ನನ್ನ ಮನಸ್ಸಿನ ಅನುಭವಗಳಿಂದ ನಾನು ಬರೆಯುತ್ತೇನೆ, ಅದರೆ ಅನುಭವಗಳ ಬಗ್ಗೆ ಬರೆಯುವುದಿಲ್ಲ, ಅನುಭವಗಳಿಂದಾಗಿ ಬರೆಯುತ್ತೇನೆ.
ಸಂಪದ ಆರ್ಕೈವಿನಿಂದ
ಲೇಖಕರು
ಪೂರ್ಣ ಹೆಸರು
ಹಂಸಾನಂದಿ
ಪರಿಚಯ
ನಿಮ್ಮೆಲ್ಲರಂತೆ ನಾನೊಬ್ಬ ಕನ್ನಡಿಗ. ಇಂಗ್ಲಿಷಲ್ಲೇನಾದ್ರೂ ಗೀಚ್ಬೇಕೂನ್ಸ್ದಾಗ ಇಲ್ಬರೀತೀನ್ನೋಡಿ: http://neelanjana.wo...
ಸಂಗೀತ ನವರಾತ್ರಿ - ಆಶ್ವಯುಜ ಶುದ್ಧ ಷಷ್ಟಿ
ಆಗಲೇ ಹಬ್ಬದ ಅರ್ಧದಷ್ಟು ದಿನಗಳು ಕಳೆದಾಗಿದೆ. ಸಂಗೀತದ ವಿಷಯ ಮಾತಾಡುತ್ತ ಹೋದರೆ, ನನಗೆ ನಿಲ್ಲಿಸುವುದಕ್ಕೇ ತಿಳಿಯುವುದಿಲ್ಲ ಅನ್ನಿಸುತ್ತೆ! ಯಾವಾಗಲೂ ಯಾವುದರ ಬಗ್ಗೆ ಬರೆಯಬೇಕೆಂದೇ ತಿಳಿಯದೇ ಹೋಗುತ್ತೆ. ಏಕಂದರೆ ಹೇಳಿದಷ್ಟೂ ಮುಗಿಯುವಂತಿಲ್ಲವಲ್ಲ ಸಂಗೀತ ಸಾಗರ?
ಚಲಿಸದ ಸಾಗರ ಅಂತೊಂದು ಸಿನೆಮಾ ಬಂದಿತ್ತು - ನಾನು ನೋಡಿರಲಿಲ್ಲ. ಬಹುಶಃ ನದಿಗಳು ಹರಿಯುತ್ತವೆ, ಸಮುದ್ರ ಇದ್ದಲ್ಲೇ ಇರುತ್ತೆ ಎನ್ನುವುದು ಅದರ ಒಳಗಿನ ಭಾವ ಇರಬಹುದು. ಆದರೆ, ಈ ಸಂಗೀತ ಸಾಗರ ನಿಜವಾಗಿ ಬದಲಾಗುತ್ತ ಹೋಗುತ್ತಿರುತ್ತದೆ. ಹಾಗಾಗಿ ನಮ್ಮ ಸಂಗೀತದ ಕೆಲವು ಅಂಶಗಳು ಸಾವಿರಾರು ವರ್ಷಗಳಿಂದ ಹಾಗೇ ಉಳಿದಿವೆಯಾದರೂ, ಮತ್ತೆ ಕೆಲವು ವಿಷಯಗಳು ಬದಲಾಗುತ್ತ ಹೋಗಿವೆ ಅನ್ನುವುದು ಬಲ್ಲವರ ಮಾತು.
ಸಂಗೀತದಲ್ಲಿ ಒಂದು ರಾಗ ಕೇಳಲು ಹಿತವಾಗಿರಬೇಕಾದರೆ, ಐದು ಸ್ವರಗಳಾದರೂ ಇರಬೇಕು - ಇಲ್ಲದಿದ್ದರೆ ಅದು ಸೊಗಸುವುದಿಲ್ಲ ಅನ್ನುವ ನಂಬಿಕೆ ಇತ್ತು. ಅದನ್ನು ಬುಡಮೇಲು ಮಾಡಿದವರು ೨೦ ನೇ ಶತಮಾನದ ಒಬ್ಬ ಮಹಾನ್ ಕಲಾವಿದರಾದ ಡಾ.ಬಾಲಮುರಳಿಕೃಷ್ಣ ಅವರು. ಒಮ್ಮೆ ಯಾವುದೋ ಲಹರಿಯಲ್ಲಿ ಹಾಡಿಕೊಳ್ಳುತ್ತಿದ್ದರಂತೆ - ಆಮೇಲೆ ಗಮನಿಸಿ ನೋಡಲು ಅದರಲ್ಲಿ ನಾಕೇ ಸ್ವರಗಳಿದ್ದುದ್ದನ್ನು ಕಂಡು, ಆ ರಾಗಕ್ಕೆ ಲವಂಗಿ ಎನ್ನುವ ಹೆಸರಿಟ್ಟು, ಒಂದು ಕೃತಿಯನ್ನು ರಚಿಸಿದರು. ಆನಂತರ, ಇದೇ ದಾರಿಯಲ್ಲಿ ಹೆಚ್ಚು ಪ್ರಯೋಗಗಳನ್ನು ಮಾಡಿ, ಇನ್ನೂ ಕೆಲವು ಅದೇ ಬಗೆಯ ರಾಗಗಳನ್ನೂ, ಅವುಗಳಲ್ಲಿ ರಚನೆಯನ್ನೂ ಮಾಡಿದ್ದಾರೆ.
ಇವತ್ತು ನಾನು ನಿಮಗೆ ಕೇಳಿಸುವುದು ಆ ನಾಕು ಸ್ವರಗಳ ಮೊದಲ ರಾಗ - ಲವಂಗಿಯನ್ನೇ. ಇದರಲ್ಲಿ ಬರುವ ಸ್ವರಗಳನ್ನು ಸಂಗೀತ ಪರಿಭಾಷೆಯಲ್ಲಿ ಹೀಗೆ ಸೂಚಿಸಬಹುದು.
ಸ ರಿ೧ ಮ೧ ದ೧ ಸ - ಸ ದ೧ ಮ೧ ರಿ೨ ಸ
ಈ ರಚನೆ ಸಂಸ್ಕೃತದಲ್ಲಿದ್ದು ಸಾಹಿತ್ಯ ಹೀಗಿದೆ:
ಓಂಕಾರಾಕಾರಿಣಿ ಮದಹಂಕಾರವಾರಿಣಿ ಅವತು ಮಾಂ ||ಓಂಕಾರಾಕಾರಿಣೀ||
ಹೂಂಕಾರಮಾತ್ರ ಶತ್ರು ದಮನೀ ಹ್ರೀಂಕಾರರೂಪಿಣೀ ರುದ್ರಾಣಿ ||ಓಂಕಾರಾಕಾರಿಣೀ||
ಮುರಳೀ ಸುಧಾಲಹರೀ ವಿಹಾರಿ ಪುರರಿಪು ಪ್ರೇಮಿತ ತ್ರಿಪುರಸುಂದರಿ
ಕರುಣಾರಸಭರಿತ ಲಲಿತಲವಂಗಿ ವರದಾ ಅಭಯದಾ ಸಕಲಶುಭಾಂಗಿ ||ಓಂಕಾರಾಕಾರಿಣೀ||
ಈಗ ಈ ರಚನೆಯನ್ನು ಬಾಲಮುರಳಿಕೃಷ್ಣ ಅವರ ಶಿಷ್ಯರಾದ ರಾಮವರ್ಮ ( ಇವರು ತಿರುವನಂತಪುರದ ಅರಸುಮನೆತನಕ್ಕೆ ಸೇರಿದವರು) ಅವರ ಕಂಠದಲ್ಲಿ ಕೇಳಿ.ರಾಮವರ್ಮ ಅವರು ವೀಣೆ ನುಡಿಸುವುದರಲ್ಲೂ ಪ್ರವೀಣರು.
ಈ ರಾಗದಲ್ಲಿ ಒಂದು ಕಡೆ ರೌದ್ರಭಾವವೂ ಇನ್ನೊಂದು ಕಡೆ ಕರುಣಾ, ಶಾಂತರಸವೂ ಸಮ್ಮಿಲಿತವಾದಂತಿವೆ. ಅದಕ್ಕೆ ತಕ್ಕಂತೆ ಸಾಹಿತ್ಯದಲ್ಲೂ ಮೊದಲ ಭಾವದಲ್ಲಿ ದೇವಿ ತನ್ನ ಹೂಂಕಾರದಿಂದ ಹೇಗೆ ಶತ್ರುಗನ್ನು ನಾಶಮಾಡುತ್ತಾಳೆ ಎಂದು ಹೇಳ್ದರೆ, ಇನ್ನೊಂದುಕಡೆ ಲಲಿತ ಲವಂಗೀರೂಪಿಯಾದ, ಕೇಳಿದ್ದನ್ನು ಕೊಡಬಲ್ಲ, ಭಯದೂರಮಾಡುವ ಆ ಶಿವೆಯು ಹೇಗೆ ಮುರಳೀಗಾನವನ್ನು ಕೇಳುತ್ತ ನಲಿಯುತ್ತಾಳೆ ಎನ್ನುವುದನ್ನು ಚರಣದಲ್ಲಿ ಹೇಳಲಾಗಿದೆ.
ಅಂದಹಾಗೆ ಮುರಳೀ ಎನ್ನುವುದು ಬಾಲಮುರಳಿಕೃಷ್ಣ ಅವರ ಅಂಕಿತ. ಮತ್ತೆನ್ನೊಂದು ವಿಶೇಷ ಏನು ಗೊತ್ತೇ? ಇಲ್ಲಿರುವ ಕಚೇರಿ ನಡೆದಿದ್ದು ರಾಷ್ಟ್ರಪತಿ ಭವನದಲ್ಲಿ!
-ಹಂಸಾನಂದಿ
- hamsanandi's blog
- Login or register to post comments
- 589 ಹಿಟ್ಸ್
ಈ ಪುಟವನ್ನು ಇ-ಮೇಯ್ಲ್ ಮಾಡಿ
Printer-friendly version


RSS:
ಪ್ರತಿಕ್ರಿಯೆಗಳು
ಉ: ಸಂಗೀತ ನವರಾತ್ರಿ - ಆಶ್ವಯುಜ ಶುದ್ಧ ಷಷ್ಟಿ
ಪ್ರಿಯ ಹಂಸಾನಂದಿಯವರೆ,
ಬಾಲಮುರಳಿಕೃಷ್ಣ ಅವರು ಸೃಷ್ಟಿಸಿದ ಈ ಲವಂಗಿ ರಾಗದ ಬಗ್ಗೆ ಸುಮಾರು 35 ವರ್ಷಗಳ ಕೆಳಗೆ ಅಥವಾ ಇನ್ನು ಮುಂಚೆನೋ ಗೊತ್ತಿಲ್ಲ. ಬಾಲಮುರಳಿ ಕೃಷ್ಣ ಮತ್ತು ವೀಣೆ ವಿದ್ವಾನ್ ಎಸ್. ಬಾಲಚಂದರ್ ಅವರ ನಡುವೆ ದೊಡ್ಡ ಚರ್ಚೆಯೇ ನಡೆದಿತ್ತು. ನೀವು ಬರೆದಿರುವಂತೆ ಕಡೇಪಕ್ಷ ಒಂದು ಜನ್ಯ ರಾಗಕ್ಕೆ 5 ಸ್ವರಗಳಾದರೂ ಇದ್ದರೆ ಮಾತ್ರ ಕೇಳಲು ಹಿತ ಎಂಬ ವಾದ ಎಸ್. ಬಾಲಚಂದರ್ ಅವರದ್ದು. ಹೇಗೆ ವಾದ ಮುಂದುವರೆಸಿದರೋ ಕೊನೆಯಲ್ಲಿ ಅದು ಹೇಗೆ ನಿಂತಿತೋ ನನಗೆ ಗೊತ್ತಿಲ್ಲ. ಈ ವಾದ ವಿವಾದಗಳನ್ನು ಓದಿದ ನೆನಪು ಮಾತ್ರ ನನ್ನಲ್ಲಿ ಉಳಿದಿದೆ. ಇನ್ನು ಸ್ಲೂಲ್ ವಿದ್ಯಾರ್ಥಿನಿಯಾಗಿದ್ದ ನನಗೆ ಅದರ ಬಗ್ಗೆ ಹೆಚ್ಚು ತಿಳಿವು ಇಲ್ಲದ ಕಾರಣವೋ ಏನೋ ಮರೆತು ಹೋಗಿದೆ. ಆದರೆ ಇವತ್ತು ಈ ಲವಂಗಿ ರಾಗ ಕೇಳಿದಾಗ ಅಂತೂ ಬಾಲಮುರಳಿಯವರು ಇಂತಹಾ ರಾಗಗಳನ್ನು ಬೆಳಕಿಗೆ ತರುವಲ್ಲಿ ಸಾಧನೆಗೈದಿದ್ದಾರೆ ಎಂಬ ವಿಷಯ ತಿಳಿಯಿತು. ಉತ್ತಮವಾದ ಗಾನಾಮೃತ ನೀಡಿದ್ದಕ್ಕೆ ಧನ್ಯವಾದಗಳು.
ಶೈಲಾಸ್ವಾಮಿ
ಉ: ಸಂಗೀತ ನವರಾತ್ರಿ - ಆಶ್ವಯುಜ ಶುದ್ಧ ಷಷ್ಟಿ
ರಾಮವರ್ಮರು ಹಾಡುಗಾರಿಕೆಯನ್ನು ವೀಕ್ಷಿಸುವುದೂ ಒಂದು ಸೊಬಗು.
ನೀವು ಹಬ್ಬದಡುಗೆಯನ್ನು ಬಡಿಸುತ್ತಿರುವಾಗ ಇಲ್ಲವೆನ್ನಲಾಗದೆ ಉಂಡು, ಇನ್ನು ದಿನನಿತ್ಯವೂ ಇಂತಹ ಊಟವೇ ಬೇಕು ಎನ್ನುವಂತಾಗುವುದೋ ಎಂದು ನನ್ನ ಚಿಂತೆ :)
*ಅಶೋಕ್
ಉ: ಸಂಗೀತ ನವರಾತ್ರಿ - ಆಶ್ವಯುಜ ಶುದ್ಧ ಷಷ್ಟಿ
ಹಂಸಾನಂದಿಯವರೆ,
ಲವಂಗಿ ರಾಗದಲ್ಲಿನ ರುದ್ರ ಹಾಗೂ ಕರುಣಾ ಭಾವಗಳೆರಡನ್ನೂ ಶ್ರೀ ರಾಮವರ್ಮ ಅವರು ಬಹಳ ಚೆನ್ನಾಗಿ ರೂಪಿಸಿದ್ದಾರೆ. ಈ ಕಛೇರಿ ರಾಷ್ಟ್ರಪತಿ ಭವನದಲ್ಲಿ ನಡೆಯಿತು ಅಂದರಲ್ಲಾ, ಅದು ಯಾರ ಸಮಯದಲ್ಲಿ ಅಂತ ಕೇಳಬಹುದಾ?
ಶಾಮಲ
ಉ: ಸಂಗೀತ ನವರಾತ್ರಿ - ಆಶ್ವಯುಜ ಶುದ್ಧ ಷಷ್ಟಿ
ಅದು ಅಬ್ದುಲ್ ಕಲಾಮ್ ಅವರು ರಾಷ್ಟ್ರಪತಿಯಾಗಿದ್ದ ಸಮಯದ ಕಚೇರಿ. ನೀವು ಯುಟ್ಯೂಬ್ ನಲ್ಲಿ ಹೋಗಿ ಹುಡುಕಿದರೆ ಆ ಕಚೇರಿಯ ಉಳಿದ ಭಾಗಗಳೂ ಸಿಗುತ್ತವೆ. ಕೆಲವು ದೃಶ್ಯಗಳಲ್ಲಿ ಕೇಳುಗರ ನಡುವೆ ಅಬ್ದುಲ್ ಕಲಾಮ್ ಕೂಡ ಕಾಣುತ್ತಾರೆ.
-ಹಂಸಾನಂದಿ
ಹರಿದಾಸ ಸಂಪದ:- http://haridasa.in/
ಉ: ಸಂಗೀತ ನವರಾತ್ರಿ - ಆಶ್ವಯುಜ ಶುದ್ಧ ಷಷ್ಟಿ
ಆಹಾ, ನನ್ನ ಊಹೆ ನಿಜವಾಯಿತು. ಮಾನ್ಯ ಕಲಾಮ್ ಅವರಿಗೆ ಸಂಗೀತದಲ್ಲಿರುವ ಅಭಿರುಚಿ, ಪಾಂಡಿತ್ಯ ಎಲ್ಲರಿಗೂ ತಿಳಿದಿದ್ದೆ.
ಅಪೂರ್ವ ರಾಗದಲ್ಲಿರುವ ಈ ಕೃತಿಯನ್ನ ಪೂರ್ತಿ ಕೇಳಲೇ ಬೇಕು.
ನನ್ನ ಜಡ (idle) ಕುತೂಹಲವನ್ನು ತಣಿಸಿದಕ್ಕಾಗಿ ನಿಮಗೆ ಮತ್ತೊಮ್ಮೆ ಧನ್ಯವಾದಗಳು ಹಂಸಾನಂದಿಯವರೆ.
ಶಾಮಲ