ಹಂಸ ನಾದ
ಹಂಸ ನುಡಿದರೆ, ಹಂಸನಾದ!
ಚಾಣಕ್ಯ ನೀತಿ
ಚಾಣಕ್ಯ ಪಂಡಿತನ ಚಾಣಕ್ಯ ನೀತಿ ದರ್ಪಣ ಎಂಬ ಪುಸ್ತಕದಿಂದ ನನಗೆ ಹಿಡಿಸಿದ ನಾಲ್ಕು ಸುಭಾಷಿತಗಳನ್ನು ಇಲ್ಲಿ ಕನ್ನಡಕ್ಕೆ ತಂದಿದ್ದೇನೆ.
ಈ ಚಾಣಕ್ಯ ಪಂಡಿತ ಅರ್ಥಶಾಸ್ತ್ರವನ್ನು ಬರೆದ ಕೌಟಿಲ್ಯನೇ (ಚಂದ್ರಗುಪ್ತನ ಗುರು, ಮಾರ್ಗದರ್ಶಿ), ಅಥವಾ ಬೇರೊಬ್ಬನೇ ಎಂಬುದು ನನಗೆ ತಿಳಿದಿಲ್ಲ.
ಮೂಲವನ್ನೂ ಇಲ್ಲೇ ಬರೆದಿದ್ದೇನೆ.
ಶೈಲೇ ಶೈಲೇ ಚ ಮಾಣಿಕ್ಯಂ ಮೌಕ್ತಿಕಂ* ನ ಗಜೇ ಗಜೇ
ಸಾಧವೋ ನಹಿ ಸರ್ವತ್ರ ಚಂದನಂ ನ ವನೇ ವನೇ
ಗಿರಿಬೆಟ್ಟಗಳಲೆಲ್ಲ ದೊರೆವುದೆ ಮಾಣಿಕ್ಯ?
ಎಲ್ಲ ಚಿಪ್ಪಿನಲು ಸಿಗುವುದೆ ಮುತ್ತುಗಳು ?
ಕಾಡುಕಾಡಲ್ಲೆಲ್ಲ ಇವೆಯೆ ಗಂಧದ ಮರವು?
ಒಳ್ಳೆಯ ಜನರೆಲ್ಲೆಲ್ಲೂ ಹೇಗೆ ದೊರೆತಾರು?
ಅತಿರೂಪೇಣ ವ ಸೀತಾ ಅತಿ ಗರ್ವೇಣ ರಾವಣಃ
ಅತಿ ದಾನಾತ್ ಬಲಿರ್ಬದ್ಧೋ ಅತಿ ಸರ್ವತ್ರ ವರ್ಜಯೇತ್
ರೂಪ ಹೆಚ್ಚಾಗಿ ಕೆಟ್ಟಳು ಸೀತೆ
ರಾವಣ ಕೆಟ್ಟ ಬಲುಗರುವದಲಿ
ಅತಿ ದಾನದಿ ಬಿದ್ದನು ಬಲಿಯು
ಅತಿಯನದಕ್ಕೇ ಬಿಟ್ಟುಬಿಡು !
ಏಕೇನ ಶುಷ್ಕ ವೃಕ್ಷೇಣ ದಹ್ಯಮಾನೇನ ವಹ್ನಿನಾ
ದಹ್ಯತೇ ತದ್ವನಂ ಸರ್ವಂ ಕುಪುತ್ರೇಣ ಕುಲಂ ಯಥಾ
ಹತ್ತಿದರೊಂದು ಒಣಮರ
ಸುಟ್ಟುಹೋಗದೇ ಪೂರ್ತಿ ವನ?
ಕೆಟ್ಟ ಮಗನು ಒಬ್ಬನಿರಲು
ಸುಡನೇ ಅವನು ಮನೆತನ?
ಪುಷ್ಪೇ ಗಂಧಂ ತಿಲೇ ತೈಲಂ ಕಾಷ್ಟೇSಗ್ನಿಂ ಪಯಸಿ ಘೃತಂ
ಇಕ್ಷೌ ಗೂಡಮ್ ತಥಾ ದೇಹೇ ಪಶ್ಯಾತ್ಮಾನಂ ವಿವೇಕತಃ
ಹೂವಲಿ ಪರಿಮಳ ಎಳ್ಳಿನಲಿ ಎಣ್ಣೆಯು
ಸೌದೆಯಲಿ ಬೆಂಕಿ ಹಾಲಿನಲಿ ಬೆಣ್ಣೆಯು
ಕಬ್ಬಿನಲಿ ಬೆಲ್ಲವು ಕಾಣದಡಗಿರುವಂತೆ
ಅಡಗಿದೆ ದೇಹದೊಳ್ ಆತ್ಮವದು
(ಆನೆಯಲ್ಲ್ಲಿ ಮುತ್ತು ದೊರೆಯುವುದು ಕವಿಸಮಯವೆಂದು ನಾನು ಅದನ್ನು ಕಪ್ಪೆಚಿಪ್ಪಾಗಿ ಬದಲಾಯಿಸಿದ್ದೆ;
ಆದರೆ, ವಿಕಿಪಿಡಿಯ ಮಾಹಿತಿ ಪ್ರಕಾರ ಆನೆಯಲ್ಲೂ ಮುತ್ತು ಸಿಗುವುದು ಉಂಟಂತೆ! ಹೇಗೆ ಎಂದು ನಾನರಿಯೆ
http://en.wikipedia.org/wiki/Nine_Pearls )
- ಹಂಸಾನಂದಿ

- hamsanandi ರವರ ಬ್ಲಾಗ್
- Login or register to post comments
- 408 hits
- Email this blog





RSS:
ಪ್ರತಿಕ್ರಿಯೆಗಳು
ಉ: ಚಾಣಕ್ಯ ನೀತಿ
ಹಂಸಾನಂದಿ, ನಿಮ್ಮ ಪ್ರತಿ ಬರಹದಲ್ಲಿಯೂ ಹೊಸ ವಿಷಯಗಳ ದಾಳ(ಪಾಯಿಂಟರ್) ಕೊಡುತ್ತಲೇ ಇದ್ದೀರಿ. ನಿಮ್ಮ ಪ್ರಯತ್ನಕ್ಕೆ ತುಂಬು ನನ್ನಿ. ಈ ಮೇಲಿನ ಕನ್ನಡಿಕೆ ಹುರುಪಿನಿಂದ ಕೂಡಿದೆ. ಒಂದೇ ಒಂದು ಮಾತೆಂದರೆ ಈ ಕೆಳಗಿನ ವಾಕ್ಯವನ್ನು ಬರಮಾಡಿಕೊಳ್ಳಲು ಮನಸ್ಸು ಹಿಂಜರಿಯುತ್ತಿದೆ.
ಇಲ್ಲಿ, ಸೀತೆ ಅಂತಲ್ಲ, ಯಾವುದೇ ಹೆಣ್ಣಿದ್ದರೂ ಈ ವಾಕ್ಯವನ್ನು ಕನ್ನಡದಲ್ಲಿ ಓದುವುದಕ್ಕೆ ತುಸು ಹಿಂಜರಿಕೆ.
ಒಂದು ಮಾತು, ನೈನ್ ಪರ್ಲ್ ದಾಳ ತುಂಬಾ ಉಪಯೋಗಕ್ಕೆ ಬಂತು
ಉ: ಚಾಣಕ್ಯ ನೀತಿ
ಹಂಸಾನಂದಿ ಅಯ್ಯರೇ, ತುಳಿಲು ( ಶರಣು )!
ನಿಂಮೀ ಕನ್ನಡಯಿಸಿಕೆಗಳು ಬಲು ಚಂನಾಗಿ ಮೂಡಿ ಬಂದಿವೆ. ನನಗೆ ಬಲು ಹಿಡಿಸಿತು.
ದಿಟವಾಗಲೂ ನಿಮ್ಮ ಸಕ್ಕದ, ಕನ್ನಡದ ಬಲ್ಮೆ ಮೇಲ್ಮಟ್ಟದ್ದು. ತುಂಬ ಚೊಕ್ಕವಾಗಿ ಒರೆಗಳನ್ನು ಕೂಡಿಸಿ, ಪೂಣಿಸಿದ್ದೀರಿ.
ಹೀಗೆ ಬರೆದು ನಮಗೆ ಅರಿವನ್ನು ಅರುಹುತ್ತಿರಿ.
ನಮಗೆ ಈ ಮುತ್ತುಗಳ ಕಾಣ್ಪು ದಯಪಾಲಿಸಿದಕ್ಕೆ ಹೆನಂನಿ( ಹಿರಿನಂನಿ ).
ಆನೆ ಮತ್ತು ಮತ್ತು ಬಗ್ಗೆ
ನಾಗಮಣಿ = ಆನೆಮುತ್ತು, ಹಾವಮತ್ತು, ಇರಡೂ ಸರಿ.
====================================
ತಿಳಿದಷ್ಟು ತಿಳಿಯಾಗುವುದು ತಿಳಿವು !
ಉ: ಚಾಣಕ್ಯ ನೀತಿ
ಹಂಸಾನಂದಿ,
"ಹತ್ತಿದರೊಂದು ಒಣಮರಸುಟ್ಟುಹೋಗದೇ ಪೂರ್ತಿ ವನ?ಕೆಟ್ಟ ಮಗನು ಒಬ್ಬನಿರಲು ಸುಡನೇ ಅವನು ಮನೆತನ?" ಇದು ಬಲು ಚೆನ್ನಾಗಿ ಪೋಣಿಸಿದ್ದೀರಿ.
ಸಕ್ಕದದಲ್ಲಿರುವುದು ತಲೆ-ಬುಡ ಅರ್ತ ಆಗಲಿಲ್ಲ ಆದರೆ ಕನ್ನಡದಲ್ಲಿರುವುದು ತಿಳಿಯಾಗಿ ತಲೆಗಿಳಿಯಿತು.
ಪರಿಮಳ = ಕಂಪು ಆಗಬಹುದು ಅಲ್ವೆ ?
ವನ = ಬನ ಆಗಬಹುದು ಅಲ್ವೆ ?
ಉ: ಚಾಣಕ್ಯ ನೀತಿ
"ಹತ್ತಿದರೊಂದು ಒಣಮರಸುಟ್ಟುಹೋಗದೇ ಪೂರ್ತಿ ವನ?ಕೆಟ್ಟ ಮಗನು ಒಬ್ಬನಿರಲು ಸುಡನೇ ಅವನು ಮನೆತನ?" ಇದು ಬಲು ಚೆನ್ನಾಗಿ ಪೋಣಿಸಿದ್ದೀರಿ.
ಸಕ್ಕದದಲ್ಲಿರುವುದು ತಲೆ-ಬುಡ ಅರ್ತ ಆಗಲಿಲ್ಲ ಆದರೆ ಕನ್ನಡದಲ್ಲಿರುವುದು ತಿಳಿಯಾಗಿ ತಲೆಗಿಳಿಯಿತು.
ಪರಿಮಳ = ಕಂಪು ಆಗಬಹುದು ಅಲ್ವೆ ?
ವನ = ಬನ ಆಗಬಹುದು ಅಲ್ವೆ ?
ವೈಭವರೆ, ನಿಮಗೆ ಹಿಡಿಸಿದ್ದು ಬಹಳ ಸಂತೋಷ ನನಗೆ. ನೀವು ಕೊಟ್ಟ ಪದಗಳನ್ನೂ ಖಂಡಿತ ಬಳಸಬಹುದು.
ಸಂಸ್ಕೃತದ ವಾಕ್ಯ ರಚನೆಯೂ ಕನ್ನಡದ ವಾಕ್ಯರಚನೆಯೂ ಬೇರೆಬೇರೆ ತರಹ ಆದ್ದರಿಂದ, ನೇರವಾದ ಅನುವಾದ ಎಷ್ಟೋ ಬಾರಿ ಆಗುವುದಿಲ್ಲ, ಮತ್ತೆ ಹಾಗೇ ಅರ್ಥ ಮಾಡಿಕೊಳ್ಳಲು (ಪದಗಳು ಗೊತ್ತಿದ್ದರೂ) ತೊಡಕಾಗಬಹುದು.
-ಹಂಸಾನಂದಿ
ಉ: ಚಾಣಕ್ಯ ನೀತಿ
ಪ್ರಿಯ ಹಂಸಾನಂದಿ,
ಪದಂ ತುಷಾರ ಸೃತಿಧೌತರಕ್ತಂ ಯಸ್ಮಿನ್ ಅದೃಷ್ಟ್ವಾಪಿ ಹತದ್ವಿಪಾನಾಮ್ /
ವಿದಂತಿ ಮಾರ್ಗಂ ನಖರಂಧ್ರಮುಕ್ತೈಃ ಮುಕ್ತಾಫಲೈಃ ಕೇಸರೀಣಾಂ ಕಿರಾತಾಃ // (ಕುಮಾರಸಂಭವಂ ೧-೬)
ತಾ|| ಕೊಂದ ಆನೆಗಳ ನೆತ್ತರಿನಿಂದ ತೋಯ್ದ ಸಿಂಹದ ಪಾದಗಳ ಹೆಜ್ಜೆ ಗುರುತುಗಳು ಸುರಿವ ಹಿಮದಿಂದಳಿಸಿ ಹೋಗಿ ಕಾಣದಾಗಿದ್ದರೂ,
ಕುಂಭಸ್ಥಳವನ್ನು ಸೀಳಿದ ಸಿಂಹದ ಉಗುರುಗಳಿಂದ ಉರುಳಿದ ಮುತ್ತುಗಳಿಂದ ಬೇಟೆಗಾರರು ಸಿಂಹದ ಜಾಡು ಹಿಡಿಯುತ್ತಾರೆ.
ಎಂಥ ಅದ್ಭುತ ವರ್ಣನೆ! ಕಾಳಿದಾಸನಿಗೆ ಕಾಳಿದಾಸನೇ ಸಾಟಿ! ಕುಮಾರಸಂಭವದ ಮೊದಲ ಸರ್ಗದ ಹಿಮಾಲಯವರ್ಣನೆಯಲ್ಲಿ ಬರುವ ಪದ್ಯವಿದು.
ಆನೆಯ ಕುಂಭಸ್ಥಳದಲ್ಲಿ ಮುತ್ತುಗಳಿರುತ್ತವೆ ಎಂದು ಇದರಿಂದ ವ್ಯಕ್ತವಾಗುತ್ತದೆ. ಗಜಮುಕ್ತಾ ಎಂದರೆ ಇದೇ. ವೈಜ್ಞಾನಿಕವಾಗಿ, ಇದು ದೇಹದಲ್ಲಿನ ಲೋಹಗಳ ಸಂಯುಕ್ತವಸ್ತು ಎನ್ನುತ್ತಾರೆ. ಮಾನವರಿಗೆ ಮೂತ್ರಪಿಂಡದಲ್ಲಿ ಕಲ್ಲು ಇರುವಂತೆ (ಕಿಡ್ನಿ ಸ್ಟೋನ್ - ಕ್ಯಾಲ್ಸಿಯಂ ಆಕ್ಸಲೇಟ್) ನಾಗಗಳಿಗೂ, ಆನೆಗೂ, ಬೇರೆ ಬೇರೆ ಪ್ರಾಣಿಗಳಿಗೂ ಬೇರೆ ಬೇರೆ ಅಂಗಗಳಲ್ಲಿ ಇವೆ. ಇವನ್ನು ಸಾಣೆಹಿಡಿದು ರತ್ನವನ್ನಾಗಿ ಮಾರುವವರೂ ಇದ್ದಾರೆ. ನಾಗಮಣಿ ಎಂಬ ಹೆಸರು ಜನಜನಿತ!
(ಏಕೋ ಅಣ್ಣಯ್ಯ ಚಿತ್ರದಲ್ಲಿ ನಾಗಮಣೀ... ಎನ್ನುವ ಧೀರೇಂದ್ರ ಗೋಪಾಲ್ ನೆನಪಾಯಿತು!!! )
ನಿಮ್ಮವ
ಬೆನಕ
ಕನ್ನಡಪುಟ.ಬ್ಲಾಗ್‍ಸ್ಪಾಟ್.ಕಾಂ.
ಉ: ಚಾಣಕ್ಯ ನೀತಿ
ವಿವರಣೆ ಉತ್ತಮವಾಗಿದೆ ಧನ್ಯವಾದ!
====================================
ತಿಳಿದಷ್ಟು ತಿಳಿಯಾಗುವುದು ತಿಳಿವು !
ಉ: ಚಾಣಕ್ಯ ನೀತಿ
ಬೆನಕರೆ,
ನಿಮ್ಮ ಟಿಪ್ಪಣಿಯಿಂದ ಒಳ್ಳೆ ತಿಳಿವು ಬಂದಿತು. ಧನ್ಯವಾದಗಳು
-ಹಂಸಾನಂದಿ