ಎಲ್ಲಿ ಮಂಥನ ನಡೆಯುವುದೋ ಅಲ್ಲಿ ಉಚ್ಚ ಮಟ್ಟದ ಸತ್ಯ ಕೈಗೂಡದಿದ್ದರೂ ಕೆಳಮಟ್ಟದ ಸತ್ಯ ಕೈಗೆ ಹತ್ತುವುದೇ ಹೊರತು ಅಸತ್ಯ ಯಾವಾಗಲೂ ಕೈಗೆ ಬರದು.

— ವಿನೋಬಾ ಭಾವೆ

ಕೃಷಿ ಸಂಪದ: ಫೆಬ್ರವರಿ ಸಂಚಿಕೆ

Krushi Sampada 5th Edition

ಮೌನ ಎಂಬ ಸಮೃದ್ಧ ಭಾಷೆ

ಒಂಟಿ ಮರ (ಚಿತ್ರ: ಓಂಶಿವಪ್ರಕಾಶ)

ಚಿಕ್ಕವನಿದ್ದಾಗ ತುಂಬ ಮಾತನಾಡುತ್ತಿದ್ದೆ. ಎಷ್ಟು ಮಾತನಾಡುತ್ತಿದ್ದೆನೆಂದರೆ, ಒಮ್ಮೊಮ್ಮೆ ಏದುಸಿರು ಬರುತ್ತಿತ್ತು. ತುಂಬ ಮಾತನಾಡುತ್ತೀ ಎಂದು ಏಟು ಕೂಡ ತಿಂದಿದ್ದೇನೆ. ಆದರೂ ಮಾತು ನಿಲ್ಲುತ್ತಿರಲಿಲ್ಲ.

ಬಹುಶಃ ಹತ್ತನೇ ತರಗತಿಯ ಪರೀಕ್ಷೆಗಳ ನಂತರ ಇರಬೇಕು, ನನ್ನ ಮಾತು ಇದ್ದಕ್ಕಿದ್ದಂತೆ ಕಡಿಮೆಯಾಗತೊಡಗಿತು. ಪಿಯುಸಿ ಮುಗಿಯುವ ಹೊತ್ತಿಗೆ ಅದು ಎಷ್ಟು ಕಡಿಮೆಯಾಯಿತೆಂದರೆ, ಮಾತನಾಡಿದರೆ ನನ್ನ ಧ್ವನಿ ನನಗೇ ಅಪರಿಚಿತ ಅನಿಸುವಷ್ಟು.

ಈ ಸಮಯದಲ್ಲಿಯೇ ನನಗೆ ಓದುವ ಹುಚ್ಚು ಅಂಟಿಕೊಂಡಿದ್ದು. ಮೊದಲಿನಿಂದಲೂ ಸಿಕ್ಕಿದ್ದನ್ನು ಓದುವ ಹವ್ಯಾಸವಿತ್ತಾದರೂ, ಓದಲು ಪುಸ್ತಕಗಳೇ ಸಿಗುತ್ತಿರಲಿಲ್ಲ. ಹಳ್ಳಿಯಲ್ಲಿ ಪುಸ್ತಕಗಳನ್ನು ತರುವವರೂ ಕಡಿಮೆ. ಅಪ್ಪ ಮೊದಲಿನಿಂದಲೂ ಹಿಂದಿ ಕಾದಂಬರಿಪ್ರಿಯ. ನಮಗೋ ಹಿಂದಿ ತೀರಾ ದುಬಾರಿ. ಆದರೆ, ಡಿಗ್ರಿಗೆಂದು ಗದಗ್‌ ಸೇರಿದಾಗ ಕಾಲೇಜ್‌ ಹಾಗೂ ಸಾರ್ವಜನಿಕ ಗ್ರಂಥಾಲಯಗಳು ಮನಸ್ಸು ಸೆಳೆದವು. ಕ್ಲಾಸ್‌ ತಪ್ಪಿಸಿ ಕತೆ-ಕಾದಂಬರಿ ಓದುತ್ತ ಕೂತುಬಿಡುತ್ತಿದ್ದೆ.

ಹೀಗಾಗಿ ಮಾತು ಇನ್ನಷ್ಟು ಕಡಿಮೆಯಾಯಿತು. ಮಾತಿನ ಜಾಗವನ್ನು ಓದು ತುಂಬಿತು.

ಆದರೆ, ಓದಿನ ಜಾಗವನ್ನು ಇದುವರೆಗೆ ಬೇರೆ ಯಾವುದೂ ತುಂಬಲು ಆಗಿಲ್ಲ. ಅದು ಕೊಟ್ಟ ವಿಶಿಷ್ಟ ಖುಷಿ ಬೇರೆ ಯಾವುದರಿಂದಲೂ ಸಿಕ್ಕಿಲ್ಲ. ಇವತ್ತಿಗೂ ಅದು ಹಾಗೇ ಇದೆ.

ಮೌನದಿಂದ ನನ್ನ ವಿಚಾರಗಳನ್ನು ಗಮನಿಸುವುದು ಸುಲಭವಾಯಿತು. ನನ್ನ ವಿಚಾರಗಳನ್ನು ಹಿಂಬಾಲಿಸುತ್ತ ಹಗಲುಕನಸು ಕಾಣುವುದೂ ಜೋರಾಯಿತು. ಇವೆರಡೂ ಇನ್ನೇನು ನನ್ನ ವ್ಯಕ್ತಿತ್ವವನ್ನೇ ಹಾಳು ಮಾಡುತ್ತವೆ ಎಂಬಷ್ಟು ಅತಿಯಾದಾಗ ನಾನು ಬರೆಯಲು ಶುರು ಮಾಡಿದೆ. ನನ್ನ ದಿನಚರಿ ಬರವಣಿಗೆ ಶುರುವಾಗಿದ್ದು ಹೀಗೆ.

ಇದನ್ನೆಲ್ಲ ಏಕೆ ಹೇಳುತ್ತಿದ್ದೇನೆಂದರೆ, ಯಾವುದನ್ನು ಅತಿ ಅಂತ ಅಂದುಕೊಂಡಿರುತ್ತೇವೆಯೋ, ಅದಕ್ಕೆ ಪರಿಹಾರವೂ ಅದರ ಅಕ್ಕಪಕ್ಕದಲ್ಲೆಲ್ಲೋ ಇರುತ್ತದೆ. ಒಂದಿಷ್ಟು ವ್ಯವಧಾನ, ಆಸಕ್ತಿ ಇದ್ದರೆ ಕಾಣುತ್ತದೆ. ತಾಕುತ್ತದೆ. ಗಮನ ಸೆಳೆಯುತ್ತದೆ. ಹೊಸದರ ಹುಡುಕಾಟ, ಅದನ್ನು ತಿಳಿಯುವ ಖುಷಿ ನಮ್ಮ ದೋಷವನ್ನು ತಿದ್ದುತ್ತ ಹೋಗುತ್ತವೆ. ಮನಸ್ಸಿನೊಂದಿಗೆ ಮಾತನಾಡಿಕೊಳ್ಳುತ್ತ ಹಲವಾರು ವಿಷಯಗಳು ನನಗೆ ಸ್ಪಷ್ಟವಾಗಿವೆ. ಇನ್ನೊಬ್ಬರ ವಿಷಯಗಳನ್ನು ತಿಳಿದುಕೊಳ್ಳುವ ಗುಣವನ್ನು ಬೆಳೆಸಿವೆ. ನೋವು ಕಾಡಿದಾಗ, ಸಮಸ್ಯೆಗಳು ಎದುರು ನಿಂತು ಕಂಗೆಡಿಸಿದಾಗ ನಾನು ಮೌನವಾಗಿ ಓದುತ್ತ, ಬರೆಯುತ್ತ, ಹಾಡು ಕೇಳುತ್ತ ಗುಣವಾಗುತ್ತ ಹೋಗುತ್ತೇನೆ.

ಮೌನ ಜಗತ್ತಿನ ಸಮೃದ್ಧ ಭಾಷೆಯಂತೆ. ಅಷ್ಟೇ ಅಲ್ಲ, ಎಷ್ಟು ಬಳಸಿದರೂ ಖರ್ಚಾಗದ ಶಕ್ತಿಯೂ ಹೌದು. ಮನುಷ್ಯನನ್ನು ಬಿಟ್ಟು ಇತರ ಜೀವಜಗತ್ತು ಪರಸ್ಪರ ಸಂಭಾಷಿಸುವುದು ಬಹುತೇಕ ಹೀಗೇ ಅಲ್ಲವೆ? ತನ್ನ ಪಾಡಿಗೆ ತಾನು ನಿಂತಿರುವ ಮರ, ಅರಳುವ ಹೂ, ಮೇಯುವ ಹಸು, ಹಾರುವ ಹಕ್ಕಿ, ತಮ್ಮ ನೆಮ್ಮದಿಯಲ್ಲಿ ತಾವಿರುವುದನ್ನು ನೋಡಿದಾಗ, ಮೌನ ವರ ಎಂದು ಹಲವಾರು ಬಾರಿ ಅನ್ನಿಸಿದೆ.

ಈ ವಿವೇಕ ನನ್ನ ಉದ್ವೇಗವನ್ನು ಕಡಿಮೆ ಮಾಡುತ್ತದೆ. ಅಹಂ ಕುಗ್ಗಿಸುತ್ತದೆ. ಮಾತಿನಾಚೆಯ ಜಗತ್ತಿನ ಸೊಗಸಿನತ್ತ ಸೆಳೆಯುತ್ತದೆ. ಅದನ್ನು ನೆನದಾಗೆಲ್ಲ, ಬೆರಗಿನಿಂದ ಮನಸ್ಸು ಮೂಕವಾಗುತ್ತದೆ. ಮೌನ ಮಾತಾಗುತ್ತದೆ. ನಾನು ಅದನ್ನು ಕೇಳಿಸಿಕೊಳ್ಳುತ್ತ ಸುಮ್ಮನೇ ಕೂತುಬಿಡುತ್ತೇನೆ-

ಈ ಅಪರಾತ್ರಿ ಕೂತಂತೆ!

- ಚಾಮರಾಜ ಸವಡಿ
(ಚಿತ್ರ: ಓಂಶಿವಪ್ರಕಾಶ)

No votes yet

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.

ಉ: ಮೌನ ಎಂಬ ಸಮೃದ್ಧ ಭಾಷೆ

nkumar's picture

<<ತನ್ನ ಪಾಡಿಗೆ ತಾನು ನಿಂತಿರುವ ಮರ, ಅರಳುವ ಹೂ, ಮೇಯುವ ಹಸು, ಹಾರುವ ಹಕ್ಕಿ, ತಮ್ಮ ನೆಮ್ಮದಿಯಲ್ಲಿ ತಾವಿರುವುದನ್ನು ನೋಡಿದಾಗ, ಮೌನ ವರ ಎಂದು ಹಲವಾರು ಬಾರಿ ಅನ್ನಿಸಿದೆ>>

ನನ್ನ ಹಳ್ಳಿಗೆ ಹೋದಾಗ ನನಗೂ ಕೂಡ ಹೀಗೆ ಅನಿಸಿದೆ.

..

ASHOKKUMAR's picture

.

ಉ: ..

Chamaraj's picture

ನಿಮ್ಮ ಈ ಪ್ರತಿಕ್ರಿಯೆ ತುಂಬ ಹಿಡಿಸಿತು ಅಶೋಕ್‌. ತುಂಬಾ ಥ್ಯಾಂಕ್ಸ್‌.

ಉ: ..

ಗಣೇಶ's picture

ಅಶೋಕ್,
ನಿಮ್ಮ ಪ್ರತಿಕ್ರಿಯೆ ಸೂಪರ್.
ಚಾಮರಾಜ್,
ಲೇಖನ ಚೆನ್ನಾಗಿದೆ.
ನಾನು ಮೌನವಾಗಿದ್ದರೆ- ತಂದೆ,ತಾಯಿ,ಹೆಂಡತಿ,ಮಕ್ಕಳು ಎಲ್ಲರೂ ಉಷಾರಿಲ್ಲವಾ ಎಂದು ವಿಚಾರಿಸಲು ಸುರುಮಾಡುವರು. :)
-ಗಣೇಶ.

ಉ: ..

Chamaraj's picture

<< ನಾನು ಮೌನವಾಗಿದ್ದರೆ- ತಂದೆ,ತಾಯಿ,ಹೆಂಡತಿ,ಮಕ್ಕಳು ಎಲ್ಲರೂ ಉಷಾರಿಲ್ಲವಾ ಎಂದು ವಿಚಾರಿಸಲು ಸುರುಮಾಡುವರು >> :)

ತೀರಾ ಮೌನವಾಗಿ ಕೂತರೆ, ಪಾಪ ಅವರು ಇನ್ನೇನು ಮಾಡಿಯಾರು. ಅಷ್ಟೊಂದು ಮೌನವಾಗುವುದು ಬೇಡ ಗಣೇಶ್‌. ಅವಶ್ಯವಿದ್ದಷ್ಟು ಮಾತನಾಡಿ, ಅದು ಒಳ್ಳೆಯದೇ.

ಉ: ಮೌನ ಎಂಬ ಸಮೃದ್ಧ ಭಾಷೆ

Chamaraj's picture

ನಿಜ ನಂದಕುಮಾರ್‌, ಹಳ್ಳಿಗೆ ಹೋದಾಗ ತುಂಬ ಖುಷಿಯಾಗುತ್ತದೆ. ಅಲ್ಲಿರುವುದು ವಿಚಿತ್ರ ಅನಿಸುವಂಥ ಮೌನ. ಅವಕಾಶ ಸಿಕ್ಕಾಗೆಲ್ಲ ಊರಿಗೆ ಹೋಗಬೇಕು ಅನಿಸುತ್ತದೆ. ಆದರೆ, ಹೋಗಲು ಆಗುತ್ತಿಲ್ಲ. ಇದ್ದಲ್ಲೇ ನಂದನವನ ಸೃಷ್ಟಿಸಿಕೊಳ್ಳುವುದೊಂದೇ ದಾರಿ. ಅದು ನಗರದಲ್ಲಿ ಸಿಗುವುದಿಲ್ಲ ಎಂದೇ ರಾತ್ರಿ ಎದ್ದು ಕೂಡುವುದು.

ಓದು ಕೊಡುವ ಖುಶಿ

harshab's picture

<ಆದರೆ, ಓದಿನ ಜಾಗವನ್ನು ಇದುವರೆಗೆ ಬೇರೆ ಯಾವುದೂ ತುಂಬಲು ಆಗಿಲ್ಲ. ಅದು ಕೊಟ್ಟ ವಿಶಿಷ್ಟ ಖುಷಿ ಬೇರೆ ಯಾವುದರಿಂದಲೂ ಸಿಕ್ಕಿಲ್ಲ. ಇವತ್ತಿಗೂ ಅದು ಹಾಗೇ ಇದೆ.>

ನಿಜ, ಓದು ಕೊಡುವ ಸಂತಸದ ಸವಿಯೇ ಬೇರೆ.
ಓದು ತಿಳಿಸುತ್ತದೆ, ತಿಳುವಳಿಕೆ ಕೊಡುತ್ತದೆ.
ಓದು ಕಲ್ಪನಾ ಶಕ್ತಿ ಬೆಳೆಸುತ್ತದೆ, ಯೋಚನಾ ಲಹರಿ ವಿಸ್ತರಿಸುತ್ತದೆ.
ಓದು ಮತ್ತೆ ಓದುವಂತೆ ಮಾಡುತ್ತದೆ.

ಕೊನೆಯದಾಗಿ,

ಓದು ಬಲ್ಲವನಿಗೆ ಮಾತಿಲ್ಲ, ಮಾತಿಲ್ಲದವನಿಗೆ ಜಗಳವೇ ಇಲ್ಲ. :)

ಉ: ಓದು ಕೊಡುವ ಖುಶಿ

Chamaraj's picture

ಥ್ಯಾಂಕ್ಸ್‌ ಹರ್ಷ. ಓದಿನ ಸೊಗಸು ಸಾಕಷ್ಟಿವೆ. ಈ ಬಗ್ಗೆ ನೀವೂ ಒಂದಿಷ್ಟು ಬರೀರಿ. ನಮಗೂ ಹೊಸ ಸಾಧ್ಯತೆಗಳು ಗೊತ್ತಾಗುತ್ತವೆ.

ಓದು ಬಲ್ಲವನಿಗೆ ಮಾತು ಇರುತ್ತದೆ. ಆದರೆ, ಮನದೊಳಗೆ. ಮನದೊಳಗಿನ ಮಾತೇ ಬರವಣಿಗೆಯೂ ಆಗಬಲ್ಲುದು, ಅಲ್ಲವೆ?

ಉ: ಮೌನ ಎಂಬ ಸಮೃದ್ಧ ಭಾಷೆ

msudan86's picture

ಸವಡಿ ಸರ್,

>>ಮೌನದಿಂದ ನನ್ನ ವಿಚಾರಗಳನ್ನು ಗಮನಿಸುವುದು ಸುಲಭವಾಯಿತು. ನನ್ನ ವಿಚಾರಗಳನ್ನು ಹಿಂಬಾಲಿಸುತ್ತ ಹಗಲುಕನಸು ಕಾಣುವುದೂ ಜೋರಾಯಿತು. ಇವೆರಡೂ ಇನ್ನೇನು ನನ್ನ ವ್ಯಕ್ತಿತ್ವವನ್ನೇ ಹಾಳು ಮಾಡುತ್ತವೆ ಎಂಬಷ್ಟು ಅತಿಯಾದಾಗ ನಾನು ಬರೆಯಲು ಶುರು ಮಾಡಿದೆ. ನನ್ನ ದಿನಚರಿ ಬರವಣಿಗೆ ಶುರುವಾಗಿದ್ದು ಹೀಗೆ.<<<

ಬರೆಯೊದು ಅತಿಯಾಯಿತು ಅಂತ ಅದನ್ನು ನಿಲ್ಲಿಸಬ್ಯಾಡಿ ಸರ್, ನೀವೂ ಬರೆದದ್ದನ್ನಾ ಓದುವವರಲ್ಲಿ ನಾನೂ ಒಬ್ಬ ..
ಚಿಕ್ಕವರಿದ್ದಾಗ ತುಂಬ ಮಾತನಾಡುತ್ತಿದ್ದೆ ಈಗ ಮಾತನಾಡುವುದ್ದನ್ನು ಕಡಿಮೆ ಆಗಿದೆ ಅಂತ ನೀವೂ ಹೇಳಿದ್ದಿರಾ ,ತಿಳಿದವರು ಅಷ್ಟು ಇಲ್ಲದೆ ಹೇಳಿದ್ದರಾ "ಮಾತು ಬೆಳ್ಳಿ ಮೌನ ಬಂಗಾರ" ಅಂತ ಆದರೆ ನಾನೂ ನಿಮಗೆ ರಿವರ್ಸ್ ಅನ್ನಿಸುತ್ತೆ ಸರ್ ನಾನು ಚಿಕ್ಕವನಾಗಿದ್ದಾಗ ಮಾತೆ ಆಡುತ್ತಿರಲಿಲ್ಲವಂತೆ ಹಾಗಂತ ನಮ್ಮ ಅಮ್ಮ ಹೇಳುತಿದ್ದರೂ ಆದರೆ ಈಗ ಮಾತು ತುಂಬ ಜ್ಯಾಸ್ತಿ ಆಗಿದೆ ಸರ್.

ನಿಮ್ಮವನಾದ
--ಗೌಡ್ರು

ಉ: ಮೌನ ಎಂಬ ಸಮೃದ್ಧ ಭಾಷೆ

Chamaraj's picture

ಖಂಡಿತ ಬರೆಯುವುದನ್ನು ನಿಲ್ಲಿಸುವುದಿಲ್ಲ ಗೌಡ್ರೇ. ಈ ಕೆಲಸ ಮಾಡಬೇಕೆಂದು ಸರ್ಕಾರಿ ಕೆಲಸ ಬಿಟ್ಟು ಬಂದವನು ನಾನು. ಓದುವುದಷ್ಟೇ ಖುಷಿಯನ್ನು ಬರವಣಿಗೆಯಲ್ಲಿಯೂ ಅನುಭವಿಸುತ್ತಿದ್ದೇನೆ.

ನೀವು ಮೊದಲು ಮಾತೇ ಆಡದವರು ಇತ್ತೀಚೆಗೆ ತೀರಾ ಮಾತನಾಡುತ್ತಿದ್ದೀರಿ ಅಂತ ಹೇಳಿಕೊಂಡಿದ್ದೀರಿ. ನನಗೆ ಹಾಗೆ ಅನಿಸುವುದಿಲ್ಲ. ನಿಮ್ಮನ್ನು ಭೇಟಿಯಾದಾಗ ನೀವು ಮಾತನಾಡಿದ್ದು ಖುಷಿಯಿಂದ. ಅಂಥ ಸಂದರ್ಭದಲ್ಲಿ ಎಂಥ ಮೌನಿಯಾದರೂ ಖಂಡಿತ ಮಾತನಾಡುತ್ತಾನೆ.

ಮಾತನಾಡಿ. ಅದರಲ್ಲಿ ನಿಮಗೆ ಖುಷಿ ಸಿಗುವುದಾದರೆ ಅದು ಖಂಡಿತ ಉತ್ತಮವೇ. ಅದೇ ರೀತಿ, ಬರೆಯುವುದರಲ್ಲಿಯೂ ಸಕ್ರಿಯರಾಗಿ. ಏಕೆಂದರೆ, ನಿಮ್ಮ ವಿಶಿಷ್ಟ ಅನುಭವಗಳನ್ನು ನೀವು ತಾನೇ ಹೇಳಬೇಕು?

ಉ: ಮೌನ ಎಂಬ ಸಮೃದ್ಧ ಭಾಷೆ

shylaswamy's picture

ಪ್ರಿಯ ಚಾಮರಾಜ್ ಅವರೇ,
ನಿಮ್ಮ ಈ ಲೇಖನ ನನ್ನ ಮನಸ್ಸನ್ನು ಮುಟ್ಟಿತು. ಸ್ವಭಾವತಹ ನನ್ನದು ಮಾತು ಕಡಿಮೆ. ಹಾಗೂ ಓದುವ ಹುಚ್ಚು ಜಾಸ್ತಿ ಅಥವಾ ಸಂಗೀತ ಆಲಿಸುತ್ತಿರುವುದು ನನ್ನ ಹವ್ಯಾಸ. ಹೀಗಾಗಿ ನಿಮ್ಮ ಈ ಲೇಖನ ನನ್ನ ಮನಸ್ಸಿಗೆ ಹತ್ತಿರವೆನ್ನಿಸಿದೆ. ನೀವು ಹೇಳಿದಂತೆ ಓದು ಕೊಡುವ ವಿಶಿಷ್ಟ ಸಂತೋಷ ಪದಗಳಲ್ಲಿ ಹಿಡಿಯಲು ಸಾಧ್ಯವಿಲ್ಲ. ಧನ್ಯವಾದಗಳು ತಮ್ಮ ಈ ಮೌನ ಲೇಖನಕ್ಕೆ.
ಶೈಲಾಸ್ವಾಮಿ

ಉ: ಮೌನ ಎಂಬ ಸಮೃದ್ಧ ಭಾಷೆ

Chamaraj's picture

ನಿಜ ಅಮ್ಮ ನೀವು ಹೇಳಿದ್ದು: ಓದು ಹುಚ್ಚು ಅನ್ನುವುದಾದರೆ, ನಾನು ಶಾಶ್ವತ ಹುಚ್ಚನಾಗಲು ಇಷ್ಟಪಡುತ್ತೇನೆ. ಏಕೆಂದರೆ, ಅದರ ಖುಷಿಯೇ ಬೇರೆ. ನಿಮ್ಮ ಮೆಚ್ಚುಗೆ ಓದಿ ತುಂಬ ಖುಷಿಯಾಯಿತು.

ಉ: ಮೌನ ಎಂಬ ಸಮೃದ್ಧ ಭಾಷೆ

omshivaprakash's picture

"Ignorance is a Bliss" ಇದನ್ನ ಕೆಳೆದೆರಡುವಾರಗಳಿಂದ ೩-೪ ಬಾರಿ ಉಪಯೋಗಿಸುವ ಪ್ರಮೇಯ ಬಂದಿತ್ತು. ಕಾರ್ಕಳದಲ್ಲಿ ಗೊಮ್ಮಟನ ಬಳಿ ಹೊರಟಾಗ ತೆಗೆದ ಒಂದೆರಡು ಚಿತ್ರಗಳನ್ನ ತೆಗೆದಾಗ ಅರವಿಂದ ಮತ್ತು ನಾನು, ಬೆಟ್ಟದ ಮೇಲೊಂದು ಮನೆಯ ಮಾಡಿ, ಬಿರುಗಾಳಿಗೆ ಅಂಜಿದೊಡೆಂತಯ್ಯ? ಸಂತೆಯಲೊಂದು ಮನೆಯ ಮಾಡಿ ಶಬ್ದಕ್ಕೆ ಅಂಜಿದೊಡೆಂತೆಯ್ಯ ವಚನವನ್ನ ತಲೆಗೆ ತಂದುಕೊಂಡಿದ್ವು. ಇಲ್ಲಿ ವಚನಕಾರರು ಕಂಡುಕೊಂಡ ನೆಮ್ಮದಿಯನ್ನ, ಪ್ರಚಲಿತ ಬದುಕಿಲ್ಲಿ ಹೇಗೆ ಕಂಡುಕೊಳ್ಳಬಹುದೆಂದು ಸುಂದರವಾಗಿ ತಿಳಿಸಿದ್ದೀರಿ. ಅಬ್ಬಾ ಎಂಥಾ ಮಾತು "ಮೌನ ವರ".... ನೀವು ಒಂಟಿ ಮರದ ಲೇಖನ ಹಾಕೋದನ್ನೇ ಕಾಯ್ತಾ ಇದ್ದೆ. ಕೊನೆಗೂ ಓದುವ ಭಾಗ್ಯ ಸಿಕ್ಕಿತು.

ಉ: ಮೌನ ಎಂಬ ಸಮೃದ್ಧ ಭಾಷೆ

Chamaraj's picture

ನಿಮ್ಮ ’ಒಂಟಿಮರ’ ಚಿತ್ರ ನೋಡಿದಾಗಿಂದ ಅದು ಮನಸ್ಸನ್ನು ಸೆರೆ ಹಿಡಿದಿತ್ತು ಓಂಶಿವಪ್ರಕಾಶ್‌ ಅವರೇ. ಅದನ್ನು ಹೇಗೆ ಬಳಸಿಕೊಳ್ಳುವುದು ಎಂದು ತುಂಬ ಸಲ ಯೋಚಿಸಿದ್ದೆ. ಆದರೆ, ದಾರಿ ತಿಳಿದಿರಲಿಲ್ಲ. ನಿನ್ನೆ ಅದಕ್ಕೆ ಅವಕಾಶ ಕೂಡಿಬಂತು. ಹಾಗೆ ನೋಡಿದರೆ, ಈ ಬರಹಕ್ಕೆ ನಿಮ್ಮ ಚಿತ್ರವೇ ಪ್ರೇರಣೆ. ಹೀಗಾಗಿ, ಇದರ ಸಾರ್ಥಕ್ಯ ನಿಮಗೇ ಸಲ್ಲಬೇಕು.

ಓದುವ ಭಾಗ್ಯ ಸಿಕ್ಕಿತು ಎಂದು ಬರೆದಿದ್ದೀರಿ. ಅಲ್ಲ. ಬರೆಯುವ ಅವಕಾಶ ನನಗೆ ಸಿಕ್ಕಿತು. ಅದು ಭಾಗ್ಯ ಅಂದುಕೊಂಡಿದ್ದೇನೆ.

ಉ: ಮೌನ ಎಂಬ ಸಮೃದ್ಧ ಭಾಷೆ

kamalap09's picture

ಚಾಮರಾಜ್ ರವರೇ,

ನಿಮ್ಮ ಈ ಮೌನ ಲೇಖನ ಚೆನ್ನಾಗಿದೆ. ನನಗೂ ಒಮ್ಮೊಮ್ಮೆ ಬೇಸರವಾದಾಗ, ಕೋಪಬಂದಾಗ, ಮೌನವನ್ನು ತಾಳಿ, ಏಕಾಂಗಿಯಾಗಿ ಕಿವಿಗೆ ಹೆಡ್ ಫೋನ್ ಧರಿಸಿ ಹಾಡು ಕೇಳುತ್ತ ಕೆಲಸ ಮಾಡುತ್ತೇನೆ. ಆಗ ತನ್ನಕ್ಕಷ್ಟೆ ತಾನೇ ಕೋಪವು ಮಾಯವಾಗಿ, ಬೇಸರವು ಓಡಿ ಹೋಗುತ್ತದೆ. ಹಾಡು ಕೇಳುತ್ತ ಕೆಲಸ ಮಾಡುತ್ತಿರುತ್ತೇನೆ (ಸಂಗೀತ, ಕನ್ನಡ ಚಲನಚಿತ್ರಗೀತೆಗಳು, ಭಾವಗೀತೆ ಇತ್ಯಾದಿ), ಆಗ ಯಾರೊಂದಿಗೂ ಜಗಳವಿರುವುದಿಲ್ಲ. ಎಷ್ಟಾದರೂ "ಮೌನ"ವು ಆಭರಣವಲ್ಲವೇ!!!

ಉ: ಮೌನ ಎಂಬ ಸಮೃದ್ಧ ಭಾಷೆ

Chamaraj's picture

ಸಂಗೀತ ಕೂಡ ಅತ್ಯುತ್ತಮ ಔಷಧಿ. ಅತ್ಯುತ್ತಮ ವಿಚಾರ ಪ್ರಚೋದಕವೂ ಹೌದು. ನಾನೂ ಸಂಗೀತಪ್ರಿಯನೇ. ನನ್ನ ತುಂಬ ಬರವಣಿಗೆಗಳಿಗೆ ಇದೇ ಪ್ರೇರಣೆ. ನನ್ನ ಹಲವಾರು ಸಮಸ್ಯೆಗಳಿಗೆ ಇದು ಔಷಧಿಯೂ ಆಗಿದೆ. ಏಕತಾನತೆ ಮುರಿಯುವ ದಿವ್ಯ ಸಾಧನವಿದು.

ಉ: ಮೌನ ಎಂಬ ಸಮೃದ್ಧ ಭಾಷೆ

Shamala's picture

ಮಾನ್ಯರೆ

ನಿಮ್ಮ ಮೌನದ ಬಗೆಗೆಗಿನ ಲೇಖನ ತು೦ಬಾ ಚೆನ್ನಾಗಿದೆ. ನಿಮ್ಮ ಮಾತು ಅಕ್ಶರಶ: ಸರಿ... ಓದು ನಮ್ಮ ವಿಚಾರವನ್ತಿಕೆಯನ್ನು ಬೆಳೆಸುತ್ತದೆ. ಮನಸ್ಸಿಗೆ ನೋವಾದಾಗ ಓದಲು ಕುಳಿತರೆ, ಖ೦ಡಿತ್ತವಾಗಿ, ನಾವು ಕೊರಗುತ್ತಿರುವ ವಿಷಯ ಮರೆತುಹೋಗಿ, ಓದುತ್ತಿರುವ ಹೊಸ ವಿಷಯದ ಬಗ್ಗೆ ಮನಸ್ಸು ಯೋಚಿಸಲು ಶುರು ಮಾಡತ್ತೆ.

ಹಾಗೇ ಬ್ಲಾಗ್ ಬರೆಯುವುದೂ ಕೂಡ, ನಮ್ಮ ಮನಸ್ಸಿನ ಭಾವನೆಗಳನ್ನೆಲ್ಲಾ ನಮ್ಮ ಲೇಖನಿ ಕಾಗದದ ಮೇಲೆ ಅಚ್ಚು ಒತ್ತಿದಾಗ, ಮುನಿದು ಮುದುರಿಕೊ೦ಡ ಮನಸ್ಸು ಹೂವಾಗಿ ಅರಳಿ ಬಿಡತ್ತೆ. !!!

ಉ: ಮೌನ ಎಂಬ ಸಮೃದ್ಧ ಭಾಷೆ

sreepadhr's picture

ಮೌನವೇ ಸತ್ಯ, ಮಾತೆಂಬುದು ಮಿಥ್ಯ.
ಮೌನ ಅದ್ವೈತ - ಮಾತು ದ್ವೈತ.

ಉ: ಮೌನ ಎಂಬ ಸಮೃದ್ಧ ಭಾಷೆ

Chamaraj's picture

<< ಮೌನ ಅದ್ವೈತ - ಮಾತು ದ್ವೈತ >>

ನಿಜ ಸರ್‌. ನಿಮ್ಮ ಈ ತುಲನೆ ಹಿಡಿಸಿತು.

ಉ: ಮೌನ ಎಂಬ ಸಮೃದ್ಧ ಭಾಷೆ

Chamaraj's picture

ನಮ್ಮ ಸಮಸ್ಯೆಗಳಿಗೆ ಬಹುತೇಕ ಪರಿಹಾರ ನಮ್ಮಲ್ಲಿಯೇ ಇರುತ್ತದೆ. ಅದನ್ನು ಹುಡುಕಲು ಮೌನ ಅತ್ಯುತ್ತಮ ಮಿತ್ರ. ಅದು ನಮ್ಮನ್ನು ಸಂತೈಸುತ್ತದೆ. ಭರವಸೆ ತುಂಬುತ್ತದೆ. ಹೊಸ ಶಕ್ತಿ ಕೊಡುತ್ತದೆ. ಹೊಸ ವಿಚಾರಗಳು ಸಿಕ್ಕು, ಅವನ್ನು ಸವಿಯುತ್ತ ಸಮಸ್ಯೆಗಳಿಗೆ ಪರಿಹಾರ ನೀಡುತ್ತದೆ. ಬರವಣಿಗೆ ಕೂಡ ಮೌನ ಸನ್ನಿಧಾನದಲ್ಲೇ ರೂಪುಗೊಳ್ಳುವಂಥದು, ಅಲ್ಲವೆ?

ಉ: ಮೌನ ಎಂಬ ಸಮೃದ್ಧ ಭಾಷೆ

manjunath s reddy's picture

<<ನಮ್ಮ ಸಮಸ್ಯೆಗಳಿಗೆ ಬಹುತೇಕ ಪರಿಹಾರ ನಮ್ಮಲ್ಲಿಯೇ ಇರುತ್ತದೆ. ಅದನ್ನು ಹುಡುಕಲು ಮೌನ ಅತ್ಯುತ್ತಮ ಮಿತ್ರ. ಅದು ನಮ್ಮನ್ನು ಸಂತೈಸುತ್ತದೆ. ಭರವಸೆ ತುಂಬುತ್ತದೆ. ಹೊಸ ಶಕ್ತಿ ಕೊಡುತ್ತದೆ. ಹೊಸ ವಿಚಾರಗಳು ಸಿಕ್ಕು, ಅವನ್ನು ಸವಿಯುತ್ತ ಸಮಸ್ಯೆಗಳಿಗೆ ಪರಿಹಾರ ನೀಡುತ್ತದೆ. ಬರವಣಿಗೆ ಕೂಡ ಮೌನ ಸನ್ನಿಧಾನದಲ್ಲೇ ರೂಪುಗೊಳ್ಳುವಂಥದು>>

ನಿಜ ಸರ್
ಈ ಮೌನ ನನ್ನ ಏಳು ವರ್ಷದ ಸಂಗಾತಿ, ಶಕ್ತಿ, ಸ್ಪೂರ್ತಿ ಎಲ್ಲಾ... ಕಲೆಯ ಗಂದ ಗಾಳಿ ಗೊತ್ತಿಲ್ದೆ ಬಂದ ನನಗೆ.. ಅದರ ಬಗ್ಗೆ ಸ್ವಲ್ಪವಾದ್ರೂ ತಿಳ್ಕೊಂಡಿದ್ದು ಈ ಮೌನದ ಮೊರೆ ಹೊಕ್ಕನಂತರವೆ. ನಿಮ್ಮ ಲೇಖನ ಓದಿ ನನ್ನ ಈ ಮೌನದ ಪಯಣ ಎಲ್ಲ ನೆನಪಾಯ್ತು... :)

ಉ: ಮೌನ ಎಂಬ ಸಮೃದ್ಧ ಭಾಷೆ

gurubaliga's picture

ನಿಮ್ಮ ಈ ಪಿಸುಮಾತಿನಂತಹ ಸ್ವಗತ ನನ್ನೊಳಗಿನ ಮೌನ ಕದಡಿತು. ತುಂಬ ಥ್ಯಾಂಕ್ಸ್. ಬಹಳ ದಿನಗಳ ಬಳಿಕ ಇಂಥ ಓದು ಖುಷಿ ನೀಡಿತು.

ಉ: ಮೌನ ಎಂಬ ಸಮೃದ್ಧ ಭಾಷೆ

Chamaraj's picture

ಇದು ಮೌನದ ಮಾತು. ಪಿಸುಮಾತಿನಂತೆ ನಿಮಗೆ ಕೇಳಿಸಿದ್ದನ್ನು ಓದಿ ಖುಷಿಯಾಯಿತು.

ಉ: ಮೌನ ಎಂಬ ಸಮೃದ್ಧ ಭಾಷೆ

Seetharmorab's picture

ಮೌನ ಭಾಷೆಯ ಬಗ್ಗೆ ಚೆನ್ನಾಗಿ ಬರೆದಿದ್ದೀರಿ....
ನಾನು ಹೆಚ್ಚು ಪ್ರೀತಿಸುವುದು ಮೌನವನ್ನೇ....
ಸೀತ ಆರ್. ಮೊರಬ್

ಉ: ಮೌನ ಎಂಬ ಸಮೃದ್ಧ ಭಾಷೆ

Chamaraj's picture

ಥ್ಯಾಂಕ್ಸ್‌ ಸೀತ.

ಉ: ಮೌನ ಎಂಬ ಸಮೃದ್ಧ ಭಾಷೆ

uday_itagi's picture

ಚಾಮರಾಜ್ ಸರ್,
ನಾವು ತೀರ ಮೌನಿಗಳಾದಾಗ ನಮ್ಮ ಮೌನ ಹೀಗೆ ಬರಹರೂಪದಲ್ಲಿ ಮಾತಾಗಿ ಹೊರಹೊಮ್ಮುತ್ತದೆ. ಥ್ಯಾಂಕ್ಸ್ ಒಳ್ಳೆ ಲೇಖನ ಕೊಟ್ಟಿದ್ದಕ್ಕೆ.

ಉ: ಮೌನ ಎಂಬ ಸಮೃದ್ಧ ಭಾಷೆ

uday_itagi's picture

ಚಾಮರಾಜ್ ಸರ್,
ನಿಮ್ಮ ಮೌನದ ಬಗ್ಗೆ ನನಗೆ ಮೊದಲೇ ಸ್ವಲ್ಪ ಗೊತ್ತಿತ್ತು. ಆದರೆ ಇಷ್ಟೊಂದು ಅಂತ ಗೊತ್ತಿರಲಿಲ್ಲ. ಹೌದು, ನಿಮ್ಮನ್ನು ನಾನು ದೂರದಿಂದಲೇ ಅಲ್ಪ ಸ್ವಲ್ಪ ಬಲ್ಲೆ. ಹೇಗೆ ಅಂತ ಯಾವಾಗಲಾದರೂ ಹೇಳುವೆ.

ಉ: ಮೌನ ಎಂಬ ಸಮೃದ್ಧ ಭಾಷೆ

Chamaraj's picture

ನನ್ನ ಮೌನದ ಬಗ್ಗೆ ನಿಮಗೆ ಗೊತ್ತಾಗಿದ್ದು ಹೇಗೆ ಉದಯ್‌ ಅವರೇ. ನನ್ನ ಪರಿಚಯ ಬೇರೆ ಇದೆ ಅಂತೀರಿ. ನನಗೆ ನೆನಪಾಗುತ್ತಿಲ್ಲ.

ಉ: ಮೌನ ಎಂಬ ಸಮೃದ್ಧ ಭಾಷೆ

uday_itagi's picture

ಚಾಮರಾಜ್ ಸರ್,
ನಿಮಗೆ ನನ್ನ ಮುಖತಃ ಪರಿಚಯವಿಲ್ಲ. ನನ್ನ ದೊಡ್ದಪ್ಪನ (ಹೇಮಣ್ಣ ಕವಲೂರು) ಊರು ಅಳವಂಡಿಯಾಗಿದ್ದರಿಂದ ನಾನ ರಜೆಗೆ (SSLC ಓದುತ್ತಿರಬೇಕಾದರೆ) ಅಳವಂಡಿಗೆ ಬರುತ್ತಿದ್ದೆ. ನಿಮ್ಮ ತಂಗಿ ಮಂಜುಳಾ ಅವರು ನನ್ನ ಅಕ್ಕನ (ಬಸವರಾಜೇಶ್ವರಿ) ಗೆಳತಿಯಾಗಿದ್ದರಿಂದ ಅವರು ಆಗಾಗ್ಗೆ ನಮ್ಮ ಮನೆಗೆ ಬರುತ್ತಿದ್ದರು. ಆಗೆಲ್ಲಾ ಅವರು ನಿಮ್ಮ ಬಗ್ಗೆ ಹೇಳುತ್ತಿದ್ದುದನ್ನು ಕೇಳುತ್ತಿದ್ದೆ. ಹೀಗಾಗಿ ನಿಮ್ಮ ಮೌನದ ಬಗ್ಗೆ ಗೊತ್ತು. ನಿಮ್ಮ ತಂಗಿಯವರು ನಮ್ಮೊಂದಿಗೆ ಸಾಹಿತ್ಯಿಕ ಚರ್ಚೆಗಳನ್ನು ನಡೆಸುತ್ತಿದ್ದರು. ಬಹುಶಃ ಇದೆಲ್ಲ ಅವರಿಗೆ ಈಗ ನೆನಪಿರಲಿಕ್ಕಿಲ್ಲ. ಮುಂದೆ ಅವರು ಮದುವೆಯಾಗಿ ಧಾರವಾಡದಲ್ಲಿ ಸೆಟ್ಲ್ ಆದರೆಂದು ನನ್ನ ಅಕ್ಕನಿಂದ ತಿಳಿಯಿತು. ಆಮೇಲಾಮೇಲೆ ನಾನು ಹೆಚ್ಚಿನ ಓದಿಗಾಗಿ ಬೇರೆ ಬೇರೆ ಕಡೆ ಹೋಗಿದ್ದರಿಂದ ಊರಿಗೆ ಬರುವದು ಕಡಿಮೆಯಾಯಿತು. ಮುಂದೆ ನೀವು ಸ್ವಲ್ಪ ದಿವಸ ಗಂಗಾವತಿಯಲ್ಲಿ ಪತ್ರಕರ್ತರಾಗಿ ಕೆಲಸ ಮಾಡುತ್ತಿದ್ದಿರೆಂದು ನನ್ನ ಅಣ್ಣನಿಂದ ತಿಳಿಯಿತು. ನಾನು ಉಪನ್ಯಾಸಕನಾಗಿ ಬೆಂಗಳೂರಿನಲ್ಲಿ ವೃತ್ತಿ ಬದುಕು ಆರಂಭಿಸಿದಾಗ ನಿಮ್ಮ ಲೇಖನಗಳನ್ನು ಸುಧಾ, ಪ್ರಜಾವಾಣಿಯಲ್ಲಿ ಓದುತ್ತಿದ್ದೆ. ಈ ಟೀವಿಯಲ್ಲಿ ಸ್ವಲ್ಪ ದಿವಸ ಕೆಲಸ ಮಾಡಿದಿರೆಂದು ಕಾಣುತ್ತದೆ. ನಾವಿಬ್ಬರು ಸಂಪದಿಗರಾಗುವ ಮೂಲಕ ಹೀಗೆ ಪರಿಚಯವಾಗುತ್ತೇವೆಂದು ನಾನು ಕನಸು ಮನಸಿನಲ್ಲೂ ಎಣಿಸಿರಲಿಲ್ಲ. ಖಾಸಗಿ ಬದುಕನ್ನು ಸಾರ್ವತ್ರಿಕಗೊಳಿಸುವದರ ಮೂಲಕ ನಾವಿಬ್ಬರು ಹೀಗೆ ಪರಿಚಯವಾಗಿದ್ದಕ್ಕೆ ದಯವಿಟ್ಟು ತಪ್ಪು ತಿಳಿಯಬೇಡಿ. ಇದನ್ನೆಲ್ಲಾ ನಾನು ನಿಮಗೆ ಮೊದಲೇ ಏಕೆ ಹೇಳಲಿಲ್ಲವೆಂದರೆ ಯಾವುದೋ ಒಂದು ಪರಿಚಯ ಹೇಳಿ ಹತ್ತಿರವಾಗುವದು ನನಗೆ ಇಷ್ಟವಾಗುವದಿಲ್ಲ. ಆದರೆ ಇಂದು ನಿಮ್ಮ ಲೇಖನ ಇದಕ್ಕೆಲ್ಲ ಪೂರಕವಾಗಿದ್ದರಿಂದ ನಮ್ಮಿಬ್ಬರ ಪರಿಚಯಕ್ಕೆ ದಾರಿ ಮಾಡಿಕೊಟ್ಟಿತು. ನನಗೆ ನಿಮ್ಮ ಬಗ್ಗೆ ಮತ್ತು ನಿಮ್ಮೂರಿನ ಬಗ್ಗೆ ತುಂಬಾ ಹೆಮ್ಮೆಯಿದೆ. ಏಕೆಂದರೆ ನಿಮ್ಮೂರು ಸಾಕಷ್ಟು ಪ್ರತಿಭಾವಂತರನ್ನು ಹೊರಹಾಕಿದೆ. ಇರಲಿ, ವೀಸಾ ಸಿಕ್ಕರೆ ಶಿಘ್ರದಲ್ಲಿ ಬೆಂಗಳೂರಿಗೆ ಬರಲಿರುವೆ. ಹೀಗೆ ಬಂದಾಗ ನಿಮಗೆ ಪುರುಸೊತ್ತಿದ್ದರೆ ನಿಮ್ಮನ್ನು ಭೇಟಿಯಾಗುವೆ. ಆಗ ನೀವು ಮೌನವನ್ನು ಮುರಿದು ಮಾತಾಗಲೇಬೇಕು. ನನ್ನ ಈಮೇಲ್‍ಗೆ ನಿಮ್ಮ ಮೊಬೈಲ್ ನಂಬರ್ ಕಳಿಸಿ ಸಾಕು. ಮುಂದೆ ಮಾತು ಮತ್ತು ಮೌನ ಹಾಡ ಹಾಡಲಿವೆ. ನನ್ನ ಈಮೇಲ್: uday_itagi@rediffmail.com
ಪ್ರೀತಿಯಿಂದ
ಉದಯ್ ಇಟಗಿ

ಉ: ಮೌನ ಎಂಬ ಸಮೃದ್ಧ ಭಾಷೆ

Chamaraj's picture

ತಡವಾಗಿ ಪ್ರತಿಕ್ರಿಯೆ ನೀಡುತ್ತಿದ್ದೇನೆ ಉದಯ್‌. ನೀವು ನನ್ನ ಬಾಲ್ಯವನ್ನು ಮತ್ತೆ ನೆನಪಿಸಿದಿರಿ, ಥ್ಯಾಂಕ್ಸ್‌. ಬನ್ನಿ ಊರಿಗೆ. ಸದ್ಯಕ್ಕೆ ಬೆಂಗಳೂರಿಗೆ. ಖಂಡಿತ ಮಾತನಾಡುವೆ. ಅಲ್ಲಿಯವರೆಗೆ chamaraj AT gmail DOT com ಗೆ ಸಂಪರ್ಕಿಸುತ್ತಿರಿ.

ಉ: ಮೌನ ಎಂಬ ಸಮೃದ್ಧ ಭಾಷೆ

avikamath77's picture

ತುಂಬ ಒಳ್ಳೆಯ ಲೇಖನ ಚಾಮರಾಜ್ ಅವರೆ,
ನನ್ನ ಕತೆಯೂ ನೂರಕ್ಕೆ ನೂರರಷ್ಟು ನೀವು ಹೇಳಿದ ಹಾಗೆಯೇ ಇದೆ... ತುಂಬ ಮಾತನಾಡುತ್ತಿದ್ದ ನಾನು, ಅಚಾನಕ್ಕಾಗಿ ಮೌನಿಯಾದದ್ದೂ ಸರಿ ಸುಮಾರು ಹತ್ತನೇ ಕ್ಲಾಸಿನ ಪರೀಕ್ಷೆ ಮುಗಿದಾಗ..
ಮೌನವೆಂಬುದು ಸುಂದರ ಭಾಷೆಯೂ ಹೌದು.. ಸಮೃದ್ಧ ಭಾಷೆಯೂ ಹೌದು.
ಆದರೆ ಮೌನವೆಂಬುದು ಅಷ್ಟೇ ಭಯಾನಕವೂ ಹೌದು. ಎದೆಯಲ್ಲಿ ಮಾತಿನ ಸೆಲೆ ಉಕ್ಕುತ್ತಿರುವಾಗ, ನಾನೊಬ್ಬ ಮೌನಿ ಎಂಬುದು ನೆನಪಾಗಿ ಸುಮ್ಮನಾಗಬೇಕಾಗುವ
ಪ್ರಸಂಗಗಳು ಅತೀ ಭೀಕರ...

ಉ: ಮೌನ ಎಂಬ ಸಮೃದ್ಧ ಭಾಷೆ

ranjith's picture

ಲೇಖನ ತುಂಬಾ ಹಿಡಿಸಿತು ಸರ್‍.

ನಾನೂ ಮೌನದ ಫ್ಯಾನ್!!:)

ಸೃಜನಶೀಲತೆ ಮೌನದಲ್ಲೇ ಉತ್ತುಂಗ ಸ್ಥಿತಿಯಲ್ಲಿರುತ್ತದೆಂದು ನನ್ನ ನಂಬಿಕೆ. ಸುತ್ತ ಎಷ್ಟು ಜನರಿದ್ದರೂ ನನ್ನೊಳಗಿನ ಏಕಾಂಗಿತನವನ್ನೆಂದೂ ಕಳೆದುಕೊಂಡಿಲ್ಲ ನಾನು.

ಮಧುರ ಬರಹಕ್ಕೆ ಧನ್ಯವಾದಗಳು.

ಉ: ಮೌನ ಎಂಬ ಸಮೃದ್ಧ ಭಾಷೆ

Chamaraj's picture

ನಿಮ್ಮ ಕವಿತೆಗಳ ಆಳ ನೋಡಿದಾಗ ನನಗೂ ಹಾಗನ್ನಿಸಿತ್ತು ರಂಜಿತ್‌.

ನೀವಂದಿದ್ದು ದಿಟ. ಮೌನದಲ್ಲೇ ಉತ್ತುಂಗ ಸ್ಥಿತಿಗೇರುತ್ತದೆ ಸೃಜನಶೀಲತೆ. ಆದರೆ, ನಿಮ್ಮಂತೆ ಜನರ ಮಧ್ಯೆಯೂ ಏಕಾಂಗಿತನ ಕಾಯ್ದುಕೊಳ್ಳುವುದು ನನಗೆ ಸಿದ್ಧಿಸಿಲ್ಲ. ಹೀಗಾಗಿ, ಕಾವ್ಯ ಒಲಿದಿಲ್ಲ.

ಉ: ಮೌನ ಎಂಬ ಸಮೃದ್ಧ ಭಾಷೆ

Chamaraj's picture

ಎದೆಯಲ್ಲಿ ಮಾತು ಉಕ್ಕಿದಾಗ ಮಾತನಾಡಿ ಅವಿನಾಶ್‌. ಅದಕ್ಯಾಕೆ ಹಿಂಜರಿಯಬೇಕು? ಹಾಗಂತ ಯಾವಾಗಲೂ ಮೌನವಾಗಿ ಇರಲಾದೀತೆ?

ಉ: ಮೌನ ಎಂಬ ಸಮೃದ್ಧ ಭಾಷೆ

avikamath77's picture

ಮೌನದ ಹಿಂದೆ मजबूरी ಯೂ ಇರುತ್ತಲ್ವೆ ಚಾಮರಾಜ್..

ಉ: ಮೌನ ಎಂಬ ಸಮೃದ್ಧ ಭಾಷೆ

Chamaraj's picture

ಮಜಬೂರಿ ಇದ್ದಾಗಲೇ ಬರವಣಿಗೆ ನೆರವಿಗೆ ಬರುವುದು ಅವಿನಾಶ್‌.

ಉ: ಮೌನ ಎಂಬ ಸಮೃದ್ಧ ಭಾಷೆ

avikamath77's picture

ಈಗ ಅದನ್ನೇ ಮಾಡುತ್ತಿರುವುದು ಚಾಮರಾಜ್.. ಭೀಕರವಾದ ಮೌನವನ್ನು ಮರೆಯಲು... ಬರೆಯುವುದು...ಬರೆಯುವುದು..

ಉ: ಮೌನ ಎಂಬ ಸಮೃದ್ಧ ಭಾಷೆ

Harsha Vardhan's picture

ಮೌನವೇ ಆಭರಣ, ಮುಗುಳ್ನಗೆ ಶಶಿಕಿರಣ.....ಹಳೆ cute ಹಾಡು....ಉಲಿತಾ ಇದ್ದೇನೆ...;

ಉ: ಮೌನ ಎಂಬ ಸಮೃದ್ಧ ಭಾಷೆ

Chamaraj's picture

ನಿಜ ಹರ್ಷ. ಮೌನ ಆಭರಣ. ಮುಗುಳ್ನಗೆ ಶಶಿಕಿರಣ. ತಿಳಿ ಮಾತು ಎಳೆ ಬಿಸಿಲು. ಬಿರು ಮಾತು ಸುಡು ಬಿಸಿಲು. :)

ಉ: ಬರವಣಿಗೆ ಮಾಡ ಬಯಸುವವರು ಮೊದಲು ನಿಮ್ಮ ಬರಹ ಓದ ಬೇಕು.

hariharapurasridhar's picture

ರಮಣ ಮಹರ್ಷಿಗಳಮುಂದೆ ಮೌನವಾಗಿ ಕುಳಿತರೆ ಸಾಕು ಸಾವಿರ ಮಾತನಾಡಿದಷ್ಟು ಉತ್ತರ ಸಿಗುತ್ತಿತ್ತಂತೆ. ಸಾಮನ್ಯರಿಗೆ ಮೌನ ಕಷ್ಟ. ಆದರೆ ಸಮಸ್ಯೆ ಎದುರಾದಾಗ ಅರ್ಧ ಗಂಟೆ ಕುಳಿತು ಆಚರಿಸಿದ ಮೌನದಿಂದ ಪರಿಹಾರ ದಕ್ಕೀತು.ನಾನು ಅನೇಕ ಭಾರಿ ಅಂದುಕೊಳ್ಳುವೆ, ಮಾತು ಕಡಿಮೆ ಮಾಡಬೇಕೆಂದು. ಉಹೂ,ಅದು ನನ್ನಿಂದ ಅಸಾಧ್ಯವಾಗಿದೆ. ಅದಕ್ಕೇ ಈಗ ನೆಟ್ ಮುಂದೆ ಮೌನವಾಗಿ ಕೂರುವುದನ್ನು ಅಭ್ಯಾಸ ಮಾಡಿಕೊಳ್ಳುತ್ತಿರುವೆ.ಒಂದಂತೂ ನಿಸ್ಸಂಕೋಚವಾಗಿ ಹೇಳುವೆ, ಬರವಣಿಗೆ ಮಾಡ ಬಯಸುವವರು ಮೊದಲು ನಿಮ್ಮ ಬರಹ ಓದ ಬೇಕು.

ಉ: ಬರವಣಿಗೆ ಮಾಡ ಬಯಸುವವರು ಮೊದಲು ನಿಮ್ಮ ಬರಹ ಓದ ಬೇಕು.

Chamaraj's picture

<< ಬರವಣಿಗೆ ಮಾಡಬಯಸುವವರು ಮೊದಲು ನಿಮ್ಮ ಬರಹ ಓದಬೇಕು >>

ಹಾಗೇನಿಲ್ಲ ಸರ್‌. ಬರೆಯುವ ತೀವ್ರತೆ ಹಾಗೂ ಸರಳ ಪ್ರಸ್ತುತಿ ಸಾಕೆನಿಸುತ್ತದೆ. ಮೌನ ಅದಕ್ಕೊಂದು ಸ್ಪಷ್ಟತೆ ಕಟ್ಟಿಕೊಡುತ್ತದೆ. ತೀವ್ರತೆ ತರುತ್ತದೆ.