ಹಂಸ ನಾದ
ಹಂಸ ನುಡಿದರೆ, ಹಂಸನಾದ!
ವಾತಾಪಿ ಗಣಪತಿಂ ಭಜೇಹಂ
ಈ ಶನಿವಾರ ಭಾದ್ರಪದ ಶುಕ್ಲ ಚೌತಿ. ಗಣೇಶನನ್ನು ತೊಡಕುಗಳನ್ನು ಕಳೆಯುವವನೆಂದು ನಾವೆಲ್ಲ ಪೂಜಿಸುತ್ತೇವೆ. ನಮ್ಮ ಹಿಂದಿನ ಹರಿದಾಸರು, ಮತ್ತೆ ಹಲವು ಕವಿಗಳನ್ನು ಬಗೆಬಗೆಯಾಗಿ ಹೊಗಳಿರುವವರೇ. ಕನಕದಾಸರ ಹಾಡೊಂದು, ಎಲ್ಲರ ಮನದಲ್ಲಿ ನೆಲೆಯಾಗಿ ನಿಲ್ಲುವಂತೆ ವಿದ್ಯಾಭೂಷಣರು ಹಾಡಿರುವುದು ನಮಗೆಲ್ಲ ತಿಳಿದಿರುವುದೇ - ನಮ್ಮಮ್ಮ ಶಾರದೆ ಉಮಾಮಹೇಶ್ವರಿ ನಿಮ್ಮೊಳಗಿಹನ್ಯಾರಮ್ಮ ಅನ್ನುವ ಈ ಹಾಡು ಹಂಸಧ್ವನಿ ರಾಗದಲ್ಲಿದೆ. ಅದೇ ಹಂಸದ್ವನಿ ರಾಗದಲ್ಲಿ ಮತ್ತೊಂದು ಪ್ರಖ್ಯಾತ ರಚನೆ ಇದೆ - ಅದು ಮುತ್ತುಸ್ವಾಮಿ ದೀಕ್ಷಿತರ ವಾತಾಪಿಗಣಪತಿಂ ಭಜೇಹಂ ಅನ್ನುವ ಕೃತಿ. ಸುಮಾರು ಒಂದು ನಾಲ್ಕಾರು ಸಂಗೀತ ಕಚೇರಿಗಳಿಗಾದರೂ ನೀವು ಹೋಗಿದ್ದರೆ, ನಿಮಗೆ ಈ ರಚನೆ ತಿಳಿದೇ ಇರಬೇಕು ಎನ್ನುವಷ್ಟು ಪ್ರಖ್ಯಾತವಾದ ರಚನೆ ಇದು.
ಮುತ್ತುಸ್ವಾಮಿ ದೀಕ್ಷಿತರು ಕರ್ನಾಟಕಸಂಗೀತದ ತ್ರಿಮೂರ್ತಿಗಳಲ್ಲೊಬ್ಬರು. ಇವರು ಸುಮಾರು ನಾನೂರು ರಚನೆಗಳನ್ನು ರಚಿಸಿದ್ದಾರೆ. ಅದರಲ್ಲಿ ೩-೪ ಮಾತ್ರ ತೆಲುಗು/ಮಣಿಪ್ರವಾಳದಲ್ಲಿದ್ದು ಉಳಿದದ್ದೆಲ್ಲ ಸಂಸ್ಕೃತದಲ್ಲಿವೆ. ಬಹಳ ಸರಳವಲ್ಲದಿದ್ದರೂ, ಇವರ ರಚನೆಗಳು ಸಂಗೀತರಸದಿಂದ ತುಂಬಿವೆ. ತಂಜಾವೂರಿನ ಬಳಿಯ ತಿರುವಾರೂರಿನಲ್ಲಿ ಜನಿಸಿದ ಇವರು ದೇಶದ ಹಲವೆಡೆಗಳಿಗೆ ಯಾತ್ರಿಕರಾಗಿ ಹೋಗಿ, ಅಲ್ಲಿನ ದೇವಾಲಯಗಳ ದೇವಾನುದೇವತೆಗಳ ಬಗ್ಗೆ ತಮ್ಮ ಕೃತಿಗಳನ್ನು ರಚಿಸಿದ್ದಾರೆ.

ಸಂಗೀತ ತ್ರಿಮೂರ್ತಿಗಳಲ್ಲೊಬ್ಬರಾದ ಮುತ್ತುಸ್ವಾಮಿ ದೀಕ್ಷಿತರು (ಕ್ರಿ.ಶ. ೧೭೭೬ - ೧೮೩೫)
ಬಾದಾಮಿಯ ಚಾಲುಕ್ಯ ರಾಜ ಎರಡನೇ ಪುಲಿಕೇಶಿ ಪಲ್ಲವರನ್ನು ಕಾಂಚಿಗೇ ಹೋಗಿ ಸೋಲಿಸಿದ್ದ. ಅದರ ಪ್ರತೀಕಾರಕ್ಕೆ, ಕ್ರಿ.ಶ.೬೪೩ರ ಸುಮಾರಿನಲ್ಲಿ ಪಲ್ಲವರು ಬಾದಾಮಿಗೇ ಬಂದು ಲಗ್ಗೆ ಹಾಕಿ ಪುಲಿಕೇಶಿಯನ್ನು ಸೋಲಿಸಿಯೂಬಿಟ್ಟರು. ಆ ಸಮಯದಲ್ಲಿ, ಬಾದಾಮಿಯಲ್ಲಿದ್ದ ಗಣಪತಿಯ ದೇವಾಲಯದಿಂದ ಮೂಲ ವಿಗ್ರಹವನ್ನು ಪಲ್ಲವರ ಸೈನ್ಯಾಧಿಕಾರಿಯಾಗಿದ್ದ ಪರಂಜ್ಯೋತಿ (ಸಿರುತ್ತೊಂಡನ್ ಎಂಬ ಹೆಸರೂ ಇವನಿಗಿದೆ) ಎನ್ನುವವನು ಎತ್ತಿ ಒಯ್ದು ಅವನ ಊರಾದ ತಿರುಚೆಂಕಾಟಂಗುಡಿಯಲ್ಲಿ ಸ್ಥಾಪಿಸಿದನಂತೆ. ಈಗ ಬಾದಾಮಿ ಕೋಟೆಯಲ್ಲಿ ಕೆಳಗಿನ ಶಿವಾಲಯ ಎಂದು ಕರೆಯುವ ದೇವಾಲಯವೇ ಮೊದಲಿಗೆ ಈ ಗಣಪತಿಯಿದ್ದ ದೇವಾಲಯ ಎಂದು ಹೇಳಲಾಗುತ್ತೆ.
http://www.sampada.net/image/5695

ಬಾದಾಮಿ ಕೋಟೆಯ ಮೇಲೆ ಕಾಣುವ ಒಂದು ನೋಟ. ನಡುವೆ ತುದಿಯಲ್ಲಿರುವುದು ಮೇಲಿನ ಶಿವಾಲಯ. (ಚಿತ್ರ ಕೃಪೆ: ಲಕ್ಷ್ಮೀ ಶ್ರೀನಾಥ್)
ಚಿತ್ರ ಕೃಪೆ: ಲಕ್ಷ್ಮೀ ಶ್ರೀನಾಥ್
ಕೆಳಗಿನ ಚಿತ್ರದಲ್ಲಿ ತುತ್ತತುದಿಯಲ್ಲಿ ಕಾಣುವುದು ಮೇಲಿನ ಶಿವಾಲಯ. ಚಿತ್ರದ ಎಡಭಾಗದಲ್ಲಿ, ಸುಮಾರು ನಡುವಿನಲ್ಲಿ ಇರುವುದಕ್ಕೆ ಕೆಳಗಿನ ಶಿವಾಲಯ ಎನ್ನುತ್ತಾರೆ. ಒಳಗೆ ವಿಗ್ರಹವಿಲ್ಲ. ಇದೇ ವಾತಾಪಿಗಣಪತಿಯ ಮೂಲ ನೆಲೆ ಎನ್ನಲಾಗಿದೆ.
http://www.sampada.net/image/5720
ಬಾದಾಮಿಯ ಮೊದಲ ಹೆಸರು ವಾತಾಪಿ. ಹಾಗಾಗಿ, ತಿರುಚೆಂಗಾಟಂಗುಡಿಯಲ್ಲಿ ಸ್ಥಾಪನೆ ಆದಮೇಲೆ, ಈ ಗಣಪತಿ ವಾತಾಪಿಗಣಪತಿಯಿಂದೇ ಪ್ರಖ್ಯಾತವಾಗಿದ್ದರಲ್ಲೇನೂ ಅಚ್ಚರಿಯಿಲ್ಲ.
http://www.sampada.net/image/5696

ತಿರುಚೆಂಗಾಟಂಗುಡಿಯಲ್ಲಿರುವ ವಾತಾಪಿಗಣಪತಿ. ಸರಳವಾದ ಶಿಲ್ಪಶೈಲಿಯನ್ನು ಗಮನಿಸಿ.
ನಂತರ, ಕೆಲವು ಕಾಲದ ನಂತರ ತಿರುವಾರೂರಿನ ತ್ಯಾಗರಾಜ ದೇವಾಲಯದ ಪ್ರಾಕಾರದಲ್ಲಿಯೂ ಈ ಮೂರ್ತಿಯ ರೀತಿಯದೇ ಇನ್ನೊಂದು ಮೂರ್ತಿಯನ್ನು ಪ್ರತಿಷ್ಟಾಪನೆ ಮಾಡಲಾಯಿತಂತೆ. ಆ ಗಣಪತಿಯನ್ನೂ ವಾತಾಪಿಗಣಪತಿ ಎಂದೇ ಕರೆಯಲಾಗುತ್ತೆ.ತಿರುವಾರೂರಿನ ತ್ಯಾಗರಾಜ ದೇವಾಲಯ ಬಹಳ ದೊಡ್ಡದು. ಅಲ್ಲಿನ ಪ್ರಾಕಾರದಲ್ಲಿ ಹದಿನಾರು ಬಗೆಯ ಗಣಪತಿಯ ಗುಡಿಗಳಿದ್ದು, ಅವು ತಿರುವಾರೂರು ಷೋಡಶ ಗಣಪತಿಗಳು ಎಂದೇ ಪ್ರಸಿದ್ದವಾಗಿವೆ. ಮುತ್ತುಸ್ವಾಮಿ ದೀಕ್ಷಿತರು ವಾತಾಪಿ ಗಣಪತಿಂ ಭಜೇಹಂ ಎಂದು ಹಾಡಿದ್ದು ತಿರುವಾರೂರಿನಲ್ಲಿನ ಗಣಪನ ಮೇಲೇ. (ಅವರು, ಎಲ್ಲಿರುವ ಹದಿನಾರೂ ಗಣಪತಿಗಳ ಬಗ್ಗೆಯೂ ಒಂದೊಂದು ಕೃತಿ ರಚನೆ ಮಾಡಿದ್ದಾರೆ.)
ಆಸಕ್ತರಿಗಾಗಿ, ವಾತಾಪಿಗಣಪತಿಂ ಭಜೇಹಂ ಕೃತಿಯ ಸಾಹಿತ್ಯ ಇಲ್ಲಿದೆ:
ವಾತಾಪಿ ಗಣಪತಿಂ. ರಾಗ: ಹಂಸಧ್ವನಿ. ತಾಳ: ಆದಿ.
ಪಲ್ಲವಿ:
ವಾತಾಪಿ ಗಣಪತಿಂ ಭಜೇಹಂ ವಾರಣಾಸ್ಯಂ ವರಪ್ರದಂ ಶ್ರೀ
ಅನುಪಲ್ಲವಿ:
ಭೂತಾದಿ ಸಂಸೇವಿತ ಚರಣಂ ಭೂತಭೌತಿಕ ಪ್ರಪಂಚಾಭರಣಮ್
ವೀತರಾಗಿಣಂ ವಿನುತಯೋಗಿಣಂ ವಿಶ್ವಕಾರಣಂ ವಿಘ್ನವಾರಣಂ
ಚರಣ:
ಪುರಾ ಕುಂಭಸಂಭವ ಮುನಿವರ ಪ್ರಪೂಜಿತಮ್ ತ್ರಿಕೋಣಮಧ್ಯಗತಂ
ಮುರಾರಿ ಪ್ರಮುಖಾದ್ಯುಪಾಸಿತಮ್ ಮೂಲಾಧಾರ ಕ್ಷೇತ್ರಸ್ಥಿತಂ
ಪರಾದಿ ಚತ್ವಾರಿ ವಾಗಾತ್ಮಕಂ ಪ್ರಣವಸ್ವರೂಪ ವಕ್ರತುಂಡಂ
ನಿರಂತರಂ ನಿಟಿಲ ಚನ್ದ್ರಖಂಡಮ್ ನಿಜವಾಮಕರ ವಿಧೃತೇಕ್ಷುದಂಡಂ
ಕರಾಂಬುಜ ಪಾಶ ಬೀಜಾಪೂರಂ ಕಲುಶವಿದೂರಂ ಭೂತಾಕಾರಂ
ಹರಾದಿ ಗುರುಗುಹ ತೋಷಿತ ಬಿಂಬಂ ಹಂಸಧ್ವನಿ ಭೂಶಿತ ಹೇರಂಬಂ
-ಹಂಸಾನಂದಿ
(ಕೆಲ ಸಂಶೋಧಕರು, ಮೂಲ ವಾತಾಪಿಗಣಪತಿಯೇ ತಿರುವಾರೂರಿನಲ್ಲಿದೆ ಎಂದೂ, ತಿರುಚೆಂಗಾಟಂಗುಡಿಯದ್ದೇ ನಂತರದ್ದು ಎಂದೂ ಹೇಳುತ್ತಾರೆ. ಅಂತೂ ಒಟ್ಟಿನಲ್ಲು ಬಾದಾಮಿಯಿಂದ ಹೊರಟ ಈ ಗಣಪ ದಕ್ಷಿಣ ತಮಿಳುನಾಡಿನಲ್ಲಿ ಸುಮಾರು ಸಾವಿರದ ಮುನ್ನೂರುವರ್ಷಕ್ಕೂ ಹೆಚ್ಚಿಗೆ ಮನೆ ಮಾಡಿದ್ದಾನೆ. ಇನ್ನೂರು ವರ್ಷಗಳಿಂದ, ಮುತ್ತುಸ್ಬಾಮಿದೀಕ್ಷಿತರ ರಚನೆಯಿಂದ, ಎಲ್ಲೆಡೆಯೂ ಪ್ರಖ್ಯಾತನಾಗಿದ್ದಾನೆ)
ಬಾಲಂಗೋಚಿ: ಈ ಬರಹವನ್ನು ಬರೆದ ನಂತರ ಸುನಿಲ್ ಜಯಪ್ರಕಾಶರು ಪ್ರಜಾವಾಣಿಯಲ್ಲೂ ಈ ಬಗ್ಗೆ ಒಂದು ಬರಹ ಬಂದಿದ್ದರ ಬಗ್ಗೆ ನನ್ನ ಗಮನ ಸೆಳೆದರು. ಅವರು ಹಾಕಿರುವ ಟಿಪ್ಪಣಿಯಲ್ಲಿ, ಆ ಲೇಖನಕ್ಕೊಂದು ಕೊಂಡಿಯನ್ನು ಕೊಟ್ಟಿದ್ದಾರೆ. ವಾತಾಪಿ ಗಣಪತಿಯ ಗುಡಿಯ ಹತ್ತಿರದ ನೋಟಕ್ಕಾಗಿ ನೀವು ಆ ಲೇಖನವನ್ನು ನೋಡಬಹುದು - ಹಂಸಾನಂದಿ, ಸೆಪ್ಟೆಂಬರ್ ೧೭, ೨೦೦೭)

- hamsanandi ರವರ ಬ್ಲಾಗ್
- Login or register to post comments
- 574 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ





RSS:
ಪ್ರತಿಕ್ರಿಯೆಗಳು
ಉ: ವಾತಾಪಿ ಗಣಪತಿಂ ಭಜೇಹಂ
ವಾತಾಪಿ ಗಣಪ ಕನ್ನಡ ನಾಡಿನವನೇ ಎಂದು ತಿಳಿದು ನಲಿವಾಯಿತು
----
ಕನ್ನಡಕ್ಕೆ ಬೇಕು ಕನ್ನಡದೇ ಸೊಬಗು,ಸೊಗಡು
ಉ: ವಾತಾಪಿ ಗಣಪತಿಂ ಭಜೇಹಂ
ಹಂಸಾನಂಡಿಯವರೇ...
ನಾನು ಏಕೋ ಇಷ್ಟು ದಿನ ಶಾಸ್ತ್ರೀಯ ಸಂಗೀತದಿಂದ ದೂರವಿದ್ದೇ. ಇವತ್ತು ನೀವು ಬರೆದ ಲಿಪಿಯನ್ನು ಎದುರು ಇಟ್ಟುಕೊಂಡು ಕೆಳಗಿನ ಕೊಂಡಿಯಿಂದ ಈ M S ಸುಬ್ಬುಲಕ್ಷ್ಮಿಯವರ ದ್ವನಿಯಲ್ಲಿ ವಾತಾಪಿ ಗಣಪತಿಮ್ ಭಜೇ ಹಮ್.. ಕೇಳಿದೆ...ನಿಜವಾಗ್ಲೂ ಮೊತ್ತ ಮೊದಲ ಬಾರಿಗೆ ನಾನು ಶಾಸ್ತ್ರೀಯ ಸಂಗೀತವನ್ನು ಎಂಜಾಯ್ ಮಾಡಿದೆ. ಇತ್ತ ಕಡೆ ನನ್ನ ಗಮನವನ್ನು ಸೆಳೆದದ್ದಕ್ಕೆ ತುಮ್ಬಾ ಥ್ಯಾಂಕ್ಸ್...
ದಯವಿಟ್ಟು ಈ ಕೃತಿಯ ಕನ್ನಡ ಅರ್ಥವನ್ನೂ ತಿಳಿಸಿ.
ಅತ್ವಾ ಕೆಳಗಿನ ಪದಗಳ ಅರ್ಥವನ್ನಾದ್ರೂ ತಿಳಿಸಿ.
> ವೀತ ರಾಗಿಣಮ್
>ವಿನುತಯೋಗಿಣಂ
>ಪುರಾ ಕುಂಭಸಂಭವ .... ಅಂದ್ರೆ ಯಾರು?
>ತ್ರಿಕೋಣಮಧ್ಯಗತಂ ದಲ್ಲಿ ತ್ರಿಕೋಣ ಅಂದ್ರೆ ಏನು?
>ಮೂಲಾಧಾರ ಕ್ಷೇತ್ರಸ್ಥಿತಂ ... ಮೂಲಾಧಾರ ಕ್ಷೇತ್ರಸ್ಥಿತಳು ದುರ್ಗೆ ಅಂತ ನಾನು ಈ ಮುಂಚೆ ಅಂದುಕೊಂಡಿದ್ದೆ.
>ಪರಾದಿ ಚತ್ವಾರಿ ವಾಕ್ ಗಳು ಯಾವುವು?
>ನಿಟಿಲ ಚನ್ದ್ರಖಂಡಮ್
>ನಿಜವಾಮಕರ ವಿಧೃತೇಕ್ಷುದಂಡಂ
>ಬೀಜಾಪೂರಂ
>ಕಲುಶವಿದೂರಂ ಭೂತಾಕಾರಂ
>ಗುರುಗುಹ ತೋಷಿತ ಬಿಂಬಂ
>>ಹಂಸಧ್ವನಿ ಭೂಶಿತ ಹೇರಂಬಂ
ದಯವಿಟ್ಟು ಕ್ಷಮಿಸಿ.. ನಾನು ಎಲ್ಲ ಪದಗಳನೂ ಇಲ್ಲಿ ರಿಪೀಟ್ ಮಾಡಿದೆ ಅಂತ ಕಾಣುತ್ತೆ.
ತುಂಬಾ ಶನ್ಯವಾದಗಳು .. ನಮ್ಮ ಗಮನಕ್ಕೆ ತಂದಿದ್ದಕ್ಕೆ!.
ಉ: ವಾತಾಪಿ ಗಣಪತಿಂ ಭಜೇಹಂ
http://sacred-songs.blogspot.com/2007/06/vatapi-ganapatim.html
ಉ: ವಾತಾಪಿ ಗಣಪತಿಂ ಭಜೇಹಂ
ಪ್ರಿಯ ಸವಿತೃ,
ಕೆಲ ಉತ್ತರಗಳು:
>ಕೆಳಗಿನ ಪದಗಳ ಅರ್ಥವನ್ನಾದ್ರೂ ತಿಳಿಸಿ.
> ವೀತ ರಾಗಿಣಮ್
=ಆಸೆಗಳನ್ನು ಗೆದ್ದವನನ್ನು(ಭಜಿಸುತ್ತೇನೆ)
>ವಿನುತಯೋಗಿಣಂ
=ಯೋಗಿಗಳಿಂದ ಸ್ತುತಿಸಲ್ಪಡುವವನನ್ನು
>ಪುರಾ ಕುಂಭಸಂಭವ .... ಅಂದ್ರೆ ಯಾರು?
=ಪುರಾ-ಹಿಂದೆ,ಹಿಂದೊಮ್ಮೆ; ಕುಂಭಸಂಭವ=ಅಗಸ್ತ್ಯ ಮುನಿ
>ತ್ರಿಕೋಣಮಧ್ಯಗತಂ ದಲ್ಲಿ ತ್ರಿಕೋಣ ಅಂದ್ರೆ ಏನು?
=ಕುಂಡಲಿನೀಶಕ್ತಿಯ ಆವಾಸವಾಗಿರುವ ಮೂಲಾಧಾರವೆಂಬುದು ತ್ರಿಕೋಣಾಕಾರವಾಗಿದೆ.
>ಮೂಲಾಧಾರ ಕ್ಷೇತ್ರಸ್ಥಿತಂ ... ಮೂಲಾಧಾರ ಕ್ಷೇತ್ರಸ್ಥಿತಳು ದುರ್ಗೆ ಅಂತ ನಾನು ಈ ಮುಂಚೆ ಅಂದುಕೊಂಡಿದ್ದೆ.
=ಮೂಲಾಧಾರಚಕ್ರದಲ್ಲಿರುವವಳು ಕುಂಡಲಿನೀಶಕ್ತಿ; ಆದ್ದರಿಂದ ಎಲ್ಲ ಶಕ್ತಿದೇವತೆಗಳನ್ನೂ ಆ ಚಕ್ರದಲ್ಲಿರುವಂತೆ ಚಿತ್ರಿಸಲಾಗುತ್ತದೆ. ಅದು ಮೊದಲ ಚಕ್ರವಾದ್ದರಿಂದ, ಸಾಧಕರು ಮೊದಲ ದೇವನಾದ ಗಣಪನನ್ನು ಅಲ್ಲಿ ಆರಾಧಿಸುತ್ತಾರೆ. ಉದಾಹರಣೆಗೆ, ಲಲಿತಾ ಸಹಸ್ರನಾಮದ "ಮೂಲಾಧಾರೈಕನಿಲಯಾ" ಎಂಬುದನ್ನು ಗಮನಿಸಿ.
>ಪರಾದಿ ಚತ್ವಾರಿ ವಾಕ್ ಗಳು ಯಾವುವು?
=ಪರಾ,ಪಶ್ಯಂತೀ,ಮಧ್ಯಮಾ ಹಾಗೂ ವೈಖರೀ ಎಂಬುವುವು ಚತ್ವಾರಿ ವಾಕ್ ಗಳು ಅಥವಾ ನಾಲ್ಕು ವಿಧದ ಮಾತುಗಳು.
>ನಿಟಿಲ ಚನ್ದ್ರಖಂಡಮ್
=ಹಣೆಯಲ್ಲಿ ಚಂದ್ರಖಂಡವಿರುವವನನ್ನು
>ನಿಜವಾಮಕರ ವಿಧೃತೇಕ್ಷುದಂಡಂ
=ತನ್ನ ಎಡಗೈಯಲ್ಲಿ ಕಬ್ಬಿನ ಜಲ್ಲೆಯನ್ನು ಹಿಡಿದವನನ್ನು
>ಬೀಜಾಪೂರಂ
=(ಎಲ್ಲಕ್ಕೂ)ಆಸರೆಯಾಗಿರುವವನನ್ನು
>ಕಲುಶವಿದೂರಂ ಭೂತಾಕಾರಂ
=ಪಾಪಗಳನ್ನು ದೂರ ಮಾಡುವವನನ್ನು, ಪಂಚಭೂತಗಳೇ ಮೈವೆತ್ತವನನ್ನು
>ಗುರುಗುಹ ತೋಷಿತ ಬಿಂಬಂ
=ಗುರುಗುಹ ಎನ್ನುವುದು ದೀಕ್ಷಿತರ ಅಂಕಿತ; ಗುರುಗುಹನನ್ನು ಆನಂದಪಡಿಸುವ ಬಿಂಬವನ್ನು(ಭಜಿಸುತ್ತೇನೆ)
>>ಹಂಸಧ್ವನಿ ಭೂಶಿತ ಹೇರಂಬಂ
=ಹಂಸಧ್ವನಿಯೆಂಬುದು ದೀಕ್ಷಿತರ ತಂದೆಯವರು ಕಂಡುಹಿಡಿದ ಈ ರಾಗದ ಹೆಸರು; ಹೇರಂಬನೆಂದರೆ ಯುದ್ಧಕ್ಕೆ ಹೊರಟ ಸಿಂಹವಾಹನ ಪಂಚಮುಖ ಗಣಪತಿ; ಈ ರಾಗದಿಂದ ಶೋಭಿಸಲ್ಪಡುವ ಗಣಪನನ್ನು ಆರಾಧಿಸುವೆನೆಂದರ್ಥ.
ನಿಮ್ಮವ
ಬೆನಕ
ಕನ್ನಡಪುಟ.ಬ್ಲಾಗ್‍ಸ್ಪಾಟ್.ಕಾಂ.
ಉ: ವಾತಾಪಿ ಗಣಪತಿಂ ಭಜೇಹಂ
ಬೆನಕರೇ .. ತುಂಬಾ ವಂದನೆಗಳು...
ತುಂಬಾ ಅರ್ಥ ಗರ್ಬಿತವಾದ ಕೃತಿ. ನಿಮ್ಮ ವಿವರಣೆಗಳು ಗಣಪನನ್ನು ಅರಿಯಲು ಸಹಾಯ ಮಾಡಿತು.
ಉ: ವಾತಾಪಿ ಗಣಪತಿಂ ಭಜೇಹಂ
ಬೆನಕರು ಅರ್ಥವನ್ನು ಚೆನ್ನಾಗಿ ತಿಳಿಸಿದ್ದಾರೆ.
ಅದರಲ್ಲಿ ಬಿಟ್ಟು ಹೋದ ಒಂದೆರಡು ವಿಷಯಗಳ ಬಗ್ಗೆ ಟಿಪ್ಪಣಿ:
ತ್ರಿಕೋನ ಮಧ್ಯಗತಮ್ -> ತಿರುವಾರೂರಿನಲ್ಲಿರುವ ವಾತಾಪಿಗಣಪತಿಯ ಮೂರ್ತಿ ( ಈ ಪುಟದಲ್ಲಿ ಹಾಕಿರುವ ವಿಗ್ರಹದ ಚಿತ್ರ ತಿರುವಾರೂರಿನದ್ದಲ್ಲ) ಒಂದು ತ್ರಿಕೋನದ ಮಧ್ಯೆ ಇದೆಯಂತೆ. ಹೀಗಾಗಿ ಈ ಗಣಪತಿಯನ್ನು ತ್ರಿಕೋನದ ಮಧ್ಯದಲ್ಲಿರುವ ಗಣಪತಿಯೇ ಎಂದು ಸ್ತುತಿಸುತ್ತಿದ್ದಾರೆ.
ಮೂಲಾಧಾರ ಕ್ಷೇತ್ರ ಸ್ಥಿತಂ -> ತಿರುವಾರೂರಿಗೆ ಮೂಲಾಧಾರ ಕ್ಷೇತ್ರ ವೆಂದು ಹೆಸರು. ಹಾಗಾಗಿಯೇ, ನಮಗೆ ಇದು ತಿರುವಾರೂರಿನ ವಾತಾಪಿಗಣಪತಿಯ ಮೇಲಿನ ಕೃತಿ ಎನ್ನುವುದು ಸ್ಪಷ್ಟವಾಗುತ್ತದೆ.
-ಹಂಸಾನಂದಿ
ಉ: ವಾತಾಪಿ ಗಣಪತಿಂ ಭಜೇಹಂ
ಕರಾಂಬುಜಪಾಶಬೀಜಾಪೂರಂ : ಕೈಗಳಲ್ಲಿ, ಕಮಲ, ಹಗ್ಗ, ಮತ್ತು ಬೀಜಾಪೂರವೆಂಬ ಹಣ್ಣು (ಇದು ಸೀತಾಫಲದ ರೀತಿಯ ಒಂದು ಹಣ್ಣು ಎಂದು ಬಿ.ಜಿ.ಎಲ್.ಸ್ವಾಮಿಯವರ ಒಂದು ಲೇಖನದಲ್ಲಿ ಓದಿದ ನೆನಪಿದೆ. ಬಹಳ ಬೀಜಗಳಿರುವುದರಿಂದ ಸೀತಾಫಲಕ್ಕೂ ಇದು ಸರಿಹೊಂದಬಹುದು)
-ಹಂಸಾನಂದಿ
ಉ: ವಾತಾಪಿ ಗಣಪತಿಂ ಭಜೇಹಂ
ನನ್ನಿ ಹಂಸಾನಂದಿಗಳೇ,
ಈ ವಿಷಯವಾಗಿ ೧೩ನೇ ತಾರೀಖು, ಪ್ರಜಾವಾಣಿಯ ಕರ್ನಾಟಕ ದರ್ಶನದಲ್ಲಿ ದ.ರಾ.ಪುರೋಹಿತ ಎಂಬುವರು ವಾತಾಪಿ ಗಣಪತಿಯ ಸುತ್ತ ಎಂಬ ಒಂದು ಚುಟುಕು ಬರಹವನ್ನು ನೀಡಿದ್ದಾರೆ.
ಉ: ವಾತಾಪಿ ಗಣಪತಿಂ ಭಜೇಹಂ
ಸುನಿಲರೆ, ನೀವು ಕೊಟ್ಟ ಕೊಂಡಿಗೆ ಧನ್ಯವಾದಗಳು. ಆ ಲೇಖನವನ್ನು ನಾನು ನೋಡಿರಲಿಲ್ಲ. ನಾನು ಬರೆಯುವಾಗ, ವಾತಾಪಿಗಣಪತಿಯ ವಿಗ್ರಹವಿದ್ದದ್ದು ಮೇಲಿನ ಶಿವಾಲಯದಲ್ಲೋ, ಕೆಳಗಿನ ಶಿವಾಲಯದಲ್ಲೋ ಎನ್ನುವುದು ಸ್ಬಲ್ಪ ಮರೆತು , ಒಂದು ತಪ್ಪು ಮಾಹಿತಿ ಹಾಕಿದ್ದೇನೆ - ಅದನ್ನು ತಿದ್ದುತ್ತೇನೆ.
-ಹಂಸಾನಂದಿ
ಉ: ವಾತಾಪಿ ಗಣಪತಿಂ ಭಜೇಹಂ
ಪುರೋಹಿತರ ಲೇಖನಗಳಲ್ಲಿ (ಸುನಿಲರು ಕೊಟ್ಟ ಪ್ರಜಾವಾಣಿ ಕೊಂಡಿ) ಕೆಲವು ತಪ್ಪುಗಳು ನುಸುಳಿವೆ ಎನ್ನಿಸುತ್ತೆ,. ತಿರುಚ್ಚಿಯ Rock fort ನಲ್ಲಿರುವ ವಿನಾಯಕನಿಗೆ ವಾತಾಪಿಗಣಪತಿ ಎಂಬ ಹೆಸರಿಲ್ಲ. ಪೆರಿಯಪುರಾಣದ ಪ್ರಕಾರವೂ, ಸಿರುತ್ತೊಂಡನು ವಿಗ್ರಹವನ್ನು ತಿರುಚ್ಚೆಂಗಾಟಂಗುಡಿಯಲ್ಲೇ ಸ್ಥಾಪಿಸಿದ್ದು.
ಮುತ್ತುಸ್ವಾಮಿ ದೀಕ್ಷಿತರು ರಚಿಸಿರುವ ಕೃತಿಯಂತೂ ತಿರುವಾರೂರಿನಲ್ಲಿರುವ ವಾತಾಪಿ ಗಣಪತಿಯ ಮೇಲೆಯೇ ಹೊರತು ತಿರುಚಿಯ ವಿನಾಯಕನ ಮೇಲಲ್ಲ. ಆ ಕೃತಿಯಲ್ಲೇ ಅದಕ್ಕೆ ಆಧಾರಗಳು ದೊರೆಯುತ್ತವೆ ( ಮೂಲಾಧಾರ ಕ್ಷೇತ್ರ ಸ್ಸ್ಥಿತಂ : ತಿರುವಾರೂರಿನಲ್ಲಿ ನೆಲೆಸಿದ ವಾತಾಪಿಗಣಪತಿ)
-ಹಂಸಾನಂದಿ
ಉ: ವಾತಾಪಿ ಗಣಪತಿಂ ಭಜೇಹಂ
ಪ್ರಿಯ ಹಂಸಾನಂದಿ,
ಒಳ್ಳೆಯ ಲೇಖನವನ್ನೇ ಬರೆದಿದ್ದೀರಿ; ದೀಕ್ಷಿತರ ಬಗ್ಗೆಯೂ ಮುಂದುವರೆಸಿ.
ನಿಮ್ಮವ
ಬೆನಕ
ಕನ್ನಡಪುಟ.ಬ್ಲಾಗ್‍ಸ್ಪಾಟ್.ಕಾಂ.
ಉ: ವಾತಾಪಿ ಗಣಪತಿಂ ಭಜೇಹಂ
ಬೆನಕರೆ, ನಿಮ್ಮ ಮೆಚ್ಚುಗೆಗೆ ಧನ್ಯವಾದಗಳು. ಖಂಡಿತ ನನಗೆ ತಿಳಿದಿರುವುದನ್ನು ಆಗಾಗ ಬರೆಯುತ್ತೇನೆ
-ಹಂಸಾನಂದಿ