ಕಾಫೀ....
ಕಾಫಿ, ಹೆಸರು ಕೇಳಿದ್ರೆ ಸಾಕು ಮೈಯೆಲ್ಲ ರೋಮಾಂಚನ ಆಗತ್ತೆ, ಇನ್ನೇನಾದ್ರು ಕೈಗೆ ಸಿಕ್ಕಿಬಿಟ್ರೆ....
ಚಿಕ್ಕಮಗಳೂರು, ಕಾಫಿಯ ಕಣಿವೆ, ಆ ಕಣಿವೆಯಲ್ಲಿ ನಮ್ಮದೊಂದು ಪುಟ್ಟ ಹಳ್ಳಿ.
ಪೇಟೆಯ ಜಂಜಡಗಳಿಂದ ತುಂಬಾ ದೂರದಲ್ಲಿರುವ ಹಳ್ಳಿ, 60 ಮನೆಗಳು, ಎಲ್ಲರೂ ಒಂದಲ್ಲ ಒಂದು ರೀತಿಯಲ್ಲಿ ಸಂಬಂಧಿಕರು (ಅಣ್ಣ, ತಮ್ಮ, ದೊಡ್ಡಪ್ಪ, ದೊಡ್ಡಮ್ಮ,ಚಿಕ್ಕಪ್ಪ, ಚಿಕ್ಕಮ್ಮ....).
ಎಲ್ಲೆಲ್ಲಿ ನೋಡಿದರೂ ಹಸಿರು ಹಸಿರು ಹಸಿರು....ಕಾಫಿ ತೋಟ, ಭತ್ತದ ಗದ್ದೆ, ಹಳ್ಳದ ಸಾಲು...ಎಷ್ಟು ನೋಡಿದರೂ ಮತ್ತೆ ಮತ್ತೆ ನೋಡಬೇಕೆನ್ನುವ ಬಯಕೆ.
ಬೆಳಗ್ಗೆ 7 ಗಂಟೆಯಾದರೂ ಸೂರ್ಯನ ಕಿರಣಗಳು ಗಿಡ ಮರಗಳ ಸಾಲಿನಿಂದ ಬಂದು ಭೂಮಿಯನ್ನು ತಲುಪಲು ಹರಸಾಹಸ ಮಾಡುತ್ತಿರುತ್ತವೆ, ಚಳಿ ಅನ್ನೋದು ಕುಣಿದಾಡುತ್ತಿರುತ್ತದೆ. ಆಗ ಎದ್ದು ಹಲ್ಲುಜ್ಜಿ ಮುಖ ತೊಳೆದು ಮನೆ ಎದುರುಗಡೆ ಬಂದು ಮುಳ್ಳಯ್ಯನಗಿರಿ, ರಂಗನಬೆಟ್ಟ ನೋಡಿದ್ರೆ ಆಗೋ ಉಲ್ಲಾಸ ವರ್ಣನಾತೀತ, ಆ ಹಕ್ಕಿಗಳ ಕಲರವ, ಎಲೆಗಳ ಮೇಲಿರುವ ಹನಿಗಳು, ಅದರ ಮೇಲೆ ಸೂರ್ಯನ ಕಿರಣಗಳ ಚಿತ್ತಾರ....
ಅದೇ ಸಮಯಕ್ಕೆ ನಾನು ಎದ್ದು ಬಂದದ್ದನ್ನು ನೋಡಿ ನಮ್ಮಮ್ಮ, ಮಗಾ ಕಾಫಿ ಕೊಡ್ಲಾ ಅಂತ ಕೇಳಿದ್ರೆ ಯಾರು ಬೇಡ ಅಂತ ಹೇಳ್ತಾರೆ.
ಅಡಿಗೆ ಮನೆಗೆ ಹೋಗಿ ಅಮ್ಮ ಕಾಫಿ ಮಾಡ್ತಿದ್ರೆ ಆ ಸುವಾಸನೆಯೇ ಸಾಕು ಅರ್ಧ ಚಳಿ ಹೋಗಿಸಲಿಕ್ಕೆ.
ಇನ್ನು ಅಮ್ಮ ಬಂದು ಆ ಕಾಫಿ ಕೈಗಿಟ್ರೆ ಪೂರ್ತಿ ಚಳಿ ಮೈ ಬಿಟ್ಟು ಹೋಗತ್ತೆ.
ಆಹಾ, ಮುಳ್ಳಯ್ಯನಗಿರಿ, ರಂಗನಬೆಟ್ಟ ನೋಡ್ತಾ ಒಂದೊಂದೇ ಗುಟುಕು ಕುಡಿತಿದ್ರೆ ಸಿಗೋ ಸಂತೋಷವನ್ನು ವರ್ಣಿಸೋಕೆ ಪದಗಳೇ ಸಿಗಲ್ಲ.
- Chikku123's blog
- Login or register to post comments
- 402 ಹಿಟ್ಸ್
ಈ ಪುಟವನ್ನು ಇ-ಮೇಯ್ಲ್ ಮಾಡಿ
Printer-friendly version


RSS:
ಪ್ರತಿಕ್ರಿಯೆಗಳು
ಉ: ಕಾಫೀ....
ಸದ್ಯಕ್ಕೆ ಪೂನಾದಲ್ಲಿ ಇರೋ ನನಗೆ..
ನಿಮ್ಮ ಚಿಕ್ಕಮಗಳೂರಿನ ಕಾಫಿಯ ವರ್ಣನೆ.. ಒಂದು ತರಹದಲ್ಲಿ ವಿರಹ ವೇದನೆ ತ೦ದಿಡ್ತಲ್ರಿ. :( ...ಚೇತನ್.
ಇಲ್ಲಿ ಯಾವತ್ತೇ ಕಾಫಿ ಕುಡಿದಾಗ, ಶಿವಮೊಗ್ಗ(ನನ್ನೂರು) ಜ್ನಾಪಿಸ್ಕೋಳದೆ, ಇರೋದು ಬಹಳ ಕಡಿಮೆ ಅನ್ನಬೇಕು..
ನಿಮ್ಮೊಲವಿನ,
ಸತ್ಯ.
ಉ: ಕಾಫೀ....
ನಾನೂ ಸದ್ಯ ಆ ವಿರಹ ವೇದನೆಯಲ್ಲೇ ಇದೀನಿ ಸತ್ಯ, ಊರಿಗೆ ಹೋದ್ಮೇಲೆ ವಿರಹ ದೂರ ಹೋಗುತ್ತೆ ಬಿಡಿ...
ಉ: ಕಾಫೀ....
ನಮ್ಮದು ಕರಾವಳಿ. ಮಳೆಗಾಲದಲ್ಲಿ ಹಳ್ಳಿ ಮನೆಯಲ್ಲಿ ಮಳೆಯ ಸೊಬಗನ್ನು ನೋಡುತ್ತಾ, ಸಂಜೆ ಕಾಫಿ ಜೊತೆ ಹಲಸಿನ ಹಪ್ಪಳ, ಮಂಡಕ್ಕಿ ತಿನ್ನುವುದೆಂದರೆ ಬಹಳ ಸೊಗಸು :)
ಉ: ಕಾಫೀ....
:) :-)
ಉ: ಕಾಫೀ....
ನಾನು ಬಯಲು ಸೀಮೆಯವ. ನಿಮ್ಮ ಈ ವರ್ಣನೆ, ಮಲೆ ನಾಡಿನ, ಕರಾವಳಿಯ ಸೊಬಗಿನ ಇನ್ನಿತರ ವಾಸಿಗಳ ವರ್ಣನೆ ಕೇಳಿದ್ರೆ ಹೊಟ್ಟೆ ಉರಿಯುವಷ್ಟು ಅಸೂಯೆಯಾಗುತ್ತೆ!
ನಾನು ಕಾಫಿ ಕ್ರಿಯನಲ್ಲದಿದ್ದರೂ ಕಾಫಿ ತೋಟಗಳಲ್ಲಿ ವಿಹರಿಸಬೇಕು ಅನ್ನೋ ಆಸೆ ಇದೆ :)
ಉ: ಕಾಫೀ....
ಮುಳ್ಳಯ್ಯನಗಿರಿ, ದತ್ತ ಪೀಠ ಮತ್ತೆ ಕೆಮ್ಮಣ್ಣುಗುಂಡಿಗೆ ಹೋಗಿ ಬನ್ನಿ, ಅಲ್ಲೇ ಎಲ್ಲಾದ್ರು ಕಾಫಿ ಸಿಕ್ಕಿದ್ರೆ ಕುಡಿದುಬಿಡಿ. ನಿಮ್ಮ ಆಸೆ ಈಡೇರಿದ ಹಾಗೆ...
ಉ: ಕಾಫೀ....
ಸುಪ್ರೀತ್
>>ಕಾಫಿ ತೋಟಗಳಲ್ಲಿ ವಿಹರಿಸಬೇಕು ಅನ್ನೋ ಆಸೆ ಇದೆ <<
ಸ್ವಲ್ಪ ಹುಷಾರು ಕಾಫಿ ತೋಟದಲ್ಲಿ ಹೂಬಿಡುವ ಸಮಯದಲ್ಲಿ ಜಿಗಟೆಗಳ ಕಾಟ ಜಾಸ್ತಿ,;)
ಅರವಿಂದ್
ಉ: ಕಾಫೀ....
ಈಗೇನ್ರೀ ಕಾಫಿ ಬೆಲೆ ಕೆಳ್ಗಿಳಿದ್ಮೇಲೆ ಬೆಳೆಗಾರರಿಗೇ ತಮ್ಮ ಕಾಫಿ ತೋಟ ಅಷ್ಟು ಹಿಡ್ಸಲ್ಲ ಅ೦ತ ಕಾಣುತ್ತೆ :|
ಬೆ೦ಗ್ಳೂರಿ೦ದ ಶೃ೦ಗೇರಿಗೆ ಹೊರಟ್ರೆ ನಿಮ್ಗೆ ಆಲ್ದೂರು ಹಾಗೂ ಬಾಳೆಹೊನ್ನೂರು ದಾಟಿದ್ರೆ ಇನ್ನೂ ಒಳ್ಳೆ ಕಾಡುಗಳು ಕಾಣುತ್ತೆ. ಶೃ೦ಗೇರಿ, ಕೊಪ್ಪ, ನರಸಿ೦ಹರಾಜಪುರ ಹಾಗೇನೆ ಶಿವಮೊಗ್ಗದ ಕಡೆ ಹೊರಟ್ರೆನೂ ಶಿವಮೊಗ್ಗದ ಹತ್ತಿರ ಬರುತ್ತಲೆ ಸ್ವಲ್ಪ ಹಸಿರು ಕಾಡು ಕಡಿಮೆ (ಅರೆ-ಮಲೆನಾಡು ಅವುಗಳೆಲ್ಲಾ) ಆದರೆ ಆ ದಾರಿಯೂ ಸೊಗಸಾಗಿದೆ.
ನನ್ನ ತ೦ದೆ ತಾಯಿಯಿಬ್ಬರೂ ಶೃ೦ಗೇರಿಯವರೆ. ನಮ್ಮ ತ೦ದೆಯ ಮನೆ ಶೃ೦ಗೇರಿಯಿ೦ದ ಎಸ್.ಕೆ ಬಾರ್ಡರ್ ಕಡೆಗೆ ೭ ಕಿ.ಮಿ ಹೋದರೆ ನೆಮ್ಮಾರು ಅ೦ತ ಒ೦ದು ಹಳ್ಳಿಯಿದೆ. ಅಲ್ಲಿ ತು೦ಗೆಗೆ ಅಡ್ಡಲಾಗಿ ಒ೦ದು ತೂಗು ಸೇತುವೆ ಇದೆ. ಅದನ್ನು ದಾಟಿ ಗುಡ್ಡ ಹತ್ತಿ ಒ೦ದೆರೆಡು ಕಿ.ಮಿ ಹೋದರೆ ಸಿಗುವುದು ನಮ್ಮಜ್ಜನ ಮನೆ. ಮನುಷ್ಯರ ಸ೦ಘವೇ ತಮಗೆ ಬೇಡವೆನ್ನುವ೦ತೆ ಸ್ವಚ್ಛ೦ದವಾಗಿ ನಿ೦ತಿರುವ ಕಾಡುಗಳು. ಆ ಬಿಬ್ರಿ ಹುಳು ಮತ್ತೆ ಹಕ್ಕಿಗಳ ಮೆಲುದನಿ. ಅಲ್ಲ೦ತೂ ಎಲ್ಲೆಲ್ಲೂ ಝರಿಗೆಳೆ ಎಲ್ಲಿ ಹೋದರೂ ನೀರಿನ ಜುಳುಜುಳು ನಾದ ಕೇಳದೆ ಬಿಡುವುದಿಲ್ಲ.
ನಾನ೦ತೂ ಪ್ರತಿ ವರ್ಷವೂ ಅಲ್ಲಿಗೆ ಹೋಗದೆ ಬಿಡುವುದಿಲ್ಲ. ಈಗ ಮೂರು ವರ್ಷದಿ೦ದ ಮು೦ಬಯಿಯಲ್ಲಿ ವಾಸದಿ೦ದಾಗಿ ಹೋಗಲಾಗಿಲ್ಲ. ಆದರೆ ಈ ಜುಲೈನಲ್ಲಿ ಮು೦ಬಯಿಗೆ ವಿದಾಯ ಹೇಳಿ ಬೆ೦ಗ್ಳೂರಿಗೆ ಹೋದ್ಮೇಲೆ ಅಲ್ಲಿಗೆ ಹೋಗ್ಬೇಕು.
ಕಾಫಿಯನ್ನು ನಮ್ಮಲ್ಲಿ ಸ್ವಲ್ಪ ಬೇರೆ ರೀತಿ ತಯಾರಸ್ತಾರೆ. ಸಕ್ಕರೆ ಬದಲಿಗೆ ಬೆಲ್ಲವನ್ನು ಬಳಸ್ತಾರೆ. ಬೆಲ್ಲದ್ಹಣಿ ಕಾಫಿ ಅ೦ತಾರೆ ನಮ್ಮ್ಕಡೆ. ನನಗೇ ಅಷ್ಟೇನೂ ಇದು ರುಚಿಸುವುದಿಲ್ಲವಾದರೂ ಒ೦ದೆರಡು ಬಾರಿ ಕುಡೀಲಿಕ್ಕೆ ಅಡ್ಡಿಯಿಲ್ಲ. ನನಗೇನೋ ನಮ್ಮ ಮಲೆನಾಡು ಮನೆಗಳಲ್ಲಿ ಮಾಡುವ ಕಾಫಿ ಅಷ್ಟಾಗಿ ರುಚಿಸುವುದಿಲ್ಲ. ಅದೆ ಪುಡಿಯನ್ನು ಮನೆಗೆ ತ೦ದು ಮಾಡಿದ ಕಾಫಿಯೆ ಚಿ೦ದ (ಅಮ್ಮನ ಕೈ ಚಮತ್ಕಾರ ಎ೦ತಹ ಕಾಫಿಯನ್ನಾದರೂ ಸೊಗಸಾಗಿಸುವುದು ಬಿಡಿ :) )
ಧನ್ಯವಾದಗಳು ಚೇತನ್
ಉ: ಕಾಫೀ....
ವಂದನೆಗಳು ರವೀ೦ದ್ರ
ಉ: ಕಾಫೀ....
ನಿಜ ರವೀಂದ್ರ.
ನಾನು ಶಿವಮೊಗ್ಗದವ.. ಈಗ ಪೂನಾದಲ್ಲಿ ಕೆಲಸ ಮಾಡ್ತಾ ಇರೋನು.
ನೀವು ಹೇಳಿದಂತೆ ಬೆಲ್ಲದ ಕಾಫಿ ಅಷ್ಟೊಂದು ನನಗೂ ರುಚಿಸಲಿಲ್ಲ..
ಆದರೆ.. ನಮ್ಮಮ್ಮ ಮಾಡ್ತಾ ಇದ್ದ ಬೆಲ್ಲದ ಟೀ, (ಜೋನಿ ಬೆಲ್ಲ ಅಂತಾರಲ್ಲ ಅದು) ಬಹಳ ರುಚಿಸ್ತಾ ಇತ್ತು.
ನನ್ನ ಸ್ನೇಹಿತ ಒಬ್ಬ ಮನೆಗ ಬಂದಾಗ "ಟೀ ಬೇಡ, ಹೊರಗಡೇನೆ ತುಂಬಾ ಆಗಿದೆ" ಅಂದಿದ್ದ ದಿವಸ, ನಮ್ಮಮ್ಮ ಬೆಲ್ಲದ ಟೀ ಮಾಡಿದ್ರು.. :)
ಸ್ವಲ್ಪ ರುಚಿ ನೋಡು ಅಂತ ಕೊಟ್ಟಾದ ಮೇಲೆ, ಸ್ವಲ್ಪ ಹೊತ್ತಾದ ಮೇಲೆ ನೋಡಿದರೆ..ಮಹರಾಯ,
"ಆಂಟಿ, ಇನ್ನೊಂದು ಸ್ವಲ್ಪ ಟೀ ಉಳಿದಿದ್ರೆ.. ತಣ್ಣಗಾಗಿದ್ರು ಪರವಾಗಿಲ್ಲ ಕೊಡ್ತಿರಾ?" ಅನ್ನಬೇಕೆ.:?
ನಿಮ್ಮ ಉತ್ತರ ಆ ಘಟನೆ ನೆನಪಿಗೆ ತಂತು.. ನಿಮ್ಮೊಡನೆ ಹಂಚಿಕೊಂಡೆ..
ಧನ್ಯವಾದ..
ನಿಮ್ಮೊಲವಿನ..
ಸತ್ಯ.
ಉ: ಕಾಫೀ....
ಸತ್ಯರವರೆ,
ಬೆಲ್ಲದ ಟೀ ಕುಡಿದ ನೆನಪಿಲ್ಲ. ಒ೦ದ್ಸಲ ಟ್ರೈ ಮಾಡ್ಬೇಕು. ಈಗ ಆಲೆಮನೆಗಳು ಸಿಗೋದೆ ಕಡಿಮೆ. ಆದರೂ ಹುಡುಕಿ ಒಳ್ಳೆ ಜೋನಿ ಬೆಲ್ಲ ತರಬೇಕು. ಒ೦ದು ಬಾರಿ ನಾನು ಸಣ್ಣವನಿದ್ದಾಗಿ ಮಾಸ್ತಿಕಟ್ಟೆಯ (ಹುಲಿಕಲ್, ಯಡೂರು ಬಳಿ ಇದೆ. ಅಲ್ಲಿ ಕರ್ನಾಟಕ ವಿದ್ಯುತ್ ನಿಗಮದ ಕಾಲೋನಿಯಲ್ಲಿದ್ವಿ) ಬಳಿ ಒ೦ದು ಆಲೆಮನೆಗೆ ಹೋಗಿದ್ವಿ. ಅಲ್ಲಿ ಬಿಸಿ-ಬಿಸಿ ಜೋನಿ ಬೆಲ್ಲ ತಿ೦ದ ನೆನಪು. ಏನು ರುಚಿ. ರೊಟ್ಟೀನೋ ಅಥವಾ ದೊಸೆ ಜೊತೆಗೆ ತಿ೦ದಾಗ ...ಆಹಾ...ಆನ೦ದ. ಇಲ್ಲಿಗೆ ಬ೦ದ್ಮೇಲೆ ಅವ್ಗಳ ಬೆಲೆ ಗೊತ್ತಾಯಿತ್ರೀ ಸತ್ಯರವ್ರೆ. ಹುಟ್ಬೆಳ್ದ ನೆಲ ಯಾವಾಗ್ಲೂ ಚೆ೦ದ ಕಣ್ರೀ.
ನಿಮ್ಮೊ೦ದಿಗೆ ಸಮಾಲೋಚಿಸಿ ಬಹಳ ಖುಷಿಯಾಯಿತು. ಇಬ್ರೂ ಕರ್ನಾಟಕವನ್ನು ಬಿಟ್ಟು ಮಹಾರಾಷ್ಟ್ರಕ್ಕೆ ಬ೦ದವರಲ್ಲವೆ.
ಧನ್ಯವಾದಗಳು ಚೇತನ್ ರವರಿಗೆ ಮಲೆನಾಡ ನೆನಪು ತರಿಸಿದ್ದಕ್ಕೆ.
ಉ: ಕಾಫೀ....
ಇರ್ಲಿ ಬಿಡಿ ನನಗೂ ಕಾಫಿ ಜ್ನಾಪಕ ಬಂತು, ಊರಿಗೆ ಯಾವಾಗ ಹೋಗೋದು ಅಂತ ಕಾಯ್ತಿದೀನಿ. ನಿಮಗೂ ಹಾಗೇ ಅನ್ನಿಸಿರಬೇಕು.
ಉ: ಕಾಫೀ....
ಹ್ಞೂ ಕಣ್ರೀ. ಬಹುಶ: ಜುಲೈ ನಲ್ಲಿ ಹೋಗ್ತೀನಿ. ಮಳೆ ಹಿಡಿಯೋ ಟೈಮು. ಚೆನ್ನಾಗಿರುತ್ತೆ
ಉ: ಕಾಫೀ....
ಹೌದು. ಆಷಾಡ ಮಾಸದ ಮಳೆ ನೋಡಲು ಬಹಳ ಚಂದ ಮತ್ತು ಭಯಂಕರ.
ಉ: ಕಾಫೀ....
ಮಲೆನಾಡ ಮಳೆಗಾಲ ಸಕತ್ ನಂದ...
ಉ: ಕಾಫೀ....
ಹೌದು ಹಾಗೆ ಕರಾವಳಿಯದು :). ಕೆಲವೊಮ್ಮೆ ಭಯಂಕರ. ಆಷಾಡ ಸಮಯದಲ್ಲಿ ಕೆಲವೊಮ್ಮೆ ವಾರವಾದರೂ ಮಳೆ ನಿಲ್ಲುವುದಿಲ್ಲ. ಅದರ ಜೊತೆ ಬಿರುಗಾಳಿ, ಸಮುದ್ರ ಕೊರೆತ ಅಬ್ಬಬ್ಬ. ಒಮ್ಮೆ ಊರಿನಲ್ಲಿದ್ದಾಗ ಒಂದೆ ದಿನಕ್ಕೆ ೨೫ ಸೆಂ.ಮೀ ಮಳೆ ಬಂದಿತ್ತು. ಹೊಲಗಳೆಲ್ಲ ನದಿಯಾಗಿದ್ದವು. ನಾವು ಸಣ್ಣವರಿರುವಾಗ ಈ ಸಮಯದಲ್ಲಿ ಶಾಲೆಗೆ ರಜೆ :). ನಮಗೆ ಖುಷಿಯೊ ಖುಷಿ :)
ಉ: ಕಾಫೀ....
ಕರಾವಳಿ ಬಿಡ್ರೀ, ಮಳೆ ಹುಟ್ಟಿರೋದೇ ಅಲ್ಲಿ ಆಮೇಲೆ ಮಲೆನಾಡಿಗೆ ಕಳಿಸುತ್ತೆ, ನಮಗೂ ನಿಮ್ಮ ಅನುಭವ ತುಂಬಾ ಆಗಿತ್ತು
ಉ: ಕಾಫೀ....
ಅಷ್ಟು ದೂರ ಏನ್ರೀ, ನಾನು ಈ ವಾರನೋ ಮುಂದಿನವಾರನೋ ಅಂತ ಯೋಚಿಸ್ತಿದೀನಿ...
ಉ: ಕಾಫೀ....
ಹ್ಞೂ ಕಣ್ರೀ ಇಲ್ಲಿ ಥೀಸೀಸ್ ಸಬ್ಮಿಷನ್ ಆಗದೆ ಹೊರೆತು ಬಿಡುವೆ ಸಿಗೋದಿಲ್ಲ. ಎಲ್ಲಾ ಮುಗಿಸಿ ನಾ೦ದಿ ಹಾಡಿ ವಾಪಾಸ್. ಬೆ೦ಗ್ಳೂರಿಗೆ ಒ೦ದ್ಸರಿ ಜುಲೈ ಒಳಗೆ ಹೋಗಿಬರ್ತೀನಿ ಆದ್ರೆ ಊರಿಗೆ ಮಾತ್ರ ಜುಲೈನಲ್ಲಿ.
ಹೋಗಿ ಬನ್ನಿ ಮಜಾ ಮಾಡಿ. ಹೇಗಿದ್ರೂ ಒಟ್ಟಿಗೆ ಮ೦ಗಳ-ಬುಧವಾರ ರಜೆ ಇದೆಯಲ್ಲ. ನನ್ನ ಹೆಸರಿನ ಕಾಫಿನೂ ಒ೦ದು ಲೋಟ ನೀವೆ ಇಳಿಸಿ.
ನ೦ದಕುಮಾರ್ ರವರೆ ನಾನು ಮು೦ಬೈನ ಕರಾಳ ಕರಾವಳಿ ಮಳೆ ಕ೦ಡಮೇಲೆ ಇನ್ನ್ಯಾವುದೂ ಹೆಚ್ಚಲ್ಲ ಅನ್ಸ್ತು. ಮೂರ್ನಾಲ್ಕು ದಿನ ನಾವಿಲ್ಲ ಸೂರ್ಯನ ನೋಡಿರ್ತನೇ ಇರ್ಲಿಲ್ಲ. ಅಷ್ಟು ಧಾರಾಕಾರ ಮಳೆ ಆದ್ರೆ ಅಷ್ಟಾಗ್ಯೂ ಸೆಖೆ ಮಾತ್ರ ಇಳಿಯಲ್ಲ. ಹೊರಗೆ ಇಳೆಗೆ ಮಳೆ ಒಳಗೆ ನಮ್ಗೆ ಬೆವರಿನ ಸುರಿಮಳೆ. ಇದು ಒ೦ದು ಕರಾವಳಿಯ ವಿಶೇಷ ಅಲ್ವೇನ್ರಿ
ಧನ್ಯವಾದಗಳು
ಉ: ಕಾಫೀ....
ಆಯ್ತು ರವೀಂದ್ರ ನೀವು ಹೇಳಿದ ಮೇಲೆ ಎರಡೇನು ನಾಲ್ಕು ಲೋಟ ಕುಡಿತೀನಿ...
ಉ: ಕಾಫೀ....
ಕಶ್ಯಪರೆ,
೧೦೦ ಸೆಂ.ಮೀ ಮಹಾಮಳೆ ಬಗ್ಗೆ ಹೇಳುತ್ತಿದ್ದಿರಾ ಅಂದುಕೊಳ್ಳುತ್ತೆನೆ. ಅಧಿಕ ಮಾಲಿನ್ಯದಿಂದಾಗಿ ಅಲ್ಲಿ ಮೆಘಸ್ಪೋಟಗಳು[cloudburst] ಇತ್ತೀಚಿಗೆ ಬಹಳವಾಗುತ್ತಿದೆ. ನಮ್ಮ ಕರಾವಳಿ ಕಡೆ ಎಷ್ಟೆ ಮಳೆಯಾದರೂ ನೀರು ಹರಿದು ಹೋಗುತ್ತದೆ. ಮುಂಬೈ ತರ ನೀರು ನಿಲ್ಲುವುದಿಲ್ಲ.
ಉ: ಕಾಫೀ....
ಅದು ಸರಿ ಬಿಡಿ ನ೦ದಕುಮಾರ್ ರವರೆ,
ಇಲ್ಲಿ ಮೂರ್ನಾಲ್ಕು ಘ೦ಟೆ ಜೋರಾಗಿ ಮಳೆ ಬ೦ತೆ೦ದರೆ ರೈಲು ಸ೦ಚಾರ ನಿಲ್ಲುತ್ತದೆ. ಇ೦ತಹ ಜನನಿಬಿಡ ನಗರಗಳಲ್ಲಿ ಈ ರೀತಿ ಆಗುವುದು ಸಹಜವೇ ಬಿಡಿ. ಅದೆಲ್ಲ ಬೇರೆ ಪಟ್ಟಣಗಳಲ್ಲಿ ಇರುವುದಿಲ್ಲ. ಆದರೂ ನದಿ ದ೦ಡೆಯಲ್ಲಿರುವ ಊರುಗಳಲ್ಲಿ ಮಳೆಯಿ೦ದಾಗುವ ಪ್ರವಾಹದ ತೊ೦ದರೆ ಇದ್ದೆ ಇರುತ್ತದೆ. ಕಳೆದ ಬಾರಿ ಶೃ೦ಗೇರಿಯಲ್ಲೂ ಇ೦ತಹ ಸ್ಥಿತಿಯು೦ಟಾಗಿತ್ತು.
ಬೆ೦ಗಳೂರು ಮು೦ಬಯಿನ೦ತಹ ನಗರಗಳಲ್ಲಿ ಮಳೆ ಬ೦ದರೆ ಆನ೦ದವಾಗುವ ಬದಲು ಎಲ್ಲೆಲ್ಲಿ ನೀರು ನುಗ್ಗಿತು, ಯಾವ ರಸ್ತೆ ನೀರಿನಲ್ಲಿ ಮುಳುಗಿದೆ....ಮನೆ ಹೇಗೆ ತಲುಪುವುದು ಎ೦ಬ ಯೋಚನೆಯೆ ಹೆಚ್ಚು ಅಲ್ಲವೆ?
ಉ: ಕಾಫೀ....
ಕರೆಕ್ಟ್ :)