ನನ್ನ ಮನಸ್ಸಿನ ಅನುಭವಗಳಿಂದ ನಾನು ಬರೆಯುತ್ತೇನೆ, ಅದರೆ ಅನುಭವಗಳ ಬಗ್ಗೆ ಬರೆಯುವುದಿಲ್ಲ, ಅನುಭವಗಳಿಂದಾಗಿ ಬರೆಯುತ್ತೇನೆ.

— ಜಾನ್ ಅಶ್‌ಬೆರಿ

ಸಂಪದ ಆರ್ಕೈವಿನಿಂದ

ಲೇಖಕರು

hamsanandi's picture

ಪೂರ್ಣ ಹೆಸರು
ಹಂಸಾನಂದಿ

ಪರಿಚಯ

ನಿಮ್ಮೆಲ್ಲರಂತೆ ನಾನೊಬ್ಬ ಕನ್ನಡಿಗ. ಇಂಗ್ಲಿಷಲ್ಲೇನಾದ್ರೂ ಗೀಚ್ಬೇಕೂನ್ಸ್ದಾಗ ಇಲ್ಬರೀತೀನ್ನೋಡಿ: http://neelanjana.wo...

ಸಂಗೀತ ನವರಾತ್ರಿ - ಆಶ್ವಯುಜ ಶುದ್ಧ ಅಷ್ಟಮಿ

ನವರಾತ್ರಿಯ ಎಂಟನೇ ದಿನ ದುರ್ಗಾಷ್ಟಮಿ. ದುರ್ಗಿ ಎಂದರೇನು? ಕಾಳಿ ಎಂದರೇನು? ಗೌರಿ ಎಂದರೇನು? ಸರ್ವದೇವ ನಮಸ್ಕಾರಃ ಕೇಶವಂ ಪ್ರತಿ ಗಚ್ಛತಿ ಎನ್ನುವ ಭಾವನೆ ನಮಗಿದ್ದರೂ ಕೂಡ ಅದೇನೋ ನವರಾತ್ರಿಯ ಏಳನೇ ದಿನ ಸರಸ್ವತಿಗೂ, ಎಂಟನೇ ದಿನ ದುರ್ಗಿಗೂ, ಒಂಬತ್ತು ಹತ್ತನೇ ದಿನಗಳು ಚಾಮುಂಡಿಗೂ ಇರುವುದು ಹಳೇ ಮೈಸೂರಿನ ಸಂಪ್ರದಾಯವಿರಬಹುದು. ದುರ್ಗಾಷ್ಟಮಿಯ ದಿನ ಮನೆ ಚಿಕ್ಕ ಹುಡುಗಿಯರನ್ನು ಕರೆದು ಅವರನ್ನಾದರಿಸುವ ಸಂಪ್ರದಾಯವೂ ಎಷ್ಟೋ ಕುಟುಂಬಗಳಲ್ಲಿದೆ.

ನೆನ್ನೆ ಶೃಂಗೇರಿ ಶಾರದೆಯ ಮೇಲೆ ಒಂದು ಕನ್ನಡದಲ್ಲಿರುವ ಹಾಡನ್ನು ಕೇಳಿಸಿದ್ದೆ. ಹೇಗಿದ್ದರೂ ಈಗ ನವರಾತ್ರಿಯಲ್ಲವೇ, ಅದಕ್ಕೆ ಇವತ್ತು ’ನವರಸ’ಕನ್ನಡದ ಒಂದು ಹಾಡನ್ನು ಕೇಳಿಸೋಣ ಎಂದುಕೊಂಡೆ :). ಹೌದು, ನವರಸ ಕನ್ನಡ ಅನ್ನುವುದೊಂದು ರಾಗದ ಹೆಸರು. 

ಈ ರಚನೆ ಮುತ್ತಯ್ಯ ಭಾಗವತರದ್ದು. ನವರಾತ್ರಿಯ ಮೊದಲ ದಿನವೇ ಇವರದೊಂದು ದರು ವರ್ಣವನ್ನು ಕೇಳಿಸಿದ್ದೆನಲ್ಲ? ನೆನಪಿರಬಹುದು.

ಈ ನವರಸಕನ್ನಡ ರಾಗದ ಕೃತಿಯ ಸಾಹಿತ್ಯ ಕನ್ನಡದಲ್ಲಿದೆ.

ದುರ್ಗಾದೇವಿ ದುರಿತನಿವಾರಿಣಿ ||ಪಲ್ಲವಿ||

ಸ್ವರ್ಗಾಪವರ್ಗ ಸೌಖ್ಯದಾಯಿನಿ ಸುರೇಶಪಾಲಿನಿ ಸಲಹು ಜನನಿ || ಅನುಪಲ್ಲವಿ||

ಪ್ರಾಣಾಗ್ನಿ ಸಂಯೋಗದಿ ಜನಿಸಿದ ಪ್ರಣವನಾದ ಸಪ್ತ ಸ್ವರ ರೂಪಿಣಿ

ವೀಣಾದಿ ವಾದ್ಯ ನೃತ್ಯ ಗಾನ ವಿನೋದಿನಿ ಹರಿಕೇಶ ಭಾಮಿನಿ || ಚರಣ||

ಅಂದಹಾಗೆ, ಮುತ್ತಯ್ಯ ಭಾಗವತರ ಕನ್ನಡ ರಚನೆಗಳಿಗೆ ಸಾಹಿತ್ಯವನ್ನು ಬರೆದವರು ಮೈಸೂರಿನ ದೇವೋತ್ತಮ ಜೋಯಿಸರು. ಈ ಹಾಡಿನಲ್ಲಿ ದುರ್ಗಿಯನ್ನು ಬಂದ ಕಷ್ಟಗಳನ್ನು ಕಳೆಯುವವಳೆಂದೂ, ಓಂಕಾರರೂಪಿಯೆಂದೂ, ಸಪ್ತಸ್ವರಗಳ ರೂಪದವಳೆಂದೂ, ವೀಣೆ ಮೊದಲಾದ ವಾದ್ಯಗಳ, ಮತ್ತು ಹಾಡು ನೃತ್ಯಳನ್ನು ಕೇಳಿ ನಲಿಯುವವಳೆಂದೂ ಹೊಗಳುತ್ತಾ, ಎಲ್ಲರನ್ನೂ ಸಲಹಬೇಕೆಂದು ಕೋರುತ್ತಾರೆ.

ಈ ರಚನೆಯನ್ನು ನಿಶಾ ರಾಜಗೋಪಾಲ್  ಅವರ ಕಂಠದಲ್ಲಿ ಕೇಳಲು ಕೆಳಗಿನ ಕೊಂಡಿಯನ್ನು ಚಿಟುಕಿಸಿ. ಕೃಪೆ: ಸಂಗೀತಪ್ರಿಯ.ಆರ್ಗ್

ದುರ್ಗಾದೇವಿ ದುರಿತ ನಿವಾರಿಣಿ - ರಾಗ ನವರಸ ಕನ್ನಡ

-ಹಂಸಾನಂದಿ

 

 

 

 

No votes yet

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.

ಉ: ಸಂಗೀತ ನವರಾತ್ರಿ - ಆಶ್ವಯುಜ ಶುದ್ಧ ಅಷ್ಟಮಿ

shylaswamy's picture

ಪ್ರಿಯ ಹಂಸಾನಂದಿಯವರೆ,
ನನಗೆ ಈಗ ಒಂದೇ ಚಿಂತೆ ಎಂದರೆ ನವರಾತ್ರಿಗಳಲ್ಲಿ ಎಂಟು ದಿನಗಳು ಕಳೆದೇ ಹೋಯಿತಲ್ಲ ಎಂಬುದೇ ಆಗಿದೆ. ನವರಾತ್ರಿಗಳು ಎಂದು ಹೇಳಿದರೂ ದಶರಾತ್ರಿಗಳ ಹಬ್ಬ ತಾನೆ ಇದು? ನಾಡಿದ್ದು ನಮಗೆ ಹಬ್ಬದೂಟ ಸಿಗುತ್ತದೆ ಅಲ್ಲವೇ? ದಯವಿಟ್ಟು ನಂತರವೂ ಬೇರೆ ಏನಾದರೂ ಥೀಂ ಇಟ್ಟುಕೊಂಡು ನಮಗೆ ನೀವು ರಸದೌತನ ನೀಡುತ್ತಿರಿ. ಧನ್ಯವಾದಗಳೊಂದಿಗೆ,
ಶೈಲಾಸ್ವಾಮಿ

ಉ: ಸಂಗೀತ ನವರಾತ್ರಿ - ಆಶ್ವಯುಜ ಶುದ್ಧ ಅಷ್ಟಮಿ

hamsanandi's picture

ನವರಾತ್ರಿ ಮುಗಿದಿದೆ. ಹಾಗೇ ಹತ್ತು ದಿನಗಳ ಸರಣಿಯೂ ಕೂಡ. ಆದರೇನಂತೆ, ನನಗೆ ಸಮಯವಾದಾಗಲೆಲ್ಲ ನನಗೆ ಹಿಡಿಸುವ ವಿಷಯಗಳ ಬಗ್ಗೆ ಬರೆಯುತ್ತಿರುವುದನ್ನು ನಾನು ತಪ್ಪಿಸುವುದಿಲ್ಲ :)

ನಿಮ್ಮ ಪ್ರೋತ್ಸಾಹಕ್ಕೆ ಧನ್ಯವಾದಗಳು.

-ಹಂಸಾನಂದಿ
ಹರಿದಾಸ ಸಂಪದ:- http://haridasa.in/

ಉ: ಸಂಗೀತ ನವರಾತ್ರಿ - ಆಶ್ವಯುಜ ಶುದ್ಧ ಅಷ್ಟಮಿ

mahesha's picture

ನಿಮ್ ಬರಹಗಳಿಗೆ ನನ್ ನಂನಿ...