ಸಾಹಿತ್ಯದ ಗುರಿ ಮತ್ತು ಉದ್ದೇಶ
ಸಾಹಿತ್ಯಕ್ಕೆ ಒಂದು ಗುರಿಯಾಗಲೀ, ಉದ್ದೇಶವಾಗಲೀ ಇರುವುದು ಸಾಧ್ಯವೇ ? ಅಥವಾ ಇರಬೇಕೇ ? ಎಂಬ ಪ್ರಶ್ನೆ ತುಂಬಾ ಹಳೆಯದು . ಸಾಹಿತ್ಯಕ್ಕೆ ಗುರಿ , ಉದ್ದೇಶ ಇರುವುದಿಲ್ಲ , ಇರಕೂಡದು . ಎನ್ನುವುದೂ ಅಷ್ಟೇ ಹಳೆಯ ಅಭಿಪ್ರಾಯ .ಈ ಅಭಿಪ್ರಾಯ , ಭಿನ್ನಾಭಿಪ್ರಾಯ ಹೇಗೇ ಇರಲಿ; ಸಾಹಿತ್ಯ ಉದ್ದೇಶಪೂರ್ವಕವೋ , ನಿರುದ್ದೇಶವೋ ಏನಾದರೂ ಇರಲಿ .ಅದು ಅಂತಿಮವಾಗಿ , ಯಾವುದೋ ಒಂದು ಗುರಿಯನ್ನು ತಲುಪುವುದು , ಒಂದು ಉದ್ದೇಶ ಸಾಧನೆಯತ್ತ ಹೆಜ್ಜೆ ಹಾಕುವುದು ಮಾತ್ರ ನಿಶ್ಚಿತ .
ಕೋಗಿಲೆ ಯಾರು ಹೊಗಳಲಿ ಅಂತ ಆಗಲೀ; ಯಾರಿಗಾಗಿ ಅಂತ ಆಗಲೀ ಸ್ವರ ಎತ್ತುವುದಿಲ್ಲವಾದರೂ , ಅದರ ಕಂಠ ಮಾಧುರ್ಯಕ್ಕೆ ಮನಸ್ಸು ಸೋತೇ ಸೋಲುತ್ತದೆ . ಕವಿಯೊಬ್ಬ , ತನ್ನ ಸ್ವಂತ ಆಂತರಿಕ ಒತ್ತಡಗಳಿಗಾಗಿಯೇ ಬರೆಯಲಿ ; ತನ್ನ ಮನಸ್ಸಮಾಧಾನಕ್ಕಾಗಿ ಯಾದರೂ ಬರೆಯಲಿ ,ಅದಕ್ಕೆ ಪ್ರತಿಸ್ಪಂದನವಂತೂ ಇದ್ದೇ ಇರುತ್ತದೆ . ಹಾಗಾಗಿ ಸಾಹಿತ್ಯದ ಉದ್ದೇಶ, ಗುರಿಗಳನ್ನು ಬದಿಗಿರಿಸಿದರೂ ಅದರ ಪ್ರಯೋಜನ , ಪರಿಣಾಮಗಳ ಪ್ರಶ್ನೆ ಉಳಿದೇ ಉಳಿಯುತ್ತದೆ .
ಏನು ಅದರ ಪರಿಣಾಮ ? ಮನರಂಜನೆಯೇ ? ಮನಸ್ಸಮಾಧಾನವೇ? ಅರಿವಿನ ವಿಸ್ತಾರವೇ ? ಮಾಹಿತಿಯ ವಿನಿಮಯವೇ ? ಒಂದು ಕಾಲಘಟ್ಟದ ಅಥವಾ ಕಾಲ ಘಟ್ಟದ ಜೀವನ ವಿಧಾನಗಳ ಸಮಗ್ರ ಪರಿಚಯವೇ ? ವ್ಯಕ್ತಿತ್ವ ನಿರ್ಮಾಣವೇ ? ಇತ್ಯಾದಿ ಅನೇಕ ಪ್ರಶ್ನೆಗಳ ಸರ ಮಾಲೆಗಳು ಎದುರಾಗುತ್ತವೆ . ಸಾಹಿತ್ಯದ ಪ್ರಯೋಜನ ಇವೆಲ್ಲವೂ ಹೌದು , ಇನ್ನೂ , ಇನ್ನೂ ಹೌದು . ಇವುಗಳಾಚೆಗಿನ ಅಂತರಂಗದ ಸೌಂದರ್ಯ ಮತ್ತು ಕಾಲ ದೇಶಾತೀತವಾದ ಅನುಭೂತಿಯೂ ಹೌದು .
ಆದರೆ ಇದೆಲ್ಲಾ ಸಾಧ್ಯವಾಗುವುದು , ನಿಷ್ಕಲ್ಮಷವಾಗಿ ಎಲ್ಲ ವೈಯುಕ್ತಿಕ ಲಾಭ ನಷ್ಟಗಳಾಚೆಗಿನ ,ಸತ್ಯ ಮತ್ತು ಸೌಂದರ್ಯೋಪಾಸಾನೆಯ ಮತ್ತು ಮಾನವಾನುಕಂಪದ ನಿರ್ಲಿಪ್ತ ಸ್ತರದಲ್ಲಿ ಸಾಹಿತ್ಯ ರಚನೆಯಾದಾಗ ಮಾತ್ರ . ಉಳಿದಂತೆ ಹೆಸರಿಗೆ ಮತ್ತು ಪ್ರತಿಷ್ಟೆಗೆ ; ಸಾಮಾಜಿಕ ಲಾಭ ನಷ್ಟಗಳ ಲೆಕ್ಕಾಚಾರಕ್ಕೆ ; ವರ್ತಮಾನದ ಪರಿಸ್ಠಿತಿಗಳ ದುರ್ಲಾಭ ಪಡೆದು , ಗಾಳಿ ಬಂದಾಗ ತೂರಿಕೊಳ್ಳುವ ಸಂಕುಚಿತ ರೀತಿಯ ಬರವಣಿಗೆಯು ,ಆಶ್ಚರ್ಯಕ್ಕೆ ಕಾರಣವಾಗಬಲ್ಲುದಾದರೂ ,ಅನಾಹುತಕಾರಿ ಮತ್ತು ಗಾಳಿಗೆ ತೂರಿ ಹೋಗಬಹುದಾದ ಹಗುರಾದ ಸಾಹಿತ್ಯಕ ದೊಂಬರಾಟ ಮಾತ್ರ ಆಗಬಲ್ಲುದು .

- csomsekraiah ರವರ ಬ್ಲಾಗ್
- Login or register to post comments
- 217 hits
- Email this blog





RSS: