ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Support Sampada
  • ಅಂಚೆ ಪೆಟ್ಟಿಗೆ
  • Font Help

ಹೊಸತು: ಹರಿದಾಸ ಸಂಪದ ಸಂಪುಟ

ಸಂಪದ › Sampada Blogs › hamsanandi ರವರ ಬ್ಲಾಗ್

ಹಂಸ ನಾದ

ಹಂಸ ನುಡಿದರೆ, ಹಂಸನಾದ!

ವೆಂಕಟಾಚಲ ನಿಲಯಂ ವೈಕುಂಠ ಪುರವಾಸಂ - (ಸಿಂಧು ಭೈರವಿ : ಭಾಗ ಎರಡು)

May 1, 2008 - 11:15pm — hamsanandi

ಕೆಲವು ದಿನಗಳ ಹಿಂದೆ ಸಿಂಧು ಭೈರವಿ ರಾಗದ ಬಗ್ಗೆ ಒಂದು ಅಸಂಬದ್ಧ ಪೀಠಿಕೆ ಬರೆದಿದ್ದೆ. ನಂತರ, ಕೇಳಿಸಬಹುದಾದ ಕೆಲವು ಒಳ್ಳೆ ಉದಾಹರಣೆಗಳಿಗೆ ಹುಡುಕುತ್ತಿದ್ದೆ. ನಾನು ಹುಡುಕುತ್ತಿದ್ದ ಕೆಲವು ಉತ್ತಮ ಗೀತೆಗಳು ಸಿಕ್ಕಲಿಲ್ಲವಾದ್ದರಿಂದ ಏನು ಮಾಡಲೆಂದು ಯೋಚಿಸುತ್ತಿದ್ದಾಗ, ನೋಡಿಸಿ-ಕೇಳಿಸುವ ಇನ್ನೊಂದಷ್ಟು ಹಾಡುಗಳು ದೊರೆತವು. ಸರಿ ಮತ್ತೆ, ತಡವೇಕೆ?

ಸಿಂಧುಭೈರವಿ ಅನ್ನುವುದು ದಕ್ಷಿಣಾದಿ(ಕರ್ನಾಟಕ) ಹಾಗೂ ಉತ್ತರಾದಿ(ಹಿಂದೂಸ್ತಾನಿ)ಸಂಗೀತ ಎರಡರಲ್ಲೂ ಪ್ರಚಾರದಲ್ಲಿರುವ ರಾಗ. ಹಿಂದೂಸ್ತಾನಿ ಪದ್ಧತಿಯಲ್ಲಿ ಇದಕ್ಕೆ ಭೈರವಿ ಎಂದರೆ, ಕರ್ನಾಟಕ ಸಂಗೀತದಲ್ಲಿ ಸಿಂಧೂಭೈರವಿ ಎನ್ನುತ್ತಾರೆ. ಕರ್ನಾಟಕ ಸಂಗೀತಕ್ಕೆ ಇದು ಹಿಂದೂಸ್ತಾನಿಯಿಂದಲೇ ಬಂದಿದೆ ಎನ್ನುವುದನ್ನು ನೀವು ಈ ಬರಹದಲ್ಲಿ ಕೊಟ್ಟಿರುವ ಕೆಲವು ಉದಾಹರಣೆಗಳನ್ನು ಕೇಳಿದಾಗ ನಿಮಗೆ ಅರಿವಾಗುತ್ತೆ. ಈ ಬರಹದ ಮಟ್ಟಿಗೆ, ನಾನು ಭೈರವಿ ಎಂದಾಗಲೂ, ಸಿಂಧೂಭೈರವಿ ಎಂದಾಗಲೂ ಒಂದೇ ರಾಗದ ಬಗ್ಗೆಯೇ ಹೇಳುತ್ತಿದ್ದೇನೆ ಎಂದುಕೊಳ್ಳಿ. (ಕರ್ನಾಟಕ ಸಂಗೀತದಲ್ಲಿ ಬೇರೊಂದು ಭೈರವಿ ಇದೆ - ಅದೂ ಒಂದು ಮಹಾನ್ ರಾಗವೇ. ಅದರ ವಿಷಯ ಈಗ ಬೇಡ.)

ಮೊದಲಿಗೆ ದೇವತಾಸ್ತುತಿಯೊಂದಿಗೆ, ಕಾರ್ಯಕ್ರಮ ಪ್ರಾರಂಭಿಸೋಣವೇ? Eye-wink

MLV sings Venkatachalanilayam

 


ಈ ಮೇಲೆ ನೀವು ಕೇಳಿದ್ದು ಶ್ರೀಮತಿ ಎಮ್.ಎಲ್.ವಸಂತಕುಮಾರಿಯವರ ಧ್ವನಿಯಲ್ಲಿ ಪುರಂದರ ದಾಸರ ಪ್ರಸಿದ್ಧ ದೇವರನಾಮ ’ವೆಂಕಟಾಚಲನಿಲಯಂ ವೈಕುಂಠ ಪುರವಾಸಂ’. ನೀವು ಊಹಿಸಿರುವ ಹಾಗೆ, ಇದೂ ಸಿಂಧೂಭೈರವಿ ರಾಗದಲ್ಲೇ ನಿಯೋಜಿತವಾಗಿದೆ.

ರಾಗದ ವಿಷಯ ಹೇಳುವ ಮೊದಲು ಈ ರಚನೆಯ ಬಗ್ಗೆ ಒಂದು ಟಿಪ್ಪಣಿ ಹೇಳಬಯಸುವೆ. ನೀವು ಈಗ ಕೇಳಿದಂತೆ, ಈ ಹಾಡು ಸಂಸ್ಕೃತದಲ್ಲಿ ಇದೆ. ಆದರೆ, ಅದರಲ್ಲಿ ಒಂದು ತಪ್ಪು ಕಾಣುತ್ತದೆ. ಇಡೀ ರಚನೆಯು ದ್ವಿತೀಯಾ ವಿಭಕ್ತಿಯಲ್ಲಿದೆ. ಅಂದರೆ "ವೆಂಕಟಾಚಲದಲ್ಲಿ (ತಿರುಪತಿಯಲ್ಲಿ) ನೆಲೆಸಿದವನನ್ನು, ವೈಕುಂಠ ಪುರದಲ್ಲಿ ವಾಸಮಾಡುವನನ್ನು , ತಾವರೆಯಂಥ ಕಣ್ಣುಳ್ಳವನನ್ನು, ...." - ಹೀಗೆ ಬಂದಾಗ ಕೊನೆಯಲ್ಲಿ ನೆನೆಯುತ್ತೇನೆ ಎಂದೋ, ಸ್ಮರಿಸುತ್ತೇನೆ ಎಂತಲೋ, ಪೂಜಿಸುತ್ತೇನೆ ಎಂದೋ ಇರಬೇಕಿತ್ತಲ್ಲವೇ? ಅದಿಲ್ಲದೇ ಇದ್ದಾಗ ರಚನೆ ಅಪೂರ್ಣ ಎನ್ನಿಸದೇ? ಹಾಗಾಗಿ ನನಗೆ ಇದು "ವೆಂಕಟಾಚಲ ನಿಲಯ, ವೈಕುಂಠಪುರವಾಸ..." ಮೊದಲಾಗಿ ಇದ್ದಿದ್ದರೆ,(ಪ್ರಥಮಾ ವಿಭಕ್ತಿ) ಈ ತೊಂದರೆ ಇರದೇ ಹೋಗುತ್ತಿತ್ತು. ಮತ್ತೆ, ಆಗ ಆ ಹಾಡು ಕನ್ನಡದ್ದೇ ಎಂದೂ ಹೇಳಬಹುದಿತ್ತು. (ಏಕೆಂದರೆ, ಇಲ್ಲಿರುವ ಪದಗಳೆಲ್ಲ ಸಮಸಂಸ್ಕೃತ ಪದಗಳೇ - ಎಂದರೆ, ಕನ್ನಡದಲ್ಲಿ ಸಂಸ್ಕೃತದಲ್ಲಿ ಇದ್ದಂತೆಯೇ ಬಳಸುವ ಪದಗಳು) - ಅಲ್ಲವೇ?

ಸರಿ. ಕೊಂಕಣ ಸುತ್ತಿಕೊಂಡು ಅಂತೂ ಮೈಲಾರಕ್ಕೆ ಬರೋಣ. ಏಳುಸ್ವರವು ಸೇರಿ ಸಂಗೀತವಾಯಿತು ಎನ್ನುವ ಮಾತನ್ನು ನೀವು ಕೇಳಿದ್ದೀರಿ. ಸ-ರಿ-ಗ-ಮ-ಪ-ದ-ನಿ ಎಂಬ ಈ ಏಳು ಸ್ವರಗಳಲ್ಲಿ, ಸ ಮತ್ತು ಪ ಎನ್ನುವ ಸ್ವರಗಳನ್ನು ಪ್ರಕೃತಿ ಸ್ವರ ಎನ್ನುತ್ತೇವೆ. ಏಕೆಂದರೆ, ಈ ಸ್ವರಗಳು ಯಾವ ರಾಗದಲ್ಲೂ ಬದಲಾವಣೆ ಹೊಂದುವುದಿಲ್ಲ. ನಿಮ್ಮ ಆಧಾರ ಶ್ರುತಿ ಸ ಅನ್ನುವುದರ ಕಂಪನಾವರ್ತನ(frequency) 400 ಹರ್ಟ್ಸ್ ಆಗಿದ್ದರೆ, ಪ ಸ್ವರದ ಕಂಪನಾವರ್ತನ ಅದರ ಒಂದೂವರೆಯಷ್ಟು - ಅಂದರೆ ೬೦೦ ಹರ್ಟ್ಸ್ ಆಗಿರುತ್ತೆ. ಹಾಗೇ, ಮೇಲಿನ ಷಡ್ಜ(ಸ)ದ ಕಂಪನಾವರ್ತನ ಆಧಾರ ಷಡ್ಜದ ಎರಡರಷ್ಟು, ಅಂದರೆ, ೮೦೦ ಹರ್ಟ್ಸ್ ಆಗಿರುತ್ತೆ ಅನ್ನುವುದನ್ನು ಒಮ್ಮೆ ಹೇಳಿಬಿಡುವೆ. ಅಲ್ಲದೇ, ಭಾರತೀಯ ಶಾಸ್ತ್ರೀಯ ಸಂಗೀತದಲ್ಲಿ,ಆಧಾರಷಡ್ಜ ಇಂತಹ ಕಡೆಯೇ ಇರಬೇಕೆಂಬ ನಿಯಮವಿಲ್ಲ. ಹಾಗಾಗಿ, ಇಲ್ಲಿ ಹೇಳಿರುವ ೪೦೦-೬೦೦-೮೦೦ ಹರ್ಟ್ಸ್ ಗಳು ಬರೇ ಉದಾಹರಣೆಗಷ್ಟೇ.

ಈಗ ಸಿಂಧೂಭೈರವಿ ರಾಗದಲ್ಲಿ ಒಂದು ಆಲಾಪನೆ ಕೇಳೇಣ. ಆಲಾಪನೆಯೆಂದರೆ, ರಾಗವನ್ನು ಯಾವುದೇ ಹಾಡಿಲ್ಲದೇ ವಿಸ್ತಾರ ಮಾಡುವ ರೀತಿ. ಬಾಯಿಹಾಡುಗಾರಿಕೆಯಲ್ಲಿ ನ ನ, ತನನ, ತದರಿನ, ಮೊದಲಾದ (ಅರ್ಥವಿಶೇಷವಿಲ್ಲದ) ಪದಗಳನ್ನು ಉಪಯೋಗಿಸುತ್ತಾರೆ. ವಾದ್ಯದಲ್ಲಿ ನಿಮಗೆ ಅದು ಕೇಳುವುದಿಲ್ಲ ಬಿಡಿ!

Prasanna plays AlApane of Sindhu bhairavi raaga


ಈಗ ಈ ರಾಗದ ಸ್ವರಗಳಿಗೆ ಮರಳೋಣ. ಸಿಂಧೂಭೈರವಿ ಒಂದು ಸಂಪೂರ್ಣ ರಾಗ. ಎಂದರೆ, ಈ ರಾಗದಲ್ಲಿ ಏಳೂ ಸ್ವರಗಳನ್ನು ಉಪಯೋಗಿಸಲಾಗುತ್ತೆ.ಮೊದಲೇ ಹೇಳಿದ್ದೆ - ಸ ಪ ಗಳು ಯಾವ ರಾಗದಲ್ಲೂ ಬದಲಾಗುವುದಿಲ್ಲ ಎಂದು. ಎಂದರೆ, ಉಳಿದ ಸ್ವರಗಳು - ಎಂದರೆ, ರಿ-ಗ-ಮ-ದ-ನಿ ಗಳು ಬದಲಾಗುತ್ತವೆ ಎಂದು ನೀವು ಅರ್ಥ ಮಾಡಿಕೊಂಡಿದ್ದರೆ, ನಿಮಗೆ ಪೂರ್ತಿ ಅಂಕಗಳು Smiling. ಸಾಧಾರಣವಾಗಿ ಒಂದು ರಾಗದಲ್ಲಿ ಒಂದು ಸ್ವರದ ಒಂದೇ ಬಗೆ ಉಪಯೋಗಿಸಲಾಗತ್ತೆ. ಸಾಧಾರಣವಾಗಿ, ಅನ್ನುವದರ ಕೆಳಗೆ ಒಂದು ಗೆರೆ ಎಳೆದುಕೊಳ್ಳಿ. ಯಾಕೆಂದರೆ, ಎಷ್ಟೋ ರಾಗಗಳಲ್ಲಿ, ಒಂದು ಸ್ವರದ ಎರಡೂ ಪ್ರಕಾರಗಳು ಬಳಸಲ್ಪಡಬಹುದು.

ಹಿಂದೂಸ್ತಾನಿಯ ಭೈರವಿಯನ್ನು ಭೈರವೀ ಥಾಟ್ ಸೇರಿಸಲಾಗುತ್ತೆ. ಅದಕ್ಕೆ ಕರ್ನಾಟಕ ಸಂಗೀತದಲ್ಲಿ ಹನುಮತೋಡೀ ಮೇಳವೆಂದು ಹೆಸರು. ಹಿಂದೂಸ್ತಾನಿಯಲ್ಲಿ ಈ ಥಾಟ್ ಗೆ ಬರುವ ರಿ-ಗ-ಮ-ದ-ನಿ ಎಲ್ಲವೂ ಕೋಮಲ ಸ್ವರಗಳು. ಒಂದು ಸ್ವರದಲ್ಲಿ ಎರಡು ವಿಧಗಳಿದ್ದಾಗ, ಕೆಳಗಿರುವ ಸ್ವರವನ್ನು ಕೋಮಲವೆಂದೂ, ಮೇಲಿರುವ ಸ್ವರವನ್ನು ತೀವ್ರವೆಂದೂ ಹೇಳುವುದು ಹಿಂದೂಸ್ತಾನಿಯಲ್ಲಿ ಪದ್ಧತಿ. ಕರ್ನಾಟಕ ಸಂಗೀತದಲ್ಲಿ ಹೆಸರಿಸುವುದು ಸ್ವಲ್ಪ ಬೇರೆ. ಆದರೂ, ಸಿಂಧೂಭೈರವಿಯನ್ನು ಹಿಂದೂಸ್ತಾನಿಯಂದಲೇ ತೆಗೆದುಕೊಂಡಿರುವುದರಿಂದ, ಅದೇ ಸ್ವರಗಳೇ ಇಲ್ಲೂ ಪ್ರಯೋಗವಾಗುತ್ತವೆ.

ಕೆಲವು ರಾಗದಲ್ಲಿ ಒಂದು ಸ್ವರದ ಎರಡೂ ವಿಧಗಳು ಉಪಯೋಗಿಸಲ್ಪಡಬಹುದೆಂದು ಹೇಳಿದೆ. ಈ ನಿಟ್ಟಿನಲ್ಲಿ ಸಿಂಧೂಭೈರವಿ ಒಂದು ವಿಶಿಷ್ಟ ರಾಗ - ಈ ರಾಗದಲ್ಲಿ ರಿ-ಗ-ಮ-ದ-ನಿ ಈ ಎಲ್ಲಾ ಸ್ವರಗಳ ಎರಡೂ ಪ್ರಕಾರಗಳೂ ಸಂದರ್ಭಾನುಸಾರವಾಗಿ ಬಳಸಲ್ಪಡುತ್ತವೆ! ಅದಕ್ಕೆಂದೇ ಇದಕ್ಕೆ ಹಿಂದೂಸ್ತಾನಿಯಲ್ಲಿ ದ್ವಾದಶೀ ಭೈರವಿ ಎಂದೂ ಹೇಳುವ ಪರಿಪಾಠವಿದೆ. ಕೆಲವೊಮ್ಮೆ ಈ ರಾಗದಲ್ಲಿ ಈ ಹೆಚ್ಚುವರಿ ಸ್ವರಗಳನ್ನು ಹೇಳದೇ ಹಾಡಿದಾಗ, (ಹಿಂದೂಸ್ತಾನಿಯಲ್ಲಿ) ಅದಕ್ಕೆ ಶುದ್ಧ ಭೈರವೀ ಎಂದೂ ಹೇಳುವುದನ್ನು ಕೇಳಿದ್ದೇನೆ. ಅದಕ್ಕೆ ಸರಿಸುಮಾರು ಸಮಾನವಾದ ದೇಶ್ಯ ತೋಡಿ, ದೇಶಿಕ ತೋಡಿ ಎಂದು ಕರೆಯಲ್ಪಡುವ ಒಂದು ರಾಗವೂ ಕರ್ನಾಟಕ ಸಂಗೀತದಲ್ಲಿದೆ. ಈ ರಾಗದಲ್ಲಿರುವ ತ್ಯಾಗರಾಜರ ನಮೋನಮೋ ರಾಘವಾಯ ಅನಿಷಂ ಎನ್ನುವ ರಚನೆಯನ್ನು ಇಲ್ಲಿ ಕೇಳಿ.

<a href="http://www.musicindiaonline.com/p/x/u422zZXuTd.As1NMvHdW/">ಸಿ.ಸರೋಜ ಮತ್ತು ಸಿ.ಲಲಿತಾ ಅವರ ಕಂಠದಲ್ಲಿ - ನಮೋ ನಮೋ ರಾಘವಾಯ</a>

ಒಂದು ಹೆಚ್ಚುವರಿ ಮಾಹಿತಿ. ಈ ರಚನೆ, ತ್ಯಾಗರಾಜರು ತಮ್ಮ ಹದಿಮೂರನೇ ವಯಸ್ಸಿನಲ್ಲಿಯೇ ರಚಿಸಿದ್ದ ಮೊತ್ತಮೊದಲ ರಚನೆ ಎಂದು ದಾಖಲಾಗಿದೆ.

ಇನ್ನು ಕರ್ನಾಟಕ ಸಂಗೀತದಲ್ಲಿ ಮೊದಮೊದಲು ಹಿಂದೂಸ್ತಾನಿ ಶೈಲಿಯ ರಾಗಗಳನ್ನು ಉಪಯೋಗಿಸುವುದರ ಜೊತೆಗೆ, ಅಲ್ಲಿನ ವ್ರಜ ಭಾಷೆಯನ್ನೂ, ಅಲ್ಲಿಯ ಭಜನ್, ಖ್ಯಾಲ್ ಮೊದಲಾದುವುಗಳನ್ನೂ ರಚಿಸಿದವರಲ್ಲಿ ಸ್ವಾತಿ ತಿರುನಾಳ್ ಮಹಾರಾಜರದ್ದು ಎತ್ತಿದ್ದ ಕೈ. ಇವರ ’ವಿಶ್ವೇಶ್ವರ ದರುಶನ ಕರ್’ ಎನ್ನುವ ಸಿಂಧುಭೈರವಿ ರಾಗ ಭಜನೆಯೊಂದನ್ನು ಇಲ್ಲಿ ನೋಡಿ, ಕೇಳಿ.

Prashant Krishnamoorti sings a shloka, followed by Visweswara darushana kar


ಇನ್ನು ಈ ರಾಗದಲ್ಲಿ, ನನಗೆ ಮೊದಲು ಪರಿಚಯವಾದ ಒಂದು ಹಾಡಿನ ಬಗ್ಗೆ ಹೇಳುವೆ. ಕನ್ನಡಿಗರಿಗೆಲ್ಲ ಚೆನ್ನಾಗಿ ತಿಳಿದ ಈ ಹಾಡು, ೬೦ರ ದಶಕದ ಸುಬ್ಬಾಶಾಸ್ತ್ರಿ ಅನ್ನುವ ಚಲನಚಿತ್ರದ್ದು. ಹಾಡಿದ್ದವರು ಶ್ರೀರಂಗಂ ಗೋಪಾಲರತ್ನಂ. ಪು.ತಿ.ನರಸಿಂಹಾಚಾರ್ಯರ ಗೀತೆಗೆ ಸಂಗೀತ ನೀಡಿದ್ದವರು ವೀಣೆ ದೊರೆಸ್ವಾಮಯ್ಯಂಗಾರ್.

ನನಗೆ, ಈ ಹಾಡಿನ ಯಾವುದೇ ಕೊಂಡಿ ದೊರೆಯಲಿಲ್ಲವಾಗಿ, ಬರೀ ಹಾಡಿನ ಸಾಹಿತ್ಯ ಹಾಕುತ್ತಿದ್ದೇನೆ. ಓದುತ್ತಾ ಗುನುಗಿಕ್ಕೊಳ್ಳಿ.

ಕೃಷ್ಣನ ಕೊಳಲಿನಾ.. ಕರೆ ರಚನೆ: ಪು. ತಿ. ನ

ಕೃಷ್ಣನ ಕೊಳಲಿನಾ.. ಕರೆ ||ಆಲಿಸು||೨||
ತ್ವರೆ ತ್ವರೆ...||೨||
ಕೃಷ್ಣನ ಕೊಳಲಿನಾ.. ಕರೆ ||
೧.
ತೊಟ್ಟಲಿನ ಹಸುಗೂಸ ಮರೆ ಮರೆ| ಪಕ್ಕದ ಗಂಡನ ತೊರೆ ತೊರೆ||
ಬೃಂದಾವನಕೆ.. ತ್ವರೆ ತ್ವರೆ||ಕೃಷ್ಣನ ಕೊಳಲಿನಾ.. ಕರೆ ||
೨.
ಮುತ್ತಿನ ಕುಪ್ಪಸ ಹರಳೋಲೆ| ಮಲ್ಲಿಗೆ ಜಾಜಿ ಮುಡಿಮಾಲೆ|
ಹೆಜ್ಜೆಯ ನೇವುರ ಗೆಜ್ಜೆಯ ಪಿಲ್ಲಿ| ಮರೆತೇ ಬಂದೆವು ಮನೆಯಲ್ಲೆ ಸಖಿ||
ಕೃಷ್ಣನ ಕೊಳಲಿನಾ.. ಕರೆ ||ಆಲಿಸು||೨||
೩.
ಹೊತ್ತಾರೆ ಹೊರೆ ಗೆಲಸ ಮಿಕ್ಕಾರೆ ಮಿಗಲಿ|ಪಕ್ಕದ ನೆರೆ ಹೋರೆ ನಕ್ಕಾರೆ ನಗಲಿ|
ಬೃಂದಾವನದೋ..ಳ್ ಆಲಿಸಿ ಗೋ..ಮುರಳಿ|
ಕೃಷ್ಣನ ಕೊಳಲಿನಾ.. ಕರೆ ||ಆಲಿಸು||
ಕೃಷ್ಣನ ಕೊಳಲಿನಾ... ಕರೆ...||
೪.
ನೇಸರಕಿರ್*ಅಣ ಆಗಸದಿರುಳ|ತೊರೆಯಿಸುವಾ ರೀತಿ|
ಮುರಳೀಧರನ ಮುರಳಿ ಮಾಯೆಗೆ ಮನ ಬಿಟ್ಟಿತೆ ಭೀತಿ|
ಇನ್ನಾಯಿತೆ ಪ್ರೀತಿ||೨|| ಮುರಳಿ...
ಕೃಷ್ಣನ ಕೊಳಲಿನಾ... ಕರೆ ||ಆಲಿಸು||
ಕೃಷ್ಣನ ಕೊಳಲಿನಾ... ಕರೆ...||

ಹಿಂದೂಸ್ತಾನಿ ಪದ್ಧತಿಯಲ್ಲಿ, ಇಂತಿಂತಹ ರಾಗವನ್ನು ಇಂತಹ ಸಮಯದಲ್ಲೇ ಹಾಡಬೇಕು ಎನ್ನುವ ನಿಯಮವನ್ನು ಸ್ವಲ್ಪ ಕಟ್ಟುನಿಟ್ಟಾಗೇ ಪಾಲಿಸುತ್ತಾರೆ. ಹಾಗೇ, ಅವರಲ್ಲಿ ಕಾರ್ಯಕ್ರಮವೊಂದನ್ನು ಮುಗಿಸಲು ಭೈರವಿ ಅನ್ನುವುದು ಸೂಕ್ತ, ಮಂಗಳಕರ ಅನ್ನುವ ನಂಬಿಕೆ. ಹಾಗಾಗಿ, ಈ ಬರಹವನ್ನು, ನಚಿಕೇತ ಶರ್ಮ ಅವರು ಹಾಡಿದ ಒಂದು ಭೈರವಿ ಧುನ್ ನೊಂದಿಗೆ ಮುಗಿಸುವೆ.

Nachiketa Sharma sings a dhun in bhairavi


ಸಿಂಧುಭೈರವಿಯ ಮುಂದಿನ ಭಾಗ? ಮತ್ತೆ ಕೆಲವು ದಿನಗಳ ನಂತರ!

-ಹಂಸಾನಂದಿ

  • ತ್ಯಾಗರಾಜ
  • ಪುರಂದರ ದಾಸ
  • ಸಂಗೀತ
  • ಸ್ವಾತಿ ತಿರುನಾಳ್
  • ಹಿಂದೂಸ್ತಾನಿ
~.~
  • hamsanandi ರವರ ಬ್ಲಾಗ್
  • Login or register to post comments
  • 719 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Google
  • Yahoo

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
May 2, 2008 - 12:05am — Narayana

ಉ: ವೆಂಕಟಾಚಲ ನಿಲಯಂ ವೈಕುಂಠ ಪುರವಾಸಂ - (ಸಿಂಧು ಭೈರವಿ : ಭಾಗ ಎರಡು)

Narayana's picture

Quote:

.....ಆದರೆ, ಅದರಲ್ಲಿ ಒಂದು ತಪ್ಪು ಕಾಣುತ್ತದೆ. ಇಡೀ ರಚನೆಯು ದ್ವಿತೀಯಾ ವಿಭಕ್ತಿಯಲ್ಲಿದೆ. ಅಂದರೆ "ವೆಂಕಟಾಚಲದಲ್ಲಿ (ತಿರುಪತಿಯಲ್ಲಿ) ನೆಲೆಸಿದವನನ್ನು, ವೈಕುಂಠ ಪುರದಲ್ಲಿ ವಾಸಮಾಡುವನನ್ನು , ತಾವರೆಯಂಥ ಕಣ್ಣುಳ್ಳವನನ್ನು, ...." - ಹೀಗೆ ಬಂದಾಗ ಕೊನೆಯಲ್ಲಿ ನೆನೆಯುತ್ತೇನೆ ಎಂದೋ, ಸ್ಮರಿಸುತ್ತೇನೆ ಎಂತಲೋ, ಪೂಜಿಸುತ್ತೇನೆ ಎಂದೋ ಇರಬೇಕಿತ್ತಲ್ಲವೇ? ಅದಿಲ್ಲದೇ ಇದ್ದಾಗ ರಚನೆ ಅಪೂರ್ಣ ಎನ್ನಿಸದೇ? ಹಾಗಾಗಿ ನನಗೆ ಇದು "ವೆಂಕಟಾಚಲ ನಿಲಯ, ವೈಕುಂಠಪುರವಾಸ..." ಮೊದಲಾಗಿ ಇದ್ದಿದ್ದರೆ,(ಪ್ರಥಮಾ ವಿಭಕ್ತಿ) ಈ ತೊಂದರೆ ಇರದೇ ಹೋಗುತ್ತಿತ್ತು. ...

ಸಂಸ್ಕೃತದಲ್ಲಿ "ಅಶ್ರುತಸ್ಯ ಅನುಸಂಧಾನಮ್" ಅಂತ ಒಂದು ಸೂತ್ರ ಇದೆ ಅಂತ ನಮ್ಮ ಸಂಸ್ಕೃತ ಪಂಡಿತರು ಹೇಳಿದ್ದು ಜ್ಞಾಪಕ. ಅಂದರೆ ಹೇಳದೆಯೇ ಇದ್ದುದನ್ನು assume ಮಾಡಿಕೊಳ್ಳುವುದು ಎಂದು . ಅದರ ಪ್ರಕಾರ ಕ್ರಿಯಾಪದವನ್ನು assume ಮಾಡಿಕೊಳ್ಳಬೇಕು ಎಂದು ತೋರುತ್ತದೆ.

ಇನ್ನೊಂದು ಉದಾಹರಣೆ :

ಪೂಜ್ಯಾಯ ರಾಘವೇಂದ್ರಾಯ ಸತ್ಯ ಧರ್ಮರತಾಯಚ
ಭಜತಾಂ ಕಲ್ಪವೃಕ್ಷಾಯ ನಮತಾಂ ಕಾಮಧೇನವೇ

ಅರ್ಥ : ಸತ್ಯ ಧರ್ಮಗಳಲ್ಲಿ ಮಗ್ನರಾದ, ಭಜಿಸುವವರಿಗೆ ಕಲ್ಪವೃಕ್ಷದೋಪಾದಿಯಲ್ಲಿಯೂ, ನಮಿಸಿದವರಿಗೆ ಕಾಮಧೇನುವಿನಂತೆಯೂ ಇರುವ ಪೂಜ್ಯರಾದ ರಾಘವೇಂದ್ರರಿಗೆ ...

ಇಲ್ಲಿಯೂ "ನಮಾಮಿ" ಕ್ರಿಯಾಪದ ಇಲ್ಲ. ನಮಿಸುವೆನು ಎಂದು ಅಂದುಕೊಳ್ಳಬೇಕು.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
May 2, 2008 - 2:00am — hamsanandi

ಉ: ವೆಂಕಟಾಚಲ ನಿಲಯಂ ವೈಕುಂಠ ಪುರವಾಸಂ - (ಸಿಂಧು ಭೈರವಿ : ಭಾಗ ಎರಡು)

hamsanandi's picture

ನಾರಾಯಣ ಅವರೆ,

ಸೂತ್ರ ನೆನಪಿಸಿದ್ದಕ್ಕೆ ಧನ್ಯವಾದಗಳು.

ನೀವು ಹೇಳುವುದೂ ಸರಿ - ಆದರೆ, ಪುರಂದರರ ರಚನೆಗಳೆಲ್ಲ ಕನ್ನಡದಲ್ಲೇ ಇಲ್ಲವೆ? ಹಾಗಾಗಿ, ಇದು ವೆಂಕಟಾಚಲ ನಿಲಯ ವೈಕುಂಠಪುರವಾಸ ಎಂಬ (ಸಮ ಸಂಸ್ಕೃತ ) ಕನ್ನಡದಲ್ಲಿದ್ದರೆ ಸರಿ ಇತ್ತೇನೋ ಎಂದು ನನ್ನ ವೈಯಕ್ತಿಕ ಅಭಿಪ್ರಾಯ. ಉದಾಹರಣೆಗೆ ಅವರ ಪಿಳ್ಳಾರಿ ಗೀತೆ - ಶ್ರೀ ಗಣನಾಥ ಸಿಂಧೂರ ವರ್ಣ - ಇಂತಹ ರಚನೆಗಳನ್ನು ಕನ್ನಡದ್ದೂ ಅನ್ನಬಹುದು, ಸಂಸ್ಕೃತದ್ದೂ ಅನ್ನಬಹುದು.

-ಹಂಸಾನಂದಿ
ನನ್ನ (mostly) ಇಂಗ್ಲಿಷ್ ಬ್ಲಾಗ್ - ಅಲ್ಲಿದೆ ನಮ್ಮ ಮನೆ:- http://neelanjana.wordpress.com/
ನನ್ನ ಪಾಡ್ ಕಾಸ್ಟ್ ಗಳು :- http://hamsanandi.mypodcast.com/

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
May 2, 2008 - 12:33am — Narayana

ಉ: ವೆಂಕಟಾಚಲ ನಿಲಯಂ ವೈಕುಂಠ ಪುರವಾಸಂ - (ಸಿಂಧು ಭೈರವಿ : ಭಾಗ ಎರಡು)

Narayana's picture

ಕ್ಲಿಪ್ಪುಗಳು ಬಹಳ ಚೆನ್ನಾಗಿವೆ. ಅದರಲ್ಲಿಯೂ ಆಲಾಪನೆ ಮತ್ತು ಹಿಂದೂಸ್ತಾನಿ ಭೈರವಿ.
ವಂದನೆಗಳು

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
May 5, 2008 - 12:36pm — Prabhu Murthy

ಉ: ವೆಂಕಟಾಚಲ ನಿಲಯಂ ವೈಕುಂಠ ಪುರವಾಸಂ - (ಸಿಂಧು ಭೈರವಿ : ಭಾಗ ಎರಡು)

Prabhu Murthy's picture

Quote:

ಒಂದು ಸ್ವರದಲ್ಲಿ ಎರಡು ವಿಧಗಳಿದ್ದಾಗ, ಕೆಳಗಿರುವ ಸ್ವರವನ್ನು ಕೋಮಲವೆಂದೂ, ಮೇಲಿರುವ ಸ್ವರವನ್ನು ತೀವ್ರವೆಂದೂ ಹೇಳುವುದು ಹಿಂದೂಸ್ತಾನಿಯಲ್ಲಿ ಪದ್ಧತಿ.

ಹಿಂದೂಸ್ತಾನಿ ಪದ್ಧತಿಯಲ್ಲಿ ರಿ, ಗ, ಧ ಮತ್ತು ನಿ ಸ್ವರಗಳ ಕೆಳಗಿನ ಶ್ರುತಿಗಳಿಗೆ ’ಕೋಮಲ್’ ಎಂದೂ ಮೇಲಿನವುಗಳಿಗೆ ’ಶುದ್ಧ’ ಎಂದೂ
ಮತ್ತು
ಮಧ್ಯಮದ ಕೆಳಗಿನ ಶ್ರುತಿಯನ್ನು ’ಶುದ್ಧ’ ಎಂದೂ ಮೇಲಿನದನ್ನು ’ತೀವ್ರ’ ಎಂದೂ ಕರೆಯುತ್ತಾರಲ್ಲವೆ?
ಉದಾ: ಯಮನ್ ರಾಗದಲ್ಲಿ ಪ್ರಯೋಗಿಸುವುದು ’ತೀವ್ರ’ ಮಧ್ಯಮ. ಬಿಲಾವಲದಲ್ಲಿ ’ಶುದ್ಧ’ ಮಧ್ಯಮ.

ಮಧ್ಯಮದ ಶ್ರುತಿಗಳನ್ನು ಮಾತ್ರ ಹಾಗೆ ಕರೆಯುವುದನ್ನು ಅವುಗಳ ಆವೃತ್ತಿಗಳ (frequency) ಪರಸ್ಪರ ಅನುಪಾತವನ್ನು (ratio) ಆಧಾರವಾಗಿಟ್ಟುಕೊಂಡು ವಿವರಿಸಬಹುದು ಎಂದು ಓದಿರುವ ಅಸ್ಪಷ್ಟವಾದ ನೆನಪಿದೆ. ಯಾರಾದರೂ ಸಂಗೀತಶಾಸ್ತ್ರ ಮತ್ತು ಗಣಿತಗಳ ಉಭಯಪರಿಣಿತರಿದ್ದರೆ (ಪರಿಣಿತರಾಗಿ Eye-wink ) ಅದನ್ನು ಸ್ಪಷ್ಟಪಡಿಸಬಹುದು.

೧೨ ಅಥವಾ ೨೨ (ಬೇಕಾದರೆ ೨೭, ೩೨, ... infinite series) ಶ್ರುತಿಗಳ ಸ್ಥಾನಗಳನ್ನು ಆಧಾರ ಶಡ್ಜದಿಂದ ಒಂದೇ ಅನುಪಾತವನ್ನು ಬಳಸಿ ನಿರ್ಧರಿಸುವ ಒಂದು ಸರಳವಾದ algorithm ಇದೆ. ಅದರಂತೆ ಒಂದು C program ಬರೆದು computerನಲ್ಲಿ ಆಯಾ ಶ್ರುತಿಗಳ ಶಬ್ದಗಳನ್ನು ಹೊರಡಿಸಬಹುದು. ನಾನು ಹಿಂದೆ ಬೇರೆ ಬೇರೆ ಅನುಪಾತಗಳನ್ನು (ಉದಾ. golden ration ಅಂದರೆ (1 + sqrt(5)) / 2 ), ಇತ್ಯಾದಿ) ಬಳಸಿದರೆ ಉತ್ಪನ್ನವಾಗುವ ಶ್ರುತಿಗಳನ್ನು computerನಲ್ಲಿ ಹೊರಡಿಸಿದ್ದೆ. ಆದರೆ ಅವು ಉತ್ಪಾದಿಸಿದ ಶ್ರುತಿಗಳು ಕೊಂಚವೂ ತೃಪ್ತಿದಾಯಕವಾಗಿರಲಿಲ್ಲ. ಪ್ರಾಯಶಃ ಚಿಕ್ಕಂದಿನಿಂದಲೆ ಆಗಿರುವ conditioning ಇದಕ್ಕೆ ಕಾರಣವಾಗಿರಬಹುದು.

ಆ ಅನುಪಾತವನ್ನು ೨ ರ ೧೨ ನೇ ಘಾತವಾಗಿಸಿಕೊಂಡರೆ (12th root of 2) ಪೈಥಾಗೊರಸ್~ನ normalized scaleನ ಶ್ರುತಿಗಳು ಉತ್ಪನ್ನವಾಗುತ್ತವೆ. ಹಾರ್ಮೋನಿಯಂ, ಪಿಯಾನೋ ಇತ್ಯಾದಿ ಪಾಶ್ಚಾತ್ಯ ವಾದ್ಯಗಳಲ್ಲಿರುವಂತೆ. ನಿಜ, ಇದು ಹೈಸ್ಕೂಲ್ ಭೌತಶಾಸ್ತ್ರದಲ್ಲಿ ಕಲಿತಿದ್ದ ವಿಶಯ! ಆದರೆ ಆ ಪಾಠ ಹೇಳದ ಗಹನವಾದ ವಿಶಯ ಎಂದರೆ ನಮ್ಮ ಶ್ರುತಿಗಳಂತೆ ಇಲ್ಲಿನ ಶ್ರುತಿಗಳ ಪಂಕ್ತಿ inifinite series ಆಗುವುದಿಲ್ಲ! ಈ ವೈಶಿಷ್ಠ್ಯತೆ ನಮ್ಮ ವಾದ್ಯಗಳ ಮತ್ತು ಸಂಗೀತದ melodic ಸಂಕೀರ್ಣತೆ ಮತ್ತು ಸೌಂದರ್ಯೋಪಾಸಕ (aesthetic) ಗುಣಗಳನ್ನು ವೃದ್ಧಿಸಿದೆ ಎನಿಸುತ್ತದೆ.

ಭೈರವಿ:
’ರಾತ್ರಿಯಿಡೀ ಸಂಗೀತ ಕಚೇರಿ’ಗಳು (ಹಿಂದೂಸ್ತಾನಿಯವರು ’ಕಚೇರಿ’ ಪದ ಉಪಯೋಗಿಸಲ್ಲ Smiling ) ಪ್ರಾತಃಸಂಧ್ಯಾ ವೇಳೆಗೆ ಮುಗಿಯುತ್ತಿದ್ದವಂತೆ. ಆ ಪ್ರಹರಕ್ಕೆ (೧ ಪ್ರಹರ == ೩ ತಾಸು; ದಿನಕ್ಕೆಂಟು ಪ್ರಹರಗಳು; ಪ್ರತಿ ಪ್ರಹರಕ್ಕೂ ಅದಕ್ಕೇ ಒಪ್ಪುವ ರಾಗಗಳು!) ಒಪ್ಪುವ ರಾಗಗಳಲ್ಲಿ ಭೈರವಿಯು ಜನಪ್ರಿಯವಾಗಿ ಅಂತಹ ಕಚೇರಿಗಳು ಆ ರಾಗದಲ್ಲೆ ಸಮಾಪ್ತವಾಗುವ ರೂಢಿ ಬೆಳೆದಿರಬೇಕು. ಉಳಿದ ಸಮಯಗಳಲ್ಲಿ ಆಗುವ ಕಚೇರಿಗಳೂ ಅದೇ ವಾಡಿಕೆಯನ್ನು ಮಾಡಿಕೊಂಡಿರಬೇಕು.

ಅಂದಹಾಗೆ, ಕರ್ನಾಟಕೀಯ ಸಂಪ್ರದಾಯದಲ್ಲಿ ಮಧ್ಯಮಾವತಿಯಲ್ಲಿ ಮುಗಿಸಬೇಕೆಂಬ ಕ್ರಮವನ್ನು ಅಷ್ಟೊಂದು (ಹಿಂದೂಸ್ತಾನಿಯಲ್ಲಿ ಭೈರವಿಯಷ್ಟು) ಕಟ್ಟುನಿಟ್ಟಾಗಿ ಪಾಲಿಸುವಂತೆ ತೋರುವುದಿಲ್ಲ.

ನಿಮ್ಮ ಲೇಖನ ಚೆನ್ನಾಗಿದೆ.

ಪ್ರಭು ಮೂರ್ತಿ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
May 6, 2008 - 12:04am — hamsanandi

ಉ: ವೆಂಕಟಾಚಲ ನಿಲಯಂ ವೈಕುಂಠ ಪುರವಾಸಂ - (ಸಿಂಧು ಭೈರವಿ : ಭಾಗ ಎರಡು)

hamsanandi's picture

ಪ್ರಭು ಅವರೆ,

ನುಸುಳಿದ್ದ ತಪ್ಪನ್ನು ತೋರಿಸಿದ್ದಕ್ಕೆ ಧನ್ಯವಾದಗಳು Smiling

ಹೌದು - ಮಧ್ಯಮವೊಂದರಲ್ಲಿ, ತೀವ್ರ - ಶುದ್ಧ ಎಂಬ ಎರಡು ವಿಧಗಳಿದ್ದರೆ, ಉಳಿದ ಸ್ವರಗಳಲ್ಲಿ, ಕೋಮಲ, ಶುದ್ಧವೆಂದ ಹೇಳುವುದು (ಸಾಧಾರಣವಾಗಿ) ಹಿಂದೂಸ್ತಾನಿಯಲ್ಲಿ ಬಳಸುವ ರೂಢಿ.

ಶ್ರುತಿಯ ಅಂತರಗಳ ಬಗ್ಗೆ, ಇನ್ನೊಂದು ವಿವರವಾದ ಕಾಮೆಂಟ್ ಹಾಕುವೆ.

-ಹಂಸಾನಂದಿ
ನನ್ನ (mostly) ಇಂಗ್ಲಿಷ್ ಬ್ಲಾಗ್ - ಅಲ್ಲಿದೆ ನಮ್ಮ ಮನೆ:- http://neelanjana.wordpress.com/
ನನ್ನ ಪಾಡ್ ಕಾಸ್ಟ್ ಗಳು :- http://hamsanandi.mypodcast.com/

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
May 6, 2008 - 12:11am — hamsanandi

ಉ: ವೆಂಕಟಾಚಲ ನಿಲಯಂ ವೈಕುಂಠ ಪುರವಾಸಂ - (ಸಿಂಧು ಭೈರವಿ : ಭಾಗ ಎರಡು)

hamsanandi's picture

ಕಚೇರಿ ಮುಗಿಸಲು ಮಂಗಳಕರವಾದ ರಾಗವೆಂದು ಮಧ್ಯಮಾವತಿಯನ್ನು ಬಳಸುವುದು ಸುಮಾರು ೨೦ನೇ ಶತಮಾನದ ಮೊದಲು ಆರಂಭವಾದ ಸಂಪ್ರದಾಯವೆಂದು ಓದಿದ್ದೇನೆ. ಸುಬ್ಬರಾಮದೀಕ್ಷಿತರು ಮುದ್ದುವೆಂಕಟಮಖಿಯ 'ಮಧ್ಯಮಾದಿಸ್ತು ರಾಗೋSಯಂ' ಅನ್ನುವ ಲಕ್ಷಣಾವನ್ನು 'ಮಧ್ಯಮಾದಿಸ್ಸುರಾಗೋSಯಂ' ಎಂದು ಉದ್ಧರಿಸಿದ್ದೇ ಈ ಸಂಪ್ರದಾಯಕ್ಕೆ ಕಾರಣವೆಂದು ಒಂದು ನಂಬಿಕೆ. ಮಧ್ಯಮಾವತಿಗಿಂತ ಹೆಚ್ಚಾಗಿ, ಸೌರಾಷ್ಟ್ರ, ಸುರುಟಿ, ವಸಂತ, ಘಂಟಾ ಮೊದಲಾದ ರಾಗಗಳು ಮಂಗಳಕ್ಕೆ ತಕ್ಕವು ಎಂದು ಇನ್ನೂ ಹಿಂದಿನಿಂದ ಬಂದಿರುವ ನಂಬಿಕೆ. ಈ ಕಾರಣದಿಂದಲೇ ಹೆಚ್ಹಿನ ಮಂಗಳ ಕೃತಿಗಳು ಈ ರಾಗಗಳಲ್ಲಿ ರಚಿಸಲ್ಪಟ್ಟಿವೆ.

ಈಗಲೂ, ತ್ಯಾಗರಾಜರ ನೀನಾಮ ರೂಪಮುಲಕು ಎನ್ನುವ ಸೌರಾಷ್ಟ್ರ ರಾಗದ ಮಂಗಳವೇ ಅತಿ ಹೆಚ್ಚು ಹಾಡಲಾಗುವ ಮಂಗಳವೆಂದು ಹೇಳಬಹುದು.

-ಹಂಸಾನಂದಿ
ನನ್ನ (mostly) ಇಂಗ್ಲಿಷ್ ಬ್ಲಾಗ್ - ಅಲ್ಲಿದೆ ನಮ್ಮ ಮನೆ:- http://neelanjana.wordpress.com/
ನನ್ನ ಪಾಡ್ ಕಾಸ್ಟ್ ಗಳು :- http://hamsanandi.mypodcast.com/

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ಇಂಚರ
  • ಗಾಳಿಪಟ
  • 'ಮುಕ್ತ' ಹಾಡಿನ ಹಿಂದೆ...
  • ಏ ಆರ್‍ ರೆಹಮಾನ್ ಹಾಡಿರುವ ಕನ್ನಡ ಹಾಡು - ಗಬ್ಬಾಗಿದೆ.
  • ಆಶ್ಡೆನ್ ಪ್ರಶಸ್ತಿ
Syndicate content

ಲೇಖಕರು

hamsanandi's picture

ಪೂರ್ಣ ಹೆಸರು
ಹಂಸಾನಂದಿ

ಪರಿಚಯ

ಹೇಮಾವತಿಯ ನೆಲೆಯಿಂದ ಅಡಯಾರ್ ದಡಕ್ಕೆ,
ಅಡಯಾರ್ ದಡದಿಂದ ಮುಳಾ ನದಿಯ ಬದಿಗೆ,
ಮುಳಾ ಬದಿಯಿಂದ ವೃಷಭಾವತಿ ಕಡೆಗೆ ಸಾರಿ,
ಮತ್ತಲ್ಲಿಂದ ಸಾಕ್ರಮೆಂಟೋ, ಅಮೆರಿಕನ್ ನದಿಗಳ ನೀರು ಕುಡಿದು ............................................
ಸದ್ಯಕ್ಕೆ ಗ್ವಾಡಲೂಪೆ ನದಿ ದಡದಲ್ಲಿ ಸುಧಾರಿಸಿಕೊಳ್ಳುತ್ತಿರುವ ಒಬ್ಬ ಕನ್ನಡಿಗ!

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ವಾಟರ್ ಪೋರ್ಟಲ್: ದಿನದ ಚಿತ್ರ

ತುಮಕೂರಿನ ತಲಪರಿಗೆ

(ಫೋಟೋ : ಮಲ್ಲಿಕಾರ್ಜುನ ಹೊಸಪಾಳ್ಯ)

ವಾರದ ಲೇಖನ
ನಿಟ್ಟೆಯಲ್ಲಿ ನೀರಿಂಗಿಸಿ ನೀರಿನ ಬರಕ್ಕೆ ವಿದಾಯ

ವಾರದ ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ವಿಹರಿಸಿ

  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • Mailing Lists
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಬ್ಲಾಗ್ ಬರಹಗಳು

  • ಹಗಲು-ಇರುಳು
  • ನಿನ್ನ ಪೂಜೆಗೆ ಬಂದ ಮಹದೇಸ್ವರಾ
  • ನುಡಿ ಚಿತ್ರ ಬರೆಯಲು ಕಲಿತಿದ್ದು
  • ಹೆರಿಗೆ ಆಸ್ಪತ್ರೆಯ ಅನುಭವ (ಭಾಗ-೨)
  • ಹೆರಿಗೆ ಆಸ್ಪತ್ರೆಯ ಅನುಭವ (ಭಾಗ-೧)
  • ನೆನೆವುದೆನ್ನ ಮನ ಕರ್ನಾಟಕ ದೇಶವಮ್
  • ರಾಕ್ಷಸರು ಅಂಟಾರ್ಕ್ಟಿಕಾದಲ್ಲಿದ್ದರೇ?
  • ನೀಲಿ ಹಲ್ಲು ಇರುವ ಜಂಗಮ ದೂರವಾಣಿ ಯಂತ್ರ
  • ಮೊಬೈಲ್ ಕಥೆ
  • ಭಾರತೀಯರು ನರಕಕ್ಕೆ ಹೋದ್ರೆ ಏನ್ ಮಾಡ್ತಾರೆ?
ಇನ್ನಷ್ಟು

ಇತ್ತೀಚಿನ ಪ್ರತಿಕ್ರಿಯೆಗಳು

  • ಸಂಗನಗೌಡ
    ಉ: ಅಬ್ಬಾ!
    July 9, 2008 - 6:01pm
  • yuvapremi
    ಉ: ವರದಕ್ಷಿಣೆ;/ಪ್ರದಕ್ಷಿಣೆ;
    July 9, 2008 - 5:55pm
  • ನೀತಾ
    ಉ: Abroad ಅನ್ನೋ ಮಾಯೆ...
    July 9, 2008 - 5:53pm
  • yuvapremi
    ಉ: ಮುಕ್ತ...ಮುಕ್ತ...ಸಾಹಿತ್ಯ ಬೇಕು...
    July 9, 2008 - 5:46pm
  • veena
    ಉ: ಸುಮ್ನೆ 1 ಮದ್ವೆ ಬ್ಲಾಗು :)
    July 9, 2008 - 5:41pm
  • girish.rajanal
    ಉ: ಹಣ "investment"
    July 9, 2008 - 5:03pm
  • cmariejoseph
    ಉ: ಕನ್ನಡ ರಸಪ್ರಶ್ನೆ:೯
    July 9, 2008 - 4:50pm
  • cmariejoseph
    ಉ: ಫೈಲನ್ನು ಪಿಡಿಎಫ್‌ಗೆ ಬದಲಿಸುವುದು ಹೇಗೆ
    July 9, 2008 - 4:47pm
  • cmariejoseph
    ಉ: ಕನ್ನಡ ರಸಪ್ರಶ್ನೆ:೮
    July 9, 2008 - 4:41pm
  • girish.rajanal
    ಉ: ಈ ಗಾದೆಗಳು ಗೊತ್ತಾ?
    July 9, 2008 - 4:27pm
ಇನ್ನಷ್ಟು
ಈಗಿನಂತೆ 10 ಸದಸ್ಯರು ಮತ್ತು 41 ಅತಿಥಿಗಳು ಆನ್ಲೈನ್ ಇರುವರು.


ಏನಾದೊಡೆಯುಮಪ್ಪುದುಂಟು, ಸಿದ್ಧನಿರದಕೆ |
ಭಾನು ತಣುವಾದಾನು; ಸೋಮ ಸುಟ್ಟಾನು ||
ಕ್ಷೋಣಿಯೇ ಕರಗೀತು, ಜಗ ಶೂನ್ಯವಾದೀತು |
ಮೌನದಲಿ ಸಿದ್ಧನಿರು -- ಮಂಕುತಿಮ್ಮ ||

— ಡಿ ವಿ ಜಿ

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator