26
October
2014

ಸಂಪದ - Sampada

'ಹೊಸ ಚಿಗುರು, ಹಳೆ ಬೇರು'

ರಾಹು-ಕೇತು ಕಾಟ, ಮತ್ತು ನವಗ್ರಹ ಸ್ತೋತ್ರ

June 18, 2008 - 5:40am
hamsanandi
2.666665

ಚಕ್ರವತ್ಪರಿವರ್ತಂತೇ ದು:ಖಾನಿ ಚ ಸುಖಾನಿ ಚ ಅನ್ನೋದು ಸಂಸ್ಕೃತದ ಪ್ರಸಿದ್ಧ ಮಾತು. ಅಂದರೆ, ಸೋವು ನಲಿವುಗಳೆರಡೂ ಚಕ್ರದಂತೆ ಮತ್ತೆ ಮತ್ತೆ ತಿರುಗಿ ತಿರುಗಿ ಮರಳಿ ಮರಳಿ ಬರುತ್ತಿರುತ್ತವೆ ಎಂದರ್ಥ. ಚಕ್ರದಂತೆ ಬರೋದು ಬರೀ ಸುಖದು:ಖಗಳು ಮಾತ್ರ ಅಲ್ಲ ಅನ್ನೋದು ಮಾತ್ರ, ಚಿಕ್ಕ ಮಕ್ಕಳಿಗೂ ಗೊತ್ತಿರೋ ಸಂಗತಿ. ಹಗಲು ರಾತ್ರಿಯ ಚಕ್ರಕ್ಕಿಂತ ಬೇಕೇ ಮರಳಿ ಮರಳಿ ಸುತ್ತುವ ಚಕ್ರ? ಅದೇ ರೀತಿ ಆಕಾಶದಲ್ಲಿ ಇನ್ನೊಂದು ಕಾಲಕಾಲಕ್ಕೆ ಮರಳಿ ಬರೋ ಚಕ್ರ ಇದೆ - ಆದರೆ ಇದು ಸಾಧಾರಣವಾಗಿ ಎಲ್ಲರಿಗೂ ತಿಳಿದಿರಲ್ಲ, ಅಷ್ಟೇ. ಇದೇ ಗ್ರಹಣ ಚಕ್ರ (Saros cycle- ಸೆರಾಸ್ ಚಕ್ರ. ಇದಕ್ಕೆ ನಮ್ಮ ದೇಶದಲ್ಲಿ, ನಮ್ಮ ಭಾಷೇಲಿ ಬೇರೆ ಹೆಸರಿದೆಯೋ ಇಲ್ಲವೋ ತಿಳಿಯದು. ಅದಕ್ಕೆ ಅರ್ಥ ಗೊತ್ತಾಗೋ ಹಾಗೆ ಗ್ರಹಣಚಕ್ರ ಅನ್ನೋ ಭಾವಾನುವಾದವನ್ನು ಮಾಡಿದೀನಿ. ತಪ್ಪಿದ್ದ್ರೆ ತಿದ್ದಿ! ತಿದ್ಕೋತೀನಿ.)

ಕೆಲವು ದಿನದ ಮೊದಲು ರಾಹು-ಕೇತು ಕಾಟ ಅಂತ ಸ್ವಲ್ಪ ಗಳಹಿದ್ದೆ.ಮತ್ತೆ ಇವತ್ತು ಅದನ್ನ ಮುಂದುವರ್ಸೋಣ ಅಂತ ..ಅಲ್ಲದೆ, ಗ್ರಹಣಚಕ್ರ ಅರ್ಥ ಆಗ್ಬೇಕಾರೆ ರಾಹು ಕೇತು ವಿಷ್ಯ ಸ್ಪಷ್ಟ ಆಗ್ಬೇಕು ಮೊದಲು.

ನಮಗೆಲ್ಲ ಸೂರ್ಯನ ಸುತ್ತ ಭೂಮಿ ಸುತ್ತೋದೂ, ಭೂಮಿ ಸುತ್ತ ಚಂದ್ರ ಸುತ್ತೋದೂ ಗೊತ್ತೇ ಇದೆ. ಆ ಮೇಲೆ, ಒಂದು ಕಾಕತಾಳೀಯವಾದ ಒಂದು ವಿಚಾರದಿಂದ ಗ್ರಹಣಗಳನ್ನು ನಾವು ನೋಡ್ತೀವಿ. ಅದೇನಂದ್ರೆ, ನಮಗೆ ಭೂಮಿಯಿಂದ ನೋಡೋವಾಗ ಸೂರ್ಯನ ಗಾತ್ರವೂ, ಚಂದ್ರನ ಗಾತ್ರವೂ ಸರಿಸುಮಾರು ಒಂದೇ. ಚಂದ್ರನಿಗಿಂದ ಸೂರ್ಯ ಸುಮಾರು ನಾನೂರರಷ್ಟು ದೊಡ್ಡವ್ನು. ಹಾಗೇ ಸುಮಾರು ನಾನೂರರಷ್ಟು ಹೆಚ್ಚು ದೂರ್ದಲ್ಲೂ ಇದಾನೆ. ಅದಕ್ಕೆ ನಮ್ಗೆ ಅಪರೂಪಕ್ಕಾದ್ರೂ ಪೂರ್ಣ ಸೂರ್ಯಗ್ರಹಣ ಕಾಣ್ಸುತ್ತೆ. ಹತ್ತು, ಇಪ್ಪತ್ತು ಚಂದ್ರಗಳಿರೋ ಗುರು, ಶನಿಗಳ ಮೇಲೆ ಈ ರೀತಿ ಗ್ರಹಣಗಳು ಕಾಣೋಲ್ಲ. ಗ್ರಹಣ ಸಾಧ್ಯವಾಗೋಕೆ ಬೇಕಾದ ಇನ್ನೊಂದು ವಿಷಯಏನೂಂದ್ರೆ, ಭೂಮಿ ಸೂರ್ಯನ ಸುತ್ತ ಸುತ್ತೋ ಪಾತಳೀನೂ,ಚಂದ್ರ ಭೂಮಿ ಸುತ್ತ ಸುತ್ತೋ ಸಮಪಾತಳೀನೂ ಸುಮಾರಾಗಿ ಒಂದೇ. ಹಾಗಾಗಿ, ಒಂದೊಂದು ಸಲ ಸೂರ್ಯ ಭೂಮಿ ನಡುವೆ ಚಂದ್ರನೂ, ಕೆಲವೊಮ್ಮೆ ಸೂರ್ಯ ಚಂದ್ರ ನಡುವೆ ಭೂಮಿಯೂ ಬರತ್ತೆ. ಆಗ ಒಂದರ ನೆರಳು ಒಂದರ ಮೇಲೆ ಬಿದ್ದು ಗ್ರಹಣ ಆಗತ್ತೆ. ಇದು ಬಿಡಿ, ಚಿಕ್ಚಿಕ್ ಮಕ್ಕಳ್ಗೂ ಗೊತ್ತಿರೋ ವಿಷ್ಯ.

ಆದ್ರೆ, ನಮ್ಗೇ ಗೊತ್ತಿರೋ ಹಾಗೆ, ಪ್ರತಿ ಅಮಾವಾಸ್ಯೆಗೆ ಸೂರ್ಯ ಗ್ರಹಣವೂ, ಪ್ರತೀ ಹುಣ್ಮೆಗೆ ಆಗಲ್ಲ. ಅಲ್ವಾ? ಯಾಕೆ? ಯಾಕಂದ್ರೆ, ಮೇಲೆ ನಾನು ಹೇಳಿದ ಪಾತಳಿಗಳು ಸುಮಾರಾಗಿ, ಒಂದೇ - ಆದ್ರೆ ಪೂರ್ತಿ ಒಂದೇ ಅಲ್ಲ! ಇವೆರಡರ ಮಧ್ಯ ಸುಮಾರಾಗಿ ಐದು ಡಿಗ್ರಿ ಕೋನ ಇದೆ. ಇದನ್ನ ಅರ್ಥ ಮಾಡ್ಕೊಳೋಕ್ಕೆ ಒಂದು ಸುಲಭವಾದ ಪ್ರಯೋಗ ಮಾಡಣ. ಒಂದು ಬಕೆಟ್ ನಲ್ಲಿ ನೀರು ತುಂಬಿ. ನೀರು ಸಪಾಟಾಗಿ ತಾನೇ ನಿಲ್ಲತ್ತೆ? ಇದನ್ನೇ ಭೂಮಿ ಸೂರ್ಯನ ಸುತ್ತ ಸುತ್ತೋ ಪಾತಳಿ ಅಂದ್ಕೊಳಿ. ಈಗ ಒಂದು ಊಟದ ತಟ್ಟೆ ತೊಗೋಳಿ. ಈಗ ತಟ್ಟೆಯನ್ನ ನೀರಲ್ಲಿ ಅರ್ಧ ಮುಳುಗಿಸಿ. ಅಂದ್ರೆ, ಅರ್ಧ ತಟ್ಟೆ ನೀರಿನಿಂತ ಮೇಲೆ, ಅರ್ಧ ಒಳಗಿರ್ಲಿ.ಇನ್ನೊಂದು ಮುಖ್ಯವಾದ ವಿಷಯವನ್ನೇ ಮರೆತೆ! ಈ ತಟ್ಟೆ ನೀರಿನ ಸಮತಳಕ್ಕೆ ಸ್ವಲ್ಪ ಮಾತ್ರವೇ ಓರೆಯಾಗಿರಲಿ. ತೀರಾ ಸಮಕೋನ ಬೇಡ. ಈಗ ಕೆಳಗಿನ ಚಿತ್ರ ನೋಡಿದ್ರೆ ನಿಮಗೆ ಗೊತ್ತಾಗತ್ತೆ ಹೇಗಿರ್ಬೇಕು ಅಂತ.

 

ಈಗ ಗಮನಿಸಿ. ತಟ್ಟೆಯನ್ನ ಚಂದ್ರ ಭೂಮಿ ಸುತ್ತೋ ಸಮಪಾತಳಿ ಅಂತ ಅಂದ್ಕೊಳಿ. ನೀರನ್ನ ಭೂಮಿ ಸೂರ್ಯನ ಸುತ್ತ ಸುತ್ತೋ ಪಾತಳಿ ಅಂತ ಮೊದಲೇ ಹೇಳಿದ್ದೆ. ಈಗ ತಟ್ಟೆಯೂ, ನೀರೂ ಮುಟ್ಟ್ತಾ ಇರೋ ಜಾಗ ನೋಡಿ. ಅದೊಂದು ಸರಳ ರೇಖೆ ಅಲ್ವಾ?

ಆದರೆ ತಟ್ಟೆ ಯನ್ನ ಚಂದ್ರನ ಪಥದ ಪಾತಳಿ ಅಂದ್ಕೊಂಡ್ರೆ ಏನರ್ಥ? ಚಂದ್ರ ತಟ್ಟೆಯ ಅಂಚಿನಲ್ಲಿ ಸುತ್ತ್‍ತಾನೆ ಅಂತಲ್ವ? ಹಾಗಾದ್ರೆ, ತಟ್ಟೆ ಅಗಲಕ್ಕೂ ಆಕಾಶದಲ್ಲಿರೋದು ಖಾಲಿ ಆಕಾಶ ಅಷ್ಟೇ (ಅಂದ್ರೆ free space). ಅಂದ್ರೆ ಚಂದ್ರ ಭೂಮಿ ಸುತ್ತೋ ದಾರಿಯೇ ತಟ್ಟೆಯ ಅಂಚು. ಅದು ನೀರನ್ನ ಎಷ್ಟು ಕಡೆ ಮುಟ್ತಾ ಇದೆ? ನೋಡಿ? ಎರಡುಕಡೆ ಅಲ್ವಾ?

ಈಗ ನಾವು ಎಲ್ಲಿಂದ ಸೂರ್ಯ ಚಂದ್ರನ್ನ ನೋಡ್ತೀವಿ ಅನ್ನೋದನ್ನ ಗಮನಿಸೋಣ.ಭೂಮಿ ಸೂರ್ಯನ್ನ ಸುತ್ತೋ ಪಾತಳಿ ನೀರು ಅಂತ ಮೊದ್ಲೇ ಹೇಳಿದೀನಿ. ಅಂದ್ರೆ, ನಾವು ನೀರಿನ ಅಂಚಲ್ಲಿ ಎಲ್ಲಿ ನಿಂತಿದ್ರೂ, ಬಕೆಟ್ ನ ಅಂಚಲ್ಲೇ ಯಾವ್ದಾದ್ರೂ ಇನ್ನೊಂದು ಕಡೆಯಲ್ಲಿ ಸೂರ್ಯನ್ನ ನೋಡ್ಡ್ತಾ ಇರ್ತೀವಿ. ಅಲ್ವಾ? ಹಾಗಿದ್ಮೇಲೆ,ನೀರಿನ ಅಂಚಲ್ಲೆ ನಾವು (ಅಂದ್ರೆಭೂಮಿ ) ಸುತ್ತುತ್ತಾ ಇದ್ದ್ ಹಾಗೆ, ನಮಗೆ ಬಕೆಟ್ಟಿನ ಸೂರ್ಯ ಕಾಣ್ತಿರ್ತಾನೆ. ಅದೇ ಸಮಯದಲ್ಲಿ ಚಂದ್ರ ಈ ತಟ್ಟೆಯ ಅಂಚಲ್ಲೇ ತಿರುಗ್ತಿರ್ತಾನೆ. ಸರೀನಾ? ( ನಿಜವಾಗಿ ಹೇಳ್ಬೇಕಾದ್ರೆ, ಚಂದ್ರ, ಭೂಮಿ ಸುತ್ತ ಸುತ್ಬೇಕು- ಆದ್ರೆ ತಟ್ಟೆಯನ್ನ ಬಕೆಟ್ಟಿನ ಹೊರಗೆ ಅರ್ಧ ಒಳಗೆ ಅರ್ಧ ಇಡಕ್ಕಾಗಲ್ವಲ್ಲ! ಅದಕ್ಕೆ ಸ್ವಲ್ಪ ಊಹೆ ಉಪಯೋಗಿಸ್ಕೊಳೋಣ - ಬೇಕಾದ್ರೆ ಮನಸ್ನಲ್ಲಿ, ಈ ತಟ್ಟೆಯನ್ನ ನೀವು ಬಕೆಟ್ ಅಂಚಲ್ಲಿ ಸುತ್ತ್ ತಾ ಇರೋ ಹಾಗೆ ನಿಮ್ಮ ತಲೇ ಸುತ್ತಲೇ ಸುತ್ತೌತ್ತಾ ಇದೆ ಅಂದ್ಕೊಳಿ. ಆದ್ರೆ, ನೀರಿಗೆ ಅದು ಮಾಡ್ತಿರೋ ಕೋನ ಮಾತ್ರ ಬದ್ಲಾಯ್ಸ್ಬೇಡಿ.).

ಈಗ ಭೂಮಿ, ಚಂದ್ರ ಎರಡೂ ಬೇರೆ ಬೇರೆ ವೇಗದಲ್ಲಿ ಸುತ್ತುತ್ತಿವೆ. ಒಂದುವೇಳೆ, ಚಂದ್ರ ಸುತ್ತುತ್ತಿರುವಾಗ ತಟ್ಟೆಯ ಅಂಚು ನೀರನ್ನ ಮುಟ್ಟೋ ಜಾಗದಲ್ಲಿರೋವಾಗ, ನೀರಿನ ಅಂಚಿಂದ ನೋಡೋವ್ರಿಗೆ ಏನಾಗತ್ತೆ? ಚಂದ್ರ ಸೂರ್ಯನ್ನ ಮರೆ ಮಾಡ್ತಾನೆ !ಅಲ್ವಾ? ಇದೇ ಸೂರ್ಯ ಗ್ರಹಣ. ಇದು ಆಗ್ಬೇಕಾದ್ರೆ, ಭೂಮಿ ಇಂದ ಒಂದೇ ಕಡೆ ಸೂರ್ಯ ಚಂದ್ರ ಎರಡೂ ಇರ್ಬೇಕು, ಅಲ್ವಾ. ಹಾಗಾಗಿ ಅದು ಅಮಾವಾಸ್ಯೆ ದಿನ ಮಾತ್ರ ಸಾಧ್ಯ. ಈಗ ಈ ಎರಡು ಕಡೆಯಲ್ಲಿ ಮಾತ್ರ ಚಂದ್ರನ ಹಾದಿ (ತಟ್ಟೆ) ನೀರನ್ನ ಮುಟ್ತಾ ಇದೆ ಅಲ್ವಾ? ಈ ಎರಡು ಬಿಂದುಗಳಿಗೇ ರಾಹು-ಕೇತು ಅಂತ ಹೆಸರು. ಇಂಗ್ಲಿಷ್ ನಲ್ಲಿ ಇವನ್ನೇ ascending node ( ಮೇಲೆ ಚಿತ್ರ ದಲ್ಲಿ ಚಂದ್ರ ತಟ್ಟೆ ಅಂಚಲ್ಲಿ ಹೋಗ್ತಾ ಇರೋವಾಗ, ನೀರಿನ ಅಡಿಯಿಂದ ಮೇಲಕ್ಕೆ ಹೋಗೋ ಬಿಂದು ಅಂದುಕೋಳಿ) ಮತ್ತೆ descending node ( ನೀರಿನ ಮೇಲಿಂದ ಕೆಳಕ್ಕೆ ಹೋಗೋ ಬಿಂದು) ಅಂತಾರೆ.

ಈಗ ರಾಹು ಗ್ರಸ್ತ ಗ್ರಹಣ ಅಂದ್ರೇನು? ಗ್ರಹಣವಾಗ್ತಿರೋ ಆಕಾಶಕಾಯ ರಾಹು ಬಿಂದು ಹತ್ತಿರ ಇದೆ ಅಂತ. ಕೇತು ಗ್ರಸ್ತ ಅಂದ್ರೆ, ಕೇತು ಹತ್ತಿರ ಇದೆ ಅಂತ. ಅಷ್ಟೇ. ಅದಕ್ಕಿಂತ ಗಹನ್ವಾದ ವಿಚಾರ ಏನೂ ಅಲ್ಲ.

ಈ ರಾಹು-ಕೇತು ಗಳನ್ನೇ ಕಥೆಗಳಲ್ಲಿ ರಾಕ್ಷಸ್ರು, ಸೂರ್ಯನ್ನ ಚಂದ್ರನ್ನ ತಿಂದ್ಕೋತಾರೆ, ಮತ್ತೆ ಅವರಿಗೆ ಬಂದಿರೋ ಶಾಪದಿಂದ ಮತ್ತೆ ಬಿಟ್ಟುಬಿಡ್ತಾರೆ. ಇದರಿಂದಲೇ ಗ್ರಹಣ ಆಗತ್ತೆ ಅಂತ ಹೇಳ್ತಾರಷ್ಟೆ. ಹಂಗಂದ್ರೆ, ನಮ್ಮವರಿಗೆ ಗ್ರಹಣಗಳು ಹೇಗೆ ಆಗ್ತಿದ್ವು ಅನ್ನೋದು ಗೊತ್ತಿರ್ಲಿಲ್ವಾ ಅಂತ ಯೋಚಿಸ್ತಿದೀರಾ?

ಭಯ ಬೇಡ. ಈ ಕಥೆಗಳೆಲ್ಲ ರಂಜನೆಗೆ ಅಷ್ಟೇ. ಮೊದಮೊದಲಿಗೆ ಗ್ರಹಣ ಹೇಗಾಗತ್ತೆ ಅಂತ ವಿವರಿಸಿದ್ದೇ ನಮ್ಮ ಆರ್ಯಭಟ. ಆದ್ರೆ ಅದಕ್ಕೂ ಶತಮಾನಗಳ ಮೊದ್ಲೇ, ಈ ರಾಹು ಕೇತು ಬಿಂದು ಗಳ ಜಾತಕ ಎಲ್ಲ ನಮ್ಮೋರು ಕಂಡ್‍ಹಿಡ್ದಿದ್ರು!

ಆಶ್ಚರ್ಯವೇ? ಒಂದು ಸಲ ಎಲ್ಲಾದ್ರೂ ದೇವಸ್ಥಾನದಲ್ಲಿ ನವಗ್ರಹ ಸ್ತೋತ್ರ ಮಾಡ್ತಿದ್ರೆ, ಅದನ್ನ ಕೂತ್ಕೊಂಡು ಕೇಳಿ. ಸೂರ್ಯ ಚಂದ್ರ ಬುಧ ಗುರು ಎಲ್ಲ ಗ್ರಹಗಳಿಗೂ ಒಂದು ರೂಪಕೊಟ್ಟು ಅವನ್ನು ಒಂದೊಂದು ಜಾಗದಲ್ಲಿ ಕೂರಿಸಿ "... ಮೇರುಂ ಪ್ರದಕ್ಷಿಣೇ ಕುರ್ವಾಣಂ... ಗ್ರಹಂ ಭಗವಂತಂ ... ಆಕಾರ ಮಂಡಲೇ..." ಅಂತೆಲ್ಲಾ ಸ್ತೋತ್ರ ಹೇಳಿ ಪೂಜೆಮಾಡುವಾಗ, ನಂತರ ರಾಹು ಕೇತುಗಳಿಗೆ ಬಂದಾಗ ".... ಮೇರುಂ ಅಪ್ರದಕ್ಷಿಣೇ ಕುರ್ವಾಣಂ ರಾಹುಂ/ಕೇತುಂ ಭಗವಂತಂ .... ಆಕಾರ ಮಂಡಲೇ...." ಇತ್ಯಾದಿ ಹೇಳಿ ಸ್ತುತಿಸುತ್ತಾರೆ.

ಗಮನಿಸಿದ್ರಾ? ಬೇರೆ ಗ್ರಹಗಳಿಗೆಲ್ಲಾ ಪ್ರದಕ್ಷಿಣೇ ಕುರ್ವಾಣಂ ಅನ್ನೋರು, ರಾಹು-ಕೇತುವಿಗೆ ಮಾತ್ರ, ಅಪ್ರದಕ್ಷಿಣೇ ಕುರ್ವಾಣಂ ಅನ್ನೋದು ಯಾಕೆ?

ಯಾಕೆ ಅಂತೀರಾ?

ಹೇಳಣ ಬಿಡಿ :) ಇವತ್ತು ತುಂಬಾ ಆಗಿಹೋಯ್ತು. ಸ್ವಲ್ಪವಾದ್ರೂ ಮುಂದಿನ ಸಲಕ್ಕೆ ಇಟ್ಕೋತೀನಿ!

-ಹಂಸಾನಂದಿ

 

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 2.7 (3 votes)
To prevent automated spam submissions leave this field empty.

ಪ್ರತಿಕ್ರಿಯೆಗಳು

Submitted by ಶ್ರೀನಿಧಿ on

ಅದ್ಭುತವಾಗಿ ಬರೆದಿದ್ದೀರ ಹಂಸಾನಂದಿ ಸಾರ್. ಇಲ್ಲೇ ಆರ್ಯಭಟನ ಬಗೆಗೆ, ಅಪ್ರದಕ್ಷಿಣೆ ಬಗ್ಗೆ ಬರೆದಿದ್ದರೆ ಚೆನ್ನಾಗಿರುತ್ತಿತ್ತು. ನಿಮ್ಮ ಮುಂದಿನ ಲೇಖನಕ್ಕೆ ಕಾಯುತ್ತೀನಿ. ಸಸ್ಪೆನ್ಸ್ ಕೊಟ್ಟು ಬಿಟ್ಟಿದ್ದೀರ :)

ಸಿರಿಗನ್ನಡಂ ಗೆಲ್ಗೆ, ಸಿರಿಗನ್ನಡಂ ಬಾಳ್ಗೆ

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by ನೇಸರ on

ಹಂಸಾನಂದಿ ಅವರೆ ತುಂಬ ಉತ್ತಮವಾದ ಲೇಖನ. ನಾನು ಚಿಕ್ಕವನು ಆಗಿದ್ದಾಗ ನಮ್ಮ ದೇಶದಲ್ಲಿ ದೀಪಾವಳಿ ಹಬ್ಬದ ಸಮಯದಲ್ಲಿ ಪೂರ್ಣ ಸೂರ್ಯ ಗ್ರಹಣ ಆಗಿತ್ತು. ಆಗ ದೂರದರ್ಶನದಲ್ಲಿ ಒಬ್ಬ ವಿಜ್ಞಾನಿ ಹೀಗೆ ಹೇಳಿದ್ದರು "ಒಂದು ಪುರಾಣ(ವೇದ) ದ ಪ್ರಕಾರ (ನನಿಗೆ ಅದು ಪುರಾಣವೋ ಅಥವ ವೇದವೋ ಮರೆತು ಹೋಗಿದೆ) ಒಬ್ಬ ರಾಕ್ಷಸ (ಅವನು ರಾಹು ಅಲ್ಲ ಅಥವ ಕೇತು ಕೂಡ ಅಲ್ಲ) ಬಂದು ಸೂರ್ಯನನ್ನ ನುಂಗಿದಾಗ ಗ್ರಹಣ ಆಗತ್ತೆ ಅನ್ನೋ ಉಲ್ಲೇಖ ಇದೆ. ಇದಾದ ನಂತರ ಇನ್ನೊಂದು ಪುರಾಣ(ವೇದ) ದಲ್ಲಿ ಗ್ರಹಣ ಆಗೋದಕ್ಕೆ ರಾಹು ಹಾಗು ಕೇತು ಅನ್ನೋ ರಾಕ್ಷಸರು ಕಾರಣ ಅನ್ನೋ ಉಲ್ಲೇಖ ಬರತ್ತೆ ಅಂತೆ, ಆದ್ರೆ ಸೋಜಿಗವೆಂದರೆ ಈ ಎರಡು ಗ್ರಂಥಗಳ ಮಧ್ಯೆ ಆರ್ಯಭಟ ಜೀವಿಸಿದ್ದು ಹಾಗು ಅವರ ಪ್ರಕಾರ ಭೂಮಿ, ಸೂರ್ಯ ಹಾಗು ಚಂದ್ರ ಒಂದು ರೇಖೆ ಅಲ್ಲಿ ಬಂದರೆ ಗ್ರಹಣ ಆಗತ್ತೆ ಅಂತ ಬರೆದಿದ್ದಾರೆ ಅಂತೆ ಆದರೆ ಅವರು ಈ ರೇಖೆಯನ್ನ ಮೂಡಿಸೋ ಎರಡು ಚುಕ್ಕಿ(ಬಿಂದು)ಗಳನ್ನ ನಮ್ಮ ಥರ 'ಎ' 'ಬಿ' ಅಥವ 'ಪಿ' 'ಕ್ಯು' ಅನ್ನದೆ 'ರಾಹು' ಮತ್ತು 'ಕೇತು' ಎಂದರಂತೆ". ದಯವಿಟ್ಟು ನೀವು ಇದರ ಬಗ್ಗೆ ಇನ್ನು ಹೆಚ್ಚಾಗಿ ಬರೆಯ ಬೇಕು ಅಂತ ನನ್ನ ವಿನಂತಿ.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by hamsanandi on

ಬರಹವನ್ನು ಮೆಚ್ಚಿದವರಿಗೆ ಧನ್ಯವಾದಗಳು. ಈ ವಿಷಯದಲ್ಲಿ ಇನ್ನೂ ಬರೆಯುವುದು ಬೇಕಾದಷ್ಟಿದೆ - ಇನ್ನು ಮಿಕ್ಕುಳಿದದ್ದನ್ನು ಆದಷ್ಟೂ ಬೇಗ ಮುಂದಿನ ಭಾಗದಲ್ಲಿ ಬರೆಯುವೆ.

-ಹಂಸಾನಂದಿ
ಪುರಂದರ ದಾಸರ ರಚನೆಗಳಿಗಾಗಿ ಇಲ್ಲಿ ಚಿಟಕಿಸಿ :- http://purandara.wordpress.com/

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by madhava on

ಹಂಸಾನಂದಿಯವರೆ ಲೇಖನ ತುಂಬಾ ಚೆನ್ನಾಗಿದೆ. ನೀವು ರಾಹುಗ್ರಸ್ತ ಗ್ರಹಣ ಎಂದು ಬರೆಯುವಾಗ ಆಕಾಶಕಾಯ ಎಂದಿದ್ದೀರಲ್ಲ, ಅದು ಎನು ಏಂದು ತಿಳಿಯಲಿಲ್ಲ. ಗ್ರಹಣ ಕಾಲದಲ್ಲಿ ಇಂತಿಂತಾ ನಕ್ಷತ್ರದ ಮೇಲೆ ಗ್ರಹಣ ಅನ್ನುತ್ತಾರಲ್ಲ? ಅದೇ ಇದೆ?

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by kannadakanda on

ಕುಂಡಲಿಯಲ್ಲಿ ರಾಹು ಕೇತುಗಳ ಇರವು ಒಂದಕ್ಕೊಂದು ವಿರುದ್ಧ ದಿಕ್ಕಿನಲ್ಲೇ ಇರುತ್ತವೆ.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by aniljoshi on

ಹಂಸಾನಂದಿಗಳೇ,

as usual, ಸಕತ್ತಾಗಿ ವಿವರಿಸಿದ್ದೀರ. ಇವತ್ತಿನ ಹುಣ್ಣಿಮೆ ಚಂದ್ರ ನೀರಿನಲ್ಲಿ ಒರಗಿದ ಪ್ಲೇಟಿನ ತುದಿಯಲ್ಲಿರುತ್ತಾನಂತೆ. ಅದಕ್ಕೆ ಬಹಳ ದೊಡ್ಡವನು ಕಂಡಂತೆ ಅನಿಸುತ್ತಾನಂತೆ. ನೋಡಬೇಕು, ಮಿಸ್ ಮಾಡಬಾರದು ಇವತ್ತು!

ಅನಿಲ

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by Sunil Jayaprakash on

"ರಾಹವೇ ಕೇತವೇ ನಮಃ" ಅಂತ ಇಷ್ಟು ವರ್ಷ ಹೇಳ್ತಾ ಇದ್ರೂ, ಒಂದು ರೀತಿ ಹೇಳ್ಬೇಕಂದ್ರೆ ಅದೇನಂತ ಅರ್ಥ ಆಗಿದ್ದು ಇವತ್ತೇ !!!!! ;) ನಿಮ್ಮ ಬರಹದ ಶೈಲಿ ಒಳ್ಳೆಯ ಓದಿನ ಜೊತೆ ಪರಿಪಕ್ವ ಮಾಹಿತಿಯನ್ನೂ ನೀಡುತ್ತಿದೆ. ಹೆನ್ನನ್ನಿ.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಟ್ವಿಟ್ಟರಿನಲ್ಲಿ ಸಂಪದ