ಈ ಸಲದ ದಾದಾ ಸಾಹೇಬ ಫಾಲ್ಕೆ ಪ್ರಶಸ್ತಿಯನ್ನು ಹಿಂದಿ ಚಿತ್ರರಂಗದ ಖ್ಯಾತ ಖಳನಟ ಪ್ರಾಣ್ ಗೆ ಕೊಡಲಾಯಿತು. ಈ ಕುರಿತು ಆ ಕ್ಷಣಕ್ಕೆ ನನಗೆ ಬಂದ ಯೋಚನೆಯೆಂದರೆ ಇದೊಂದು ಚಿತ್ರರಂಗದ ಖಳ ನಟರ ಪರಂಪರೆಗೆ ಸಂದ ಗೌರವ ಎಂದೆನಿಸಿದ್ದು. ಹಾಗೆಯೆ ಯೋಚಿಸುತ್ತ ಹೋದಂತೆ ಆತನ ಸಮಕಾಲೀನ ಮತ್ತು ಆತನಿಗಿಂತ ಹಿಂದಿನ ಹಿಂದಿ ಚಲನಚಿತ್ರ ಲೋಕದ ಖಳನಟರ ಚಿತ್ರಗಳು ಕಣ್ಮುಂದೆ ಸುಳಿದು ಹೋದವು. ಕೆ.ಎನ್.ಸಿಂಗ್, ಮೋತಿಲಾಲ್, ಜೀವನ್ ( ಹಿಂದಿ ಚಿತ್ರರಂಗದ ನಾಯಕ ನಟ ಕಿರಣ ಕುಮಾರನ ತಂದೆ ) , ಜಯಂತ್ ( ಶೋಲೆ ಖ್ಯಾತಿಯ ಖಳನಟ ಅಮ್ಜದ್ ಖಾನ್ ನ ತಂದೆ ), ಮದನ್ ಪುರಿ ( ಖ್ಯಾತ ಖಳನಟ ಅಮರೀಶ ಪುರಿಯ ಸೋದರ ) ಅಜಿತ್, ಶ್ಯಾಮ್ ಮತ್ತು ರೆಹಮಾನ್ ಎಷ್ಟೊಂದು ವೈವಿಧ್ಯಪೂರ್ಣ ತಮ್ಮದೆ ಆದ ಒಂದು ವಿಶೇಷ ಮ್ಯಾನರಿಜಂನ ಅಭಿನಯ ವಿಶಿಷ್ಟತೆ ಹೊಂದಿದ ಅನೇಕ ಖಳ ನಟರ ಅಭಿನಯದ ವೈಖರಿಯ ಚಿತ್ರಗಳು ಬಿಚ್ಚಿ ಕೊಳ್ಳುತ್ತ ಹೋದವು.
ಪ್ರಾಣ್ ಎಂಬ ಈ ಹೆಸರು ಮತ್ತು ವ್ಯಕ್ತಿ ನೇಪಥ್ಯಕ್ಕೆ ಸರಿದು ಬಹಳ ಕಾಲವಾಯಿತು. ಕಳೆದ ಶತಮಾನದ ಐದು, ಆರು ಮತ್ತು ಏಳನೆ ದಶಕದ ಒಬ್ಬ ಖ್ಯಾತ ಖಳನಟನೀತ. ಆ ಜಮಾನಾದಲ್ಲಿ ನಾಯಕ ನಾಯಕಿ ಮತ್ತು ಹಾಸ್ಯ ನಟರಿಗಿರುವಷ್ಟೆ ಪ್ರಾಮುಖ್ಯತೆ ಖಳ ನಟರಿಗಿತ್ತು. ಈ ಎಲ್ಲ ಸ್ಟಾರ್ ಕಾಸ್ಟ್ ಜಬರದಸ್ತ್ ಆಗಿದೆಯೆಂದರೆ ಚಿತ್ರ ಚನ್ನಾಗಿರುತ್ತದೆ ಎನ್ನುವುದು ಆಗಿನ ಜನ ಸಾಮಾನ್ಯ ಸಿನೆಮಾ ವೀಕ್ಷಕರ ಅಭಿಪ್ರಾಯ ವಾಗಿರುತ್ತಿತ್ತು. ಪ್ರಾಣ್ ಇರುವನೆಂದರೆ ಒಮ್ಮೆ ಆ ಚಿತ್ರವನ್ನು ನೋಡಬೇಕು ಎನ್ನುವ ಕುತೂಹಲ ವಿರುತ್ತಿತ್ತು. ಆತ ನಟಿಸಿದ ಅನೇಕ ಖಳ ಪಾತ್ರಗಳು ಬಾಕ್ಸ್ ಆಫೀಸ್ ದೃಷ್ಟಿಯಲ್ಲಿಟ್ಟುಕೊಂಡೆ ರೂಪಿಸಿದ ಪಾತ್ರಗಳಾಗಿದ್ದವು. ಆಗಿನ ಕಾಲದ ಬಹುತೇಕ ಎಲ್ಲ ನಿರ್ಮಾಪಕ ಮತ್ತು ನಿರ್ದೇಶಕರ ಆಯ್ಕೆ ಖಳನಾಯಕ ಪ್ರಾಣ್ ಆಗಿರುತ್ತಿದ್ದ. ಆತನ ಕಾಲ್ ಶೀಟ್ ದೊರೆಯದೆ ಹಲವು ನಿರ್ಮಾಪಕ ನಿರ್ದೇಶಕರು ಬೇರೆ ಖಳನಾಯಕನನ್ನು ಅನಿವಾರ್ಯವಾಗಿ ಆಯ್ಕೆ ಮಾಡಿ ಕೊಳ್ಳುತ್ತ್ತಿದ್ದರು. ಅಷ್ಟು ಬೇಡಿಕೆ ಆತನಿಗಿತ್ತು.
ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: