ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಸಂದರ್ಶನ
  • ಚರ್ಚೆ
  • ಚಿತ್ರಪುಟಗಳು
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • ಸಂಪದ ಫೌಂಡೇಶನ್
  • Font Help

ಬರಹಗಳು: ಇಂದು ಓದಿದ ವಚನ

ಸಂಪದ › Sampada Blogs › hamsanandi ರವರ ಬ್ಲಾಗ್

ಹಂಸ ನಾದ

ಹಂಸ ನುಡಿದರೆ, ಹಂಸನಾದ!

ಅಂಗಳದೊಳಗೆ ಬೆಳದಿಂಗಳು ತುಂಬಿತು

December 14, 2007 - 1:25pm — hamsanandi

ಕೆಲವು ದಿನಗಳ ಹಿಂದೆ ಸಂಪದದ ಗೆಳೆಯರೊಬ್ಬರು ಜಾವಳಿ ಅಂದರೇನು ಅಂತ ಕೇಳಿದ್ದರು . ಮೊದಲೆ ಹೇಳಿಬಿಡುವೆ - ಜಾವಳಿಗೂ ಜವಳಿಗೂ ಅರ್ಥಾತ್ ಸಂಬಂಧ ಇಲ್ಲ ಅಂತ. ಜಾವಳಿ ಜವಳಿ ಏನೂ ಅವಳಿ-ಜವಳಿ ಪದಗಳಲ್ಲ. ಆದರೆ ಪದ ಜಾವಳಿ ಸುಮಾರು ಅವಳಿ ಜವಳಿ ಅಂದ್ರೂ ತಪ್ಪಿಲ್ಲ.

ಇದೇನಪ್ಪ ಜಾವಳಿ ಅನ್ನೋ ಪದದ ಅರ್ಥವನ್ನೇ ಹೇಳದೆ ಪದ ಹಾಡ್ತಿದಾನೆ ಅಂದ್ಕೋಬೇಡಿ. ಇಲ್ಲಿ ಪದ ಅಂದರೆ, ಒಂದು ವಾಕ್ಯದಲ್ಲಿ ಬರುವ ಮಾತುಗಳು ಅನ್ನೋ ಅರ್ಥವಲ್ಲ. ಬದಲಿಗೆ ಪದ ಅನ್ನೋದು ಒಂದು ರೀತಿಯ ಸಂಗೀತ ರಚನೆ. ಇದೇನಪ್ಪ ಹೀಗೆ ಅಂತೀರಾ? ಪದ ಹಾಡಬೇಡ ಸುಮ್ಮನೆ ನೀನು ಅಂತ ಹೇಳೋದು ಕೇಳಿಲ್ಲ್ವಾ-ಮತ್ತೆ ಮತ್ತೆ ಹೇಳಿದ್ದನ್ನೇ ಹೇಳೋರ್ಗೆ? ಅದಕ್ಕೆ ಕಾರಣ ಇದೆ. ಹರಿದಾಸರು ರಚಿಸಿರೋ ರಚನೆಗಳಲ್ಲಿ ಬಹುಪಾಲು ಕೃತಿಗಳಿಗೆ ಪದ ಅನ್ನೋ ಹೆಸರೇ ಸಲ್ಲತ್ತೆ. ಅವರ ರಚನೆಗಳನ್ನ ಕೀರ್ತನೆಗಳು, ಉಗಾಭೋಗಗಳು, ಸುಳಾದಿಗಳು ಮೊದಲಾಗಿ ವಿಂಗಡನೆ ಮಾಡಬಹುದು. ಪದ ಅನ್ನೋದು ಈ ಎಲ್ಲ ರಚನೆಗಳನ್ನೂ ಒಟ್ಟಿಗೆ ಸೂಚಿಸಲು ಇರೋ ಒಂದು ಸಾಮಾನ್ಯ ಹೆಸರು.

ಈ ಪದಗಳನ್ನು ಮೊದಲು ರಚಿಸಿದ್ದು ಯಾರು ಎಂದರೆ ನಾವು ನಮ್ಮ ಹರಿದಾಸರನ್ನೇ ಬೊಟ್ಟು ಮಾಡಿತೋರಿಸ್ಬೇಕಾಗುತ್ತೆ. ಹರಿದಾಸರ ಹಾಡುಗಳ ಕೇಂದ್ರಬಿಂದು ಹರಿಯೇ. ಹರಿಯ ಮೇಲೆ ಬರೆದ ರಚನೆಗಳಲ್ಲಿ ವೈವಿಧ್ಯಮಯವಾದ ಪದಗಳು ಇವೆ. ದೇವಸ್ತುತಿ, ಭಕ್ತಿಯನ್ನು ಸೂಚಿಸುವ ಪದಗಳು - ಇವನ್ನೇ ಕೀರ್ತನೆ, ದೇವರನಾಮ ಎನ್ನುವುದು. ಮತ್ತೆ ದೇವರನ್ನೇ ಮಗುವಿನಂತೆ ಭಾವಿಸಿ ಲಾಲಿಸುವ ತಾಯೀಭಾವದ ವಾತ್ಸಲ್ಯಭಾವದ ಪದಗಳು, ಮತ್ತು ಆ ಮಹಾಶಕ್ತಿಯನ್ನೇ ದೂಷಿಸಿ ಮರೆಯಲ್ಲಿ ಹೊಗಳುವ ನಿಂದಾ ಸ್ತುತಿಗಳು, ಅಥವಾ ಮಾನವ ಜೀವನಕ್ಕೆ ತತ್ವಗಳನ್ನು, ಮೌಲ್ಯಗಳನ್ನು ತೋರಿಸುವ ತತ್ವ ಪದಗಳು. ಇದರ ಜೊತೆಗೆ ದೇವನನ್ನು ತನ್ನ ಪತಿಯೆಂದೋ, ಇನಿಯನೆಂದೋ ಭಾವಿಸಿ ಹಾಡಿರುವ ನಾಯಕೀ ಭಾವದ ಶೃಂಗಾರ ಪದಗಳೂ ಇವೆ.

ಈಗಿನ ಸಂಗೀತದ ಪರಿಭಾಷೆಯಲ್ಲಿ ಪದ ಎಂಬುದರ ಅರ್ಥ ಸುಮಾರಾಗಿ ಈ ನಾಯಕೀ ಭಾವದ ಶೃಂಗಾರ ಪದಗಳಿಗೇ ಸೀಮಿತವಾಗಿದೆ. ತೆಲುಗಿನಲ್ಲಿ ಅನ್ನಮಯ್ಯ ಕೂಡ ಬರೆದ ರಚನೆಗಳಲ್ಲೂ ಸಾವಿರಾರು ಶೃಂಗಾರ ಪದಗಳು ಇವೆ.

ಈಗ ಜಾವಳಿ ಎನ್ನುವುದೂ ಶೃಂಗಾರ ಪದದ ರೀತಿಯ ಒಂದು ರಚನೆಯೇ. ಆದರೆ, ಹಾಡುವ ಪರಿಯಲ್ಲಿ ಸ್ವಲ್ಪ ವ್ಯತ್ಯಾಸ ತೋರಬಹುದು. ಪದಗಳನ್ನು ಸ್ವಲ್ಪ ನಿಧಾನವಾಗಿ, ವಿಳಂಬಕಾಲದಲ್ಲಿ, ಹೆಚ್ಚು ತೂಕವಾರ ರಾಗಗಳಲ್ಲಿ ಹಾಡಿದರೆ, ಜಾವಳಿಗಳನ್ನು ಸ್ವಲ್ಪ ಹಗುರವಾದ ರಾಗಗಳಲ್ಲಿ, ದೇಶ್ಯವಾದ ರಾಗಗಳಲ್ಲಿ ಹಾಡುವ ಪದ್ಧತಿ ಹೆಚ್ಚು. ಪದ-ಜಾವಳಿ ಎರಡರ ಮೂಲ ಭಾವವೂ ವಿರಹದ ವಿವರಣೆಯೇ ಆಗಿದ್ದರೂ, ಪದಗಳು ಹೇಳಬೇಕಾದ್ದನ್ನು ಸೂಕ್ಷ್ಮವಾಗಿ, ನವಿರಾಗಿ, ಎಷ್ಟು ಬೇಕೋ ಅಷ್ಟೇ ತೋರುವಂತಿರುತ್ತವೆ. ಜಾವಳಿಗಳಿಗೆ ಈ ಕಟ್ಟುಪಾಡು ಕಡಿಮೆಯಂತೆ. ಕೆಲವು ಜಾವಳಿಗಳು ಸೂಚ್ಯಕ್ಕಿಂತ ವಾಚ್ಯವಾಗಿರುತ್ತೆ ಅಂತ ಕೇಳಿದ್ದೇನೆ. ಆದರೆ, ಹೆಚ್ಚಿನ ಜಾವಳಿಗಳು ತೆಲುಗಿನಲ್ಲಿರುವುದರಿಂದ ವಾಚ್ಯಾರ್ಥ ನನಗೆ ಗೊತ್ತಾಗಿಲ್ಲ Eye-wink

ಹೆಚ್ಚಿನ ಪದ ಮತ್ತು ಜಾವಳಿಗಳು ನಾಯಕಿ ತನ್ನ ಸಖಿಗೆ ಹೇಳುವ ರೀತಿಯಲ್ಲಿರುತ್ತವೆ. ಕೆಲವೊಮ್ಮೆ ನಾಯಕಿ ನೇರವಾಗಿ ನಾಯಕನಿಗೆ ಹೇಳುವಂತಹವೂ ಉಂಟು.

ಪದ ಮತ್ತು ಜಾವಳಿ ಇವೆರಡೂ ರಚನೆಗಳೂ ನೃತ್ಯದಲ್ಲೂ ಕಾಣಿಸಿಕೊಳ್ಳುತ್ತವೆ. ಶತಮಾನದ ಹಿಂದೆ ಇವು ಹೆಚ್ಚಾಗಿ ದೇವದಾಸಿ ಪರಂಪರೆಯವರಿಗೆ ಮಾತ್ರ ಮೀಸಲಾಗಿದ್ದು, ಬೇರೆ ಸಂಗೀತಗಾರರು ಹಾಡುತ್ತಿರುವ ರೂಢಿ ಇರಲಿಲ್ಲವಂತೆ. ಈಗ ಆ ಕಟ್ಟುಪಾಡು ದೂರವಾಗಿದೆ. ಸಂಗೀತ ಕಚೇರಿಗಳಲ್ಲಿ ಮುಖ್ಯವಾದ ರಚನೆಗಳನ್ನೆಲ್ಲ ಪ್ರಸ್ತುತ ಪಡಿಸಿ ಆದ ಮೇಲೆ, ದೇವರನಾಮ, ಭಜನ್ ಮೊದಲಾದ ಲಘು ಪ್ರಕಾರದ ರಚನೆಗಳನ್ನು ಹಾಡುವಾಗ, ಪದ, ಮತ್ತು ಜಾವಳಿಗಳನ್ನೂ ಹಾಡುವ ರೂಢಿಯಿದೆ.

ಡಿ.ವಿ.ಜಿ. ಅವರು ತಮ್ಮ ಜ್ಞಾಪಕ ಚಿತ್ರಶಾಲೆಯಲ್ಲಿ, ಬೆಂಗಳೂರು ನಾಗರತ್ನಮ್ಮ (ಇವರೇ ಇರಬೇಕೆಂದು ನನ್ನ ನೆನಪು) ಎಂಬ ಕಲಾವಿದೆ ಹಾಡುತ್ತಿದ್ದ ಪದ ಮತ್ತು ಜಾವಳಿಗಳನ್ನು ನೆನಪು ಮಾಡಿಕೊಂಡಿದ್ದಾರೆ.

ಇಂದು ಈ ವಿಷಯದ ಬಗ್ಗೆ ಬರೆಯಲೂ ಕಾರಣವಿದೆ. ನಾನು ಮಾಡಿದ ಹಿಂದಿನ ಕರೆಗೆ ಓಗೊಟ್ಟು ಹಲವು ಮಿತ್ರರು ದಾಸರ ರಚನೆಗಳನ್ನು ವಿಕಿಗೆ ಸೇರಿಸಲು ನೆರವಾಗುತ್ತಿದ್ದಾರೆ. ಆ ಕೆಲಸದಲ್ಲಿ, ಒಬ್ಬರು ದಾಸರಚನಾ ಸಾಗರದಲ್ಲಿ ಸಿಕ್ಕಿದ ಒಂದು ಮುತ್ತನ್ನು ಹೆಕ್ಕಿಕೊಟ್ಟರು.

ಇದನ್ನು ಓದಿ: ತಂಗಾಳಿ ವಶವಲ್ಲವೇ ಎಂದು ಆರಂಭವಾಗುವ ಈ ಪದ.

ತಂಗಾಳಿ ವಶವಲ್ಲವೇ ರಾಗ:ಶಂಕರಾಭರಣ ತಾಳ: ಅಟ

ತಂಗಾಳಿ ವಶವಲ್ಲವೇ ||ಪ||

ಅಂಗದೊಳಗೆ ಬೆಳದಿಂಗಳು ತುಂಬಿತು ||ಅ.ಪ||

ಚಂದನದಿಂದ ಕುಚಂಗಳ ತವಿಸಲು ಇಂದುಕಿರಣ ಬಂದು ಕಂದಿಸಲು
ಮಂದ ಮಾರುತದಲಿ ನಿಂದಿರಲಾರೆನೇ ಹೊಂದಿದ ತಾಪವು ಹೋಹುದೇನೆ ಹೆಣ್ಣೇ ||ಚ1||

ಬಂಗಾರವೊಡಲಿಗೆ ಭಾರವಾಗಿದೆಯೇ ಶೃಂಗರಿಸಿ ಕೊಳ ಸೇರಲಿಲ್ಲ
ಅಂಗಜ ಶರತಾಪ ತಾಳಲಾರೆ ನಾನು ಉಂಗುರವು ನಿನಗೆ ಉಚಿತವೇನೇ ಹೆಣ್ಣೇ||ಚ 2||

ಮುನ್ನ ಪುರಂದರ ವಿಠಲರಾಯ ಕೂಡಿ ಇನ್ನೂ ಬಾರೆಂದರೆ ಬಾರನೇಕೆ
ಅನ್ನ ಪಾನ ರುಚಿಯಾಗಿ ತೋರಲಿಲ್ಲ ನಿನ್ನಾಣೆ ಕಣ್ಣಿಗೆ ನಿದ್ರೆ ಬಾರದು ಹೆಣ್ಣೇ ||ಚ 3||

ಪುರಂದರ ವಿಠಲನನ್ನು ಸೇರಿ, ನಂತರ ಅವನ ವಿರಹದಿಂದ ಬಸವಳಿದ ಹೆಣ್ಣಿನ ಬವಣೆಯನ್ನು , ಅವಳು ತನ್ನ ಗೆಳತಿಗೆ ಹೇಳಿಕೊಳ್ಳುವ ರೂಪದಲ್ಲಿರುವ ಈ ಶೃಂಗಾರ ಪದದಲ್ಲಿ ಪುರಂದರ ದಾಸರು ಬಹಳ ಸಮರ್ಥವಾಗಿ ತೋರಿದ್ದಾರೆ.

ಹೆಚ್ಚಿನ ಪದ, ಜಾವಳಿಗಳನ್ನು ಅನುಪಲ್ಲವಿಯಿಂದ ಆರಂಭಿಸುವುದೇ ರೂಢಿ. ಹಾಗಾಗಿ, ಇದನ್ನು ಅಂಗಳದೊಳಗೆ ಬೆಳದಿಂಗಳು ತುಂಬಿತು ಎಂಬ ಅನುಪಲ್ಲವಿಯಿಂದ್ಲೇ ಎತ್ತಿ ಹಾಡಿದರೆ ಸೊಗಸು ಎನ್ನಿಸಿತು. ಶಂಕರಾಭರಣದಂಥ ರಕ್ತಿ ರಾಗವನ್ನು ಇದಕ್ಕೆ ಸೂಚಿಸಿರುವುದರಿಂದ ಇದು ಪದವೇ - ಜಾವಳಿಯಲ್ಲ ಅಂತ ನನ್ನ ಅನಿಸಿಕೆ.

ಈ ಹಾಡನ್ನು ಹಾಡುವುದು ನಾನು ಕೇಳಿಲ್ಲ. ಇಂದಿನ ವರೆಗೂ ಇದನ್ನೂ ನೋಡಿಯೂ, ಓದಿಯೂ ಇರಲಿಲ್ಲ. ಆದರೆ, ನೋಡಿದೊಡನೆ ಎಷ್ಟು ಸುಂದರೆ ಪದ ಇದು ಎನ್ನಿಸಿತು. ನಿಮ್ಮೆಲ್ಲರೊಂದಿಗೆ ಹಂಚಿಕೊಳ್ಳೋಣ ಎಂದು ಕೂಡಲೇ ಬರೆದುಬಿಟ್ಟೆ!

-ಹಂಸಾನಂದಿ

  • ಕರ್ನಾಟಕ ಸಂಗೀತ
  • ಜಾವಳಿ
  • ಪದ
  • ಪುರಂದರ ದಾಸ
  • ಬೆಂಗಳೂರು ನಾಗರತ್ನಮ್ಮ
  • ಹರಟೆ
~.~
  • hamsanandi ರವರ ಬ್ಲಾಗ್
  • Login or register to post comments
  • 344 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Digg
  • Reddit
  • Furl
  • Google
  • Yahoo
  • ನಿರ್ವಾಹಕರ ಗಮನಕ್ಕೆ ತನ್ನಿ

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
December 14, 2007 - 1:47pm — ವೈಭವ

ಉ: ಅಂಗಳದೊಳಗೆ ಬೆಳದಿಂಗಳು ತುಂಬಿತು

ವೈಭವ's picture

ಹಂಸಾನಂದಿಗಳೆ,
ಅಂಗದೊಳಗೆ ಬೆಳದಿಂಗಳು ತುಂಬಿತು ಎಂಬ ಅನಿಸೇ ತುಂಬ ರಸವತ್ತಾಗಿದೆ. ಹಂಚಿಕೊಂಡಿದ್ದಕ್ಕೆ ನನ್ನಿ.
"...ಚಂದನದಿಂದ ಕುಚಂಗಳ ತವಿಸಲು ಇಂದುಕಿರಣ ಬಂದು ಕಂದಿಸಲು.."

ತವಿಸಲು ಅಂದ್ರೇನು?...ಅದು 'ತಣಿಸಲು' ಆಗಿರಬೇಕಿತ್ತಲ್ವ
---
ಕನ್ನಡಕ್ಕೆ ಬೇಕು ಕನ್ನಡದೇ ಸೊಬಗು,ಸೊಗಡು

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
December 15, 2007 - 5:30am — hamsanandi

ಉ: ಅಂಗಳದೊಳಗೆ ಬೆಳದಿಂಗಳು ತುಂಬಿತು

hamsanandi's picture

ವೈಭವರೆ,

ತವಿಸು ಪದದ ಅರ್ಥವನ್ನು ಜಿ.ವೆಂಕಟಸುಬ್ಬಯ್ಯನವರ ನಿಘಂಟು ಹೀಗೆ ಕೊಡುತ್ತೆ ನೋಡಿ:

೨. ತವಿಸು (ದೇ) (ಕ್ರಿ) ೧ ಕೊಲ್ಲು, ನಾಶಮಾಡು ೨ ನಿವಾರಿಸು, ಪರಿಹರಿಸು ೩ ಕುಗ್ಗಿಸು, ಕ್ಷೀಣಗೊಳಿಸು ೪ ನಾಶವಾಗು, ಇಲ್ಲವಾಗು ೫ ಖರ್ಚು ಮಾಡು, ವಿನಿಯೋಗಿಸು ೬ ಕಳೆ, ಪೋಲು ಮಾಡು ೭ ವಿರೂಪಗೊಳಿಸು ೮ ಸೋಲಿಸು ೯ ಮುಗಿಸು, ಪೂರೈಸು ೧೦ ನಿಲ್ಲಿಸು, ಸಾಕುಮಾಡು ೧೧ ಉಪ ಶಮನಗೊಳಿಸು, ಶಾಂತಗೊಳಿಸು ೧೨ (ಗಣಿತದಲ್ಲಿ) ಭಾಗಿಸು, ಭಾಗಾಕಾರ ಮಾಡು ೧೩ ತಪಸ್ಸು ಮಾಡು ೧೪ ದುಃಖಿಸು, ಪರಿತಪಿಸು

ಈ ಮೊದಲ ಚರಣದಲ್ಲಿ ಎಲ್ಲ ಕ್ರಿಯೆಗಳೂ ತಾವು ಮಾಡಬೇಕಾದ್ದಕ್ಕೆ ವ್ಯತಿರಿಕ್ತವಾಗಿ ಮಾಡುತ್ತಿರುವುದನ್ನು ಗಮನಿಸಿ.

ತಂಪಾದ ಚಂದ್ರನ ಕಿರಣ ತಂಪನ್ನೀಯುವಬದಲು ಕುಂದಿಸುತ್ತಿದ್ದೆ, ಒಣಗಿಸುತ್ತಿದೆ.
ಮಂದಮಾರುತದಲ್ಲಿ ಹಿತತೋರದೇ ನಿಲ್ಲಲಾಗುತ್ತಿಲ್ಲ.
ಹಾಗೇ, ಶೀತಲವಾಗಿರಬೇಕಿದ್ದ ಚಂದನ ಅದರ ಬದಲು ಕುಗ್ಗಿಸುತ್ತಿದೆ, ವಿರೂಪಗೊಳಿಸುತ್ತಿದೆ ಎಂದು ನಾನು ಇದನ್ನು ಅರ್ಥ ಮಾಡಿಕೊಂಡೆ.

-ಹಂಸಾನಂದಿ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ಶೃಂಗಾರ ರಸಮಂಜರಿ
  • ನವರಾತ್ರಿಯ ನಾಲ್ಕನೇ ದಿನ
  • ಓಂಕಾರಿ ಕಲ್ಯಾಣಿ ಶೃಂಗೇರಿ ಸಿರಿರಾಣಿ
  • ಪುರಂದರ ಗುರುಂ ವಂದೇ ದಾಸಶ್ರೇಷ್ಠಂ ದಯಾನಿಧಿಂ
  • ಬ್ರೋಚೇವಾರೆವರುರಾ ನಿನುವಿನಾ?
Syndicate content

ಲೇಖಕರು

hamsanandi's picture

ಪೂರ್ಣ ಹೆಸರು
ಹಂಸಾನಂದಿ

ಪರಿಚಯ

ಹೆಸರಲ್ಲೇನಿದೇ ರೀ? ನೀಲಾಂಜನ .. ರಾಮಕ್ರಿಯ .... ಹಂಸಾನಂದಿ ಯಾವ್ದೋ ಒಂದು!
ಒಬ್ಬ ಸಂಪದಿಗ - ಇನ್ನೂ ಹೆಚ್ಚಿಗೆ ಹೇಳ್ಬೇಕಾದ್ರೆ ಒಬ್ಬ ಕನ್ನಡಿಗ ಅಂದ್ರೆ ಸಾಕು. ಅಲ್ವಾ?

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ವಾಟರ್ ಪೋರ್ಟಲ್: ದಿನದ ಚಿತ್ರ

ಕುಡಿಯುವ ನೀರು?

(ಫೋಟೋ: Kedarnath, Dharwad)

ಮತ್ತಷ್ಟು...

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಬ್ಲಾಗ್ ಬರಹಗಳು

  • ಓದಿದ್ದು ಕೇಳಿದ್ದು ನೋಡಿದ್ದು-98 ಮಕ್ಕಳಿಗೆ ಟಿವಿ ನಿಷಿದ್ಧ
  • ಇಂದು ಓದಿದ ವಚನ: ಚಂದಿಮರಸ: ಅದೂ ಅಲ್ಲ ಇದೂ ಅಲ್ಲ ಮತ್ತೇನು?
  • ಗಾದೆಗಳು!!!
  • ಮತಾಂತರದ ಬಗ್ಗೆ: ಸ್ವಲ್ಪ late ಆದರೂ ನನ್ನ ಅನಿಸಿಕೆಗಳು
  • ಯೆರೆ ಗೌಡ - 100 ರಣಜಿ ಪಂದ್ಯಗಳ ಗೌರವ
  • 'ಜನ ಸಂಸ್ಕೃತಿ'ಯಲ್ಲಿ 'ಎನ್ನಂತರಂಗದ ಆತುಮ'
  • ಕಳಚಿಬೀಳುವ ಮುಖವಾಡ
  • ಕಲಿಕೆಗೆಲ್ಲಿದೆ ಕೊನೆ...
  • bio data
  • ಸಂತೋಷಕ್ಕೆ............. (ಗೀತಾ) ಜಪಾನಿ ವೇದಿಕೆಯಲ್ಲಿ
ಇನ್ನಷ್ಟು

ಇತ್ತೀಚಿನ ಪ್ರತಿಕ್ರಿಯೆಗಳು

  • hamsanandi
    ಉ: ಇಂದು ಓದಿದ ವಚನ: ಚಂದಿಮರಸ: ಅದೂ ಅಲ್ಲ ಇದೂ ಅಲ್ಲ ಮತ್ತೇನು?
    December 3, 2008 - 5:10am
  • venkatesh
    ಉ: ಮರುಕಳಿಸಿದ ನೆನಪು
    December 3, 2008 - 4:45am
  • hamsanandi
    ಉ: ಮತಾಂತರದ ಬಗ್ಗೆ: ಸ್ವಲ್ಪ late ಆದರೂ ನನ್ನ ಅನಿಸಿಕೆಗಳು
    December 3, 2008 - 12:12am
  • rasikathe
    ಉ: ಒಗಟು - ಬಿಡಿಸಿ!
    December 2, 2008 - 11:58pm
  • savithru
    ಉ: ಮತಾಂತರದ ಬಗ್ಗೆ: ಸ್ವಲ್ಪ late ಆದರೂ ನನ್ನ ಅನಿಸಿಕೆಗಳು
    December 2, 2008 - 11:47pm
  • kannadakanda
    ಉ: ಕನ್ನಡದಲ್ಲಿ ’ಆಗಮ’ ಮತ್ತು ಲೋಪ ಸಂಧಿಗಳು
    December 2, 2008 - 11:32pm
  • kalpana
    ಉ: ಉಗ್ರಗಾಮಿ ಹೇಡಿಗಳ ಹೀನ ಕೃತ್ಯದ ಹಿನ್ನೆಲೆಯಲ್ಲಿ ಒಂದು ಮನವಿ
    December 2, 2008 - 11:16pm
  • mahesha
    ಉ: ಕನ್ನಡದಲ್ಲಿ ’ಆಗಮ’ ಮತ್ತು ಲೋಪ ಸಂಧಿಗಳು
    December 2, 2008 - 11:04pm
  • kannadakanda
    ಉ: ಕನ್ನಡದಲ್ಲಿ ’ಆಗಮ’ ಮತ್ತು ಲೋಪ ಸಂಧಿಗಳು
    December 2, 2008 - 10:58pm
  • mahesha
    ಉ: ಮಲ್ಲೂ ಟೇಬಲ್ಲು, ಗುಲ್ಟೂ ಟೇಬಲ್ಲು , ಬಿಹಾರಿ ಟೇಬಲ್ಲು, ಕನ್ನಡ ಟೆಬಲ್ಲು
    December 2, 2008 - 10:46pm
ಇನ್ನಷ್ಟು
ಈಗಿನಂತೆ 2 ಸದಸ್ಯರು ಮತ್ತು 72 ಅತಿಥಿಗಳು ಆನ್ಲೈನ್ ಇರುವರು.


ಮೂರಿಟ್ಟರಾರಕ್ಕು | ಆರು ಹನ್ನೆರಡಕ್ಕು |
ಹೇರುವ ಗೊಡ್ಡು ಹಯನಕ್ಕು ಗುರುಕರುಣ |
ತೋರುವ ದಿನಕೆ ಸರ್ವಜ್ಞ

— ಸರ್ವಜ್ಞ

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments | Podcasts

separator