ಕನ್ನಡಪುಟ
ಪುಟವಿಡಲು ನುಡಿಯೇನು ನೆಲವೇನು ಹೊಳೆವುದೀ ನಾಡಿನಲಿ ಚಿನ್ನವಾಗಿ!
೪.ಶರವೇಗದ ಹಳಿಬಂಡಿಯನ್ನೇರಿ......
ನನ್ನ ಜಪಾನ್ ಪ್ರವಾಸ: ೪.ಶರವೇಗದ ಹಳಿಬಂಡಿಯನ್ನೇರಿ......
ಮಾರನೆಯದಿನ ಬಹಳ ಕೆಲಸವಿತ್ತು; ಬೆಳಿಗ್ಗೆ ನಗರಕಛೇರಿ, ವೀಸಾ ಕಛೇರಿಗಳಿಗೆ ಹೋಗಬೇಕಿತ್ತು. ಹಿಂದಿನ ದಿನ ಆಫೀಸ್‍ಲೇಡಿ(OL) ನಿಶಿಮುರ ಎಂಬುವಳು ನನಗೆ ನಕ್ಷೆಯೊಂದನ್ನು ಕೊಟ್ಟು ಹೋಗಿ ಬಾ ಎಂದಿದ್ದಳು! ಪುಣ್ಯಕ್ಕೆ ವೆಂಕಟನೂ ಜೊತೆಗೆ ಬಂದು ಸಹಾಯ ಮಾಡಿದ. ದಾರಿಯುದ್ದಕ್ಕೂ ಕಛೇರಿಯದೇ ಮಾತು - ಹಾಗಿರು, ಹೀಗೆ ಮಾಡು ಎಂದೆಲ್ಲ ವೆಂಕಟ ಹೇಳುತ್ತಿದ್ದ; ನಾನು ತಲೆಯಾಡಿಸಿದೆ. ಆ ಮಧ್ಯಾಹ್ನವೇ ಕ್ಯೂಶೂಗೆ ಪ್ರಯಾಣ! ಆ ದಿನವೇ ವೀಸಾದ ಮುಂದುವರಿಕೆಗೆ ಅರ್ಜಿಹಾಕಬೇಕಿತ್ತು; ಆಗ ಜೊತೆಗೆ ಬಂದವಳು ನಿಶಿಮುರ. ನಾನು ಅವಳೊಡನೆ ಮಾತನಾಡುತ್ತಾ ಕೇಳಿದೆ:
"ವೀಸಾ ವಿಸ್ತರಣೆಗೆ ಈಗ ಅರ್ಜಿ ಹಾಕಿದರೆ ಎಷ್ಟು ದಿನ ಬೇಕಾಗಬಹುದು?"
"ದಿನ? ಹಹಹಾ" ಆಕೆ ನಕ್ಕಳು "೧೫ ನಿಮಿಷಗಳಲ್ಲಿ ಸಿದ್ಧ"
ನಾನು ಅಚ್ಚರಿಯಿಂದ ಹೌಹಾರಿದೆ! ನಾನು ಪಾಸ್‍ಪೋರ್ಟ್ ಕಛೇರಿಗೆ ಅಲೆದದ್ದು ನೆನಪಾಯಿತು; ನಂತರ ಪೋಲೀಸಪ್ಪ ಹಲ್ಕಿರಿದದ್ದೂ ನೆನಪಾಯಿತು. ನಮ್ಮ ದೇಶದಲ್ಲಿ ಈ ವೇಗದಲ್ಲಿ ಕೆಲಸವಾಗಲು ಇನ್ನೂ ಒಂದು ಜನ್ಮ ಬೇಕೆನಿಸಿತು; ಅಷ್ಟರಲ್ಲಿ ವಿಸ್ತರಿತ ಹೊಸ ವೀಸಾ ಮುದ್ರೆಯ ಪಾಸ್‍ಪೋರ್ಟ್ ಕೈಲಿತ್ತು! ದಾರಿಯುದ್ದಕ್ಕೂ ಚೆನ್ನಾಗಿ ಮಾತನಾಡಿಸಿದಳು ನಿಶಿಮುರ.
"ಲೋ, ಇಲ್ಲಿ ನಿನ್ನ ಜಪಾನೀ ಭಾಷೆಯ ಪರೀಕ್ಷೆ ಎಲ್ಲೆಲ್ಲೂ ನಡೆಯುತ್ತಿರುತ್ತದೆ; ಸ್ವಲ್ಪ ಚೆನ್ನಾಗಿ ಮಾತನಾಡು" ಎಂದ ವೆಂಕಟನ ನೆನಪಾಯಿತು. ತಕ್ಷಣ ಜಪಾನೀ ಭಾಷೆಯ ಒಳ್ಳೊಳ್ಳೆ ಪದಗಳನ್ನು ಹುಡುಕಿ ಹುಡುಕಿ ಅವಳೊಡನೆ ಮಾತನಾಡಿದೆ! ಖುಷಿಯಾಗಿಬಿಟ್ಟಳು ಹುಡುಗಿ(?); ಹಿಂದೆಯೇ ಬಂತು ಪ್ರಶ್ನೆ:
"ಬೆನಕ ಸಾನ್ ವಾ ಕೆಕ್ಕೊನ್ ಶಿತೆ ಇಮಾಸ್ಕಾ?"[ಬೆನಕ ಅವರು(ಅಂದ್ರೆ ನಾನು) ಮದುವೆಯಾಗಿದ್ದಾರೆಯೇ?]
ನಾನು ಕಕ್ಕಾಬಿಕ್ಕಿ! ಎಲಾ ಇವಳ! ಎರಡು ಮಾತಾಡಿದ್ದಕ್ಕೇ ಇಷ್ಟು ಮುಂದುವರೆದಳಲ್ಲಾ ಇವಳು ಎಂದುಕೊಂಡು "ಈಯೆ(ಇಲ್ಲ)" ಎಂದವನೇ,
"ನಿಶಿಮುರ ಸಾನ್ ವಾ ದೊಕುಶಿನ್ ದೇಸ್ಕಾ?"[ನಿಶಿಮುರ ಅವರು(ಅಂದ್ರೆ ನೀನು) ಇನ್ನೂ ಒಂಟಿಯೇನು?] ಎಂದುಬಿಟ್ಟೆ.
ಈಗವಳು ಕಕ್ಕಾಬಿಕ್ಕಿ! ನಾನು ಒಳಗೊಳಗೇ ನಕ್ಕೆ. ಗಾಬರಿಯಾದ ಅವಳು ಸ್ವಲ್ಪ ಜೋರಾಗಿಯೇ "ಮಿತೆಕುದಸಾಯ್"[ನೋಡಿ] ಎನ್ನುತ್ತಾ ಎಡಗಡೆಯ ಬೆರಳಲ್ಲಿದ್ದ ಉಂಗುರ ತೋರಿಸಿದಳು. ಓಹೋ! ಮದುವೆಯುಂಗುರ ಇರಬೇಕೆಂದುಕೊಂಡೆ.
"ಓಹ್! ನಿಮಗೆ ಮದುವೆಯಾಗಿದೆಯೇ? ನಿಮ್ಮನ್ನು ನೋಡಿದರೆ ಹಾಗೆ ಕಾಣುವುದೇ ಇಲ್ಲವಲ್ಲ; ಇನ್ನೂ ಈಗೀಗ ಪದವೀಧರೆಯಾದಂತಿದೆ" ಎಂದೆ!
ಹುಡುಗಿಗೆ - ಅಲ್ಲ - ಆ ಆಂಟಿಗೆ ಸಂತೋಷವುಕ್ಕಿ ಸ್ವರ್ಗ ಮೂರೇ ಗೇಣು! ಅಂದರೆ ಇಲ್ಲಿನ ಯುವತಿಯರ ತುಂಡು ಲಂಗಕ್ಕಿಂತ ಒಂದು ಗೇಣು ಹೆಚ್ಚು ಅಷ್ಟೇ! ಖುಷಿಯಾಗಿಬಿಟ್ಟಳು! ಸರಿ, ಇದು ಬಿತ್ತು ಬುಟ್ಟಿಗೆ ಎಂದುಕೊಂಡೆ!
ಸರಿ, ಕಛೇರಿಯಲ್ಲಿ ಆ ಅಸಾಮಿಯೆಂಬ ಆಸಾಮಿ ಕಾಯುತ್ತಿತ್ತು! ನಾನು ಹೋದೊಡನೆ ಎರಡು ಚೀಟಿ ನನ್ನ ಕೈಲಿಟ್ಟು ಜೋಪಾನವಾಗಿಟ್ಟುಕೋ ಎಂದ. ಆ ಚೀಟಿ ನನ್ನ ಇಲ್ಲಿನ ಜೀವನದಲ್ಲೇ ಅತ್ಯಂತ ದುಬಾರಿ ರೈಲಿನ ಟಿಕೆಟ್! ಜಪಾನೀಯರೂ ಕೊಳ್ಳಲು ಹಿಂಜರಿಯುವಷ್ಟು ದುಬಾರಿ ಶರವೇಗದ ರೈಲಿನ ಟಿಕೆಟ್! ಎಷ್ಟೋ ಶಾಲಾಮಕ್ಕಳ ಕನಸು ಈ ಹಳಿಬಂಡಿ! ಅದೇ 'ಶಿನ್‍ಕಾನ್‍ಸೆನ್' - ಗಂಟೆಗೆ ೨೫೦ ಕಿಮೀ ವೇಗದಲ್ಲಿ ಹಾರುವ ವಿದ್ಯುತ್ ಹಳಿಬಂಡಿ ಅಥವಾ ಆಂಗ್ಲದ ಬುಲೆಟ್ ಟ್ರೈನ್! ಈ ರೈಲು ಓಸಾಕಾ ಹಾಗೂ ತೋಕ್ಯೋ ನಡುವಿನ ಸುಮಾರು ೬೦೦ ಕಿಮೀ ದೂರವನ್ನು ಕೇವಲ ೨:೩೦ ರಿಂದ ೩:೦೦ ಗಂಟೆಗಳಲ್ಲಿ ಕ್ರಮಿಸುತ್ತದೆ! ನಾನು ಸಿಕ್ಕಾಪಟ್ಟೆ ಖುಷಿಯಾಗಿಬಿಟ್ಟೆ! ಕೇವಲ ಸುದ್ದಿಯಲ್ಲಿ ಕೇಳಿದ್ದ ರೈಲನ್ನು ಹತ್ತುವುದೆಂದರೆ.... ಯಾರಿಗುಂಟು ಈ ಭಾಗ್ಯ! ...ಅದೂ ಬಂದಿಳಿದ ಮೂರನೇ ದಿನವೇ! ಟಿಕೆಟ್ ಬೆಲೆ ಕೇವಲ ೧೪ ಸಾವಿರ ಯೆನ್ - ಒಂದು ಬಾರಿಗೆ! ನಾನು, ಅಸಾಮಿ, ಮುರುಗನ್ ಹೋಗಿ ಬರುವುದೆಂದು ನಿಶ್ಚಿತವಾದ್ದರಿಂದ, ಒಟ್ಟಿಗೆ ಆರು ಟಿಕೆಟ್ ಕೊಂಡದ್ದಕ್ಕೆ ಟಿಕೆಟ್ಟೊಂದಕ್ಕೆ ೧ ಸಾವಿರ ರಿಯಾಯಿತಿ! ನನಗೀಗ ಭಯವಾಯಿತು; ಟಿಕೆಟ್ಟಿಗೇ ಸುಮಾರು ೮೦ ಸಾವಿರ ಯೆನ್ ಖರ್ಚುಮಾಡಿ ಕಛೇರಿ ನಮ್ಮನ್ನು ಕಳಿಸುತ್ತಿರುವುದು ಇನ್ನೆಂಥ ಜಾಗಕ್ಕೋ! ಮೈ ನಡುಕ ಬಂತು! ನನಗೆ ಜಪಾನೀ ಭಾಷೆ ಸ್ವಲ್ಪ; ಗಣಕದ ತಂತ್ರಾಂಶ ಸ್ವಲ್ಪ ಗೊತ್ತಿತ್ತು ಅಷ್ಟೇ! ಅಲ್ಲಿ ಹೋಗಿ ನಾನಿನ್ನೇನು ಸಂಕಷ್ಟಕ್ಕೆ ಸಿಲುಕುವೆನೋ ಎಂದು ಚಿಂತೆಯಾಯಿತು. ಸಾಯಂಕಾಲ ೪:೩೦ಕ್ಕೆ ಶುಚ್ಚೋ[ವ್ಯಾವಹಾರಿಕ ಯಾತ್ರೆ] ಶುರುವಾಯಿತು; ಮೂವರೂ ಶಿನ್-ಓಸಾಕಾ ನಿಲ್ದಾಣಕ್ಕೆ ಬಂದು ಶರವೇಗದ ರೈಲಿಗಾಗಿ ಕಾದು ನಿಂತೆವು. ಅಬ್ಬಾ..ಅಬ್ಬಾ..ಅದೇನು ರೈಲು ನಿಲ್ದಾಣವೋ ವಿಮಾನ ನಿಲ್ದಾಣವೋ! ನಿಬ್ಬೆರಗಾದೆ!
ವೇಗದ ರೈಲುನಿಲ್ದಾಣ ಮೂರನೇ ಮಹಡಿಯಲ್ಲಿ! ಸಾಧಾರಣ ರೈಲಿನ ನಿಲ್ದಾಣ ಎರಡನೇ ಮಹಡಿಯಲ್ಲಿ! ಒಂದನೇ ಮಹಡಿಯಲ್ಲಿ ಬಸ್ಸು ನಿಲ್ದಾಣ ಹಾಗೂ ರೈಲು ಟಿಕೆಟ್ ಮಾರಾಟ ಯಂತ್ರಗಳ ಸಾಲು; ಜೊತೆಗೆ ಮಾಹಿತಿ ಕೇಂದ್ರ, ಯಾನಾಧಿಕ ದರದ ಲೆಕ್ಕಾಚಾರ ಯಂತ್ರ! ಕೆಳ ಅಂತಸ್ತಿನಲ್ಲಿ ಭೂತಲಗಾಮಿ - 'ಚಿಕತೆತ್ಸು' ಸುರಂಗರೈಲು ನಿಲ್ದಾಣ! ಅಷ್ಟೂ ಅಂತಸ್ತುಗಳಲ್ಲಿ ಊಟೋಪಚಾರದ ಆಹಾರ ಕೇಂದ್ರಗಳು, ಬಟ್ಟೆ-ಬರೆ ಮಾರಾಟಕೇಂದ್ರಗಳು, ಭವ್ಯ ಮಾರುಕಟ್ಟೆಯ ಮಳಿಗೆಗಳು (Shopping Complex)! ನಾನು ಕೆಲಸದ ಚಿಂತೆಯಲ್ಲಿ ಎರಡು ದಿನ ಏನನ್ನೂ ಸರಿಯಾಗಿ ನೋಡಿರಲಿಲ್ಲ; ಈಗ ನೋಡಿದೆ! ಅಬ್ಬಾ ಜಪಾನೇ! ಅಷ್ಟರಲ್ಲಿ ಬಂತು ಶರವೇಗದ ಹಳಿಬಂಡಿ - ಹಿಕಾರಿ[=ಬೆಳಕಿನ ಕಿರಣ] ಎಂಬ ಶಿನ್‍ಕಾನ್‍ಸೆನ್. ಇದು ಎರಡನೇ ದರ್ಜೆಯಂತೆ! ಇದಕ್ಕಿಂತ ವೇಗದ ನೊಜೊಮಿ[=ಆಶಯ] ಇನ್ನೂ ದುಬಾರಿಯಂತೆ! ಮೂರನೇ ದರ್ಜೆಯ ಕೊದಾಮ[=ಮಾರ್ದನಿ] ಸ್ವಲ್ಪ ನಿಧಾನ ಅಂದರೆ ಗಂಟೆಗೆ ೨೦೦ ಕಿಮೀ. ಅದೂ ಕೂಡ ಇಲ್ಲಿನ ಎಷ್ಟೋ ಜನರ ಕನಸಂತೆ! ಹೀಗಿರುವಾಗ ನಾನು 'ಹಿಕಾರಿ' ಹತ್ತಿದೆ!
ಅಸಾಮಿ ಹೇಳುತ್ತಿದ್ದಂತೆ ನಾನು ತಲೆಯಾಡಿಸುತ್ತಾ ಶಿನ್‍ಕಾನ್‍ಸೆನ್ ಬಗ್ಗೆ ತಿಳಿದುಕೊಳ್ಳಲಾರಂಭಿಸಿದೆ. ಸಂಜೆ ೬:೦೦ ಗಂಟೆಗೆ ಹೊರಟ ಹಿಕಾರಿ ಸುಮಾರು ೬೦೦ ಕಿಮೀ. ದೂರದಲ್ಲಿರುವ ಕ್ಯೂಶೂ ದ್ವೀಪದ ಕೊಕುರಾ ನಿಲ್ದಾಣವನ್ನು ರಾತ್ರಿ ೮:೪೫ ಕ್ಕೆ ತಲುಪಿಬಿಡುತ್ತದೆ! ರಾತ್ರಿಯಾದ್ದರಿಂದ ಹೊರಗೆ ಏನೂ ಕಾಣುತ್ತಿರಲಿಲ್ಲ. ಕಣ್ಣು ಬಿಡುವಷ್ಟರಲ್ಲೇ ಸುಯ್ಯೆಂದು ಹಾರುತ್ತಿದ್ದುದರಿಂದ ಕತ್ತಲಲ್ಲಿ ನೋಡಲು ಯಾರೂ ಪ್ರಯತ್ನಿಸುತ್ತಿರಲಿಲ್ಲ!
ಅಸಾಮಿಯೆಂದ "ಕ್ಯೂಶೂ ಜಪಾನಿನ ದಕ್ಷಿಣದ್ವೀಪ ಭಾಗ; ಮಧ್ಯದಲ್ಲಿ ಸಮುದ್ರವಿದೆ; ಈ ರೈಲು ಸಮುದ್ರದೊಳಗೆ ತೋಡಿದ ಸುರಂಗದೊಳಗೆ ಹೋಗುತ್ತದೆ - ನೋಡುತ್ತಿರು "
ನಾನು ಕಂಡು ಕೇಳರಿಯದಿದ್ದ ಪ್ರಪಂಚ! ಜಪಾನೀ ತಂತ್ರಜ್ಞಾನಕ್ಕೆ ತಲೆಬಾಗಲೇ ಬೇಕು! ರೈಲಿನಲ್ಲಿ ಸುಮಾರು ೭:೦೦ ಗಂಟೆಗೆ ಎಲ್ಲರೂ ಒಬೆಂತೋ[=ಬುತ್ತಿ] ತೆರೆದು ತಿನ್ನಲು ಶುರುಮಾಡಿದರು. ನಾನೂ ಆಸನದ ಮುಂದಿದ್ದ ಮಡಚುಮಣೆ ಎಳೆದು ಊಟದ ಸಿದ್ಧತೆ ಮಾಡಿದೆ; ತರಕಾರಿಯ ನಾಲ್ಕೈದು ತುಂಡುಗಳನ್ನು ಒಪ್ಪವಾಗಿ ಜೋಡಿಸಿ ೧೫೦ ಯೆನ್ ಎಂದು ಹಣೆಪಟ್ಟಿ ಹಚ್ಚಿದ್ದ ಒಬೆಂತೊ ತೆರೆದು ತಿಂದೆ. ಸಮವಸ್ತ್ರದ ತರುಣಿಯೊಬ್ಬಳು ತಳ್ಳುಗಾಡಿಯಲ್ಲಿ ಪಾನೀಯ, ತಿನಿಸುಗಳನ್ನು ಮಾರಲು ಬಂದಳು. ನಾನು ಕಿತ್ತಲೆ ರಸ ಕುಡಿದೆ; ಆಗಲೇ ಮುರುಗನ್ ಮತ್ತು ಅಸಾಮಿ ಬೀರು ಹೀರುತ್ತಿದ್ದರು. ಅಲ್ಲಿಗೆ ರಾತ್ರಿಯ ಊಟ ಮುಗಿಯಿತು! ಕೊಕುರಾದಲ್ಲಿ ಇಳಿದಾಗ ರಾತ್ರಿ ೮:೪೫. ಅಲ್ಲಿಯೇ ಹತ್ತಿರದಲ್ಲಿದ್ದ ಹೊಟೆಲ್[= 'ತಂಗುದಾಣ' ಅಥವಾ ಲಾಡ್ಜ್; ಉಪಾಹಾರಗೃಹವಲ್ಲ] ಒಂದಕ್ಕೆ ನುಗ್ಗಿದೆವು.
ಅಸಾಮಿ "ಬೆಳಿಗ್ಗೆ ೭:೧೫ ಕ್ಕೆ ತಿಂಡಿ; ೭:೩೦ ಗೆ ಕಾರು ಬರುತ್ತದೆ ಸಿದ್ಧವಾಗಿರು" ಎಂದವನೇ ಒಯಾಸುಮಿ[ಶುಭವಿಶ್ರಾಂತಿ] ಹೇಳಿ ಅವನ ಕೋಣೆಗೆ ನಡೆದ.
ಮುರುಗನ್ ಕೂಡ ಬೆಳಿಗ್ಗೆ ಬೇಗ ಏಳಬೇಕೆಂದು ಹೇಳಿ ಹೊರಟ. ನಾನೂ ನಿಟ್ಟುಸಿರಿಟ್ಟು ನನ್ನ ಕೋಣೆಗೆ ಹೋಗಲು ಎದ್ದೆ; '೧೦ ದಿನ ಕೇವಲ ೮೦,೦೦೦ ಯೆನ್' ಎಂದು ಬರೆಯಲ್ಪಟ್ಟ ವಿದ್ಯುನ್ಮಾನ ಕಾರ್ಡ್ ಕೀಲಿ ಕೈಗೆತ್ತಿಕೊಂಡೆ!
(ಮುಂದಿನ ಬಾರಿ: ಕ್ಯೂಶೂ ದ್ವೀಪ)

- benaka ರವರ ಬ್ಲಾಗ್
- Login or register to post comments
- 1057 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ





RSS:
ಪ್ರತಿಕ್ರಿಯೆಗಳು
ನನ್ನ ಜಪಾನ್ ಪ್ರವಾಸ: ೪.ಶರವೇಗದ ಹಳಿಬಂಡಿಯನ್ನೇರಿ......
ನನ್ನ ಜಪಾನ್ ಪ್ರವಾಸ:
೪.ಶರವೇಗದ ಹಳಿಬಂಡಿಯನ್ನೇರಿ......
ಈ ಭಾಗ ಬಲೆಯೇರುವುದು ಸ್ವಲ್ಪ ತಡವಾಯಿತು; ನಿಮ್ಮೆಲ್ಲರ ಪ್ರೋತ್ಸಾಹ ಎಂದಿನಂತೆ ಲಭಿಸಲಿ ಎಂದು ಆಶಿಸುತ್ತೇನೆ.ಶಿನ್‍ಕಾನ್‍ಸೆನ್ ಬಗ್ಗೆ ಮಾಹಿತಿ ಇಲ್ಲಿದೆ.
ಮುಂದಿನ ಭಾಗ : ಕ್ಯೂಶೂ ದ್ವೀಪ ಇಷ್ಟರಲ್ಲೇ ಬಲೆಗೇರಲಿದೆ. ಆಸಕ್ತರು ಕೆಳಗಿನ ಬ್ಲಾಗಿನಲ್ಲೂ ಓದಬಹುದು:
http://kannadaputa.blogspot.com/
ನಿಮ್ಮವ
ಬೆನಕ
ಚೆನ್ನಾಗಿದೆ
ಬೆನಕ, ನಿಮ್ಮ ಪ್ರವಾಸಕಥನದ ನಿರೂಪಣೆ, ಭಾಷೆ, ಶೈಲಿ, ನವಿರಾದ ಹಾಸ್ಯ-ಎಲ್ಲವೂ ಬಹಳ ಚೆನ್ನಾಗಿದೆ.