ಹಂಸ ನಾದ
ಹಂಸ ನುಡಿದರೆ, ಹಂಸನಾದ!
ಕಟಪಯಾದಿ ಸೂತ್ರ
ಕೆಲವು ದಿನಗಳ ಹಿಂದೆ ರಮೇಶಬಳಗಂಚಿಯವರು ಒಂದು ಸಬ್ಸ್ಟಿಟ್ಯೂಷನ್ ಸೈಫರ್ ಅಮ್ಮಜಿಖಷೆಸ್ಸ ಖನಮ ಒಜಿ ಎಂಬ ಬರಹವನ್ನು ಬರೆದಿದ್ದರು. ಆಗ, ಕಟಪಯಾದಿ ಸೂತ್ರದ ಬಗ್ಗೆ ಬರೆಯಬಹುದಲ್ಲ ಅನ್ನೋ ಯೋಚನೆ ಬಂತು.
ಬೇರೆ
ದೇಶಗಳಿಗಿಂತ ಮೊದಲು ಭಾರತದಲ್ಲೇ ಭಾರೀ ಅಂಕೆಗಳ ಉಪಯೋಗವಾಗಿದೆ ಅನ್ನೋದು
ನಿಚ್ಚಳವಾಗಿರುವ ಸಂಗತಿ. ನಮ್ಮ ಮೂವತ್ತುಮೂರು ಕೋಟಿ ದೇವತೆಗಳಿಂದ ಹಿಡಿದು,
ಕೃತ-ತ್ರೇತಾ-ದ್ವಾಪರ-ಕಲಿಗಾಲಗಳಲ್ಲಿ ಬರುವ ವರ್ಷಗಳ ತನಕ ದೊಡ್ಡ ಅಂಕೆಗಳದ್ದೇ ಭರಾಟೆ.
ಆದರೆ, ಹಿಂದೆ ಅಂಕೆಗಳನ್ನು ಅಕ್ಷರಗಳಿಂದ, ಪದಗಳಿಂದ ಗುರುತಿಸುತ್ತಿದ್ದರು ಎನ್ನುವುದು ಗೊತ್ತಿದೆಯೇ ನಿಮಗೆ? ಇಲ್ಲವಾದರೆ ಮುಂದೆ ಓದಿ.
ಇದಕ್ಕೆ
ಕಟಪಯಾದಿ ಸೂತ್ರ ಎಂದು ಹೆಸರು. ಈ ಸೂತ್ರದ ಸಹಾಯದಿಂದ, ದೊಡ್ಡ ಸಂಖ್ಯೆಗಳನ್ನು
ನೆನಪಿನಲ್ಲಿಡಲು ಸುಲಭವಾದ ಪದಗಳನ್ನೋ, ಶ್ಲೋಕಗಳನ್ನೋ ಮಾಡಿಕೊಳ್ಳುತ್ತಿದ್ದರು.
ಉದಾಹರಣೆಗೆ,ಬೆಂಗಳೂರಿನಲ್ಲಿ ೪೮,೪೮,೨೫೮ ಜನ ಕನ್ನಡಿಗರಿದ್ದಾರೆ ಅಂದುಕೊಳ್ಳೋಣ. ಈ
ಅಂಕೆಯನ್ನು ನೆನಪಿನಲ್ಲಿಡುವುದು ಸುಲಭವೇ ಅಥವಾ ಸಮರಸವೇಜೀವನ
ಎನ್ನುವುದನ್ನು ನೆನಪಿನಲ್ಲಿಡುವುದು ಸುಲಭವೋ? ಈ ಸಂದರ್ಭದಲ್ಲಿ ಹೆಚ್ಚು ವ್ಯತ್ತ್ಯಾಸ
ಕಾಣ್ದಿದ್ದರೂ, ಪದವನ್ನು (ಅಥವಾ ವಾಕ್ಯವನ್ನು) ನೆನಪಿನಲ್ಲಿಡುವುದು ಸರಳ ಅನ್ನೋದು
ಪುಟ್ಟಮಕ್ಕಳಿಗೂ ಗೊತ್ತಾಗೋ ಮಾತು. ಆದ್ರೆ, ಸಮರಸವೇ ಜೀವನ ಅನ್ನೋದು ಈ ಅಂಕೆಗೆ ಹೇಗೆ
ಸಮವಾಗುತ್ತೆ ಅನ್ನೋದನ್ನ ಅರ್ಥ ಮಾಡ್ಕೊಂಡ್ರೆ ವಾಸಿ. ಅಲ್ವಾ?
ಈ ಸೂತ್ರವನ್ನು
ಜ್ಯೋತಿಷ್ಯದ, ಬಹುಶಃ ಗಣಿತದ ಇತರ ಹೊತ್ತಿಗೆಗಳಲ್ಲೂ ಉಪಯೋಗಿಸಿಸುತ್ತಿದ್ದರೆಂದು
ತೋರುತ್ತೆ. ಇದಲ್ಲದೇ ಬೇರೆ ರೀತಿಯ ಸಬ್ಸ್ಟಿಟ್ಯೂಷನ್ ಸೈಫರ್ ಗಳು ಕೂಡ ಇದ್ದಿರಬಹುದು.
೧೭-೧೮ನೇ ಶತಮಾನದಿಂದೀಚೆ, ಕರ್ನಾಟಕ ಸಂಗೀತದಲ್ಲೂ ಇದನ್ನು ಬಳಸಲಾಗಿದೆ.
ಇನ್ನು ಮುನ್ನುಡಿ ಮುಗಿಸಿ ಸೂತ್ರಕ್ಕೆ ಬರೋಣವೇ?
ಕಟಪಯಾದಿ ಸೂತ್ರ ಬಹಳ ಸರಳ: ಕಾದಿನವ-ಟಾದಿನವ-ಪಾದಿಪಂಚ-ಯಾದ್ಯಷ್ಟ - ಅಂದರೆ, ಕಾದಿಂದೊಂಬತ್ತು-ಟಾದಿಂದೊಂಬತ್ತು-ಪಾದಿಂದೈದು-ಯಾದಿಂದೆಂಟು ಎಂದಿಟ್ಟುಕೊಳ್ಳಿ.
ಇದು ಏನನ್ನ ಹೇಳುತ್ತಿದೆ ಎಂದಿರಾ? ನಮ್ಮ ಅಕ್ಷರಮಾಲೆಯನ್ನು ನೋಡಿ:
ಕ ಖ ಗ ಘ ಙ
ಚ ಛ ಜ ಝ ಞ್
ಟ ಠ ಡ ಢ ಣ
ತ ಥ ದ ಧ ನ
ಪ ಫ ಬ ಭ ಮ
ಯ ರ ಲ ವ ಶ ಷ ಸ ಹ
ಇದರಲ್ಲಿ
ಈ ಸೂತ್ರ, ಪ್ರತಿ ಅಕ್ಷರಕ್ಕೂ ಒಂದು ಅಂಕೆಯನ್ನು ನಿಗದಿಮಾಡುತ್ತೆ. ಕಾದಿಂದೊಂಬತ್ತು -
ಎಂದರೆ, ಕ = ೧, ಖ=೨ .... ಝ= ೯; ಹಾಗೇ, ಟಾದಿಂದೊಂಬತ್ತು ಎಂದರೆ ಟ =೧, ಠ =೨, ಡ =
೩ ..... ಧ = ೯; ಪಾದಿಂದೈದು ಎಂದರೆ, ಪ = ೧ .....ಮ = ೫ ; ಯಾದಿಂದೆಂಟು ಎಂದರೆ, ಯ
= ೧ , ರ = ೨ .....ಹ=೮.
ನ , ಮತ್ತು ಣ ಈ ಎರಡೂ ಅಕ್ಷರಗಳಿಗೆ ಬೆಲೆ ನಿಗದಿಇಲ್ಲದಿರುವುದರಿಂದ ಅದಕ್ಕೆ ಸೊನ್ನೆ ಎಂದಿಟ್ಟುಕೊಳ್ಳುವುದು.
ಈಗ ಸಂಪದ ಅನ್ನೋ ಪದವನ್ನು ತೊಗೊಳ್ಳಿ; ಇದರಲ್ಲಿ ಬರುವ ಪ್ರತಿ ವ್ಯಂಜನ ಅಕ್ಷರಕ್ಕೂ ಅದರ ಬೆಲೆ ಕಟ್ಟುತ್ತಾ ಬರೋಣ.
ಸ = ಯಾದಿಂದೆಂಟರಲ್ಲಿ, ಇದು ಏಳನೆಯದು ; ಹಾಗಾಗಿ ಇದರ ಬೆಲೆ ೭
ಪ = ಪಾದಿಂದೈದರಲ್ಲಿ, ಇದು ಮೊದಲದ್ದು; ಹಾಗಾಗಿ ಇದರ ಬೆಲೆ ೧
ದ = ಟಾದಿಂದೊಂಬತ್ತರಲ್ಲಿ, ಇದು ಎಂಟನೆಯದು; ಹಾಗಾಗಿ ಇದರ ಬೆಲೆ ೮.
ಒಟ್ಟಿಗೆ
ಸೇರಿಸಿದರೆ ಸಂಪದ = ೭೧೮ ; ಆದರೆ ಕಟಪಯಾದಿ ಸೂತ್ರದ ಕೊನೆಯಭಾಗ "ಅಂಕಾನಾಂ ವಾಮತೋ
ಗತಿಃ" ಅನ್ನುತ್ತೆ; ಅಂದರೆ, ಅಂಕಿಗಳನ್ನು ಎಡಕ್ಕೆ ಬರ್ಕೊಂಡು ಹೋಗಿ ಅಂತ. ಅಂದರೆ ಸಂಪದ
ಅನ್ನೋ ಪದದ ಬೆಲೆ ೮೧೭ ಆಗತ್ತೆ! ಹೀಗೇ ನಿಮಗೆ ಯಾವ ಪದ ಬೇಕೋ ಆ ಪದವನ್ನು ತೊಗೊಂಡು ಅದರ
ಅಂಕೆ ಬೆಲೆ ನಿರ್ಧಾರ ಮಾಡ್ಕೋಬಹುದು. ಯಾವ ಸಂಖ್ಯೆಯನ್ನು ಕೂಡ ಕೋಡ್ ಮಾಡಲು, ಹೀಗೆ ಈ
ಕಟಪಯಾದಿ ಸೂತ್ರ ಬಳಸುತ್ತಾ ಇದ್ದರು.
ಕರ್ನಾಟಕ ಸಂಗೀತದಲ್ಲಿ ಇದನ್ನ ಹೇಗೆ
ಬಳಸಿದಾರೆ ಅಂತ ಹೇಳ್ಬಿಡ್ತೀನಿ. ೭೨ ಮೇಳರಾಗಗಳಿವೆ ಕರ್ನಾಟಕ ಸಂಗೀತದಲ್ಲಿ. ಅದನ್ನ
ಒಂದು ಕ್ರಮದಲ್ಲಿ ಜೋಡಿಸಿದಾರೆ. ಎಲ್ಲ ಮೇಳರಾಗಗಳಿಗೂ, ಅವುಗಳ ಅನುಕ್ರಮ ಸಂಖ್ಯೆ ಎಷ್ಟು
ಅಂತ ಗೊತ್ತಾಗೋ ತರಹ ಹೆಸರು ಕೊಟ್ಟಿದಾರೆ. ಆ ಮೊದಲೇ, ಬೇರೆ ಹೆಸರಿದ್ದ ರಾಗಗಳಿಗೆ,
ಎರಡಕ್ಷರ ಸೇರಿಸಿ, ಅದನ್ನ ಕಟಪಯಾದಿ ಸೂತ್ರ ಪಾಲಿಸೋ ಹಾಗೆ ಮಾಡಿದಾರೆ.
ಉದಾಹರಣೆಗೆ
ಕಲ್ಯಾಣಿ ರಾಗವನ್ನ ಮೇಚಕಲ್ಯಾಣಿ ಅಂತ ಕರೆದು ಅದರ ಸಂಖ್ಯೆ ೬೫ ಅಂತಲೂ, ಮಾಳವಗೌಳವನ್ನ
ಮಾಯಾಮಾಳವಗೌಳ ಅಂತ ಕರೆದು, ಅದರ ಸಂಖ್ಯೆ ೧೫ ಅಂತಲೂ ಗೊತ್ತಾಗೋ ಹಾಗೆ ಮಾಡಿದಾರೆ.
ಇನ್ನು ಈ ಮೇಳದ ಪದ್ಧತಿ ಬಂದ ಮೇಲೆ ಕಲ್ಪಿಸಿದ ಹೊಸ ರಾಗಗಳಿಗೆ ಹೆಸರುಕೊಡುವಾಗಲೆ,
ಗಾಯಕಪ್ರಿಯ, ಸರಸಾಂಗಿ ಅಥವಾ ವಾಗಧೀಶ್ವರಿ ಹೀಗೆ ಕಟಪಯಾದಿ ಸೂತ್ರವನ್ನು ಪಾಲಿಸೋ ಹೆಸರೇ
ಕೊಟ್ಟಿದ್ದಾರೆ.
ಕಟಪಯಾದಿ ಸೂತ್ರದ ಗುಟ್ಟು ಗೊತ್ತಾಯ್ತಲ್ಲ?
-ಹಂಸಾನಂದಿ
"ಸಮರಸವೇ ಜೀವನ"ವನ್ನು ಬಿಡಿಸುವುದನ್ನು ಸೂತ್ರ ಮನವರಿಕೆಯಾಗಿದೆ ಅಂತ ತಿಳಿದುಕೊಳ್ಳೋದಕ್ಕಾಗೆಂದು ಓದುಗರಿಗೆ ಬಿಡಲಾಗಿದೆ

- hamsanandi ರವರ ಬ್ಲಾಗ್
- Login or register to post comments
- 706 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ





RSS:
ಪ್ರತಿಕ್ರಿಯೆಗಳು
ಉ: ಕಟಪಯಾದಿ ಸೂತ್ರ
ತುಂಬಾ ಆಸಕ್ತಿಕರವಾಗಿದೆ. ಒಳ್ಳೆಯ ಮಾಹಿತಿ ಕೊಟ್ಟದ್ದಕ್ಕೆ ಧನ್ಯವಾದಗಳು.
ಉ: ಕಟಪಯಾದಿ ಸೂತ್ರ
ಕಟಪಯಾದಿ ಸೂತ್ರ technical ಆಗಿ ಹೇಳೋದಿದ್ರೆ ಕೋಡ್ ಆಗುತ್ತೆ. ಸಂಪೂರ್ಣ ಸೈಫರ್ ಆಗೋದಿಲ್ಲ.
ಅದು ಹೀಗೆ - ೬೫ ಅನ್ನೋ ಸಂಖ್ಯೆ ಕೊಟ್ಟು ಸೂತ್ರ ಕೂಡ ಕೊಟ್ಟರೆ ಅದರಿಂದ ನೀವು ಮೇಚಕಲ್ಯಾಣಿ ಅಂತ ನೇರವಾಗಿ ಹೇಳಲು ಬರೋಲ್ಲ. ಇದಕ್ಕೆ ನಿಮಗೆ ಎಲ್ಲಾ ಮೇಳಕರ್ತ ರಾಗಗಳ ಅರಿಮೆ ಇರಬೇಕು.
ಇಲ್ಲಿ ಕಟಪಯಾದಿ ಸೂತ್ರವನ್ನು ಸರಳ ಹ್ಯಾಶ್ ಎನ್ನುತ್ತಾರೆ. (IEEE paper) ಇದು ಒಂದು ರೀತಿಯಲ್ಲಿ ನಿಜವೂ ಹೌದು.
http://citeseer.ist.psu.edu/532626.html
ಸಿರಿಗನ್ನಡಂ ಗೆಲ್ಗೆ, ಸಿರಿಗನ್ನಡಂ ಬಾಳ್ಗೆ
ಉ: ಕಟಪಯಾದಿ ಸೂತ್ರ
ಶ್ರೀನಿಧಿ ಅವರೆ,
ತಿದ್ದುಪಡಿ ತಿಳಿಸಿದ್ದಕ್ಕೆ ಧನ್ಯವಾದಗಳು. ಹೌದು, ನೀವು ಹೇಳಿದಂತೆ, ಇದು ಒನ್-ವೇ-ಪ್ರೊಸೆಸ್ಸ್. ಮತ್ತೆ, ಒಂದೇ ಅಂಕಿಗೆ ಬೇರೆಬೇರೆ ಎನ್ಕೋಡಿಂಗ್ ಇರಬಹುದು. ಉದಾಹರಣೆಗೆ ಹರ = ೨೮, ಜರಿ = ೨೮, ಹಠ= ೨೮, ಮತ್ತೆ ದಫನ್ = ೨೮ ಆಗುತ್ತೆ!
-ಹಂಸಾನಂದಿ
ನನ್ನ (mostly) ಇಂಗ್ಲಿಷ್ ಬ್ಲಾಗ್ - ಅಲ್ಲಿದೆ ನಮ್ಮ ಮನೆ:- http://neelanjana.wordpress.com/
ನನ್ನ ಪಾಡ್ ಕಾಸ್ಟ್ ಗಳು :- http://hamsanandi.mypodcast.com/
ಉ: ಕಟಪಯಾದಿ ಸೂತ್ರ
ಮೇಳಕರ್ತರಾಗಗಳ ವ್ಯವಸ್ಥೆಯಲ್ಲಿ ಕಟಪಯಾದಿ ಸಾಂಖ್ಯವನ್ನು ಬಳಸಿರುವ ಬಗ್ಗೆ ಇಂಟರ್~ನೆಟ್ ನಲ್ಲಿ ಉತ್ತಮವಾದ ಅನೇಕ ಬರಹಗಳನ್ನು ಓದಬಹುದು.
) ಸುಭಾಷ್ ಕಕ್ ಎನ್ನುವ ಪ್ರೊಫೆಸರ್ ಒಬ್ಬರು ಕಟಪಯಾದಿ ಸಾಂಖ್ಯದ ಬಗ್ಗೆ ಕಂಪ್ಯೂಟರ್ ವಿಜ್ಞಾನದ ಕೋನದಿಂದ ಪ್ರಬಂಧಗಳನ್ನು ಬರೆದಿದ್ದಾರೆ. Computing Science in Ancient India edited by T. R. N. Rao and Subhash Kak (ನಾನು ಓದಿಲ್ಲ)
ಈ ಸಾಂಖ್ಯ ಪಾಣಿನಿಯ ಅವಿಷ್ಕಾರ ಎಂಬ ಅಭಿಪ್ರಾಯವಿದೆ. (ಅಂದ ಹಾಗೆ ಅವನ ತಮ್ಮ ಪಿಂಗಳ binary arithmeticನ ಆದ್ಯಪ್ರವರ್ತಕ ಎಂದೂ ಹೇಳುತ್ತಾರೆ.
ನಿಜ ಆಗಿದ್ರೆ ಅಣ್ಣ ತಮ್ಮಂದ್ರು ಇಬ್ರೂ ಒಳ್ಳೆ ಪಂಟ್ರು
ಈಗ ಎರಡು quizzಗಳು
೧.
ಕಳೆದ ವಾರ ಶ್ರೀ ಶಂಕರಾಚಾರ್ಯರ ಜಯಂತಿ (ವೈಶಾಖ ಶುಕ್ಲ ಪಂಚಮಿ) ಆಯ್ತು. ಅವರ ಜಯಂತಿಯ ದಿವಸದ ಸ್ವಾರಸ್ಯವೇನು?
೨.
ಎರಡು ವರುಷದ ಹಿಂದೆ ನಾನು ಮಾಡಿದ್ದ ಒಂದು puzzle:
ಈ ಸಾಲುಗಳಲ್ಲಿರುವ ಅಕ್ಷರಗಳನ್ನು ಸರಿಯಾದ ಅಕ್ಷರಗಳಿಂದ (ಕಾಗುಣಿತ ಮಾತ್ರ ಹಾಗೆ ಇರಲಿ) ಬದಲಾಯಿಸಿ ನೋಡಿ:
ಕು ಡ ಕು ಡಾ ಹಿ ಟ ಝೆ ಹ ಖೂ ಕು ಡಾ ಹಿ ಶ ಖ ಝಿ ಲ ಖು ಷಿ ಹೆ
( ಸುಳಿಹು: ಜನಪ್ರಿಯವಾದ ಒಂದು ಹಾಡಿನ ಮೊದಲ ಸಾಲು!)
ಪ್ರಭು ಮೂರ್ತಿ
ಉ: ಕಟಪಯಾದಿ ಸೂತ್ರ
ಸುಳಿವು ಕೊಟ್ಟಿದ್ದರಿಂದ ಬಹಳನೆ ಸರಳ ಆಗೋಯ್ತು.
೨. ಯುಗ ಯುಗಾದಿ ಕಳೆದರೂ ಯುಗಾದಿ ಮರಳಿ ಬರುತಿದೆ
-- -- --
ಹೆಸರಾಯಿತು ಕರ್ನಾಟಕ, ಉಸಿರಾಗಲಿ ಕನ್ನಡ
ಉ: ಕಟಪಯಾದಿ ಸೂತ್ರ
ಹಂಸಾನಂದಿಯವರೆ....ನಿಮ್ಮ ಬರಹ ತುಂಬಾ ಚೆನ್ನಾಗಿದೆ.
ಈಗ ನನ್ನ ತಲೆಹರಟೆ :
ನೀವು ಮತ್ತು ರಮೇಶ ಬಳಗಂಚಿಯವರು ನಮ್ಮ ಗುಪ್ತಚರ ಇಲಾಖೆಗೆ ಮತ್ತಷ್ಟು ಕೆಲಸಾ ಕೋಡೊ ಹಂಗ ಕಾಣ್ಸತ್ತ. ಈಗಾಗಲೇ ಉಗ್ರರ ಕೋಡ್‍ಗಳನ್ನು ಡಿಕೋಡ್ ಮಾಡಾಕ ತಿಣುಕಾಡ್ತಿರೋ ಈ ಮಂದಿಗೆ ನಿಮ್ಮ ಈ ಮಿತಾಕ್ಷರಿಗಳು ಮತ್ತು ಕಪಟಯಾದಿ ಸೂತ್ರಗಳು (ಈ ತರಹದವು ನಿಮ್ಮಿಬ್ಬರ ಬತ್ತಳಿಕೆಯಲ್ಲಿ ಇನ್ನೂ ಎಷ್ಟಿವೆಯೋ ಎನೋ) "ನೀರಿಳಿಯ ಗಂಟಲೋಳ್ ಕಡುಬಂ ತುರುಕಿದಂತಾಯ್ತು"
ನನ್ನಿ...