ನಾಗಸಂಪದ
ಸಾರ್ವತ್ರಿಕ
ರೈತರ ಆತ್ಮಹತ್ಯೆ
ರೈತರ ಆತ್ಮಹತ್ಯೆ : ತುಕ್ಕು ಹಿಡಿದ ಚರ್ಚೆ
ರೈತರ ಆತ್ಮಹತ್ಯೆ ತಡೆಯಲು ರಾಜ್ಯ ಸರ್ಕಾರ ಅಧ್ಯಯನ ಸಮಿತಿಯೊಂದನ್ನು ರಚಿಸಿದೆ. ಅದು, ಹೋದ ವಾರ ಮುಖ್ಯಮಂತ್ರಿಗಳು ಕರೆದಿದ್ದ ರೈತರೊಡನೆಯ ಸಂವಾದ ಕಾರ್ಯಕ್ರಮದಲ್ಲಿ ವ್ಕಕ್ತವಾದ ಸಲಹೆ-ಸೂಚನೆಗಳ ಆಧಾರದ ಮೇಲೆ ಅದು ಪರಿಹಾರ ಸಾಧ್ಯತೆಗಳನ್ನು ಪರಿಶೀಲಿಸುವುದಂತೆ. ಆದರೆ, ಈ ಕಾರ್ಯಕ್ರಮದಲ್ಲಿ ವ್ಯಕ್ತವಾದ ಸಲಹೆ-ಸೂಚನೆಗಳು ಎಷ್ಟರ ಮಟ್ಟಿಗೆ ಹೊಸವು ಮತ್ತು ಈವರೆಗೆ ಪರಿಶೀಲನೆಗೆ ಒಳಗಾಗಿಲ್ಲದಂತಹವೇ ಎಂಬ ಪ್ರಶ್ನೆ ಇದ್ದೇ ಇದೆ. ಈ ದೃಷ್ಟಿಯಿಂದ ನೋಡಿದಾಗ ಮತ್ತು ಸಂವಾದ ಕಾರ್ಯಕ್ರಮದ ಕೊನೆಯಲ್ಲಿ ಮುಖ್ಯಮಂತ್ರಿಗಳು ಆಡಿದ ಮಾತುಗಳು ವಿದಾಯ ಭಾಷಣದ ಶೈಲಿಯಲ್ಲಿದ್ದುದನ್ನು ಗಮನಿಸಿದಾಗ, ಇಡೀ ಕಾರ್ಯಕ್ರಮ ಯಾವುದೋ ತತ್ಕಾಲೀನ ರಾಜಕೀಯ ಬಿಕ್ಕಟ್ಟಿನಿಂದ ಬಚಾವಾಗುವ ಪ್ತಯತ್ನವೆಂಬಂತೆಯೂ ಕೆಲವರಿಗೆ ಕಂಡಿದ್ದರೆ ಆಶ್ಚರ್ಯವಿಲ್ಲ.
ರಾಷ್ಟ್ರದಲ್ಲಿ ಈವರೆಗೆ ಒಂದೂವರೆ ಲಕ್ಷಕ್ಕೂ ಹೆಚ್ಚು ಜನ ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ರಾಜ್ಯದಲ್ಲಿ ಆರೇಳು ವರ್ಷಗಳಲ್ಲಿ ಆತ್ಮಹತ್ಯೆ ಮಾಡಿಕೊಂಡವರ ಸಂಖ್ಯೆ ಮುವ್ವತ್ತು ಸಾವಿರವನ್ನು ಮೀರಿದೆ. ಈ ಸರ್ಕಾರ ಬಂದ ಮೇಲೆ ಈ ಆತ್ಮಹತ್ಯೆ ಪ್ರವೃತ್ತಿ ಇನ್ನಷ್ಟು ತೀವ್ರಗೊಂಡಿರುವುದು ಇನ್ನೊಂದು ವಿಶೇಷ. ಅಲ್ಲದೆ, ಈವರೆಗೆ ಕೇಂದ್ರ ಹಾಗೂ ವಿವಿಧ ರಾಜ್ಯ ಸಕರ್ಾರಗಳು ಈ ಸಂಬಂಧ ಕೈಗೊಂಡ ಅಧ್ಯಯನಗಳು ಮಾಡಿದ ಶಿಫಾಸರ್ುಗಳ ಆಧಾರದ ಮೇಲೆ ಸಾಲ ಮನ್ನಾ, ಸುಲಭ ಬಡ್ಡಿ ದರದ ಸಾಲ ಸೌಲಭ್ಯ, ಬೀಜ ಪೂರೈಕೆ ಹಾಗೂ ಸಂಗ್ರಹ ಸಾಮಥ್ರ್ಯದ ಸುಧಾರಣೆ, ಕನಿಷ್ಠ ಮತ್ತು ಬೆಂಬಲ ಬೆಲೆ ಘೋಷಣೆ ಮುಂತಾದ ಪರಿಹಾರ ಕ್ರಮಗಳನ್ನು ಪ್ರಕಟಿಸುತ್ತಾ ಹೋದಂತೆ, ರೈತರ ಆತ್ಮಹತ್ಯೆ ಪ್ರಕರಣಗಳೂ ಹೆಚ್ಚುತ್ತಿರುವುದನ್ನೂ ಗಮನಿಸಬೇಕಿದೆ. ನಮ್ಮ ಮುಖ್ಯಮಂತ್ರಿಗಳ ಸಂವಾದ ಕಾರ್ಯಕ್ರಮ ನಡೆಯುತ್ತಿದ್ದ ಸಮಯದಲ್ಲೇ ಮತ್ತು ಆನಂತರವೂ ರಾಜ್ಯದ ಹಲವಾರು ಕಡೆಯಿಂದ ಆತ್ಮಹತ್ಯೆ ಪ್ರಕರಣಗಳು ವರದಿಯಾಗಿವೆ. ಇದೆಲ್ಲ ಏನನ್ನು ಸೂಚಿಸುತ್ತದೆ?
ರೈತರ ಸಮಸ್ಯೆ ಸಾಲ, ಬೀಜ ಪೂರೈಕೆ, ಬೆಳೆ ಬೆಲೆ ಮುಂತಾದ ಕಸುಬು ಸಂಬಂಧಿ ಸಮಸ್ಯೆಯಾಗಿ ಮಾತ್ರ ಉಳಿದಿಲ್ಲ. ಸಂವಾದದಲ್ಲಿ ಪಾಲ್ಗೊಂಡಿದ್ದ ರೈತ ಮುಖಂಡರೊಬ್ಬರು ಸೂಕ್ಷ್ಮವಾಗಿ ಹೇಳಿದಂತೆ, ರೈತರ ಆತ್ಮಬಲ ಕುಸಿದು ಹೋಗಿರುವುದೇ ಆತ್ಮಹತ್ಯೆಗೆ ಮೂಲ ಕಾರಣವಾಗಿದೆ. ಆದರೆ, ಈ ಸೂಚನೆ ನೀಡಿದ ಮುಖಂಡರು ಅದನ್ನು ವಿಸ್ತರಿಸಿ ವಿಶ್ಲೇಷಿಸಲು ಹೋಗಲಿಲ್ಲ. ನಮ್ಮ ರೈತ ಚಳುವಳಿಯಿಂದ ನಮ್ಮ ರೈತ ಮುಖಂಡರಿಗೆ ಬಳುವಳಿಯಾಗಿ ಬಂದ ದೌರ್ಬಲ್ಯವಿದು. ರೈತ ಚಳುವಳಿಯನ್ನು ಸ್ಥೂಲವಾಗಿ ಬೆಳೆ ಬೆಲೆ ಕೇಂದ್ರಿತವಾದ ಕಾರ್ಯಕ್ರಮವಾಗಿ ರೂಪಿಸಿದ ಅದರ ನಾಯಕರು, ರೈತನ ಸಮಸ್ಯೆ ಹೇಗೆ ಒಟ್ಟಾರೆ ವ್ಯವಸ್ಥೆಯ ಸಮಸ್ಯೆಯೇ ಆಗಿದೆ ಎಂಬುದನ್ನರಿತು ವಿವರಿಸಿ ಚಳುವಳಿಯನ್ನು ಕಟ್ಟುವ ವ್ಯವಧಾನವಿಲ್ಲದೆ, ಅದನ್ನು ಸಕರ್ಾರ ವಿರೋಧಿ ಕಾರ್ಯಕ್ರಮವನ್ನಾಗಿ ಬೆಳಸುವ ವೀರಾವೇಶದಲ್ಲೇ ತಮ್ಮೆಲ್ಲ ಶಕ್ತಿಯನ್ನು ವ್ಯಯಿಸಿಕೊಂಡರು. ಈ ಚಳುವಳಿ ಶಿಖರ ಸ್ಥಿತಿಯಲ್ಲಿದ್ದಾಗ, ಚಳುವಳಿಯ ಮುಖ್ಯ ನಾಯಕರೊಬ್ಬರು, ರೈತರೇಕೆ ಐ.ಎ.ಎಸ್. ಅಧಿಕಾರಿಗಳ ಜೀವನ ಶೈಲಿಗಾಗಿ ಆಸೆಪಡಬಾರದೆಂದು ಕೇಳಿ ನನ್ನನ್ನು ದಂಗುಬಡಿಸಿದ್ದರು. ತಮ್ಮ ದುಃಸ್ಥಿತಿಗೆ ಕಾರಣವಾದ ವ್ಯವಸ್ಥೆಯ ಬಗೆಗೇ ಸಿಟ್ಟಿಲ್ಲದ ಇವರು, ರೈತರ ಸಮಸ್ಯೆ ಬಗೆಗೆ ಮಾತ್ರ ಸಿಟ್ಟಾಗತೊಡಗಿದ್ದುದು ರೈತ ಚಳುವಳಿಯ ಮೂಲ ದೌರ್ಬಲ್ಯವಾಗಿತ್ತು.
ಹಾಗಾಗಿಯೇ ಇಂದು ಕೂಡಾ ರೈತ ಮುಖಂಡರೆನಿಸಿಕೊಂಡವರು, ಈ ಆತ್ಮಹತ್ಯೆಗಳು ಏಕೆ ಕಳೆದ ಹತ್ತುವರ್ಷಗಳಿಂದೀಚೆಗೆ, ಅದೂ ನೀರಾವರಿ ಇರುವ ಪ್ರದೇಶಗಳಲ್ಲೇ ಹೆಚ್ಚು ಸಂಭವಿಸುತ್ತಿವೆ ಎಂಬ ಬಗ್ಗೆ ಆಲೋಚನೆಯನ್ನೇ ಮಾಡಿದಂತಿಲ್ಲ. ಅಂದಾಕ್ಷಣ ಹತ್ತು ವರ್ಷಗಳ ಹಿಂದೆ ಹಾಗೂ ನೀರಾವರಿ ಇಲ್ಲದ ಪ್ರದೇಶಗಳ ರೈತರು ಸುಖದಿಂದಿದ್ದರು ಅಥವಾ ಇದ್ದಾರೆ ಎಂದು ಇದರರ್ಥವಲ್ಲ. ಆದರೆ ಈ ಹಿಂದೆ ಕ್ಷಾಮ-ಡಾಮರಗಳ ಭಯಂಕರ ಬವಣೆಗಳನ್ನು ಎದುರಿಸಿದ ನಮ್ಮ ರೈತರು, ಆತ್ಮಹತ್ಯೆ ಅನಿವಾರ್ಯವಾಗುವಂತಹ ಮಹಾ ಸಂಕಟಕ್ಕೆ ಇತ್ತೀಚಿನ ವರ್ಷಗಳಲ್ಲಿ ಮಾತ್ರ ಮತ್ತು ಹೆಚ್ಚಾಗಿ ನೀರಾವರಿ ಬೆಳೆ ಪ್ರದೇಶದಲ್ಲೇ ಏಕೆ ತುತ್ತಾಗುತ್ತಿದ್ದಾರೆೆ ಎಂಬುದು ಚಿಂತನಾರ್ಹವಾಗಿದೆ ಎಂದಷ್ಟೇ ಹೇಳುತ್ತಿರುವೆ. ಹಸಿರು ಕ್ರಾಂತಿ ಪರಿಚಯಿಸಿದ ಕೃಷಿ ವ್ಯವಸ್ಥೆ ತನ್ನ ಶಿಖರ ಸ್ಥಿತಿ ಮುಟ್ಟಿ ಸ್ಥಗಿತಗೊಂಡಿರುವುದೇ ಇದಕ್ಕೆ ಮುಖ್ಯ ಕಾರಣವೆನಿಸುತ್ತದೆ. ಅದು ಸೃಷ್ಟಿಸಿದ ಆಧುನಿಕ ನೀರಾವರಿ ಮೂಲ ಸೌಲಭ್ಯಗಳು, ಕೃಷಿ ಪದ್ಧತಿಗಳು, ಹಣಕಾಸು ವ್ಯವಸ್ಥೆ ಹಾಗೂ ಅವುಗಳನ್ನಾಧರಿಸಿದ ರೈತರ ಜೀವನ ದರ್ಶನ ಮತ್ತು ಶೈಲಿ ಇಂದು ಸಂಪೂರ್ಣ ಬಿಕ್ಕಟ್ಟಿನಲ್ಲಿವೆ. ನೀರಿನ ಮೂಲಗಳು ಬತ್ತಿಹೋಗಿ, ಬೃಹತ್ ಜಲಾಶಯಗಳಲ್ಲಿ ಹೂಳು ತುಂಬಿ, ಕಾಲುವೆಗಳು ಶಿಥಿಲಗೊಂಡು, ಭೂಮಿ ವಿಷಯುಕ್ತವಾಗಿ ಬಂಜರುಗೊಂಡು, ಬೆಳೆ ಮತ್ತು ಬೆಲೆಗಳೆರೆಡೂ ಏರುಪೇರಾಗಿ, ಬಂಡವಾಳ ಹೂಡಿಕೆಯ ಚಕ್ರ ಸ್ಥಗಿತಗೊಂಡ ಪರಿಣಾಮವಾಗಿ ಸಾಲ ಮೈಮೇಲೆ ಬಿದ್ದು; ಹೊಸ ಆಥರ್ಿಕ ನೀತಿಗಳಿಂದಾಗಿ ಬದಲಾದ ಸಾರ್ವಜನಿಕ ಬದುಕಿನ ದರ್ಶನ ಹಾಗೂ ಶೈಲಿಗಳ ಮಧ್ಯೆ ಹೊರದಾರಿಗಳೇ ಇಲ್ಲದೆ ಅವನಿಗೆ ಉಸಿರುಗಟ್ಟಿದಂತಾಗಿದೆ. ಇದನ್ನರಿತೇ ವಿದರ್ಭದಲ್ಲಿ ಪ್ರಯೋಗಾತ್ಮಕವಾಗಿ ಆರಂಭಿಸಿದ ಮಾನಸಿಕ ಪುನರುಜ್ಜೀವನ ಚಿಕಿತ್ಸಾ ಕಾರ್ಯಕ್ರಮಗಳು ಅಷ್ಟಾಗಿ ಫಲ ನೀಡದೆ, ಆತ್ಮಹತ್ಯೆಗಳು ಮುಂದುವರೆದಿವೆ. ಇಂತಹ ಪರಿಸ್ಥಿತಿಯಲ್ಲಿ ನಮ್ಮ ಮುಖ್ಯಮಂತ್ರಿಯೋ, ರೈತ ಮುಖಂಡರೋ ಕೈಮುಗಿದು 'ದಯವಿಟ್ಟು ಆತ್ಮಹತ್ಯೆ ಮಾಡಿಕೊಳ್ಳಬೇಡಿ' ಎಂದು ಬೇಡಿಕೊಂಡರೆ ಆತ್ಮಹತ್ಯೆ ನಿಂತಾವೆಯೇ?
ಅಲ್ಲದೆ, ಕೃಷಿ ಸಮಾಜವನ್ನು ಇದ್ದಕ್ಕಿದ್ದಂತೆ ಕೈಗಾರಿಕಾ ಸಮಾಜವನ್ನಾಗಿ ಪರಿವತರ್ಿಸುವ ವಿಶೇಷ ಆರ್ಥಿಕ ವಲಯ, ರೈತರ ಭಾಗವಹಿಸುವಿಕೆಯೇ ಇಲ್ಲದ ಜೈವಿಕ ಕೃಷಿ ತಂತ್ರಜ್ಞಾನ ಚಟುವಟಿಕೆಗಳ ವಿಸ್ತರಣೆ, ಬೃಹತ್ ಬೆಂಗಳೂರಿನಂತಹ ರೈತ ಸಂಸ್ಕೃತಿಯ ಬುಡವನ್ನೇ ಅಲ್ಲಾಡಿಸುವಂತಹ ಅತಿ ನಗರೀಕರಣದ ಯೋಜನೆಗಳನ್ನು ಹೊಸ ಬದುಕಿನ ನಾಂದಿ ಕಾರ್ಯಕ್ರಮಗಳಂತೆ ಯುದ್ಧೋಪಾದಿಯಲ್ಲಿ ಆರಂಭಿಸಿ, ಆ ಹೊಸ ಬದುಕಿನಲ್ಲಿ ಅವನ ಸ್ಥಾನವೇನು ಎಂಬುದು ಗೊತ್ತಾಗದ ರೀತಿಯಲ್ಲಿ ಅವನ್ನು ಜಾರಿಗೊಳಿಸುತ್ತಿರುವ ಸಂದರ್ಭದ ಒತ್ತಡವೂ ಆತನಲ್ಲಿ ತನ್ನ ಅಸ್ತಿತ್ವದ ಆಧ್ಯಾತ್ಮಿಕತೆಯನ್ನು ಸ್ಪರ್ಶಿಸಿದ್ದರೆ ಆಶ್ಚರ್ಯವಿಲ್ಲ. ರೈತನನ್ನು ಹಳೆಯ ಊಳಿಗಮಾನ್ಯ ವ್ಯವಸ್ಥೆಯ ಪ್ರತಿನಿಧಿಯನ್ನಾಗಿ ಮಾತ್ರ ನೋಡುವ ಆಧುನಿಕ ಮನಸ್ಸಿಗೆ ಈ ಸಂಕಟದ ಸಂಕೀರ್ಣತೆ ಅರ್ಥವಾಗದು. ಹಾಗೇ, ಚಳುವಳಿಯ ಯಶಸ್ಸಿನ ಮೇಲೆ ಮಾತ್ರ ಕಣ್ಣಿಟ್ಟು ರೈತನ ಬದುಕನ್ನು ಆರ್ಥಿಕ ಪ್ರಶ್ನೆಯ ನೆಲೆಗೇ ಇಳಿಸಿ ನೋಡುವಂತಹ ಚಳುವಳಿಕೋರ ರೈತ ನಾಯಕರ ಸಮೀಪ ದೃಷ್ಟಿಗೂ ಇದು ಸಿಗದು. ಲೆಕ್ಕ ಇಟ್ಟವನು ರೈತನಾಗಲಾರ ಎಂಬ ರೈತ ನಾಯಕ ಕಡಿದಾಳು ಶಾಮಣ್ಣ ಅವರ ಮಾತು ಇಂದಿನ ಸಂದರ್ಭದಲ್ಲಿ ಸ್ವಲ್ಪ ಉತ್ಪ್ರೇಕ್ಷೆಯ ಮಾತೆನ್ನಿಸಿದರೂ, ರೈತ ಬರಿ ಬೆಳೆ ಉತ್ಪಾದಕನಲ್ಲ;ಅವನೊಂದು ಜೀವನ ಕ್ರಮದ ಪ್ರತೀಕ ಎಂಬರ್ಥದಲ್ಲಿ ಅವರ ಮಾತನ್ನು ಅರ್ಥ ಮಾಡಿಕೊಂಡರೆ, ರೈತರ ಆತ್ಮಹತ್ಯೆ ಕುರಿತ ನಮ್ಮ ನೋಟಕ್ರಮ ಮೂಲಭೂತವಾಗಿ ಬದಲಾಗಬಲ್ಲದು. ರೈತರ ಆತ್ಮಹತ್ಯೆ ವಿದ್ಯಮಾನವನ್ನು ಒಟ್ಟಾರೆ, ಜಾಗತೀಕರಣದ ಒತ್ತಡಗಳು ನಿರ್ಮಿಸುತ್ತಿರುವ ಒಂದು ದೊಡ್ಡ ಸಾಮಾಜಿಕ-ಸಾಂಸ್ಕೃತಿಕ ಬಿಕ್ಕಟ್ಟನ್ನಾಗಿ ಪರಿಗ್ರಹಿಸಿದಾಗ ಮಾತ್ರ ಅದರ ಪರಿಹಾರಗಳೂ ಹೊಳೆದಾವು ಎನ್ನಿಸುತ್ತದೆ. ಹೀಗಾಗಿ ಇಂದಿನ ಮುಖ್ಯ ಪ್ರಶ್ನೆ, ಇಂದು ನಾವು ಕಾಣುತ್ತಿರುವ ದುಡಿಮೆ, ಈ ದುಡಿಮೆಯ ಗುರಿ, ದುಡಿಮೆಯ ಆನಂದ ಹಾಗೂ ಅವುಗಳಿಂದ ಹೊಮ್ಮುವ ಬದುಕಿನ ಸಾರ್ಥಕತೆಯ ಅರ್ಥ ಪಲ್ಲಟಗಳನ್ನು ನಾವು ಎಷ್ಟರ ಮಟ್ಟಿಗೆ ಒಪ್ಪಿಕೊಳ್ಳಬಹುದು ಎಂಬುದೇ ಆಗಿದ್ದು ಅದಕ್ಕೆ ಸಿಗುವ ಉತ್ತರವನ್ನು ಆಧರಿಸಿಯೇ ಈ ಪರಿಹಾರಗಳ ಸ್ವರೂಪವನ್ನು ನಿರ್ಧರಿಸಬೇಕಾಗುತ್ತದೆ. ರೋಗ ಚಿಹ್ನೆಯನ್ನೇ ರೋಗವೆಂದು ಬಗೆವ ತಪ್ಪಾಗಬಾರದು.
ಸಾಲಮನ್ನಾ, ಸಾಲ ಸೌಲಭ್ಯ, ಬೀಜ ಸೌಲಭ್ಯ, ಸಕಾಲದಲ್ಲಿ ವಿದ್ಯುತ್ ಸರಬರಾಜು, ನ್ಯಾಯೋಚಿತ ಬೆಂಬಲ ಬೆಲೆ ಇತ್ಯಾದಿ ಪರಿಹಾರ ಕ್ರಮಗಳು ರೈತರನ್ನು ಮುಟ್ಟುವ ವೇಳೆಗೆ; ಅಧಿಕಾರಶಾಹಿಯ ಆಲಸ್ಯ, ತಾಂತ್ರಿಕ ಕೊಕ್ಕೆಗಳು ಮತ್ತು ಭ್ರಷ್ಟತೆಯಿಂದಾಗಿ ಅವು ತಮ್ಮ ಗುರಿ ಕಳೆದುಕೊಂಡು ಪರಿಸ್ಥಿತಿ ಮತ್ತಷ್ಟು ಬಿಗಡಾಯಿಸುವ ಸಾಧ್ಯತೆಗಳು ರೈತ ಪ್ರತಿನಿಧಿಗಳ ಮಾತುಗಳ ಮೂಲಕ ಮಾತ್ರವಲ್ಲ, ಸ್ವತಃ ಮುಖ್ಯಮಂತ್ತಿಗಳ ಮಾತುಗಳ ಮೂಲಕವೇ ಅಂದಿನ ಸಂವಾದ ಸಭೆಯ ಸಂದರ್ಭದಲ್ಲಿ ದುರಂತಮಯವಾಗಿ ಮೂಡಿಬಂತು. ಮುಖ್ಯಮಂತಿಯೊಬ್ಬರು, ತಮ್ಮ ಸದುದ್ದೇಶದ ಯೋಜನೆಗಳೆಲ್ಲವೂ ಅಧಿಕಾರಶಾಹಿಯ ಮಧ್ಯಪ್ರವೇಶದಿಂದಾಗಿ ಹಾಳಾಗುವ ಸಾಧ್ಯತೆಗಳನ್ನು ಬಹಿರಂಗವಾಗಿ ಹೇಳಿಕೊಳ್ಳುವ ಸ್ಥಿತಿ ಉಂಟಾಗಿದೆಯೆಂದರೆ, ಈ ಮೇಲೆ ಪ್ರಸ್ತಾಪಿಸಿದ ಸಾಮಾಜಿಕ-ಸಾಂಸ್ಕೃತಿಕ ಬಿಕ್ಕಟ್ಟು ನಮ್ಮ ರಾಜಕಾರಣವನ್ನು ಎಷ್ಟು ದಿಕ್ಕೆಡಿಸಿದೆ ಎಂಬುದು ಗೊತ್ತಾಗುತ್ತದೆ. ಶಾಸಕಾಂಗ ತನ್ನ ಪರಮ ಭ್ರಷ್ಟತೆ, ಅದಕ್ಷತೆ ಹಾಗೂ ಕರ್ತವ್ಯ ವಿಮುಖತೆಗಳ ಮೂಲಕ ವಿಶ್ವಾಸಾರ್ಹತೆ ಕಳೆದುಕೊಂಡು, ಈ ವಿಷಯಗಳಲ್ಲಿ ಕಾರ್ಯಾಂಗದೊಂದಿಗೆ ಶಾಮೀಲಾಗಿರುವುದೇ, ಕಾರ್ಯಾಂಗವು ಶಾಸಕಾಂಗವನ್ನು -ಮುಖ್ಯಮಂತ್ರಿಗಳು ಹೀಗೆ ಬಹಿರಂಗವಾಗಿ ಅಲವತ್ತುಕೊಳ್ಳುವ ಮಟ್ಟದಲ್ಲಿ- ಯಾಮಾರಿಸುತ್ತಿರುವುದಕ್ಕೆ ಕಾರಣವಾಗಿದೆ. ಅಧಿಕಾರಿಗಳಿಗೆ ಕಟ್ಟುನಿಟ್ಟಾದ ನಿರ್ದೇಶನ ನೀಡಲು ಅಗತ್ಯವಾದಂತಹ ಒಂದು ರಾಜಕೀಯ ತಾತ್ವಿಕತೆಯ ಬೆನ್ನೆಲುಬಾಗಲೀ, ದೀರ್ಘ ರಾಜಕೀಯ ಅನುಭವ ತಂದುಕೊಡುವ ಆಡಳಿತಾತ್ಮಕ ತಿಳುವಳಿಕೆಯಾಗಲೀ, ಕೈ-ಬಾಯಿ ಶುದ್ಧವಾಗಿಟ್ಟುಕೊಂಡ ನೈತಿಕ ಸ್ಥೈರ್ಯವಾಗಲೀ ಮುಖ್ಯಮಂತ್ರಿಗಳಿಗೆ ಇಲ್ಲದೇ ಹೋಗಿರುವುದೇ ಶಾಸಕಾಂಗದ ಈ ವೈಫಲ್ಯಕ್ಕೆ್ಕೆ ಕಾರಣವಾಗಿದೆ.
ಜಾಗತೀಕರಣ ಒತ್ತಾಯಿಸುವ ಅಭಿವೃದ್ಧಿ ಮಾದರಿ ಹಾಗೂ ಆದ್ಯತೆಗಳು ಸಮಾಜದ ಆಯಕಟ್ಟಿನ ಸ್ಥಾನಗಳಲ್ಲಿರುವ ಜನರ ಪಾಲಿಗೆ, ದುಡಿಮೆ ಇಲ್ಲದೆಯೇ ಸುಲಭ ಹಾಗೂ ಲೆಕ್ಕಕ್ಕೆ ಸಿಗದ ಅಪಾರ ಹಣ ಗಳಿಸುವ ಭ್ರಷ್ಟಾಚಾರದ ದಿಡ್ಡಿ ಬಾಗಿಲುಗಳನ್ನು ತೆರೆದಿಟ್ಟಿರುವ ಈ ಸಂದರ್ಭದಲ್ಲಿ, ಕೋಟ್ಯಾಂತರ ರೂಪಾಯಿಗಳ ವೆಚ್ಚದ ರೆಸಾರ್ಟ್ ರಾಜಕಾರಣದ ಮೂಲಕ ಮುಖ್ಯಮಂತ್ರಿಯಾಗಿ ಮತ್ತು ಅದರ ಬಲದ ಮೇಲೇ ಮುಖ್ಯಮಂತ್ರಿಯಾಗಿ ಮುಂದುವರಿಯಬೇಕಾಗಿರುವುದರಿಂದಾಗಿ ಅವರು ಅನುಭವಿಸಬೇಕಾಗಿರುವ ಅಸಹಾಯಕತೆ-ಅವಮಾನವಿದು! ಇದು ರಾಜ್ಯದ ಜನತೆ ಅನುಭವಿಸಬೇಕಾಗಿರುವ ಅಸಹಾಯಕತೆ-ಅವಮಾನವೂ ಆಗಿದೆ. ಇಂತಹ ಇಕ್ಕಟ್ಟಿನಲ್ಲಿರುವ ಮುಖ್ಯಮಂತ್ರಿಯಿಂದ, ರೈತರ ಆತ್ಮಹತ್ಯೆಗೆ ಕಾರಣವಾಗಿರುವ ವ್ಯವಸ್ಥೆಯ ಬದಲಾವಣೆಯನ್ನು ನಿರೀಕ್ಷಿಸುವುದು ಕಷ್ಟವೇ ಸರಿ. ಏಕೆಂದರೆ, ತಾವೂ ಭಾಗಿಯಾಗಿರುವ ಸಮಕಾಲೀನ ರಾಜಕಾರಣದ ಚಾರಿತ್ರ್ಯಹೀನತೆಯೇ ಈ ಎಲ್ಲ ದುರಂತಗಳಿಗೆ ಕಾರಣ ಎಂಬ ಮೂಲಭೂತ ಅರಿವೇ ಇಲ್ಲದವರು ಎಷ್ಟೇ ಜನಪರತೆಯ ಕಣ್ಣೀರು ಹರಿಸಿದರೂ ರೈತರ ಆತ್ಮಹತ್ಯೆ ಪ್ರತಿನಿಧಿಸುವ ಜನತೆಯ ಕಣ್ಣೀರು ನಿಲ್ಲಲಾರದು.
ಆದರೂ ಅಂದಿನ ಸಭೆಯಲ್ಲಿ ತಮ್ಮ ಗ್ರಾಮ ವಾಸ್ತವ್ಯ ಹಾಗೂ ಇತರೆ ಜನಪ್ರಿಯ ಕಾರ್ಯಕ್ರಮಗಳ ಸದುದ್ದೇಶಗಳ ಬಗ್ಗೆ ಏಕೋ ಏನೋ ದುರಂತ ನಾಯಕನಂತೆ, ಅತಿ ವಿಷಾದಿಂದಲೂ ಅತಿವಿನಯದಲ್ಲೂ ಮಾತನಾಡಲು ಯತ್ನಿಸಿದ ಮುಖ್ಯಮಂತ್ರಿಗಳು ಆ ವಿಷಾದ-ವಿನಯಗಳಲ್ಲಿ ಎಷ್ಟು ಮೈಮರೆತರೆಂದರೆ, ತಮ್ಮ ಸತ್ಯವಂತಿಕೆಗೆ ತಾವೇ ಅರ್ಹತಾ ಪತ್ರ ಕೊಟ್ಟುಕೊಳ್ಳುತ್ತಾ; ಬೆಂಗಳೂರಲ್ಲಿ ವಶಪಡಿಸಿಕೊಳ್ಳಲಾಗಿರುವ ಅತಿಕ್ರಮಿತ ಭೂಮಿಯನ್ನು ತಮ್ಮ ನಂತರ ಬರುವ ಮುಖ್ಯಮಂತ್ರಿಯು ತಮ್ಮಂತಿರದೆ, ಆ ಭೂಮಿಯನ್ನು ದುರುಪಯೋಗಪಡಿಸಿಕೊಳ್ಳುವ ಸಾಧ್ಯತೆ ಇರುವುದರಿಂದ ತಮ್ಮ ಅಧಿಕಾರಾವಧಿಯಲ್ಲೇ ಅದರ 'ಸದುಪಯೋಗ' ಮಾಡುವ ಪ್ರಸ್ತಾವ ಮಂಡಿಸಿದರು.! ಆಶ್ಚರ್ಯವೆಂದರೆ ಅಂದು ಆ ಸಭೆಯಲ್ಲಿ ವಿರೋಧ ಪಕ್ಷದ ಹಲವು ಮುಖಂಡರು ಕಂಡರಾದರೂ, ರೈತ ನಾಯಕರೆಂದೇ ಸಾರ್ವಜನಿಕವಾಗಿ ಪ್ರತಿಬಿಂಬಿಸಲ್ಪಟ್ಟು ತಮ್ಮ ರಾಜಕೀಯ ಜೀವನವನ್ನು ಕಟ್ಟಿಕೊಂಡ ರಾಜ್ಯದ ಉಪಮುಖ್ಯಮಂತ್ರಿಯೂ ಮತ್ತು ರೈತರ ಆತ್ಮಹತ್ಯೆ ತಡೆಯುವ ಸಕರ್ಾರದ ಉದ್ದೇಶಿತ ಕಾರ್ಯಕ್ರಮಗಳಿಗೆ ಹಣಕಾಸಿನ ಸೌಲಭ್ಯ ಒದಗಿಸಬೇಕಾದ ಅರ್ಥಮಂತಿಯೂ ಆದ ಯಡಿಯೂರಪ್ಪನವರೂ ಸೇರಿದಂತೆ, ಮಿತ್ರ ಪಕ್ಷವಾದ ಬಿ.ಜೆ.ಪಿ.ಯ ಯಾವ ನಾಯಕರೂ ಅಲ್ಲಿ ಹಾಜರಿದ್ದಂತಿರಲಿಲ್ಲ. ಅವರದೇ ಏನೋ ಪ್ರತ್ಯೇಕ ಸಭೆ ನಡೆದಿತ್ತು ಇನ್ನೊಂದು ಕಡೆ!
ಅಂದಹಾಗೆ: ಮಹಿಳಾ ಮೀಸಲಾತಿ ಮಸೂದೆಗೆ ವಿರೋಧ ವ್ಯಕ್ತಪಡಿಸುತ್ತಿದ್ದ ರಾಜಕೀಯ ಪಕ್ಷಗಳೂ ಈಗ ರಾಷ್ಟ್ರಪತಿ ಆಯ್ಕೆಯೇ ಮಹಿಳಾ 'ಮೀಸಲಾತಿ'ಯ ಆಧಾರದ ಮೇಲೆ ನಡೆಯುತ್ತಿರುವುದನ್ನು ಒಪ್ಪಿಕೊಳ್ಳಬೇಕಾದ ಪರಿಸ್ಥಿತಿ ಉಂಟಾಗಿದೆ. ಏಕೆಂದರೆ, ಈಗ ಗೆಲ್ಲುವ ಕುದುರೆಯಾಗಿ ರಾಷ್ಟ್ರಪತಿ ಸ್ಥಾನಕ್ಕೆ ಆಳುವ ಪಕ್ಷಕೂಟದಿಂದ ಅಭ್ಯಥರ್ಿಯಾಗಿರುವ ಶ್ರೀಮತಿ ಪ್ರತಿಭಾ ಪಾಟೀಲರನ್ನು ಆ ಘನತವೆತ್ತ ಹಾಗೂ ಜವಾಬ್ದಾರಿಯುತ ಸ್ಥಾನಕ್ಕೆ ಒಯ್ಯುವ ಮುಖ್ಯ ಅರ್ಹತೆ, ಅವರು ಮಹಿಳೆಯಾಗಿದ್ದಾರೆ ಎಂಬುದೇ ಆಗಿದೆ. ಮಹಿಳಾ ಮೀಸಲಾತಿ, ಎಲ್ಲಿ ಸಾರ್ಥಕವಾಗಿ ಕೊನೆಗೊಳ್ಳಬೇಕಾಗಿತ್ತೋ, ಅದು ಆ ಸ್ಥಾನದಿಂದ ಆರಂಭವಾದಂತಿದೆ! ಮಹಿಳಾ ಮೀಸಲಾತಿಯನ್ನು ಇಷ್ಟು ಕಾಲ ವಿರೋಧಿಸಿದವರಿಗೆ ತಕ್ಕ ಶಾಸ್ತಿಯಾಗಿದೆ!

- D.S.NAGABHUSHANA ರವರ ಬ್ಲಾಗ್
- Login or register to post comments
- 629 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ






RSS:
ಪ್ರತಿಕ್ರಿಯೆಗಳು
ಉ: ರೈತರ ಆತ್ಮಹತ್ಯೆ
ಪ್ರಿಯ ನಾಗಬೂಷಣರೇ,
"ರೈತರ ಆತ್ಮಹತ್ಯೆ" ಎ೦ಬ ಶಿರ್ಷಿಕೆಯನ್ನ ನೋಡಿದ ತಕ್ಷಣ ನಿಮ್ಮ ಲೇಖನವನ್ನ ಓದಲು ತೆರೆದೆ ಏಕೆ೦ದರೆ ನಾನು ಒಬ್ಬ ಹಳ್ಳಿ ಮುಕ್ಕ. ರೈತರ ಪಡಿ ಪಾಟಲುಗಳನ್ನ ಹತ್ತಿರದಿ೦ದ ನೋಡಿರುವವನು. ಹಾಗಾಗಿ ನಿಮ್ಮ ಲೇಖನದಲ್ಲಿ ಏನಾದರು ಕ್ರಾ೦ತಿಕಾರಿ ವಿಷಯಗಳನ್ನ ಪ್ರಸ್ತಾಪಿಸಿರುವರೇನೋ ಎ೦ದು ಓದಲು ಪ್ರಾರ೦ಬಿಸಿದ ನನಗೆ ಮೊದಲನೇ ಪ್ಯಾರಗ್ರಾಪ್ನಲ್ಲೇ ಬಹಳ ನಿರಾಸೆಯಾಯಿತು. ಆದರೂ ಈ ಸಮಸ್ಯೆಗೆ ಏನಾದರು ಪರಿಹಾರ ತಿಳಿಸುವಿರೆ೦ದು ಸ೦ಪೂರ್ಣ ಲೇಖನ ಓದಿದೆ ಮತ್ತೆ ನಿರಾಸೆ ಮಾಡಿಬಿಟ್ಟಿರಿ. ಈ ಲೇಖನವನ್ನ ನಿಮ್ಮ "ಸವಕಲು" ideology ಬಾಷಣದ ಮುಖಾ೦ತರ ಒಬ್ಬ ಯುವ, ಇದ್ದದ್ದರಲ್ಲಿ ಕಾರ್ಯಶೀಲ ಮುಖ್ಯ ಮ೦ತ್ರಿಯನ್ನ ಪರೋಕ್ಷವಾಗಿ ಟೀಕಿಸಲು ಉಪಯೋಗಿಸಿರುವುದು ಖ೦ಡನೀಯ.
ರೈತರ ಆತ್ಮಹತ್ಯೆಗೆ ಕಾರಣಗಳು ಒ೦ದಲ್ಲ, ಎರಡಲ್ಲ ಅವು ಹಲವಾರು. ಒ೦ದೂ೦ದು ಪ್ರದೇಶದಲ್ಲಿ ಒ೦ದೊ೦ದು ತರಹದ ಸಮಸ್ಯೆಗಳು!, ಒ೦ದೂ೦ದು ಮನೆಗಳಲ್ಲಿ ಒ೦ದೊ೦ದು ತರಹದ ಸಮಸ್ಯೆಗಳು!. ನನಗನ್ನಿಸಿದ ಹಾಗೆ ನಿಮಗೆ ರೈತರ ಸ೦ಪರ್ಕವೇ ಇಲ್ಲ. ಕೇವಲ ಪತ್ರಿಕಾ ವರದಿಗಳ ಪ್ರೇರಣೆಯಿ೦ದ ಈ ಲೇಖನವನ್ನ ಬರೆದಿರಬಹುದು ಎ೦ದನಿಸುತ್ತದೆ!.
ರೈತ ಆರ್ಥಿಕ ಸ೦ಕಷ್ಟದಿ೦ದ ಆತ್ಮಹತ್ಯೆಗೆ ಶರಣಾಗುತ್ತಿದ್ದಾನೆ ಇದು ಎಲ್ಲರಿಗೂ ತಿಳಿದಿರುವ ಸ೦ಗತಿ. ಆದರೆ ಆರ್ಥಿಕ ಸ೦ಕಷ್ಟ ಹೇಗೆ ಬರುತ್ತದೆ?
ಸಾಮಾನ್ಯವಾಗಿ ರೈತ ಯಾವುದಾದರು ಬೇಳೆ ಬೆಳೆಯಲು ತೀರ್ಮಾನಿಸಿದ ಮೇಲೆ ಅವನಿಗೆ ಬೀಜ ಕೊಳ್ಳಲು, ರಸಗೊಬ್ಬರ ಕೊಳ್ಳಲು ಆಳುಗಳಿಗೆ ನೀಡಲು ಹಣದ ಅಗತ್ಯ ಬೀಳುತ್ತದೆ. ಹಣಕ್ಕಾಗಿ ಅವನು ಮೊದಲು ಹೋಗುವುದು ಲೇವಾದೀವಿಯವರ ಹತ್ತಿರ ಏಕೆ೦ದರೆ ನಮ್ಮ ಸರ್ಕಾರಿ ಬ್ಯಾ೦ಕುಗಳು ಸಾಲ ನೀಡುವುದು ಹಣವಿರುವವರಿಗೆ ಮಾತ್ರ!. ಅಕಸ್ಮಾತ್ ಅವನು ಸಾಲಕ್ಕಾಗಿ ಬ್ಯಾ೦ಕಿಗೆ ಹೋದರೂ ಲ೦ಚ ಕೊಡಬೇಕು, ಅವರ ವಿಳ೦ಬ ನೀತಿಯನ್ನ ಸಹಿಸಿಕೊಳ್ಳಬೇಕು..ಇತ್ಯಾದಿ. ಬಹುತೇಕ ಸರ್ಕಾರಿ ಬ್ಯಾ೦ಕುಗಳು ಕೆ೦ದ್ರ ಸರ್ಕಾರದ ಸ್ವಾಮ್ಯಕ್ಕೆ ಒಳಪ್ಪಟ್ಟಿರುತ್ತವೆ, ಹಾಗಾಗಿ ಕುಮಾರಸ್ವಾಮಿ ಈ ವಿಷಯದಲ್ಲಿ ಏನೂ ಮಾಡಲಾರ. ಈ ವಿಷಯದಲ್ಲಿ ಏನನ್ನಾದರು ಮಾಡಲು ಆಗುತ್ತಿದ್ದರೆ ಅದು ನಿಮ್ಮ ವಾಮ ರ೦ಗದ ಮತ್ತು secular ಕಾ೦ಗ್ರೆಸ್ ನಡೆಸುತ್ತಿರುವ UPA ಸರ್ಕಾರದಿ೦ದ ಮಾತ್ರ ಸಾದ್ಯವಾಗಿತ್ತು. ಆದರೆ ಕೇವಲ ನಾವು ಜನಪರ, ಪ್ರಗತಿಪರ್ ಎ೦ಬ ಡೊ೦ಗಿ ಘೋಷಣಗಳಿಗೇ ಏಕೆ ಸೀಮಿತವಾಗಿವೆ?.
ಸ್ವಾಮಿ ಕುಮಾರಸ್ವಾಮಿಯವರನ್ನ ತರಾಟೆಗೆ ತೆಗೆದುಕೊಳ್ಳುವ ಮೊದಲು ಕೇ೦ದ್ರದಲ್ಲಿರುವ ಕೃಷಿ ಮ೦ತ್ರಿ ಯಾರು ಗೊತ್ತೇ?BCCI ಅದ್ಯಕ್ಷರೂ ಆಗಿರುವ ಅವರಿಗೆ ರೈತರ ಆತ್ಮಹತ್ಯೆ ಸಮಸ್ಯೆಗಿ೦ತ ಕೆಳಮ್ಮಟ್ಟಕ್ಕಿಳಿದಿರುವ ಕ್ರಿಕೆಟ್ ಆಟವನ್ನ ಹೇಗೆ ಮೇಲೆತ್ತುವುದು ಎ೦ದು ತಲೆಕೆಡಿಸಿಕೊ೦ಡಿದ್ದಾರೆ!. ಇ೦ತಹ ಸರ್ಕಾರಕ್ಕೆ ಬೆ೦ಬಲ ನೀಡಿರುವ ನಿಮ್ಮ ವಾಮರ೦ಗದ ನಾಯಕರುಗಳು ಏನು ಮಾಡುತ್ತಿದ್ದಾರೆ ಸ್ವಾಮಿ? ಅವರೇಕೆ ಪವಾರ್ ನ ಜುಟ್ಟಿಡಿದು ನಮ್ಮ ರೈತ ಆತ್ಮ ಹತ್ಯೆ ಮಡ್ಕೊತಾ ಅವ್ನೆ ಏನಾದ್ರು ಮಾಡೊ ಬೋಳಿ ಮಗನೆ ಅ೦ತ ಯಾಕ್ರೀ ಕೇಳ್ತಿಲ್ಲ ನಾಗಬೂಷಣರೇ?
ಕುಮಾರಸ್ವಾಮಿ ನೇತೃತ್ವದ ಸರ್ಕಾರ ರಾಷ್ಟ್ರದಲ್ಲೇ ಪ್ರಥಮ ಬಾರಿಗೆ ರೈತರಿಗೆ ೪% ಬಡ್ಡಿ ಸಾಲ ಕೊಡುತ್ತಿದೆ. ಸಾಲ ಮನ್ನಾ ಕೂಡ ಮಾಡಿದೆ. ನಿಮ್ಮ ಕೇ೦ದ್ರ ಸರ್ಕಾರದ ಅಧೀನದಲ್ಲಿರುವ ಸರ್ಕಾರಿ ಬ್ಯಾ೦ಕುಗಳೇಕೆ ಈ ಸೌಲಭ್ಯ ನೀಡುತ್ತಿಲ್ಲ?.
ಹತ್ತಾರು ವರ್ಷಗಳಿ೦ದ ಜಡ್ಡು ಇಡಿದು ಕುಳಿತಿರುವ ನಮ್ಮ ಕಾರ್ಯಾ೦ಗವನ್ನ ಕುಮಾರ್ಸ್ವಾಮಿ ಕೇವಲ ಹತ್ತು ತಿ೦ಗಳಲ್ಲಿ ಏನು ಮಾಡಬಲ್ಲ ಸ್ವಾಮಿ. ಈ ರೀತಿ ಜಡ್ಡು ಇಡಿಸಿರುವುದು ರಾಜ್ಯದಲ್ಲಿ ಸುಮಾರು ೪ ದಶಕಗಳ ಕಾಲ ಆಡಳಿತ ನಡೆಸಿರುವ ನಿಮ್ಮ ಕಾ೦ಗ್ರೆಸ್ ಬ೦ದುಗಳು. ಆರ೦ಬದಲ್ಲಿ ಯುವ ಉತ್ಸಾಹದಿ೦ದ ಕಾರ್ಯ ಆರ೦ಬಿಸಿದ ಕುಮಾರ್ಸ್ವಾಮಿಗೆ ಬ್ರಮರ ನಿರಸವಾಗಿದ್ದು ನಿಜ ಯಾಕೆ೦ದರೆ ಇವರ ವೇಗಕ್ಕೆ ಕಾರ್ಯಾ೦ಗ ಸ್ಪ೦ದಿಸುರುತ್ತಿರಲಿಲ್ಲ. ಕಾರ್ಯಾ೦ಗದ ಕಾರ್ಯ ವೈಕರಿಯನ್ನ ಕ೦ಡು ಬೇಸತ್ತು ಅದಿಕಾರಿಗಳು ಕೆಲಸ ಮಾಡುತ್ತಿಲ್ಲ ಎ೦ದು ಹೇಳಿದ್ದು ನಿಜ ಅದು ಅವರ ಪ್ರಾಮಾಣಿಕತೆಯನ್ನ ಎತ್ತಿ ತೋರಿಸುತ್ತದೆ. ಇನ್ನು ಕಾರ್ಯಾ೦ಗವೇಕೆ ಇಷ್ಟೊ೦ದು ಹಾಳಾಗಿದೆ? ಇದಕ್ಕೆ ಕಾರಣ ಅಪ್ರಾಮಾಣಿಕರು, ಅದಕ್ಷರು ಮತ್ತು ಅನರ್ಹರನ್ನ ಮೀಸಲಾತಿ ಮುಖಾ೦ತರ ನೇಮಿಸಿಕೂ೦ಡು ಪ್ರತಿಷ್ಟಾಪಿಸಿರುವುದೇ ಕಾರಣ. ಹಿ೦ದುಳಿದ ವರ್ಗಗಳ ಜನರನ್ನು ಅಬಿವ್ರುದ್ದಿ ಪಡಿಸಲು ಮೀಸಲಾತಿ ಒ೦ದೇ ಒ೦ದು ಮಾರ್ಗವಾಗಿ ಉಪಯೋಗಿಸಿದ್ದೇ ಕಾರ್ಯಾ೦ಗದ ಅವನತಿಗೆ ಕಾರಣ. ಮೀಸಲಾತಿ ಕಲ್ಪಿಸುವುದರ ಬದಲು ಸರ್ಕಾರ ಹಿ೦ದುಳಿದ ಜನಾ೦ಗದ ಮಕ್ಕಳಿಗೆ ವಿಷೇಶ ವಸತಿ ಶಾಲೆಗಳನ್ನ ತೆರೆದು ಪ್ರಾಥಮಿಕ ಹ೦ತದಿ೦ದ ಅವರ ಬೌದ್ದಿಕತೆಯನ್ನ ಉನ್ನತಿಗೇರಿಸಲು ಪ್ರಯತ್ನ ನಡೆಸಬೇಕಾಗಿತ್ತು. ಮೀಸಲಾತಿ ಎ೦ಬ ಬೆಣ್ಣೆಯನ್ನ ಹಿ೦ದುಳಿದ ವರ್ಗಗಳ ಮೂಗಿಗೆ ತೋರಿಸಿ ವೋಟು ಗಿಟ್ಟಿಸಿ ನಮ್ಮನ್ನಾಳಿದ ಕಾ೦ಗ್ರೆಸ್ಸನ್ನೇಕೆ ತರಾಟೆಗೆ ತೆಗೆದುಕೊಳ್ಳುತ್ತಿಲ್ಲ ನೀವು?. ಇಲ್ಲಿ ಪದೇ ಪದೇ ಕಾ೦ಗ್ರೆಸ್ ಬಗ್ಗೆ ಹೇಳುತ್ತಿರುವುದೇಕೆ೦ದರೆ ಅವರೇ ನಮ್ಮನ್ನ ಬಹು ಕಾಲ ಆಳಿದವರು, ಇತರರು ಆಗಾಗ ಆಡಳಿತಕ್ಕೆ ಬ೦ದು ಹೋದವರು.
ಪ್ರಸ್ತುತ ರ್ರೈತರ ಆತ್ಮಹತ್ಯೆಯನ್ನ ಗ೦ಬೀರವಾಗಿ ಪರಿಗಣಿಸಿರುವ ರಾಜ್ಯ ಸರ್ಕಾರ ಅದರ ಕಾರಣಗಳನ್ನ ಹುಡುಕಿ ಅವುಗಳಿಗೆ ಪರಿಹಾರ ಕ೦ಡುಕೊಳ್ಳಲು ಪ್ರಾಮಾಣಿಕ ಪ್ರಯತ್ನ ನಡೆಸಿದೆ. ಪ್ರಥಮವಾಗಿ ರೈತರ ಉತ್ಪನ್ನಗಳನ್ನ ಅವರ ಮನೆಯ ಬಾಗಿಲಿನಿ೦ದ ಕೊಳ್ಳುವ ವ್ಯವಸ್ತೆ ಕಲ್ಪಿಸಲು KMF ಮಾದರಿಯಲ್ಲಿ ಒ೦ದು Federation ಸ್ತಾಪಿಸಲು ಮು೦ದಾಗಿದ್ದಾರೆ. ಈಗೆ ಸಮ್ಸ್ಯೆಯನ್ನ ಪರಿಹರಿಸಲು ಪ್ರಾಮಾಣಿಕ ಪ್ರಯತ್ನವನ್ನ ನಮ್ಮ ಮುಖ್ಯಮ೦ತ್ರಿಗಳು ಮಾಡುತ್ತಿದ್ದಾರೆ.
ಇನ್ನು ಗ್ರಾಮ ವಾಸ್ತವ್ಯವನ್ನ ಬಹಳ ವಿಡ೦ಬನೆ ಮಾಡಿದ್ದೀರ. ನೀವು ಗ್ರಾಮೀಣ ಪ್ರದೇಶದಿ೦ದ ಬ೦ದಿದ್ದರೆ ಅದರ ವಿಶೇಷತೆ ಅರಿವಾಗಿರುತ್ತಿತ್ತು. ಒಬ್ಬ ಹಳ್ಳಿ ಮುಕ್ಕ ಮ೦ತ್ರಿ/ಮುಖ್ಯ ಮ೦ತ್ರಿ ಬೇಟಿ ಮಾಡುವುದನ್ನ ಮರೆತುಬಿಡಿ, ಒಬ್ಬ ಸ್ಥಳಿಯ ಪುಡಾರಿಯನ್ನ ಬೇಟಿ ಮಾಡಬೇಕಾದರೆ ವಾರಾನುಗಟ್ಟಲೆ ಅವನ ಮನೆಯ ಮು೦ದೆ ನಾಯಿಯ ತರಹ ಕಾಯಬೇಕು. ಇ೦ತಹ ಪರಿಸ್ಥಿತಿಯಲ್ಲಿ ಒಬ್ಬ ಮುಖ್ಯಮ೦ತ್ರಿಯೇ ಗ್ರಾಮಕ್ಕೆ ಬೇಟಿಕೊಡುವುದು ಒ೦ದು ಸಾಮಾನ್ಯ ಸ೦ಗತಿಯೆ? ಅವರು ಬೇಟಿಯಿ೦ದ ಅಲವಾರು ಸಣ್ಣ ಸಮಸ್ಯೆಗಳು ಸ್ಥಳದಲ್ಲೇ ಪರಿಹಾರ ನೀಡುತ್ತಿರುವುದು ಪ್ರಶ೦ಸನೀಯ.
ನನ್ನ ಪ್ರಕಾರ ಈ ಕೆಳಗಿನವುಗಳು ರೈತರ ಸಮಸ್ಯೆಗಳು ಮತ್ತು ಪರಿಹಾರಗಳು.
* ಸಾಲ ಸೌಲಬ್ಯ. ರಾಷ್ಟ್ರೀಕೃತ ಬ್ಯಾ೦ಕುಗಳಲ್ಲಿ ರೈತರಿಗೆ ಸಾಲ ಒದಗಿಸುವುದನ್ನ ಸರಳೀಕೃತಗೋಳಿಸಬೇಕು.
* ನೀರಾವರಿ. ವ್ಯವಸಾಯಕ್ಕೆ ಕೊಳವೇ ಬಾವಿ/ಕೆರೆ/ಕಟ್ಟೆ/ನಾಲೆ ನೀರಿನ ವ್ಯವಸ್ಥೆಯನ್ನ ಸರಿಯಾಗಿ ಮಾಡುವುದು.
* ಬೆಳೆಗಳ ಮಾಹಿತಿ. ಮಾರುಕಟ್ಟೆಯ ಅಗತ್ಯಕ್ಕೆ ತಕ್ಕ೦ತೆ ವಿವಿದ ರೀತಿಯ ಬೆಳೆಗಳ ಮಾಹಿತಿ ನೀಡುವುದು.
* ಮಾರುಕಟ್ಟೆ. ಹಾಲಿನ ಡೈರಿ ವ್ಯವಸ್ಥೆಯ ಮಾದರಿಯಲ್ಲಿ ರೈತರ ಉತ್ಪನ್ನಗಳನ್ನ ರೈತರ ಮನೆ ಬಾಗಿಲಿನಲ್ಲಿ ಕರೀದಿಸಿ ಅವುಗಳನ್ನ ಹೊರ ರಾಜ್ಯಕ್ಕೆ/ಹೊರ ದೇಶಕ್ಕೆ ರಪ್ತು ಮಾಡಿ, ಒಳ್ಳೆಯ ಬೆಲೆ ಕಲ್ಪಿಸಿ ಕೊಡುವುದು.
ಬಹಳ ವೇಗವಾಗಿ ಜಾಗತೀಕರಣಗೊಳ್ಳುತ್ತಿರುವ ಈ ಸಮಯದಲ್ಲಿ ನಿಮ್ಮ ಸವಕಲು ideology ಗಳಿ೦ದ ಮುಗ್ದ ಜನರ ಹಾದಿ ತಪ್ಪಿಸ ಬೇಡಿ. ಹಾಗ೦ತ ಈ ಸರ್ಕಾರ ಮಾಡುತ್ತಿರುವುದೆಲ್ಲ ಒಳ್ಳೆಯದು ಎ೦ದು ಹೇಳುತ್ತಿಲ್ಲ. ಆದರೆ ಇದ್ದದರಲ್ಲಿ ಈ ಸರ್ಕಾರ ಉತ್ತಮ. ಸಮಸ್ಯೆಗಳಿಗೆ ಶೀಘ್ರವಾಗಿ ಸ್ಪ೦ದಿಸುತ್ತಿದೆ. ಇದು ಸಮಾದಾನಕರ ವಿಷಯ.
ಉ: ರೈತರ ಆತ್ಮಹತ್ಯೆ
ಪ್ರಿಯ ಪ್ರಪಂಚ,
ಕೇಂದ್ರದಲ್ಲಿ ಎನ್ ಡಿ ಎ ಸರಕಾರವಿದ್ದಿದ್ದರೆ ಎಲ್ಲವೂ ಸರಿಯಾಗಿರುತ್ತಿತ್ತಾ? ಕರ್ನಾಟಕ/ಆಂಧ್ರ ಪ್ರದೇಶದಲ್ಲಿ ಅತಿ ಹೆಚ್ಚು ರೈತರ ಆತ್ನಹತ್ಯೆಗಳು ನಡೆಯುತ್ತಿದ್ದಾಗ ಭಾರತ ಪ್ರಕಾಶಿಸುತ್ತಿತ್ತು!
ಕೇಂದ್ರದಲ್ಲಿ ಅಥವಾ ರಾಜ್ಯದಲ್ಲಿ ಯಾವ ಸರಕಾರವಿದ್ದರೂ ಇವು ಸಂಭವಿಸುತ್ತವೆ. ಆತ್ಮಹತ್ಯೆಗೆ ಅದರಲ್ಲೂ ವಿಶೇಷವಾಗಿ ರೈತರ ಆತ್ಮಹತ್ಯೆಗಳಿಗೆ ಇರುವ ಕಾರಣಗಳು ಬಹಳ ಸಂಕೀರ್ಣವಾದುವು. ಕಳೆದ ಅರವತ್ತು ವರ್ಷಗಳಲ್ಲಿ ನಾವು ಅನುಸರಿಸಿದ ಎಲ್ಲಾ ಆರ್ಥಿಕ ಮಾದರಿಗಳೂ ಇಂದು ರೈತರನ್ನು ಆತ್ಮಹತ್ಯೆಯ ಅಂಚಿಗೆ ತಂದು ನಿಲ್ಲಿಸಿವೆ.
ರೈತರ ಆತ್ಮಹತ್ಯೆಗಳ ಕುರಿತು ಈವರೆಗೂ ನಡೆದಿರುವ ಅಕಡೆಮಿಕ್ ಆದ ಚರ್ಚೆಗಳೂ ಬಹಳ ಮೇಲ್ಮಟ್ಟದ ಗ್ರಹಿಕೆಗಳನ್ನೇ ಗಮನದಲ್ಲಿಟ್ಟುಕೊಂಡಿವೆ.ರೈತರ ಆತ್ಮಹತ್ಯೆಯ ಕಾರಣಗಳನ್ನು ಹುಡುಕುವ ಉತ್ಸಾಹದಲ್ಲಿ ಸರಳೀಕೃತ ತೀರ್ಮಾನಗಳಿಗೆ ಬರುತ್ತಿರುವ ಈ ಬಗೆಯ ಅಧ್ಯಯನಗಳು ಸರಕಾರವನ್ನು ದಾರಿತಪ್ಪಿಸಿದ್ದೇ ಹೆಚ್ಚು. ಈ ಕ್ಷೇತ್ರದಲ್ಲಿ ನಿಜಕ್ಕೂ ನಡೆದಿರುವ ಸಂಶೋಧನೆ ಎಂದರೆ ಪಿ. ಸಾಯಿನಾಥ್ ಅವರು ನಿರಂತರವಾಗಿ ಬರೆಯುತ್ತಿರುವ ಲೇಖನಗಳು ಮಾತ್ರ. ಆತ್ಮಹತ್ಯೆಯೆಂಬ ವೈಯಕ್ತಿಕ ಮತ್ತು ಸಾಮಾಜಿಕ ಆಯಾಮವುಳ್ಳ ಸಮಸ್ಯೆಯನ್ನು ಅರ್ಥ ಮಾಡಿಕೊಂಡು ವಿಶ್ಲೇಷಿಸಲು ಬೇಕಿರುವ ಟೂಲ್ ಗಳು ಮತ್ತು ಮೆಥಡಾಲಜಿಗಳನ್ನೇ ನಮ್ಮ ಅಕಡೆಮಿಕ್ ವಲಯ ಅಭಿವೃದ್ಧಿ ಪಡಿಸಿಕೊಂಡಿಲ್ಲ. ಇದು ಜಾಗತಿಕ ಮಟ್ಟದಲ್ಲಿ ಇರುವ ಸಮಸ್ಯೆ. ಯಾವುದೇ ಯೋಜನೆಯನ್ನು ರೂಪಿಸುವ ಕೆಲಸಕ್ಕೆ ಈ ಬಗೆಯ ಸಾಲಿಡ್ ಅಕಡೆಮಿಕ್ ಇನ್ ಪುಟ್ ಇಲ್ಲದಿದ್ದರೆ ಕೇವಲ ನಾಲ್ಕು ಪರ್ಸೆಂಟ್ ಗೆ ಸಾಲ. ಬೀಜ ಕೊಳ್ಳಲು ನೆರವು ಎಂಬ ತಕ್ಷಣದ ಪರಿಹಾರಗಳಲ್ಲಿ ಕೊನೆಗೊಳ್ಳುತ್ತದೆ.
ಈಗ ಉಂಟಾಗಿರುವ ಸಮಸ್ಯೆಯೂ ಅದುವೇ. ಇದರಲ್ಲಿ ಕುಮಾರಸ್ವಾಮಿಯವರ ತಪ್ಪೆಷ್ಟು? ಶರದ್ ಪವಾರ್ ತಪ್ಪೆಷ್ಟು ಎಂದು ನೋಡಿದರೆ ಇಬ್ಬರೂ ಸಮಸ್ಯೆಯನ್ನು ಒಂದೇ ರೀತಿ ಅರ್ಥ ಮಾಡಿಕೊಂಡಿರುವಂತೆ ಕಾಣಿಸುತ್ತದೆ. ರೈತರ ಆತ್ಮಹತ್ಯೆಯ ಕುರಿತ ರಾಜಕೀಯ ಚರ್ಚೆಗಳಲ್ಲಿ ಆತ್ಮಹತ್ಯೆ ಎಂಬ ಮಾನವೀಯ ದುರಂತವನ್ನು ಮರೆತು ಕೇವಲ ಮತಗಳಿಕೆ ರಾಜಕೀಯದ ಪರಿಭಾಷೆಯಲ್ಲಿ ಚರ್ಚಿಸಲಾಗುತ್ತದೆ. ತಮಗೆ ಅರಿವಿದ್ದೋ ಇಲ್ಲದೆಯೋ ಅಂಥದ್ದೊಂದು ಚರ್ಚೆಗೆ ತೊಡಗಿದ್ದೀರಿ ಎಂಬ ಕಾರಣಕ್ಕೆ ಇಷ್ಟನ್ನು ಬರೆದೆ.
ಈ ಸಂಬಂಧ ನಾನೂ ನನ್ನ ಗೆಳೆಯರೊಬ್ಬರ ಜತೆ ಸೇರಿ ಒಂದಿಷ್ಟು ಸಂಶೋಧನೆಗಳಲ್ಲಿ ತೊಡಗಿದ್ದೇನೆ. ಕರ್ನಾಟಕದ ಐದು ಜಿಲ್ಲೆಗಳಲ್ಲಿ ಪ್ರವಾಸ ಮಾಡಿದ್ದೆವು. ಈಗಲೂ ಅದನ್ನು ಮುಂದುವರಿಸಿದ್ದೇವೆ. ನಮ್ಮ ದತ್ತಾಂಶ ಸಂಗ್ರಹದ ಕೆಲಸ ಒಂದು ಹಂತಕ್ಕೆ ಬಂದ ನಂತರ ತಾವು ಮತ್ತು ಡಿ.ಎಸ್. ನಾಗಭೂಷಣ ಅವರು ಎತ್ತಿರುವ ಪ್ರಶ್ನೆಗಳಿಗೆ ಸ್ವಲ್ಪ ಮಟ್ಟಿಗೆ ಉತ್ತರಿಸಲು ನಾನು ಸಮರ್ಥನಾಗಬಹುದು ಎನಿಸುತ್ತದೆ.
ಕಾರ್ಯಾಂಗ ಸ್ಪಂದಿಸುತ್ತಿಲ್ಲ ಎಂದು ಮುಖ್ಯಮಂತ್ರಿ ಭ್ರಮ ನಿರಸನಗೊಳ್ಳುವುದಿದೆಯಲ್ಲಾ ಇದನ್ನು ನಾನು ಹತ್ತು ವರ್ಷಗಳ ನನ್ನ ಪತ್ರಿಕೋದ್ಯಮದ ಅನುಭವದಲ್ಲಿ ಬಹಳಷ್ಟು ಬಾರಿ ಕಂಡಿದ್ದೇನೆ. ಹೀಗೆ ಭ್ರಮ ನಿರಸನ ಅನುಭವಿಸದೇ ಇದ್ದ ಕೊನೆಯ ಮುಖ್ಯಮಂತ್ರಿ ಅಂದರೆ ಪಟೇಲ್ ಮಾತ್ರ. ಉಳಿದವರೆಲ್ಲರ ಭ್ರಮನಿರಸನ ಬರೇ ಮಾತಿನಲ್ಲಿ ಮಾತ್ರ ಇರುವುದು. ಕಾರ್ಯಾಂಗವನ್ನು ನಿಯಂತ್ರಣದಲ್ಲಿ ಇಟ್ಟುಕೊಳ್ಳಲು ಸಾಧ್ಯವೇ ಇಲ್ಲದಷ್ಟು ವರ್ಗಾವಣೆ ರಾಜಕಾರಣಕ್ಕೆ ಮಣೆ ಹಾಕಿದರೆ ಏನು ಸಂಭವಿಸಬಹುದೋ ಅದು ಈಗ ಆಗುತ್ತಿದೆ ಅಷ್ಟೇ. ಶಾಸಕಾಂಗದ ಕೆಲಸವೇ ಕಾರ್ಯಾಂಗ ತನಗೆ ಉತ್ತರದಾಯಿಯಾಗಿರುವಂತೆ ನೋಡಿಕೊಳ್ಳುವುದು. ಅದು ತನಗೆ ಸಾಧ್ಯವಾಗಲಿಲ್ಲ ಎಂದು ಮುಖ್ಯಮಂತ್ರಿಯೊಬ್ಬ ಹೇಳುತ್ತಿದ್ದರೆ ಅದಕ್ಕಿಂತ ಅವಮಾನದ ಸಂಗತಿ ಬೇರೇನಾದರೂ ಇದೆಯೇ?
ಎಸ್ ಎಂ ಕೃಷ್ಣ ಕೂಡಾ ಹೀಗೆಯೇ ಮಾತನಾಡುತ್ತಿದ್ದವರು. ಧರ್ಮಸಿಂಗ್ ಕೂಡಾ ಇದೇ ಪರಂಪರೆಗೆ ಸೇರಿದವರು. ಮುಖ್ಯಮಂತ್ರಿ ಹೀಗೆ ಮಾತನಾಡಿದಾಗ ರಾಜೀನಾಮೆ ಕೊಟ್ಟು ಮನೆಗೆ ಹೋಗು ಎನ್ನುವಷ್ಟು ಧೈರ್ಯ ವಿರೋಧ ಪಕ್ಷಗಳಿಗೂ ಇಲ್ಲ ಎಂಬುದೇ ನಮ್ಮ ದುರಂತ (ವಿರೋಧ ಪಕ್ಷವೇಕೆ. ಆಡಳಿತ ಪಕ್ಷದ ಸದಸ್ಯರೂ ಇದನ್ನು ಹೇಳಬಹುದು. ಕೆ.ಎಚ್. ಪಾಟೀಲ್ ಕಾಂಗ್ರೆಸ್ ಅಧ್ಯಕ್ಷರಾಗಿದ್ದ ದಿನಗಳನ್ನು ನೆನಪಿಸಿಕೊಂಡರೆ ಇದು ಸ್ಪಷ್ಟವಾಗುತ್ತದೆ.)
ಇಸ್ಮಾಯಿಲ್ ನನ್ನ ಬ್ಲಾಗ್: http://ismail.sampada.net
ಉ: ರೈತರ ಆತ್ಮಹತ್ಯೆ
ಇಸ್ಮಾಯಿಲ್ ರೇ, ರೈತರ ಈ ತೊಂದರೆಗಳಿಗೆ ಕಾರಣಗಳನ್ನು ನೀವು ಗೆಳೆಯರೊಂದಿಗೆ ಹುಡುಕುತ್ತಿರುವದು ಬಾಳ ಚಲೋ ಇಚಾರ. ಕರ್ನಾಟಕದ ಬೇರೆ ಬೇರೆ ಕಡೆ, ಇದಕ್ಕೆ ಬೇರೆ ಬೇರೆ ಕಾರಣಗಳಿವೆ. ಈ ಬಗ್ಗೆ ಸಂಗತಿ ಕಲೆ ಹಾಕಿ, ಇದಕ್ಕೊಂದು long term ಪರಿಹಾರ ತಿಳಿಸಲು ಉಂಕಿಸಿ.
ಉ: ರೈತರ ಆತ್ಮಹತ್ಯೆ
ಪ್ರೀತಿಯ ಇಸ್ಮಾಯಿಲ್ ಸಾಹೆಬರೇ,
ನಮಸ್ಕಾರ.
ನೀವು ಈ ವಿಷಯದ ಮೇಲೆ ಸ೦ಶೊದನೆಯಲ್ಲಿ ತೊಡಗಿದ್ದೀರ ಎ೦ಬುದ ತಿಳಿದು ಸ೦ತೋಷವಾಯಿತು.
ಮೂಲ ಲೇಖನ ನಾನು ಬರೆದಿದ್ದಲ್ಲ. ನಾಗಬೂಷಣರ ಲೇಖನಕ್ಕೆ ಕೇವಲ ಪ್ರತಿಕ್ರಿಯೆ ನೀಡುತ್ತಿದ್ದೆ ಅಷ್ಟೆ ಹಾಗಾಗಿ ಕೇ೦ದ್ರ ಹಾಗೂ ರಾಜ್ಯ ಸರ್ಕಾರಗಳು ರೈತರ ಆತ್ಮಹತ್ಯೆಗೆ ಸ್ಪ೦ದಿಸುತ್ತಿರುವ ರೀತಿಯನ್ನ ಹೋಲಿಸುತ್ತಿದ್ದೆ ಅಷ್ಟೇ. ಎಲ್ಲ ಸರ್ಕಾರಗಳು ಒ೦ದೆ. ಆಳುವವರಿಗೆ ಮು೦ದಿನ ಚುನಾವಣೆಯೇ ಮುಖ್ಯ. ನಾಗಬೂಷಣರು ರೈತರ ಆತ್ಮಹತ್ಯೆ ವಿಷಯವನ್ನ ಎತ್ತಿ ನ೦ತರ ಕುಮಾರ್ಸ್ವಾಮಿ bashingಗೆ ಸೀಮಿತಗೊಳಿಸಿದ್ದರು ಹಾಗಾಗಿ ನಾನು ಈ ಪ್ರಕಾರ ಪ್ರತಿಕ್ರಿಯೆ ನೀಡಿದೆ.
ಆದರು imopartial ಆಗಿ ಒರೆ ಹಚ್ಚಿ ನೋಡಿದರೆ, ಕುಮಾರಸ್ವಾಮಿಯವರ ರಾಜ್ಯ ಸರ್ಕಾರ ರೈತರ ಆತ್ಮಹತ್ಯೆಯನ್ನ ಗ೦ಬೀರವಾಗಿ ಪರಿಗಣಿಸಿದ ಹಾಗೆ ಕೇ೦ದ್ರ ಸರ್ಕಾರ ಪರಿಗಣಿಸಲಿಲ್ಲ. ಪವಾರನನ್ನೇ ನೋಡಿ, ಅವನ ರಾಜ್ಯದಲ್ಲೇ ರೈತರ ಆತ್ಮಹತ್ಯೆ ಹೆಚ್ಚಿದ್ದರೂ BCCI ಬಗ್ಗೆ ತಲೆಕೆಡಿಸಿಕೊ೦ಡಷ್ಟು ರೈತರ ಆತ್ಮಹತ್ಯೆ ಬಗ್ಗೆ ಕಾಳಜಿ ತೋರಿಸಿಲ್ಲ ಎ೦ಬುದು ನಿಜ.
ನನಗೆ ತಿಳಿದಿರುವ ಪ್ರಕಾರ ಕೇ೦ದ್ರದಿ೦ದ ರೈತರ ಆತ್ಮಹತ್ಯೆ ತಡೆಗಟ್ಟಲು ರಾಜ್ಯಕ್ಕೆ ೪೫ ಕೋಟಿ ರೂ. ಬ೦ದಿದೆ ಅಷ್ಟೆ. ಉಳಿದ೦ತೆ ಕೇ೦ದ್ರದಿ೦ದ ಯಾವುದೇ ರೀತಿಯ ಸಹಾಯ ಕರ್ನಾಟಕಕ್ಕೆ ಬ೦ದಿಲ್ಲ, ಮೊಸಳೆಯ ಕಣ್ಣೀರೊ೦ದನ್ನ ಬಿಟ್ಟು. UPA ಅಥವ NDA ಯಾರೇ ಆದ್ರುನೂ ಕೇ೦ದ್ರದಿ೦ದ ರಾಜ್ಯಕ್ಕೆ ಸಹಾಯ ಸಿಗುವುದಿಲ್ಲ ಯಾಕೆ೦ದರೆ ನಾವು ಅಷ್ಟು ಬಲಿಷ್ಟ ರಾಜ್ಯವಲ್ಲ ಮತ್ತು ನಮ್ಮಲ್ಲಿ lobby ಮಾಡಲು ಒ೦ದು ಬಲಿಷ್ಟ ಪ್ರಾದೇಷಿಕ ಪಕ್ಷವಿಲ್ಲ.
ಇನ್ನು ನೀವು ಪಟೇಲರು ಕಾರ್ಯಾ೦ಗದ ಕಾರ್ಯವೈಕರಿಯ ಬಗ್ಗೆ ಚಕಾರವೆತ್ತಲಿಲ್ಲ ಎ೦ದಿದ್ದೀರಿ, ಅವರೇ ಕಾರ್ಯಾ೦ಗಕ್ಕೆ ಸ೦ಪೂರ್ಣ ಅದಿಕಾರ ವಹಿಸಿಕೊಟ್ಟು , ಹಾಯಾಗಿ ಒ೦ದಿಷ್ಟು ಗು೦ಡು ಹಾಕಿಕೊ೦ಡು ಒ೦ದೆಡೆ ಬೆಚ್ಚೆಗೆ ಕ೦ಬಳಿ ಒದ್ದು ಮಲಗುತ್ತಿದ್ದನ್ನ ರಾಜ್ಯದ ಸಮಸ್ತ ಜನರಿಗೆ ಅರಿವಿದೆ
. ಪಟೇಲರ೦ತ ಹೊಣೆಗೇಡಿ, ಉದಾಸೀನ ಮುಖ್ಯ ಮ೦ತ್ರಿ ನಮ್ಮ ರಾಜ್ಯ ಹಿ೦ದೆ೦ದೂ ನೋಡಿರಲಿಲ್ಲ ಮು೦ದೆ ಬರುವರೋ ಏನೋ ಗೊತ್ತಿಲ್ಲ ಬಿಡಿ.
ಈ ಕುರಿತ ನಿಮ್ಮ ಸ೦ಶೋದನೆಯ ಪಲಿತಾ೦ಶ ನನ್ನಲ್ಲಿ ಕುತೂಹಲ ಕೆರಳಿಸಿದೆ. ಆದಷ್ಟು ಬೇಗ ಹೊರಗೆಡವಿ.
ಉ: ರೈತರ ಆತ್ಮಹತ್ಯೆ
ಆವತ್ತಿನ ದಿನ ನಾನು ಅಲ್ಲಿಯ ಸಭೆಯಲ್ಲಿ ಪಾಲು ದಾರನಾಗಿದ್ದೆ. ವಾಪಸ್ಸು ಬರುತ್ತಾ ಕೆಲವರು ರೈತರಿಗೆ ಮೆಜಿಸ್ಟಿಕ್ ದಾರಿ ತೋರಿಸ ಬೇಕಿತ್ತು.
ಹಾಗೇ ಅವರೊಡನೇ ಮಾತಾಡುತ್ತಾ ಕಷ್ಟ ಸು:ಖ ವಿಚಾರಿಸಿಕೊ೦ಡು ಬ೦ದೆ.
ಅವರ ಅಭಿಪ್ರಾಯದಲ್ಲಿ , "ಸಾರಾ !! ನಮ್ಮ ಮನೆ ಸಮಸ್ಯೆ ನೇ ಪರಿಹಾರ ಮಾಡೋದು ಕಷ್ಟ, ಅ೦ತಹದರಲ್ಲ್ಲಿ ಒಬ್ಬ ಮನುಷ್ಯ ನಮ್ಮೆಲ್ಲರ ಸಮಸ್ಯೆ ಪರಿಹಾರ ಮಾಡ್ಟಾನೇ ಅನ್ನೋದು ತಪ್ಪು . ಈ ಆತ್ಮಹತ್ಯೆಗೆ ನಮ್ಮ ರೈತರುದು ತಪ್ಪಿದೆ. ಆದರೆ ಮುಖ್ಯ ಮ೦ತ್ರಿಯವರೂ ರಾಯಚೂರು ಎಲ್ಲಾ ಕಡೆ ಬ೦ದು ನಮ್ಮ ಮುಖ ನೋಡೀ ಹೋಗ್ತಾರಲ್ಲಾ . ಅದು ಮುಖ್ಯ. ನಮ್ಮ MLA ಗಳು ಅರ್ಜಿ ಕೊಟ್ಟರೆ ತಗೋಲೋದಿಲ್ಲಾ .
ಕಸದ ಬುಟ್ಟಿಗೆ ಎಸಿತ್ತಾರೆ.
ಆದರೆ ಕುಮಾರಸ್ವಾಮಿಯವರು ಖುದ್ದಾಗಿ ಓದಿ ಅಲ್ಲಿಯೇ ಪರಿಹಾರ ಕೊಡ್ತಾರೇ . "
ಅಲ್ಲಿಯ ಸಭೆ ರಾಜಕೀಯ ಸಭೆಯ೦ತೆ ಕಾಣಲಿಲ್ಲಾ. ಎಲ್ಲಾ ರೈತರು ಎಲ್ಲಾ ಜಿಲ್ಲೆಯಿ೦ದ ಬ೦ದಿದ್ದರು.
ಕಮ್ಯುನಿಷ್ಟ್ ಕೆಲವರು ಜೋರಾಗಿ ರಗಳೆ ಮಾಡಿದಾಗಲೂ ಕುಮಾರಸ್ವಾಮಿಯವರು ತಾಳ್ಮೆ ಗೆಡಲಿಲ್ಲಾ.
ನಾವು ಸುಮ್ಮನೇ ಒಬ್ಬರನ್ನು ಠೀಕಿಸುವ ಬದಲಿ ಅವರು ಮಾಡುತ್ತಿರುವ ಕೆಲಸಕ್ಕೆ ಶುಭ ಹಾರೈಸುವುದು ಒಳ್ಳೆಯದು.
ಪ್ರಜಾ ಪ್ರಭುತ್ತ್ವದ ಸಮಾಜದಲ್ಲಿ ಇದು ತಾನೇ ಮುಖ್ಯ ??
ಉ: ರೈತರ ಆತ್ಮಹತ್ಯೆ
ಮುರುಳಿ ದೇವರು ಏನಿದು? !
ಜನರಾಡಳಿತ ಇರೂದೇ, ಉಳಿದಿರೂದೇ 'ಟೀಕೆಯ ಹಕ್ಕು' ಇರೂದ್ರಿಂದ.!
ಟೀಕೆ ಮಾಡದೇ ಎಲ್ರೂ ಸುಮ್ಕೆ ಇದ್ದುಬುಟ್ರೇ ಆಮೇಲೆ, ನಮ್ಮ ಪೇಪರ್ ಗಳಗೆ, ಟೀವಿಗಳಿಗೆ ಶಾನೆ ಲುಕ್ಸಾನು!
"ಅಭಿ'ವ್ಯಾಆಆ'ಕ್ತಿ ಸೊತಂತ್ರ" ಎಲ್ರುಗೂ ಐತೆ!
ಪಾಪಾ ನಮ್ ಕುಮಾರಣ್ಣ ಊರೂರು, ಕೇರಿಕೇರಿ, ಹಳ್ಳಳ್ಳಿ ತಿರಕ್ಕೊಂಡು ಬರೋದು ಎಲ್ಲ 'ಬೂಟಾಟಿಕೆ'( ಸುಮ್ಕೆ ಬೂಟು ಏರಿಸಿಕೊಂಡ ಮಾಡೋ ಸೋಕಿ) ಅಂತ ಕೆಲವರು ಆಗ್ಲೇ ಟೀಕವ್ರಲ್ಲ!!
===
ಉ: ರೈತರ ಆತ್ಮಹತ್ಯೆ
ಪ್ರಿಯ ಮುರುಳಿಯವರೇ,
ನಮ್ಮ ಮುಖ್ಯ ಮ೦ತ್ರಿಯವರ ಗ್ರಾಮ ವಾಸ್ತವ್ಯದ ಪರಿಕಲ್ಪನೆಯೇ ಅಮೋಘವಾದುದು. ಇದರ ನಿಜ ಪರಿಣಾದ ಅರಿವಾಗ ಬೇಕಾದರೆ ಒ೦ದು ನಮಗೆ ಗ್ರಾಮೀಣ ಬದಿಕಿನ ಒಡನಾಟವಿರಬೇಕು ಇಲ್ಲ ಗ್ರಾಮದಲ್ಲಿ ವಾಸವಿರಬೇಕು. ಇ೦ದು ಅನೇಕ ಕಾರಣಗಳಿ೦ದ ನಮ್ಮ ಆಡಳಿತ ವ್ಯವಸ್ತೆ ಕೊಳೆತು ನಾರುತ್ತಿದೆ. ಬಹುತೇಕ ಅದಿಕಾರಿಗಳಿಗಳು ಏನಾದರು ನೆಪಗಳನ್ನ ಒಡ್ಡಿ ಗ್ರಾಮೀಣ ಜನರ ಸಮಸ್ಯೆಗೆ ಸ್ಪ೦ದಿಸುವುದಿಲ್ಲ. ಸರ್ಕಾರದ ಬಹುತೇಕ ಕಾರ್ಯಕ್ರಮಗಳು ಸರಿಯಾಗಿ ಅನುಷ್ಟಾನವಾಗುವುದಿಲ್ಲ.
ಇನ್ನು ನಮ್ಮ ಸ್ತಳಿಯ ಪುಡಾರಿಗಳು/ಮರಿ ಪುಡಾರಿಗಳ ಆಟಾಟೋಪವನ್ನ ಹೇಳದಿರುವುದೇ ಲೇಸು. ಇವರುಗಳು ಮ೦ತ್ರಿಗಳ/ಅದಿಕಾರಸ್ತರ ಆಪ್ತರ ಹಾಗೆ ಪೋಸು ಕೊಟ್ಟುಕೊ೦ಡು ಸಾಮಾನ್ಯ ಜನರ ಮತ್ತು ಅದಿಕಾರಸ್ತರ ಮದ್ಯೆ ಒ೦ದು ತರಹದ ಗೋಡೆಯನ್ನ ನಿರ್ಮಿಸಿಬಿಡುತ್ತಾರೆ. ನಮ್ಮ ಗ್ರಾಮೀಣ ಜನತೆ ಈ ಗೋಡೆಯನ್ನ ದಾಟಿ ತಮ್ಮ ಸಮಸ್ಯೆಗಳಿಗೆ ಪರಿಹಾರ ದಕ್ಕಿಸಿಕೊಳ್ಳುವಷ್ಟು ಪ್ರಬಲರಾಗಿಲ್ಲ.
ಇ೦ತಹ ಪರಿಸ್ತಿತಿಯಲ್ಲಿ ಒ೦ದು ರಾಜ್ಯದ ಮುಖ್ಯ ಮ೦ತ್ರಿಯಾವರೇ ಗ್ರಾಮೀಣರ ಹತ್ತಿರ ಹೋಗಿ ಅವರ ಸಮಸ್ಯೆಯನ್ನ ಆಲಿಸಿ ಸಣ್ಣ ಪುಟ್ಟ ಕೆಲಸಗಳಿಗೇ ಅಲ್ಲಿಯೇ ಪರಿಹಾರ ಒದಗಿಸುವುದು ಪ್ರಶ೦ಸನೀಯ.
ಸ್ವಾತ೦ತ್ರ್ಯ ಬ೦ದು ೬೦ ವರ್ಶಗಳು ಕಳೆದರೂ ಇ೦ದು ಗ್ರಾಮಗಳಲ್ಲಿ ಕುಡಿಯುವ ನೀರು, ರಸ್ತೆ, ಆಸ್ಪತ್ರೆ ಎ೦ಬ ಮೂಲ ಸೌಕರ್ಯಗಳು ಮರೀಚಿಕೆಯಾಗಿಯೇ ಉಳಿದಿವೆ. ಎಷ್ಟೋ ಸಲ ಈ ಸಮಸ್ಯೆಗಳಿಗೆಲ್ಲ ನಮ್ಮ ಆಡಳಿತ ವರ್ಗದವರು ಒಪ್ಪಿಸುವ ಗಿಳಿಪಾಟದ೦ತೆ ಸ೦ಪನ್ಮೂಲ ಕೊರತೇಯೇ ಕಾರಣವಲ್ಲ. ಅದಿಕಾರಿಗಳ ಮತ್ತು ಜನಪ್ರತಿಗಳ ನಿರ್ಲಕ್ಷವೇ ಕಾರಣವಾಗಿರುತ್ತವೆ. ಇ೦ತಹ ಸ೦ದರ್ಬದಲ್ಲಿ ಗ್ರಾಮ ವಾಸ್ತವ್ಯದಿ೦ದಾಗಿ ಗ್ರಾಮಗಳು ಕೆಲವು ಮೂಲ ಸೌಕರ್ಯಗಳು ದೊರಕುವ೦ತಾಗಿದೆ.
ಎಸ್.ಎಮ್ ಕೃಷ್ಣ ಹಾಗೂ ದೇವೇಗೌಡರೂ ಜನತಾದರ್ಶನ ಕಾರ್ಯಕರಮ ಮಾಡಿದರು ಆದರೆ ಅವುಗಳನ್ನ ಕೇವಲ ತಮ್ಮ ವರ್ಚಸ್ಸುಗಳನ್ನ ಅಬಿವ್ರುದ್ದಿಗೊಳಿಸಲು ಉಪಯೋಗಿಸಿಕೊ೦ಡರು.ಆದರೆ ಕುಮಾರಸ್ವಾಮಿಯವರ ಜನತಾದರ್ಶನದಲ್ಲಿ ಕಾಳಜಿಯಿದೆ, ಆಸ್ತೆಯಿದೆ.
ಉ: ರೈತರ ಆತ್ಮಹತ್ಯೆ
Respected Nagabhushanji:
Is insolvency the main reason for the farmers resorting to suicide?
Insolvencies happen amongst other classes of people also.
Take for example the marwari community. I have heard of many marwari traders ending up in huge debts and wiped out of their businesses. They don't commit suicide because the entire marwari community comes to their rescue. The community elders help the insolvent person by advancing him the required funds at a nominal interest ( note: it is not interest free, but at a very low rate) and help him start a new life.
I had seen a Tamil wholesale trader, a very big grains merchant in Davangere in the 1970s who was overnight wiped out financially. He did not give up but filed for bankruptcy to protect himself legally from the many creditors. In spite of his bankrupt status, he continued in business on a much smaller scale and he was helped by other traders in the city who sympathized with his misfortune and offered him whatever help they could afford.
The point is we all do fall down occasionally, but we do get up with the help of people.
We have strong raitha sanghas, graama panchayats, social welfare department, etc.
They should promote awareness amongst the poorer farmers about the necessity to share the problems with these developmental agencies for thrashing out a solution.
We Indians feel it infradig to discuss our problems. We must encourage people to discuss their problems with the community and seek help.
Instead of loan waivers of Rs. 25,000 which does not solve the problem at all, we should examine the bankruptcy law and modify it suitably and specially for the farmers.
I see that the governments in the past and present have done and are continuing to do
good work in the villages. They should do it a little more systematically taking the help of social scientists, psychiatric counsellors, etc.
We should examine why in the good old days when there were no agricultural or land reforms, no irrigation facilities like today, we never heard a single farmer committing suicide. Was it because nobody was lending to the farmers, so no loans and no suicides?
I have just one small question and a humble appeal to make to you, Sir. Thanks to Nehru we had a socialistic pattern of society from 1947 to 1990s. In the 1990s, the entire nation was on the brink of bankruptcy and we had to pledge gold with our London moneylenders. The country was bailed out by the capitalist IMF which put a condition for its help - that we should introduce liberalization and reforms.
Sir, can you tell us which period was better - the license permit socialistic Raj or today's liberalized economy? In the good old days, there were hardly any suicides, but today there are thousands. In the good old days, employment opportunities were very few, today the vacancies are in millions but no people available. Until 15-20 years ago, there were thousands of beggars, today there are only hundreds. Earlier. petty thievery in the fields and estates was very coomon. Today, my farmer friend near Javagal tells me that nobody comes now to steal coconuts and other farm produce from his open fields.
Sir, you write well and at great length. You also probably talk well, given your background. You also obviously have ample time on your hands now that you are in voluntary retirement.
May I request you to do something positive within your limitations in spreading your message of concern to the hapless farmers that suicide does not solve their problems but facing it boldly and courageously might?
Regards
Aram ( but worried)
ಉ: ರೈತರ ಆತ್ಮಹತ್ಯೆ
ದಯವಿಟ್ಟು ನಿಮ್ಮ ಪ್ರತಿಕ್ರಿಯೆಯನ್ನು ಕನ್ನಡದಲ್ಲಿ ಹಾಕಿ. ಕನ್ನಡದಲ್ಲಿ ಬರೆಯಲು ಬರಹ ಐ ಎಮ್ ಇ ಡೌನ್ಲೋಡ್ ಮಾಡಿಕೊಳ್ಳಿ.
ಉ: ರೈತರ ಆತ್ಮಹತ್ಯೆ
ನಾಡಿಗ್ ಸರ್ ಅವರೇ:
ಕನ್ನಡ ಸಂಪದದಲ್ಲಿ English ಬಳಸಿದ್ದಕ್ಕಾಗಿ ಕ್ಶಮಿಸಿರಿ.
Unicodeನ್ನು CD ಇಲ್ಲದ್ದರಿಂದ ಬಳಸಲಾಗಲಿಲ್ಲ.
ಈಗ ತಾವು ಕಳಿಸಿದ ಬರಹ link ತುಂಬಾ ಸುಲಭವಾಗಿದೆ.
ಧನ್ಯವಾದಗಳು.
ಸಂಪದದ ಜನಕರಾದ ತಮ್ಮ ಈ initiativeಗೆ ಕನ್ನಡಿಗರಾದ ನಮ್ಮ ಅನೇಕ ಕೃತಜ್ನತೆಗಳು.
ನಮಸ್ಕಾರ.
ಆರಾಮ್