ಅಗ್ನಿದ್ರವ ಗೆದ್ದು ಬಂದ ಮಹಾಲಕ್ಷ್ಮಿ
ಎಂಟು ವರ್ಷಗಳ ಹಿಂದಿನ ಘಟನೆ.
ಮೈಸೂರಿನ ಒಂಟಿಕೊಪ್ಪಲು ಪ್ರದೇಶದಲ್ಲಿದ್ದ ತಮ್ಮ ಕ್ಲಿನಿಕ್‌ನ ಬಾಗಿಲು ಹಾಕಿದ ನಂತರ ಯುವ ವೈದ್ಯೆಯೊಬ್ಬರು ಮನೆಯತ್ತ ಹೊರಟಿದ್ದರು. ರಸ್ತೆಯಲ್ಲಿನ್ನೂ ಜನಸಂಚಾರವಿತ್ತು. ಇದ್ದಕ್ಕಿದ್ದಂತೆ ಬಂದ ವ್ಯಕ್ತಿಯೊಬ್ಬ ಅವರ ಮುಖದ ಮೇಲೆ ಆಸಿಡ್ ಎರಚಿ ಓಡಿಹೋದ.
ಜೋರಾಗಿ ಚೀರಿಕೊಂಡ ವೈದ್ಯೆ ನೆಲಕ್ಕೆ ಕುಸಿದಳು. ಮುಖಕ್ಕೆ ಬೆಂಕಿ ಹೊತ್ತಿಕೊಂಡಂತಾಗಿತ್ತು. ಆಸಿಡ್ ಹೊಕ್ಕಿದ್ದರಿಂದ ಒಂದು ಕಣ್ಣು ಪೂರ್ತಿ ದೃಷ್ಟಿ ಕಳೆದುಕೊಂಡಿತ್ತು. ನೋವಿನಿಂದ ಚೀರುತ್ತಿದ್ದ ಆಕೆ, ನೆರವಿಗಾಗಿ ಮೊರೆಯಿಟ್ಟಳು. ಆದರೆ, ಮೈಸೂರಿನ ಸುಸಂಸ್ಕೃತ ಜನ ಸಹಾಯ ಮಾಡುವುದಿರಲಿ, ಆಕೆಯ ನೋವನ್ನು ನೋಡುತ್ತ ಸುಮ್ಮನೇ ನಿಂತಿದ್ದರು. ಆಟೊದಲ್ಲಾದರೂ ಹತ್ತಿಸಿ ಕಳಿಸಿ, ನಾನು ಆಸ್ಪತ್ರೆಗೆ ಹೋಗುತ್ತೇನೆ ಎಂದು ಈ ಹೆಣ್ಣುಮಗಳು ಬೇಡಿಕೊಂಡರೂ ಸಾಂಸ್ಕೃತಿಕ ಊರಿನ ಜನರ ಮನ ಕರಗಲಿಲ್ಲ.
ಡಾ. ವೈ.ಎನ್. ಮಹಾಲಕ್ಷ್ಮೀ ಎಂಬ ಆ ಯುವವೈದ್ಯೆಯ ಬದುಕು ಅಂದಿನಿಂದ ಬದಲಾಗಿ ಹೋಯಿತು.
ಘಟನೆಯಾಗಿ ಎಂಟು ವರ್ಷಗಳಾಗಿವೆ. ಆಸಿಡ್ ದಾಳಿ ಡಾ. ಮಹಾಲಕ್ಷ್ಮಿಯವರ ಒಂದು ಕಣ್ಣನ್ನು ಕಿತ್ತುಕೊಂಡಿದೆ. ಸುಂದರ ರೂಪವನ್ನು ಅಳಿಸಿದೆ. ಆಸಿಡ್ ಎರಚಿದ ವ್ಯಕ್ತಿ ಬಂಧನದ ದಿನದಂದೇ ಜಾಮೀನು ಪಡೆದು ಹೊರಬಂದಿದ್ದಾನೆ. ಇವತ್ತಿಗೂ ಅಟ್ಟಹಾಸದಿಂದ ಓಡಾಡಿಕೊಂಡೇ ಇದ್ದಾನೆ. ಒಬ್ಬ ವ್ಯಕ್ತಿ ಜಗತ್ತಿನ ಬಗ್ಗೆ, ಅದರ ನೀತಿ-ನಿಯಮಗಳ ಬಗ್ಗೆ ನಂಬಿಕೆ ಕಳೆದುಕೊಳ್ಳಲು ಬೇಕಾದ ಎಲ್ಲಾ ದೌರ್ಜನ್ಯಗಳು ಈ ಹೆಣ್ಣುಮಗಳ ಮೇಲೆ ಆಗಿಹೋಗಿವೆ. ಸಣ್ಣಪುಟ್ಟ ಘಟನೆಗಳಿಗೆ ತೀವ್ರವಾಗಿ ಪ್ರತಿಕ್ರಿಯಿಸುವ ಮಹಿಳಾವಾದಿಗಳು, ಸೋ ಕಾಲ್ಡ್ ಬುದ್ಧಿಜೀವಿಗಳು, ಮಹಿಳಾ ಸಂಘಟನೆಗಳು, ಎನ್‌ಜಿಓಗಳು- ಹೀಗೆ ಯಾರೆಂದರೆ ಯಾರೂ ಡಾ. ಮಹಾಲಕ್ಷ್ಮೀ ಅವರಿಗೆ ಸಹಾಯ ಹಸ್ತ ನೀಡಲಿಲ್ಲ.
ಈ ಸಂದರ್ಭದಲ್ಲಿ ದಿ ಹಿಂದು ಪತ್ರಿಕೆಯಲ್ಲಿ ಬಂದಿದ್ದ ಲೇಖನವೊಂದು ಅವರ ಬದುಕಿಗೆ ಮಹತ್ವದ ತಿರುವು ನೀಡಿತು. ಆಸಿಡ್ ದಾಳಿಗೆ ಒಳಗಾಗಿದ್ದ ಯುವಕನೊಬ್ಬ ಬದುಕು ಕಟ್ಟಿಕೊಂಡ ರೀತಿ ಅವರಿಗೆ ಹೊಸ ಭರವಸೆ ಮೂಡಿಸಿತು. ಮುರಿದ ಕನಸುಗಳ ಜಾಗದಲ್ಲಿ ಹೊಸ ಕನಸುಗಳನ್ನು ಕಟ್ಟಿಕೊಂಡರು. ಯಾವ ಬದುಕೂ ಬದುಕಲಾರದಷ್ಟು ನಿಕೃಷ್ಟವಲ್ಲ ಎಂಬ ಭರವಸೆ ಬೆಳೆಸಿಕೊಂಡರು. ಬದುಕು ಇಲ್ಲಿಗೇ ಮುಗಿದಿಲ್ಲ, ಬದಲಾಗಿ, ಇಲ್ಲಿಂದ ಶುರುವಾಗಿದೆ ಅಂದುಕೊಂಡು ಮತ್ತೆ ವೈದ್ಯವೃತ್ತಿ ಶುರು ಮಾಡಿದರು. ಸದ್ಯ ಮೈಸೂರಿನ ಚಾಮುಂಡಿಬೆಟ್ಟದಲ್ಲಿರುವ ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ವೈದ್ಯಾಧಿಕಾರಿಯಾಗಿರುವ ಅವರು, ಸದ್ದಿಲ್ಲದೇ ಬಡಜನರ ಸೇವೆಯಲ್ಲಿ ನಿರತರಾಗಿದ್ದಾರೆ. ಡಿವಿಜಿ ಹೇಳಿದಂತೆ,
ಹುಲ್ಲಾಗು ಬೆಟ್ಟದಡಿ, ಮನೆಗೆ ಮಲ್ಲಿಗೆಯಾಗು
ಕಲ್ಲಾಗು ಕಷ್ಟಗಳ ಮಳೆಯ ವಿಧಿ ಸುರಿಯೆ
ಬೆಲ್ಲ ಸಕ್ಕರೆಯಾಗು ದೀನದುರ್ಬಲರಿಂಗೆ
ಎಲ್ಲರೊಳೊಂದಾಗು, ಮಂಕುತಿಮ್ಮ
ಎಂಬಂತೆ ಎಲ್ಲರೊಳೊಂದಾಗಿ ಬದುಕುತ್ತಿದ್ದಾರೆ.
ಹೆತ್ತವರ ಬೆಂಬಲವನ್ನಷ್ಟೇ ಬೆನ್ನಿಗಿಟ್ಟುಕೊಂಡು ಕಾಯಕದಲ್ಲಿ ನಿರತರಾಗಿರುವ ಡಾ. ಮಹಾಲಕ್ಷ್ಮಿ, ಆಸಿಡ್ ದಾಳಿಗೆ ತುತ್ತಾದವರ ಪಾಲಿಗೆ ಹೊಸ ಭರವಸೆ. ನೋವು ನುಂಗಿ ನಗು ಹರಡುತ್ತಿರುವ ಸಂಜೀವಿನಿ.
- ಚಾಮರಾಜ ಸವಡಿ
- Chamaraj's blog
- Login or register to post comments
- 661 ಹಿಟ್ಸ್
ಈ ಪುಟವನ್ನು ಇ-ಮೇಯ್ಲ್ ಮಾಡಿ
Printer-friendly version



RSS:
ಪ್ರತಿಕ್ರಿಯೆಗಳು
ಉ: ಅಗ್ನಿದ್ರವ ಗೆದ್ದು ಬಂದ ಮಹಾಲಕ್ಷ್ಮಿ
ಬಹಳ ಹೊತ್ತು ಸಂಕಟವಾಯಿತು ಓದಿ. ಹಾಗೆ ಅವರ ಈಗಿನ ಸಾಧನೆಯನ್ನು ಓದಿ ಹೆಮ್ಮೆಯೂ ಆಯಿತು. ನಿಜವಾಗಲೂ ಇಂತಹ ಮಹಿಳೆಯರು ನಮಗೆ ಮಾದರಿಯಾಗಬೇಕು.
ಉ: ಅಗ್ನಿದ್ರವ ಗೆದ್ದು ಬಂದ ಮಹಾಲಕ್ಷ್ಮಿ
ಮಹಾಲಕ್ಷ್ಮೀಯವರ ಛಲ ಖಂಡಿತವಾಗಿ ಮಾದರಿ. ಆದರೆ, ಅದರಿಂದ ನಿಮಗೆ ಎಂಥ ಪ್ರೇರಣೆ ದೊರೆಯುತ್ತದೆ ಹೇಳ್ತೀರಾ? ಅವರಿಗಾದ ಅನ್ಯಾಯವನ್ನು ಹೇಗೆ ಸರಿದೂಗಿಸುತ್ತೀರಿ?
ಉ: ಅಗ್ನಿದ್ರವ ಗೆದ್ದು ಬಂದ ಮಹಾಲಕ್ಷ್ಮಿ
ಇದಕ್ಕೇನು ಪ್ರತಿಕ್ರಿಯಿಸುವುದೋ ತೋಚದಾಗಿದೆ. ಇಂತದೊಂದು ಅನ್ಯಾಯವೆಸಗಿದವರು ಇನ್ನೂ ಅಟ್ಟಹಾಸದಿಂದ ಮೆರೆಯುತ್ತಿರುವುದು, ನಮ್ಮ ಸಮಾಜದ ಸ್ವಾಸ್ಥ್ಯಕ್ಕೆ ಹಿಡಿದ ಕನ್ನಡಿ. ಈಕೆಯ ಛಲ ನಮ್ಮೆಲ್ಲರಿಗೆ ಆದರ್ಶವಾಗಲಿ.
ಉ: ಅಗ್ನಿದ್ರವ ಗೆದ್ದು ಬಂದ ಮಹಾಲಕ್ಷ್ಮಿ
ಓಕೆ, ವಿನುತ, ಮಹಾಲಕ್ಷ್ಮಿಯವರ ಛಲ ಆದರ್ಶವಾಗಲಿ. ಆದರೆ, ಅಂಥ ಆದರ್ಶ ಇಟ್ಟುಕೊಂಡು ಏನು ಮಾಡುತ್ತೀರಿ?
ಉ: ಅಗ್ನಿದ್ರವ ಗೆದ್ದು ಬಂದ ಮಹಾಲಕ್ಷ್ಮಿ
ಸವಡಿ ಸರ್
ಮನಕಲುಕುವ ಲೇಖನ, ಯಾವುದೇ ತಪ್ಪಿಲ್ಲದ ಮಹಾಲಕ್ಷ್ಮಿಗೆ ಯಾಕೀ ಶಿಕ್ಷೆ.
ಅರವಿಂದ್
ಉ: ಅಗ್ನಿದ್ರವ ಗೆದ್ದು ಬಂದ ಮಹಾಲಕ್ಷ್ಮಿ
ತಪ್ಪು ಮಾಡಿದವರಿಗೆಲ್ಲ ಶಿಕ್ಷೆಯಾಗುತ್ತದೆ ಎಂದು ಏಕೆ ಅಂದುಕೊಂಡಿರಿ ಅರವಿಂದ್? ಸಾಮಾನ್ಯವಾಗಿ ಶಿಕ್ಷೆಯಾಗುವುದು ತಪ್ಪು ಮಾಡದ ಅಮಾಯಕರಿಗೇ.
ಉ: ಅಗ್ನಿದ್ರವ ಗೆದ್ದು ಬಂದ ಮಹಾಲಕ್ಷ್ಮಿ
ಚಾಮರಾಜ ಸರ್,
ಪಬ್‍ಗೆ ಹೋಗುವ ಹೆಣ್ಣುಮಕ್ಕಳನ್ನು ಹಿಡಿದು ತದುಕಲು ಮುಂದಾಗುವ ನಮ್ಮ ಜನ ಅಸಿಡ್ ಎರಚಿದವರನ್ನು ತದುಕಲು ಮುಂದಾಗುವದಿಲ್ಲ.
ಉ: ಅಗ್ನಿದ್ರವ ಗೆದ್ದು ಬಂದ ಮಹಾಲಕ್ಷ್ಮಿ
ನಿಜ ಉದಯ್, ಪಬ್‌ಗೆ ಹೋಗುವವರನ್ನು ತದುಕಿದರೆ ಪ್ರಚಾರ ಸಿಗುತ್ತದೆ. ನಾಳೆ ಅವರೆಲ್ಲ ನಮ್ಮ ಜನಪ್ರತಿನಿಧಿಗಳಾದರೂ ಅಚ್ಚರಿಯಿಲ್ಲ. ಆದರೆ, ಆಸಿಡ್ ಎರಚಿದವನನ್ನು ತದುಕಿದರೆ ಯಾರು ಪ್ರಚಾರ ಕೊಡುತ್ತಾರೆ? ಹೀಗಾಗಿ, ಜನ ಸುಮ್ಮನೇ ನಿಂತು ತಮ್ಮ ಹೇಡಿತನ ಸಾಬೀತುಪಡಿಸುತ್ತಾರೆ.
ಉ: ಅಗ್ನಿದ್ರವ ಗೆದ್ದು ಬಂದ ಮಹಾಲಕ್ಷ್ಮಿ
ಏನು ಮಾತನಾಡಬೇಕೆಂಬುದೇ ತಿಳಿಯುತ್ತಿಲ್ಲ..... ಮಹಾಲಕ್ಷ್ಮಿಯವರ ಛಲ ಇಂಥ ಅನೇಕ ಮಹಿಳೆಯರಿಗೆ ಮಾದರಿಯಾಗಲಿ
ನಿರೂಪಣೆ ಮನಕಲಕುವಂತಿದೆ ಸರ್...
ಉ: ಅಗ್ನಿದ್ರವ ಗೆದ್ದು ಬಂದ ಮಹಾಲಕ್ಷ್ಮಿ
ಥ್ಯಾಂಕ್ಸ್ ಭವಾನಿ. ನಿರೂಪಣೆಗಿಂತ ವಿಷಯ ಮನಕಲಕುವಂಥದು, ಅಲ್ವೇ?
ಉ: ಅಗ್ನಿದ್ರವ ಗೆದ್ದು ಬಂದ ಮಹಾಲಕ್ಷ್ಮಿ
ಆತ್ಮೀಯ ಚಾಮರಾಜ್ ಸರ್,
ಸು.ಶ್ರೀ.ಮಹಾಲಕ್ಷ್ಮಿ ಅವರು ಸೋತು ಮತ್ತೆ ಬದುಕು ಕಟ್ಟಿಕೊಂಡು ಗೆದ್ದ ಪರಿ ಅಗಾಧವೆನಿಸಿತು. ನಮ್ಮ ದೇಶದಲ್ಲಿ ಅನ್ಯಾಯ ಮಾಡುವವರಿಗೆ ರಕ್ಷಣೆ ಇದೆ. ಅನ್ಯಾಯ ಬೆಂಬಲಿಸುವವರಿಗೆ ಎಲ್ಲ ಅಧಿಕಾರಸ್ಥರ ಸಹಕಾರವಿದೆ. ವ್ಯವಸ್ಥೆಯನ್ನು ಹಣ ಆಳುತ್ತದೆ. ಹೋರುವುದೇ ಸಮೃದ್ಧಿಗೋಸುಗ ನಮಗೆ ದಾರಿಯಾತ್ಮೋನ್ನತಿಗೆ ಅಂದಿದ್ದರಲ್ಲ ತಿಂಮಗುರು ಹಾಗೆ.
ಮನಮುಟ್ಟುವ ಲೇಖನ ಬರೆದಿದ್ದೀರಿ. ಅವರ ಬದುಕಿನ ಪ್ರತಿ ಪ್ರೀತಿ ನನಗೆ ಮನನೀಯ.
ಹರ್ಷವರ್ಧನ್ ಶೀಲವಂತ.
ಉ: ಅಗ್ನಿದ್ರವ ಗೆದ್ದು ಬಂದ ಮಹಾಲಕ್ಷ್ಮಿ
ಡಾ. ಮಹಾಲಕ್ಷ್ಮೀ ಅನುಭವಿಸಿದ ಕಷ್ಟದ ನಂತರವೂ ಎದ್ದು ನಿಲ್ಲುವ ಪರಿ ಎಲ್ಲರಿಗೂ ದಕ್ಕುವಂಥದಲ್ಲ ಹರ್ಷ. ಅದಕ್ಕೆ ಸಾಕಷ್ಟು ಗಟ್ಟಿ ಮನಸ್ಸು ಬೇಕು. ತುಂಬ ಯಾತನೆ ಅನುಭವಿಸಿದ್ದಾರೆ ಅವರು. ನಮ್ಮ ನಮ್ಮ ನೆಲೆಗಳಿಂದ ಅವರಿಗೆ ಬೆಂಬಲ ನೀಡಬೇಕು. ಗುರುತಿಸಿಕೊಳ್ಳಬೇಕು. ಜೊತೆಗಿದ್ದೀವಿ ಎಂಬ ನೆಮ್ಮದಿ ನೀಡಬೇಕು. ಅಂಥದ್ದೇನಾದರೂ ಆದರೆ ಮಾತ್ರ ಅವರಿಗೆ ನ್ಯಾಯ ದೊರಕಿದಂತೆ. ಕೇವಲ ಆಸಿಡ್ ಹಾಕಿದವನಿಗೆ ಶಿಕ್ಷೆ ನೀಡಿದರೆ ಸಾಲದು, ಅವರೊಂದಿಗೆ ಗುರುತಿಸಿಕೊಳ್ಳುವ ಕೆಲಸವೂ ಆಗಬೇಕಿದೆ.
ಸಾಧ್ಯವಾದರೆ, ಪತ್ರಿಕೋದ್ಯಮದ ವಿದ್ಯಾರ್ಥಿಗಳನ್ನು ಒಮ್ಮೆ ಮೈಸೂರಿಗೆ ಕರೆದುಕೊಂಡು ಹೋಗಿ ಅವರ ಭೇಟಿ ಮಾಡಿಸಿ. ಭವಿಷ್ಯದ ಪತ್ರಕರ್ತರಿಗೆ ಇದಕ್ಕಿಂತ ಉತ್ತಮ ಜೀವನ ಪಾಠ ಇನ್ನೊಂದಿರದು.
ಉ: ಅಗ್ನಿದ್ರವ ಗೆದ್ದು ಬಂದ ಮಹಾಲಕ್ಷ್ಮಿ
ಪ್ರಿಯ ಚಾಮರಾಜರೇ,
ನಮಸ್ಕಾರ. ಹೇಗಿದ್ದೀರಿ. ಬಹಳ ದಿನವಾಯ್ತು ನಿಮ್ಮ ಲೇಖನವನ್ನು ಓದಿ. ನಿಮ್ಮ ಬ್ಲಾಗ್ ಓದಿ ಕರುಳ ಚುರುಕ್ ಎಂದಿತು. ನಾನು ಅಲ್ಲಿದ್ದಿದ್ದರೆ ಮಹಾಲಕ್ಷ್ಮಿಯವರನ್ನು ನೋಡಿಯೂ ಅವರಿಗೆ ಸಹಾಯ ಮಾಡಲಾಗದ ಕಟುಹೃದಯಿಗಳ ಸಾಲಿಗೇ ಸೇರುತ್ತಿದ್ದೆನೇ ಎಂಬ ಪ್ರಶ್ನೆ, ಸಂಶಯ ನನ್ನಲ್ಲಿ ಮೂಡಿತು. ನಾವು ಮಾನವರು ಯಾಕೆ ಹೀಗೆ ಎಂಬ ಪ್ರಶ್ನೆ ಮಾತ್ರ ಸದಾ ಕಾಡುತ್ತದೆ. ಎಂತಹ ಬೂಟಾಟಿಕೆಯ ಜನ!
ಇನ್ನು "ಯಾವ ಬದುಕೂ ಬದುಕಲಾರದಷ್ಟು ನಿಕೃಷ್ಟವಲ್ಲ " ಎಂಬ ಸತ್ಯ ಮಹಾಲಕ್ಷ್ಮಿಯವರಂತೆ ನೋವನ್ನುಂಡವರಿಗೆಲ್ಲ, ಕಡೆಗೆ ನಮ್ಮಂತವರಿಗೂ ಜೀವದಾನ ಮಾಡೀತು.
ನಿಮಗೆ ಒಳ್ಳೆಯದಾಗಲಿ.
ಪ್ರೀತಿಯಿಂದ,
ಶಶಿ
ಉ: ಅಗ್ನಿದ್ರವ ಗೆದ್ದು ಬಂದ ಮಹಾಲಕ್ಷ್ಮಿ
<< ಬಹಳ ದಿನವಾಯ್ತು ನಿಮ್ಮ ಲೇಖನವನ್ನು ಓದಿ >>>
ನನಗೂ ನಿಮ್ಮ ಪ್ರತಿಕ್ರಿಯೆ ನೋಡಿ ಬಹಳ ದಿನವಾಯ್ತು. ಹೇಗಿದ್ದೀರಿ? ಆದರ್ಶ ಮತ್ತು ವಾಸ್ತವದ ನಡುವೆ ಇನ್ನೂ ಸಂಘರ್ಷ ನಡೆದಿದೆಯಾ?
ಉ: ಅಗ್ನಿದ್ರವ ಗೆದ್ದು ಬಂದ ಮಹಾಲಕ್ಷ್ಮಿ
ಆಸಿಡ್ ದಾಳಿಯಂತಹ ಕೃತ್ಯ ಎಸಗುವವರಿಗೆ, ಅಂತಹುದೆ ಶಿಕ್ಷೆ ಸಿಗೋ-ಹಾಗೆ ಮಾಡ್ಬೇಕು. ಅವಾಗ ಇಂತಹ ಕ್ರೌರ್ಯಗಳು ನಿಲ್ಲಬಹುದು.
:(
ಉ: ಅಗ್ನಿದ್ರವ ಗೆದ್ದು ಬಂದ ಮಹಾಲಕ್ಷ್ಮಿ
<< ಆಸಿಡ್ ದಾಳಿಯಂತಹ ಕೃತ್ಯ ಎಸಗುವವರಿಗೆ, ಅಂತಹುದೆ ಶಿಕ್ಷೆ ಸಿಗೋ-ಹಾಗೆ ಮಾಡ್ಬೇಕು. ಅವಾಗ ಇಂತಹ ಕ್ರೌರ್ಯಗಳು ನಿಲ್ಲಬಹುದು >> >
ಊಹೂಂ, ಉಪಯೋಗವಿಲ್ಲ ಹರ್ಷ. ಆಗ, ಭಾರತ ತಾಲಿಬಾನ್ ರೀತಿ ಆಗುತ್ತೆ. ಅಂಥವರ ಆಸ್ತಿ ಮುಟ್ಟುಗೋಲು ಹಾಕಿಕೊಂಡು ಜೈಲಿಗೆ ತಳ್ಳಬೇಕು. ಅಂಥ ಆಸ್ತಿಯನ್ನು ನೊಂದ ಮಹಿಳೆಯ ಚಿಕಿತ್ಸೆಗೆ ಹಾಗೂ ಜೀವನಾಂಶಕ್ಕೆ ನೀಡುವಂತಾಗಬೇಕು. ಸರ್ಕಾರ ಇದನ್ನು ಮಾನವೀಯ ನೆಲೆಯಲ್ಲಿ ನೋಡಿದಾಗ ಮಾತ್ರ ಪರಿಹಾರ ದೊರಕಲು ಸಾಧ್ಯ.
ಉ: ಅಗ್ನಿದ್ರವ ಗೆದ್ದು ಬಂದ ಮಹಾಲಕ್ಷ್ಮಿ
ಚಾಮರಾಜ್,
ಲೇಖನ ಓದಿ ತುಂಬಾ ಬೇಸರವಾಯ್ತು. :(
ಡಾ. ಮಹಾಲಕ್ಷ್ಮಿ ಅವರ ಛಲ ಮೆಚ್ಚುವಂಥದ್ದು.
ಅಂದಹಾಗೆ, ಮೊನ್ನೆ ಇವರ ಸಂದರ್ಶನ ಸುವರ್ಣವಾಹಿನಿಯಲ್ಲಿ ಪ್ರಸಾರವಾಯ್ತು. ಅಲ್ವಾ?
-ಅನಿಲ್.
ಉ: ಅಗ್ನಿದ್ರವ ಗೆದ್ದು ಬಂದ ಮಹಾಲಕ್ಷ್ಮಿ
ಹೌದು, ಇದನ್ನು ಅರ್ಧ ಗಂಟೆಯ ವಿಶೇಷ ಕಾರ್ಯಕ್ರಮವಾಗಿ ಪ್ರಸಾರ ಮಾಡಲಾಗಿತ್ತು. ಅಂದ್ಹಾಗೆ ಅನಿಲ್, ಅವರಿಗೆ ಇಂಥ ಸಮುದಾಯ ತಾಣಗಳು ಹಾಗೂ ಜನರ ಬೆಂಬಲ ಸಿಗಬೇಕಿದೆ. ಏನಾದರೂ ಪ್ರಯತ್ನ ಮಾಡಬೇಕಿದೆ.
ಉ: ಅಗ್ನಿದ್ರವ ಗೆದ್ದು ಬಂದ ಮಹಾಲಕ್ಷ್ಮಿ
ಹೌದು.
ಏನಾದರೂ ಮಾಡೋಣ.
-ಅನಿಲ್.
ಉ: ಅಗ್ನಿದ್ರವ ಗೆದ್ದು ಬಂದ ಮಹಾಲಕ್ಷ್ಮಿ
ಚಾಮರಾಜ್ ಸರ್,
ಏನು ಪ್ರತಿಕಿರಿಯಿಸಬೇಕು ಎಂದೇ ತಿಳಿಯುತ್ತಿಲ್ಲ, ಪಬ್ ದಾಳಿಯಾದಾಗ ಕೆಂಡಾ ಮಂಡಲವಾದ ನಮ್ಮ ಮಹಿಳಾ ಸಂಘಟನೆಗಳು,ಸಂಘ ಸಂಸ್ಥೆಗಳು,ಮಾದ್ಯಮಗಳು ಮಹಿಳೆಯರ ಮೇಲೆ ಅತ್ಯಾಚಾರ , ಆಸಿಡ್ ದಾಳಿಯಂತ ಪ್ರಕರಣಗಳಲ್ಲಿ ಅಷ್ಟು ಆಸಕ್ತಿ ತೋರದಿರುವುದು ನಿಜಕ್ಕೂ ವಿಷಾದಕರ. ಇಂತ ಕೃತ್ಯಗಳಲ್ಲಿ ತೊಡಗುವವರಿಗೆ 'ಗಲ್ಲು ಶಿಕ್ಷೆ' ಕಡ್ಡಾಯ ಮಾಡಬೇಕು, ಮತ್ತು ಈ ನಿಟ್ಟಿನಲ್ಲಿ ಎಲ್ಲರು ಹೋರಾಟ ಮಾಡಲೇಬೇಕು , ಆಗಲೇ ಈ ಅನ್ಯಾಯ ನಿಲ್ಲುವುದು.
ರಾಕೇಶ್ ಶೆಟ್ಟಿ :)
ಉ: ಅಗ್ನಿದ್ರವ ಗೆದ್ದು ಬಂದ ಮಹಾಲಕ್ಷ್ಮಿ
ಗಲ್ಲುಶಿಕ್ಷೆ ಬೇಡಿಕೆ ಹಳೆಯದು. ಆದರೆ, ಅದು ಜಾರಿಯಾಗುತ್ತಿಲ್ಲ ರಾಕೇಶ್. ಬರೀ ಪ್ರಚಾರ ಸಿಗುವ ಘಟನೆಗಳಿಗಷ್ಟೇ ಪ್ರತಿಕ್ರಿಯೆ ನೀಡುವ ಸಂಘಟನೆಗಳು ಹಾಗೂ ಮಾಧ್ಯಮದ ಬುದ್ಧಿ ಬದಲಾಗಬೇಕಿದೆ. ಆ ನಿಟ್ಟಿನಲ್ಲಿ ಇದೊಂದು ಪ್ರಯತ್ನ.
ಉ: ಅಗ್ನಿದ್ರವ ಗೆದ್ದು ಬಂದ ಮಹಾಲಕ್ಷ್ಮಿ
shahabbas mahalaxmi yavare manassiddare marga ide embudannu innomme saadhisis thorisiddeeri ee moolaka nimmannu yaava dusta shakthiyu himmettisadu embudannu saadhisi thorisiddeeri
ಉ: ಅಗ್ನಿದ್ರವ ಗೆದ್ದು ಬಂದ ಮಹಾಲಕ್ಷ್ಮಿ
ಮೊನ್ನೆ ಪಬ್ ದಾಳಿಯ ವೇಳೆ ಬಂದ ರೇಣುಕಾ ಚೌಧುರಿಯವರು ಎಂಟು ವರ್ಷಗಳ ಹಿಂದೆ ಮಂತ್ರಿಯಾಗಿರಲಿಲ್ಲಾ ಎಂದು ಕಾಣುತ್ತದೆ.
ಉ: ಅಗ್ನಿದ್ರವ ಗೆದ್ದು ಬಂದ ಮಹಾಲಕ್ಷ್ಮಿ
:) ಏನಾದರೂ ವ್ಯತ್ಯಾಸವಾಗುತ್ತಿತ್ತಾ ವೆಂಕಟ್ರಾಯರೇ? ರೇಣುಕಾ ಚೌಧರಿ ಬರೀ ಮಾತಾಡ್ತಾರೆ. ಕೆಲಸ ಮಾಡೋದು ಕಮ್ಮಿ.