ಹಂಸ ನಾದ
ಹಂಸ ನುಡಿದರೆ, ಹಂಸನಾದ!
ಅಂತೂ ಆವರಣವನ್ನು ಓದಿದ್ದಾಯಿತು!
ನಾಕುದಿನದ ಹಿಂದೆ ಆವರಣ ಬಂದು ಸೇರಿತು...
ಬೇರೊಂದು ಕಡೆ, ಟಿಪ್ಪಣಿ ಸೇರಿಸಿದ ನಂತರ, ಇಲ್ಲಿಯೂ ಅದನ್ನೇ ಹಾಕೋಣ ಎನ್ನಿಸಿತು. ಮೋಹನ ರಾಗದ ಮೂರನೆ ಭಾಗವನ್ನು ಬರೆಯದೇ ಹೋದದ್ದಕ್ಕೆ ಇದೂ ಒಂದು ಕಾರಣ ತಾನೇ, ಅದಕ್ಕೆ ಇಲ್ಲಿಯೂ ಇರಲಿ ಎಂದುಕೊಂಡೆ
ಆವರಣ ಬ್ಯಾನ್ ಆಗುವ ಮಾತೆಲ್ಲ ಬಂದಿರುವುದು, ಕಥೆಯಲ್ಲಿ ಲಕ್ಷ್ಮಿ ಬರೆಯುವ ಕಾದಂಬರಿಯನ್ನು ಪೋಲೀಸರು ಮುಟ್ಟುಗೋಲು ಹಾಕಿಕೊಳ್ಳುವ ಸಂದರ್ಭ ಬಂದಿರುವುದರಿಂದ ಎನಿಸುತ್ತದೆ. ನಿಜ ಹೇಳಬೇಕೆಂದರೆ, ತೀರಾ ಏನನ್ನೂ ಓದದಿದ್ದವರಿಗೆ ಕಥೆ ಆಘಾತಕಾರಿ ಎನಿಸಬಹುದಾದರೂ, ಸ್ವಲ್ಪ ಚರಿತ್ರೆಯ ಬಗ್ಗೆ ಕಾಮಾಲೆ ಕಣ್ಣಿಲ್ಲದೇ ಓದಿಕೊಂಡಿದ್ದವರಿಗೆ ಆವರಣ ತುಂಬಾ ಹೊಸ ವಿಷಯಗಳನ್ನೇನೂ ಹೇಳುವುದಿಲ್ಲ. ಹೇಳುವುದೇನಿದ್ದರೂ, ನಮ್ಮಲ್ಲಿ ನಡೆಯುತ್ತಿರುವ ಆವರಣ ಕ್ರಿಯೆಯನ್ನಷ್ಟೆ. ಬ್ಯಾನ್ ಮಾಡಬೇಕೆಂದಿರುವವರು, ಕಥೆಯನ್ನು ಓದಿದರೆ, ಆ ಆಲೋಚನೆಯನ್ನು ಖಂಡಿತಾ ಬಿಡಬೇಕಾಗುತ್ತದೆ
Bibliography (ಪಠ್ಯ ಸೂಚಿ) ಯನ್ನು ಕಾದಂಬರಿಕಾರರು ಕಥೆಯ ಅಂಗವಾಗಿ ಜಾಣತನದಿಂದ ಹೆಣೆದಿದ್ದಾರೆ.
ಇದು ಬಿಟ್ಟರೆ, ಈ ಕಾದಂಬರಿ ನನಗೆ ಭೈರಪ್ಪನವರ ಸಾಮಾನ್ಯ ಕಾದಂಬರಿಗಳಲ್ಲಿ ಒಂದು ಎನಿಸುತ್ತದೆ. ವಂಶವೃಕ್ಷ, ಪರ್ವ, ಧರ್ಮಶ್ರೀ ಗೃಹಭಂಗ ಅಥವಾ ತಂತು, ಇಂತಹ ಕಾದಂಬರಿಗಳಲ್ಲಿ ಇರುವಂತಹ ಪಾತ್ರಪೋಷಣೆ ಆವರಣದಲ್ಲಿ ಕಾಣುತ್ತಿಲ್ಲ. ಎಲ್ಲೋ ಓದುತ್ತಿದ್ದಾಗ, ಮತ್ತೆ ಪುಟ ಹಿಂತಿರುಗಿಸಿ ಓದಬೇಕಾದಂತಹ ಒಂದು ಸಂದರ್ಭವೂ ನನಗೆ ಆಗಲಿಲ್ಲ. ಆ ಮಟ್ಟಿಗೆ, ಇದು ಇತರ ಕಾದಂಬರಿಗಳಿಗಿಂತ ಸರಳವಾಗಿದೆ ಎನ್ನಬಹುದು. ಆ ವಿಷಯದಲ್ಲಿ ಕಾದಂಬರಿಕಾರರು ಅವರೇ ಹೇಳಿರುವ ಉದ್ದೇಶದಲ್ಲಿ ಸಫಲವಾಗಿದ್ದಾರಾದರೂ, (ಸತ್ಯ ಮತ್ತು ಸೌಂದರ್ಯದಲ್ಲಿ, ಸತ್ಯಕ್ಕೆ ಪ್ರಾಮುಖ್ಯತೆ ಕೊಟ್ಟು ಸೌಂದರ್ಯವನ್ನು ಗೌಣವನ್ನಾಗಿ ಮಾಡಿರುವುದು) ಎಲ್ಲಾ ಓದುಗರಿಗೆ ಅದು ಹತ್ತಿರವಾಗುವುದೆಂದು ಹೇಳಲಾರೆ.
ಒಮ್ಮೆ ಓದಿ ನೋಡಬೇಕಾದಂತಹ ಕಾದಂಬರಿ. ಆದರೆ, ಮೇಲೆ ನಾನು ಹೇಳಿದ ಕಾದಂಬರಿಗಳಂತೆ, ಆವರಣವನ್ನು ಮತ್ತೆ ಮತ್ತೆ ಓದಬೇಕೆಂದೆನಿಸದು.
ಕಾರಣಾಂತರಗಳಿಂದ ಭೈರಪ್ಪನವರಿಗೆ ಹೊಸ ಓದುಗರನ್ನು ತಂದುಕೊಟ್ಟಿರುವುದು ಇದರ ಹೆಚ್ಚಾಯ ಎನ್ನಬಹುದು ![]()
-ಹಂಸಾನಂದಿ

- hamsanandi ರವರ ಬ್ಲಾಗ್
- Login or register to post comments
- 622 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ



- ನಿರ್ವಾಹಕರ ಗಮನಕ್ಕೆ ತನ್ನಿ



RSS:
ಪ್ರತಿಕ್ರಿಯೆಗಳು
ಪ್ರತಿಕ್ರಿಯೆ:ಆವರಣದ ಹೆಚ್ಚಾಯ?
>>ಕಾರಣಾಂತರಗಳಿಂದ ಭೈರಪ್ಪನವರಿಗೆ ಹೊಸ ಓದುಗರನ್ನು ತಂದುಕೊಟ್ಟಿರುವುದು ಇದರ ಹೆಚ್ಚಾಯ ಎನ್ನಬಹುದು
ಹೆಚ್ಚಾಯ ಎನ್ನುವುದು ಹೊಸ ಪದವೇ?ನೀವೇ ಟಂಕಿಸಿದ್ದೀರಾ ಹೇಗೆ?
Re: ಪ್ರತಿಕ್ರಿಯೆ:ಆವರಣದ ಹೆಚ್ಚಾಯ?
ಇಲ್ಲ ಸ್ವಾಮೀ! ಅದು ನಮ್ಮ ಕಡೆ ಹಿಂದಿನಿಂದಲೇ ಬಳಕೆಯಲ್ಲಿರುವ ಪದ - ಹೆಚ್ಚುಗಾರಿಕೆ ಎನ್ನುವ ಅರ್ಥದಲ್ಲಿ.
-ಹಂಸಾನಂದಿ
ಪ್ರತಿಕ್ರಿಯೆ:ಆವರಣದ 'ಹೆಚ್ಚಾಯ'?
'ನಿಮ್ಮ ಕಡೆ' ಯಾವುದು?
--
Check my Blog
Kannada wikipedia
"ಹೊಸ ಚಿಗುರು, ಹಳೆ ಬೇರು"
Re: ಪ್ರತಿಕ್ರಿಯೆ:ಆವರಣದ 'ಹೆಚ್ಚಾಯ'?
’ನಮ್ಮ ಕಡೆ’ ಎಂದು ನಾನು ಯಾವಾಗಲೂ ಹೇಳುವುದು, ಹಾಸನಕ್ಕೇ - ಊರನ್ನು ಬಿಟ್ಟು ಹದಿನೈದುವರ್ಷವಾಗಿದ್ದರೂ!
ನನ್ನ ಬಳಿ ನಿಘಂಟು ಇಲ್ಲ - ಹಾಗಾಗಿ ಈ ಪದದ ಹುಟ್ಟಿನ ಬಗ್ಗೆ ಹೇಳಲಾರೆ; ಆದರೆ, ಇದು ಅಂತಹ ಅಪರೂಪದ ಪದವೇನಲ್ಲ ಎಂದು ನನ್ನ ಭಾವನೆ.್
-ಹಂಸಾನಂದಿ
ಪ್ರತಿಕ್ರಿಯೆ:ಆವರಣದ 'ಹೆಚ್ಚಾಯ'?
ನಾನು ಕುತೂಹಲದಿಂದ ಪ್ರಶ್ನೆ ಕೇಳಿದ್ದಷ್ಟೆ. ಅದಕ್ಕೂ ನಿಮ್ಮ ಪದ ಬಳಕೆಗೂ ಸಂಬಂಧವಿಲ್ಲ.
ಹಾಸನ ಎಲ್ಲಿ ಕ್ಯಾಲಿಫೋರ್ನಿಯ ಎಲ್ಲಿ ;-)
ನೀವು ತಿಳಿಸದೇ ಹೋಗಿದ್ದರೆ ನಿಮ್ಮ ಕಡೆ - ಕ್ಯಾಲಿಫೋರ್ನಿಯಾದಲ್ಲಿ "ಹೆಚ್ಚಾಯ" ಎನ್ನುತ್ತಾರೆ ಅಂತ ಅಂದುಕೊಳ್ಳುತ್ತಿದ್ದೆವು.
--
Check my Blog
Kannada wikipedia
"ಹೊಸ ಚಿಗುರು, ಹಳೆ ಬೇರು"