ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಸಂದರ್ಶನ
  • ಚರ್ಚೆ
  • ಚಿತ್ರಪುಟಗಳು
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • ಸಂಪದ ಫೌಂಡೇಶನ್
  • Font Help

~

ಸಂಪದ › Sampada Blogs › hamsanandi ರವರ ಬ್ಲಾಗ್

ಹಂಸ ನಾದ

ಹಂಸ ನುಡಿದರೆ, ಹಂಸನಾದ!

ಕಾಂಚೀಪುರದ ರಾಜಸಿಂಹೇಶ್ವರ, ಪಟ್ಟದಕಲ್ಲಿನ ವಿರೂಪಾಕ್ಷ ಮತ್ತು ಎಲ್ಲೋರದ ಕೈಲಾಸ

June 2, 2007 - 12:15am — hamsanandi

ಈ ಮೂರು ದೇವಾಲಯಗಳನ್ನು ಒಟ್ಟಿಗೆ ಹೇಳಿದ ಕಾರಣವೇನು ಎನ್ನುವಿರಾ? ಕಾಂಚಿಯ ಪಲ್ಲವರು, ಪಟ್ಟದಕಲ್ಲಿನ ಚಾಲುಕ್ಯರು, ಮತ್ತು ಎಲ್ಲೋರದ ರಾಷ್ಟ್ರಕೂಟರು ಪರಸ್ಪರ ಬದ್ಧವೈರಿಗಳಲ್ಲವೇ? ಹಾಗಾದರೆ ಈ ಮೂವರ ನಡುವಿನ ತಂತು ಏನು?

ಇಲ್ಲೇ ಇರುವುದು ಸ್ವಾರಸ್ಯ. ಬ್ರಿಟಿಶರು ಬರುವವರೆಗೆ ಭಾರತದಲ್ಲಿ ಒಂದುದೇಶವೆಂಬ ಭಾವನೆಯೇ ಇರಲಿಲ್ಲ ಎನ್ನುವವರಿದ್ದಾರೆ. ಆರ್ಯ-ದ್ರಾವಿಡ ಎಂಬ ವಿಂಗಡಣೆ ಮಾಡಿ, ಅಲ್ಲಿಗೂ ಇಲ್ಲಿಗೂ ಕೊಟ್ಟುಕೊಳ್ಳುವುದಿರಲಿಲ್ಲ, ಇದ್ದರೂ, ಅದು ಬೇಡ ಎನ್ನುವವರಿದ್ದಾರೆ. ನಿಜಸ್ಥಿತಿ ಏನೆಂದರೆ ರಾಜಕೀಯವಾಗಿ ನಮ್ಮ ದೇಶ ಹಲವಾರು ’ದೇಶ’ಗಳಾಗಿ ಭಾಗವಾಗಿದ್ದಿರಬಹುದು. ಹಲವು ದೇಶಭಾಷೆಗಳ ನಡುವೆಯೂ, ಬೇರೆ ಬೇರೆ ರಾಜರ ಆಳ್ವಿಕೆಗಳ ನಡುವೆಯೂ ಭಾರತ ಸಾಂಸ್ಕೃತಿಕವಾಗಿ ಅದು ಒಂದೇ ಆಗಿತ್ತು ಎನ್ನುವುದನ್ನು ಮನವರಿಕೆ ಮಾಡಲಿಕ್ಕೆ ನಮ್ಮ ಕಲಾಪ್ರಕಾರಗಳು, ಸಂಪ್ರದಾಯಗಳು ಒಳ್ಳೆ ಉದಾಹರಣೆ. ಅದಿಲ್ಲದೆ ಹೋದರೆ, ಕನ್ನಡಿಗ ಪುರಂದರ ದಾಸರು ಕರ್ನಾಟಕ (ದಾಕ್ಷಿಣಾತ್ಯ) ಸಂಗೀತದ ಪಿತಾಮಹರೆನ್ನಿಸಿಕೊಳ್ಳುತ್ತಿರಲಿಲ್ಲ. ಇನ್ನೊಬ್ಬ ಕನ್ನಡಿಗ ಗೋಪಾಲನಾಯಕ ಹಿಂದೂಸ್ತಾನಿ (ಉತ್ತರಾದಿ) ಸಂಗೀತದ ಮೂಲಪುರುಷರಲ್ಲೊಬ್ಬನೆನಿಸಿಕೊಳ್ಳುತ್ತಿರಲಿಲ್ಲ. ಒರಿಸ್ಸಾದ ಪುರಿ ದೇವಾಲಯದಲ್ಲಿ ಜಯದೇವನ ಅಷ್ಟಪದಿಗಳನ್ನು ಹಾಡಿ, ನರ್ತಿಸುವ ನರ್ತಕಿಯರು ಕರ್ನಾಟಕ ಸಂಗೀತದ ರಾಗಗಳನ್ನು ಉಪಯೋಗಿಸುತ್ತಿರಲಿಲ್ಲ. ಕೇರಳದ ಕೂಡಿಯಾಟ್ಟಂ ನಲ್ಲಿ ಸಂಸ್ಕೃತ ನಾಟಕಗಳ ಪ್ರದರ್ಶನವಾಗುತ್ತಿರಲಿಲ್ಲ! ಗಂಗೇ ಚ ಯಮುನೇ ಚೈವ ಗೋದಾವರೀ ಸರಸ್ವತೀ ನರ್ಮದೇ ಸಿಂಧು ಕಾವೇರಿ ಜಲೇಸ್ಮಿನ್ ಸನ್ನಿಧಿಂ ಕುರು ಅನ್ನುವ ಅರ್ಚಕರನ್ನು ಕಾಣಲಾಗುತ್ತಿರಲಿಲ್ಲ... ಇರಲಿ. ವಿಷಯ ಎಲ್ಲೆಲ್ಲಿಗೋ ಹೋಗುತ್ತಿದೆ ಎನ್ನುವಮೊದಲೆ ಇದಕ್ಕೆ ತಡೆ ಹಾಕುತ್ತೇನೆ!

ಈಗ ನಾನು ಹೇಳಿದ ಮೂರು ದೇವಾಲಯಗಳಿಗೂ, ಈಗ ಹೇಳಿದ ವಿಷಯಗಳಿಗಿಂತ ಹೆಚ್ಚಿನ, ಒಂದು ಮೂಲ ಎಳೆ ಇದೆ. ಅದರ ವಿಷಯ ಹೇಳೋಣವೆನ್ನಿಸಿತು. ಅದಕ್ಕೇ ಈ ಬರಹ.

ಪಲ್ಲವರ ಎರಡನೆಯ ನರಸಿಂಹವರ್ಮ (ಕ್ರಿ.ಶ. ೭೦೦- ೭೨೮) ಕಾಂಚೀಪುರದಲ್ಲಿ ಕೈಲಾಸನಾಥನಿಗೊಂದು ದೇವಾಲಯ ಕಟ್ಟಿಸಿದ. ಈ ರಾಜನಿಗೆ ರಾಜಸಿಂಹ ಎಂಬ ಬಿರುದೂ ಇತ್ತು. ಹಾಗಾಗಿ ಇದಕ್ಕೆ ರಾಜಸಿಂಹೇಶ್ವರ ಎಂದೂ ಕರೆಯಲಾಗುವ ವಾಡಿಕೆ ಇತ್ತು.  ಇಲ್ಲಿ ಕೆಳಗಿದೆ ನೋಡಿ ಈ ದೇವಾಲಯ.

 ಕಾಂಚೀಪುರದ ಕೈಲಾಸನಾಥ (ರಾಜಸಿಂಹೇಶ್ವರ) ದೇವಸ್ಥಾನ

(ಚಿತ್ರ ಕೃಪೆ: www.tamilnation.org) 

ಪಲ್ಲವರಿಗೂ ಚಾಲುಕ್ಯರಿಗೂ ಜಟಾಪಟಿ ಇದ್ದಿದ್ದೇ. ಇಮ್ಮಡಿ ಪುಲಿಕೇಶಿ ಕಾಂಚಿಯವರೆಗೆ ಹೋಗಿ, ಪಲ್ಲವರನ್ನು ಸೋಲಿಸಿದ್ದ. ಅದಕ್ಕೆ ಮಾರುತ್ತರವಾಗಿ, ಪಲ್ಲವ ನರಸಿಂಹ ವರ್ಮ ಪುಲಿಕೇಶಿಯ ಕಡೆ ದಿನಗಳಲ್ಲಿ (ಕ್ರಿ.ಶ.೬೪೩-ಕ್ರಿ.ಶ.೬೪೬ ) ಬಾದಾಮಿಯವರೆಗೂ ಹೋಗಿ, ಚಾಲುಕ್ಯರನ್ನು ಸೋಲಿಸಿ, ಅಲ್ಲಿನ ಕೋಟೆಯಲ್ಲಿ ಬಂಡೆಯ ಮೇಲೆ ತಾನು ವಾತಾಪಿಕೊಂಡನಾದೆನೆಂಬ ಹೆಮ್ಮೆಯ ತಮಿಳಿನಲ್ಲಿರುವ ಶಾಸನವನ್ನೂ ಬರೆಸಿದ. ನಂತರ ಚಾಲುಕ್ಯರು ಸ್ವಲ್ಪಕಾಲದ ನಂತರ ತಮ್ಮ ರಾಜ್ಯವನ್ನು ಮರಳಿ ಪಡೆದರು. ಅದು ಬೇರೆ ವಿಷಯ.

ಆದರೆ, ಚಾಲುಕ್ಯರ ರಾಜ್ಯದಲ್ಲಿ ಹಾಸು ಹೊಕ್ಕಾಗಿದ್ದ ಭಿತ್ತಿಚಿತ್ರಗಳು (mural, fresco) ಪಲ್ಲವರ ಮನದ ಭಿತ್ತಿಯಮೇಲೆ ಅಚ್ಚೊತ್ತಿರಬೇಕು. ಬಾದಾಮಿಯ ಗುಹೆಗಳಲ್ಲಿ ಇಂದಿಗೂ ಕೆಲವು ಭಿತ್ತಿಚಿತ್ರಗಳು ಕಂಡುಬರುತ್ತವೆ. ಇನ್ನು ಅಜಿಂಠಾದ (ಕಾಗುಣಿತ ತಪ್ಪಿಲ್ಲ - ಯಾವುದು ಅಜಂತಾ ಎಂದು ಪ್ರಖ್ಯಾತವಾಗಿದೆಯೋ, ಆ ಊರನ್ನು ಅಲ್ಲಿಯವರು ಕರೆಯುವುವು ಅಜಿಂಠಾ ಎಂದೇ!) ಗುಹೆಗಳಲ್ಲೂ ಕಾಣುವ ಪ್ರಸಿದ್ಧ ಚಿತ್ರಗಳಲ್ಲಿ ಹಲವು ಚಾಲುಕ್ಯ ರಾಜರು ಬರೆಯಿಸಿದ್ದೇ ಎಂಬುದು ಎಲ್ಲರಿಗೂ ಗೊತ್ತಿರುವ ಸಂಗತಿ.

ಈಗ ಇಲ್ಲಿ ಬಾದಾಮಿಯ ಗೋಡೆಯೊಂದರ ಮೇಲಿರುವ ಚಿತ್ರ ನೋಡಿ.

 ಬಾದಾಮಿಯಲ್ಲಿನ ಭಿತ್ತಿಚಿತ್ರ (mural)

ಚಿತ್ರ ಕೃಪೆ: ಹಿಂದೂ ಪತ್ರಿಕೆಯೊಂದರ ಲೇಖನ - ಬಿನಯ ಕೆ. ಬೆಹಲ್ ಅವರು ತೆಗೆದಿರುವ ಛಾಯಾಚಿತ್ರ http://www.hinduonnet.com/fline/fl2121/stories/20041022000406400.htm

ಎರಡು ತಲೆಮಾರಿನ ನಂತರದ ರಾಜಸಿಂಹನ ಕಾಲದಲ್ಲೂ ಚಾಲುಕ್ಯರ ಕಲೆಯ ನೆನಪು ಹಸಿಯಾಗಿದ್ದಿರಬೇಕು. ಈಗ ಕೈಲಾಸನಾಥ ದೇವಾಲಯದ ಗೋಡೆಯ ಮೇಲಿನ ಚಿತ್ರವೊಂದನ್ನು ನೋಡಿ; ಬಣ್ಣಗಳ ಉಪಯೋಗ ಮತ್ತೆ ಶೈಲಿಯ ಹೋಲಿಕೆಗಳನ್ನು ಗಮನಿಸಿ:

ಕಾಂಚೀಪುರದ ಕೈಲಾಸನಾಥ ದೇವಾಲಯದಲ್ಲಿನ ಒಂದು ಭಿತ್ತಿ ಚಿತ್ರ

ಚಿತ್ರ ಕೃಪೆ: ಹಿಂದೂ ಪತ್ರಿಕೆಯೊಂದರ ಲೇಖನ - ಬಿನಯ ಕೆ. ಬೆಹಲ್ ಅವರು ತೆಗೆದಿರುವ ಛಾಯಾಚಿತ್ರ http://www.hinduonnet.com/fline/fl2121/stories/20041022000406400.htm

ಇತಿಹಾಸ ಮರುಕಳಿಸುತ್ತೆ ಅನ್ನುವ ಮಾತಿದೆ. ಹಾಗೇ, ಇಲ್ಲೂ ಆಯಿತು. ಇಮ್ಮಡಿ ಪುಲಿಕೇಶಿಯ ನಂತರ ೨-೩ ತಲೆಮಾರಿನ ನಂತರದ ರಾಜ ಇಮ್ಮಡಿ ವಿಕ್ರಮಾದಿತ್ಯ. ಅವನು ಪಲ್ಲವರನ್ನು ಮತ್ತೆ ಸೋಲಿಸಿ, ಅವರ ರಾಜಧಾನಿ ಕಾಂಚಿಯನ್ನೂ ವಶ ಪಡಿಸಿಕೊಂಡು, ಅಲ್ಲಿನ ರಾಜಸಿಂಹೇಶ್ವರ ದೇವಾಲಯದಲ್ಲಿ ಕನ್ನಡ ಶಾಸನವೊಂದನ್ನು ಬರೆಯಿಸಿದ. ತಾವು ಗೆಲುವು ಪಡೆದಾಗಲೂ, ಕಾಂಚಿಯ ಸ್ಮಾರಕಗಳಿಗೆ, ಕಟ್ಟಡಗಳಿಗೆ ಯಾವರೀತಿಯ ಹಾನಿಯನ್ನೂ ಮಾಡಲಿಲ್ಲವೆಂದು ಅದರಲ್ಲಿ ಹೇಳಿದ್ದಾನೆ. ಕಾಂಚಿಯ ವಿಜಯದ ಸ್ಮಾರಕವಾಗಿ ತನ್ನ ರಾಜಧಾನಿಯ ಬಳಿಯ ಪಟ್ಟದ ಕಲ್ಲಿನಲ್ಲಿ, ತನ್ನ ಎರಡು ರಾಣಿಯರಾದ ಲೋಕಮಹಾದೇವಿ ಮತ್ತು ತ್ರಿಲೋಕಮಹಾದೇವಿಯರ ಹೆಸರಿನಲ್ಲಿ ದೇವಾಲಯಗಳನ್ನು ಕಟ್ಟಿಸಿದ. ಆ ವೇಳೆಗಾಗಲೆ, ಪಟ್ಟದಕಲ್ಲಿನಲ್ಲಿ ಹಲವು ಸಣ್ಣ ಪುಟ್ಟ ಗುಡಿಗಳಿದ್ದವು. ಎಲ್ಲಾ ರೀತಿಯ ಶಿಲ್ಪ ಶೈಲಿಗಳ ಪ್ರಯೋಗವೂ ಅಲ್ಲಿ ನಡೆದಿತ್ತು. ಈಗ ವಿಕ್ರಮಾದಿತ್ಯ ಕಟ್ಟಿಸಹೊರಟ ಗುಡಿಗಳನ್ನು ಲೋಕೇಶ್ವರ ಮತ್ತು ತ್ರೈಲೋಕೇಶ್ವರ ಎಂದು ಕರೆಯಲಾಯಿತು. ನಂತರದ ಕಾಲದಲ್ಲಿ ಇವೆರಡು ದೇವಸ್ಥಾನಗಳಿಗೆ ವಿರೂಪಾಕ್ಷ ಮತ್ತು  ಸಂಗಮೇಶ್ವರ ಎಂಬ ಹೆಸರು ನೆಲೆಯಾಗಿದೆ.

ಪಟ್ಟದಕಲ್ಲಿನ ವಿರೂಪಾಕ್ಷ ದೇವಾಲಯ

(ಚಿತ್ರ ಕೃಪೆ: ವಿಕಿಪಿಡಿಯ , ಸುದರ್ಶನ್ ಭಟ್ ಖಂಡಿಗೆ ಅವರು ತೆಗೆದ ಚಿತ್ರ)

ಕಾಂಚಿಯ ಕೈಲಾಸನಾಥ ದೇವಾಲಯದಿಂದ ಪ್ರಭಾವಿತನಾದ ವಿಕ್ರಮಾದಿತ್ಯ ಅದೇ ಮಾದರಿಯಲ್ಲೇ ವಿರೂಪಾಕ್ಷ ದೇವಾಲಯವನ್ನು ನಿರ್ಮಿಸಿದ್ದಾನೆ. ಎರಡೂ ಚಿತ್ರಗಳನ್ನೂ, ವಿಮಾನಗಳನ್ನು (ಗರ್ಭಗುಡಿಯಮೇಲಿರುವ ಗೋಪುರ) ಗಮನಿಸಿ ನೋಡಿದರೆ ಇದು ಸುಲಭವಾಗಿ ಮನದಟ್ಟಾಗುತ್ತದೆ. ಪಟ್ಟದಕಲ್ಲಿನ ಗುಡಿಗಳ ಗುಂಪಿನಲ್ಲಿ ವಿರೂಪಾಕ್ಷ ಎಲ್ಲಕ್ಕಿಂತ ದೊಡ್ಡ ಗುಡಿ. ದೇವಾಲಯದ ಮುಂದೆ ನಂದಿ ಮಂಟಪವೂ ಇದೆ. ಇದೇ ಕರ್ನಾಟಕದ ಅತಿ ಹಳೆಯ ನಂದಿ ಇರಬಹುದು ಎಂದು ನನ್ನ ಊಹೆ - ಕ್ರಿ.ಶ. ೭೪೦ ರಲ್ಲಿ ಕಟ್ಟಲಾಗಿರುವ ಇದಕ್ಕಿಂತಲೂ ಹಳೆಯ ದೇವಾಲಯಗಳೇ ಕಡಿಮೆ ಇರುವಾಗ ಇದು ಸರಿ ಇರಲೂ ಬಹುದು. ಬನವಾಸಿಯ ಮಧುಕೇಶ್ವರನಲ್ಲಿ ನಂದಿ ಮಂಟಪ ಇಲ್ಲ ಎಂದು ನನ್ನ ನೆನಪು. ಸರಿಯಾಗಿ ತಿಳಿದಿದ್ದವರು ಬರೆಯಿರಿ.

ರಾಜರು, ರಾಜವಂಶಗಳು ಬರಬಹುದು ಹೋಗಬಹುದು. ಮುಂದಿನ ಪೀಳಿಗೆಗೆ ಅವರು ಕೊಟ್ಟಿರುವ ಇಂತಹ ಸ್ಮಾರಕಗಳಿಂದಲೇ ಅವರ ಹೆಸರು ಎಂದೆಂದಿಗೂ ನಿಲ್ಲುತ್ತದೆ. ಮುಕ್ಕಾಲುಪಾಲು ದಕ್ಷಿಣಭಾರತವನ್ನೆಲ್ಲ ತಮ್ಮಡಿಯಲ್ಲಿ ಆಳಿದ ಚಾಲುಕ್ಯರೂ ಕೊನೆಯಾದರು. ಅವರ ಜಾಗದಲ್ಲಿ ರಾಷ್ಟ್ರಕೂಟರು ನೆಲೆಯಾದರು. ಈ ವಂಶದ ಮೊದಲನೆ ಕೃಷ್ಣ, (ಶುಭತುಂಗ ಕೃಷ್ಣ, ಅಕಾಲವರ್ಷ, ಕನ್ನರ ಎಂಬ ಹೆಸರುಗಳೂ ಇದ್ದವು ಇವನಿಗೆ) ಏಲಾಪುರದಲ್ಲಿ, ಅಲ್ಲಿಯವರೆಗೆ ಯಾರೂ ಯೋಚಿಸಿಯೂ ಇಲ್ಲದಂತಹ ಏಕಶಿಲಾ ದೇವಾಲಯವನ್ನು ಯೋಜಿಸಿದ. ಆ ವೇಳೆಗಾಗಲೇ ಏಲಾಪುರಿಯಲ್ಲಿ (ಎಲ್ಲ್ಲೋರ ಎಂದು ಪ್ರಸಿಧ್ಹವಾಗಿರುವ ಈ ಊರಿಗೆ ಸ್ಥಳೀಯರು ವೇರೂಳ್ ಎಂದು ಕರೆಯುತ್ತಾರೆ) ಹಲವಾರು ಕಲ್ಲಿನಿಂದ ಕಟೆದು ಮಾಡಿದ ಗುಹಾದೇವಾಲಯಗಳಿದ್ದವು. ಕೃಷ್ಣನ ಯೋಜನೆ ಇವಕ್ಕಿಂತಲೂ ಮಹತ್ತಾಗಿತ್ತು. ಬೆಟ್ಟವೊಂದನ್ನು ಕಡಿದು, ಮೇಲಿನಿಂದ ಕಡೆಯುತ್ತಾ ಬಂದು ನಿರ್ಮಿಸುವ ಈ ಅಮೋಘ ಕಾರ್ಯು ಸುಮಾರು ಕ್ರಿ.ಶ.೭೭೦ರಲ್ಲಿ ಪ್ರಾರಂಭವಾಯಿತು. ಇದು ಪೂರ್ತಿಯಾದಾಗ ಇದರ ಸೊಬಗನ್ನು ಕಂಡ ಶಿವನೇ ಹಿಮಾಲಯದ ಕೈಲಾಸವನ್ನು ತೊರೆದು ಇಲ್ಲಿ ಬಂದು ನೆಲೆಯಾಗಿಬಿಟ್ಟ - ಅದಕ್ಕೇ ಇದಕ್ಕೆ ಕೈಲಾಸ ದೇವಾಲಯವೆಂದು ಹೆಸರೆಂದು ಶಾಸನವೊಂದು ವರ್ಣಿಸುತ್ತದೆ. ಇಂತಹ ಮಹಾನ್ ಕಲಾಕೃತಿಗೆ ಮಾತೃಕೆಯಾಗಿ ಕೃಷ್ಣ ಆಯ್ದದ್ದು, ಪಟ್ಟದಕಲ್ಲಿನ ವಿರೂಪಾಕ್ಷ ದೇವಾಲಯವನ್ನು. ಅದರ ಮೂಲ ನಕಾಶೆಯನ್ನೂ ಉಪಯೋಗಿಸಿ,ಹಿಗ್ಗಿಸಿ, ಎರಡಂತಸ್ತಿನ ದೇವಾಲಯವನ್ನಾಗಿಸಿ, ಮೇಲಿನ ತುದಿಯಿಂದ ಕೆತ್ತುತ್ತಾ ಕೆಳವರೆಗೆ ತಂದ ಆ ಶಿಲ್ಪಿಗಳ ಕಾರ್ಯಕ್ಷಮತೆಗೆ ಏನು ಹೇಳಿದರೂ ಸಾಲದು.

ಕೈಲಾಸ: ಮೇಲಿನಿಂದ ಕಂಡಂತೆ (ಚಿತ್ರ ಕೃಪೆ:http://www.cousinsmigrateurs.com/galeries/displayimage.php?album=40&pos=198&lang=english)

ಎಲ್ಲೋರದ ಕೈಲಾಸ ದೇವಾಲಯ - ಮೇಲಿನಿಂದ ನೋಟ

ಈ ದೇವಾಲಯದ ಗೋಡೆಗೋಡೆಗಳ ಮೇಲೆ ನೂರಾರು ಭಿತ್ತಿ ಚಿತ್ರಗಳಿದ್ದುದ್ದರಅ ಅವಶೇಷಗಳು ಈಗಲೂ ಕಾಣುತ್ತಿವೆ. ನಮ್ಮ ದುರಾದೃಷ್ಟಕ್ಕೆ ಯಾವುದೂ ಒಳ್ಳೆಯ ರಕ್ಷಿತ ಸ್ಥಿತಿಯಲ್ಲಿಲ್ಲ. ಈ ದೇವಾಲಯಕ್ಕೆ ಯಾವ ಚಿತ್ರವೂ ನ್ಯಾಯ ಒದಗಿಸವು ಎಂದು ನನ್ನ ಭಾವನೆ. ಆದರೂ, ಕಟ್ಟಡವನ್ನುಬೆಟ್ಟದ ಬದಿಯನ್ನು ಕಡಿದು, ಮಾಡಿರುವುದನ್ನು ಈ ಕೆಳಗಿನ ಚಿತ್ರ ತೋರಿಸುತ್ತದೆ.

ಎಲ್ಲೋರದ ಕೈಲಾಸ ದೇವಾಲಯ - ಮೇಲಿನ ಬದಿಯಿಂದ ನೋಟ

(ಕೃಪೆ:http://www.cousinsmigrateurs.com/galeries/displayimage.php?album=40&pos=198&lang=english)

ಈ ಚಿತ್ರಗಳು ವಿರೂಪಾಕ್ಷ ಮತ್ತು ಕೈಲಾಸ ದೇವಾಲಯಗಳ ಹೋಲಿಕೆಯನ್ನು ತೋರಿಸುತ್ತವೆ ಎಂದುಕೊಂಡಿದ್ದೇನೆ. ನಾನು ಕಾಂಚೀಪುರಕ್ಕೆ ಹೋದಾಗ, ರಾಜಸಿಂಹೇಶ್ವರ ದೇವಾಲಯವನ್ನು ನೋಡದೇ ಬಂದದ್ದಕ್ಕಾಗಿ, ಈಗಲೂ ನನಗೆ ಬೇಸರವಿದೆ. ಆದರೆ, ಇನ್ನೆರಡನ್ನಾದರೂ ನೋಡಿದ್ದೀನಲ್ಲ ಎಂದು ಸಮಾಧಾನ ಪಟ್ಟುಕೊಳ್ಳುತ್ತೇನೆ.

-ಹಂಸಾನಂದಿ

  • ಚರಿತ್ರೆ
  • ಚಾಲುಕ್ಯ
  • ಪಲ್ಲವ
  • ರಾಷ್ಟ್ರಕೂಟ
~.~
  • hamsanandi ರವರ ಬ್ಲಾಗ್
  • Login or register to post comments
  • 498 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿಈ ಪುಟವನ್ನು ಇ-ಮೇಯ್ಲ್ ಮಾಡಿ
  • Printer-friendly versionPrinter-friendly version
  • ನಿರ್ವಾಹಕರ ಗಮನಕ್ಕೆ ತನ್ನಿ

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
June 2, 2007 - 1:03pm — shreekant.mishrikoti

ಉ: ಕಾಂಚೀಪುರದ ರಾಜಸಿಂಹೇಶ್ವರ, ಪಟ್ಟದಕಲ್ಲಿನ ವಿರೂಪಾಕ್ಷ ಮತ್ತು ಎಲ್ಲೋರದ ಕೈಲಾಸ

shreekant.mishrikoti's picture

ಅದ್ಭುತ ಲೇಖನ,
ಧನ್ಯವಾದಗಳು.

ಭಾರತದ ಸಾಂಸ್ಕೃತಿಕ ಐಕ್ಯತೆ ಕುರಿತು ಹೊಸ ಹೊಳಹು ನೀಡಿದ್ದೀರಿ.

Quote:

ಇನ್ನೊಬ್ಬ ಕನ್ನಡಿಗ ಗೋಪಾಲನಾಯಕ ಹಿಂದೂಸ್ತಾನಿ (ಉತ್ತರಾದಿ) ಸಂಗೀತದ ಮೂಲಪುರುಷರಲ್ಲೊಬ್ಬನೆನಿಸಿಕೊಳ್ಳುತ್ತಿರಲಿಲ್ಲ;

ಈ ಗೋಪಾಲನಾಯಕನ ಕುರಿತು ಇನ್ನಷ್ಟು ವಿವರ ತಿಳಿಸುತ್ತೀರಾ ?

"ಕನ್ನಡದ ಪುಲ್ಲೆನಗೆ ಪರಮ ಪಾವನ ತುಳಸಿ"

  • Login or register to post comments
  • link
  • ನಿರ್ವಾಹಕರ ಗಮನಕ್ಕೆ ತನ್ನಿ
June 4, 2007 - 8:33am — hamsanandi

ಉ: ಕಾಂಚೀಪುರದ ರಾಜಸಿಂಹೇಶ್ವರ, ಪಟ್ಟದಕಲ್ಲಿನ ವಿರೂಪಾಕ್ಷ ಮತ್ತು ಎಲ್ಲೋರದ ಕೈಲಾಸ

hamsanandi's picture

ಶ್ರೀಕಾಂತ ಮಿಶ್ರಿಕೋಟಿಯವರೆ,

ನಿಮಗೆ ಲೇಖನ ಮೆಚ್ಚಿಗೆ ಆಗಿದ್ದು ಬಹಳ ಸಂತೋಷ.

ಗೋಪಾಲನಾಯಕನ ಬಗ್ಗೆ ನನ್ಗೆ ತಿಳಿದಿರುವ ವಿಷಯವನ್ನು ಒಮ್ಮೆ ಬರೆಯುತ್ತೇನೆ.

-ಹಂಸಾನಂದಿ

  • Login or register to post comments
  • link
  • ನಿರ್ವಾಹಕರ ಗಮನಕ್ಕೆ ತನ್ನಿ
October 11, 2007 - 5:43am — hamsanandi

ಉ: ಕಾಂಚೀಪುರದ ರಾಜಸಿಂಹೇಶ್ವರ, ಪಟ್ಟದಕಲ್ಲಿನ ವಿರೂಪಾಕ್ಷ ಮತ್ತು ಎಲ್ಲೋರದ ಕೈಲಾಸ

hamsanandi's picture

ಕಾಂಚೀಪುರದ ರಾಜಸಿಂಹೇಶ್ವರ ದೇವಾಲಯದ ಚರಿತ್ರೆಯ ಬಗ್ಗೆ ಈ ಪುಸ್ತಕದ ೩೦-೩೪ ಪುಟಗಳಲ್ಲಿ ಸ್ವಲ್ಪ ಮಾಹಿತಿ ಇದೆ. ಆಸಕ್ತರು ನೋಡಬಹುದು.

http://books.google.com/books?id=O1b1N_Dx0jsC&pg=RA1-PA2-IA7&lpg=RA1-PA2...

-ಹಂಸಾನಂದಿ

  • Login or register to post comments
  • link
  • ನಿರ್ವಾಹಕರ ಗಮನಕ್ಕೆ ತನ್ನಿ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ಬಾದಾಮಿಯಲ್ಲಿನ ಭಿತ್ತಿಚಿತ್ರ (mural)
  • ಕಾಂಚೀಪುರದ ಕೈಲಾಸನಾಥ ದೇವಾಲಯದಲ್ಲಿನ ಒಂದು ಭಿತ್ತಿ ಚಿತ್ರ
  • ಎಲ್ಲೋರದ ಕೈಲಾಸ ದೇವಾಲಯ - ಮೇಲಿನ ಬದಿಯಿಂದ ನೋಟ
  • ಎಲ್ಲೋರದ ಕೈಲಾಸ ದೇವಾಲಯ - ಮೇಲಿನಿಂದ ನೋಟ
  • ಕಾಂಚೀಪುರದ ಕೈಲಾಸನಾಥ (ರಾಜಸಿಂಹೇಶ್ವರ) ದೇವಸ್ಥಾನ
Syndicate content

ಲೇಖಕರು

hamsanandi's picture

ಪೂರ್ಣ ಹೆಸರು
ಹಂಸಾನಂದಿ

ಪರಿಚಯ

ಹೆಸರಲ್ಲೇನಿದೇ ರೀ? ನೀಲಾಂಜನ .. ರಾಮಕ್ರಿಯ .... ಹಂಸಾನಂದಿ ಯಾವ್ದೋ ಒಂದು!
ಒಬ್ಬ ಸಂಪದಿಗ - ಇನ್ನೂ ಹೆಚ್ಚಿಗೆ ಹೇಳ್ಬೇಕಾದ್ರೆ ಒಬ್ಬ ಕನ್ನಡಿಗ ಅಂದ್ರೆ ಸಾಕು. ಅಲ್ವಾ?

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ವಾಟರ್ ಪೋರ್ಟಲ್: ದಿನದ ಚಿತ್ರ

ದೋಹಿನಿ ಕುಂಡ್

ಬ್ರಜ್ ಫೌಂಡೇಶನ್ನಿನವರು ಹಲವು ಪುರಾತನ ನೀರ ಆಧಾರಗಳನ್ನು ಪುನಶ್ಚೇತನಗೊಳಿಸುವಲ್ಲಿ ಕೆಲಸ ಮಾಡಿದ್ದಾರೆ.

ಪುನಶ್ಚೇತನಗೊಳಿಸಿದ ದೋಹಿನಿ ಕುಂಡ್ ಮೇಲಿನ ಚಿತ್ರದಲ್ಲಿ.

ಚಿತ್ರ: ರಜನೀಶ್ ಬ್ರಜ್ (ಬ್ರಜ್ ಫೌಂಡೇಶನ್)

ಮತ್ತಷ್ಟು...

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಬ್ಲಾಗ್ ಬರಹಗಳು

  • ಅಪರೂಪದ ಸಿದ್ದಗಿರಿ ತೋರ್ದಾಣ (MUSEUM)
  • ಖಾಲಿ ಬಾಟಲಿ
  • ಮೌನ ಎದೆ
  • ನಾನೂ ಸಮರ್ಥನಾಗುವೆ-ಭಾಗ ೧
  • ಓದಿದ್ದು ಕೇಳಿದ್ದು ನೋಡಿದ್ದು -136 ಜಾತಿ ವ್ಯವಸ್ಥೆಯ ಅಂತ್ಯ ಸಮೀಪಿಸಿದೆ
  • ಹಂಸನಾದ
  • ತೆಂಡುಲ್ಕರ್ ಯಾಕೆ ರಿಟೈರ್ ಆಗಬಾರದು?
  • ಆಕಾಶದ ಮೋಡದಲ್ಲಿ
  • ಬರಿದಾದ ಭಾವನೆಗಳು
  • ಬರಿದಾದ ಭಾವನೆಗಳು
ಇನ್ನಷ್ಟು

ಇತ್ತೀಚಿನ ಪ್ರತಿಕ್ರಿಯೆಗಳು

  • anivaasi
    ಉ: ಮೌನ ಎದೆ
    January 9, 2009 - 2:54pm
  • asuhegde
    ಉ: ಸ್ಯಾರಿ....ಸ್ಯಾಲರಿ (ಶಾಯರಿ )
    January 9, 2009 - 2:48pm
  • kadakolla05
    ಉ: ಉದ್ದ ಕಾಲಿನ ನೊಣ ೨
    January 9, 2009 - 2:45pm
  • kadakolla05
    ಉ: ಉದ್ದ ಕಾಲಿನ ನೊಣ ೨
    January 9, 2009 - 2:43pm
  • ASHOKKUMAR
    ಉ: ಶ್ರೀಪಡ್ರೆ ಬ್ಲಾಗ್ "ಜೀವಜಲ"
    January 9, 2009 - 2:38pm
  • veeravenki
    ಉ: ಸ್ಯಾರಿ....ಸ್ಯಾಲರಿ (ಶಾಯರಿ )
    January 9, 2009 - 2:37pm
  • veeravenki
    ಉ: ಸ್ಯಾರಿ....ಸ್ಯಾಲರಿ (ಶಾಯರಿ )
    January 9, 2009 - 2:32pm
  • Rakesh Shetty
    ಉ: ಬಂಕಿಮ್ ಚಂದ್ರ ಚಟ್ಟೋಪಾಧ್ಯಾಯರ, ವಂದೇ ಮಾತರಂ, ಗೀತೆ.
    January 9, 2009 - 2:28pm
  • palachandra
    ಉ: ಉದ್ದ ಕಾಲಿನ ನೊಣ ೨
    January 9, 2009 - 2:26pm
  • asuhegde
    ಉ: ಉದ್ದ ಕಾಲಿನ ನೊಣ ೨
    January 9, 2009 - 2:24pm
ಇನ್ನಷ್ಟು
ಈಗಿನಂತೆ 13 ಸದಸ್ಯರು ಮತ್ತು 174 ಅತಿಥಿಗಳು ಆನ್ಲೈನ್ ಇರುವರು.


ಕೆಟ್ಟ ಪ್ರಪಂಚವಿದು, ಸುಟ್ಟ ಕರಿ ನರಮನಸು ।
ಬಿಟ್ಟುಬಿಡಲರಿದದನು, ಕಟ್ಟಿಕೊಳೆ ಮಷ್ಟು ।।
ಮುಷ್ಟಿ ಮುಟ್ಟದವೋಲುಪಾಯದಿಂ ನೋಡದನು ।
ಗಟ್ಟಿ ಪುರುಳೇನಿಲ್ಲ -- ಮಂಕುತಿಮ್ಮ ।।

— ಡಿ.ವಿ.ಜಿ

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments | Podcasts

separator