ಕತ್ತೆ=ಕುದುರೆ=ಸಮಾನತೆ
ಶೀರ್ಷಿಕೆ ತಮಾಷೆಯಾಗಿದೆಯಲ್ವಾ?
ವಾಸ್ತವ ಅದಕ್ಕಿಂತ ಹೆಚ್ಚು ತಮಾಷೆಯಾಗಿರುತ್ತದೆ. ಅಷ್ಟೇ ಅಲ್ಲ, ಅನೇಕ ಸಾರಿ ದುರಂತವೂ ಆಗಿರುತ್ತದೆ.
ಒಂದು ಕತೆ ಕೇಳಿ. ಕಂಪನಿಯೊಂದರಲ್ಲಿ ಹಲವಾರು ಮಹತ್ವದ ಹುದ್ದೆಗಳು ಖಾಲಿ ಇದ್ದವು. ಸುದ್ದಿ ತಿಳಿಯುತ್ತಲೇ ಕುದುರೆಗಳು ಅರ್ಜಿ ಹಾಕಿದವು. ಸ್ವಲ್ಪ ದಿನಗಳ ನಂತರ ಸಂದರ್ಶನಕ್ಕೆ ಕರೆ ಬಂದಿತು.
ಅಲ್ಲಿ ನೋಡಿದರೆ, ಕತ್ತೆಗಳು ಕೂಡ ಸಂದರ್ಶನಕ್ಕೆ ಬಂದಿವೆ! ಆಘಾತಗೊಂಡ ಕುದುರೆಗಳು ಪ್ರಶ್ನಿಸಿದವು, ’ಈ ಹುದ್ದೆಗಳನ್ನು ಕುದುರೆಗಳು ಮಾತ್ರ ನಿಭಾಯಿಸಬಲ್ಲವು. ಅದ್ಹೇಗೆ ನೀವು ಸಂದರ್ಶನಕ್ಕೆ ಬಂದಿದ್ದೀರಿ?’
ಕತ್ತೆಗಳು ಹೆಮ್ಮೆಯಿಂದಲೇ ಇಂಟರ್‌ವ್ಯೂ ಕಾರ್ಡ್ ತೋರಿಸಿದವು. ಅನುಮಾನವೇ ಇಲ್ಲ, ಕತ್ತೆಗಳನ್ನು ಅಧಿಕೃತವಾಗಿಯೇ ಸಂದರ್ಶನಕ್ಕೆ ಕರೆಯಲಾಗಿತ್ತು.
ಸ್ವಲ್ಪ ಹೊತ್ತಿನ ನಂತರ ಸಂದರ್ಶನ ಪ್ರಾರಂಭವಾಯಿತು. ಒಂದು ಕತ್ತೆಯ ನಂತರ ಒಂದು ಕುದುರೆಯನ್ನು ಕರೆಯಲಾಗುತ್ತಿತ್ತು. ಕತ್ತೆಗಳ ಜೊತೆ ಗುರುತಿಸಿಕೊಳ್ಳಬೇಕಲ್ಲ ಎಂಬ ಮುಜುಗರದಿಂದಲೇ ಕುದುರೆಗಳು ಸಂದರ್ಶನ ಮುಗಿಸಿದವು. ಕತ್ತೆಗಳಿಗೆ ಮಾತ್ರ ಹೆಮ್ಮೆಯೋ ಹೆಮ್ಮೆ.
ಸ್ವಲ್ಪ ದಿನಗಳ ನಂತರ ನೇಮಕಾತಿ ಆದೇಶಗಳು ಬಂದವು. ಕುದುರೆಗಳಿಗೆ ಸಂತಸ. ’ಪರವಾಗಿಲ್ಲ, ಕತ್ತೆಗಳೊಂದಿಗೆ ಸಂದರ್ಶನ ನೀಡಬೇಕಾಗಿ ಬಂದರೂ ಕೆಲಸ ಸಿಕ್ಕಿತಲ್ಲ’ ಎಂದು ಖುಷಿಯಿಂದಲೇ ಕಚೇರಿಗೆ ಹೋದವು.
ಅಲ್ಲಿ ಆಘಾತ ಕಾಯ್ದಿತ್ತು. ಕತ್ತೆಗಳು ಕೂಡ ಕೆಲಸಕ್ಕೆ ಹಾಜರಾಗಲು ಬಂದಿವೆ! ಅವಕ್ಕೂ ಅಪಾಯಿಂಟ್‌ಮೆಂಟ್ ಆರ್ಡರ್ ಸಿಕ್ಕಿದ್ದವು!
ಕುದುರೆಗಳಿಗೆ ಮತ್ತೆ ಮುಜುಗರ ಪ್ರಾರಂಭವಾಯಿತು. ಬಾಸ್‌ನನ್ನು ಕಂಡು ತಮ್ಮ ಭಾವನೆಗಳನ್ನು ವಿವರಿಸಿದವು: ’ಸರ್, ನಾವು ಕುದುರೆಗಳು. ನಾವು ಉತ್ತಮರು ಎಂಬ ಭಾವನೆಗಲ್ಲ, ನಮ್ಮ ಸಾಮರ್ಥ್ಯ ಮತ್ತು ಪ್ರತಿಭೆಯೇ ಬೇರೆ. ಅದಕ್ಕೆ ತಕ್ಕ ಕೆಲಸ ಕೊಡಿ. ಕತ್ತೆಗಳೊಂದಿಗೆ ನಮ್ಮನ್ನು ಸಮೀಕರಿಸಬೇಡಿ.’
ಆದರೆ ಬಾಸ್ ಅವುಗಳ ವಾದ ಒಪ್ಪಲಿಲ್ಲ. ’ಇದು ಸಮಾನತೆಯ ಕಾಲ. ಕುದುರೆಗಳಿಗೆ ದೊರೆಯುವ ಎಲ್ಲ ಅವಕಾಶಗಳು ಕತ್ತೆಗಳಿಗೂ ದೊರೆಯಲಿವೆ. ನೀವು ಅವುಗಳ ಜೊತೆಗೇ ಕೆಲಸ ಮಾಡಬೇಕು. ಯಾರು ಚೆನ್ನಾಗಿ ಕೆಲಸ ಮಾಡುತ್ತಾರೋ ಅವರಿಗೆ ಮನ್ನಣೆ ಖಂಡಿತ ದೊರೆಯುತ್ತದೆ.’
ಕುದುರೆಗಳಿಗೆ ಅಸಮಾಧಾನವಾದರೂ ಅನಿವಾರ್ಯವಾಗಿ ಸುಮ್ಮನಾದವು. ಕೆಲಸ ಪ್ರಾರಂಭವಾಯಿತು. ಕ್ರಮೇಣ ಕತ್ತೆ ಹಾಗೂ ಕುದುರೆಗಳಿಗೆ ಇರುವ ವ್ಯತ್ಯಾಸ ಸ್ಪಷ್ಟವಾಗಿ ಗೊತ್ತಾಗಲು ಶುರುವಾಯಿತು. ಕುದುರೆಗಳು ಚೆನ್ನಾಗಿ ಕೆಲಸ ಮಾಡುತ್ತಿದ್ದವು. ಕಠಿಣ ಕೆಲಸವನ್ನು ಹಗುರವಾಗಿ ಮಾಡಿ ಮುಗಿಸುತ್ತಿದ್ದವು. ಆದರೆ ಕತ್ತೆಗಳಿಗೆ ಅಂಥ ಸೂಕ್ಷ್ಮ ಇರಲಿಲ್ಲ. ದೊಡ್ಡ ಸಾಮರ್ಥ್ಯದ ಕೆಲಸಗಳನ್ನು ಮಾಡಲು ಅವಕ್ಕೆ ಸಾಧ್ಯವಾಗುತ್ತಲೂ ಇರಲಿಲ್ಲ.
ಹಾಗಂತ ಕೆಲಸ ಬಿಟ್ಟು ಕೊಡಲೂ ಅವು ತಯಾರಿರಲಿಲ್ಲ. ’ನಾವೂ ನಿಮ್ಮಂತೇ ಸಮಾನರು. ನಮ್ಮಿಬ್ಬರ ಗ್ರೇಡ್ ಒಂದೇ. ಸಂಬಳ ಒಂದೇ. ಕೆಲಸ ಒಂದೇ. ಸ್ವಲ್ಪ ಕಡಿಮೆ ಗುಣಮಟ್ಟ ಬಂದರೇನಂತೆ, ಸಹಿಸಿಕೊಳ್ಳಬೇಕಪ್ಪ’ ಎಂದು ವಾದಿಸಿದವು.
ಸ್ವಲ್ಪ ದಿನ ಹೀಗೇ ನಡೆಯಿತು. ಕಚೇರಿಗೆ ಬಂದವರು ಕತ್ತೆಗಳ ಜೊತೆ ಕುದುರೆಗಳು ಕೆಲಸ ಮಾಡುತ್ತಿದ್ದುದನ್ನು ಕಂಡು ತಮಾಷೆ ಮಾಡಿದರು. ಎಷ್ಟೋ ಸಾರಿ, ಕತ್ತೆಗಳ ಕಳಪೆ ಕೆಲಸದ ಜವಾಬ್ದಾರಿಯನ್ನು ಕುದುರೆಗಳೂ ಹೊರಬೇಕಾಗಿ ಬಂದಿತು. ಆದರೆ, ’ಸಮಾನತೆ’ ವಾದ ಮುಂದೊಡ್ಡಿ ಅದನ್ನೆಲ್ಲ ಸಮರ್ಥಿಸಲಾಯಿತು.
ಇದೆಲ್ಲ ಅತಿರೇಕವಾಯಿತು ಅನ್ನಿಸಿದಾಗ ಕುದುರೆಗಳಲ್ಲಿ ಕೆಲವು ಮತ್ತೆ ಬಾಸ್ ಕಂಡು ತಮ್ಮ ಅಳಲು ತೋಡಿಕೊಂಡವು. ಕತ್ತೆಗಳ ಜೊತೆ ಇದ್ದರೆ ನಮ್ಮ ಕೆಲಸದ ಮಹತ್ವ ಗೊತ್ತಾಗುವುದಿಲ್ಲ. ಕೆಲಸವನ್ನು ಕಳಪೆಯಾಗಿ ಹಾಗೂ ಕಡಿಮೆ ಪ್ರಮಾಣದಲ್ಲಿ ಮಾಡಿದರು ಕೂಡ ಅವು ನಮ್ಮೊಂದಿಗೆ ವೇದಿಕೆ ಹಂಚಿಕೊಳ್ಳುತ್ತವೆ. ಅದರ ಬದಲು, ಕತ್ತೆ ಚೆನ್ನಾಗಿ ಮಾಡಬಹುದಾದ ಕೆಲಸವನ್ನು ಕತ್ತೆಗೆ ಕೊಡಿ, ಕುದುರೆಗಳು ಚೆನ್ನಾಗಿ ಮಾಡುವ ಕೆಲಸವನ್ನು ಕುದುರೆಗಳು ಮಾಡಲಿ. ಒಂದೇ ಕಚೇರಿಯಲ್ಲಿದ್ದರೂ ಸರಿ, ಅವರವರ ಸಾಮರ್ಥ್ಯಕ್ಕೆ ತಕ್ಕ ಕೆಲಸವನ್ನು ಹಂಚಿಕೊಡಿ ಎಂದು ವಿನಂತಿಸಿಕೊಂಡವು.
ಆದರೆ ಬಾಸ್ ಕೇಳಲಿಲ್ಲ. ’ನಮ್ಮ ಪಾಲಿಸಿಯೇ ಹಾಗಿದೆ. ಸಮಾನತೆ ನಮ್ಮ ಮಂತ್ರ. ಕತ್ತೆಗಳು ಮೂಲತಃ ಕುದುರೆಗಿಂತ ಕಡಿಮೆ ದರ್ಜೆಯದು ಎಂದು ನಮಗೆ ಗೊತ್ತಿದೆ. ಅವುಗಳ ಸಾಮರ್ಥ್ಯ ಹೆಚ್ಚಿಸಲು ತುಂಬ ಸಮಯ ಹಾಗೂ ಹಣ ಬೇಕಾಗುತ್ತದೆ. ಅದು ನಮ್ಮಿಂದ ಸಾಧ್ಯವಿಲ್ಲ. ಹಾಗಂತ ಕೇವಲ ಕುದುರೆಗಳನ್ನು ಮಾತ್ರ ಕೆಲಸಕ್ಕೆ ತೆಗೆದುಕೊಳ್ಳಲು ಆಗದು. ಆದ್ದರಿಂದಲೇ ಕತ್ತೆ ಮತ್ತು ಕುದುರೆಗಳನ್ನು ಒಟ್ಟೊಟ್ಟಿಗೇ ಕೆಲಸಕ್ಕೆ ತೆಗೆದುಕೊಂಡಿದ್ದೇವೆ’ ಎಂದು ವಿವರಿಸಿದರು.
’ಆದರೆ, ಇದರಿಂದ ಕೆಲಸದ ಗುಣಮಟ್ಟ ಹೇಗೆ ಸಾಧ್ಯವಾಗುತ್ತದೆ ಸರ್?’ ಎಂದವು ಕುದುರೆಗಳು.
’ಸಿಂಪಲ್. ಕುದುರೆಗಳ ಜೊತೆ ಇರುವುದರಿಂದ ಕತ್ತೆಗಳು ತಮ್ಮ ಕೀಳರಿಮೆ ಕಳೆದುಕೊಂಡು, ತಾವೂ ಕುದುರೆಗಳಿಗೆ ಸರಿ ಸಮ ಎಂದು ಹೆಮ್ಮೆ ಪಡುತ್ತವೆ. ಇನ್ನೊಂದೆಡೆ, ಕತ್ತೆಗಳ ಜೊತೆ ಇರುವುದರಿಂದ ಕುದುರೆಗಳಲ್ಲಿ ಕೀಳರಿಮೆ ಉಂಟಾಗಿ, ಅವು ಕತ್ತೆಗಳ ಮಟ್ಟಕ್ಕೆ ಇಳಿಯುತ್ತವೆ. ಇದರಿಂದ ಇಡೀ ಕಚೇರಿಯಲ್ಲಿ ಒಂದೇ ಮಟ್ಟದ ವರ್ಕ್ ಫೋರ್ಸ್ ಸೃಷ್ಟಿಯಾಗುತ್ತದೆ. ಹೇಗಿದೆ ಐಡಿಯಾ?’, ಕೇಳಿದರು ಬಾಸ್.
ನೀತಿ: ಅಂದಿನಿಂದ ಬಹುತೇಕ ಕಚೇರಿಗಳಲ್ಲಿ ಕುದುರೆಗಳ ಜೊತೆ ಜೊತೆ ಕತ್ತೆಗಳೂ ಸಮನಾಗಿ ಕೆಲಸ ಮಾಡುವ ವಾತಾವರಣ ಸೃಷ್ಟಿಯಾಯಿತು. ಸಾಮಾಜಿಕ ನ್ಯಾಯದಂತೆ ಇದೂ ಒಂಥರಾ ಬೌದ್ಧಿಕ ನ್ಯಾಯ.
ಅನುಮಾನ ಬಂದರೆ, ನೀವು ಕೆಲಸ ಮಾಡುತ್ತಿರುವ ವಾತಾವರಣವನ್ನು ಸೂಕ್ಷ್ಮವಾಗಿ ಗಮನಿಸಿ ನೋಡಿ.
- ಚಾಮರಾಜ ಸವಡಿ
(ಪ್ರೇರಣೆ: ಒನ್ ನೈಟ್ @ ಕಾಲ್ ಸೆಂಟರ್)

- Chamaraj ರವರ ಬ್ಲಾಗ್
- Login or register to post comments
- 210 hits
- Email this blog





RSS:
ಪ್ರತಿಕ್ರಿಯೆಗಳು
ಉ: ಕತ್ತೆ=ಕುದುರೆ=ಸಮಾನತೆ
ಈ ಕತೆಯನ್ನು ಬರೆದ ಮೂಲ ಲೇಖಕ ಯಾರೇ ಇರಲಿ, ಬಹಳ ದುರಹಂಕಾರಿ ಇರಬೇಕು. ತಾನು ಮತ್ತು ತನ್ನಂಥವರು ಬಿಟ್ಟರೆ ತಮ್ಮಂಥ ಕೆಲಸಕ್ಕೆ ಯಾರೂ ಲಾಯಕ್ಕಿಲ್ಲ ಅನ್ನುವ ಸೊಕ್ಕು ಈ ಕತೆಯಲ್ಲಿದೆ. ಬಹಳ ಕೀಳು ಅಭಿರುಚಿಯ ಬರಹ ಇದು. ಎಷ್ಟೋ ವರ್ಷಗಳಿಂದ ಯಾವುದೇ ಸೌಲಭ್ಯವಿಲ್ಲದೆ ವಂಚಿತರಾದವರು ಸ್ವಲ್ಪ ಆರ್ಥಿಕವಾಗಿ ಸಾಮಾಜಿಕವಾಗಿ ಮುಂದೆಬರುವುದನ್ನು ಸಹಿಸಲಾರದ ಕೊಳೆತ ಮನಸ್ಸು ಮಾತ್ರ ಹೀಗೆ ಯೋಚಿಸಬಲ್ಲುದು. ಆತ್ಮರತಿಯ ಪರಮಾವಧಿ
"ಏರಿದವನು ಚಿಕ್ಕವನಿರಬೇಕು"
ಉ: ಕತ್ತೆ=ಕುದುರೆ=ಸಮಾನತೆ
>ಆತ್ಮರತಿಯ ಪರಮಾವಧಿ
ನಿಜ...
ಎಷ್ಟು ಕಲಿತರೆ ಏನು ಬಂತು... ಮನಸ್ಸು ಕೊಳೆತು ಹೋಗಿದ್ದರೆ?!
ಸವಿತೃ
ಉ: ಕತ್ತೆ=ಕುದುರೆ=ಸಮಾನತೆ
ಇಲ್ಲಿ ಕುದುರೆಗಳು ಬರೀ ತಾವು ಕುದುರೆಗಳು ಮತ್ತು ಬೇರೆಯವರು ಕತ್ತೆಗಳು ಎಂದು ತಿಳಿದಂತಿದೆ....
ಏನೇ ಆಗಲಿ... ತಂಮ ತಂಮ ಕೆಲಸ ನೀಟಾಗಿ ಮಾಡಿಕೊಂಡು ಹೋದರಾಯಿತು, ಜೊತೆ ಕತ್ತೆ ಇದ್ದರೇನು, ಕುದುರೆ ಇದ್ದರೇನು, ಆನೆ ಇದ್ದರೇನು....
ಈ ಕತೆಯ ಒಸುಗೆ ಹಿಡಿಸಲಿಲ್ಲ.
=====================================
ಮಾಯ್ಸ!
ಉ: ಕತ್ತೆ=ಕುದುರೆ=ಸಮಾನತೆ
>ಶೀರ್ಷಿಕೆ ತಮಾಷೆಯಾಗಿದೆಯಲ್ವಾ?
ಹೌದು .. ಆದ್ರೆ ಉದ್ದೇಶ ಅಸಹ್ಯವಾಗಿದೆ.
>ಅನುಮಾನ ಬಂದರೆ, ನೀವು ಕೆಲಸ ಮಾಡುತ್ತಿರುವ ವಾತಾವರಣವನ್ನು ಸೂಕ್ಷ್ಮವಾಗಿ ಗಮನಿಸಿ ನೋಡಿ.
ಸ್ವಲ್ಪ ದೊಡ್ದದಾಗಿಯೂ ಯೋಚಿಸ್ಬಹುದಿತ್ತು. ಈ ಕುದುರೆಗಳು ಹೇಗೆ ಕತ್ತೆಗಳೆಲ್ಲ ನಾಲಾಯಕ್ಕು ಅಂತ ಅನ್ನ್ದುಕೊಂಡಿದ್ದಾವೋ ಹಾಗೆಯೇ ಕತ್ತೆಗಳು ಸಹ ಈ ಕುದುರೆಗಳೆಲ್ಲ ಕಂತ್ರಿ ಬುದ್ಧಿಯವು, ತುಂಬ ನ್ಯಾರ್ರೋ ಮೈನ್ಡೆದ್ ಅಂತ ಅಂದುಕೊಂಡಿರ್ತವೆ. ಸ್ವಲ್ಪ ಇಲ್ಲೇ ನಿಮ್ಮ ಅಂಕಣವನ್ನೇ ಗಮನಿಸಿ.
ಕುದುರೆಗಳ ಅಸೋಸಿಯೇಷನ್ ಮಾಡಿಕೊಂಡು ಅಲ್ಲಿ ಪುಂಕ ಊದಿದರೆ ನಡೆಯುತ್ತೆ. ಇಂತ ಜಾಗದಲ್ಲಿ ಕುದುರೆ ಜೊತೆ...ಆನೆ ಹುಲಿ ಸಿಂಹಗಳು, ಕತ್ತೆ ಕಿರುಬ ನರಿ ಗಳು ಇರುತ್ತವೆ. ನೋಡಿಕೊಂಡು ಕೆಲಸ ಮಾಡಿದರೆ ಬ್ರಮೆ ತಾನೆ ತಾನಾಗಿ ತೊಲಗುತ್ತದೆ.
ಕುದುರೆಗಳ ಬಗ್ಗೆ ಗೌರವವಿದೆ . ಏಕೆಂದರೆ ಅವಕ್ಕೆ ಅವಗಳದೆ ಆದ ವಿಶೇಷ ಗುಣವಿದೆ. ಹಾಗಂತ ಬೇರೆ ಪ್ರಾಣಿಗಳ ಗುಣಗಳನ್ನು ಕೀಳಾಗಿ ಕಾಣಬಾರದು. ಕಣ್ತೆರೆದು ನೋಡಿ!
ಶೇಮ್ .. ಶೇಮ್ ..... ಮುಂದಾದರೂ ಸ್ವಲ್ಪ ವಿಶಾಲವಾಗಿ ಯೋಚಿಸಿ ಬರೆಯಿರಿ.
ಸವಿತೃ
ಉ: ಕತ್ತೆ=ಕುದುರೆ=ಸಮಾನತೆ
ಚಿಕ್ಕಂದಿನಲ್ಲಿ ಕಲಿತ ಒಂದು ಪದ್ಯ ಈ ಮೇಲಿನ ಲೇಖನ ಓದಿದಾಗ ನೆನಪಿಗೆ ಬಂತು. ಕವಿ ಯಾರೆನ್ನುವುದು ಮರೆತುಹೋಗಿದೆ. ತಿಳಿದವರು ಯಾರಾದರೂ ಹೇಳಿ.
"ಸಂತೆಗೆ ಹೋದನು ಭೀಮಣ್ಣ
ಹಿಂಡಿಯ ಕೊಂಡನು ಹತ್ತು ಮಣ
ಕತ್ತೆಯ ಬೆನ್ನಿಗೆ ಹೇರಿಸಿದ
ಕುದುರೆಯ ಜೊತೆಯಲಿ ಸಾಗಿಸಿದ.
ಕತ್ತೆಯು ಅರಚಿತು ಓ ಗೆಳೆಯ
ಅರ್ಧವ ನೀ ಹೊರು, ದಮ್ಮಯ್ಯ!!
ಕುದುರೆಗೆ ಕೂಗಿದು ಕೇಳಿಸಿತು
ಕತ್ತೆಯ ಕಿರಿಚನು ಚಾಳಿಸಿತು.
ನಿನ್ನಯ ಬೆನ್ನಿಗೆ ಹಾಕಿದನು
ಅದಕೇ ನಿನ್ನನು ಸಾಕಿದನು
ನೀನೇ ಹೊತ್ತುಕೊ ಬೇಗ ನಡಿ
ದಣಿಯದೊ ಬರುವನು ಹಾದಿ ಹಿಡಿ
ಬಂದನು ಆಗಲೆ ಭೀಮಣ್ಣ ಕುದುರೆಗೆ ಹೊರಿಸಿದ ಹತ್ತು ಮಣ
ಹೊತ್ತಿತು ಕುದುರೆಯು ಹೊರೆಯನ್ನು
ಅತ್ತಿತು ಬಗ್ಗಿಸಿತದು ಬೆನ್ನು
ಕುದುರೆಯು ಹೇಳಿತು ಕತ್ತೆಯನು
"ಮರೆಯೆನು ನಿನ್ನುಪಕಾರವನು
ಒಂದಿಷ್ಟಾದರೂ ಹೊತ್ತುಬಿಡು
ನನ್ನಯ ಪ್ರಾಣವ ಉಳಿಸಿಕೊಡು".
ಕತ್ತೆಯು ಹೇಳಿತು ಹಿಗ್ಗಿನಲಿ
"ಆಗೇನಂದಿಹೆ ಸೊಕ್ಕಿನಲಿ?
ನನ್ನಯ ಕಷ್ಟದಿ ಹಿಗ್ಗಿದ್ದಿ.
ಬಂತೇ ಈಗಾದರೂ ಬುದ್ಧಿ?
ನೀ ನನಗಿದ್ದರೆ ನಾ ನಿನಗೆ
ನೆನಪಿರಲೀ ನುಡು ನಮ್ಮೊಳಗೆ"
"ಏರಿದವನು ಚಿಕ್ಕವನಿರಬೇಕು"
ಉ: ಕತ್ತೆ=ಕುದುರೆ=ಸಮಾನತೆ
ಗುಱುಱಾಜ
www.kannadaguru.blogspot.com
"ವಾಸ್ತವ ಅದಕ್ಕಿಂತ ಹೆಚ್ಚು ತಮಾಷೆಯಾಗಿರುತ್ತದೆ. ಅಷ್ಟೇ ಅಲ್ಲ, ಅನೇಕ ಸಾರಿ ದುರಂತವೂ ಆಗಿರುತ್ತದೆ"
ಆದರೆ ಇಲ್ಲಿ ಈ ಕತೆಯೇ ಒ೦ದು ದುರ೦ತ.ನಿಜಕ್ಕೂ ಈ ಕತೆಯ ಲೇಖಕ ವೈಕಕ್ತಿಕ ದ್ವೇಷದ ಮೇಲೆ ಬರೆದ೦ತಿದೆಯೇನೋ ಎನಿಸುತ್ತದೆ.