ದೇಶ ಸುತ್ತು - ಕೋಶ ಓದು ಅನ್ನೋ ಮಾತಿದೆ. ನಾಲ್ಕು ಊರು ನೋಡಿ, ತರಹೇವಾರಿ ಜನರನ್ನು ನೋಡಿ ಅವರ ನಡೆ ನುಡಿಯಿಂದ ಬೇಕಾದಷ್ಟು ಕಲಿಯಬಹುದು. ಇಲ್ಲದಿದ್ದರೆ ಬಾವಿಯೊಳಗಿನ ಕಪ್ಪೆಯಾಗುವ ಸಾಧ್ಯತೆ ಇದ್ದೇ ಇದೆ. ಮತ್ತೆ ಬಗೆ ಬಗೆತ ಪುಸ್ತಕಗಳನ್ನ ಓದಿ ನಮ್ಮ ಅರಿವಿನ ಹರಹನ್ನು ಹಿರಿದಾಗಿಸಿಕೊಳ್ಳಬಹುದು ಅನ್ನುವುದು ಈ ಮಾತಿನ ಸಾರಾಂಶ.
ಒಂದು ವಿಷಯದಲ್ಲಿ ನಮ್ಮ ತಿಳಿವು ಹೆಚ್ಚಬೇಕಾದರೆ ಅದರ ಹಲವಾರು ಮಗ್ಗುಲುಗಳನ್ನೂ ನೋಡುವುದು ಒಳ್ಳೆಯದು. ಇಲ್ಲದಿದ್ದರೆ, ನಮ್ಮ ತಿಳಿವೂ ನಾಲ್ಕು ಜನ ಕುರುಡರು ಆನೆಯ ಸ್ವರೂಪವನ್ನು ವಿವರಿಸಿದ ರೀತಿ ಆಗುವ ಭಯವೂ ಇದ್ದೇ ಇದೆ. ನಾನು ಸಾಕಿದ ಮೊಲಕ್ಕೆ ಮೂರೇ ಕೊಂಬು ಎಂದು ವಿತಂಡವಾದ ಮಾಡುವವರನ್ನು ನೋಡಿದಾಗಲೆಲ್ಲ ನನಗೆ ಈ ಕಥೆ ನೆನಪಾಗುತ್ತಲೇ ಇರುತ್ತದೆ.
ಇವತ್ತು ಹಳೇಸೇತುವೆಯಲ್ಲಿ ಫೆಬ್ರವರಿ ಹದಿನಾಲ್ಕಕ್ಕೆ ಅನುಕರಣೆಯ ಆಚರಣೆಗಳ ಬದಲು, ಒಂದೋ ಎರಡೋ ಬದುಕಿನ ಅರ್ಥವನ್ನು ತಿಳಿಸುವ ಪುಸ್ತಕಗಳನ್ನು ಕೊಳ್ಳಿ ಅಂತಓದಿದಾಗ, ನಾನು ಓದಿದ, ಮತ್ತೆ ಕನ್ನಡ ನುಡಿ- ಕನ್ನಡ ನಾಡುಗಳ ಹಿನ್ನೆಲೆ ಬಗ್ಗೆ ಆಸಕ್ತಿ ಇರುವ ಎಲ್ಲ ಕನ್ನಡಿಗರೂ ಓದಬೇಕಾದ ಎರಡು ಪುಸ್ತಕಗಳ ಬಗ್ಗೆ ಹೇಳಬೇಕೆನಿಸಿತು: ಮೊದಲನೆಯದು ಸೇಡಿಯಾಪು ಕೃಷ್ಣ ಭಟ್ಟರ ವಿಚಾರ ಪ್ರಪಂಚ.
ಸೇಡಿಯಾಪು ಕೃಷ್ಣಭಟ್ಟರು ಹಲವಾರು ಸಾಹಿತ್ಯ ಸಂಚಿಕೆಗಳಲ್ಲಿ ಬರೆದ ಬರಹಗಳು, ಹಲವೆಡೆ ಮಾಡಿದ ಭಾಷಣಗಳು ಇದರಲ್ಲಿವೆ.
ಕೃಷ್ಣಭಟ್ಟರು ಹಲವು ಭಾಷೆಗಳಲ್ಲಿ ವಿದ್ವಾಂಸರು. ಕನ್ನಡ, ತುಳು, ಸಂಸ್ಕೃತ ಮೊದಲಾಗಿ. ದಕ್ಷಿಣ ಕನ್ನಡ ಜಿಲ್ಲೆಯವರಾದ್ದರಿಂದ, ಮಲೆಯಾಳ, ಕೊಂಕಣಿಗಳ ಸಂಸರ್ಗವೂ ಇವರಿಗೆ ಇದ್ದಿರಬಹುದು. ಹೀಗಾಗಿ ಕನ್ನಡ ನಾಡು ನುಡಿಯಬಗ್ಗೆ ಇವರ ವಿದ್ವತ್ಪೂರ್ಣವಾದ ಸಂಶೋಧನಾ ಲೇಖನಗಳನ್ನು ಓದುವುದೇ ಒಂದು ಸುಂದರ ಅನುಭವ. ಒಳಗೆ ಏನು ಸಿಗಬಹುದು ಅಂತ ತೋರುವುದಕ್ಕೆ, ಪರಿವಿಡಿಯ ಒಂದು ಪುಟವನ್ನು ಇಲ್ಲಿ ನೋಡಿ:
ನಿಮಗೆ ನಾನು ಶಿಫಾರಸ್ಸು ಮಾಡುತ್ತಿರುವ ಇನ್ನೊಂದು ಪುಸ್ತಕ ಇದು. ತೀನಂಶ್ರೀ ಅವರ ಸಮಗ್ರ ಗದ್ಯ. ಇದೂ ಕೂಡ ಅವರು ಬರೆದ ಬೇರೆ ಬೇರೆ ಬಿಡಿ ಬರಹ ಭಾಷಣಗಳ ಸಂಗ್ರಹ. ಇನ್ನು ಈ ಪುಸ್ತಕವನ್ನು ನಾನು ಹೇಳುತ್ತಿರುವುದಕ್ಕೂ ಕಾರಣಗಳು ಅವೇನೇ ಡಿಟೊ ಡಿಟೋ. ಕನ್ನಡ ನಾಡು ನುಡಿಗೆ ಸಂಬಂಧಿಸಿದ ಹಲವಾರು ಹೊಳಹುಗಳನ್ನು ಕೊಡುವಂತಹ ಸಂಗ್ರಹ ಇದು ಕೂಡ. ನಾವೆಲ್ಲ ಓದಬೇಕಾದ ಹಲವಾರು ಬರಹಗಳು ಇಲ್ಲಿವೆ.
ಈ ಎರಡೂ ಪುಸ್ತಕಗಳು ಬಿಡಿ ಬರಹಗಳದ್ದಾದ್ದರಿಂದ, ಯಾವುದೋ ಕೈಗೆ ಸಿಕ್ಕಿದ ಪುಟವನ್ನು ತೆಗೆದು ಓದತೊಡಗಿದರೂ ಸೊಗಸಾಗಿರುತ್ತೆ ಅನ್ನುವುದು ಒಂದು ಮಾತು. ಮತ್ತೆ ನಮಗೆ ತಿಳಿದಿಲ್ಲದ ಹೊಸವಿಷಯಗಳನ್ನು ತಿಳಿದ ಸಂತೋಷವೂ ಸಿಗುತ್ತದೆ ಅನ್ನುವುದು ಇನ್ನೊಂದು ಮಾತು. ಅರೆಬೆಂದ ಮಡಿಕೆಗಳ ಸದ್ದೇ ಜೋರಾಗಿರುವ ಈ ಕಾಲದಲ್ಲಿ, ಸೇಡಿಯಾಪು ಕೃಷ್ಣ ಭಟ್ಟರ, ಮತ್ತೆ ತೀನಂಶ್ರೀಕಂಠಯ್ಯನವರಂತಹ ತುಂಬಿಯೂ ತುಳುಕದಂತಹ ಕೊಡಗಳ ವಿಚಾರವನ್ನು ನಾವು ಅರಿಯುವುದು ನಮಗೇ ಒಳಿತು ಅಂತ ನನ್ನೆಣಿಕೆ. ಇನ್ಯಾಕೆ ತಡ? ನಿಮ್ಮ ಪುಸ್ತಕದ ಅಂಗಡೀಲಿ ವಿಚಾರಿಸ್ತೀರಲ್ಲ, ಈ ಪುಸ್ತಕಗಳು ಸಿಗುತ್ತವೆಯೋ ಅಂತ?
-ಹಂಸಾನಂದಿ
ಕೊ.ಕೊ: ಸಂಪದಿಗರಲ್ಲಿ ಈ ವಿಷಯಗಳ ಬಗ್ಗೆ ಆಸಕ್ತಿ ಇರುವವರು ಬಹಳ ಜನರಿದ್ದಾರಾದ್ದರಿಂದ ’ಸಂಪದಿಗರು’ ಓದಬೇಕಾದ ಅಂತ ತಲೆಬರಹ ಹಾಕಿದೆ ಅಷ್ಟೇ. ಸಂಪದಿಗರಲ್ಲದಿದ್ದರೂ, ಎಲ್ಲ ಕನ್ನಡಿಗರಿಗೂ ಒಂದಲ್ಲ ಒಂದು ಆಸಕ್ತಿ ಮೂಡಿಸುವ ಬರಹಗಳು ಈ ಪುಸ್ತಕಗಳಲ್ಲಿವೆ. :-)







ಪ್ರತಿಕ್ರಿಯೆಗಳು
ಉ: ಸಂಪದಿಗರು ಓದಲೇಬೇಕಾದ ಎರಡು ಪುಸ್ತಕಗಳು
ಎರಡು ಅಮೂಲ್ಯ ಪುಸ್ತಕಗಳನ್ನು ಪರಿಚಯಿಸಿದ್ದಕ್ಕೆ ಧನ್ಯವಾದಗಳು, ಹಂಸಾ. ನಾನಿರುವ ಸ್ಥಳದಲ್ಲಿ ಅದು ಸಿಗದಿದ್ದರೂ ಭಾರತಕ್ಕೆ ಬಂದಾಗ ಕೊಳ್ಳಬೇಕು. ಹೀಗೆಯೇ ತಾವು ಓದಿದ, ಗಮನಕ್ಕೆ ಬಂದ ಪುಸ್ತಕಗಳ ಪರಿಚಯ ಮಾಡಿಸುತ್ತಿರಿ. ಕನ್ನಡ ಸಾಹಿತ್ಯದ ಬಗ್ಗೆ ನನ್ನ ಜ್ಞಾನ cripplingly inadequate.
ಉ: ಸಂಪದಿಗರು ಓದಲೇಬೇಕಾದ ಎರಡು ಪುಸ್ತಕಗಳು
ಅರೆಬೆಂದ ಮಡಿಕೆಗಳ ಸದ್ದೇ ಜೋರಾಗಿರುವ ಈ ಕಾಲದಲ್ಲಿ,
.. ಚೆನ್ನಾಗಿದೆ!
ಉ: ಸಂಪದಿಗರು ಓದಲೇಬೇಕಾದ ಎರಡು ಪುಸ್ತಕಗಳು
ಈ ವಾಕ್ಯ ಬಳಸುವಾಗ ಹಂಸಾನಂದಿಯವರ ಮನಸ್ಸಿನಲ್ಲಿ ಯಾರಿದ್ದರೋ?! ....ಮತ್ತವರ ಬರಹಗಳನ್ನು ಅದೆಷ್ಟು ಇವರು ಓದಿದ್ದಾರೋ!!! ಹಂಸಾನಂದಿಯವರಿಗೆ ಗೊತ್ತು!
ಉ: ಸಂಪದಿಗರು ಓದಲೇಬೇಕಾದ ಎರಡು ಪುಸ್ತಕಗಳು
ಕೊ೦ಕು ವ್ಯ೦ಗ್ಯ ಬಳಸದೆ ಕೆಲವು ಮಹಾಶಯರಿಗೆ (ಕೆಲವೊಮ್ಮೆ ತಾವೇ ಘನ ವಿದ್ವಾ೦ಸರ೦ತೆ ಬೀಗುವ) ಜೀರ್ಣವಾಗುವುದಿಲ್ಲ. ಹಾಗೆಯೇ ಲೇಖನಕ್ಕೆ ಕೇ೦ದ್ರವಾಗಿರುವ ದ್ರವ್ಯದ ಬಗ್ಗೆ ಚರ್ಚೆ ಮಾಡದೆ ಬೇರೆಡೆ ದಿಕ್ಕು ತಪ್ಪಿಸುವುದೇ ಮಹದಾಶಯ. ಇ೦ಥವಕ್ಕೆ ಸೊಪ್ಪು ಹಾಕದೆ ನಿಮ್ಮ ಕಾಯಕ ಮು೦ದುವರೆಸಿ ಹ೦ಸಾನ೦ದಿಯವರೇ..
ಉ: ಸಂಪದಿಗರು ಓದಲೇಬೇಕಾದ ಎರಡು ಪುಸ್ತಕಗಳು
ಸೇಡಿಯಾಪು ಕೃಷ್ಣಭಟ್ಟರ ಪುಸ್ತಕದಿಂದ ನಾನು ಸಂಗ್ರಹಿಸಿದ ಮೂರು ಬರಹಗಳು ಇಲ್ಲೇ ಇವೆ .
ಆ ಪುಸ್ತಕ ಕೈಗೆಟುಕುವವರೆಗೆ ಓದಿರಿ.
ಸರ್ವಭಾಷಾ ಸರಸ್ವತಿ (http://sampada.net/b...)
ಸಾಹಿತ್ಯದ ಗುರಿ ಏನು ? ಪ್ರಯೋಜನವೇನು? (http://sampada.net/b...)
ಅಮೃತವರ್ಷಿಣಿ , ದುರ್ಯೋಧನ , ಕರ್ಣ , ಭಾನುಮತಿ ಮತ್ತು ಬಿದ್ದು ಹೋದ ಮುತ್ತುಗಳು (http://sampada.net/a...)
ಉ: ಸಂಪದಿಗರು ಓದಲೇಬೇಕಾದ ಎರಡು ಪುಸ್ತಕಗಳು
ಕೊಂಡಿಗಳಿಗೆ ಧನ್ಯವಾದ ಶ್ರೀಕಾಂತ ಅವರೆ. ನನಗೆ ಇವುಗಳನ್ನ ಇಲ್ಲಿ ಓದಿದ್ದು ಮರೆತು ಹೋಗಿತ್ತು.
ಉ: ಸಂಪದಿಗರು ಓದಲೇಬೇಕಾದ ಎರಡು ಪುಸ್ತಕಗಳು
ಧನ್ಯವಾದಗಳು.
ಆ ಪುಸ್ತಕಗಳನ್ನು ಗ್ರಂಥಾಲಯದಲ್ಲಿ ಓದಲು ಪ್ರಯತ್ನಿಸುತ್ತೇನೆ. ಪರಿಚಯಿಸಿದ ನಂದಿಯವರಿಗೂ, ಲಿಂಕ್ ಗಾಗಿ ಶ್ರೀಕಾಂತ್ ರವರಿಗೂ ವಂದನೆಗಳು
ಉ: ಸಂಪದಿಗರು ಓದಲೇಬೇಕಾದ ಎರಡು ಪುಸ್ತಕಗಳು
ನಾನು ಹೇಳಬೇಕೆನಿಸಿದ ವಿಷಯದ ಬಗ್ಗೆ ಬದಲಾಗಿ ಯಾಕೋ ಅರೆಬೆಂದ ಮಡಿಕೆಗಳ ಬಗ್ಗೆ ಯೋಚನೆ ಆರಂಭವಾಗಿದೆ ಅನ್ನಿಸ್ತಿದೆ!
ಯಾವುದೇ ವಿಷಯದಲ್ಲಿ ಪರಿಣತಿ ಪಡೆಯುವವರೆಗೆ ನಾವೆಲ್ಲರೂ ಒಂದಲ್ಲ ಒಂದು ರೀತಿಯ ಅರೆಬೆಂದ ಮಡಿಕೆಗಳೇ ಅಲ್ಲವೆ?
ಹಿಂದೆ ಆದರೆ ನನ್ನ ಅರೆಬೆಂದ ಅಭಿಪ್ರಾಯಗಳು ನನ್ನಲ್ಲೇ ಉಳಿದಿರುತ್ತಿದ್ದವು. ಪುಸ್ತಕ-ಪ್ರಕಟಣೆ ಇತ್ಯಾದಿಗಳೆಲ್ಲಾ ಎಲ್ಲರ ಕೈಯಳತೆಯದ್ದಾಗಿರಲಿಲ್ಲ. ಆದರೆ ಈಗ ತಂತ್ರಜ್ಞಾನದ ಸಹಾಯದಿಂದ ನಿಮಿಷಾರ್ಧದಲ್ಲಿ ನನ್ನ ಮಾತನ್ನು ಪ್ರಪಂಚದ ಮೂರೆಡೆಗಳಲ್ಲೂ ಹಬ್ಬಿಸುವುದು ಸುಲಭ. ತೆರೆದ ಮನವಿದ್ದಾಗ ಇದನ್ನ ನನ್ನನ್ನ ನಾನೇ ಉತ್ತಮಪಡಿಸಿಕೊಳ್ಳೋದಕ್ಕೂ ಬಳಸ್ಕೊಳ್ಳಬಹುದು. ಇಲ್ಲದೆ ಹೋದರೆ, ನನ್ನ ಅರೆಬೆಂದ ಸ್ಥಿತಿಯೇ ಸರಿ, ಎಂದು ಇನ್ನೂ ಹೆಚ್ಚು ಹೆಚ್ಚು ಕೂಗುತ್ತಲೇ ಹೋಗಬಹುದು. ಹೀಗೆ ಅಲ್ಲಿ-ಇಲ್ಲಿ ನಡೆಯೋದನ್ನು ನೋಡಿದ್ದೇನೆ, ನೀವುಗಳೂ ನೋಡಿರಬಹುದು.
ಇದಕ್ಕಿಂತ ಹೆಚ್ಚಾಗಿ ಇದರ ಮೇಲೆ ತಲೆಕೆಡಿಸಿಕೊಳ್ಳೋ ಕಾರಣವಿಲ್ಲ ಅನ್ನಿಸುತ್ತೆ.
ಉ: ಸಂಪದಿಗರು ಓದಲೇಬೇಕಾದ ಎರಡು ಪುಸ್ತಕಗಳು
ನನ್ದಿ ಹಂಸಾನನ್ದಿಗಳೇ,
ಒಳ್ಳೆಯ ಪುಸ್ತಕಗಳ ಪರಿಚಯ ಮಾಡಿಸಿದ್ದೀರಿ.
ಉ: ಸಂಪದಿಗರು ಓದಲೇಬೇಕಾದ ಎರಡು ಪುಸ್ತಕಗಳು
ಹಂಸಾನಂದಿ ಅವರೆ,
ತಾವು ಈ ಪುಸ್ತಕಗಳ ಪರಿಚಯ ಮಾಡಿಕೊಟ್ಟಿದ್ದಕ್ಕೆ ಧನ್ಯವಾದಗಳು. ನಿಮಗೆ ಇಷ್ಟವಾದ ಈ ತರಹದ ಕೃತಿಗಳ ಪರಿಚಯ ನೀಡುವ ಪರಿಪಾಠವನ್ನು ಮುಂದುವರಿಸಿ. ಕನ್ನಡ ಪುಸ್ತಕ ಪ್ರಾಧಿಕಾರ ಮತ್ತು ಇತರ ಹಲವಾರು ಪ್ರಕಾಶಕರು ಹೊರತರುವ ಪುಸ್ತಕಗಳ ಪಟ್ಟಿಗಳನ್ನು ಅಂತರ್ಜಾಲದಲ್ಲಿ ಎಲ್ಲಾದರೂ ಕಾಣಬಹುದೆ?
...ಅಶೋಕ
ಉ: ಸಂಪದಿಗರು ಓದಲೇಬೇಕಾದ ಎರಡು ಪುಸ್ತಕಗಳು
ಸೇಡಿಯಾಪುರವರು ಬರೆದದ್ದು ಕಡಿಮೆ ಆದರೂ ತಿದ್ದಿ,ತೀಡಿ ಬರೆದವರು. ಅವರ ಪಳಮೆಗಳು[ ಸಣ್ಣ ಕತೆಗಳ ಸಂಕಲನ ] ಎಲ್ಲರೂ ಓದಬೇಕಾದ ಪುಸ್ತಕ.ಹಂಸಾನಂದಿ ಅವರಿಗೆ ಧನ್ಯವಾದ.