ಚಿಲ್ಲ! ಅಲ್ಲಿ ಬಹು ರೈಲುಗಳು ಸೇರುವುದರಿಂದ ನಿಲ್ದಾಣವೇ ೮-೧೦ ಅಂತಸ್ತುಗಳಿದ್ದು ಸುರಂಗ-ಭೂ-ಸೇತು ಹಳಿಬಂಡಿಗಳ ನಿಲ್ದಾಣಗಳು, ಅವುಗಳ ನಡುವೆ ಕೂಡು ದಾರಿಗಳು, ಪ್ರವೇಶಚೀಟಿ ಮಾರಾಟ-ಪರೀಕ್ಷಾ ಯಂತ್ರಗಳೂ, ಹತ್ತು ಹಲವು ದ್ವಾರಗಳು ಅಲ್ಲೇ ಇರುವುದು ಗೊತ್ತಿರುವುದೇ! ಸಾಲದ್ದಕ್ಕೆ ಆ ಪಾತಾಳದ ಅಂತಸ್ತಿನಿಂದ ಮೇಲುಪ್ಪರಿಗೆಯವರೆಗೂ ಅಂಗಡಿಗಳು, ಭವ್ಯ ಮಾರುಕಟ್ಟೆಗಳೂ, ಊಟೋಪಚಾರ ಮಳಿಗೆಗಳೂ, ಬೃಹತ್ಕಛೇರಿಗಳೂ, ವಸತಿಗೃಹಗಳೂ ಇವೆ!

ಪಾತಾಳಲೋಕವೆಂದರೆ ಏನೆಂದು ನನಗೆ ತಿಳಿದದ್ದು ಇಲ್ಲಿಯೇ - ಜಪಾನಿನ ಚಿಕತೆತ್ಸು[=ಸುರಂಗರೈಲು] 'ಹತ್ತಲು' ನಿಲ್ದಾಣಕ್ಕೆ 'ಇಳಿ'ದಾಗ! ಇದಾವ ಅಚ್ಚರಿಯ ಪರಿವೆಯಿಲ್ಲದಂತೆ ಜನ ಅವರಪಾಡಿಗೆ ಪ್ರತಿದಿನ ಪಯಣಿಸುತ್ತಾರೆ; ಅವರಿಗೆ ಇವೆಲ್ಲ ರೂಢಿಯಾಗಿಬಿಟ್ಟಿದೆ. ಅಚ್ಚರಿಯೇನಿದ್ದರೂ ನೆಲದೊಳಗೇ ಮೂರಂತಸ್ತು ಕೆಳಗೆ ನಿರಾತಂಕ ಜೀವಿ, ಜೀವನವನ್ನು ಕಂಡ ನನಗೆ! ನಿಜವಾಗಿ ಜಪಾನನ್ನು ಇಲ್ಲಿ ಮೆಚ್ಚಬೇಕು! ೧೫ ನಿಮಿಷಕ್ಕೊಮ್ಮೆ ಶರವೇಗದ ರೈಲು; ೫-೬ ನಿಮಿಷಕ್ಕೊಂದು ಸಾಮಾನ್ಯ ರೈಲು; ೧೫ ನಿಮಿಷಕ್ಕೊಂದು ವೇಗದ ರೈಲು; ೨೦ ನಿಮಿಷಕ್ಕೊಂದು ಅತಿವೇಗದ ರೈಲು; ಅರ್ಧಗಂಟೆಗೊಂದು ಕಾದಿರಿಸಿದ ವಿಶೇಷ ರೈಲು! ಬೆಳಿಗ್ಗೆ ೫:೩೦ ಯಿಂದ ರಾತ್ರಿ ೧೨ ರವರೆಗೆ ನಿರಾಯಾಸವಾಗಿ ಓಡುತ್ತವೆ! ಭಲಾ! ಭೇಷ್! ಸಾರಿಗೆ ವ್ಯವಸ್ಥೆಯೆಂದರೆ ಇದು! ನೀವೆಲ್ಲೇ ಇರಿ; ೧೦ ನಿಮಿಷಕ್ಕಿಂತ ಹೆಚ್ಚು ಕಾಯಬೇಕಿಲ್ಲ! ನಿಗದಿಯಾದ ಸಮಯಕ್ಕೆ ಸರಿಯಾಗಿ ರೈಲು ಬಂದೇ ಬರುತ್ತದೆ; ಶತಸ್ಸಿದ್ಧ! ಇಡೀ ದೇಶವೇ ವಿರಮಿಸುವ ಶನಿ-ಭಾನುವಾರ ವಿಶೇಷ ವೇಳಾಪಟ್ಟಿಯಾದರೂ, ಬೆಳಿಗ್ಗೆ ೬ ರಿಂದ ರಾತ್ರಿ ೧೨ ರವರೆಗೂ ಓಡಾಟಕ್ಕೆ ಯಾವ ತೊಂದರೆಯೂ ಆಗದು. ಜನದಟ್ಟಣೆಯ ಸಮಯದಲ್ಲಿ ೨ ನಿಮಿಷಕ್ಕೊಂದು ರೈಲಿದೆ! ನಿಲ್ದಾಣದಲ್ಲಿ ರೈಲು ನಿಲ್ಲುವುದು ಅರ್ಧ ನಿಮಿಷ ಮಾತ್ರ!

ಅತ್ಯದ್ಭುತ! ವೇಗದ ವಿಸ್ಮಯ! ಸಮಯಪಾಲನೆಯ ಅತ್ಯುತ್ತಮ ಉದಾಹರಣೆ! ಸುರಕ್ಷತೆಯ ಮೆರಗು! ಜಪಾನ್ ಹಳಿಬಂಡಿಯಷ್ಟೇ ಅಲ್ಲ; ಇಡೀ ಭೂಸಾರಿಗೆ ವ್ಯವಸ್ಥೆಯ ಅತ್ಯುತ್ತಮ ದೇಶ! ರೈಲಿನ ಕಥೆ ಮುಗಿಯುವುದೇ ಇಲ್ಲ ಬಿಡಿ! ಇಲ್ಲಿನ 'ಮೊನೊರೈಲ್' ಒಂದೇ ಹಳಿಯ ಮೇಲೆ ವಿದ್ಯುತ್ಕಾಂತೀಯ ಬಲದಿಂದೋಡುವ ಗಿನ್ನೆಸ್ ದಾಖಲೆಯ ಹಳಿಬಂಡಿ! ಇದು ಚಲಿಸುವಾಗ ಸದ್ದೇ ಕೇಳಿಸದು! ಕೇಬಲ್ ರೈಲಿನಲ್ಲಿ ಚಾಲಕನೇ ಇರುವುದಿಲ್ಲ; ಸಂಪೂರ್ಣ ಗಣಕೀಕೃತ! ಆದರೆ ಇಲ್ಲಿನ ಜೀವನ ಹಾಗಾಗಬಾರದು ಅಷ್ಟೇ! ಅಸಂಖ್ಯ ಹಳಿಗಳೇ ಧಮನಿಗಳಾಗಿ, ರೈಲು ನೆತ್ತರಾದಾಗ, ದೇಶ ನಿಜವಾಗಿಯೂ ಉಸಿರಾಡುತ್ತದೆ ಎಂದು ನನಗೆ ಈಗ ಚೆನ್ನಾಗಿ ಅರ್ಥವಾಯಿತು!

(ಮುಂದಿನಬಾರಿ: ೧೧. ಧರ್ಮರಹಿತ ನಾಡಿನಲ್ಲಿ ಶಾಸ್ತ್ರೀ)

~.~
  • benaka ರವರ ಬ್ಲಾಗ್
  • Login or register to post comments
  • 1308 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Google
  • Yahoo

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
December 16, 2006 - 6:42pm — Sunil Jayaprakash

ಪ್ರತಿ: ೧೦.ರೈಲಿನ ರಾಜ್ಯ

Sunil Jayaprakash's picture

ಈ ಜಪಾನೀ ರೈಲುಗಳ ಬಗ್ಗೆ ಎಷ್ಟು ಓದಿದರೂ ಸಾಲದು. ಎಷ್ಟು ಜನರು ಹೊಗಳುತ್ತಾರೆ ಗೊತ್ತೇ, ನಾನು ಕೂಡ ಹೋಗಿ ಬರಲೇಬೇಕು. ಅಂದ ಹಾಗೆ ಒಂದು ವಿಷಯ ಹೇಳಲಿಲ್ಲ ನೀವು. ಅಲ್ಲಿನ ಜನರು ರೈಲನ್ನು ಹೇಗೆ ಬಳಸುತ್ತಾರೆ. ನಮ್ಮ ಹಾಗೆ, ಕಡಲೇಕಾಯಿ ಸಿಪ್ಪೆ, ಸಿಗರೇಟು ಎಲ್ಲಾ ಬಿಸ್ಹಾಕುತ್ತಾರೆಯೇ ?

ರೈಲು ಎಂದೊಡನೆ ನನಗೆ ಒಂದು ಘಟನೆ ನೆನಪಾಗುವುದು(ನೆನಪಾಗುವವರು). ಒಮ್ಮೆ ರೈಲಿನಲ್ಲಿ ಹೋಗುತ್ತಿದ್ದಾಗ, ಕಿಟಕಿ ತೆರಯಬೇಕಿತ್ತು. ಸುಮ್ಮನೆ ಕಿಟಕಿಯನ್ನು ಮುಟ್ಟಿದೆ ಅಷ್ಟೇ ಕಣ್ರೀ, ಧಡಾರನೆ ನನ್ನ ಕೈಯನ್ನೇ ಕೆಳಗೆ ನೂಕಿ, ನನ್ನ ಕೈಯ ಮೇಲೆ ಧೊಪ್ಪನೆ ಬಿತ್ತು. ಏನಾಗಿತ್ತಪ್ಪ ಎಂದರೆ ಹಿಂದೆ ಬಳಸಿದ್ದವರು, ಕಿಟಕಿಯನ್ನು ಎತ್ತರಿಸಿದ್ದರಷ್ಟೇ, ಅದರ ಅಕ್ಕಪಕ್ಕ ಬರುವ ಸಣ್ಣ ಚಿಲಕಗಳನ್ನು ಹಾಕಿಯೇ ಇರಲಿಲ್ಲ. ನನ್ನ ಅಂಕೈ ನೋಡಬೇಕಿತ್ತು ಆಗ. ಹಸಿರು ಚಕ್ಕೋತ(ಹೋಗಲಿ ಬಿಡಿ, ಮೂಸಂಬಿ) ಹಣ್ಣಿನ ಗಾತ್ರದಷ್ಟು ಊದಿತ್ತು. ಅಂದಿನಿಂದ, ಯಾವಾಗಲೇ ರೈಲಿನ ಕಿಟಕಿಯನ್ನು ಬಳಸುವಾಗಲೂ ಸ್ವಲ್ಪ ಎಚ್ಚರಿಕೆಯಿಂದ ಬಳಸುತ್ತೇನೆ.

benaka wrote:
! ರೈಲಿನ ಕಥೆ ಮುಗಿಯುವುದೇ ಇಲ್ಲ ಬಿಡಿ!

ಒಂದು ರೀತಿಯಲ್ಲಿ, ಭಾರತೀಯ ರೈಲಿನ(ಅಥವಾ ಭಾರತೀಯರ ರೈಲುಗಳು Eye-wink ) ಕಥೆಯೂ ಮುಗಿಯುವುದೇ ಇಲ್ಲ. ಒಂದು ಮೆಟ್ರೋ ರೈಲಿಗೇ ಎಷ್ಟು ಪಡಬಾರದ ಫಜೀತಿ ಪಡುತ್ತಿದೆ ಬೆಂಗಳೂರು.

ಎಷ್ಟೋ ವೇಳಿ, ನಮ್ಮ ದೇಶದಲ್ಲಿ ರೈಲುಗಳು ಅದರ ಬಗೆಗಿನ ಸುದ್ಧಿಯಾಗುವುದಕ್ಕಿಂತ, ಅದಕ್ಕೆ ಹೊರತಾದ ವಿಷಯಗಳಿಗೆ ಸುದ್ಧಿಯಾಗುತ್ತವೆ.
೧. ಜೈಲಿಗೆ ಹೋಗಿ ಬಂದ ಲಾಲೂ ರೈಲ್ವೇ ಸಚಿವನಾಗುವುದು.
೨. ರೈಲ್ವೇ ಪ್ಲಾಟಫಾರಂಗಳಲ್ಲಿ ಮಡಕೆಯಲ್ಲಿ ನೀರು ಮಾರುವುದು.
೩. ರೈಲ್ವೆಯವರು ಕನ್ನಡ ವಿರೋಧಿ ನೀತಿ ಕೈಗೊಂಡಿರುವುದು. ಕನ್ನಡ ಫಲಕಗಳನ್ನು ಕಿತ್ತು ಹಾಕುವುದು, ಕನ್ನಡಿಗರನ್ನು ಕೆಲಸದಿಂದ ಹೊರದಬ್ಬುವುದು, ಹೀಗೆ.

ಇಷ್ಟೆಲ್ಲದರ ಮಧ್ಯೆಯೂ,
ಪ್ರೀತಿ ಇದ್ರೆ ರೈಲು ನಾನ್-ಸ್ಟಾಪು, ಇಲ್ಲದಿದ್ದೆ ನಾನಾ ಕಡೆ ಸ್ಟಾಪು. ಹಾಯ್ ಶಿವನೇ. ಚುಕುಬುಕು ಚುಕುಬುಕು ಚುಕುಬುಕು, ಹಾಯ್ ಚುಕುಬುಕು ಚುಕುಬುಕು ಚುಕುಬುಕು. Made in India, Made in India, ಹುಡುಗಿಗೋಸ್ಕ್ರ ಬಿಡ್ತಾನ್ ನೋಡು ರೈಲು ಬಂಡೀಯಾ...ಆಆಆಆಆಎಂಬ ಹಾಡು ಮಾತ್ರ ಆಟೋಗಳಲ್ಲಿರುವ ರೇಡಿಯೋಗಳಲ್ಲಿ ಕೇಳುತ್ತಲೇ ಇರುತ್ತದೆ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
December 19, 2006 - 7:12pm — benaka

ಜಪಾನಿನ ನಾಗರಿಕರು!

benaka's picture

ಸುನಿಲರೇ,
ಬಿಡುವಿಲ್ಲದ ಕೆಲಸಗಳಿದ್ದುದರಿಂದ ನಿಧಾನವಾಗಿ ಉತ್ತರಿಸುತ್ತಿದ್ದೇನೆ; ಕ್ಷಮೆಯಿರಲಿ.

ಜಪಾನಿನ ಜನರು ತಮ್ಮ ಪರಿಸರವನ್ನು ಬಹಳ ಅಚ್ಚುಕಟ್ಟಾಗಿ ಒಪ್ಪಮಾಡುವವರು; ಸಾರ್ವಜನಿಕ ಆಸ್ತಿ-ಪಾಸ್ತಿಗಳನ್ನು ಬಹಳ ಜೋಪಾನವಾಗಿ ಬಳಸುತ್ತಾರೆ. ತಮ್ಮ ಚಿಕ್ಕ ಮನೆಗಳನ್ನು ಚೊಕ್ಕವಾಗಿಡಲು ಹೆಣಗುವವರು ಇವರಾದರೂ, ಹೊರಾಂಗಣವನ್ನು ಶುದ್ಧವಾಗಿಡಲು ಎಲ್ಲ ರೀತಿಯಲ್ಲೂ ಸಹಕರಿಸುತ್ತಾರೆ. ಇವರ ನಾಗರಿಕ ನಡೆ-ನುಡಿಗಳು ಇಡೀ ಜಗತ್ತಿನಲ್ಲೇ ಅನುಕರಣೀಯ. ಉದಾಹರಣೆಗೆ ಹೇಳುವುದಾದರೆ:

ರೈಲಿನಲ್ಲಿ ತಲೆಕೆದರಿಕೊಂಡು ತೂತಾದ ಬಟ್ಟೆಯನ್ನು ಧರಿಸಿಕೊಂಡು ಓಡಾಡುವ ನವಯುವಕರು ಹೊರನೋಟಕ್ಕೆ ಅನಾಗರಿಕರಂತೆ ಕಂಡರೂ, ತಾವು ಕಚಕಚನೆ ಅಗಿಯುತ್ತಿದ್ದ ಅಗಿವಂಟು(ಚ್ಯೂಯಿಂಗ್ ಗಮ್) ತನ್ನ ರಸವನ್ನೆಲ್ಲಾ ಕಳೆದುಕೊಂಡರೆ, ಥೂ ಎಂದು ಅಲ್ಲೇ ಉಗಿಯದೆ, ಮೆಲ್ಲನೆ ತೆಗೆದು ಆಸನದ ತಳಕ್ಕೆ ಅಂಟಿಸದೆ, ಗೊತ್ತಿಲ್ಲದಂತೆ ಬೀಳಿಸುವ ನಾಟಕವನ್ನೂ ಮಾಡದೆ, ಎಸೆಯದೆ ಉಳಿಸಿಕೊಂಡ ಅಗಿವಂಟಿನ ಕಾಗದದ ಕವಚವನ್ನು ಜೇಬಿನಿಂದ ತೆಗೆದು ಅದರೊಳಗೆ ಉಗಿದು ಉಂಡೆ ಕಟ್ಟಿ ಮತ್ತೆ ಜೇಬಿನಲ್ಲಿ ಸೇರಿಸುವ ನಾಗರಿಕರು!

ಕಡಲೆಸಿಪ್ಪೆ, ಅಗಿವಂಟು, ಟೀ ಪಾನೀಯದ ಡಬ್ಬಿ ಹಾಗಿರಲಿ, ವರುಷವೆಲ್ಲಾ ಮಳೆ ಜಡಿಯುವ ಇಲ್ಲಿ, ರೈಲಿನೊಳಗೆ ಕೊಚ್ಚೆಯ ಸುಳಿವೂ ಕಾಣಸಿಗದು!ನಿಲ್ದಾಣದ ಬಾಗಿಲಿನಲ್ಲಿ ಕಸದ ಡಬ್ಬಿಯಿದ್ದು ಎಲ್ಲರೂ ಸರಿಯಾಗಿ ಪ್ಲಾಸ್ಟಿಕ್ - ಉರುವಲು - ಪುನರಾವರ್ತನ ಕಸಗಳನ್ನು ಬೇರೆ ಬೇರೆಯಾಗಿ, ಆಯಾ ಡಬ್ಬಿಗಳಿಗೇ ಹಾಕುತ್ತಾರೆ.ರೈಲಿನೊಳಗಷ್ಟೇ ಅಲ್ಲ, ನಿಲ್ದಾಣದಲ್ಲೂ ಧೂಮಪಾನ ನಿಷಿದ್ಧ; ಅದನ್ನು ಮುರಿದ ವ್ಯಕ್ತಿಯನ್ನು ಇದುವರೆಗೂ ನಾನು ಕಂಡಿಲ್ಲ. ಕೆಲವು ನಿಲ್ದಾಣಗಳಲ್ಲಿ ಧೂಮಪಾನಕ್ಕಾಗಿಯೇ ಬೇರೆ ತಾಣದ ವ್ಯವಸ್ಥೆಯಿದೆ; ಅಲ್ಲಿ ಸೇದಿ ಬರುವವರನ್ನು ಕಂಡಿದ್ದೇನೆ. ಸಿಗರೇಟು ಬಿಸಾಡುವುದಿರಲಿ, ಬೂದಿ ಕೊಡವಲೂ ನಶ್ಯದ ಡಬ್ಬಿಯಂಥ ಸಣ್ಣ ಡಬ್ಬಿ ಇಟ್ಟಿರುವವರಿದ್ದಾರೆ!

ಇಲ್ಲಿಯವರ ನಾಗರಿಕ ಮನೋಭಾವ, ವಿನಯ, ವಿಧೇಯತೆ, ಶಿಸ್ತುಗಳ ಬಗ್ಗೆ ಮತ್ತೊಂದು ಅಧ್ಯಾಯ ಕಾದಿದೆ; ಅಲ್ಲಿ ವಿವರಿಸುತ್ತೇನೆ. ಇರಲಿ, ಎಲ್ಲ ನಿಯಮಗಳಿಗೂ ಅಪವಾದವಿದ್ದೇ ಇದೆಯಲ್ಲವೆ? ರೈಲಿನಲ್ಲಿ ಮಾಡಬಾರದ ಕೆಲಸಗಳನ್ನು ಮಾಡುವ ಜನರೂ ಇದ್ದಾರೆ; ಅದನ್ನೂ ಮುಂದೆ ವಿವರಿಸುತ್ತೇನೆ.

ನಿಮ್ಮವ

ಬೆನಕ

ಕನ್ನಡಪುಟ.ಬ್ಲಾಗ್‍ಸ್ಪಾಟ್.ಕಾಂ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ೪.ಶರವೇಗದ ಹಳಿಬಂಡಿಯನ್ನೇರಿ......
  • ಮುಂಬೈನ ಅತ್ಯಾಧುನಿಕ, ಹಾಗೂ ಅತ್ಯಾಕರ್ಷಕ ಲೋಕಲ್ ರೈಲು ಗಾಡಿಗಳು !
  • ಸುರಂಗದೊಳಗೆ ರೈಲು ನಿಂತಾಗ....
  • ಮಾರ್ಪಾಡು
  • ಕೈಗೆಟಕುತಿದೆ ರೈಲು
Syndicate content

ಲೇಖಕರು

benaka's picture

ಪರಿಚಯ

ಹೊಯ್ಸಳರ ವೈಭವದಿ ಮೆರೆದು
ಪರಕೀಯರ ದಾಳಿಗೆ ಕೈಮುರಿದು
ದಂತವ ಎಡದ ಕೈಯಲಿ ಹಿಡಿದು
ನವಭಾರತವ ಕನ್ನಡದಿ ಬರೆಯೆ ಕಾದಿಹ ಬೆನಕ ಮೈಮುರಿದು

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ವಾಟರ್ ಪೋರ್ಟಲ್: ದಿನದ ಚಿತ್ರ

ವಿದ್ಯುತ್ ಉಚಿತ, ಆದರೆ ನೀರಿಲ್ಲ!

(ಚಿತ್ರ: ಹರಿ ಪ್ರಸಾದ್ ನಾಡಿಗ್.)

ವಾರದ ಲೇಖನ
ವಿದ್ಯುತ್ ಉಚಿತ... ಷಾಕ್ ಖಚಿತ...!

ವಾರದ ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • Mailing Lists
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಬ್ಲಾಗ್ ಬರಹಗಳು

  • ಶರಣರ ಸಾವನ್ನು ಮರಣದಲ್ಲಿ ನೋಡು
  • ಸೇತುವೆ ಇತ್ತಂತೆ ರಾಮನೇ ಒಡದನಂತೆ....!
  • ಗೂಡು...
  • ಮುತ್ತಿನ-ಶೃಂಗಾರ
  • ನಾನಿರುವುದೆ ನಿಮಗಾಗಿ :REMIX
  • ಮಿಂಚಿನ ಓಟ
  • ಸಿಟಿಯ ಮೇಲಣ ಗುಳ್ಳೆ
  • ಕುಮಾರವ್ಯಾಸ ಭಾರತ
  • ಬನವಾಸಿ ಆಸುಪಾಸಿನ ಕನ್ನಡ
  • ಬಾರೋ ಸಾಧನಕೇರಿಗೆ...
ಇನ್ನಷ್ಟು

ಇತ್ತೀಚಿನ ಪ್ರತಿಕ್ರಿಯೆಗಳು

  • ಶ್ರೀನಿವಾಸ ವೀ. ಬ೦ಗೋಡಿ
    ಉ: ಇಂಟರ್ನೆಟ್ ಗಾಗಿ ಏನೆಲ್ಲ (೨)
    July 24, 2008 - 11:18am
  • srinivasps
    ಉ: ಸೇತುವೆ ಇತ್ತಂತೆ ರಾಮನೇ ಒಡದನಂತೆ....!
    July 24, 2008 - 10:46am
  • srinivasps
    ಉ: ಸೇತುವೆ ಇತ್ತಂತೆ ರಾಮನೇ ಒಡದನಂತೆ....!
    July 24, 2008 - 10:40am
  • mahesha
    ಉ: ಸೇತುವೆ ಇತ್ತಂತೆ ರಾಮನೇ ಒಡದನಂತೆ....!
    July 24, 2008 - 10:37am
  • srinivasps
    ಉ: ಸೇತುವೆ ಇತ್ತಂತೆ ರಾಮನೇ ಒಡದನಂತೆ....!
    July 24, 2008 - 10:34am
  • mahesha
    ಉ: ಭಾಷಾಲ್ಪಸಂಖ್ಯಾತರಿಗೆ ಮುಖ್ಯಮಂತ್ರಿಗಳ ಆಯವ್ಯಯದ ಕೊಡುಗೆ
    July 24, 2008 - 10:25am
  • shaamala
    ಉ: ‘ತಂಪು’ಪಾನೀಯ ಕಂಪನಿಯ ಒಡಲು ‘ಉರಿಸು’ವ ಬಗೆ!
    July 24, 2008 - 10:23am
  • keerthi2kiran
    ಉ: ಏಳಿ ಎದ್ದೇಳಿ ಟ್ರೆಕಿಂಗ್ ಮಾಡಲು ಸಿದ್ಧರಾಗಿ
    July 24, 2008 - 10:07am
  • kannadakanda
    ಉ: ಪೞಗು, ಪೞೆ(ಹೞೆ)
    July 24, 2008 - 9:52am
  • spruhi
    ಉ: ಏಳಿ ಎದ್ದೇಳಿ ಟ್ರೆಕಿಂಗ್ ಮಾಡಲು ಸಿದ್ಧರಾಗಿ
    July 24, 2008 - 9:50am
ಇನ್ನಷ್ಟು
ಈಗಿನಂತೆ 10 ಸದಸ್ಯರು ಮತ್ತು 44 ಅತಿಥಿಗಳು ಆನ್ಲೈನ್ ಇರುವರು.


ನೀವು ಮಾನವೀಯತೆಯಲ್ಲಿ ನಂಬಿಕೆಯನ್ನು ಎಂದಿಗೂ ಕಳೆದುಕೊಳ್ಳಬಾರದು. ಮಾನವೀಯತೆಯು ಸಮುದ್ರದಂತೆ; ಕೆಲ ಹನಿಗಳು ಅಪವಿತ್ರಗೊಂಡರೆ, ಸಮುದ್ರವೇ ಅಪವಿತ್ರವಾಗುವುದಿಲ್ಲ.

— ಮಹಾತ್ಮ ಗಾಂಧಿ

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator