ಲೇಖನ: ಕಿಲಾರದ ಕಿಲಾಡಿ ಜಲಯೋಧರು
ನರ್ಸರಿ... ಸಂದರ್ಶನವೇ ಸರಿ: ಪುಟಾಣಿ ಪರಿಷತ್ ಆಗ್ರಹ
(ಬೊಗಳೂರು ನರ್ಸರಿ-ನರ್ತಪ್ಪು ಬ್ಯುರೋದಿಂದ)
ಬೊಗಳೂರು, ಅ.18- ನರ್ಸರಿ ಶಿಕ್ಷಣಕ್ಕೆ ಸೇರಿಸಿಕೊಳ್ಳಲು ಸಂದರ್ಶನ ನಡೆಸಲಾಗದು ಎಂಬ ಕೋರ್ಟ್ ಆದೇಶದಿಂದ ತೀವ್ರವಾಗಿ ಆಕ್ರೋಶಗೊಂಡಿರುವ ಪುಟಾಣಿಗಳನ್ನೊಳಗೊಂಡ ನರ್ಸರಿ ವಿದ್ಯಾರ್ಥಿ ಪರಿಷತ್ ಸಂಘಟನೆಯು ಭಾರತ್ ಬಂದ್‌ಗೆ ಕರೆ ನೀಡಿದೆ.
ಇಂದಿನ ಈ ಹೈ ಕೆಟ್ ಯುಗದಲ್ಲಿ ಪ್ರತಿಯೊಂದಕ್ಕೂ ಇಂಟರ್ವ್ಯೂ ನೀಡಬೇಕಾಗುತ್ತದೆ. ಹಾಗಿರುವಾಗ ನಮಗೆ ಇಂಟರ್ವ್ಯೂ ನಡೆಸದೆ ಅಪಮಾನ ಮಾಡಲಾಗುತ್ತಿದೆ ಎಂದು ಹೇಳಿರುವ ಪುಟಾಣಿ ಪರಿಷತ್ ಅಧ್ಯಕ್ಷ ಪುಟ್ಟು ಕುಮಾರ್, ನಮ್ಮ ಅಪ್ಪ ಅಮ್ಮಂದಿರಿಗೂ ಇಂಟರ್ವ್ಯೂ ನಡೆಸಬಾರದೆಂಬ ಆದೇಶ ಶುದ್ಧ ತಪ್ಪು ಎಂದು ಸಾರಿದ್ದಾರೆ.
ಇದೇ ರೀತಿಯಲ್ಲಿ ದೇಶ ವಿದೇಶದಲ್ಲಿ ಭಾರಿ ಪ್ರಮಾಣದಲ್ಲಿ ಪ್ರತಿಭಟನೆ ಆಯೋಜಿಸಲು ನಿರ್ಧರಿಸಲಾಗಿದೆ ಎಂದು ಪುಟ್ಟು ಕುಮಾರ್ ತಿಳಿಸಿದ್ದಾರೆ. ಈ ಬಗ್ಗೆ ಬೊಗಳೆ ರಗಳೆ ಬ್ಯುರೋ ನೇರವಾಗಿ ಪುಟ್ಟು ಮತ್ತು ಪುಟ್ಟಿಯರ ಕಿವಿ ಹಿಡಿದು ಸಂದರ್ಶನ ನಡೆಸಿತು.
ತಮ್ಮ ಚಿತ್ರ ಸಹಿತ ತೊದಲು ನುಡಿಗಳು ಬೊಗಳೆ ರಗಳೆ ಪತ್ರಿಕೆಯಲ್ಲಿ ಪ್ರಕಟವಾಗುತ್ತದೆ ಎಂದು ತೀವ್ರವಾಗಿ ಉತ್ಸಾಹದಿಂದ ಕುದಿದು ಹೋದ ಈ ಪುಟ್ಟು-ಪುಟ್ಟಿಗೆ ಒಂದು ಪ್ರಶ್ನೆ ಹಾಕಲಾಯಿತು.
ನ್ಯಾಯಾಲಯವೇ ಇಂಟರ್ವ್ಯೂ ಮಾಡಬಾರದು ಎಂದು ಹೇಳಿದಾಗ ನೀವೇಕೆ ಬೇಕು ಅನ್ನುತ್ತಿದ್ದೀರಿ? ಎಂದು ಕೇಳಿದಾಗ ಉತ್ತರ ಬಂತು: "ನೋಡಿ, ಮೊದಲನೆಯದಾಗಿ ನೀವೇ ನ್ಯಾಯಾಲಯದ ಆದೇಶ ಉಲ್ಲಂಘನೆ ಮಾಡಿ ನಮ್ಮ ಸಂದರ್ಶನ ಮಾಡುತ್ತಿದ್ದೀರಿ" ಎಂದು ರಪ್ಪನೆ ಪೀಪಿ ಊದಿತು ಪುಟ್ಟಿ.
ಆದರೂ ಸುಧಾರಿಸಿಕೊಂಡ ಬ್ಯುರೋ ಸಿಬ್ಬಂದಿ, ಪುಟಾಣಿ ಪುಟ್ಟುವಿನತ್ತ ಮುಖ ಮಾಡಿದಾಗ, ಅದರ ಬಾಯಿಯಿಂದ ಉದುರಿದ ಅಣಿಮುತ್ತುಗಳು: "ನೋಡಣ್ಣಾ... ನಮ್ಮದು ಇದು ಕಲಿಯುವ ವಯಸ್ಸಾ? ಏನಿದ್ದರೂ ಆಟವಾಡುತ್ತಾ ಇರಬೇಕಾದವರು ನಾವು. ನಮ್ಮನ್ನು ಸಂದರ್ಶನ ಮಾಡಿದ್ರೆ ನಾವು ತಪ್ಪು ತಪ್ಪಾಗಿ ಉತ್ತರಿಸಿ ಬಚಾವ್ ಆಗುತ್ತೇವೆ. ಹಾಗೆಯೇ ಅಪ್ಪ ಅಮ್ಮಂದಿರನ್ನೂ ಸಂದರ್ಶನ ಮಾಡುತ್ತಾರೆ. ಅವರಿಗೂ ಸರಿಯಾಗಿ ಠುಸ್ ಪುಸ್ ಇಂಗ್ಲಿಷ್ ಬರೋದಿಲ್ಲ. ಅವರೂ ಎಡವುತ್ತಾರೆ. ಮತ್ತೆ ಶಾಲೆಗಳ ಆಡಳಿತ ಮಂಡಳಿಗಳಿಗೆ ಮಕ್ಕಳ ಅಪ್ಪಂದಿರ ಜೇಬಿನ ಮೇಲೆಯೇ ಕಣ್ಣು ಇರೋದ್ರಿಂದ ನಮ್ಮಪ್ಪನ ಜೇಬು ಕೂಡ ಅಷ್ಟೇನೂ ದಪ್ಪವಿಲ್ಲ. ಹಾಗಾಗಿ ಸಂದರ್ಶನದ ವೇಳೆ ಅವರು ಫೇಲ್ ಆಗೋದು ಗ್ಯಾರಂಟಿ. ಹೀಗಾದರೆ ನಮಗೆ ಶಾಲೆಗೆ ಹೋಗುವ ಕೆಲಸವೇ ಉಳಿಯುತ್ತಲ್ಲಾ...?"
ಈ ಕಾರಣ ಕೇಳಿದ್ದೇ ತಡ, ನಮ್ಮ ಸಿಬ್ಬಂದಿ ಯಾರದ್ದು ಅಂತಾನೂ ನೋಡದೆ ಅಲ್ಲಿದ್ದ ಗಂಟುಮೂಟೆ ಕಟ್ಟಿಕೊಂಡು, ನ್ಯಾಯಾಂಗ ನಿಂದನೆ ಮೊಕದ್ದಮೆ ಹೂಡಿದರೆ ಎಂಬ ಭಯದಿಂದ ಅಲ್ಲಿಂದ ಕಾಲ್ಕಿತ್ತರು ಎಂದು ನಮ್ಮ ಪ್ರತಿಸ್ಪರ್ಧಿ ಪತ್ರಿಕಾ ವರದಿಗಾರರು ವರದಿ ಮಾಡಿದ್ದಾರೆ.
BogaleRagale.blogspot.com

- BogaleRagale ರವರ ಬ್ಲಾಗ್
- Login or register to post comments
- 455 hits
ಈ ಪುಟವನ್ನು ಇ-ಮೇಯ್ಲ್ ಮಾಡಿ
Printer-friendly version- ನಿರ್ವಾಹಕರ ಗಮನಕ್ಕೆ ತನ್ನಿ

RSS: