ಹೋರಾಟಕ್ಕೆ ಕಿಡಿ ಹಚ್ಚಿಸಿದ ವಿಪರೀತ ಸಿಂಗ್!
(ಬೊಗಳೂರು ಮೀಸಲಾತಿ ಬ್ಯುರೋದಿಂದ)
ಬೊಗಳೂರು, ನ.8- MTVಯಲ್ಲಿ ಕೌಸಲ್ಯಾ ಸುಪ್ರಜಾ ರಾಮ.... ಅಂತ ಸುಪ್ರಭಾತ ಕೇಳಿ ಬಂದರೆ ಹೇಗಿರುತ್ತೆ? ನಿರೀಕ್ಷಿಸುವುದು ಸಾಧ್ಯವೇ ಇಲ್ಲ ಎಂದು ಇಡೀ ಜಗತ್ತು ಅಂದುಕೊಳ್ಳುವ ಮಾತು ಉಲ್ಟಾ ಹೊಡೆದಿದೆ.
ಒಂದು ಕಾಲದಲ್ಲಿ ದೇಶಾದ್ಯಂತ ಮನೆ ಮನೆಯಲ್ಲಿ ಅಡುಗೆ ಮಾಡಲು ಕಿಚ್ಚು ಹತ್ತಿಸಿದ್ದ ಮತ್ತು ಹಲವು ಮನೆಗಳ ದೀಪ ನಂದಿಸಲು ಕಾರಣರಾಗಿದ್ದ ಮಾಜಿ ನಿಧಾನಿ ವಿಪರೀತ ಸಿಂಗ್ ಅವರ ಹೇಳಿಕೆಯೇ ಎಲ್ಲ ಗೊಂದಲಕ್ಕೂ ಕಾರಣ.
ಅತ್ಯಂತ ಅಪರೂಪದ ಪ್ರಕರಣವೊಂದರಲ್ಲಿ, ಉನ್ನತ ಹುದ್ದೆಗೆ ನೇಮಿಸುವಾಗ ಪ್ರತಿಭೆಯೇ ಅರ್ಹತೆಯಾಗಲಿ ಎಂದು ಹೋರಾಟದ ಕಿಚ್ಚು ಹಚ್ಚಿಸುವಲ್ಲಿ ನಿಷ್ಣಾತರಾಗಿರುವ ಅವರು ಸ್ವರ್ಗಕ್ಕೇ ಕಿಚ್ಚು ಹಚ್ಚಲು ಹೊರಟಿದ್ದು, ಮತ್ತೊಂದು ಕಿಡಿ ಹತ್ತಿಸುವ ಸಿದ್ಧತೆ ಮಾಡಿದ್ದಾರೆ. ಇಷ್ಟಕ್ಕೂ ಅವರು ಹೇಳಿದ್ದೇನು? ಮೆರಿಟ್ ಆಧಾರದಲ್ಲೇ ನ್ಯಾಯಾಧೀಶರನ್ನು ನೇಮಿಸಬೇಕೆಂಬುದು.... ಅಷ್ಟೆ.
ಮೊನ್ನೆ ಮೊನ್ನೆವರೆಗೂ ಮಂಡಲ ಜಪ ಮಾಡುತ್ತಾ, ಮೀಸಲಾತಿ ನೀಡಿದರೆ ಮಾತ್ರವೇ ದೇಶ ಉದ್ಧಾರವಾಗುತ್ತದೆ ಎಂದೆಲ್ಲಾ ಹೇಳುತ್ತಾ ಇದ್ದ ತಮ್ಮ ನೇತಾರನ ಬಾಯಲ್ಲಿ ಇಂಥ ಮಾತುಗಳನ್ನು ಕೇಳಿ ಸ್ವತಃ ಅವರ ಬೆಂಬಲಿಗರು ರೋಷದಿಂದ ಕುದಿಯಲಾರಂಭಿಸಿದ್ದಾರೆ ಎಂದು ತಿಳಿದುಬಂದಿದೆ.
ಪ್ರತಿಭೆಗೆ ಮಣೆ ಹಾಕಿದರೆ ಈ ದೇಶ ಉದ್ಧಾರವಾಗುವುದಾದರೂ ಹೇಗೆ, ರಾಜಕಾರಣಿಗಳು ಬದುಕುವುದಾದರೂ ಹೇಗೆ, ಓಟಿನ ಬ್ಯಾಂಕು ನಿರ್ನಾಮವಾಗಿಬಿಡುತ್ತದೆ ಎಂಬುದು ಅವರ ರೋಷಕ್ಕೆ ಕಾರಣ.
ಈ ಬಗ್ಗೆ ಸಿಂಗರನ್ನು ಮಾತನಾಡಿಸಿದಾಗ, ತಾನು ಆ ರೀತಿ ಹೇಳಲೇ ಇಲ್ಲ, ಹೇಳುವ ಮೊದಲೇ ಯಾರೋ ಬರೆದುಬಿಟ್ಟಿದ್ದಾರೆ ಎಂದು ಕಟ್ಟಾ ರಾಜಕಾರಣಿಯಂತೆ ಸ್ಪಷ್ಟಪಡಿಸಿದರು.
Bogaleragale.blogspot.com

- BogaleRagale ರವರ ಬ್ಲಾಗ್
- Login or register to post comments
- 413 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ




RSS: