September 25, 2008 - 8:40am
ಇವತ್ತು ಭಾರತ , ಇಡೀ ಜಗತ್ತು ಕುದಿಯುವ ಅಗ್ನಿಕುಂಡವಾಗಿದೆ .ಇಂದಿನ ಸಂದರ್ಭದಲ್ಲಿ ವಿಚಾರವಂತರೆಂದು ಬಿಂಬಿಸಿಕೊಂಡವರಿಂದ ಹಿಡಿದು ಸಾಮಾನ್ಯರವರೆಗೆ ಯಾರೆಂದರೆ ಯಾರೂ ಜವಾಬ್ದಾರಿಯಿಂದ ವರ್ತಿಸುತ್ತಿಲ್ಲ ; ಎಲ್ಲರೂ ಅವರವರ ಮೂಗಿನ ನೇರದ ಏಕ ಪಕ್ಷೀಯ ನಿಲುವುಗಳಿಂದಾಗಿ ಅಪ್ರಸ್ತುತರಾಗುತ್ತಿದ್ದೇವೆಂದು ವಿಷಾದದಿಂದ ಅರಿತುಕೊಳ್ಳಬೇಕಾಗಿದೆ .
ಇವತ್ತು ಮತಾಂತರ ಕೇವಲ ಮತ ಬದಲಾವಣೆಯ ಪ್ರಕ್ರಿಯೆಯಾಗಿರದೆ ಜನಮತ ವ್ಯವಸ್ಥೆಯಲ್ಲಿ ಅಧಿಕಾರದ ಏಣಿಯೂ ಆಗಿ ಮಾರ್ಪಟ್ಟಿರುವುದರಿಂದ ಅದು ಹಿಂಸಾತ್ಮಕ ರೂಪ ತಳೆಯುತ್ತಿದೆ .ಏಕೆಂದರೆ ರಾಜಕೀಯವೆಂದರೆ ಹಿಂಸೆ, ವಂಚನೆ , ಮೋಸಗಳ ತವರು ಮನೆ .ಇದರ ಅಂಗವಾಗಿಯೇ ವಿವಿಧ ರಾಜಕೀಯ ಪಕ್ಷಗಳು ಬೆಂದ ಮನೆಯ ಗಳು ಹಿರಿಯುವ ಪೈಶಾಚಿಕ ಕೃತ್ಯದಲ್ಲಿ ತೊಡಗಿವೆ .
ದಯವಿಟ್ಟು ದೇಶದ ಕಾನೂನುಗಳನ್ನು ಕೈಗೆತ್ತಿಕೊಳ್ಳುವವರು ಒಮ್ಮೆ ಯೋಚಿಸಿ , ಇಂತಹ ನಡತೆ ಅಂತಿಮವಾಗಿ ಸಮಾಜವನ್ನು ಅರಾಜಕತೆಯತ್ತ ಕೊಂಡೊಯ್ಯುತ್ತದೆ . ಸಮಾಜವೊಂದು ಅರಾಜಕವಾದಾಗ ಅದನ್ನು ಕಾಪಾಡಲು ಯಾರಿಂದಲೂ ಸಾಧ್ಯವಿಲ್ಲ . ಇಂದಿನ ಜಾಗತಿಕ ವಿದ್ಯಮಾನಗಳು ಇದಕ್ಕೆ ಸಾಕ್ಷಿಯಾಗಿವೆ .
ಇವತ್ತು ಜಗತ್ತನ್ನು ವ್ಯಾಪಿಸುತ್ತಿರುವ ಧರ್ಮದ ವಿಷ , ಅದು ಹರಿಸುತ್ತಿರುವ ರಕ್ತ ಹಿಂದೆಂದೂ ಕಂಡರಿಯದಷ್ಟು ಅಪಾರ . ಅದಕ್ಕೆ ಕಾರಣ ಆಧುನಿಕ ಶಸ್ತ್ರಾಸ್ತ್ರಗಳನ್ನು ಧರ್ಮದ ಹೆಸರಿನಲ್ಲಿ ಬಳಸುತ್ತಿರುವ ಅನಾಗರಿಕತೆ . ಹಿಂಸೆಗೆ ಧಾರಾಳವಾಗಿ ಆಧುನಿಕ ಸಲಕರಣೆಗಳನ್ನು ಬಳಸುತ್ತಿರುವ ಅನಾಗರಿಕ ಮತ ಪ್ರದಿಪಾದಕರು , ಆಧುನಿಕ ವಿಚಾರಶೀಲ ಪ್ರವೃತ್ತಿಯತ್ತ ಮಾತ್ರ ಮುಖ ಮಾಡುವುದಿಲ್ಲ .
ಜಗತ್ತಿನಲ್ಲಿ ಇಂದು ಇರುವ ಯಾವುದೇ ಧರ್ಮವನ್ನೂ ಧರ್ಮವೆಂದು ಕರೆಯಲು ಸಾಧ್ಯವಾಗುವುದಿಲ್ಲ , ಅವು ಕೇವಲ ಮತಗಳು - ರಾಜಕೀಯ ಮತ್ತು ಮತೀಯ ಎರಡು ದೃಷ್ಟಿಯಿಂದಲೂ ಸಹ . ಯಾವುದೋ ಕಾಲದ ! ಯಾರದೋ ವಿಚಾರಗಳನ್ನು ! ಕುರುಡಾಗಿ ಅಪ್ಪಿ ಕುಳಿತವರು ಮತೀಯವಾದಿಗಳಲ್ಲದೆ ಧಾರ್ಮಿಕರಾಗುವುದು ಸಾಧ್ಯವಿಲ್ಲ . ನಿಜವಾದ ಧರ್ಮದಲ್ಲಿ ತೋರಿಕೆಯ ಕರುಣೆ ಇರುವುದಿಲ್ಲ , ಅಲ್ಲಿ ಕರುಣೆ ಅಂತರಂಗದ ಸೆಲೆ .
ಇದೇ ಸಂದರ್ಭದಲ್ಲಿ ಕರ್ನಾಟಕದಲ್ಲಿ ವಿಚಾರವಾದಿಗಳೆನಿಸಿಕೊಂಡಿರುವ ಗುಂಪುಗಳೂ ಸಹ ತುಂಬಾ ಬೇಜವಾಬ್ದಾರಿಯಿಂದ ವರ್ತಿಸುತ್ತಿವೆ ಎಂಬ ವಿಷಯವನ್ನು ಅಷ್ಟೇ ವಿಷಾದದಿಂದ ಸ್ಮರಿಸಬೇಕಾಗಿದೆ ; ರಾಜಕೀಯ ಪಕ್ಷಗಳಿಗಿಂತ ಬೆಂಕಿ ಹರಡುವಲ್ಲಿ ಅವೇನೂ ಹಿಂದೆ ಬಿದ್ದಂತಿಲ್ಲ .ಯಾವುದೇ ಜನಾಂಗಗಳ ಮಧ್ಯೆ ಅಪನಂಬಿಕೆಯ ವಾತಾವರಣ ಮೂಡಿದಾಗ ತಾಳ್ಮೆ ಮತ್ತು ಪ್ರೀತಿಯ ವಿಧಾನದಿಂದ ಮಾತ್ರ ಅವನ್ನು ಪರಿಹರಿಸಲು ಪ್ರಯತ್ನಿಸುವುದು ಸರಿ . ಆದರೆ ವಿಚಾರವಾದಿಗಳ ಆರ್ಭಟ ಬೆಂಕಿ ಮತ್ತಷ್ಟು ವ್ಯಾಪಕವಾಗುವ ವಾತಾವರಣವನ್ನು ನಿರ್ಮಿಸುತ್ತಿದೆ . ಅವರ ವರ್ತನೆಗಳಿಂದ ಸಮಾಜದಲ್ಲಿ ಸೌಹಾರ್ದ ಮೂಡುವುದರ ಬದಲು ಅಶಾಂತಿ ಹೆಚ್ಚಾಗಲು ಕಾರಣವಾಗುತ್ತಿವೆ ಎಂಬುದನ್ನು ಅರಿತುಕೊಳ್ಳಬೇಕಾಗಿದೆ .
ಸರಿಯಾಗಿ ವಿಚಾರ ಮಾಡಿ ನೋಡಿದರೆ ಎಲ್ಲಾ ಮತಗಳೂ ಅತಿ ತಪ್ಪು ಕಲ್ಪನೆಗಳಿಂದ ; ಮೌಢ್ಯದಿಂದ ಕೂಡಿವೆ . ಅವುಗಳ ಅನುಯಾಯಿಗಳು ಹಠದಿಂದ ಅವು ತಮ್ಮ ತಮ್ಮ ನಂಬಿಕೆಗಳು ಅವನ್ನು ಅಲ್ಲಾಡಲು ಬಿಡುವುದಿಲ್ಲ ಎಂದು ಕುಳಿತಿರುವುದೇ ಇಂದಿನ ಸಮಸ್ಯೆಗಳಿಗೆ ಮೂಲ .
ಇವುಗಳ ನಡುವೆ ಮನುಷ್ಯ ಕುಲಕ್ಕೆ ಹಿತವಾಗುವ ಧರ್ಮದ ಮೂಲ ಸ್ವರೂಪದ ಅನ್ವೇಷಣೆ ನಿರಂತರವಾಗಿ ನಡೆಯುತ್ತಲೇ ಇದೆ . ಅದರ ಅರ್ಥ ಧರ್ಮ ಜಿಜ್ಞಾಸೆ ನಿಂತು ಹೋಗಿಲ್ಲ ; ಎಲ್ಲಿಯೋ ಒಂದು ಕಡೆ ನಿಂತು ಹೋಗಿರುವುದು ಕೇವಲ ಮತೀಯವಾದ ಮಾತ್ರ . ಧರ್ಮ ಎಂಬುದು ಮನುಷ್ಯ ಕುಲ ಇರುವವರೆಗೆ ನಿತ್ಯ ಸಂಶೋಧನೆಗೊಳ್ಳುತ್ತಾ ; ಪರಿವರ್ತಿತವಾಗುತ್ತಾ ಹೊಸ ಹೊಳಪಿನಿಂದ ಪ್ರಕಾಶಗೊಳ್ಳಬೇಕಾಗಿರುವ ಜ್ಞಾನಜ್ಯೋತಿ .
ನಿಜವಾದ ಧರ್ಮ ಎನ್ನುವುದು ಯಾವುದೋ ಒಂದು ತನ್ನನ್ನು ಆರಾಧಿಸುವವರ ಗುಂಪನ್ನು ಮಾತ್ರ ಕರುಣಿಸಿ ಉಳಿದ ಮನುಷ್ಯರನ್ನು ಕಡೆಗಣಿಸುವ ಪಕ್ಷಪಾತಿ ದೇವರ ಕಲ್ಪನೆಗಳನ್ನು ಹೊಂದಿರುವುದಿಲ್ಲ . ಅದು ನಿರಂತರ ಅನ್ವೇಷಣೆಗಳಿಂದ ವಿಚಾರಪ್ರಚೋದಕವಾಗುತ್ತಿರುವ ; ಸಕಲ ಮಾನವರ ಹಿತದ ಕಡೆ ಗಮನವಿಟ್ಟಿರುವ ಒಂದು ನಿತ್ಯ ಸೆಲೆ , ಅದು ಎಲ್ಲ ಕಾಲಗಳ , ಎಲ್ಲ ದೇಶಗಳ ನೈಜ ವಿಚಾರವಂತ ಮನಸ್ಸುಗಳಲ್ಲಿ ಜೀವಂತವಾಗಿರುತ್ತದೆ .
ಬ್ಲಾಗ್ ವರ್ಗಗಳು:
ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ:








