ಕೆಟ್ಟ ಸಾಹಿತ್ಯವು ಒಂದು ರೀತಿಯ ದೇಶ ದ್ರೋಹ.

— ಜೇಮ್ಸ್ ಬ್ರಾಡ್‌ಸ್ಕಿ

ಕೃಷಿ ಸಂಪದ: ಫೆಬ್ರವರಿ ಸಂಚಿಕೆ

Krushi Sampada 5th Edition

೧೧.ಧರ್ಮರಹಿತ ನಾಡಿನಲ್ಲಿ ಶಾಸ್ತ್ರೀ

ನನ್ನ ಜಪಾನ್ ಪ್ರವಾಸ: ೧೧.ಧರ್ಮರಹಿತ ನಾಡಿನಲ್ಲಿ ಶಾಸ್ತ್ರೀ

ಹೆಸರಲ್ಲೇನಿದೆ? ಎನ್ನುವವರಿರಬಹುದು; ಹೆಸರಲ್ಲೇ ಎಲ್ಲವೂ ಅಡಗಿದೆ ಎನ್ನುವವರೂ ಇರಬಹುದು. ಜಪಾನೀಯರ ಹೆಸರಿನಲ್ಲಿ ನನಗೆ ಮಾತ್ರ ನಗುವಿದೆ! ಹೆಸರು ಆಯಾ ಭಾಷೆಯ, ಪ್ರದೇಶದ ವೈಶಿಷ್ಟ್ಯ; ಅದರಲ್ಲಿ ಅಪಹಾಸ್ಯ ಮಾಡುವುದು ಸರಿಯಲ್ಲ ಎನ್ನುವಿರೇನೋ. ಅಪಹಾಸ್ಯಕ್ಕಲ್ಲವಾದರೂ, ಕೆಲವೊಮ್ಮೆ ಕೆಲವು ಹೆಸರುಗಳನ್ನು ಕೇಳಿದೊಡನೆ ಅದರರ್ಥ ಕನ್ನಡದಲ್ಲಿ ಚಕ್ಕನೆ ಹೊಳೆದು ನಾಭಿಯಿಂದ ನಗೆಯುಕ್ಕಿಬರುತ್ತದೆ. ನದಿ ಮೂಲ, ಋಷಿ ಮೂಲ ಕೆದಕಬಾರದು; ಜಪಾನೀ ಹೆಸರಿನ ಅರ್ಥ ಹುಡುಕಬಾರದು ಅನ್ನುವುದು ನನಗೆ ಗೊತ್ತಿತ್ತು. ದಕ್ಷಿಣ-ಉತ್ತರ ಭಾರತದವರಿಗೇ ಪರಸ್ಪರ ನಗೆ ತರಿಸುವ ಭಾರತೀಯ ಹೆಸರುಗಳಿರುವಾಗ, ನನ್ನ ನಗೆಯ ಬಗೆಗೆ ಅಚ್ಚರಿಯೇನಿಲ್ಲ ಬಿಡಿ. ಮೊದಲ ಬಾರಿ ಬಸಪ್ಪ ಉಳ್ಳಾಗಡ್ಡಿ, ಶರಣಪ್ಪ ಮೆಣಸಿನಕಾಯಿ ಎಂದೆಲ್ಲ ಕೇಳಿದಾಗ ಬಿದ್ದು ಬಿದ್ದು ನಕ್ಕಿದ್ದೆ! ತರಕಾರಿಯ ಹೆಸರನ್ನು ಕುಟುಂಬ ನಾಮಧೇಯವಾಗಿ ಬಳಸುವ ಜನವಿದ್ದಾರೆಂದು ನನಗೆ ತಿಳಿದದ್ದೇ ಆಗ! ಆದರೆ ಅದರ ಹಿನ್ನೆಲೆಯನ್ನು ಹುಡುಕುವ ಮನಸ್ಸಾಗಿದ್ದು ಜಪಾನೀ ಹೆಸರುಗಳ ಹಿನ್ನೆಲೆ ತಿಳಿಯಲಾರಂಭಿಸಿದ ನಂತರ. ಏಕೆಂದರೆ ಜಪಾನೀ ಹೆಸರುಗಳೂ ಕನ್ನಡದಲ್ಲಿ 'ಕಲ್ಲುಬಾವಿ', 'ಕರಿಮರ', 'ದೊಡ್ಡಬಯಲು', 'ಎದುರುಗದ್ದೆ' ಇತ್ಯಾದಿ ಬೇಸಾಯ ಸಮುದಾಯದ ಹೆಸರುಗಳೇ!

ಜಪಾನೀಯರ ಹೆಸರಿನಲ್ಲಿ ಎರಡು ಭಾಗಗಳಿವೆ: ಕುಟುಂಬನಾಮ ಹಾಗೂ ನಿಜನಾಮ. ಕುಟುಂಬನಾಮ ಬಹುಶಃ ಕೃಷಿಕ ಸಮುದಾಯದ, ನಿಸರ್ಗದ ನಡುವಿನ ಅಥವಾ ಬೆಸ್ತ ಸಮುದಾಯದ ಹಿನ್ನೆಲೆ ಹೊಂದಿದ ಹೆಸರುಗಳು. ನಿಜನಾಮ ಅವರವರ ಸ್ವಂತ ಹೆಸರುಗಳು. ತನಕ, ಯಮದ, ತೊಯೊತ, ಮತ್ಸುದ, ಹೊಂದ, ಕವಸಕಿ ಇವೆಲ್ಲ ಕುಟುಂಬನಾಮಗಳು; ಹರುಒ, ಮಸತೊ, ತತ್ಸುಜಿ ಇತ್ಯಾದಿ ಗಂಡಸರ ಹೆಸರಾದರೆ ನತ್ಸುಎ, ಜುಂಕೊ, ಸೆತ್ಸುಕೊ ಇತ್ಯಾದಿ ಹೆಂಗಸರ ಹೆಸರುಗಳು. ಎವೆರೆಸ್ಟ್ ಶಿಖರವನ್ನೇರಿದ ಮೊದಲ ಮಹಿಳೆ ಜಪಾನಿನ 'ಜುಂಕೊ ತಬಿ' ಯಲ್ಲಿ ಜುಂಕೊ(=ಸುಕನ್ಯಾ) ಆಕೆಯ ಹೆಸರು; 'ತಬಿ'(=ಪ್ರವಾಸ) ಕುಟುಂಬನಾಮ. ಸಾಮಾನ್ಯವಾಗಿ ಎಲ್ಲರೂ ಕುಟುಂಬನಾಮವನ್ನೇ ಇಲ್ಲಿ ಬಳಸುವುದು, ವ್ಯವಹರಿಸುವುದು. ಸ್ಥಳದ ಹೆಸರೂ ಕುಟುಂಬನಾಮದಂತೆಯೇ ಇರುತ್ತದೆಯಾದ್ದರಿಂದ, ಹೆಸರಿಗೆ ಪ್ರಾದೇಶಿಕ ಸೊಗಡೂ ಇದೆ. ತೊಯೊತ ಎಂದರೆ 'ಫಲವತ್ತಾದ ಗದ್ದೆ', ಮತ್ಸುಶಿತ ಎಂದರೆ 'ಪೈನ್‍ಮರದ ಕೆಳಗೆ', ಕವಸಕಿ ಎಂದರೆ 'ನದಿಯ ಮುಂದೆ', ಸುಝುಕಿ ಎಂದರೆ 'ಗಂಟೆಮರ' ಇತ್ಯಾದಿ ಇತ್ಯಾದಿ.

ಇವೆಲ್ಲ ನಿಸರ್ಗದೊಸಗೆಯ ಹೆಸರುಗಳಾದ್ದರಿಂದ, ತಮಾಷೆಯೇನೂ ಇಲ್ಲ; ಆದರೆ 'ಓಜಿರಿ'(ದೊಡ್ಡಕುಂಡಿ), 'ಓಯ'(ದೊಡ್ಡಬಾಣ), 'ನೀಹೊರಿ'(ಹೊಸಹಳ್ಳ), 'ಕೊಇಝುಮಿ'(ಸಣ್ಣಬುಗ್ಗೆ) ಎಂಬ ಹೆಸರುಗಳ ಅರ್ಥ ಫಕ್ಕನೆ ಹೊಳೆದು, ಆ ವ್ಯಕ್ತಿಗಳ ಮುಖದೊಂದಿಗೆ ಕಲ್ಪಿಸಿಕೊಳ್ಳುತ್ತಲೇ ಅದೇಕೋ ನಗೆ ಕಾರಂಜಿಯಂತೆ ಚಿಮ್ಮಿಬರುತ್ತಿತ್ತು; ಈಗ ಅಭ್ಯಾಸವಾಗಿಹೋಗಿದೆಯೆನ್ನಿ. ಕೆಲವೊಮ್ಮೆ ಕೆಲವು ಹೆಸರುಗಳ ಅರ್ಥ ಹೊಳೆಯುವ ಮೊದಲೇ ಅದರ ಯಮಕ-ಪ್ರಾಸಗಳ ಸದ್ದಿಗೇ ನಗೆಯುಕ್ಕಿಬರುತ್ತಿತ್ತು. 'ಅಸಕುಸ'ದ ದೇಗುಲಕ್ಕೋ, 'ಅಕಸಕ'ದ ರಾಜಭವನಕ್ಕೋ ಹೋಗಿಬಂದೆವೆಂದು ಮನೆಯವರಿಗೆ ದೂರವಾಣಿ ಕರೆಮಾಡಿದಾಗ ಹೇಳಿದರೆ, ಆ ಹೆಸರು ಕೇಳಿಯೇ ಮನೆಯವರು ಎರಡು ನಿಮಿಷ ನಕ್ಕ ಉದಾಹರಣೆಯೂ ಇಲ್ಲದಿಲ್ಲ. ಎಲ್ಲಕ್ಕಿಂತ ನಗೆ ಬರಿಸಿದ್ದೆಂದರೆ ಜಪಾನ್ ರಾಜಕುಟುಂಬದ ಹೆಸರುಗಳು. ವಿಸ್ಮಯವೆಂದರೆ, ಎಷ್ಟೋ ಜಪಾನೀಯರಿಗೇ ಅವರ ಚಕ್ರವರ್ತಿಯ ಹೆಸರು ತಿಳಿದಿರುವುದಿಲ್ಲ! ನಾನೂ ನಿಮ್ಮಂತೆಯೇ ತಲೆಕೊಡವಿ, ಕುತೂಹಲದಿಂದ ಜಪಾನೀ ಯುವತಿಯೊಬ್ಬಳನ್ನು ಕೇಳಿಯೇಬಿಟ್ಟೆ:

"ನಿಮ್ಮ ಚಕ್ರವರ್ತಿಯ ಹೆಸರೇನು?"

"ಹೇಏಏಏಏಏ.... ಚಕ್ರವರ್ತಿಯ ಹೆಸರೇ? ಒಳ್ಳೆ ತಮಾಷೆ ಪ್ರಶ್ನೆ ಕೇಳಿದಿರಿ; ಚಕ್ರವರ್ತಿಗೆ ಹೆಸರೆಲ್ಲಿದೆ?" ಎನ್ನುತ್ತಾ ರಾಗ ತೆಗೆದವಳೇ, "ತೆನ್ನೋ ವ ತೆನ್ನೋ ದಯೊ! [=ಚಕ್ರವರ್ತಿ ಚಕ್ರವರ್ತಿಯೇ ಕಣ್ರೀ!]" ಎನ್ನುತ್ತಾ ತಿಪ್ಪೆ ಸಾರಿಸಿಬಿಟ್ಟಳು.

ಅವಳೇನೋ ಬಿಟ್ಟಳು; ನಾನು ಬಿಡಬೇಕಲ್ಲ! ಎಲ್ಲೆಲ್ಲೋ ಅಂತರ್ಜಾಲದಲ್ಲಿ ಹುಡುಕಿ ತೆಗೆದೆ. ಚಕ್ರವರ್ತಿಗೆ ಕುಟುಂಬನಾಮವಿದ್ದರೂ, ಆನುವಂಶಿಕವಾಗಿ ಆ ಕುಟುಂಬದವರೇ ಚಕ್ರವರ್ತಿಗಳಾಗುವುದರಿಂದ ಕುಟುಂಬನಾಮ 'ಚಕ್ರವರ್ತಿ' ಎಂದೇ ಪ್ರಸಿದ್ಧ! ಆದರೆ ಅವರ ನಿಜನಾಮ ಹಾಗೂ ರಾಜನಾಮ ಎರಡೂ ಇವೆ. ಚಕ್ರವರ್ತಿ 'ಹಿರೊಹಿತೊ' ನ ಮಗ 'ಅಕಿಹಿತೊ' ಎನ್ನುವಾಗಲಂತೂ ಗಿರಣಿಯಿಂದ ಅಕ್ಕಿ ಹಿಟ್ಟು ಉದುರುವ ಚಿತ್ರವೇ ಕಣ್ಣ ಮುಂದೆ ಮೂಡುತ್ತದೆ. ರಾಜಪುತ್ರನೂ ಹಿಟ್ಟೇ - 'ನರುಹಿತೊ'! ಎರಡನೇ ಸೊಸೆಯ ಹೆಸರು 'ಕಿಕೊ'; ಅವಳ ಇಬ್ಬರು ಹೆಣ್ಣು ಮಕ್ಕಳು - 'ಕಕೊ' ಮತ್ತು 'ಮಕೊ'! ಬಿದ್ದು ಬಿದ್ದೂ ನಕ್ಕೆ; ನೋಯುತಿದೆ ಪಕ್ಕೆ!

ಸರಿ, ವಿಷಯಕ್ಕೆ ಬರೋಣ. ತಮ್ಮ ಹೆಸರುಗಳು ಹೀಗಿರುವುದು ಜಪಾನೀಯರಿಗೆ ತೊಂದರೆಯೇ ಅಲ್ಲ; ನಮ್ಮಲ್ಲಿ 'ರಾಮಪ್ಪ ದೊಡ್ಡೇರಿ' ಹೇಗೋ ಅಲ್ಲಿ 'ತರೋ ಇಕೆದ' ಹಾಗೆಯೇ. ಅಪ್ಪಿ ತಪ್ಪಿಯೂ ಅವರಿಗೆ 'ಮಧ್ಯನಾಮ' ಇರುವುದಿಲ್ಲ - ಹಣೆಯಲ್ಲಲ್ಲ - ಹೆಸರಲ್ಲಿ! ಆದ್ದರಿಂದ ಮಧ್ಯನಾಮದ ಬಗ್ಗೆ ಅವರಿಗೆ ತಿಳಿಸಿ ಹೇಳಲು ಸಾಕು ಸಾಕಾಯಿತು. 'ಚಿಕ್ಕನಾಯ್ಕನಹಳ್ಳಿ ಶಂಕರ ಬೆನಕ' ಎಂಬುದರಲ್ಲಿ ನನ್ನ ಹೆಸರಾವುದು ಎಂಬುದೇ ಜಪಾನೀಯರಿಗೆ ಸಮಸ್ಯೆ! ನನ್ನ ಮೇಲಧಿಕಾರಿಗೆ ಹೇಳುತ್ತಿದ್ದೆ:

"ಮೊದಲನೆಯದು ಹುಟ್ಟೂರಿನ ಹೆಸರು, ಎರಡನೆಯದು ತಂದೆಯ ಹೆಸರು, ಕೊನೆಯದು ನನ್ನದು" ಎಂದು ವಿವರಣೆ ನೀಡಿದೆ.

"ನಿಮ್ಮ ಹುಟ್ಟೂರು... ಚಿಕ್..ಚಿಕ... ಅದು ಯಾವುದಕ್ಕೆ ಪ್ರಸಿದ್ಧಿ?" ಕಣ್ಮುಂದೆ ಕರಟದ ಚಿತ್ರ ಸುಳಿದುಹೋಯಿತು.

"ಹುಟ್ಟೂರೆಂದರೆ ಹುಟ್ಟೂರಲ್ಲ..ನಮ್ಮ ಪೂರ್ವಿಕರಿದ್ದ ಊರಂತೆ...ಸದ್ಯಕ್ಕದೇ ಕುಟುಂಬನಾಮ" ಎಂದವನೇ " ಆದರೆ ಭಾರತದಲ್ಲೆಲ್ಲಾ ನಿಜನಾಮವನ್ನೇ ಕೂಗುವಾಗ ಬಳಸುವುದು" ಎಂದು ವಿವರಣೆ ಕೊಟ್ಟೆ.

"ನಮ್ಮಲ್ಲಿ ಒಬ್ಬರಿದ್ದಾರೆ ಆನಂದ ಕುಮಾರು...ಅವರಿಗೆ ಮಧ್ಯನಾಮ ಇಲ್ಲವಲ್ಲ....."

ತಲೆಕೆರೆದುಕೊಳ್ಳುತ್ತಾ, "ಭಾರತದಲ್ಲಿ ಒಂದು, ಎರಡು, ಮೂರು, ನಾಲ್ಕು..ಇನ್ನೂ ಬೇಕಾದಷ್ಟು ಪದಗಳಿರುವ ಹೆಸರುಗಳೂ ಇವೆ.."

ಅವನಿಗೆ ಅರ್ಥವಾಗಲಿಲ್ಲ; ಮಿಕಿಮಿಕಿ ನೋಡಿದ. ಮುಂದುವರೆಸಿದೆ "..ಅಂದರೆ ನಿಮ್ಮನ್ನು ಏನೆಂದು ಕರೆಯಬೇಕು ಎಂದು ಅವರನ್ನೇ ಕೇಳಿಬಿಡುವುದು ಉತ್ತಮ"

"ಓ! ಹಾಗೋ! ಸರಿ ಸರಿ.. ನಿಮ್ಮನ್ನು ಬೆನಕ ಎನ್ನಲೇ? ಕುಟುಂಬನಾಮವಿದ್ದರೆ ಚೆನ್ನಿತ್ತು..."

"ಸದ್ಯ ಅಷ್ಟು ಮಾಡಿ ಪುಣ್ಯ ಕಟ್ಟಿಕೋ ತಂದೇ! ವಿಮಾನದ ಆರೋಹಣಪತ್ರದಲ್ಲಿ ಪ್ರತಿಬಾರಿ ನನ್ನ ಹೆಸರು ಚಿಕ್ನಾಯ್ಕನಹಳ್ಳಿ ಅಂತ ಓದಿ ಓದಿ ಸಾಕಾಗಿದೆ" ಗೊಣಗಿಕೊಂಡೆ.

ಅಷ್ಟರಲ್ಲಿ ಅದೆಲ್ಲಿದ್ದನೋ ನನ್ನ ಸಹೋದ್ಯೋಗಿ ವೆರ್ಣೇಕರ ಮುಸಿಮುಸಿ ನಗುತ್ತಾ ಬಂದವನೇ ಮಧ್ಯ ಬಾಯಿ ಹಾಕಿದ:

"ನೀವು ಇವನ ಕುಟುಂಬನಾಮ ಕೇಳಿದಿರಿ ಅಲ್ಲವೇ - ನಾವೆಲ್ಲ ಶಾಸ್ತ್ರೀ ಎನ್ನುತ್ತೇವೆ" ಎಂದ. ನಾನು ತಲೆದೂಗಿ ನಸುನಕ್ಕೆ.

"ಶಸು..ತೊರಿ?.." 'ಚಿಕ್ನಾಯ್ಕನಹಳ್ಳಿ'ಗಿಂತ ಚಿಕ್ಕದಾದರೂ ಬಾಯಿ ಹೊರಳಲಿಲ್ಲ. ಕಷ್ಟಪಟ್ಟು ಅಭ್ಯಾಸ ಮಾಡಿಕೊಂಡ! ಅಂತೂ ಧರ್ಮರಹಿತ ನಾಡಿನಲ್ಲಿ ನನ್ನನ್ನು ಎಲ್ಲರೂ 'ಶಾಸ್ತ್ರೀ' ಎನ್ನುವಂತೆ ಮಾಡಿಬಿಟ್ಟ ವೆರ್ಣೇಕರ. ಅವನಿಟ್ಟ ಹೆಸರೇ ಉಳಿದುಕೊಂಡಿತು! ಸಾಲದ್ದಕ್ಕೆ ನಾನು ಜ್ಯೋತಿಷಿಯೆಂದೂ ಎಲ್ಲರಿಗೆ ಹೇಳಿಕೊಂಡೂ ಬಂದ! ಅವನು ಹೇಳಿದ್ದಷ್ಟೇ ಬಂತು! ಧರ್ಮಕ್ಕೇ ಬೆಲೆಯಿಲ್ಲದ ಈ ನವೀನ ನಾಡಿನಲ್ಲಿ ನನ್ನ ಪಂಚಾಂಗಕ್ಕೆ ಕೆಲಸವಿದೆಯೇ? ನಿಟ್ಟುಸಿರಿಟ್ಟೆ.

(ಮುಂದಿನ ಬಾರಿ: ೧೨. ನಾ ತಿಂದ ನಾನು)

No votes yet

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.

೧೧.ಧರ್ಮರಹಿತ ನಾಡಿನಲ್ಲಿ ಶಾಸ್ತ್ರೀ

benaka's picture

ಈ ಬಾರಿ ಅತೀವ ಕೆಲಸದೊತ್ತಡದಿಂದ ಭಾಗ-೧೧ ತಡವಾಗಿ ಬಲೆಯೇರಿದೆ; ನಿಮ್ಮೆಲ್ಲರ ಪ್ರೋತ್ಸಾಹ ಎಂದಿನಂತೆ ಸಿಗಲೆಂದು ಆಶಿಸುತ್ತೇನೆ.
ಭಾಗ-೧೨: ನಾ ತಿಂದ ನಾನು - ಇಷ್ಟರಲ್ಲೇ ಸಿದ್ಧವಾಗಲಿದೆ.

ಬೆನಕ

ಕನ್ನಡಪುಟ.ಬ್ಲಾಗ್‍ಸ್ಪಾಟ್.ಕಾಂ.

Re: ೧೧.ಧರ್ಮರಹಿತ ನಾಡಿನಲ್ಲಿ ಶಾಸ್ತ್ರೀ

Prabhu Murthy's picture

ನನ್ನ ಸಹೋದ್ಯೋಗಿಯೊಬ್ಬ ನಿಶಿಮುರ (ಕುಂ. ನಾ) ಅಂತ ಇದ್ದ. ಅವನ ಪ್ರಕಾರ ಹಾಗಂದ್ರ್ರೆ ವೆಸ್ಟರ್ನ್ ಸೀ ಅಂತೆ.  ಹಾಗೆ ಹೇಳಿದಾಗಿನಿಂದ "ನಿಶಿಮುರ-ಸಾನ್" ಅನ್ನೋವಾಗೆಲ್ಲಾ ಒಳಗೆ "ಪಡುವಣಗಡಲ್ ರವರೆ" ಅಂತ ಒಳಗೆ ಹೇಳ್ಕೋತಾ ಇರ್ತಿದ್ದೆ. ನಿಮ್ಮ ಬ್ಲಾಗ್ ತುಂಬಾ ಹಿಡಿಸಿತು. ಇಲ್ಲಿ ನಿಮ್ಮ ಹಲವಾರು ಕವನಗಳನ್ನು ಓದಿದ್ದೇನೆ. ತುಂಬಾ ಚೆನ್ನಾಗಿವೆ. ನಿಮ್ಮ ಮುಂದಿನ "ಬ್ಲಾಗಿನ"ದಲ್ಲಿ ಮತ್ತೆ ಸಿಗುವ, ಶಾಸ್ತ್ರೀ -ಸಾನ್.

 ಪ್ರಭು ಮೂರ್ತಿ

Re: ೧೧.ಧರ್ಮರಹಿತ ನಾಡಿನಲ್ಲಿ ಶಾಸ್ತ್ರೀ

benaka's picture

ಧನ್ಯವಾದಗಳು ಮೂರ್ತಿಗಳೇ!
ನಿಶಿಮುರ ಎಂದರೆ - ಪಡುವಣದ ಹಳ್ಳಿ = ಪಶ್ಚಿಮಗ್ರಾಮ ಎಂದರ್ಥ. "ಮುರ" ಎಂದರೆ ಹಳ್ಳಿ. ಪಡುವಣದ ಕಡಲಿಗಿಂತ ಇಲ್ಲಿ ಪ್ರಸಿದ್ಧವಾದುದು - ತೆಂಕಣಗಡಲ್ = ನಾನ್‍ಕಾಯ್ ಎಂಬ ಹೆಸರು!

ಮತ್ತೆ ಸಿಗೋಣ

ಬೆನಕ

ಕನ್ನಡಪುಟ.ಬ್ಲಾಗ್‍ಸ್ಪಾಟ್.ಕಾಂ.

ಸೊಗಸಾಗಿದೆ: ೧೧.ಧರ್ಮರಹಿತ ನಾಡಿನಲ್ಲಿ ಶಾಸ್ತ್ರೀ

Shyam Kishore's picture

ಬೆನಕರವರೇ,

ಬೆನಕ wrote:
ಚಕ್ರವರ್ತಿ 'ಹಿರೊಹಿತೊ' ನ ಮಗ 'ಅಕಿಹಿತೊ' ಎನ್ನುವಾಗಲಂತೂ ಗಿರಣಿಯಿಂದ ಅಕ್ಕಿ ಹಿಟ್ಟು ಉದುರುವ ಚಿತ್ರವೇ ಕಣ್ಣ ಮುಂದೆ ಮೂಡುತ್ತದೆ. ರಾಜಪುತ್ರನೂ ಹಿಟ್ಟೇ - 'ನರುಹಿತೊ'! ಎರಡನೇ ಸೊಸೆಯ ಹೆಸರು 'ಕಿಕೊ'; ಅವಳ ಇಬ್ಬರು ಹೆಣ್ಣು ಮಕ್ಕಳು - 'ಕಕೊ' ಮತ್ತು 'ಮಕೊ'! ಬಿದ್ದು ಬಿದ್ದೂ ನಕ್ಕೆ; ನೋಯುತಿದೆ ಪಕ್ಕೆ!

ಈ ಅಧ್ಯಾಯ ಒಟ್ಟಾರೆ ಬಹಳ ಸೊಗಸಾಗಿ ಮೂಡಿಬಂದಿದೆ. ಮೇಲಿನ ಸಾಲುಗಳನ್ನು ಓದಿ ನಾನೂ ಬಿದ್ದೂ ಬಿದ್ದೂ ನಕ್ಕೆ. ತಿಳಿಹಾಸ್ಯದ ಜೊತೆಗೇ ಒಂದಷ್ಟು ಹೊಸ ವಿಚಾರಗಳನ್ನು ಕೂಡ ನಮ್ಮ ಮುಂದೆ ಹರಡಿದ್ದೀರಿ. ಹೀಗೇ ಬರೆಯುತ್ತಿರಿ.

- ಶ್ಯಾಮ್ ಕಿಶೋರ್ (ಒಲವೆ ಜೀವನ ಸಾಕ್ಷಾತ್ಕಾರ)

 

Re: ಸೊಗಸಾಗಿದೆ: ೧೧.ಧರ್ಮರಹಿತ ನಾಡಿನಲ್ಲಿ ಶಾಸ್ತ್ರೀ

benaka's picture

ಧನ್ಯವಾದಗಳು!
ಹಿಂದೊಮ್ಮೆ ಬರೆದಿದ್ದೆ ಎನಿಸುತ್ತದೆ - ಚಕ್ರವರ್ತಿಗೆ ಮೊಮ್ಮಗ ಹುಟ್ಟಿದ ವಿಚಾರ; ಆಗ ನಾನು ಅರಮನೆಯ ಹತ್ತಿರವೇ ಕೆಲಸ ಮಾಡುತ್ತಿದ್ದೆ. ಪುತ್ರಸಮೇತನಾಗಿ ಎರಡನೆಯ ರಾಜಪುತ್ರ -ಪತ್ನಿ ಅರಮನೆಗೆ ಹೊರಟಾಗ ನಾನೂ ಕಣ್ಣಾರೆ ಅವರನ್ನು ಹತ್ತಿರದಿಂದ ನೋಡಿದೆ. ಅಂದರೆ, ಇನ್ನೆರಡು ಹಿಟ್ಟುಗಳು ! ಅಪ್ಪ ಫುಮಿಹಿತೊ! ಮಗ ಹಿಸಹಿತೊ! ನಾನು ಗಹಗಹಿಸಿ ಹಸಿತೋ.....!

ಮತ್ತೆ ಬ್ಲಾಗುವೆ

ಬೆನಕ

ಕನ್ನಡಪುಟ.ಬ್ಲಾಗ್‍ಸ್ಪಾಟ್.ಕಾಂ.