ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಸಂದರ್ಶನ
  • ಚರ್ಚೆ
  • ಚಿತ್ರಪುಟಗಳು
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • ಸಂಪದ ಫೌಂಡೇಶನ್
  • Font Help

ಬರಹಗಳು: ಇಂದು ಓದಿದ ವಚನ

ಸಂಪದ › Sampada Blogs › Chamaraj ರವರ ಬ್ಲಾಗ್

ಚಾಮರಾಜ ಸವಡಿ

ಸತ್ಯದ ಹಸಿ ದರ್ಶನ

ಬದುಕೇ, ನಿನಗೊಂದು ಥ್ಯಾಂಕ್ಸ್‌

October 8, 2008 - 3:29pm — Chamaraj
Gowry's 4th Birthday.JPG

ಎರಡು ದಿನ ಯೋಗಾಸನ, ವ್ಯಾಯಾಮ ಬಿಟ್ಟರೆ ಮನಸ್ಸಿಗೆ ಏನೋ ತಹತಹ. ಛೇ, ಹೀಗಾದರೆ, ಕ್ರಮೇಣ ನಾನು ಸೋಮಾರಿಯಾಗುತ್ತೇನೆ. ನಸುಕಿನಲ್ಲಿ ಏಳಲು ಆಗುವುದಿಲ್ಲ. ಆರೋಗ್ಯ ಕೆಡುತ್ತದೆ. ತಿಂದು ತಿಂದು ಡುಮ್ಮಣ್ಣನಾಗುತ್ತೇನೆ ಎಂದು ಅಂದುಕೊಂಡು, ಹೆದರಿಸಿ, ಹದ ಮೀರಿದ ದಿನಚರಿಯನ್ನು ಮತ್ತೆ ಹಳಿಗೆ ಹತ್ತಿಸುತ್ತೇನೆ. ಊಟ ಮಾಡುವಾಗಲೂ ಅಷ್ಟೇ. ಮೊದಲಿನಿಂದ ಸರಳ ಆಹಾರ ಇಷ್ಟ. ಅನಗತ್ಯವಾಗಿ ಏನನ್ನೂ ತಿನ್ನಲು ಹೋಗುವುದಿಲ್ಲ. ಒಂದೊಮ್ಮೆ ಆಸೆಪಟ್ಟು ತಿಂದೆನಾದರೂ, ದೇಹದ ಮೇಲೆ ಅದರ ಪರಿಣಾಮ ಆಗುವುದಕ್ಕೂ ಮುನ್ನ ಮನಸ್ಸಿಗೆ ಕಸಿವಿಸಿ ಶುರುವಾಗುತ್ತದೆ. ’ಛೇ ಛೇ ಇಷ್ಟೊಂದು ತಿನ್ನಬಾರದಿತ್ತು’ ಎಂದು ಅಂದುಕೊಳ್ಳುತ್ತ ಒಂದು ಮಿನಿ ಉಪವಾಸ ಮಾಡಿ ಅದನ್ನು ಸರಿದೂಗಿಸಿಕೊಳ್ಳುತ್ತೇನೆ.

ರೇಖಾ ಬೈಯುತ್ತಾಳೆ. ಯಾಕೆ ಇಷ್ಟೊಂದು ಕಟ್ಟು ಮಾಡಿಕೊಳ್ಳುತ್ತೀರಿ? ಒಂದಿಷ್ಟು ಶಿಸ್ತು ತಪ್ಪಿದರೆ ಏನು ಮಹಾ ಆಗುತ್ತದೆ? ಎನ್ನುತ್ತಾಳೆ.

ಆದರೆ, ಆಕೆ ಕೂಡ ಅಂಥದೊಂದು ಕಟ್ಟುಪಾಡನ್ನು ರೂಢಿಸಿಕೊಂಡಿದ್ದಾಳೆ. ಬಹುಶಃ ನಮ್ಮಿಬ್ಬರ ಮನಸ್ಸಿನೊಳಗೆ ಅಂಥದೊಂದು ಶಿಸ್ತು ಇಳಿದುಬಿಟ್ಟಿದೆ.

ಅದು ಅನಿವಾರ್ಯವೂ ಹೌದು. ನಾವು ಕಾಯಿಲೆ ಬೀಳಲಾರೆವು. ಅಂದರೆ, ಕಾಯಿಲೆ ಬೀಳುವಂತಿಲ್ಲ. ನೌಕರಿಯ ಹಂಗಿಗೆ ಸಿಲುಕಿ, ಊರು ತೊರೆದು ಬಂದಾಗಿನಿಂದ ಇಂಥದೊಂದು ಕಟ್ಟುಪಾಡು ನಮಗೆ ಸಹಜ ದಿನಚರಿಯಾಗಿದೆ. ಹಾಗಂತ, ಮುಂಚೆ ತೀರಾ ಅಶಿಸ್ತಿನಿಂದ ಇದ್ದೆವೆಂದೇನೂ ಅರ್ಥವಲ್ಲ. ಆದರೆ, ಗೌರಿ ಹುಟ್ಟಿದ ನಂತರ ಅಂಥದೊಂದು ಶಿಸ್ತು ಸಹಜವಾಗಿ ಬಂದಿದೆ.

ಏಕೆಂದರೆ, ನಾನು ಕಾಯಿಲೆ ಬಿದ್ದರೆ, ಕೆಲಸಕ್ಕೆ ಹೋಗಲು ಆಗುವುದಿಲ್ಲ. ನನ್ನ ನಿತ್ಯದ ಚಟುವಟಿಕೆಗಳು ಮೂಲೆ ಹಿಡಿಯುತ್ತವೆ. ಕಾಯಿಲೆ ಬಿದ್ದರೂ ಡಾಕ್ಟರ್ ಹತ್ತಿರ ನಾನೇ ಹೋಗಬೇಕು. ಏಕೆಂದರೆ, ಮಗುವನ್ನು ಕರೆದುಕೊಂಡು, ಕಾಯಿಲೆ ಬಿದ್ದ ನನ್ನನ್ನೂ ಸಂಭಾಳಿಸಲು ಆಕೆಗೆ ಕಷ್ಟ. ಎರಡನೇ ಮಗು ಹುಟ್ಟಿದ ನಂತರ, ಮನೆಯೇ ಆಕೆಯ ಕಾರ್ಯಕ್ಷೇತ್ರವಾಗಿದೆ. ಹೋದರೆ ಎಲ್ಲರೂ ಒಟ್ಟಿಗೇ ಹೋಗಬೇಕು. ಇಲ್ಲದಿದ್ದರೆ ನಾನೊಬ್ಬನೇ ಹೋಗಬೇಕು. ಅದರಲ್ಲೂ ಗೌರಿಯನ್ನು ಬಿಟ್ಟು ಹೋಗಲು ಆಗದು.

ಏಕೆಂದರೆ, ಗೌರಿ ವಿಶಿಷ್ಟಚೇತನ ಮಗು. ಆಕೆಯ ಬುದ್ಧಿ ಬೆಳವಣಿಗೆ ತೀರಾ ನಿಧಾನ.

ಬಹುಶಃ ಇದು ವಿಶಿಷ್ಟಚೇತನ ಮಕ್ಕಳನ್ನು ಹೊಂದಿದ ಎಲ್ಲಾ ಕುಟುಂಬಗಳ ದಿನಚರಿ ಎಂದು ನಾನು ಅಂದುಕೊಂಡಿದ್ದೇನೆ. ವಿಶಿಷ್ಟಚೇತನ ಮಕ್ಕಳನ್ನು ನೋಡಿಕೊಳ್ಳಲು ಒಬ್ಬರು ಬೇಕೇ ಬೇಕು. ಅದು ನಿರಂತರ ಕರ್ತವ್ಯ. ಅದರಲ್ಲಿ ಯಾಮಾರುವಂತಿಲ್ಲ. ನಿತ್ಯದ ಕೆಲಸಗಳನ್ನು ನಿರ್ಲಕ್ಷ್ಯಿಸುವಂತಿಲ್ಲ. ಗೌರಿಯನ್ನು ವಾಕಿಂಗ್ ಕರೆದುಕೊಂಡು ಹೋಗದಿರಲು ನೆಪಗಳನ್ನು ಹುಡುಕುವಂತಿಲ್ಲ. ಅವರಿಗೆ ಫಿಜಿಯೋಥೆರಪಿ ಮಾಡಿಸುವುದರಲ್ಲಿ ಲೋಪ ಮಾಡುವಂತಿಲ್ಲ. ನಾವು ಬೇಕಾದರೆ ಊಟ ಬಿಡಬಹುದು, ಟಿವಿ ನೋಡದಿರಬಹುದು. ಹರಟೆ ಕೊಚ್ಚದಿರಬಹುದು. ಅನಗತ್ಯ ಮೊಬೈಲ್ ಕರೆಗಳನ್ನು ಮಾಡದಿರಬಹುದು. ಆದರೆ, ಗೌರಿಯ ಕೆಲಸಗಳನ್ನು ನಿರ್ಲಕ್ಷ್ಯಿಸುವಂತಿಲ್ಲ.

ಹೀಗಾಗಿ, ನಾವು ಕಾಯಿಲೆ ಬೀಳಲಾರೆವು. ನಮಗೆ ಅದು ತೀರಾ ದುಬಾರಿ ಸಂಗತಿ. ನಾನು ಕಾಯಿಲೆ ಬಿದ್ದರೆ ಹೇಗೋ ನಿಭಾಯಿಸಬಹುದು. ಆದರೆ, ರೇಖಾ ಮಲಗಿಕೊಂಡರೆ ಮುಗೀತು. ಕಚೇರಿಗೆ ರಜೆ ಹಾಕುವುದು ಅನಿವಾರ್ಯ. ಪೇಪರ್ ಕೂಡಾ ನೋಡಲಾಗುವುದಿಲ್ಲ. ಎಷ್ಟೋ ಸಾರಿ ಮೊಬೈಲ್ ಬಡಿದುಕೊಳ್ಳುತ್ತಿದ್ದರೂ ಮಾತನಾಡುವುದಿರಲಿ, ಅದರ ಮುಖ ನೋಡಲೂ ಆಗುವುದಿಲ್ಲ. ಮಕ್ಕಳ ಜೊತೆಗೆ ಕಾಯಿಲೆ ಬಿದ್ದ ಹೆಂಡತಿಯನ್ನೂ ನೋಡಿಕೊಳ್ಳಬೇಕು. ಒಂದು ದಿನ ತಳ್ಳಬಹುದು. ಎರಡನೇ ದಿನ ಹೇಗೋ ನಿಭಾಯಿಸಬಹುದು. ಅದಕ್ಕಿಂತ ಹೆಚ್ಚಿಗೆ ಆಕೆ ಮಲಗಿದರೆ, ಊರಿನಿಂದ ಯಾರಾದರೂ ಒಬ್ಬರನ್ನು ಕರೆಸುವುದು ಅನಿವಾರ್ಯವಾಗುತ್ತದೆ.

ಅವರಾದರೂ ಎಷ್ಟು ಸಾರಿ ಬಂದಾರು? ಊರಿನಲ್ಲಿ ಅವರಿಗೂ ತಮ್ಮದೇ ಆದ ತಾಪತ್ರಯಗಳಿರುತ್ತವೆ. ಕಾಯಿಲೆ ಮಲಗಿದವಳ ಆರೈಕೆಗೆಂದು ಅಷ್ಟು ದೂರದಿಂದ ಹೇಗೆ ಬಂದಾರು? ನಮ್ಮದು ನಿತ್ಯದ ಗೋಳು. ಒಂದು ಸಾರಿ ಬರಬಹುದು, ಇನ್ನೊಂದು ಸಾರಿ ಬರಬಹುದು. ಅದಕ್ಕಿಂತ ಹೆಚ್ಚು ಬರಲು ಅವರಿಗೂ ಕಷ್ಟ. ಅದು ಗೊತ್ತಿದ್ದೂ ಅವರನ್ನು ಬರ ಹೇಳುವುದು ನಮಗೂ ಕಷ್ಟ.

ಹೀಗಾಗಿ, ನಾವು ಕಾಯಿಲೆ ಬೀಳದಂತೆ ನೋಡಿಕೊಳ್ಳುವುದನ್ನು ಕಲಿತಿದ್ದೇವೆ. ಮಕ್ಕಳಿಗೆ ಫಿಜಿಯೋಥೆರಪಿ ಮಾಡಿಸುವಾಗ ನಮ್ಮ ವ್ಯಾಯಾಮವೂ ಆಗುತ್ತದೆ. ಅವರಿಗೆ ವಾಕಿಂಗ್ ಮಾಡಿಸುತ್ತ ನಾವೂ ವಾಕ್ ಮಾಡಿ ಗಟ್ಟಿಯಾಗುತ್ತೇವೆ. ಅವರಿಗೆ ಕೊಡುವ ಉತ್ತಮ ಗುಣಮಟ್ಟದ ಆಹಾರ ಸೇವಿಸುತ್ತ ನಾವೂ ಉತ್ತಮವಾಗಿದ್ದೇವೆ. ಮಕ್ಕಳಿಗೆ ವರ್ಜ್ಯವಾದ ಬಹುತೇಕ ತಿನಿಸುಗಳು ನಮಗೂ ವರ್ಜ್ಯವೇ.

ಇದನ್ನು ನಾನು ತ್ಯಾಗ ಎಂದು ಕರೆಯುವುದಿಲ್ಲ. ಇದು ಒಂಥರಾ ರೂಢಿ. ಮೊದಮೊದಲು ಕಷ್ಟವಾಯಿತಾದರೂ, ಕ್ರಮೇಣ ನಾವು ಅದಕ್ಕೆ ಒಗ್ಗಿಕೊಂಡಿದ್ದೇವೆ. ನಾವು ಬೆಳೆದಷ್ಟೂ, ನಮ್ಮ ಮಕ್ಕಳು ಬೆಳೆಯುತ್ತಾರೆ ಎಂಬುದನ್ನು ಕಂಡುಕೊಂಡಿದ್ದೇವೆ. ನಾವು ಹಸನ್ಮುಖಿಯಾದಷ್ಟೂ ನಮ್ಮ ಮಕ್ಕಳು ಹಸನ್ಮುಖಿಗಳಾಗುತ್ತಾರೆ, ನಾವು ಬೆಳೆದಷ್ಟೂ ನಮ್ಮ ಮಕ್ಕಳೂ ಬೆಳೆಯುತ್ತವೆ ಎಂಬುದನ್ನು ಕಂಡುಕೊಂಡಿದ್ದೇವೆ.

ಹೀಗಾಗಿ, ನಾವು ಆರೋಗ್ಯವಾಗಿರಲು ಯತ್ನಿಸುತ್ತೇವೆ. ಹಸನ್ಮುಖಿಗಳಾಗಲು ಪ್ರಯತ್ನಿಸುತ್ತೇವೆ. ಉತ್ತಮ ಅಭ್ಯಾಸಗಳನ್ನು ರೂಢಿಸಿಕೊಂಡಿದ್ದೇವೆ. ಈ ಅನಿವಾರ್ಯತೆ, ಈ ರೂಢಿ ನಮಗೆ ಬದುಕಿನ ಹಲವಾರು ಉತ್ತಮಾಂಶಗಳನ್ನು ನೀಡಿದೆ. ನಮ್ಮನ್ನು ನಿತ್ಯ ಪ್ರಬುದ್ಧರನ್ನಾಗಿಸುತ್ತಿದೆ. ಮಾಗಿಸುತ್ತಿದೆ. ಬೆಳೆಸುತ್ತಿದೆ. ಹೊಸ ಹೊಸ ಅನುಭವಗಳಿಗೆ ಒಡ್ಡುತ್ತಿದೆ.

ಇಂಥದೊಂದು ಮನಃಸ್ಥಿತಿಯನ್ನು ನಮಗೆ ನೀಡಿದ್ದಕ್ಕಾಗಿ, ಬದುಕೇ ನಿನಗೊಂದು ಥ್ಯಾಂಕ್ಸ್.

- ಚಾಮರಾಜ ಸವಡಿ

  • ಗೌರಿ
  • ಬದುಕು
  • ವಿಶಿಷ್ಟಚೇತನ
  • ಶಿಸ್ತು
~.~
  • Chamaraj ರವರ ಬ್ಲಾಗ್
  • Login or register to post comments
  • 237 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Digg
  • Reddit
  • Furl
  • Google
  • Yahoo
  • ನಿರ್ವಾಹಕರ ಗಮನಕ್ಕೆ ತನ್ನಿ

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
October 8, 2008 - 7:14pm — ASHOKKUMAR

ಉ: ಬದುಕೇ, ನಿನಗೊಂದು ಥ್ಯಾಂಕ್ಸ್‌

ASHOKKUMAR's picture

ಸವಾಲನ್ನು ತಾಕತ್ತು,ಸಾಮರ್ಥ್ಯವಾಗಿ ಬದಲಿಸಿಕೊಳ್ಳುವ ನಿಮ್ಮ ವೈಖರಿಯನ್ನು ಮೆಚ್ಚಲೇ ಬೇಕು.
*ಅಶೋಕ್

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
October 10, 2008 - 7:37am — Chamaraj

ಉ: ಬದುಕೇ, ನಿನಗೊಂದು ಥ್ಯಾಂಕ್ಸ್‌

Chamaraj's picture

ಥ್ಯಾಂಕ್ಸ್‌ ಅಶೋಕ್‌,

ಸವಾಲು ಎದುರಾದಾಗಲೇ ನಮ್ಮ ಸಾಮರ್ಥ್ಯದ ಅರಿವು, ಆಳ ಗೊತ್ತಾಗುತ್ತದೆ ಅಲ್ಲವೆ?

- ಚಾಮರಾಜ ಸವಡಿ
http://chamarajsavadi.blogspot.com

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
October 8, 2008 - 11:29pm — gurubaliga

ಉ: ಬದುಕೇ, ನಿನಗೊಂದು ಥ್ಯಾಂಕ್ಸ್‌

gurubaliga's picture

ಚಾಮರಾಜರೆ ನಿಮ್ಮ ಈ ಚಿಂತನೆಯ ತಂತು ತುಂಬ ತಟ್ಟಿತು. ನೀವು ನಿಮ್ಮ ಕುಟುಂಬದ ಚಿತ್ರ ಪ್ರಕಟಿಸಿದ್ದಕ್ಕೆ ಧನ್ಯವಾದಗಳು. ನಿಮ್ಮ ಮಗುವಿನ ವಿಷಯ ನಮ್ಮೊಡನೆ ಹಂಚಿಕೊಂಡ ನಿಮ್ಮ ವಿಶ್ವಾಸಕ್ಕೆ ನನ್ನ ವಂದನೆ. ಈ ವಿಷಯ ನನ್ನಲ್ಲಿ ಆಳವಾದ ವಿಚಾರ ಕಿಡಿಯನ್ನು ಹಚ್ಚಿ ಬಿಟ್ಟಿದೆ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
October 10, 2008 - 7:36am — Chamaraj

ಉ: ಬದುಕೇ, ನಿನಗೊಂದು ಥ್ಯಾಂಕ್ಸ್‌

Chamaraj's picture

ಥ್ಯಾಂಕ್ಸ್‌ ಗುರು ಅವರೇ,

ಹುಡುಕಿದರೆ ಪ್ರತಿಯೊಬ್ಬರಲ್ಲೂ ಇಂಥದೊಂದು ತಂತು, ಸಮಸ್ಯೆ, ಚಿಂತನೆ ಸಿಕ್ಕೇ ಸಿಗುತ್ತದೆ. ಹೀಗಾಗಿ, ಇನ್ನೊಬ್ಬರ ನೋವುಗಳಿಗೆ ನಾವು ಸ್ಪಂದಿಸಲು ಸಾಧ್ಯವಾಗುವುದು. ಸಂಪದಿಗರ ಔದಾರ್ಯದ ಬಗ್ಗೆ ನಮಗೆ ತುಂಬ ವಿಶ್ವಾಸವಿದೆ.

ನಿಮ್ಮ ಸ್ಪಂದನೆ ಗೌರಿಗೂ ಒಳ್ಳೆಯದು ಮಾಡಲಿದೆ ಎಂಬ ನಂಬಿಕೆಯಿದೆ.

- ಚಾಮರಾಜ ಸವಡಿ
http://chamarajsavadi.blogspot.com

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
October 9, 2008 - 11:56am — ASHMYA

ಉ: ಬದುಕೇ, ನಿನಗೊಂದು ಥ್ಯಾಂಕ್ಸ್‌

ASHMYA's picture

ರೇಖಾ ನಿಮ್ಮ ಮಡದಿ ಎಂದು ತಿಳಿದು ಸಂತಸವಾಯಿತು.
ಅವರು ಗೌರಿ ಬ್ಲಾಗ್ ಬರೆದಿದ್ದರಲ್ಲವಾ?
ಬದುಕಿನೆಡೆಗಿನ ನಿಮ್ಮ ಶ್ರದ್ಧೆ ಅನುಕರಣೀಯ Smiling

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
October 10, 2008 - 7:33am — Chamaraj

ಉ: ಬದುಕೇ, ನಿನಗೊಂದು ಥ್ಯಾಂಕ್ಸ್‌

Chamaraj's picture

ಗೌರಿಯ ಪ್ರಗತಿಯ ಬೆನ್ನೆಲುಬು ರೇಖಾ. ನನ್ನ ಜೋಗಿ ಜಂಗಮ ಬದುಕು ಹಸನಾಗಲು ಆಕೆಯ ಪಾತ್ರ ದೊಡ್ಡದು. ಆ ಬಗ್ಗೆ ಬರೆದರೆ, ಸ್ವಸ್ತುತಿಯಾಗುತ್ತದೆ ಎಂದು ಸುಮ್ಮನಿದ್ದೇನೆ. ನೀವು ಗುರುತಿಸಿದ್ದೀರಿ, ಧನ್ಯವಾದಗಳು.

ಕೆಲಸದ ಒತ್ತಡದಲ್ಲಿ ಗೌರಿ ಬ್ಲಾಗ್‌ ಬರೆಯಲು ಆಕೆಗೆ ಆಗುತ್ತಿಲ್ಲ. ಆ ಬ್ಲಾಗ್‌ ಆಕೆಯೇ ಬರೆಯಲಿ ಎಂದು ನಾನೂ ಸುಮ್ಮನಿದ್ದೇನೆ.

- ಚಾಮರಾಜ ಸವಡಿ
http://chamarajsavadi.blogspot.com

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
October 9, 2008 - 10:10pm — raghud

ಉ: ಬದುಕೇ, ನಿನಗೊಂದು ಥ್ಯಾಂಕ್ಸ್‌

raghud's picture

ಆತ್ಮೀಯರೇ

ನಿಮ್ಮ ಈ ಲೇಖನ ಸಂಪದ ಬಳಗದವರಲ್ಲಿ ನೀವಿಟ್ಟ ವಿಶ್ವಾಸವನ್ನು ತೋರಿಸುತ್ತದೆ. ಇದು ನಿಮ್ಮನ್ನು ನಿಮ್ಮ ಕುಟುಂಬವನ್ನು ಹಾಗು ಸಂಪದಿಗರನ್ನು ಗೌರವಿಸಿದೆ ಎ೦ದು ನಾನು ಭಾವಿಸುತ್ತೇನೆ. ಆರೋಗ್ಯವನ್ನು ಕಾಪಾಡಿಕೊಂಡು ಹಸನ್ಮುಖದೊಂದಿಗೆ ಜೀವನವನ್ನು ಶಿಸ್ತಿನಿ೦ದ ಎದುರಿಸಲು ಸಂಪದಿಗರಲ್ಲಿ ಹೊಸದೊಂದು ಚೇತನವನ್ನು ಹುಟ್ಟುಹಾಕಲು ಪ್ರೇರೇಪಿಸಲು ಈ ನಿಮ್ಮ ಲೇಖನ ಸಹಕಾರಿಯಾಗುತ್ತದೆಂದು ನಾನು ಅಂದು ಕೊಂಡಿದ್ದೇನೆ.

ಹುಲ್ಲಾಗು ಬೆಟ್ಟದಡಿ, ಮನೆಗೆ ಮಲ್ಲಿಗೆಯಾಗು |
ಕಲ್ಲಾಗು ಕಷ್ಟಗಳ ಮಳೆಯ ವಿಧಿ ಸುರಿಯೆ ||
ಬೆಲ್ಲ ಸಕ್ಕರೆಯಾಗು ದೀನದುರ್ಬಲರಿಂಗೆ |
ಎಲ್ಲರೊಳಗೊಂದಾಗು - ಮಂಕುತಿಮ್ಮ ||

- ಡಿ.ವಿ.ಜಿ

ನಿಮಗೆ ನಿಮ್ಮ ಪರಿವಾರದವರಿಗೆ ಶುಭವಾಗಲಿ.

ಧನ್ಯವಾದಗಳು
ರಘು

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
October 10, 2008 - 7:31am — Chamaraj

ಉ: ಬದುಕೇ, ನಿನಗೊಂದು ಥ್ಯಾಂಕ್ಸ್‌

Chamaraj's picture

ತುಂಬಾ ಧನ್ಯವಾದಗಳು ರಘು.

ಸಂಪದ, ಸಂಪದಿಗರು ನಮ್ಮ ಕುಟುಂಬದ ದಿನಚರಿಯ ಒಂದು ಭಾಗವಾಗಿದ್ದಾರೆ. ನಮ್ಮ ಬಳಗದಂತೇ ಇದ್ದಾರೆ. ಅವರ ಮುಂದೆ ಹೇಳಿಕೊಳ್ಳುವ ಮೂಲಕ ನಮ್ಮ ಹಲವಾರು ಸಮಸ್ಯೆಗಳಿಗೆ ತಾರ್ಕಿಕ ಪರಿಹಾರ, ಸಲಹೆ, ಸೂಚನೆಗಳು ಸಿಕ್ಕಿವೆ. ಹೀಗಾಗಿ, ಇದು ಆಪ್ತರ ಎದುರು ಮಾತನಾಡಿದ ಅನುಭವದಂಥದು.

ಅದನ್ನು ನೀವು ಸರಿಯಾಗಿಯೇ ಗುರುತಿಸಿದ್ದೀರಿ. ಗೌರಿಯಂಥ ಮಕ್ಕಳಿಗೆ ಸೂಕ್ತ ಸಲಹೆ, ಚಿಕಿತ್ಸೆ ಇರುವಂಥ ಸೌಲಭ್ಯ ನಿಮ್ಮ ಗಮನಕ್ಕೆ ಬಂದರೆ, ದಯವಿಟ್ಟು ತಿಳಿಸಿ.

ಚಾಚಿದ ಕೈಗಳಿಗೆ ನೆರವಿನ ಹಸ್ತ ಸಿಗುವಂತಾಗಲಿ.

- ಚಾಮರಾಜ ಸವಡಿ
http://chamarajsavadi.blogspot.com

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ಇಂಥ ಮಕ್ಕಳನ್ನು ಬೆಳೆಸುವುದು ಹೇಗೆ?
  • ಇಂತಹ ಮಕ್ಕಳನ್ನು ಬೆಳೆಸುವುದು ಹೇಗೆ?
  • ಕಣ್ಣು ನೋಡೇ ಗೌರಿ
  • ಕಣ್ಣು ನೋಡೇ ಗೌರಿ
  • ಮಕ್ಕಳ ಮೇಲೆ ನಾವೇಕೆ ತಾಳ್ಮೆಗೆಡುತ್ತೇವೆ?
Syndicate content

ಲೇಖಕರು

Chamaraj's picture

ಪೂರ್ಣ ಹೆಸರು
ಚಾಮರಾಜ ಸವಡಿ

ಪರಿಚಯ

ವೃತ್ತಿಯಿಂದ ಪತ್ರಕರ್ತ. ಸದ್ಯ ಸುವರ್ಣ ನ್ಯೂಸ್‌ ಚಾನೆಲ್‌ನಲ್ಲಿ ಕೆಲಸ. ಓದುವುದು ಮತ್ತು ಬರೆಯುವುದು ಅಂದ್ರೆ ಇಷ್ಟ.

ನನ್ನ ಬ್ಲಾಗ್‌: http://chamarajsavadi.blogspot.com

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ವಾಟರ್ ಪೋರ್ಟಲ್: ದಿನದ ಚಿತ್ರ

ಕುಡಿಯುವ ನೀರು?

(ಫೋಟೋ: Kedarnath, Dharwad)

ಮತ್ತಷ್ಟು...

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಬ್ಲಾಗ್ ಬರಹಗಳು

  • ಓದಿದ್ದು ಕೇಳಿದ್ದು ನೋಡಿದ್ದು-98 ಮಕ್ಕಳಿಗೆ ಟಿವಿ ನಿಷಿದ್ಧ
  • ಇಂದು ಓದಿದ ವಚನ: ಚಂದಿಮರಸ: ಅದೂ ಅಲ್ಲ ಇದೂ ಅಲ್ಲ ಮತ್ತೇನು?
  • ಗಾದೆಗಳು!!!
  • ಮತಾಂತರದ ಬಗ್ಗೆ: ಸ್ವಲ್ಪ late ಆದರೂ ನನ್ನ ಅನಿಸಿಕೆಗಳು
  • ಯೆರೆ ಗೌಡ - 100 ರಣಜಿ ಪಂದ್ಯಗಳ ಗೌರವ
  • 'ಜನ ಸಂಸ್ಕೃತಿ'ಯಲ್ಲಿ 'ಎನ್ನಂತರಂಗದ ಆತುಮ'
  • ಕಳಚಿಬೀಳುವ ಮುಖವಾಡ
  • ಕಲಿಕೆಗೆಲ್ಲಿದೆ ಕೊನೆ...
  • bio data
  • ಸಂತೋಷಕ್ಕೆ............. (ಗೀತಾ) ಜಪಾನಿ ವೇದಿಕೆಯಲ್ಲಿ
ಇನ್ನಷ್ಟು

ಇತ್ತೀಚಿನ ಪ್ರತಿಕ್ರಿಯೆಗಳು

  • hamsanandi
    ಉ: ಇಂದು ಓದಿದ ವಚನ: ಚಂದಿಮರಸ: ಅದೂ ಅಲ್ಲ ಇದೂ ಅಲ್ಲ ಮತ್ತೇನು?
    December 3, 2008 - 5:10am
  • venkatesh
    ಉ: ಮರುಕಳಿಸಿದ ನೆನಪು
    December 3, 2008 - 4:45am
  • hamsanandi
    ಉ: ಮತಾಂತರದ ಬಗ್ಗೆ: ಸ್ವಲ್ಪ late ಆದರೂ ನನ್ನ ಅನಿಸಿಕೆಗಳು
    December 3, 2008 - 12:12am
  • rasikathe
    ಉ: ಒಗಟು - ಬಿಡಿಸಿ!
    December 2, 2008 - 11:58pm
  • savithru
    ಉ: ಮತಾಂತರದ ಬಗ್ಗೆ: ಸ್ವಲ್ಪ late ಆದರೂ ನನ್ನ ಅನಿಸಿಕೆಗಳು
    December 2, 2008 - 11:47pm
  • kannadakanda
    ಉ: ಕನ್ನಡದಲ್ಲಿ ’ಆಗಮ’ ಮತ್ತು ಲೋಪ ಸಂಧಿಗಳು
    December 2, 2008 - 11:32pm
  • kalpana
    ಉ: ಉಗ್ರಗಾಮಿ ಹೇಡಿಗಳ ಹೀನ ಕೃತ್ಯದ ಹಿನ್ನೆಲೆಯಲ್ಲಿ ಒಂದು ಮನವಿ
    December 2, 2008 - 11:16pm
  • mahesha
    ಉ: ಕನ್ನಡದಲ್ಲಿ ’ಆಗಮ’ ಮತ್ತು ಲೋಪ ಸಂಧಿಗಳು
    December 2, 2008 - 11:04pm
  • kannadakanda
    ಉ: ಕನ್ನಡದಲ್ಲಿ ’ಆಗಮ’ ಮತ್ತು ಲೋಪ ಸಂಧಿಗಳು
    December 2, 2008 - 10:58pm
  • mahesha
    ಉ: ಮಲ್ಲೂ ಟೇಬಲ್ಲು, ಗುಲ್ಟೂ ಟೇಬಲ್ಲು , ಬಿಹಾರಿ ಟೇಬಲ್ಲು, ಕನ್ನಡ ಟೆಬಲ್ಲು
    December 2, 2008 - 10:46pm
ಇನ್ನಷ್ಟು
ಈಗಿನಂತೆ 2 ಸದಸ್ಯರು ಮತ್ತು 72 ಅತಿಥಿಗಳು ಆನ್ಲೈನ್ ಇರುವರು.


ಮೊಗ ನಾಲ್ಕು ನರನಿಗಂತೆಯೆ ನಾರಿಗಂ ಬಗೆಯೆ ।
ಜಗಕೆ ಕಾಣಿಪುದೊಂದು, ಮನೆಯ ಜನಕೊಂದು ।।
ಸೊಗಸಿನೆಳಸಿಕೆಗೊಂದು, ತನ್ನಾತ್ಮಕ್ಕಿನ್ನೊಂದು ।
ಬಗೆಯೆಷ್ಟೊ ಮೊಗವಷ್ಟು -- ಮಂಕುತಿಮ್ಮ ।।

— ಡಿ.ವಿ.ಜಿ.

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments | Podcasts

separator