ಹಂಸ ನಾದ
ಹಂಸ ನುಡಿದರೆ, ಹಂಸನಾದ!
ಯಾವ ಮೋಹನ ಮುರಳಿ ಕರೆಯಿತು ದೂರ ತೀರಕೆ ನನ್ನನು ( ರಾಗ ಮೋಹನ - ಭಾಗ ೨)
ಭಾಗ ಒಂದರಲ್ಲಿ,
ಸರಸದ ಈ ರಸನಿಮಿಷ ಸ್ವರಸ್ವರವೂ ನವ ಮೋಹನ ರಾಗ
ಎಂಬ ಒಂದು ಚಿತ್ರಗೀತೆಯನ್ನು ಹೆಸರಿಸಿ, ಅದು ಯಾವ ಚಿತ್ರದ್ದು ಎಂದು ಕೇಳಿದ್ದೆ. ಯಾಕೋ ಯಾರಿಂದಲೂ ಮಾರುತ್ತರ ಬರಲಿಲ್ಲ. ಯಾವ ಚಿತ್ರ ಎಂದು ತಿಳಿದರೆ, ಅಂತರ್ಜಾಲದಲ್ಲಿ ಆ ಗೀತೆ ದೊರಕಿದರೆ, ಆ ಗೀತೆಯನ್ನು ಉದಾಹರಣೆಯಾಗಿ ಕೊಂಡಿ ಹಾಕಬೇಕೆಂದು ಬಯಸಿದ್ದೆ.. ಅದು ಆಗುವಂತೆ ಕಾಣುತ್ತಿಲ್ಲ. ಇರಲಿ. ಈ ಗೀತೆಯನ್ನು ಹೇಳಲು ಒಂದು ಕಾರಣವಿತ್ತು. ನೀವೆಲ್ಲರೂ ಊಹಿಸಿಯೇ ಇರುತ್ತೀರಿ. ಇದು ಮೋಹನ ರಾಗದಲ್ಲಿ ಸಂಯೋಜಿತವಾಗಿರುವ ಗೀತೆ. ಅಷ್ಬ್ಟೇ ಅಲ್ಲದೆ. ಹಾಡಿನ ಸಾಹಿತ್ಯದಲ್ಲಿ ರಾಗದ ಹೆಸರನ್ನು ಚಮತ್ಕಾರಿಕವಾಗಿ ಹೊಸೆಯುವುದು ಕರ್ನಾಟಕ ಸಂಗೀತದ ಒಂದು ವಿಶೇಷ. ಹೀಗೆ ಬರುವುದಕ್ಕೆ ರಾಗ ಮುದ್ರೆ ಎನ್ನುತ್ತೇವೆ. ಇದನ್ನೇ ನೋಡಿ, ನಾನು ಮೊದಲು ಹೇಳಿದ್ದು. ಪಾರಿಭಾಷಿಕ ಪದಗಳ ಪಟ್ಟಿ ಕೊಡುವುದಕ್ಕಿಂತ, ಹೀಗೆ ಸಮಯ ಬಂದಾಗ ಹೇಳಿದರೆ, ಓದಿದವರ ನೆನಪಿನಲ್ಲೂ ಉಳಿಯುತ್ತದೆ. ಹಲವು ವಾಗ್ಗೇಯಕಾರರು ರಾಗಮುದ್ರೆಯನ್ನು ಸಾದ್ಯವಾದಾಗ. ಅರ್ಥಕ್ಕೆ ಪೋಷಣೆ ಬರುವಂತಿದ್ದಾಗ ಪ್ರಯೋಗಿಸುತ್ತಾರೆ. ಓ, ಮತ್ತೊಂದು ಪಾರಿಭಾಷಿಕ ಪದ ಬಂದು ಬಿಟ್ಟಿತಲ್ಲ! ಚಲನಚಿತ್ರ ಸಂಗೀತದಲ್ಲಾದರೆ. ಸಾಹಿತ್ಯ (ಹಾಡು) ಬರೆಯುವವರು ಒಬ್ಬರಾದರೆ, ಅದಕ್ಕೆ ಸಂಗೀತ ಸಂಯೀಜಿಸುವರು ಇನ್ನೊಬ್ಬರು. ಕರ್ನಾಟಕ ಶಾಸ್ತ್ರೀಯ ಸಂಗೀತದ ಹೆಚ್ಚಿನಂಶ ರಚನೆಗಳಿಗೆ. ಸಾಹಿತ್ಯ ಮತ್ತು ಸಂಗೀತ ಸಂಯೋಜನೆ ಒಬ್ಬರೇ ವ್ಯಕ್ತಿ ಮಾಡಿರುತ್ತಾರೆ. ಅಂಥವರನ್ನು ವಾಗ್ಗೇಯಕಾರ (ವಾಕ್= ಮಾತು, ಗೇಯ = ಸಂಗೀತ) ಎನ್ನುತ್ತೇವೆ.
ರಾಗ ಮೋಹನದ ವಿಷಯ ಹೇಳುತ್ತಿದ್ದೆ. ಈ ಮೊದಲೇ ಹೇಳಿದಂತೆ, ಇದು ಪ್ರಪಂಚದ ಬಹುಪಾಲು ಸಂಗೀತ ಪದ್ಧತಿಗಳಲ್ಲೂ ಕಂಡುಬರುವ ಒಂದು ರಾಗ. ನಾವು ಇದನ್ನು ಮೋಹನ ಎಂಬ ಮೋಹಕ ಹೆಸರಿನಿಂದ ಕರೆದರೆ, ಹಿಂದೂಸ್ತಾನಿಯಲ್ಲಿ, ಇದಕ್ಕೆ ಭೂಪ್, ಅಥವಾ ಭೂಪಾಲಿ ಎಂಬ ಹೆಸರು. ಆ ಪದ್ಧತಿಯಲ್ಲ್ಲಿನ ವೈಶಿಷ್ಟ್ಯತೆ ಅನುಸಾರವಾಗಿ, ದೇಶ್‍ಕಾರ್ ಎಂಬ ರಾಗವನ್ನು ಅವರು ಭೂಪಾಲಿಯಿಂದ ಬೇರೆಯೆಂದೇ ಪರಿಗಣಿಸಿದರೂ, ಕರ್ನಾಟಕ ಸಂಗೀತದಲ್ಲಿ ಇವೆರಡೂ ಮೋಹನಕ್ಕೆ ಸರಿಸಮವೆಂದು ಹೇಳಬಹುದು.ಇನ್ನು ಚೀನೀಯರ ಸಂಗೀತದಲ್ಲಿ ಇದು ಬಹಳ ಮುಖ್ಯ ಸ್ಥಾನ ಹೊಂದಿದೆ. ಪಾಶ್ಚಾತ್ಯ ಸಂಗೀತದಲ್ಲೋ, ಇದು basic pentatonic scale.
ಕರ್ನಾಟಕ ಸಂಗೀತದಲ್ಲಿ. ಮೋಹನ ಒಂದು ಪ್ರಾಚೀನ ರಾಗ, ಹಾಗೂ ಬಹಳ ಜನಪ್ರಿಯವಾದಂಥ ರಾಗ. ಈ ರಾಗದಲ್ಲಿ ಎಲ್ಲಾ ಬಗೆಯ ಸಂಗೀತ ರಚೆನೆಗಳನ್ನು ನಾವು ಕಾಣಬಹುದು. ಗೀತೆ, ವರ್ಣ, ಕೃತಿ, ತಿಲ್ಲಾನ, ಭಜನ್. ಪದ ಇತ್ಯಾದಿ. ಏನು, ಪಟ್ಟಿ ಉದ್ದವಾಯಿತೆಂದಿರಾ? ಬೇಡ ಸ್ವಾಮೀ ! ಇದರ ವಿವರಗಳನ್ನು ಸ್ವಲ್ಪ ನಿದಾನವಾಗಿ ನೋಡೋಣ. ಮೊದಲಿಗೆ, ಈ ರಾಗಕ್ಕೆ ಬರುವ್ ಸ್ವರಗಳನ್ನು ಹೇಳಿ, ಆಮೇಲೆ ಕೆಲವು ಚಿತ್ರಗೀತೆಗಳ ಉದಾಹರಣೆಗಳು. ಆಮೇಲೆ ಇತರೆ ಭಾವಗೀತೆ ಇತ್ತಾದಿ. ನಂತರ ಶಾಸ್ತ್ರೀಯ ಸಂಗೀತದ ಉದಾಹರಣೆಗಳು. ಕಂತು ಕಂತಾಗಿ, ಕಂತುಪಿತನ ದಿವ್ಯನಾಮ ಸ್ಮರಿಸೋಣ ! **
ಈ ರಾಗಕ್ಕೆ ಬರುವ ಸ್ವರಗಳ್ಉ ಐದು. ಸ್ವರಗಳು ಕೆಳಗಿನಿಂದ ಮೇಲಕ್ಕೆ ಹೋಗುವುದನ್ನು ಆರೋಹಣ ಎನ್ನುತ್ತೇವೆ. ಮೇಲಿನಿಂದ ಕೆಳಕ್ಕೆ ಬರುವುದನ್ನು ಅವರೋಹಣ ಎನ್ನುತ್ತೇವೆ. ಒಂದು ರಾಗದ ಆರೋಹಣ-ಅವರೋಹಣ, ಆ ರಾಗದ ಒಂದು ಕಿರು ಸ್ವರೂಪವನ್ನು ನೀಡುತ್ತದೆ. ಇದನ್ನೆ ಇಂಗ್ಲಿಷನಲ್ಲ್ಯ್ scale ಎನ್ನುವುದು. ಎಲ್ಲಾ ರಾಗಗಳನ್ನೂ scale ನಿಂದ ಅಷ್ಟು ಕರಾರುವಾಕ್ಕಾಗಿ ತಿಳಿಸಲು ಆಗುವುದಿಲ್ಲ. ಇದಕ್ಕ್ಕೆಕಾರಣಗಳನ್ನು ಮುಂದೆ ಯಾವಾಗಲೊಮ್ಮೆ ಹೇಳುತ್ತೇನೆ. ಆದರೆ, ಮೋಹನದ ಮಟ್ಟಿಗೆ, ಆರೋಹಣ ಅವರೋಹಣಗಳು ರಾಗದ ಸ್ಥ್ತೂಲ ಪರಿಚಯ ಮಾದಿಕೊಡಲು ಶಕ್ತವಾಗುತ್ತವೆ.
ಮೋಹನ ಔಡುವ ರಾಗ. ಹಾಗೆಂದರೆ, ಆರೋಹಣ ಅವರೋಹಣ ಎರಡರಲ್ಲೂ, ಐದು ಸ್ವರಗಳಿರುತ್ತವೆ ಎಂದರ್ಥ. ಈ ರಾಗದಲ್ಲಿ ಮ ಮತ್ತು ನಿ ವರ್ಜ್ಯ. ಎಂದರೆ, ಮ ಮತ್ತು ನಿ ಈ ರಾಗದಲ್ಲು ಬರಲಾರವು. ಹಾಗಾದರೆ, ಇದರೆ ಆರೋಹಣ ಅವರೋಹಣ ಹೀಗಾಗುತ್ತದೆ.
ಸ ರಿ ಗ ಪ ದ ಸ
ಸ ದ ಪ ಗ ರಿ ಸ
ನಮ್ಮ ಚಿತ್ರಗೀತೆಗಳಲ್ಲಿ, ಎಷ್ಟೋ ಬಾರಿ, ಬೇರೆ ಬೇರೆ ರಾಗಗಳನ್ನು ಬೆರೆಸುವುದೂ ಉಂಟು. ಅಲ್ಲದೆ, ಎಷ್ಟೋ ಬಾರಿ, ಅದು ಯಾವುದೇ ಶಾಸ್ತ್ರೀಯ ಸಂಗೀತದ ರಾಗಕ್ಕೂ ಹೊಂದುವಂತಿರುವುದಿಲ್ಲ. ಆದರೆ, ಮೋಹನ ಚಲನಚಿತ್ರ ಸಂಗೀತ ನಿರ್ದೇಶಕರಿಗೂ ಪ್ರಿಯವಾದ ರಾಗ. ಹಾಗಾಗಿ, ಬಹಳ ಚಿತ್ರಗೀತೆಗಳು ಈ ರಾಗದಲ್ಲಿ ಯೋಜಿತವಾಗಿವೆ. ಎಷ್ಟೋ ಗೀತೆಗಳು ಶುದ್ಧವಾದ ಮೋಹನದಲ್ಲೇ ಇವೆ. ಹಾಗಾದರೆ, ಕನ್ನಡದ ಸವಿಯನ್ನು ಹೊಗಳುವ ಈ ಮೋಹನ ರಾಗದ ಗೀತೆಯೊಂದಿಗೆ ಇವತ್ತಿನ ಕಂತು ಮುಗಿಯಲಿ. ನಿಮ್ಮೆಲ್ಲರಿಗೂ ಇದು ಗೊತ್ತಿರುವ ಹಾಡೇ. ರಾಜನ್-ನಾಗೇಂದ್ರ ಅವರ ನಿರ್ದೇಶನದಲ್ಲಿ, ಡಾ.ರಾಜ್‍ಕುಮಾರರ ಸಿರಿಕಂಠದಲ್ಲಿ ಜೇನಿನ ಹೊಳೆಯೋ ಹಾಳಿನ ಮಳೆಯೋ ಸುಧೆಯೋ ಕನ್ನಡ ಸವಿನುಡಿಯೋ:
http://www.musicindiaonline.com/p/x/EJOjO14onS.As1NMvHdW/
ಅದು ಮೋಹನದ ಉದಾಹರಣೆ ಎಂದು ಗೊತ್ತಿಲ್ಲದಿದ್ದರೆ, ಇಂದು ಅದು ನಿಮಗೆ ಗೊತ್ತಾಗಿದೆ. ಇನ್ನು ಮುಂದೆ pattern matching ಪ್ರಾರಂಭಿಸಬಹುದು! ಹಾಡಿನ ನಡುವೆ ಬರುವ ಸ್ವರಗಳನ್ನು, ನಾನು ಮೇಲೆ ಕೊಟ್ಟಿರುವ ಆರೋಹಣ ಅವರೋಹಣಕ್ಕೆ ಹೋಲಿಸಿ ನೋಡಿ.
ಓದಿ, ಏನೆನ್ನಿಸಿತು ಎಂದು ಎರಡು ಸಾಲು ಬರೆಯಿರಿ; ಮುಂದಿನ ಬಾರಿ, ಹಲವು ಮೋಹನ ಸುಮದುರ ಚಿತ್ರಗೀತೆಗಳೊಂದಿಗೆ ಮರಳಿ ಬರುವೆ.
-ಹಂಸಾನಂದಿ
** : ಕಂತುಪಿತನ ದಿವ್ಯ ನಾಮ ಅಂತರಂಗದೊಳಗೆ ಇಟ್ಟು ಚಿಂತೆಯಲ್ಲ ಬಿಟ್ಟು ನಿಸ್ಚಿಂತನಾದವಗಲ್ಲದೇ, ಸುಮ್ಮನೇ ದೊರಕುವುದೇ ಶ್ರೀ ರಾಮನ ದಿವ್ಯ ನಾಮವು? ಎಂದು ಪುರಂದರ ದಾಸರು ಒಂದು ದೇವರನಾಮದಲ್ಲಿ ಹೇಳುತ್ತ್ತಾರೆ ![]()

- hamsanandi ರವರ ಬ್ಲಾಗ್
- Login or register to post comments
- 640 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ





RSS:
ಪ್ರತಿಕ್ರಿಯೆಗಳು
Re: ಯಾವ ಮೋಹನ ಮುರಳಿ ಕರೆಯಿತು ದೂರ ತೀರಕೆ ನನ್ನನು ( ರಾಗ ಮೋಹನ - ಭಾಗ ೨)
ಒಳ್ಳೆಯ ಪರಿಚಯ ಮಾಡಿಕೊಟ್ಟಿದ್ದೀರಿ.
ನನ್ನ ಒಂದು ಪ್ರಶ್ನೆ ಇದೆ. ಹಾಡೊಂದನ್ನು ತೆಗೆದುಕೊಂಡು ಅದರ ಸ್ವರಗಳನ್ನು ಕಂಡು ಹಿಡಿಯುವುದು ಅನುಭವದಿಂದ/ಪ್ರತಿಭೆ ಇಂದ ಮಾತ್ರ ಸಾಧ್ಯವೆ?
ನೀವು ಹೇಗೆ ಮಾಡಿದ್ರಿ ಎಂದು ತಿಳಿಸಿ.
Re: ಯಾವ ಮೋಹನ ಮುರಳಿ ಕರೆಯಿತು ದೂರ ತೀರಕೆ ನನ್ನನು ( ರಾಗ ಮೋಹನ - ಭಾಗ ೨)
ನೀವು ಹೇಗೆ ಮಾಡಿದ್ರಿ ಎಂದು ತಿಳಿಸಿ.
ಇದಕ್ಕೆ ಉತ್ತರ ಸ್ವಲ್ಪ ಸಂಕೀರ್ಣವಾದದ್ದು. ಕೆಲವರಿಗೆ ಇದು ದೈವದದತ್ತವಾದ ಪ್ರತಿಭೆ ಎನ್ನುತ್ತಾರೆ. ನನ್ನ ಪ್ರಕಾರ, ಈ ಪ್ರತಿಭೆಗೆ ಮೂಲ ಕಾರಣ, ಎಂತಹವರು ಬೆಳೆದು ಬರುವ ಸಂಗೀತಮಯ ಪರಿಸರ. ಎಂದರೆ, ಇದನ್ನು ತಕ್ಕ ಮಟ್ಟಿಗೆ ಸಂಗೀತವನ್ನು ಕೇಳುವುದರಿಂದ, ಸ್ವಲ್ಪ ಕಲಿಯುವುದರಿಂದ, ಪ್ರಯತ್ನಪೂರ್ವಕವಾಗಿ ಬೆಳೆಸಿಕೊಳ್ಳಬಹುದು. ಇದಕ್ಕೆ ಸಂಗೀತದ ಪರಿಭಾಷೆಯಲ್ಲಿ ಸ್ವರಜ್ಞಾನ ಎನ್ನುತ್ತೇವೆ. ಎಷ್ಟೋ ಜನ ಚೆನ್ನಾಗಿ ಹಾಡಬಲ್ಲವರೂ, ರಾಗಗಳನ್ನು ಗುರುತಿಸುವುದಕ್ಕೆ ತಿಣುಕುವುದು, ಇದರ ಅಭಾವದಿಂದಲೇ.
ಇನ್ನು ನಾನು ಏನು ಮಾಡಿದೆ? ನಾನು ತಕ್ಕ ಮಟ್ಟಿಗೆ ಕರ್ನಾಟಕ ಸಂಗೀತವನ್ನು ಕಲಿತಿದ್ದೇನೆ. ಜೊತೆಗೆ ಬಹಳಷ್ಟು ಕರ್ನಾಟಕ ಸಂಗೀತ ಹಾಗೂ ಹಿಂದೂಸ್ತಾನಿ ಸಂಗೀತವನ್ನು ಆಲಿಸಿದ್ದೇನೆ. ಸಾದ್ಯ್ಬ್ವಾದಷ್ಟು ಓದಿಕೊಂಡಿದ್ದೇನೆ..
ಕೆಲವಮ್ ಬಲ್ಲವರಿಂದ ಕಲ್ತ್ತು.....
-ಹಂಸಾನಂದಿ
Re: ಯಾವ ಮೋಹನ ಮುರಳಿ ಕರೆಯಿತು ದೂರ ತೀರಕೆ ನನ್ನನು ( ರಾಗ ಮೋಹನ - ಭಾಗ ೨)
ಹಂಸಾನಂದಿಯವರಿಗೆ,
ತುಂಬ ಒಳ್ಳೆಯ ಕೆಲಸ....ಇಷ್ಟವಾಯಿತು ನಿಮ್ಮ ಸರಣಿ
ತಮಗೆ ಕೆಲವು ಮನವಿಗಳು.
೧) ಈ ಪ್ಯಾಟ್ರನ್ ಮ್ಯಾಚಿಂಗ್ ಅಷ್ಟೊಂದು ಸುಲಭವಾ? 'ಸರಿಗಪದಸ' (ಅರೋಹಣ) ಹೇಳಿದ್ದೀರಾ ? ಆದರೆ ಅವುಗಳ ಏರಿಳಿತ ಕೊಟ್ಟರೆ ನನ್ನಂತವರಿಗೆ ಇನ್ನು ಸರಿಯಾಗಿ ಅರ್ಥವಾಗುತ್ತದೆ.
೨) ಹಾಗೆಯೆಯ್ ನೀವು ಇಲ್ಲಿ ಕೊಟ್ಟಿರುವ ಕೀರ್ತನೆಯಲ್ಲಿರುವ 'ಕಂತುಪಿತ' ಅಂದ್ರೆ ವಿಷ್ಣು ಅಲ್ವಾ? ಈ ಪದದ ವ್ಯುತ್ಪತ್ತಿಯ ಬಗ್ಗೆ ತಿಳಿಸಿ. ಏಕೆಂದರೆ ಕಂತು ಅಂದ್ರೆ installment ಅಂತ ಮಾತ್ರ ನನಗೆ ಗೊತ್ತು. ಇಲ್ಲಿರುವ ಕಂತು ಅಂದ್ರೇನು?
೩) ಮುಂದೆ ಯಾವಗ್ಲಾದ್ರೂ 'ತೋಡಿ' ರಾಗದ ಬಗ್ಗೆ ತಿಳಿಸಿಕೊಡಿ.( ಇದು ತುಂಬ ಕಷ್ಟ ಅಂತಾರೆ ಏಕೆ?)
Re: ಯಾವ ಮೋಹನ ಮುರಳಿ ಕರೆಯಿತು ದೂರ ತೀರಕೆ ನನ್ನನು ( ರಾಗ ಮೋಹನ - ಭಾಗ ೨)
ವೈಭವ ಅವರೆ,
ನಿಮಗೆ ಇದು ಹಿಡಿಸಿದ್ದು ಸಂತೋಷ. ನೀವು ಹೇಳಿದ ಅಂಶಗಳನ್ನು ಗಮನದಲ್ಲಿಟ್ಟುಕೊಳ್ಳುತ್ತೇನೆ. ನಾನು ಹಿಂದೆಯೇ ಹೇಳಿದ್ದೊಂತೆ, ಪ್ಯಾಟರ್ನ್ ಮ್ಯಾಚಿಂಗ್ ಬೆಳೆಸಿಕೊಳ್ಳಬೇಕಾದರೆ, ಒಂದೇ ದಾರಿ. ಹೆಚ್ಚು ಹೆಚ್ಚು ಸಂಗೀತವನ್ನು ಆಲಿಸಬೇಕು. ಮೊದಮೊದಲು ಅಷ್ಟಾಗಿ, ಅರ್ಥವಾಗದಿರಬಹುದು. ಹಾಡ್ತಾ ಹಾಡ್ತಾ ರಾಗ ಎನ್ನುವ ಹಾಕೆ, ಕೇಳ್ತಾ ಕೇಳ್ತಾ ರಸಿಕರಾಗಬಹುದು.
ಬಹಳ ತಾಂತ್ರಿಕವಾಗಿ ಹೋಗಬಾರದೆಂದು, ಸ್ವಲ್ಪ ಕಡುಮೆ ವಿವರಗಳನ್ನು ಕೊಟ್ಟಿದ್ದೆ. ನಾನು ಮೋಹನ ರಾಗವನ್ನು ಮೊದಲಿಗೆ ಎತ್ತಿಕೊಂಡದ್ದಕ್ಕೂ ಇದೇ ಕಾರಣ, ಏನೆಂದರೆ, ಇದು ಒಂದು ಸರಳ ರಾಗ. ಹಾಗೆಂದರೆ, ಪ್ರಸಿದ್ಧ ಸಂಗೀತಗಾರರು ಇದನ್ನು ಹಾಡುವುದಿಲ್ಲ ಎಂದಲ್ಲ. ಆರಂಭದ ಕಲಿಕೆಯವರೂ ಪ್ರಯತ್ನಿಸಲು ಸುಲಭವಾದ ರಾಗ ಇದು. ಹಾಗಾಗಿ ಪರಿಚಯಿಸಲೂ ಸುಲಭ ಎಂದು ತೆಗೆದುಕೊಂಡೆ.
ಮುಂದಿನ ಭಾಗಗಳಲ್ಲಿ, ಹೊಸ ಹೊಸ ಪದಗಳನ್ನು ವಿವರಿಸುತ್ತಾ ಹೋಗೋಣ. ಮೋಹನ ಮುರಳಿಯನ್ನಿನ್ನಷ್ಟು ಸವಿಯೋಣ. ಈ ರಾಗಕ್ಕೇ, ಇನ್ನೂ ೨-೩ ಭಾಗಗಳಾಗಬಹುದು ಎಂದೆನಿಸುತ್ತಿದೆ.
ಇನ್ನು ತೋಡಿ ರಾಗದ ವಿಷಯ. ಇದು ಕರ್ನಾಟಕ ಸಂಗೀತದ ಒಂದು specialty ರಾಗ ಎನ್ನಬೇಕು. ಏಕೆಂದರೆ, ಹಿಂದೂಸ್ತಾನಿಯಲ್ಲು ಇಂತಹ ರಾಗ ಇಲ್ಲ. ಅಷ್ಟೇಕೆ, ಇನ್ನಾವ ಸಂಗೀತ ಪದ್ಧತಿಯಲ್ಲೂ ನಮ್ಮ ತೋಡಿ ಭೈರವಿಯಂಥ ರಾಗಗಳಿಲ್ಲ. ಅವುಗಳ ಮೇಲೂ ಮುಂದೆ ಬರೆಯುವ ಆಸೆಯಿದೆ.
-ಹಂಸಾನಂದಿ
Re: ಯಾವ ಮೋಹನ ಮುರಳಿ ಕರೆಯಿತು ದೂರ ತೀರಕೆ ನನ್ನನು ( ರಾಗ ಮೋಹನ - ಭಾಗ ೨)
ಹಂಸಾನಂದಿಯವರೇ,
ಸರಣಿಯ ಮೊದಲ ೨ ಕಂತುಗಳು ಬಹಳ ಚೆನ್ನಾಗಿದೆ. ಸುಲಭವಾಗಿ ಅರ್ಥವಾಗುವಂತೆ ಬರೆದಿದ್ದೀರ.
ರಾಗ ಲಕ್ಷಣ ತಿಳಿಯಲು pattern matching ಗಿಂತ ಬೇರೆ ಸುಲಭ ದಾರಿ ಇಲ್ಲ. ಕೆಲವರು ಇದನ್ನು ಕೇಳ್ಮೆ ಸಂಗೀತ ಎಂದೂ ಕರೆಯುತ್ತಾರೆ. ಇಂದಿಗೂ ನಾನು ದೇಶ್‍ರಾಗ್ ಕೇಳಿದರೆ ತಕ್ಷಣ "ಮಿಲೇ ಸುರ್ ಮೇರಾ ತುಮ್ಹಾರ" ನೆನಪಾಗುತ್ತದೆ.
ಮೋಹನ ನಿಜಕ್ಕೂ ಮನಮೋಹನ ರಾಗ.
ಸಿರಿಗನ್ನಡಂ ಗೆಲ್ಗೆ, ಸಿರಿಗನ್ನಡಂ ಬಾಳ್ಗೆ
ಉ: Re: ಯಾವ ಮೋಹನ ಮುರಳಿ ಕರೆಯಿತು ದೂರ ತೀರಕೆ ನನ್ನನು ( ರಾಗ ಮೋಹನ - ಭಾಗ ೨)
ವೈಭವ ಅವರೇ,
ನಿಮ್ಮ 'ಕಂತುಪಿತ' ಪದದ ವ್ಯುತ್ಪತ್ತಿ ಬಗೆಗಿನ ಪ್ರಶ್ನೆಗೆ ಹಂಸಾನಂದಿಯವರು ಉತ್ತರ ಕೊದಲು ಮರೆತಿರಬಹುದು. ಕಂತುಪಿತ ಎಂದರೆ ಮನ್ಮಥನ ಅಪ್ಪ ಎಂದರ್ಥ. ಇನ್ನು ವ್ಯುತ್ಪತ್ತಿ- ಸಂಸ್ಕೃತದ ಕಂದರ್ಪ ಕನ್ನಡದ 'ಕಂತು' ವಾಗಿರಬಹುದು ಎಂದುಕೊಂಡಿದ್ದೇನೆ.
'ಕಂತುಪಿತನೆ ಕೇಳೋ ಎನ್ನ ಅಂತರಂಗದಾಸೆಯನ್ನು ....' ('ನಿನ್ನ ನೋಡಿ ಧನ್ಯನಾದೇನೋ' - ದಾಸರ ಪದದಿಂದ)
ಶಾಮಲ