ಹಂಸ ನಾದ
ಹಂಸ ನುಡಿದರೆ, ಹಂಸನಾದ!
ಪ್ರಾಸದ ವರಸೆ
ಸುನಿಲ ಜಯಪ್ರಕಾಶರು ಭರತೇಶವೈಭವದ ಬಗ್ಗೆ ಮಾತಾಡುತ್ತ, ಪ್ರಾಸದ ಸುದ್ದಿ ತೆಗೆದರು. ಆಗ ತಟ್ಟನೆ, ಹಿಂದೆ ಇನ್ನೊಂದು ಪೋಸ್ಟಿಗೆ ನಾನು ಹಾಕಿದ್ದ ಟಿಪ್ಪಣಿ ನೆನಪಾಯಿತು. ಸ್ವಲ್ಪ ಪ್ರಾಸವು ತ್ರಾಸು ಅನ್ನಿಸುವಷ್ಟೇ ಹೆಚ್ಚಿದ್ದರೂ, ಸ್ವಲ್ಪ ಬದಲಾವಣೆಗಳೊಡನೆ ಇಲ್ಲಿ ಹಾಕೋಣ ಅನ್ನಿಸಿತು!
ಈಗ ಓದಿ ಈ ಪದ್ಯ - ಆಸೆಯ ದೋಸೆ ಅಥವ ಪ್ರಾಸದ ವರಸೆ
ಪ್ರಯಾಸದ ವರಸೆಯಾಗಿ ಕಂಡರೆ, ನಾನೇ ಜವಾಬ್ದಾರಿ!
ದೋಸೆ ದೋಸೆ ತಿನ್ನಲು ಆಸೆ
ಅಯ್ಯೋ ಮನಸೇ!
ಇರೋದ್ ಸ್ಯಾನ್ ಹೋಸೆ
ಅಂತ್ಯಾಕ್ ನಿರಾಸೆ?
ದೋಸೆಮೇಲಾದ್ರೆ
ತಡೀಲಾರ್ದಾಸೆ
ಮೆಂತ್ಯ ಅಕ್ಕಿ
ಮೇಲುದ್ದಿನ್ಬೇಳೇ
ಹಾಕಿ ನೆನೆಸೇ!
ನಾಕು ಗಂಟೆ ಬಿಟ್ಟು
ರುಬ್ಬು ಗುಂಡಲ್ಹಾಕಿ
ಚೆನ್ನಾಗ್ ತಿರುವಿಟ್ಟು
ತಯಾರ್ಸು ದೋಸೆಹಿಟ್ಟು!
ಮಾರ್ನೆ ದಿನವೆ
ನಾನ್-ಸ್ಟಿಕ್ ಕಾವ್ಲೆ
ಒಲೆಮೇಲಿಟ್ರೆ
ಶುರು ನೋಡಾಗ್ಲೆ
ಸೌಟಿಗೊಂದು ದೋಸೆ
ಅಜ್ಜಿಯು ಮಾಡಿದ
ಮೆಂತ್ಯದ ದೋಸೆ
ಅಮ್ಮನು ಮಾಡಿದ
ರಾಗಿಯ ದೋಸೆ
ಮುದ್ದಿನ ಮಡದಿಯ
ಉದ್ದಿನ ದೋಸೆ
ವಿದ್ಯಾರ್ಥಿ ಭವನದ
ಮಸಾಲೆ ದೋಸೆ
ನಿಂತೇ ಮುಗಿಸುವ
ದರ್ಶಿನಿ ದೋಸೆ
(ಗತಿ ಬೇರೆ ಇರದೆ)
ನಾನೇ ಮಾಡಿದ
ಧಿಡೀರು ದೋಸೆ
ಯಾವ್ದಾದ್ರೂ ದೋಸೆ
ಯಾರ್ಮಾಡಿದ್ರು ದೋಸೆ
ತಿನ್ನಲು ಸೊಗಸೇ!
-ಹಂಸಾನಂದಿ

- hamsanandi ರವರ ಬ್ಲಾಗ್
- Login or register to post comments
- 177 hits
- Email this blog





RSS: