(ಆಲೋಚನೆ-ಭಾವನ-ಭಾಷೆ) ಇನ್ನೊಂದು ಒಬ್ಬೆ
ಇದರಿಂದ ನನಗೆ ಬಹಳ ಸಂತೋಷವಾಗಿದೆ. ಲೇಖನವನ್ನು ಬರೆದು ಪ್ರಕಟಿಸಿದರೂ ಒಂದು ವಾರದಲ್ಲಿ ೧೫೦ ಜನ ಓದುವುದಿಲ್ಲ. ಎಚ್.ಪಿ.ಎನ್. ಮತ್ತು ಗೆಳೆಯರಿಗೆ ವಂದನೆಗಳು.
ನನ್ನ ಬರವಣಿಗೆಗೆ ಬಂದಿರುವ ಪ್ರತಿಕ್ರಿಯೆಗಳೂ ಕುತೂಹಲ ಹುಟ್ಟಿಸುತ್ತವೆ. ಅದನ್ನು ನಾನು ನಿರೀಕ್ಷಿಸಿದ್ದೆ.
ನನ್ನ ಅನುಮಾನ ಇರುವುದು, ಭಾವನೆ ಮತ್ತು ಅನುಭವಗಳನ್ನು ಅವುಗಳ ಶುದ್ಧ ಸ್ಠಿತಿಯಲ್ಲಿ ಪಡೆಯಲು, ಆ ಕ್ಷಣದಲ್ಲಿ ಅವುಗಳ ಬಗ್ಗೆ ಯೋಚಿಸುತ್ತಿರುವುದೇ ಅಡ್ಡಿಯಾಗುವುದೇ ಎಂದು. ಏಕೆಂದರೆ, ಏಕೆಂದರೆ ಅನುಭವಿಸುವ ವ್ಯಕ್ತಿಗೂ ಅನುಭವಕ್ಕೂ ಇರುವ ದೂರವೇ `ತಲ್ಲೀನತೆ'ಯನ್ನು ಅಳಿಸಿಬಿಡುವುದೇನೋ. ಇದನ್ನೇ ಕುವೆಂಪು ಅವರು
ನಾ ಮನುಜನು ನನ್ನೆದೆಯಲಿ ಅರಿವೆನ್ನುವ ಬಾವು
ನೋವಾಗಿರೆ, ಕೀವಾಗಿರೆ ಬಾಳ್ಬೆಲ್ಲವೆ ಬೇವು
ಎಂದು ವಿವರಿಸಿದ್ದಾರೆ. ಇರವು ಮತ್ತು ಅರಿವುಗಳ ನಡುವಿನ ಈ ದ್ವಂದ್ವವು ಮನುಷ್ಯನಿಗೆ ಅನಿವಾರ್ಯವೇನೋ. ಇಲ್ಲವಾದರೆ, ಅವನು ಪ್ರಾಣಿಸಹಜವಾದ ಸ್ಠಿತಿಗಾಗಿ ಅಥವಾ ಶಿಶುಸಹಜವಾದ ಅಸ್ತಿತ್ವಕ್ಕಾಗಿ ಹಂಬಲಿಸಬೇಕಾಗುತ್ತದೆ.
ಭಾಷೆಯು ನಮ್ಮ ವಿಧಿಯೆಂಬ ಮಾತನ್ನು ಹಲವರು ಹೇಳಿದರೂ ಅದು ಸರ್ವಸಮ್ಮತವಲ್ಲ. ಅಲ್ಲಮನು ಹೇಳಿದಂತೆ `ಪದ' ಬೇರೆ `ಪದಾರ್ಥ' ಬೇರೆ. ಉದಾಹರಣೆಗೆ `ನೀಲಿ' ಬಣ್ಣವನ್ನು ಹೇಳುವ ಪದಗಳು ಕನ್ನಡದಲ್ಲಿ ಹತ್ತು ಇರಬಹುದು. ಆದರೆ ನೀಲಿಯ ವರ್ಣಛಾಯೆಗಳು ಅನೇಕವೆನ್ನುವುದು ನಮಗೆಲ್ಲರಿಗೂ ಗೊತ್ತು. ಭಾಷಾಲೋಕವು ಅಸಮರ್ಥವೋ ಅಥವಾ ಅದು ನಮ್ಮ ಅನುಭಲೋಕಕ್ಕೆ ಹಾಕಿದ ಅನುಲ್ಲಂಘನೀಯವಾದ ಚೌಕಟ್ಟೋ?
ಈ ಪ್ರಶ್ನೆಗೆ ಉತ್ತರವು ಸರಳವಲ್ಲ. `ಯಥಾ ವಾಚಾ ನಿವರ್ತಂತೇ ಅಪ್ರಾಪ್ಯ ಮನಸಾ ಸಹಾ' ಎಂಬ ಮಾತನ್ನು ದೇವರನ್ನು ಕುರಿತು ಹೇಳಿದಂತೆಯೇ ಲೋಕವನ್ನು ಕುರಿತೂ ಹೇಳಿರಬಹುದು.

- H.S.R.Raghavendra Rao ರವರ ಬ್ಲಾಗ್
- Login or register to post comments
- 476 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ



- ನಿರ್ವಾಹಕರ ಗಮನಕ್ಕೆ ತನ್ನಿ



RSS:
ಪ್ರತಿಕ್ರಿಯೆಗಳು
ಎಲ್ಲವನ್ನೂ ಹೇಳಲು ಯಾಕೆ ಆಗಬೇಕು?
ಭಾಷೆಯನ್ನು ಎಷ್ಟೇ ಸೂಕ್ಷ್ಮವೆಂದರೂ ಅದು ನಿಜವಾಗಿ ಸ್ಥೂಲವೇ! ಆಗುವ ಅನುಭವಗಳನ್ನೆಲ್ಲ ಹೇಳಬೇಕೆನ್ನುವುದಾದರೂ ಯಾಕೆ? ಅದೊಂದು ಥರ ದುರಾಸೆ ಮನುಷ್ಯನ ಮನಸ್ಸಿಗೆ. ಕೊನೆಗೂ ಹೇಳಲಾಗದೆ ಉಳಿದದ್ದೇ ಅತಿ ಮುಖ್ಯವಾಗಿರುತ್ತದೆ, ಅಲ್ಲವೇ? ಹಾಗೆ ಹೇಳದೆ ಬಿಟ್ಟದ್ದನ್ನು ಅರಿಯುವ ಮನಸ್ಸು ಒಂದಾದರೂ ಸಿಕ್ಕೀತೆ ಅನ್ನುವುದು ಹುಡುಕಾಟ. ಅಡಿಗರ "ಚಿಂತಾಮಣಿಯಲ್ಲಿ ಕಂಡ ಮುಖ" ಅಂಥ ಅಪೇಕ್ಷೆಯನ್ನೇ ಕುರಿತ ಕವನ.
ದೇವರು ಅನ್ನುವ ಪದ ಬೇರೆ, ದೇವರ ಅನುಭವವೂ ಬೇರೆ. ಯಾವುದಕ್ಕೆ ನಮ್ಮ ಭಾಷೆಯಲ್ಲಿ ಹೆಸರಿಡಲು ಆಗುವುದಿಲ್ಲವೋ ಅದೆಲ್ಲವೂ ದೇವರೇ! ಭಾಷೆಯ ಹಂಗಿರದೆ ಆದ ಅನುಭವವೆಲ್ಲ ದೇವರ ಅನುಭವವೇ! ಆದರೆ ಉಂಟು, ಇಲ್ಲದಿದ್ದರೆ ಇಲ್ಲ. ಹೇಳಲು ಸಾಧ್ಯವಿಲ್ಲ. ಹೇಳಲು ಆಗುವ ಒಂದಿಷ್ಟರ ಮೂಲಕ ಹೇಳಲು ಸಾಧ್ಯವೇ ಇಲ್ಲದ್ದು ಕೂಡ ಅರಿವಿಗೆ ಬರುವಂತೆ ಭಾಷೆ ಬಳಸುವವರು ನಿಜವಾಗಿ ದೊಡ್ಡ ಮನಸ್ಸು, ಪ್ರಬುದ್ಧ ಮನಸ್ಸು ಉಳ್ಳವರು.
Re: ಎಲ್ಲವನ್ನೂ ಹೇಳಲು ಯಾಕೆ ಆಗಬೇಕು?
ಇದು ಬಹಳ ಸರಿ. ಭಾಷೆಗೆ ಎಲ್ಲ ಅನುಭವವನ್ನು ಹಿಡಿಯಲು ಸಾಧ್ಯವಿಲ್ಲ. ಅಂಥ ಅಪೇಕ್ಷೆ, ಅಹಂಕಾರಗಳು ಸರಿಯೂ ಅಲ್ಲ. ಆದ್ದರಿಂದಲೇ ಭಾಷೆಯು ನಮ್ಮ ಒಟ್ಟು ಅನುಭವಲೋಕದ ಗಡಿಗೆರೆಗಳನ್ನು ನಿರ್ಧರಿಸುವುದಿಲ್ಲ. ನಮ್ಮ ಲೋಕವು ಕೇವಲ ಭಾಷೆಯ ಸೃಷ್ಟಿಯೂ ಅಲ್ಲ. ಅದರಾಚೆಗಿನದನ್ನು ಹೇಳುವ ಪ್ರಯತ್ನಗಳು ಕೇವಲ ಆಂಶಿಕ. ಹಾಗೆ ನೋಡಿದರೆ, ಸಂಗೀತ ಮತ್ತು ಚಿತ್ರಗಳೂ ಇದೇ ಕೆಲಸವನ್ನು ತಮ್ಮದೇ ಆದ ರೀತಿಯಲ್ಲಿ ಮಾಡುತ್ತವೆ.
H.S.Raghavendra Rao
Re: ಎಲ್ಲವನ್ನೂ ಹೇಳಲು ಯಾಕೆ ಆಗಬೇಕು?
ಶ್ರೀಯುತರೇ,
ನನ್ನ ಅನಿಸಿಕೆಗಳನ್ನು ಹೇಳಲು ಪ್ರಯತ್ನಿಸುತ್ತೇನೆ. ತಪ್ಪಿದ್ದಲ್ಲಿ ದಯವಿಟ್ಟು ತಿದ್ದಿ.
ಈ ಸಮಸ್ಯೆ (ಅನುಭವ, ಭಾವನೆಗಳನ್ನು ಭಾಷೆಯ ಮಿತಿಯಲ್ಲಿ ವಿವರಿಸುವುದು) ಅನುಭಾವಿಗಳನ್ನೂ ಕೂಡಾ ಇನ್ನಿಲ್ಲದಂತೆ ಕಾಡಿದೆ ಅಲ್ಲವೇ? ಈ ನಿಟ್ಟಿನಲ್ಲಿ ರಾಮಕೃಷ್ಣ ಪರಮಹಂಸರ ವಿಚಾರ ನೆನಪಿಗೆ ಬರುತ್ತಿದೆ. ಅವರು ಸಮಾಧಿಯ ಅನುಭವವನ್ನೇ ಆಗಲಿ, ಅಥವಾ ದೇವರೊಡನೆ ಮುಖಾಮುಖಿಯಾದ ಅನುಭವವನ್ನಾಗಲೀ ವಿವರಿಸಿ ಹೇಳಲು ನಿರಾಕರಿಸುತ್ತಿದ್ದರಂತೆ! ಉಪ್ಪಿನ ಗೊಂಬೆ ಸಮುದ್ರವನ್ನು ಹೊಕ್ಕಂತೆ ಈ ವಿಚಾರ ಎನ್ನುವುದು ಅವರ ಸಿದ್ಧಾಂತವಾಗಿತ್ತು. ನಾವೂ ಕೂಡಾ ಅನುಭವವನ್ನು ಹೊಂದುವಾಗ ಅದನ್ನು ಇನ್ನೊಬ್ಬರಿಗೆ ವಿವರಿಸುವ ಅಪೇಕ್ಷೆಯನ್ನೇ ಹೊಂದದೆ ಹೋದರೆ, ಪೂರ್ಣಾನುಭವ ದಕ್ಕಬಹುದು ಅಲ್ಲವೇ?
ಉದಾಹರಣೆಗೆ, ಪ್ರಾಕೃತಿಕ ಸೌಂದರ್ಯವನ್ನು ಸವಿಯುವಾಗ ಅದನ್ನು ಕ್ಯಾಮರಾ ಕಣ್ಣಲ್ಲಿ ಸೆರೆಹಿಡಿಯುವ ಆಲೋಚನೆ ಬಂದ ತಕ್ಷಣ ಅಲ್ಲಿ ಆಲೋಚನಾ ಸರಪಳಿಯೇ ಶುರುವಾಗುತ್ತದೆ! ನಾನು ತೆಗೆದ ಫೋಟೋ ಚೆನ್ನಾಗಿ ಬರುತ್ತದೋ ಇಲ್ಲವೋ, ಅದನ್ನು ಇನ್ನೊಬ್ಬರಿಗೆ ತೋರಿಸಿದಾಗ ಅವರದನ್ನು ಮೆಚ್ಚುವರೋ ಇಲ್ಲವೋ...ಇತ್ಯಾದಿ ಇತ್ಯಾದಿ. ಒಟ್ಟಿನಲ್ಲಿ ಆ ಕ್ಷಣದಲ್ಲಿ ಅನುಭವವನ್ನು ನಾವು ಪೂರ್ಣ ಸವಿಯಲು ಸಾಧ್ಯವಾಗಿರುವುದಿಲ್ಲ ತಾನೇ? ಅದೇ ಕ್ಯಾಮರಾ ಕಣ್ಣಲ್ಲಿ ಸೆರೆಹಿಡಿಯುವ ಆಲೋಚನೆಯೇ ಇಲ್ಲವಾದಲ್ಲಿ ನಮ್ಮ ಕಣ್ತುಂಬಾ ಆ ದೃಶ್ಯವನ್ನು ತುಂಬಿಕೊಂಡು ಪೂರ್ಣ ಅನುಭವ ಹೊಂದಬಹುದಲ್ಲವೇ? ಇದು ಬಹಳ ರೂಕ್ಷ ಉದಾಹರಣೆ ಆಯಿತೇನೋ.
ಓ.ಎಲ್.ಎನ್. ಅವರು ಹೇಳಿದಂತೆ ಎಲ್ಲವನ್ನೂ ವಿವರಿಸುವ ಹಂಗಿಲ್ಲದೇ ಹೋದರೆ ಅನುಭಾವಿಗಳಾಗಬಹುದೇನೋ? ಭಾಷೆ ಎಷ್ಟೇ ಆದರೂ ನಮ್ಮ ಬುದ್ಧಿಯ ಮಟ್ಟದಲ್ಲಿ ಪ್ರಕಟಗೊಳ್ಳುವುದು. ಹಾಗಾಗಿ ಬುದ್ಧಿಗೆ ಮೀರಿದ್ದನ್ನು ವಿವರಿಸಲು ಭಾಷೆ ಸಹಜವಾಗಿಯೇ ಅಸಮರ್ಥ ಅಲ್ಲವೇ? ಆದರೆ ಅನುಭವಿಸಿದ್ದನ್ನು ಹಂಚಿಕೊಳ್ಳದೇ ಹೋದರೆ ಇತರರಿಗೆ ನಾವನುಭವಿಸಿದ್ದು ಹೇಗೆ ತಿಳಿದೀತು? ಪ್ರಾಯಶಃ ನಮ್ಮ ಅಹಂ ಸುಪ್ತವಾಗಿ ನಮ್ಮೆಲ್ಲ ಕ್ರಿಯೆಗಳನ್ನು ನಿರ್ದೇಶಿಸುವುದೇ ಇವಕ್ಕೆಲ್ಲ ಕಾರಣವೇ?
- ಶ್ಯಾಮ್ ಕಿಶೋರ್