ಅಯೋಧ್ಯೆಯ ಬಗ್ಗೆ ನ್ಯಾಯ ಪಂಚಾಯ್ತಿಕೆಯ ತೀರ್ಪನ್ನ ಕೊಡೋದು ಮುಂದಕ್ಕೆ ಹಾಕಿದಾರಂತೆ. ಈ ನೆವದಲ್ಲಿ ನಾನೂ ಅದೂ ಇದೂ ರಾಮಾಯಣದ ಬಗ್ಗೆ ವಿಷಯಗಳನ್ನ ಮೆಲುಕು ಹಾಕಿದ್ದಾಯ್ತು. ಸಾಕೇತ ನಗರ ನಾಥನನ್ನ ನೆನೆಯುತ್ತಾ, ಅಯೋಧ್ಯೆ, ಶ್ರಾವಸ್ತಿ, ಕುಶಾವತಿ, ಲಕ್ಷ್ಮಣಾವತಿ, ಮಿಥಿಲೆ ಹೀಗೆ ಹಲವು ಸ್ಥಳಗಳ ಬಗ್ಗೆ ಟ್ವಿಟರಿನಲ್ಲಿ ಒಂದಷ್ಟು ಚಿಲಿಪಿಲಿಗುಟ್ಟಿಯೂ ಆಯ್ತು.
ಆಗಲೇ, ಹಿಂದೊಮ್ಮೆ ಇಲ್ಲೇ ಸಂಪದದಲ್ಲೇ ಇನ್ನಾವುದೋ ಬರಹಕ್ಕೆ ಹಾಕಿದ್ದ ರಾಮನ ಸ್ವರ್ಗಾರೋಹಣದ ಬಗ್ಗೆ ಟಿಪ್ಪಣಿಯೊಂದು ನೆನಪಾಗಿ, ಇಲ್ಲಿ ಮತ್ತೆ ಅದನ್ನು ಸ್ವಲ್ಪ ಹಿಗ್ಗಿಸಿ ಹಾಕ್ತಿದೀನಿ.
ರಾಮನ ಸ್ವರ್ಗಾರೋಹಣದ ಪ್ರಸಂಗ ಉತ್ತರಕಾಂಡದ ೧೦೦ ನೇ ಅಧ್ಯಾಯದಲ್ಲಿನ ಬರುತ್ತೆ. ಇದೇ ಉತ್ತರ ಕಾಂಡದ ಕೊನೆಯ ಅಧ್ಯಾಯ.
ಕೆಲವು ಶ್ಲೋಕಗಳ ಭಾವಾನುವಾದವನ್ನಿಲ್ಲಿ ಮಾಡಿರುವೆ.
ಮೊದಲಿಗೆ,
ತೆರಳಿ ಅರೆಯೋಜನ ದೂರ ಪಡುವಲ ಹರಿವಿನ ಹೊಳೆಯನ್ನು
ಸರಯುವನು ಆ ಪುಣ್ಯನದಿಯನನು ಕಂಡನಾ ರಘುನಂದನ
ಸಂಸ್ಕೃತ ಮೂಲ:
ಅಧ್ಯರ್ಧಯೋಜನಂ ಗತ್ಚಾ ನದೀ ಪಶ್ಚಾನ್ಮುಖಾಶ್ರಿತಾಮ್ |
ಸರಯೂಂ ಪುಣ್ಯಸಲಿಲಾಂ ದದರ್ಶ ರಘುನಂದನಃ || (ಅಧ್ಯಾಯ ೧೦೦; ಶ್ಲೋಕ ೧)
ಬಳಿಕ,
ಸರಯೂ ನದಿ ನೀರನ್ನು ರಾಮ ಪಾದಗಳಿಂ ತಾ ಹೊಕ್ಕನು (?)
ಸಂಸ್ಕೃತ ಮೂಲ:
ಸರಯೂ ಸಲಿಲಂ ರಾಮಃ ಪದ್ಭ್ಯಾಂ ಸಮುಪಚಕ್ರಮೇ|| (ಅಧ್ಯಾಯ ೧೦೦, ಶ್ಲೋಕ ೫)
ಮತ್ತೇನಾಯ್ತು?
ಆಗ ಪೂರ್ವಿಕರ ಮಾತೊಂದು ಕೇಳಿ ಬಂದಿತು ಮೇಲಿನಾಆಗಸದಿಂದ
"ಮಂಗಳವಾಗಲಿ ವಿಷ್ಣುವೆ ನಿನಗೆ! ನಿನ್ನೆಡೆಗೇ ಮರಳಿ ಬರುವುದರಿಂದ"!
ಸಂಸ್ಕೃತ ಮೂಲ:
ತತಃ ಪಿತಾಮಹೋ ವಾಣೀಮಂತರಿಕ್ಷಾದಭಾಷತ |
ಆಗಚ್ಚ ವಿಷ್ಣೋ ಭದ್ರಂ ತೇ ದಿಷ್ಟ್ಯಾ ಪ್ರಾಪ್ತೋಸಿ ರಾಘವ || (ಅಧ್ಯಾಯ ೧೦೦, ಶ್ಲೋಕ ೬)
ಆಕಾಶವಾಣಿ ಮತ್ತೆ ಮುಂದುವರೆಯಿತು:
"ದೈವರೂಪಿ ತಮ್ಮಂದಿರ ಜೊತೆ ನಿನ್ನ ನೆಲೆಗೇ ನೀ ಮರಳು
ಆಗಸದಷ್ಟು ಮಹಾ ತೇಜವ ವಿಷ್ಣು ರೂಪದಲೇ ನೀ ಹೊಂದು"
ಸಂಸ್ಕೃತ ಮೂಲ:
ಭ್ರಾತೃಭಿಃ ಸಹ ದೇವಾಭೈಃ ಪ್ರವಿಶಸ್ವ ಸ್ವಕಾಂ ತನುಮ್|
ವೈಷ್ಣವೀಂ ತಾಂ ಮಹಾತೇಜಸ್ತದಾಕಾಶಂ ಸನಾತನಂ ||(ಅಧ್ಯಾಯ ೧೦೦, ಶ್ಲೋಕ ೭)
ರಾಮ ಮತ್ತೇನು ಮಾಡುವನು?
ಹಿರೀಕರ ಮಾತನು ಕೇಳುತ ರಾಮನು, ಹಿರಿಯ ಅರಿವುಳ್ಳವನು
ಕಿರಿಯರೊಡನೆ ಶರೀರವಿದ್ದೇ ಆ ವಿಷ್ಣು ತೇಜದಲೊಂದುಗೂಡಿದನು
ಸಂಸ್ಕೃತ ಮೂಲ:
ಪಿತಾಮಹ ವಚಃ ಶ್ರುತ್ವಾ ವಿನಿಶ್ಚಿತ್ಯ ಮಹಾಮತಿಃ |
ವಿವೇಶ ವೈಷ್ಣವಂ ತೇಜಃ ಸಶರೀರಃ ಸಹಾನುಜಃ || (ಅಧ್ಯಾಯ ೧೦೦, ಶ್ಲೋಕ ೧೦)
ರಾಮಾಯಣದಂತಹ ನವರಸಭರಿತವಾದ ಕಥೆಯ ಕೊನೆ ಮಾತ್ರ ಉದ್ವೇಗರಹಿತವಾಗಿ ಇದೆ, ಮಾಸ್ತಿಯವರ ಕಥೆಗಳಲ್ಲಿ ಬರುವಂತೆ, ದೂರ ನಿಂತು ನೋಡುವ ನೋಡುಗನೋರ್ವ ಬರೆದ ಹಾಗೆ ಅನ್ನಿಸುತ್ತೆ ನನಗೆ. ನೀವೇನಂತೀರ?
-ಹಂಸಾನಂದಿ
ಕೊ: ಆಸಕ್ತರಿಗೆ ವಾಲ್ಮೀಕಿ ರಾಮಾಯಣದ ಪೂರ್ಣ ಪಾಠ ಇಲ್ಲಿದೆ: http://www.sanskritd...









ಪ್ರತಿಕ್ರಿಯೆಗಳು
ಉ: ರಾಮನ ಸ್ವರ್ಗಾರೋಹಣ
ಹಂಸಾನಂದಿ,
<<<ಸರಯೂ ನದಿ ನೀರನ್ನು ರಾಮ ಪಾದಗಳಿಂ ತಾ ಹೊಕ್ಕನು>>>
ಇಷ್ಟರ ಮಟ್ಟಿಗೆ ಅನುವಾದ ಮಾಡಬೇಕೇ? ಪಾದಗಳಿನ್ದ ಹೊಗುವುದು ಎನ್ನುವಲ್ಲಿ ಹೊಗುವುದು ಎನ್ದರೆ ಸಾಲದೇ?
ಉ: ರಾಮನ ಸ್ವರ್ಗಾರೋಹಣ
ಸಾಕು. ಆಗ ಏನೋ ತೋಚಿದ ಹಾಗೆ ಬರೆದೆ. ಮನ್ನಿಸಿ.
ಉ: ರಾಮನ ಸ್ವರ್ಗಾರೋಹಣ
ಒಂದು ಹಳೇ ನೆನಪು- ಬಾಲ್ಯದಲ್ಲಿ ನಾನು,ನನ್ನ ತಮ್ಮ, ತಂದೆಯವರ ಜತೆ, ಮನೆಯ ಸಮೀಪದ ನದಿಗೆ ಈಜಲು ಬೆಳಗ್ಗೆ ಹೋಗುತ್ತಿದ್ದೆವು.
ತಂದೆಯವರು ನದಿ ಸಮೀಪದ ಬಂಡೆಮೇಲಿಂದ ಹಾರುತ್ತಿದ್ದರು (ಶಿರದಿಂದ ತಾ ಹೊಕ್ಕರು..)
ನಾನು ನಡಕೊಂಡು ಇಳಿಯುತ್ತಿದ್ದೆ. (ಪಾದಗಳಿಂ..)
ನನ್ನ ತಮ್ಮ ನದಿ ಬಳಿ ಕುಳಿತು ಕೈ ಮುಳುಗಿಸಿ "ಚಳಿ ಚಳೀ, ಸ್ವಲ್ಪ ಬಿಸಿಲು ಜಾಸ್ತಿಯಾಗಲಿ.."ಎನ್ನುತ್ತಿದ್ದ. ಅವನ "ಕೈ"ಹಿಡಿದು ನೀರಿಗೆ ಎಳೆಯುತ್ತಿದ್ದೆವು. (ಕೈಗಳಿಂ..)
ಮೇಲಿನ ಶ್ಲೋಕದಲ್ಲಿ ಪಾದಗಳ ಎಂದು ಬರೆಯದಿರುತ್ತಿದ್ದರೆ ಯಾರಾದರೂ " ರಾಮ ಹೇಗೆ ನದಿಗೆ ಪ್ರವೇಶಿಸಿದ? ಪಾದಗಳ ಮೂಲಕವಾ? ಕೈಯಿಂದ ನದಿಯನ್ನು ಮುಟ್ಟಿ ನಮಸ್ಕರಿಸಿಯಾ?..."ಎಂದೆಲ್ಲಾ ಪ್ರಶ್ನಿಸುತ್ತಿದ್ದರು. ನಮಗೆ ಇದು ಸಣ್ಣ ವಿಷಯವಾಗಿರಬಹುದು. ಈ ಪ್ರಸಂಗವನ್ನು ಅಭಿನಯಿಸುವವರಿಗೆ ಇದು ಮುಖ್ಯ.
ಹಂಸಾನಂದಿಯವರು ಅನುವಾದದಲ್ಲಿ "ಮಾತುಪಲ್ಲಟ" ಮಾಡಿಲ್ಲ.. :)
ಹಂಸಾನಂದಿಯವರೆ,
>>>ರಾಮಾಯಣದಂತಹ ನವರಸಭರಿತವಾದ ಕಥೆಯ ಕೊನೆ ಮಾತ್ರ ಉದ್ವೇಗರಹಿತವಾಗಿ ಇದೆ.
ನಿಜ.
ತಮ್ಮ ಪ್ರತಿಕ್ರಿಯೆ ಸಹ ("ಸಾಕು. ಆಗ ಏನೋ ತೋಚಿದ ಹಾಗೆ ಬರೆದೆ. ಮನ್ನಿಸಿ.") ಉದ್ವೇಗ ರಹಿತವಾಗಿದ್ದರೆ ಚೆನ್ನಿತ್ತು.
-ಗಣೇಶ.
ಉ: ರಾಮನ ಸ್ವರ್ಗಾರೋಹಣ
ಗಣೇಶ ಅವರೆ,
ನಾನು ಟಿಪ್ಪಣಿ ಹಾಕುವಾಗ ಯಾವುದೇ ಉದ್ವೇಗವಿಲ್ಲದೇ ಬರೆದಿದ್ದೇನೆ :) ನಿಮಗೇಕೋ ಆ ರೀತಿ ತೋರುತ್ತಿಲ್ಲ ಅನ್ನಿಸುತ್ತೆ!
ಉ: ರಾಮನ ಸ್ವರ್ಗಾರೋಹಣ
ಹಂಸಾನಂದಿಗಳೇ,
ನೀವು ಉದ್ವೇಗವಿಲ್ಲದೆ ಬರೆದಿರೆನ್ದು ತಿಳಿದು ನೆಮ್ಮದಿಯಾಯಿತು, ಯಾಕೆನ್ದರೆ ಆ ಭಯ ನನನ್ನೂ ಕಾಡಿತ್ತು.
ಉ: ರಾಮನ ಸ್ವರ್ಗಾರೋಹಣ
<<<ಹಂಸಾನಂದಿಯವರು ಅನುವಾದದಲ್ಲಿ "ಮಾತುಪಲ್ಲಟ" ಮಾಡಿಲ್ಲ.. :)>>>
☺ ಹೌದೇ? ಅನುವಾದವೂ ಮಾತುಪಲ್ಲಟವೇ. ನನ್ನ ಬ್ಲಾಗಿನಲ್ಲಿ ಅದನ್ನು 'ಡಬ್ಬಿಂಗ್' ಎನ್ನುವ ಅರ್ಥದಲ್ಲಿ ಬೞಸಿದ್ದೇನೆ. ಆದರೆ ಹಂಸಾನದಿಗಳು ಮಾಡುತ್ತಿರುವುದು ಭಾವಾನುವಾದ (ಮಾತುಪಲ್ಲಟ). ಮೂಲಸಾಹಿತ್ಯದ ಅರ್ಥವನ್ನು ಓದುಗರಿಗೆ ತಿಳಿಸುವುದೇ ಅವರ ಮುಖ್ಯ ಉದ್ದೇಶ. 'ಪಾದಗಳಿನ್ದ ಹೊಗುವುದು ಎನ್ನುವಲ್ಲಿ ಹೊಗುವುದು ಎನ್ದರೆ ಸಾಕು' ನನ್ನ ಅಭಿಪ್ರಾಯದಲ್ಲಿ. ಪಾದವಲ್ಲದೆ ಬೇಱೆ ಯಾವ ಅವಯವದ ಸಹಾಯದಿನ್ದ ಹೊಗಲು ಸಾಧ್ಯವಿದೆ? 'ಪ್ರಸಂಗವನ್ನು ಅಭಿನಯಿಸುವವರಿಗೆ ಇದು ಮುಖ್ಯ'ವಾಗಿರಬಹುದು, ಆದರೆ ಹಂಸಾನದಿಗಳು 'ಇದು ಯಕ್ಷಗಾನಕ್ಕಾಗಿ' ಅಥವಾ 'ನಾಟಕಕ್ಕಾಗಿ' ಎನ್ದು ಸೂಚಿಸಿದ್ದು ನನಗನ್ತೂ ಗೊತ್ತಾಗಲಿಲ್ಲ.
<<<ನಾನು ನಡಕೊಂಡು ಇಳಿಯುತ್ತಿದ್ದೆ. (ಪಾದಗಳಿಂ..)>>>
ನನಗೆ ಕೈಗಳಿನ್ದ ಇಳಿಯುವ ಬಯಕೆ, ಆದರೆ ಹೇಗೆ?
<<<ತಂದೆಯವರು ನದಿ ಸಮೀಪದ ಬಂಡೆಮೇಲಿಂದ ಹಾರುತ್ತಿದ್ದರು (ಶಿರದಿಂದ ತಾ ಹೊಕ್ಕರು..)>>>
☺☺☺
<<<"ಕೈ"ಹಿಡಿದು ನೀರಿಗೆ ಎಳೆಯುತ್ತಿದ್ದೆವು. (ಕೈಗಳಿಂ..)>>>
ಶಿವನೇ ಶಂಭುಲಿಂಗ!