18
May
2013

What's new on Sampada?  ಉತ್ತಮ ಬರಹಗಾರರಿಗೆ ಸಂಪದ ಪ್ರಶಸ್ತಿ. ಹೆಚ್ಚಿನ ಮಾಹಿತಿಗೆ ಇಲ್ಲಿ ಕ್ಲಿಕ್ ಮಾಡಿ.

೨.೨. ಜಪಾನಿನಲ್ಲಿ ಮೊದಲ ದಿನ : ಮನೆ

May 24, 2006 - 5:12pm
benaka
ನನ್ನ ಜಪಾನ್ ಪ್ರವಾಸ : ೨. ಜಪಾನಿನಲ್ಲಿ ಮೊದಲ ದಿನ - ಮನೆ "ತಡಿಯೋ, ನೋಡೀಗ" ಎಂದವನೇ "ದೊಚಿರಮೋ ನಿಕುನಾಶಿದೆ ಒನೆಗಾಯ್ ಶಿಮಾಸ್"[ಎರಡನ್ನೂ ಮಾಂಸರಹಿತವಾಗಿ ದಯಪಾಲಿಸಿ] ಎಂದ! ಅಲ್ಲಿದ್ದ ಕೌಂಟರಿನ ಹುಡುಗಿ ಆಶ್ಚರ್ಯದಿಂದ ಕಣ್ಣರಳಿಸಿ ನಮ್ಮನ್ನು ನೋಡಿ ಒಂದು ಕ್ಷಣ ಏನೂ ತೋಚದೆ "ಶೋ ಶೋ ಒಮಾಚಿಕುದಸಾಯ್"[ದಯವಿಟ್ಟು ಸ್ವಲ್ಪ ಕಾದಿರಿ] ಎಂದವಳೇ ಒಳಗೆ ಓಡಿ, ಹಿರಿಯನೊಬ್ಬನನ್ನು ಕೇಳಿದಳು. ನಾನು ವೆಂಕಟನ ಮುಖ ನೋಡಿದೆ! ಅವನು ನಿರ್ಲಿಪ್ತನಾಗಿದ್ದ! ಒಳಗಿನಿಂದ ಗಂಡು ದನಿಯೊಂದು "ಹಾಂಬಾಗಾ ಫುತಾತ್ಸು ಮೀತೊ ಕತ್ತೊ..."[ಹ್ಯಾಂಬರ್ಗರ್ ಎರಡು ಮೀಟ್ ಕಟ್] ಎಂದದ್ದೂ, ಅದಕ್ಕೆ ಅಲ್ಲಿದ್ದ ಹುಡುಗಿಯರು ಪುಸಕ್ಕನೆ ನಕ್ಕಿದ್ದೂ, ಮುಸಿಮುಸಿ ನಗುತ್ತಾ ನಮ್ಮೆಡೆ ಕಿರುನೋಟ ಬೀರಿದ್ದೂ ಆಯಿತು. ವೆಂಕಟ ಮುಗುಳ್ನಗುತ್ತಾ, "ಇವೆಲ್ಲಾ ಇದ್ದದ್ದೇ" ಎನ್ನುತ್ತಾ, ಬಳಿ ಬಂದ ತಿನಿಸನ್ನೆತ್ತಿಕೊಂಡು ಮೇಜಿಗೆ ನಡೆದ! ಆದರೂ ತಿನ್ನಲು ಅನುಮಾನ; ತೆರೆದು ನೋಡಿದೆ. ಒಳಗಿದ್ದುದು ಎರಡು ಬರ್ಗರ್ ಬನ್ನುಗಳ ಮಧ್ಯೆ ಸೌತೆಕಾಯಿ, ಟೊಮೆಟೊ ಸಾಸ್ ಹಾಕಿ ಮಾಡಿದ ಸ್ಯಾಂಡ್ವಿಚ್ಚು! ಗಬಗಬನೆ ತಿಂದು ತಂಪು ಕೋಲಾ ಕುಡಿದೆ. ಜೀವಸಂಚಾರವಾಯಿತು. ಮನೆಗೆ ಹೊರಟೆವು. ದಾರಿಯುದ್ದಕ್ಕೂ, ರೈಲಿನಲ್ಲೂ ಅದೂ ಇದೂ ಮಾತಾಡುತ್ತಾ, ಪ್ರಯಾಣದ ವಿವರವನ್ನೆಲ್ಲ ಹೇಳಿದೆ. ಅವರಿಬ್ಬರೂ ಕೆಲಸದ ವಿಚಾರ ಮಾತನಾಡುತ್ತಿದ್ದರು; ನಾನು ಹ್ಞೂಂಗುಟ್ಟಿದೆ. ಪಾಪ,ವೆಂಕಟ ನನ್ನ ಲಗೇಜನ್ನು ರೈಲು ನಿಲ್ದಾಣದಿಂದ ಅವನೇ ಹೊತ್ತು ಅಲ್ಲ ಎಳೆದು ತಂದ. ನಾನು ಕೈಚೀಲ ಹಿಡಿದು ಬಂದೆ. ನಿಲ್ದಾಣದಿಂದ ಮನೆಗೆ ಸುಮಾರು ೧೦ ನಿಮಿಷ; ಈಗಲೇ ನಾನು ಜಪಾನಿನ ಹವೆ ಸವಿದದ್ದು. ಏಕೆಂದರೆ ಅಲ್ಲಿಯವರೆಗೂ ವಿಮಾನ ನಿಲ್ದಾಣ - ರೈಲುನಿಲ್ದಾಣ - ರೈಲು ಎಲ್ಲವೂ ಹವಾನಿಯಂತ್ರಿತ! ಮಾರ್ಚ್ ತಿಂಗಳು ಮುಗಿಯುತ್ತಿದ್ದರೂ ಬಿಸಿಲು ಅಷ್ಟೇನೂ ಬಿಸಿಯೆನಿಸಲಿಲ್ಲ. ಎಲ್ಲೋ ತಿರುಗಿದೆವು; ಎಲ್ಲೋ ನಡೆದೆವು; ಎಡಬಲ ಏ.......ನೂ ಗೊತ್ತಾಗಲಿಲ್ಲ. ನಮ್ಮ ಸೌಧದ ಬಳಿ ಬರುತ್ತಿದ್ದಾಗಲೇ ೪-೫ ಜನ ಭಾರತೀಯರು ಕಂಡರು. ಎಲ್ಲಾ ಪರಿಚಯದವರೇ! "ಹಲೋ! ಯಾವಾಗ ಬಂದೆಯೋ" ಎಂದೇನೂ ಕೇಳದೆ, ಅವರ ಪಾಡಿಗೆ "ಬನ್ರೋ, ಬನ್ರೋ" ಎಂದುಕೊಂಡು ಎಲ್ಲೋ ಹೊರಟಿದ್ದರು. ಎಲ್ಲಾ ನನ್ನ ಕಚೇರಿಯವರೇ, ಬೆಂಗಳೂರಿನಲ್ಲಿ ಆರು ತಿಂಗಳು ನನ್ನ ಜೊತೆಯಿದ್ದವರೇ, ಕರ್ನಾಟಕದ ಶುದ್ಧ ಕನ್ನಡಿಗರೇ! ಪಾಠ-೧: "ಜಪಾನಿನಲ್ಲಿ ನನ್ನ ಕೆಲಸ ನನಗೆ; ಬೇರೆಯವರ ಸುದ್ದಿ ನನಗೇಕೆ?" ನನಗೆ ನಂಬಲಾಗಲಿಲ್ಲ! ಸ್ವಾಗತಮಾಡಿ ಆರತಿಯೆತ್ತುವುದೇನೂ ಬೇಕಿಲ್ಲ; ಕೇವಲ ತುಟಿಬಿರಿದು ಮುಗುಳ್ನಕ್ಕಿದ್ದರೂ ಸಾಕಿತ್ತು. ವೆಂಕಟ ನನ್ನೆಡೆ ನೋಡಿ ನಕ್ಕ; ನನಗರ್ಥವಾಯಿತು! ಸ್ವಲ್ಪ ದುರಹಂಕಾರಿಗಳಾಗಿದ್ದರೆಂಬುದು ಸತ್ಯ; ಏಕೋ ನಾನರಿಯೆ. ಅದಕ್ಕೆ ನಾನಿಟ್ಟ ಹೆಸರು - 'ವಿದೇಶೀ ಮದ' - ಏಕೆಂದು ನನಗೂ ಅರ್ಥವಾಗಿಲ್ಲ ಬಿಡಿ. ಅಷ್ಟರಲ್ಲಿ ವೆಂಕಟ LeoPalace(ಸಿಂಹದರಮನೆ!)ಸೌಧದ ಮಹಡಿಗೆ ಕರೆದೊಯ್ದ; ನನಗಾಗಿ ಮಹಡಿಯ ಅಟ್ಟದ ಕೋಣೆ .. ಅಲ್ಲಲ್ಲ .. ಕೋಣೆಯ ಅಟ್ಟ ಸಿದ್ಧವಿತ್ತು! ನನಗೆ ಆಶ್ಚರ್ಯ ಕಾದಿತ್ತು! ಮನೆಯ ವಿಸ್ತೀರ್ಣ ಕೇವಲ ೪ ಮೀ ಅಗಲ, ಉದ್ದ ೫ ಮೀ. ಅಷ್ಟರಲ್ಲೇ ಅಡಿಗೆಮನೆ, ಬಚ್ಚಲು, ಶೌಚಾಲಯ, ಕಪಾಟು(ವಾರ್ಡ್ರೋಬು), ಅಟ್ಟ, ಏಣಿ, ಹವಾನಿಯಂತ್ರಕ, ತಂಗಳುಪೆಟ್ಟಿಗೆ-ಶೀತಪೆಟ್ಟಿಗೆ, ಉಷ್ಣವಿಕಿರಣದ ಬಿಸಿಪೆಟ್ಟಿಗೆ(ಮೈಕ್ರೋವೇವ್ ಓವನ್), ದೂರದರ್ಶನ - ಸಕಲವೂ ಇತ್ತು! ಹೊರಗೆ ಸ್ವಲ್ಪ ಓಣಿಯಿದ್ದು, ಬಟ್ಟೆ ಹರವಲು ಜಾಗವೂ, ಒಗೆತಯಂತ್ರ(ವಾಷಿಂಗ್ ಮಷೀನ್)ವೂ ಇತ್ತು! ನಾವಿರುವುದೂ ಅಲ್ಲಿಯೇ ಎಂಬುದು ಗೊತ್ತಿರುವುದೇ ಬಿಡಿ! "ಏನೋ ಇಷ್ಟು ಚಿಕ್ಕದಾಗಿದೆ!" ಎಂದೆ. ವೆಂಕಟ "ಲೋ! ಇದು ಓಸಾಕಾ; ಬೆಂಗಳೂರಲ್ಲ! ಇದಕ್ಕೇ ಬಾಡಿಗೆ ೭೦,೦೦೦ ಯೆನ್" ಎಂದ. ತಪ್ಪಿಲ್ಲ ಸ್ವಾಮೀ! ಖಂಡಿತವಾಗಿ ನೀವು ಓದಿದ್ದೆಲ್ಲಾ ಹದಿನಾರಾಣೆ ಸತ್ಯ! ಎಪ್ಪತ್ತು ಸಾವಿರ ಯೆನ್! ವರ್ಷಕ್ಕಲ್ಲ; ತಿಂಗಳಿಗೆ! ನಾನು ಬೆವೆತುಬಿಟ್ಟೆ. ತಲೆಯೊಳಗೆ ಲೆಕ್ಕಾಚಾರ ಶುರುವಾಯಿತು. Mc Donald'sನ ತಿಂಡಿಯ ದುಡ್ಡನ್ನೂ ಅವನೇ ಕೊಟ್ಟಿದ್ದ. ರೈಲಿನ ಟಿಕೆಟನ್ನೂ ಅವನೇ ಕೊಂಡಿದ್ದ. ಕೇಳಿಯೇ ಬಿಟ್ಟೆ: "ಬೆಳಿಗ್ಗೆ ತಿಂಡಿಯದು ಎಷ್ಟಾಯಿತು?" "ಅದಾ, ೩೫೦ ಯೆನ್" "ರೈಲಿನ ಟಿಕೆಟ್?" "ಅದು ೩೯೦ ಯೆನ್; ಇರಲಿ ಕೊಡುವೆಯಂತೆ" ಒಂದು ಸ್ಯಾಂಡ್ವಿಚ್, ಆಲೂ ಚಿಪ್ಸ್, ಕೋಲಾಗೆ ಮು...ಮುನ್ನೂರೈವತ್ತು!? ತಲೆ ಗಿರ್ರೆ‍ಂದಿತು! ಭಯ ಶುರುವಾಯಿತು; ಕೇಳಿಯೇ ಬಿಟ್ಟೆ - "ಇಲ್ಲಿ ದುಡ್ಡು ಉಳಿಸಬಹುದಾ?" ವೆಂಕಟ ನಕ್ಕ. "ನಿನ್ನ ಸಂಬಳದಲ್ಲಿ ಕನಿಷ್ಠ ಒಂದೂವರೆ ಲಕ್ಷ ಕೈಸೇರುತ್ತದೆ; ಸ್ವಲ್ಪ ನೋಡಿಕೊಂಡರೆ ಉಳಿಸಬಹುದು" ಎಂದ. ಹಲ್ಲುಕಿರಿದು "ಹೆಹ್ಹೆಹ್ಹೆ" ಎಂದೆ. ಒಂದೂವರೆ ಲಕ್ಷದಲ್ಲಿ ಅರ್ಧ ಬಾಡಿಗೆಗೇ ಹೋದರೆ ಎಂದು ಬೆವರೊರೆಸಿಕೊಳ್ಳುತ್ತಿದ್ದ ನನ್ನನ್ನು ಕಂಡ ವೆಂಕಟ "ಸ್ನಾನಮಾಡಿ ಬಾ ಹೋಗೋ" ಎಂದ. ಅಲ್ಲಿವರೆಗೆ ನನ್ನ ಮಾತುಗಳಿಗೆ ಮುಸಿಮುಸಿ ನಗುತ್ತಿದ್ದ ನರೇಂದ್ರ ತರಲೆ ದನಿಯಲ್ಲಿ "ಈ ಬಚ್ಚಲಿಗೆ ಚಿಲಕವೇನೋ ಇದೆ; ಆದರೆ ಹೊರಗಿಂದಲೂ ತೆರೆಯಬಹುದು; ಜೋಪಾನವಾಗಿ ಹೋಗಪ್ಪಾ" ಎಂದು ಕೀಟಲೆ ಮಾಡಿದ. ನಾನು ನಗುತ್ತಾ ಬಚ್ಚಲುಮನೆಯ ಪ್ಲಾಸ್ಟಿಕ್ ಬಾಗಿಲು ಸರಿಸಿದೆ... ಅಲ್ಲ ಮಡಿಸಿದೆ. ಒಳಗೆ ಅಡಿಯಿಟ್ಟವನೇ "ಹ್ಞಾಂ! ಇದೇನೋ..." ಎಂದೆ! (ಮುಂದುವರೆಯುತ್ತದೆ......)
‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.

ಪ್ರತಿಕ್ರಿಯೆಗಳು

Submitted by benaka on
ನನ್ನ ಜಪಾನ್ ಪ್ರವಾಸ : ೨. ಜಪಾನಿನಲ್ಲಿ ಮೊದಲ ದಿನ :ಮನೆ ಎರಡನೆ ಅಧ್ಯಾಯದ ಎರಡನೇ ಭಾಗ ನಿಮ್ಮ ಮುಂದಿದೆ. ೩ನೆಯ ಭಾಗ ಜಪಾನಿನಲ್ಲಿ ಮೊದಲದಿನ : ಸ್ನಾನ ಇಷ್ಟರಲ್ಲೇ ಬಲೆಗೇರಲಿದೆ. ನಿಮ್ಮವ

ಬೆನಕ

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by Sunil Jayaprakash on
[quote=benaka] ಒಳಗಿನಿಂದ ಗಂಡು ದನಿಯೊಂದು "ಹಾಂಬಾಗಾ ಫುತಾತ್ಸು ಮೀತೊ ಕತ್ತೊ..."[ಹ್ಯಾಂಬರ್ಗರ್ ಎರಡು ಮೀಟ್ ಕಟ್] [/quote] ಫುತಾತ್ಸು ಎಂದರೆ ಎರಡು ಎಂದರ್ಥವೇ.? [quote=benaka] ಇದಕ್ಕೇ ಬಾಡಿಗೆ ೭೦,೦೦೦ ಯೆನ್" ಎಂದ. [/quote] ಉಸ್ಸಪ್ಪಾ(ಸಮಾಜಸೇವಕಿ, ಲಲಿತಾಂಬಾ ಶೈಲಿಯಲ್ಲಿ). ಇದು ಒಸಾಕಾ ಅಲ್ಲ, ಓ shock ಇರಬೇಕು. ಬೆನಕರವರೆ ಪ್ರವಾಸ ಕಥನವನ್ನು ವಿವರಿಸುತ್ತಾ, ಹೀಗೆಯೆ ವಿಶೇಷವಾದ ಸಂಗತಿಗಳನ್ನೂ ತಿಳಿಸುತ್ತಿರಿ. ನಾವುಗಳೇನಾದರು ಜಪಾನಿಗೆ, ಹೋದಾಗ ನಮಗೆ ಅನುಕೂಲವಾಗುವುದು.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by benaka on
ಸುನಿಲರೇ, ೧. ಜಪಾನಿನಲ್ಲಿ ಒಂದೊಂದು ವಸ್ತುವಿನ ಎಣಿಕೆಗೆ ಒಂದೊಂದು ಘಟಕವಿದೆ. ಉದಾ: ಸಂಖ್ಯೆ: ಇಚಿ, ನಿ, ಸಾನ್, ಯೊನ್/ಶಿ, ಗೊ.......ಇತ್ಯಾದಿ (ಒಂದು, ಎರಡು, ಮೂರು....) ವಸ್ತು ಎಣಿಕೆ: ಹಿತೊತ್ಸು, ಫುತಾತ್ಸು, ಮಿತ್ಸು, ಯೊತ್ಸು.....(ಒಂದು ವಸ್ತು, ಎರಡು ವಸ್ತುಗಳು......) ಸ್ತಂಭಾಕೃತಿ ಎಣಿಕೆ : ಇಪ್ಪೊನ್, ನಿಹೊನ್, ಸಾಂಬೊನ್....(ಲೇಖನಿ, ಬಳಪ ಇತ್ಯಾದಿ) ಮೇಲಿನ ಸಂದರ್ಭದಲ್ಲಿ 'ಫುತಾತ್ಸು' ಎಂದರೆ ಎರಡು ವಸ್ತುಗಳು(ಬರ್ಗರ್) ಎಂದರ್ಥ. ೨. ಬಾಡಿಗೆ ಕೇಳಿದಾಗ ಓ-ಶಾಖವಾದದ್ದೇನೋ ನಿಜವೇ. ಆದರೆ ಅದರಲ್ಲಿ ವಿದ್ಯುತ್, ನೀರು, ಅಡಿಗೆ ಅನಿಲದ ವೆಚ್ಚವೂ ಸೇರಿದೆಯೆಂದು ತಿಳಿದು ಸ್ವಲ್ಪ ಸಮಾಧಾನವಾಯ್ತು. ನನ್ನ ಅನುಭವ ಬೇರೆಯವರಿಗೆ ಸಹಾಯವಾಗಲೆಂದೇ ನನ್ನ ಬಯಕೆ. ಬೆಚ್ಚದಿರಿ, ಇನ್ನೊಂದು ವಿಚಾರ: ತೋಕಿಯೋದಲ್ಲಿ ಬಾಡಿಗೆ ಇದರ ದುಪ್ಪಟ್ಟು! ಬರಲೇ, ನಿಮ್ಮವ

 

ಬೆನಕ

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by ಮಹೇಶ ಭೋಗಾದಿ on
ನನಗೆ ಇವು ಬಹಳ ನಗೆಬರಿಸುವಂತ ಮಾತುಗಳು. ನಮ್ಮ ದೇಶದಲ್ಲಿ ಎಲ್ಲ ಅಗ್ಗ ಎಂಬಂತೆ ಎಲ್ಲರೂ ಮಾತಾಡುತ್ತಾರೆ. ಆದರೆ ನಮ್ಮ ದೇಶದಲ್ಲಿ ಸೇವಾಬಾಡಿಗೆ ಬಹಳ ಕಡಮೆಯಂತೆ. ಅದಕ್ಕೆ ಬೆಲೆಗಳು ಕಡಮೆ. ನನಗೂ ನೆನಪಿದೆ, ನಾನು ಅಮೆರಿಕೆಗೆ ಹೋದಾಗ, ಒಂದು ಊಟಕ್ಕೆ ೧೨-೧೮ ಡಾಲರುಗಳನ್ನು ತೆತ್ತಿದ್ದೆನು. ಇದನ್ನು ನಮ್ಮ ಮನೆಯಲ್ಲಿ ಕೇಳಿದವರು, ೧೨ X ೪೫ = ೫೪೦, ಎಂದು ಲೆಕ್ಕಹಾಕಿ ಬೆಚ್ಚಿದ್ದರು. ಸವಿಯೊದಗೆಗಳು, ಮಹೇಶ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.