ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Sampada Foundation
  • ಅಂಚೆ ಪೆಟ್ಟಿಗೆ
  • Font Help

ತಿಳಿ ಹಾಸ್ಯ ಮರೆತಿಲ್ಲ: "ಮಜಾವಾಣಿ"

ಸಂಪದ › Sampada Blogs › hamsanandi ರವರ ಬ್ಲಾಗ್

ಹಂಸ ನಾದ

ಹಂಸ ನುಡಿದರೆ, ಹಂಸನಾದ!

ದುರ್ಭಿಕ್ಷದಲ್ಲಿ ಅಧಿಕ ಮಾಸ ??

July 25, 2007 - 4:55am — hamsanandi

ದುರ್ಭಿಕ್ಷದಲ್ಲಿ ಅಧಿಕ ಮಾಸ ಅನ್ನೋ ಗಾದೆಯನ್ನು ನೀವೆಲ್ಲ ಕೇಳೇ ಇರುತ್ತೀರಿ. ಅಥವಾ ಇದೇ ಅರ್ಥದ ಕ್ಷಾಮದಲ್ಲಿ ಅಧಿಕಮಾಸ ಅನ್ನೋದನ್ನಾದ್ರೂ ಕೇಳಿರ್ತೀರಿ. ಈ ಗಾದೆನಲ್ಲಿ ಅಲ್ಲಿ ಎಂಬ ವಿಭಕ್ತಿ ಸೂಚಕ ಬಿಟ್ಟರೆ, ಇನ್ಯಾವುದೂ ಕನ್ನಡ ಪದ ಇಲ್ಲದಿರುವುದು ಬೇಸರದ ಸಂಗತಿ. ಸರಿ, ಏನನ್ನೋಣ? ಬರದಲ್ಲಿ ಹೆಚ್ಚುವರಿ ತಿಂಗಳು ಎನ್ನಲೇ? ಯಾಕೋ ಚೆನ್ನಾಗಿ ಕೇಳಿಸ್ತಿಲ್ಲ. ಬರಬಂದಾಗ ತಿಂಗಳು ಹೆಚ್ಚು? ಇದು ಸ್ವಲ್ಪ ಚೆನ್ನಾಗಿದೆ. ನಿಮಗೇನನ್ನಿಸುತ್ತೋ ಗೊತ್ತಿಲ್ಲ. ಮೊದಲೇ ಕೊಳೆ ಅದರ ಮೇಲೆ ಮಳೆ ಅನ್ನೋ ಗಾದೆಗೂ ಇದೇ ಅರ್ಥ. ಮೊದಲೇ ಕಷ್ಟಗಳು ಇದ್ದಾಗ, ಅದರ ಮೇಲೆ ಇನ್ನಷ್ಟು ಕಷ್ಟಗಳನ್ನು ಬರುವುದನ್ನು ಸೂಚಿಸುತ್ತವೆ ಈ ಗಾದೆಗಳು. ಅದೇನೇ ಇರಲಿ, ನಮ್ಮೂರ ಕಡೆ ಮಾಸ ಅನ್ನೋ ಪದ ಅಂತೂ ಸಂಸ್ಕೃತ ಪದ ಅಂತ ಹೆಚ್ಚು ಜನಕ್ಕೆ ಗೊತ್ತಿರೋದಿಲ್ಲ. ಆದರೆ, ಬಳಸೋದಂತೂ ಮರೆಯೋದಿಲ್ಲ. ಆಷಾಢ ಮಾಸದಲ್ಲಿ ಮದುವೆಯಾದ ಮೊದಲ ವರ್ಷದಲ್ಲಿ ಮಗಳನ್ನು ಮನೆಗೆ ಕರೆಸಿಕೊಳ್ಳದ ತಾಯಿ ಯಾವುದಾದರೂ ಹಳ್ಳೀಲಿ ಇದಾಳಾ ಹೇಳಿ?

ಯಾಕೋ ವಿಷಯಾಂತರ ಆಗ್ತಾಇದೆ. ನಾನು ಹೇಳಹೊರಟದ್ದು ಅಧಿಕ ಮಾಸದ ವಿಷಯ. ಮಾತಾಡ್ತಿರೋರು ಬೇಡದ ಭಾಷೆಯ ವಿಷಯ. ಸಹವಾಸ ದೋಷ ಅನ್ನಿ ಸ್ವಾಮೀ. ಏನುಮಾಡಕ್ಕಾಗತ್ತೆ. ಅಧಿಕಪ್ರಸಂಗಿ ಅಂತ ಬೈಯಿಸಿಕೊಳ್ಳೋದರ ಮೊದಲು ಏನು ಹೇಳಬೇಕು ಅಂದುಕೊಂಡಿದ್ದೀನೋ ಹೇಳಿಬಿಡಬೇಕು!

ಹೀಗೆ ದುರ್ಭಿಕ್ಷದಲ್ಲಿ ಅಧಿಕಮಾಸ ಅಂತ ಗಾದೆ ಯಾಕೆ ಬಂದಿದೆ ಗೊತ್ತಾ? ಇದ್ದಕ್ಕಿದ್ದ ಹಾಗೆ ಒಂದು ತಿಂಗಳು ಹೆಚ್ಚಾಗಿ ಹೇಗೆ ಬರುತ್ತೇ? ಈ ಮಾಸ ಅನ್ನೋ ಪದ ಮಾ ಅನ್ನೋ ಮೂಲದಿಂದ ಬಂದಿದೆ. ಪೂರ್ಣಿ’ಮಾ’, ಅ’ಮಾ’ವಾಸ್ಯೆ ಗಳಲ್ಲಿರುವ ಮಾ ಇದೇನೆ. ಕನ್ನಡದಲ್ಲಿ ಚಂದ್ರ ಅನ್ನೋ ಅರ್ಥ ಬರುವ ತಿಂಗಳು ಎನ್ನುವ ಪದವನ್ನೇ ನಾವು ಮಾಸ ಅನ್ನೋ ಅರ್ಥದಲ್ಲೇ ಬಳಸ್ತೀವೆ. ಈ ಓವರ್‌ಲೋಡೆಡ್ ಪದ ಎಷ್ಟು ಸರ್ವೇಸಾಮಾನ್ಯ ಆಗಿಹೋಗಿದೆ ಅಂದರೆ , ತಿಂಗಳು ಎಂದರೆ ಚಂದ್ರ ಅನ್ನೋದೇ ನಮ್ಮಲ್ಲಿ ಹಲವರಿಗೆ ಮರೆತುಹೋಗಿದೆ. ಆದಿರಲಿ. ತಿಂಗಳು, ಅಥವಾ ಮಾಸ, ಎಂದರೆ, ಒಂದು ಹುಣ್ಣಿಮೆಯಿಂದ ಇನ್ನೊಂದು ಹುಣ್ಣಿಮೆಯವರೆಗಿರುವ ಅವಧಿ. ಇದು ಸುಮಾರಾಗಿ ಇಪ್ಪತ್ತೊಂಬತ್ತೂವರೆ ದಿನ, ಅಥವಾ ಸುಲಭವಾಗಿ ಮೂವತ್ತು ದಿನ ಅಂತ ಇಟ್ಟುಕೊಳ್ಳಬಹುದು.

ಕರ್ನಾಟಕದಲ್ಲಿ ನಮಗೆ ವರ್ಷದ ಮೊದಲ ಹಬ್ಬ ಯುಗಾದಿ. ಕರಾವಳಿಯಲ್ಲಿ ಬಿಟ್ಟರೆ, ಉಳಿದವರೆಲ್ಲ ಚಾಂದ್ರಮಾನ ಯುಗಾದಿಯನ್ನೇ ಆಚರಿಸುವುದು ಪದ್ಧತಿ. ಯುಗಾದಿ ಬರುವುದು ಚೈತ್ರದ ಮೊದಲ ದಿನ. ಅಂದ ಹಾಗೆ, ತಿಂಗಳುಗಳಿಗೆ ಚೈತ್ರ, ವೈಶಾಖ ಅಂತಲೇ ಹೆಸರೇಕೆ ಬಂತು ಗೊತ್ತಾ? ಇದೂ ನೂರಾರು ವರ್ಷ ಆಕಾಶವನ್ನು ನೋಡ್ತಾ ಬಂದ ನಮ್ಮ ಪೂರ್ವಿಕರ - ತೋರಿಸುತ್ತೆ. ಒಂದು ಹುಣ್ಣಿಮೆಯಿಂದ ಇನ್ನೊಂದು ಹುಣ್ಣಿಮೆಗೆ ಸುಮಾರು ಮೂವತ್ತು ದಿನ ಬೇಕಾಗಿದ್ದರೂ, ಚಂದ್ರ ಆಕಾಶದಲ್ಲಿ ಒಂದು ಸುತ್ತು ಸುತ್ತೋದಕ್ಕೆ ಇಪ್ಪತ್ತೇಳು-ಇಪ್ಪತ್ತೆಂಟು ದಿನ ಸಾಕು ಅನ್ನೋದು ಅವರಿಗೆ ಗೊತ್ತಾಗಿತ್ತು. ಹೇಗೆ ಅದು? ಈಗಿನ ತರಹ ಆಗ ಲೈಟ್ ಪಲ್ಯೂಷನ್ ಇರಲಿಲ್ಲ ಬಿಡಿ ಆಗ Smiling ರಾತ್ರಿ ನಕ್ಷತ್ರಗಳು ಚೆನ್ನಾಗಿ ಕಾಣೋವು. ಹಾಗಾಗೇ, ಚಂದ್ರ ಯಾವಾಗಲೂ ಆಕಾಶದಲ್ಲಿ ಒಂದೇ ದಾರಿಯಲ್ಲೇ ಹೋಗ್ತಾನೆ ಅಂತ ಅವರಿಗೆ ತಿಳಿದಿತ್ತು. ಕೆಲವು ನಕ್ಷತ್ರಗಳಿಗೆ ಅವನು ಕೆಲವು ದಿನ ಹತ್ತಿರವಾಗಿ ಕಾಣ್ತಾನೆ ಅನ್ನೋದನ್ನೂ ಅವರು ಕಂಡುಕೊಂಡರು. ಚಂದ್ರ ಆಕಾಶದಲ್ಲಿ ಹೊರಟ ಜಾಗಕ್ಕೇ ಮತ್ತೆ ಸುಮಾರು ೨೭-೨೮ ದಿನಗಳಲ್ಲಿ ಬರೋದ್ರಿಂದ, ಪ್ರತಿ ರಾತ್ರಿಯೂ ಅವನ ದಾರಿಯಲ್ಲಿ ಹತ್ತಿರವಾಗಿರೋ ಒಂದು ನಕ್ಷತ್ರವನ್ನು ಗುರುತಿಟ್ಟುಕೊಂಡು, ಅದರಿಂದ ದಿವಸದ ಲೆಕ್ಕಾಚಾರ ಹಾಕೋಕ್ಕೆ ಆರಂಭಿಸಿದರು. ಇವೇ ೨೭ ನಕ್ಷತ್ರಗಳು. ಅವುಗಳಿಗೇ ಅಶ್ವಿನಿ-ಭರಣಿ-ಕೃತಿಕಾ -... ರೇವತಿ ಅಂತ ಹೆಸರು. ಇದೇ ಆಕಾಶವನ್ನು ಸೂರ್ಯ ಒಂದು ವರ್ಷದಲ್ಲಿ ಸುತ್ತೋದ್ರಿಂದ, ಹೀಗೆ ಆಕಾಶವನ್ನ ಪಟ್ಟಿಹಾಕಿ ಅಳತ್ ಮಾಡಿಟ್ಟಿದ್ದು, ಸೂರ್ಯ ಎಲ್ಲಿದ್ದಾನೆ, ಚಂದ್ರ ಎಲ್ಲಿದ್ದಾನೆ ಅನ್ನೋದನ್ನ ಹೇಳೋದಕ್ಕೆ ಅನುಕೂಲ ಆಯ್ತು. ಅಂದರೆ, ಆಕಾಶವನ್ನು ೨೭ ಕಿತ್ತಳೆ ತೊಳೆಗಳ ತರಹ ವಿಂಗಡಿಸಿ, ಒಂದೊಂದಕ್ಕೂ ಒಂದು ನಕ್ಷತ್ರದ ಜಾಗ ಅಂದ್ರೆ, ಸರಿಯಾದ ಹೋಲಿಕೆ ಆಗುತ್ತೆ. ಇವನ್ನೆಲ್ಲ ಯಾವುದೋ ಪೂಜೆ ಪುನಸ್ಕಾರ ಮಾಡೋ ಮಂತ್ರ ಹೇಳೋ ಗೊಡ್ಡು ಜನಗಳು ಮಾತ್ರ ತಿಳ್ಕೋತಿದ್ರು ಅನ್ನಬೇಡ್ರೀ! ಹಳ್ಳಿ ಹಳ್ಳೀಲಿ ಹೋಗಿ ಕೇಳಿ - ಯಾವ ಮಳೆ ಬಂದರೆ ಏನು ಅನುಕೂಲ ಅಂತ, ಹೇಳಿಯಾರು. ಅದರ ಮೇಲೇ ಗಾದೆಗಳೂ ಹುಟ್ಟಿಕೊಂಡವು. ಚಿತ್ತೆ ಮಳೆಯಮೇಲೆ, ಆರಿದ್ರಾ ಮಳೆಯ ಮೇಲೆ ಇರುವ ಗಾದೆಗಳನ್ನು ನಾನು ಕೇಳಿದ್ದೇನೆ. ನೆನಪಾಗುತ್ತಿಲ್ಲ. ರೈತರೊಡನೆ ಹೆಚ್ಚು ಒಡನಾಡಿದವರು ಖಂಡಿತ ನೆನಪಿಸಬಲ್ಲರು. ಹೀಗೆ ಅಶ್ವಿನಿ ಮಳೆ ಅಂದರೆ, ಸೂರ್ಯ ಅಶ್ವಿನಿಯ ಭಾಗದಲ್ಲಿ ಇರುವಾಗ ಬೀಳೋ ಮಳೆ ಅಂತ ಅರ್ಥ ಮಾಡಿಕೋಬೇಕು.

ತಿಂಗಳನ್ನು ಮಾಡಲು ಚಂದ್ರನನ್ನಿಟ್ಟವರು, ಮಳೆಗೆ ಮಾತ್ರ ರವಿಯ ಮೊರೆಹೋದರೇಕೆ? ಅದು ಸ್ವಾರಸ್ಯವಾದ ವಿಷಯವೇ. ಬೇಸಿಗೆ-ಮಳೆ-ಚಳಿಗಾಲಗಳು ಸೂರ್ಯ ಆಗಸದಲ್ಲಿ ನಕ್ಷತ್ರಗಳ ಹಾಸಿನಲ್ಲಿ ಎಲ್ಲಿದ್ದಾನೆ ಎಂಬುದರ ಮೇಲೆ ಹೊಂದಿಕೊಂಡಿದೆ ಅನ್ನೋದನ್ನು ಅವರು ಅನುಭವದಿಂದ ಅರಿತರು. ಸುಮಾರು ಸರಾಸರಿ ೩೬೦ ದಿನಗಳಲ್ಲಿ ಕಾಲಗಳು ಮತ್ತೆ ಮತ್ತೆ ಬರುತ್ತವೆ ಅಂಬೋದೂ ಅವರಿಗೆ ಗೊತ್ತಾಯ್ತು. ಬಹಳ ವರ್ಷಗಳು ಇದನ್ನೇ ನೋಡಿ, ಒಂದು ವರ್ಷಕ್ಕೆ ೩೬೫ ದಿನಗಳು ಅನ್ನೋದನ್ನು ತಿಳಿದುಕೊಂಡಿದ್ದರು.

ಆದರೆ, ದಿನ-ನಿತ್ಯದ ಕ್ಯಾಲೆಂಡರ್ ಬಳಕೆಗೆ ಸೂರ್ಯನನ್ನು ಬಳಸೋದು ಕಷ್ಟ. ಮೊದಲನೇದಾಗಿ, ಸೂರ್ಯ ಯಾವ ನಕ್ಷತ್ರದ ಬಳಿ ಇದ್ದಾನೆ ಅನ್ನೋದು ನೇರವಾಗಿ ಕಾಣೋಲ್ಲ- ಸೂರ್ಯನ ಬೆಳಕಿನಿಂದ. ಹಾಗಾಗಿ, ಸೂರ್ಯ ಹುಟ್ಟುವ ಮೊದಲು ಪೂರ್ವದಲ್ಲಿ ಯಾವ ನಕ್ಷತ್ರಗಳು ಕಾಣುತ್ತವೆ, ಸಂಜೆ ಮುಳುಗಿದ ನಂತರ ಯಾವ ನಕ್ಷತ್ರಗಳು ಕಾಣುತ್ತವೆ ಎನ್ನೋದನ್ನು ನೋಡಿ, ಸೂರ್ಯ ಯಾವ ನಕ್ಷತ್ರದ ಭಾಗದಲ್ಲಿದಾನೆ ಅನ್ನೋದನ್ನ ಕಂಡುಹಿಡೀಬೇಕಾಗತ್ತೆ. ಆದರೆ, ಚಂದ್ರನ ವಿಷಯ ಹಾಗಲ್ಲ. ಮೊದಲನೆದಾಗಿ, ೨೭ ನಕ್ಷತ್ರಗಳನ್ನ ಮಾಡಿರೋದೇ ಚಂದ್ರನ ಚಲನೆಯ ಮೇಲೆ ಆದ್ದರಿಂದ, ಪ್ರತಿದಿನ ಅವನು ಒಂದು ನಕ್ಷತ್ರದ ಬಳಿ ಇರುತ್ತಾನೆ! ಮತ್ತೆ, ಮಳೆಗಾಲವನ್ನು ಬಿಟ್ಟು, ಉಳಿದ ತಿಂಗಳುಗಳಲ್ಲಿ, ಸುಮಾರು ತಿಂಗಳಲ್ಲಿ ೨೫ ದಿನವಾದರೂ, ಚಂದ್ರನನ್ನು ನೋಡಿ, ಪ್ರಾಯೋಗಿಕ ಅಬ್ಸರ್ವೇಷನ್ ಮಾಡಬಹುದು. ಅದೂ ಅಲ್ಲದೆ, ಅರ್ಧ ತಿಂಗಳು ಚಂದ್ರ ಹೆಚ್ಚುತ್ತಾನೆ, ಇನ್ನರ್ಧಕ್ಕೆ ಕುಗ್ಗುತ್ತಾನೆ. ಆದ್ದರಿಂದ, ತಿಂಗಳನ್ನು ಎರಡು ಪಕ್ಷ - ಒಂದೊಂದು ಪಕ್ಷಕ್ಕೆ ೧೫ ತಿಥಿ - ಸುಮಾರು ಒಂದು ತಿಥಿ ಒಂದು ದಿನದಷ್ಟೇ. ಹಾಗೇ, ಪ್ರತಿದಿನ ಚಂದ್ರ ಒಂದು ನಕ್ಷತ್ರದ ಬಳಿ ಇರುವುದರಿಂದ, ಆಯಾ ದಿನಕ್ಕೆ ಒಂದು ತಿಥಿ, ಒಂದು ನಕ್ಷತ್ರ ಕೊಟ್ಟರೆ, ಆ ದಿನವನ್ನು ಕ್ಯಾಲೆಂಡರ್ ನಲ್ಲಿ ಸೂಚಿಸುವುದು ಸುಲಭವಾಯಿತು. ಇನ್ನುವರ್ಷದ ೧೨ ತಿಂಗಳುಗಳನ್ನು ಆಯಾ ತಿಂಗಳು ಚಂದ್ರ ಯಾವ ನಕ್ಷತ್ರದ ಬಳಿ ಇರುತ್ತಾನೋ, ,ಅದರಿಂದ ಕರೆದರು. ಉದಾಹರಣೆಗೆ ಚಂದ್ರ ಚಿತ್ತಾ ನಕ್ಷತ್ರದ ಬಳಿಯಿದ್ದು ಆಗುವ ಹುಣ್ಣೀಮೆ ಚೈತ್ರ ಮಾಸಕ್ಕೆ ಸೇರಿದ್ದು. ಹಾಗೇ, ಚಂದ್ರ ಹುಣ್ಣಿಮೆಯಂದು ಅಶ್ವಿನಿ ನಕ್ಷತ್ರದ ಬಳಿ ಇದ್ದರೆ, ಅದು ಆಶ್ವಯುಜ ಮಾಸ ಅಷ್ಟೇ. ಉಳಿದ ಎಲ್ಲಾ ತಿಂಗಳಿಗೂ ಹೀಗೇ ಅರ್ಥ ಕಲ್ಪಿಸಬಹುದು.

ಸರಿ; ಬರಿ ತಿಥಿ, ಮಾಸ, ನಕ್ಷತ್ರಗಳದ್ದೇ ಕಾರುಬಾರಾಯ್ತು ಅಂತೀರಾ? ನಾನು ಹೀಗೇ ಎಲ್ಲೆಲ್ಲಿಗೋ ಹೋಗುತ್ತಾ ಇದ್ದರೆ, ಇವನು ಬರೆಯೋದು ಓದೋದು ದುರ್ಭಿಕ್ಷದಲ್ಲಿ ಅಧಿಕಮಾಸ ಇದ್ದಹಾಗೆ ಅಂದು ಬಿಟ್ಟರೆ ಕಷ್ಟ! ಅದಕ್ಕೆ ಮೊದಲೆ ಅಧಿಕಮಾಸದ ವಿವರ ಕೊಟ್ಟುಬಿಡ್ತೀನಿ. ಸುಮಾರು ೨೯.೫ ದಿನಗಳಿರುವ ೧೨ ತಿಂಗಳು ಎಂದರೆ, ಒಂದು ಚಾಂದ್ರಮಾನ ವರ್ಷದಲ್ಲಿ ೩೫೪ ದಿವಸ. ಅಂದರೆ, ಚೈತ್ರ ಶುದ್ಧ ಪಾಡ್ಯದಂದು ಆಚರಿಸುವ ಈ ವರ್ಷದ ಯುಗಾದಿಗೂ, ಅದೇ ದಿವಸ ಆಚರಿಸುವ ಮುಂದಿನ ವರ್ಷದ ಯುಗಾದಿಗೂ ಮಧ್ಯ ೩೫೪ ದಿವಸ ಅಷ್ಟೇ;  ಆದರೆ, ಸರಾಸರಿ ಕಾಲಗಳ ವರ್ಷ ೩೬೫ ದಿನದ್ದು ಎಂದು ಆಗಲೇ ಹೇಳಿದ್ದೇನೆ. ಉದಾಹರಣೆಗೆ ಈ ವರ್ಷ ಮಾರ್ಚ್ ೩೧ಕ್ಕೆ ಇತ್ತು ಯುಗಾದಿ ಅಂತ ಇಟ್ಟುಕೊಳ್ಳಿ. ಮುಂದಿನ ವರ್ಷ ಅದು ಮಾರ್ಚ್ ೨೦ ಕ್ಕೆ ಬರುತ್ತೆ. ಅದರ ಮುಂದಿನ ವರ್ಷ ಮಾರ್ಚ್ ೯ಕ್ಕೆ - ಅದರ ಮುಂದಿನ ವರ್ಷ ಫೆಬ್ರವರಿ ೨೭ಕ್ಕೆ! ಹೀಗೇ ಹೋಗ್ತಾ ಹೋದರೆ, ಹತ್ತು ವರ್ಷ ಆಗೋ ಹೊತ್ತಿಗೆ, ನಮ್ಮ ಯುಗಾದಿ ಬೇಸಿಗೆಯ ಆರಂಭದಲ್ಲಿ ಬರೋ ಬದಲು ಚಳಿಗಾಲದ ಆರಂಭಕ್ಕೆ ಹೊರಟು ಹೋಗುತ್ತಲ್ಲವೇ? ಆಗ, ಉಗಾದಿಗೆ ಉಗುಳುನೀರು ಅನ್ನೋ ಗಾದೆಗಳೆಲ್ಲ ಸುಳ್ಳಾಗಿಹೋಗಲ್ವೇ? ವೇದ ಸುಳ್ಳಾಗಬಹುದು, ಆದರೆ ಗಾದೆ ಸುಳ್ಳಾಗೋಲ್ಲ, ಅಲ್ವಾ? ಹಾಗಿದ್ದರೆಇದಕ್ಕೆ ಏನು ಮಾಡೋದು?

ಆದರೆ, ನಿಮಗೆ ಯಾವತ್ತಾದರು ಡಿಸೆಂಬರ್‌ನಲ್ಲಿ ಯುಗಾದಿ ಹಬ್ಬ ಮಾಡಿರೋ ನೆನಪಿದಿಯೇ? ಯೋಚಿಸ್ತಾ ತಲೇ ಕೆರ್ಕೋಬೇಡಿ. ಯಾಕಂದ್ರೆ ಅದು ಯಾವತ್ತೂ ಆಗಿಲ್ಲ, ಆಗೋದೂ ಇಲ್ಲ!

ಈ ತೊಂದರೆ ಅಗೋದು ಚಂದ್ರನ ವರ್ಷಕ್ಕೂ , ಸೂರ್ಯನ ವರ್ಷಕ್ಕೂ ಇರೋ ೧೧ ದಿವಸದ ಅಂತರದಿಂದ ಅಂತ ನಿಮಗೀಗಾಗಲೆ ಮನವರಿಕೆಯಾಗಿದೆ. ಇದನ್ನ ಹೇಗಪ್ಪಾ ಸರಿ ಮಾಡೋದು? ಲೆಕ್ಕ ಹಾಕಿ - ೧೨ ತಿಂಗಳಿಗೆ ೧೧ ದಿನ ಹಿಂದೆ ಬೀಳೋದಾದರೆ, ಒಂದು ತಿಂಗಳಿಗೆ ೧೧/೧೨ ದಿನ ಆಯಿತು. ಈ ಲೆಕ್ಕದಲ್ಲಿ, ಇಪ್ಪತ್ತೊಂಬತ್ತೂವರೆ ದಿವಸ ಹಿಂದೆ ಬೀಳೋಕೇ ಎಷ್ಟು ತಿಂಗಳು ಬೇಕು? ಸುಮಾರು ೩೨.೧೮ ತಿಂಗಳು.

ಅಂದರೆ ಏನಾಯ್ತು? ಸುಮಾರು ೩೨-೩೩ ತಿಂಗಳಿಗೆ ಒಂದು ಹೆಚ್ಚುವರಿ ತಿಂಗಳನ್ನ ಸೇರಿಸಿದರೆ, ನಾವು ಯುಗಾದಿ ಚಳಿಗಾಲಕ್ಕೆ ಓಡಿಹೋಗೋದನ್ನ ತಪ್ಪಿಸಬಹುದು. ಮೊದಲು ಮಾಡಿದ ಲೆಕ್ಕವನ್ನೇ ಇನ್ನೊಂದು ಸಲ ಮಾಡೋಣ. ಮೊದಲ ವರ್ಷದ ಯುಗಾದಿ ಮಾರ್ಚ್ ೩೧ಕ್ಕೆ. ಎರಡನೇ ವರ್ಷದ ಯುಗಾದಿ ಮಾರ್ಚ್ ೨೦ಕ್ಕೆ (ಈಗ ೧೨ ತಿಂಗಳು ಮುಗಿದಿದೆ). ಮೂರನೇ ವರ್ಷದ ಯುಗಾದಿ ಮಾರ್ಚ್ ೯ಕ್ಕೆ (ಈಗ ೨೪ ತಿಂಗಳು ಮುಗಿದವು). ಇನ್ನು ಮುಂದಿನ ವರ್ಷ - ಓ, ಅಷ್ಟರೊಳಗೆ ೩೩ ತಿಂಗಳು ದಾಟಿ ಹೋಗುತ್ತವೆ ಅಲ್ವಾ? ಹಾಗಿದ್ದರೆ ನಾವು ಒಂದು ಹೆಚ್ಚುವರಿ ತಿಂಗಳನ್ನ ಸೇರಿಸಿಬಿಡೋಣ. ಈ ಹೆಚ್ಚುವರಿ ತಿಂಗಳನ್ನು ಸೇರಿಸದಿದ್ದರೆ, ಹೊಸವರ್ಷದ ಯುಗಾದಿ ಫೆಬ್ರವರಿ ೨೭ಕ್ಕೆ ಬರಬೇಕಿತ್ತು. ಆದರೆ, ನಾವು ಒಂದು ತಿಂಗಳನ್ನು ನಡುವೆ ಜಾಣತನದಿಂದ ಸೇರಿಸಿಬಿಟ್ಟೆವಲ್ಲ? ಹಾಗಾಗಿ ಮೂರನೆ ವರ್ಷದ ಯುಗಾದಿ, ಅವತ್ತಿಗೆ ಮೂವತ್ತು ದಿನ ಮುಂದೆ, ಅಂದರೆ ಮಾರ್ಚ ೨೯ಕ್ಕೆ ಬರುತ್ತೆ! ಅದರ ಮುಂದಿನ ವರ್ಷ ಮಾರ್ಚ್ ೧೮ಕ್ಕೆ, ಅದರ ಮುಂದಿನ ವರ್ಷ ಮಾರ್ಚ್ ೧೧ಕ್ಕೆ, ಅದರ ಮುಂದಿನ ವರ್ಷ - ಮರೀಬೇಡಿ - ೩೨-೩೩ ತಿಂಗಳು ಕಳೆದಿವೆ ಆಗಲೆ, ಹಾಗಂದ್ರೆ, ಏನರ್ಥ? ಯುಗಾದಿ ಫೆಬ್ರವರಿ ೨೮ಕ್ಕೆ ಬದಲಾಗಿ, ಮಾರ್ಚ್ ೩೦ಕ್ಕೆ ಬರುತ್ತೆ.

ಈ ಜಾಣತನದಿಂದೇನಾಯಿತು ನೋಡಿ? ಯುಗಾದಿ ಹಬ್ಬ ಚಳಿಗಾಲಕ್ಕೆ ಹೋಗೋದಿಲ್ಲ, ಉಗಾದಿಗೆ ಉಗುಳುನೀರೂ ತಪ್ಪೋದಿಲ್ಲ. ಇಷ್ಟೇ ಅಧಿಕ ಮಾಸದ ಗುಟ್ಟು. ಚಂದ್ರನ ವರ್ಷ-ಸೂರ್ಯನ ವರ್ಷಗಳು ಒಂದಕ್ಕೊಂದಕ್ಕೆ ಬಿಡದೇ ಹೊಂದಿಕೆಯಾಗಿರುವಂತೆ ಮಾಡಿರುವ ಪದ್ಧತಿ ಇದು.

ಇದು ಭಾರತದಲ್ಲಿ ಮಾತ್ರವಲ್ಲದೆ, ಯಹೂದಿಗಳ ಹಿಬ್ರೂ ಪಂಚಾಂಗದಲ್ಲೂ ರೂಢಿಯಲ್ಲಿದೆ. ಅಧಿಕ ಮಾಸ ಯಾವಾಗ ಬರುತ್ತೆ ಅನ್ನೋದರ ಲೆಕ್ಕಾಚಾರ ಸ್ವಲ್ಪ ಬೇರೆಯಾದರೂ, ಸರಾಸರಿ ಎರಡೂ ಸಮಾಂತರವಾಗಿ ಹೋಗುತ್ತವೆ. ಯಾರು ಕೊಟ್ಟು-ಯಾರು ಕೊಂಡರೋ ಗೊತ್ತಿಲ್ಲ ನನಗೆ; ಅಥವ ಎರಡೂ ಕಡೆ ಬೇರೆಬೇರೆಯಾಗೇ ಈ ಸತ್ಯವನ್ನು ಕಂಡುಕೊಂಡಿರಲೂಬಹುದು.

ಈ ಎಲ್ಲ ಲೆಕ್ಕಾಚಾರಗಳಿರುವುದರಿಂದ, ಇನ್ನೊಂದು ಚಕ್ರವೂ ಪ್ರಾರಂಭವಾಗುತ್ತೆ. ಈ ಅಧಿಕ ಮಾಸಗಳನ್ನು ಹಾಕಿದಾಗಲೂ, ಪ್ರತಿ ವರ್ಷ ಚಂದ್ರನ ವರ್ಷವೂ ಸೂರ್ಯನ ವರ್ಷವೂ ಪೂರ್ತಿ ಸರಿಯಾಗಿ ಒಂದುಗೂಡದು ಅನ್ನೋದನ್ನು ನೀವು ಗಮನಿಸಿರಬಹುದು. ಆದರೆ, ೧೯ ವರ್ಷಗಳಲ್ಲಿ, ಇವೆರಡೂ ಮತ್ತೆ ಸೇರುತ್ತವೆ. ಅಂದರೆ, ಪ್ರತಿ ೧೯ ವರ್ಷಗಳಲ್ಲಿ ಕ್ಯಾಲೆಂಡರ್ ದಿನಾಂಕವೂ, ಚಂದ್ರನ ತಿಥಿ-ನಕ್ಷತ್ರಗಳೂ ಒಂದುಗೂಡುತ್ತವೆ. ಅಂದರೆ, ೧೯೮೦ರ ಜನವರಿ ಒಂದರಂದು ಚಂದ್ರ ಶುಕ್ಲ ಪಾಡ್ಯ, ಅಶ್ವಿನೀ ನಕ್ಷತ್ರದಲ್ಲಿ ಇರುತ್ತಾನೆ ಅಂದುಕೊಳ್ಳಿ (ಸುಮ್ಮನೇ ಅಂದುಕೊಳ್ಳಿ - ನಾನೇನೂ ಪಂಚಾಂಗ ನೋಡಿಲ್ಲ) ; ೧೯೯೯ ರ ಜನವರಿ  ಒಂದರಂದೂ ಕೂಡ ಶುಕ್ಲ ಪಾಡ್ಯ, ಅಶ್ವಿನಿ ನಕ್ಷತ್ರವಾಗಿರುತ್ತೆ. ಹಾಗೇ ೨೦೧೮, ಜನವರಿ ಒಂದರಂದೂ ಅದೇ ತಿಥಿ, ನಕ್ಷತ್ರ! ಇದು ನಿದಾನವಾಗಿ ದೂರ ಸರಿಯುವುದಾದರೂ, ಒಬ್ಬ ವ್ಯಕ್ತಿಯ ಜೀವಿತ ಕಾಲದಲ್ಲಿ ಅಳತೆ ಮಾಡುವಷ್ಟ ಬದಲಾಗದು ಎಂದೇ ಹೇಳಬಹುದು. ೧೯-೨೦ನೇ ಶತಮಾನದಲ್ಲಿ, ಇನ್ನೂ ಜನನ-ಪತ್ರಗಳು ಇಲ್ಲದ ಸಮಯದಲ್ಲಿ, ಒಬ್ಬ ವ್ಯಕ್ತಿಯ ಹುಟ್ಟಿದ ದಿನಾಂಕ ತಿಳಿಯದೆ, ಬರೀ ತಿಥಿ-ವಾರ-ನಕ್ಷತ್ರ-ಸಂವತ್ಸರಗಳಿರುವ ಜಾತಕಗಳಿದ್ದಾಗ, ಈ ಹತ್ತೊಂಬತ್ತು ವರ್ಷದ ಚಕ್ರವನ್ನು ಗಮನದಲ್ಲಿರಿಸಿ ಅವರು ಹುಟ್ಟಿದ ದಿನವನ್ನು ಕಂಡುಹಿಡಿದ ಸಂದರ್ಭಗಳೂ ಇವೆ. ಪುರಂದರದಾಸರು ಅಥವ ತ್ಯಾಗರಾಜರು ಮೊದಲಾದ ಪುರಾತನರು ಇಂತಹ ತಿಂಗಳು ಇಂತಹ ತಾರೀಕು ಜನಿಸಿದರು, ಅಥವಾ ಮರಣಿಸಿದರು ಎಂದು ಹೇಳುವಾಗಲೂ ಈ ಹತ್ತೊಂಬತ್ತು ವರ್ಷದ ಚಕ್ರ ತನ್ನ ಕೈಚಳಕ ತೋರಿರುತ್ತದೆ.

ಇನ್ನು ಯಾವ ತಿಂಗಳು ಅಧಿಕ ಆಗುತ್ತೆ, ೩೨ ನೆ ತಿಂಗಳೇ,೩೩ನೆ ತಿಂಗಳೇ, ಇದನ್ನು ಹೇಗೆ ಮಾಡೋದು ಅಂತ ಯೋಚನೆ ಮಾಡ್ತೀರಾ? ಬೇಕಾದ್ರೆ ಉತ್ತರ ಮತ್ತೆ ತಿಳಿಸ್ತೀನಿ. ಸದ್ಯಕ್ಕೆ ಸಾಕು ಅನ್ನಿಸುತ್ತ್! Smiling

-ಹಂಸಾನಂದಿ

  • ಕ್ಯಾಲೆಂಡರ್
  • ವಿಜ್ಞಾನ
  • ಸ್ವಾರಸ್ಯ
~.~
  • hamsanandi ರವರ ಬ್ಲಾಗ್
  • Login or register to post comments
  • 535 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Google
  • Yahoo
  • ನಿರ್ವಾಹಕರ ಗಮನಕ್ಕೆ ತನ್ನಿ

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
July 25, 2007 - 10:01am — Sunil Jayaprakash

ಉ: ದುರ್ಭಿಕ್ಷದಲ್ಲಿ ಅಧಿಕ ಮಾಸ ??

Sunil Jayaprakash's picture

ದರಿದ್ರದಲ್ಲಿ ಅಧಿಕ ಮಾಸ ಎಂಬ ಮಾತಿನಲ್ಲಿ ಬರುವ "ಅಧಿಕ ಮಾಸ" ಅಂದರೇನು ಅಂತ ಸಿಕ್ಕಾಪಟ್ಟೆ ಸಲ ತಲೆಕೆರೆದುಕೊಂಡದ್ದಿತ್ತು. ಈ ಮೇಲಿನ ಬರಹ ಆ ನಿಟ್ಟಿನಲ್ಲಿ ತುಂಬಾ ಉಪಯುಕ್ತವಾಗಿದೆ ಅನಿಸಿತು. ನನ್ನಿ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
July 27, 2007 - 6:03pm — benaka

ಉ: ದುರ್ಭಿಕ್ಷದಲ್ಲಿ ಅಧಿಕ ಮಾಸ ??

benaka's picture

ಪ್ರಿಯ ಹಂಸಾನಂದಿ,

ಅಧಿಕಮಾಸದ ಬಗ್ಗೆ ಮಾಹಿತಿ ನೀಡುವ ಒಳ್ಳೆಯ ಪ್ರಯತ್ನ ಮಾಡಿದ್ದೀರಿ. ಕೆಲವು ಲೆಕ್ಕಾಚಾರಗಳನ್ನು ಅಷ್ಟು ಸುಲಭವಾಗಿ ವಿವರಿಸಲು ಸಾಧ್ಯವಿಲ್ಲದಿದ್ದರೂ, ನನಗೆ ಸುಲಭವಾಗಿ ತಿಳಿಯಬಹುದೆನಿಸಿದ ಅಧಿಕ/ಕ್ಷಯಮಾಸದ ವಿಚಾರವನ್ನು ಹೆಜ್ಜೆಹೆಜ್ಜೆಯಾಗಿ ಹೀಗೆ ಹೇಳಬಹುದು:

೧.ಸೂರ್ಯನ ಸುತ್ತಲೂ ಭೂಮಿಯ ಸುತ್ತುವಿಕೆಗೆ ತಗಲುವ ಕಾಲ ಒಂದು ವರ್ಷ. ಅದನ್ನು ಹನ್ನೆರಡು ಭಾಗಗಳಾಗಿ ಮಾಡಿದರೆ ಒಂದೊಂದೂ ಸೌರಮಾನ ತಿಂಗಳಾಗುತ್ತದೆ. ಇದನ್ನೇ ನಾವು ಭೂಮಿಯಿಂದ ನೋಡುವಾಗ ರವಿಯೇ ಬುವಿಯನ್ನು ಸುತ್ತುವಂತೆ ಕಾಣುತ್ತದೆ. ಇದನ್ನು ಹಗಲುಹೊತ್ತಿನಲ್ಲಿ ಬರಿಗಣ್ಣಿನಲ್ಲಿ ಅಳೆಯಲು ಅಸಾಧ್ಯವಾದ್ದರಿಂದ ಕತ್ತಲಿನ/ರಾತ್ರಿಯ ಹೊತ್ತು ತಾರೆಗಳ ಸ್ಥಾನದೊಡನೆ ಹೋಲಿಸಿ ನೋಡಿ ಅಳೆಯಬಹುದು.

೨.ಅಂದರೆ, ಇಂದು ಮಧ್ಯರಾತ್ರಿ ನೆತ್ತಿಯ ಮೇಲೆ ಶ್ರವಣ ನಕ್ಷತ್ರ ಕಂಡರೆ, ಹತ್ತು ದಿನಗಳಾಚೆಗೆ ಧನಿಷ್ಠಾ ತಾರೆ ಕಾಣಬರುತ್ತದೆ. ಅಥವಾ ಇನ್ನೊಂದು ಬಗೆಯಲ್ಲಿ ಹೇಳಿದರೆ, ಇಂದು ಬೆಳಗಿನ ಸೂರ್ಯೋದಯದ ಸುಮಾರಿಗೆ ರವಿ ಮೀನ ರಾಶಿಯ ರೇವತಿ ನಕ್ಷತ್ರದ ಪಕ್ಕದಲ್ಲಿ ಗೋಚರಿಸಿದರೆ, ಹತ್ತು ದಿನದ ನಂತರ ಅಶ್ವಿನೀ ನಕ್ಷತ್ರದ ಹತ್ತಿರ ಕಾಣುತ್ತಾನೆ. ಎರಡೂ ಹೇಳುವ ವಿಚಾರ ಒಂದೇ - ಭೂಮಿ ಚಲಿಸುತ್ತಿದೆ. ಈ ಚಲನೆಯನ್ನು ನಕ್ಷತ್ರ(ನ ಕ್ಷತ್ರಂ = ಮಿಸುಕದ) ಗಳಿಂದ, ಅಥವಾ ಅವುಗಳ ಗುಂಪು (ರಾಶಿ)ಗಳ ಸ್ಥಾನದಿಂದ ಲೆಕ್ಕಹಾಕಬಹುದು. ಉದಾ: ಸೂರ್ಯ ರೇವತಿ ನಕ್ಷತ್ರ ಮೀನರಾಶಿಯಲ್ಲಿದ್ದಾನೆ. ಹತ್ತುದಿನಗಳ ನಂತರ ಅಶ್ವಿನಿ ನಕ್ಷತ್ರ ಮೇಷರಾಶಿಗೆ ಬರುತ್ತಾನೆ...ಇತ್ಯಾದಿ.

೩. ಇದೇ ರೀತಿ ಭೂಮಿಯನ್ನು ಸುತ್ತುವ ಚಂದ್ರನ ಚಲನೆಯನ್ನೂ ಲೆಕ್ಕಹಾಕಿ ಯಾವ ತಾರೆ, ಯಾವ ರಾಶಿಯಲ್ಲಿದ್ದಾನೆ ಎಂದು ಹೇಳಬಹುದು/ ನೋಡಬಹುದು! ಚಂದ್ರನ ಒಂದು ಸುತ್ತಿಗೆ ೨೭/೨೮ ದಿನಗಳಾದರೆ, ರವಿಗೆ ಮೊದಲೇ ನೋಡಿದಂತೆ ಒಂದು ವರ್ಷ. ಅಂದರೆ ರವಿ ಗಡಿಯಾರದ ಚಿಕ್ಕ ಮುಳ್ಳಾದರೆ, ಚಂದ್ರ ದೊಡ್ಡಮುಳ್ಳು!
ಸರಿಸುಮಾರು ಚಂದ್ರನ ಹನ್ನೆರಡು ಸುತ್ತುಗಳಿಗೆ ರವಿಯ ಒಂದು ಸುತ್ತು! ಆದ್ದರಿಂದ ಗಡಿಯಾರದಂತೆ ವರ್ಷವನ್ನೂ ೧೨ ಭಾಗಗಳಾಗಿ ಮಾಡಿದರು! ಯಾವ ಭಾಗ ಹೇಗೆ ಕಂಡರೆ, ಆಯಾ ರಾಶಿಯೆಂಬ ಹೆಸರಾಯಿತು. ತಕ್ಕಡಿಯಂತೆ ಕಂಡರೆ ತುಲಾರಾಶಿ; ಇಬ್ಬರಂತೆ ಕಂಡರೆ ಮಿಥುನ; ಚೇಳಾದರೆ ವೃಶ್ಚಿಕ; ಸಿಂಹವಾದರೆ ಸಿಂಹ!

೪.ಹೀಗೆ ರಾಶಿಚಕ್ರದಲ್ಲಿ ಸುತ್ತುತ್ತಿರುವ ರವಿ ಒಂದೊಂದೇ ರಾಶಿಯನ್ನು ದಾಟುವಾಗ ಸಂಕ್ರಮಣ ಅಥವಾ ಸೌರ ಮಾಸಗಳಾಗುತ್ತವೆ. ಸರಿಸುಮಾರು ಚಂದ್ರನ ಒಂದು ಸುತ್ತಿಗೆ(ನಿಮಿಷದ ಮುಳ್ಳು), ರವಿ ಒಂದು ರಾಶಿ ಮುಂದೆ ಚಲಿಸುತ್ತಾನೆ(ಗಂಟೆಯ ಮುಳ್ಳು). ಈ ಲೆಕ್ಕಾಚಾರವೇನೋ ಸರಿಯೇ, ಆದರೆ ಗಂಟೆಗೆ ೬೦ ನಿಮಿಷಗಳಂತೆ ರವಿ ಚಂದ್ರರ ಚಲನೆ ಚಾಂದ್ರಮಾನ ವರ್ಷವೊಂದಕ್ಕೆ ಹನ್ನೆರಡು ಸೌರ ತಿಂಗಳು ಎಂದೇನೂ ಹೇಳಲಾಗದು! ಏಕೆಂದರೆ ಸೌರ ಮಾಸ ಸುಮಾರು ೩೦ ದಿನಗಳಾದರೆ, ಚಾಂದ್ರ ಮಾಸ ಸುಮಾರು ೨೭
ದಿನಗಳು. ಹೀಗಾಗಿ, ಕೆಲವೊಮ್ಮೆ ಚಂದ್ರ ಒಂದು ಸುತ್ತು ಸುತ್ತಿ ಬಂದರೂ ರವಿಯ ರಾಶಿ ಬದಲಾಗಿರುವುದೇ ಇಲ್ಲ; ಅಥವಾ ಕೆಲವೊಮ್ಮೆ ಚಂದ್ರನ ಒಂದು ಸುತ್ತಿನೊಳಗೇ ರವಿ ಎರಡು ರಾಶಿಗಳನ್ನು ಬದಲಿಸಿರಲೂ ಸಾಧ್ಯ!

೫.ಹೀಗೆ ಒಂದೇ ಚಾಂದ್ರ ಮಾಸದೊಳಗೆ ರವಿ ಎರಡು ಬಾರಿ ರಾಶಿಗಳನ್ನು ದಾಟಿದರೆ ಆ ಚಾಂದ್ರ ಮಾಸವನ್ನು ಕ್ಷಯಮಾಸವೆನ್ನುತ್ತಾರೆ; ಅಂದರೆ ನಿಮಿಷದ ಮುಳ್ಳು ಒಂದು ಸುತ್ತು ಬರುವುದರೊಳಗೆ ಗಂಟೆಯ ಮುಳ್ಳು ಎರಡು (ಗಂಟೆ)ಅಂಕಿಗಳಷ್ಟು ಸರಿದಂತಹ ಹೋಲಿಕೆ!
ಹಾಗಲ್ಲದೆ, ಒಂದು ಚಾಂದ್ರ ಮಾಸದೊಳಗೆ ರವಿಯು ರಾಶಿಯನ್ನು ಬದಲಿಸದಿದ್ದರೆ, ಆ ಚಾಂದ್ರಮಾಸವನ್ನು ಅಧಿಕಮಾಸ ಎನ್ನುತ್ತಾರೆ; ಅಂದರೆ, ನಿಮಿಷದ ಮುಳ್ಳಿನ ಒಂದು ಸುತ್ತಿನ ನಂತರವೂ ಗಂಟೆಯ ಮುಳ್ಳು ಮುಂದಿನ (ಗಂಟೆ)ಅಂಕಿಗೆ ಹೋಗದಿರುವಂಥ ಹೋಲಿಕೆ!

ಈ ವರ್ಷ ಜ್ಯೇಷ್ಠ ಮಾಸದಲ್ಲಿ ರವಿ ಮಿಥುನರಾಶಿಗೆ ಪ್ರವೇಶಿಸಲೇ ಇಲ್ಲವಾದ್ದರಿಂದ ಅಧಿಕ ಜ್ಯೇಷ್ಠಮಾಸ ಆಗಲೇಬೇಕಾಯಿತು. ಈ ಅಧಿಕ-ಕ್ಷಯಮಾಸಗಳು ಒಂದುರೀತಿಯ ವ್ಯತ್ಯಾಸ ಸರಿಪಡಿಕೆಯ ವಿಧಾನವಾದರೂ ತರ್ಕಬದ್ಧವಾದ, ಶಾಸ್ತ್ರೀಯ ಹಿನ್ನೆಲೆ ಹೊಂದಿವೆ. ಇವನ್ನು ವಿವರಿಸಬಹುದು. ನೀವು ಫೆಬ್ರುವರಿಯಲ್ಲಿ ಏಕೆ ಯಾವಾಗಲೂ ೨೮ ದಿನ? ಎಂದರೆ ಬಹುಶಃ ವಿವರಣೆ ಸಾಧ್ಯವಿಲ್ಲ!

ನಿಮ್ಮವ

ಬೆನಕ

ಕನ್ನಡಪುಟ.ಬ್ಲಾಗ್‍ಸ್ಪಾಟ್.ಕಾಂ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
July 28, 2007 - 6:18am — hamsanandi

ಉ: ದುರ್ಭಿಕ್ಷದಲ್ಲಿ ಅಧಿಕ ಮಾಸ ??

hamsanandi's picture

ಬೆನಕರೆ,

ಹೆಚ್ಚುಕಡಿಮೆ ನಾನು ಮುಂದೆ ಬರೆಯಬೇಕೆಂದಿದ್ದ ವಿಷಯಗಳನ್ನೆಲ್ಲ ಅರುಹಿದ್ದೇರಿ. ಬಹಳ ಒಳಿತಾಯಿತು.

-ಹಂಸಾನಂದಿ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
July 28, 2007 - 6:40am — hamsanandi

ಉ: ದುರ್ಭಿಕ್ಷದಲ್ಲಿ ಅಧಿಕ ಮಾಸ ??

hamsanandi's picture

ಬೆನಕರ ಟಿಪ್ಪಣಿ ಬಹಳ ಚೆನ್ನಾಗಿದೆ. ಅವರ ಟಿಪ್ಪಣಿಯಲ್ಲಿ ಬಿಟ್ಟ ಕೆಲವು ವಿಷಯಗಳ ಬಗ್ಗೆ ಮರುಟಿಪ್ಪಣಿ ಇಲ್ಲಿದೆ - ಬೇರೆ ಆಸಕ್ತರ ಓದಿಗಾಗಿ Smiling

Quote:

೧.ಸೂರ್ಯನ ಸುತ್ತಲೂ ಭೂಮಿಯ ಸುತ್ತುವಿಕೆಗೆ ತಗಲುವ ಕಾಲ ಒಂದು ವರ್ಷ. ಅದನ್ನು ಹನ್ನೆರಡು ಭಾಗಗಳಾಗಿ ಮಾಡಿದರೆ ಒಂದೊಂದೂ ಸೌರಮಾನ ತಿಂಗಳಾಗುತ್ತದೆ. ಇದನ್ನೇ ನಾವು ಭೂಮಿಯಿಂದ ನೋಡುವಾಗ ರವಿಯೇ ಬುವಿಯನ್ನು ಸುತ್ತುವಂತೆ ಕಾಣುತ್ತದೆ. ಇದನ್ನು ಹಗಲುಹೊತ್ತಿನಲ್ಲಿ ಬರಿಗಣ್ಣಿನಲ್ಲಿ ಅಳೆಯಲು ಅಸಾಧ್ಯವಾದ್ದರಿಂದ ಕತ್ತಲಿನ/ರಾತ್ರಿಯ ಹೊತ್ತು ತಾರೆಗಳ ಸ್ಥಾನದೊಡನೆ ಹೋಲಿಸಿ ನೋಡಿ ಅಳೆಯಬಹುದು.

೨.ಅಂದರೆ, ಇಂದು ಮಧ್ಯರಾತ್ರಿ ನೆತ್ತಿಯ ಮೇಲೆ ಶ್ರವಣ ನಕ್ಷತ್ರ ಕಂಡರೆ, ಹತ್ತು ದಿನಗಳಾಚೆಗೆ ಧನಿಷ್ಠಾ ತಾರೆ ಕಾಣಬರುತ್ತದೆ. ಅಥವಾ ಇನ್ನೊಂದು ಬಗೆಯಲ್ಲಿ ಹೇಳಿದರೆ, ಇಂದು ಬೆಳಗಿನ ಸೂರ್ಯೋದಯದ ಸುಮಾರಿಗೆ ರವಿ ಮೀನ ರಾಶಿಯ ರೇವತಿ ನಕ್ಷತ್ರದ ಪಕ್ಕದಲ್ಲಿ ಗೋಚರಿಸಿದರೆ, ಹತ್ತು ದಿನದ ನಂತರ ಅಶ್ವಿನೀ ನಕ್ಷತ್ರದ ಹತ್ತಿರ ಕಾಣುತ್ತಾನೆ. ಎರಡೂ ಹೇಳುವ ವಿಚಾರ ಒಂದೇ - ಭೂಮಿ ಚಲಿಸುತ್ತಿದೆ. ಈ ಚಲನೆಯನ್ನು ನಕ್ಷತ್ರ(ನ ಕ್ಷತ್ರಂ = ಮಿಸುಕದ) ಗಳಿಂದ, ಅಥವಾ ಅವುಗಳ ಗುಂಪು (ರಾಶಿ)ಗಳ ಸ್ಥಾನದಿಂದ ಲೆಕ್ಕಹಾಕಬಹುದು. ಉದಾ: ಸೂರ್ಯ ರೇವತಿ ನಕ್ಷತ್ರ ಮೀನರಾಶಿಯಲ್ಲಿದ್ದಾನೆ. ಹತ್ತುದಿನಗಳ ನಂತರ ಅಶ್ವಿನಿ ನಕ್ಷತ್ರ ಮೇಷರಾಶಿಗೆ ಬರುತ್ತಾನೆ...ಇತ್ಯಾದಿ.

ಬೆನಕರು ಉದಾಹರಣೆ ತಿಳಿಯಲೆಂದು ಹೇಳಿದ್ದಾರೆ. ರೇವತಿ, ಅಶ್ವಿನೀ ಮೊದಲಾದ ನಕ್ಷತ್ರ (ಕಣ್ಣಿಗೆ ಕಾಣುವ) ಗಳು ನೆತ್ತಿಯ ಮೇಲೇ ನೇರವಾಗಿ ಕಾಣಬೇಕು ಅಂತೇನೂ ಇಲ್ಲ. ಕಣ್ಣಿಗೆ ಕಾಣುವ ತಾರೆ ಒಂದು ಸೂಚಕ ಮಾತ್ರ. ಆಕಾಶದ ಒಂದು ಪ್ರದೇಶಕ್ಕೆ ಈ ಹೆಸರುಗಳು ಲಗತ್ತಾಗುತ್ತವೆ. (ಹಿಂದೆ ಹೇಳಿದ ಕಿತ್ತಳೆ ತೊಳೆಯ ಮಾದರಿ) ; ಮತ್ತೆ, ಆಕಾಶವನ್ನು (೩೬೦ ಡಿಗ್ರಿ) ೨೭ ಭಾಗ ಮಾಡಿರುವುದರಿಂದಲೂ, ಅಷ್ಟು ದೂರವನ್ನು ಸವೆಸಲು ಸೂರ್ಯನಿಗೆ ೩೬೫ ದಿನಗಳು ಆಗುವುದರಿಂದಲೂ, ಸೂರ್ಯ ಒಂದು ನಕ್ಷತ್ರದ ಪ್ರದೇಶದಲ್ಲಿ ಸುಮಾರು ೧೩ ದಿನ ಕಳೆಯುತ್ತಾನೆ.

Quote:

೪.ಹೀಗೆ ರಾಶಿಚಕ್ರದಲ್ಲಿ ಸುತ್ತುತ್ತಿರುವ ರವಿ ಒಂದೊಂದೇ ರಾಶಿಯನ್ನು ದಾಟುವಾಗ ಸಂಕ್ರಮಣ ಅಥವಾ ಸೌರ ಮಾಸಗಳಾಗುತ್ತವೆ. ಸರಿಸುಮಾರು ಚಂದ್ರನ ಒಂದು ಸುತ್ತಿಗೆ(ನಿಮಿಷದ ಮುಳ್ಳು), ರವಿ ಒಂದು ರಾಶಿ ಮುಂದೆ ಚಲಿಸುತ್ತಾನೆ(ಗಂಟೆಯ ಮುಳ್ಳು). ಈ ಲೆಕ್ಕಾಚಾರವೇನೋ ಸರಿಯೇ, ಆದರೆ ಗಂಟೆಗೆ ೬೦ ನಿಮಿಷಗಳಂತೆ ರವಿ ಚಂದ್ರರ ಚಲನೆ ಚಾಂದ್ರಮಾನ ವರ್ಷವೊಂದಕ್ಕೆ ಹನ್ನೆರಡು ಸೌರ ತಿಂಗಳು ಎಂದೇನೂ ಹೇಳಲಾಗದು! ಏಕೆಂದರೆ ಸೌರ ಮಾಸ ಸುಮಾರು ೩೦ ದಿನಗಳಾದರೆ, ಚಾಂದ್ರ ಮಾಸ ಸುಮಾರು ೨೭
ದಿನಗಳು. ಹೀಗಾಗಿ, ಕೆಲವೊಮ್ಮೆ ಚಂದ್ರ ಒಂದು ಸುತ್ತು ಸುತ್ತಿ ಬಂದರೂ ರವಿಯ ರಾಶಿ ಬದಲಾಗಿರುವುದೇ ಇಲ್ಲ; ಅಥವಾ ಕೆಲವೊಮ್ಮೆ ಚಂದ್ರನ ಒಂದು ಸುತ್ತಿನೊಳಗೇ ರವಿ ಎರಡು ರಾಶಿಗಳನ್ನು ಬದಲಿಸಿರಲೂ ಸಾಧ್ಯ!

೫.ಹೀಗೆ ಒಂದೇ ಚಾಂದ್ರ ಮಾಸದೊಳಗೆ ರವಿ ಎರಡು ಬಾರಿ ರಾಶಿಗಳನ್ನು ದಾಟಿದರೆ ಆ ಚಾಂದ್ರ ಮಾಸವನ್ನು ಕ್ಷಯಮಾಸವೆನ್ನುತ್ತಾರೆ; ಅಂದರೆ ನಿಮಿಷದ ಮುಳ್ಳು ಒಂದು ಸುತ್ತು ಬರುವುದರೊಳಗೆ ಗಂಟೆಯ ಮುಳ್ಳು ಎರಡು (ಗಂಟೆ)ಅಂಕಿಗಳಷ್ಟು ಸರಿದಂತಹ ಹೋಲಿಕೆ!
ಹಾಗಲ್ಲದೆ, ಒಂದು ಚಾಂದ್ರ ಮಾಸದೊಳಗೆ ರವಿಯು ರಾಶಿಯನ್ನು ಬದಲಿಸದಿದ್ದರೆ, ಆ ಚಾಂದ್ರಮಾಸವನ್ನು ಅಧಿಕಮಾಸ ಎನ್ನುತ್ತಾರೆ; ಅಂದರೆ, ನಿಮಿಷದ ಮುಳ್ಳಿನ ಒಂದು ಸುತ್ತಿನ ನಂತರವೂ ಗಂಟೆಯ ಮುಳ್ಳು ಮುಂದಿನ (ಗಂಟೆ)ಅಂಕಿಗೆ ಹೋಗದಿರುವಂಥ ಹೋಲಿಕೆ!

ಅದು ಹೇಗೆ ಚಂದ್ರ ಅಥವ ಸೂರ್ಯ ಒಂದೇ ತಿಂಗಳಲ್ಲಿ ಎರಡೆರಡು ರಾಶಿಗಳನ್ನು ದಾಟಿದ ಎಂಬ ಅಚ್ಚರಿಪಡಬೇಡಿ. ಎರಡು ರಾಶಿಗಳನ್ನು ಪೂರ್ತಿ ದಾಟಲು ಎರಡು ತಿಂಗಳು ಬೇಕು. ಆದರೆ ಭೂಮಿ-ಸೂರ್ಯನ ನಡುವಿನ ದೂರ ಹಾಗೂ, ಚಂದ್ರ-ಭೂಮಿಯ ನಡುವಿನ ದೂರ ಬದಲಾಗುತ್ತಿರುವುದರಿಂದ ೩೦ ದಿನಗಳ ಅವಧಿಯೊಳಗೆ ಎರಡು ರಾಶಿಗಳ ಪ್ರಾರಂಭದ ಬಿಂದುಗಳನ್ನು ದಾಟಲು ಸಾಧ್ಯ. ಉದಾಹರಣೆಗೆ ಮೇಷ ರಾಶಿ ೦ ಡಿಗ್ರಿಯಲ್ಲಿ ಆರಂಭವಾಗುತ್ತೆ,. ವೃಷಭರಾಶಿ ೩೦ ಡಿಗ್ರಿಯಲ್ಲಿ ಆರಂಭವಾಗುತ್ತೆ. ತಿಂಗಳ ಕೊನೆಯಲ್ಲಿ (ದೂರ ಹೆಚ್ಚು ಕಡಿಮೆ ಆಗುವುದರಿಂದ) ಸೂರ್ಯ ಅಥವ ಚಂದ್ರ ೩೧ ಡಿಗ್ರಿ ದಾಟುವ (ಅಥವ ೨೯.೫ ಡಿಗ್ರಿ ದಾಟುವ) ಸಾಧ್ಯತೆ ಇದೆ. ಹಾಗಾಗಿಯೇ ಬೆನಕರು ಹೇಳುವಂತೆ ಎರಡು ರಾಶಿಗಳನ್ನು ಮುಟ್ಟುವುದು.

Quote:

ಈ ವರ್ಷ ಜ್ಯೇಷ್ಠ ಮಾಸದಲ್ಲಿ ರವಿ ಮಿಥುನರಾಶಿಗೆ ಪ್ರವೇಶಿಸಲೇ ಇಲ್ಲವಾದ್ದರಿಂದ ಅಧಿಕ ಜ್ಯೇಷ್ಠಮಾಸ ಆಗಲೇಬೇಕಾಯಿತು. ಈ ಅಧಿಕ-ಕ್ಷಯಮಾಸಗಳು ಒಂದುರೀತಿಯ ವ್ಯತ್ಯಾಸ ಸರಿಪಡಿಕೆಯ ವಿಧಾನವಾದರೂ ತರ್ಕಬದ್ಧವಾದ, ಶಾಸ್ತ್ರೀಯ ಹಿನ್ನೆಲೆ ಹೊಂದಿವೆ. ಇವನ್ನು ವಿವರಿಸಬಹುದು. ನೀವು ಫೆಬ್ರುವರಿಯಲ್ಲಿ ಏಕೆ ಯಾವಾಗಲೂ ೨೮ ದಿನ? ಎಂದರೆ ಬಹುಶಃ ವಿವರಣೆ ಸಾಧ್ಯವಿಲ್ಲ!

ಎಂದರೆ, ಚಂದ್ರನ ಅಳತೆಯ ಜ್ಯೇಷ್ಟ ಮಾಸ ಸುಮಾರು ಮೇ ೧೭ ರಂದು ಸಂಜೆ ಆರಂಭವಾಗಿ, ಜೂನ್ ೧೫ ರಂದು ಬೆಳಗ್ಗೆ ಮುಗಿಯಿತು ಎಂದಿಟ್ಟುಕೊಳ್ಳಿ. ಸೂರ್ಯನು ಮೇ ೧೬ ರಂದೇ ಮಿಥುನ ರಾಶಿಗೆ ಹೋಗಿರಬಹುದು (ಇದನ್ನು ಮಿಥುನ ಸಂಕ್ರಮಣ ಎನ್ನುತ್ತೇವೆ). ಜೂನ್ ೧೬ರಂದು ಸೂರ್ಯ ಕಟಕ ರಾಶಿಗೆ ಹೋಗುವನು (ಇದು ಕಟಕ ಸಂಕ್ರಮಣ). ಹೀಗಾದರೆ ಏನಾಯಿತು? ವೈಶಾಖದ ಅಮಾವಾಸ್ಯೆ (ಮೇ ೧೭ ಬೆಳಗ್ಗೆ) ಮತ್ತು ಜ್ಯೇಷ್ಯದ ಅಮಾವಾಸ್ಯೆ (ಜೂನ್ ೧೫ ಬೆಳಗ್ಗೆ) ಯ ನಡುವೆ ಸೂರ್ಯ ಒಂದೇ ರಾಶಿಯಲ್ಲಿದ್ದ . ಇಂತಹ ಮಾಸವೇ ಅಧಿಕ ಮಾಸ.

ಹೀಗೇ, ಎರಡು ಅಮಾವಾಸ್ಯೆಗಳ ನಡುವೆ, ಸೂರ್ಯನ ಎರಡು ಸಂಕ್ರಮಣಗಳೂ ಬರಬಹುದು. ಅಂತಹ ಮಾಸವನ್ನು ಕ್ಶಯಮಾಸ ಎನ್ನುತ್ತೇವೆ.

ಈ ಮೊದಲು ೧೯ ವರ್ಷಗಳ ಚಕ್ರವನ್ನು ಹೇಳಿದ್ದೆ. ಈ ಸಮಯದಲ್ಲ್ಲಿ ಹಲವು ಕ್ಷಯ ಮಾಸಗಳೂ, ಹಲವು ಅಧಿಕಮಾಸಗಳು ಬರಬಹುದು. ಆದರೆ, ಕ್ಷಯಮಾಸಗಳಿಗಿಂತ ಏಳು ಹೆಚ್ಚು ಅಧಿಕಮಾಸಗಳು ಬಂದಿರುತ್ತವೆ.

-ಹಂಸಾನಂದಿ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ರಾಹು-ಕೇತು ಕಾಟ, ಮತ್ತು ಗ್ರಹಣ ಚಕ್ರ
  • ಏಳು ಸ್ವರವು ಸೇರಿ ಸಂಗೀತವಾಯಿತು ಏಳು ದಿನವು ಸೇರಿ ಒಂದು ವಾರವಾಯಿತು ...
  • (ವರ್ಷದ) ಕೊನೆಯ ಕೊಸರು
  • ಮಾಸಗಳಿಗೆ ಹಾಗೆ ಹೆಸರೇಕೆ
  • Someಕ್ರಮಣದ ಪುರಾಣ - ಭಾಗ ಎರಡು [ ಕೊನೆಯ ಭಾಗ]
Syndicate content

ಲೇಖಕರು

hamsanandi's picture

ಪೂರ್ಣ ಹೆಸರು
ಹಂಸಾನಂದಿ

ಪರಿಚಯ

ಹೇಮಾವತಿಯ ನೆಲೆಯಿಂದ ಅಡಯಾರ್ ದಡಕ್ಕೆ,
ಅಡಯಾರ್ ದಡದಿಂದ ಮುಳಾ ನದಿಯ ಬದಿಗೆ,
ಮುಳಾ ಬದಿಯಿಂದ ವೃಷಭಾವತಿ ಕಡೆಗೆ ಸಾರಿ,
ಮತ್ತಲ್ಲಿಂದ ಸಾಕ್ರಮೆಂಟೋ, ಅಮೆರಿಕನ್ ನದಿಗಳ ನೀರು ಕುಡಿದು ............................................
ಸದ್ಯಕ್ಕೆ ಗ್ವಾಡಲೂಪೆ ನದಿ ದಡದಲ್ಲಿ ಸುಧಾರಿಸಿಕೊಳ್ಳುತ್ತಿರುವ ಒಬ್ಬ ಕನ್ನಡಿಗ!

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

Dr. Ullas Karanth (ಡಾ. ಉಲ್ಲಾಸ್ ಕಾರಂತ)
ನಿರೀಕ್ಷಿಸಿ!

ವಾಟರ್ ಪೋರ್ಟಲ್: ದಿನದ ಚಿತ್ರ

ಬಾವಿ

ಮೂಡಬಿದ್ರಿಯ ಸಾವಿರ ಬಸದಿಯ ಬಳಿ ಒಂದು ಬಾವಿ.
(ಫೋಟೋ: ಸುದರ್ಶನ್ (ಅನಿವಾಸಿ))

ವಾರದ ಲೇಖನ
ಬೃಹತ್ ನೀರಾವರಿ ಯೋಜನೆಗಳು: ಮಹಾ ಅಸಂಗತಕ್ಕೊಂದು ಮುನ್ನುಡಿ - ಎನ್ ಎ ಎಂ ಇಸ್ಮಾಯಿಲ್

ವಾರದ ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ಮತ್ತಷ್ಟು...

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಬ್ಲಾಗ್ ಬರಹಗಳು

  • ಲಿನಕ್ಸಾಯಣ - ೧೯ - EvDO ಲಿನಕ್ಸ್ ನಲ್ಲಿ?
  • ನಾನು ನಿಜವಾಗಿಯು ಹುಚ್ಚಾನ?
  • ಲಿನಕ್ಸಾಯಣ - ೧೮ - ನೆಟ್ವರ್ಕಿಂಗ್ ಭಾಗ -೨ - BSNL BroadBand ಹ್ಯಾಗೆ ಉಪಯೋಗಿಸೋದು?
  • ಹಿಂದಿ ದಿವಸ : ಒಕ್ಕೂಟ ವ್ಯವಸ್ಥೆಗೊಂದು ಕಳಂಕ
  • ಓದಿದ್ದು ಕೇಳಿದ್ದು ನೋಡಿದ್ದು-12
  • ನೀನು ನಾನು ಜೋಡಿ
  • ಬಹಿರಂಗ ವಸೂಲಿಗೆ ಸಚಿವೆ ಶೋಭಾ ಮಾದರಿ
  • ಜೋಯೀಸರ ಮಗಳು
  • 1700 11th AVE NE ಅಪಾರ್ಟ್ ಮೆಂಟ್ - 6
  • ಕೆಟ್ಟ ಕಾರ್ಯಕ್ರಮಗಳಿಗೆ ಅಂಕುಶ ಹಾಕುತ್ತೀರಾ?
ಇನ್ನಷ್ಟು

ಇತ್ತೀಚಿನ ಪ್ರತಿಕ್ರಿಯೆಗಳು

  • venkatesh
    ಉ: ಸಿಯಾಟಲ್ ನಗರವನ್ನು ೧೯ ನೆಯ ಮಹಡಿಯಿಂದ ಕೆಳಗೆ ಕಂಡಾಗಿನ ದೃಷ್ಯ !
    September 8, 2008 - 5:15pm
  • srivathsajoshi
    ಉ: ಬಾಲ್ಯದ ನೆನಪುಗಳು
    September 8, 2008 - 5:05pm
  • sandeepkn
    ಉ: ಎಲ್ಲ ಓಕೆ ಹಿಂದಿ ಹೇರಿಕೆ ಯಾಕೆ
    September 8, 2008 - 4:59pm
  • omshivaprakash
    ಉ: ಬಿಗುಮಾನದ ಚಿತ್ರಗಳು
    September 8, 2008 - 4:45pm
  • Shashikanth. Birge
    ಉ: ನಾನು ನಿಜವಾಗಿಯು ಹುಚ್ಚಾನ?
    September 8, 2008 - 4:41pm
  • pramodc84
    ಉ: ಸಿಯಾಟಲ್ ನಗರವನ್ನು ೧೯ ನೆಯ ಮಹಡಿಯಿಂದ ಕೆಳಗೆ ಕಂಡಾಗಿನ ದೃಷ್ಯ !
    September 8, 2008 - 4:28pm
  • anil.ramesh
    ಉ: ನಾನು ನಿಜವಾಗಿಯು ಹುಚ್ಚಾನ?
    September 8, 2008 - 4:06pm
  • girish.rajanal
    ಉ: ಲಿನಕ್ಸಾಯಣ - ೧೮ - ನೆಟ್ವರ್ಕಿಂಗ್ ಭಾಗ -೨ - BSNL BroadBand ಹ್ಯಾಗೆ ಉಪಯೋಗಿಸೋದು?
    September 8, 2008 - 3:32pm
  • kannadakanda
    ಉ: ಎಲ್ಲ ಓಕೆ ಹಿಂದಿ ಹೇರಿಕೆ ಯಾಕೆ
    September 8, 2008 - 3:26pm
  • kannadakanda
    ಉ: ಕನ್ನಡಕ್ಕೆ ಬೇಕು ಕನ್ನಡದ್ದೇ ವ್ಯಾಕರಣ
    September 8, 2008 - 3:14pm
ಇನ್ನಷ್ಟು
ಈಗಿನಂತೆ 9 ಸದಸ್ಯರು ಮತ್ತು 132 ಅತಿಥಿಗಳು ಆನ್ಲೈನ್ ಇರುವರು.


ಜಾನಪದ ಶಿಷ್ಟಿಯಲಿ, ಸಂಪತ್ಸಮಷ್ಟಿಯಲಿ |
ಜ್ಞಾನಸಂಧಾನದಲಿ, ಮೌಲ್ಯ ಗಣನೆಯಲಿ ||
ಮಾನವತೆ ಮಾನುಷ್ಯ ಧಾರ್ಮಿಕತೆಯೆದ್ದುನಿಲೆ |
ಆನಂದ ಧರೆಗಂದು -- ಮಂಕುತಿಮ್ಮ ||

— ಡಿ ವಿ ಜಿ

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator